samachara
www.samachara.com
ಅಡಿಕೆ, ಕಾಳು ಮೆಣಸಿಗೆ ಕೊಳೆ ರೋಗ: ಸಂಘಟಿತ ಹೋರಾಟದ ಜತೆಗೆ ಅಧ್ಯಯನ ವರದಿಯೂ ಅಗತ್ಯ
GROUND REPORT

ಅಡಿಕೆ, ಕಾಳು ಮೆಣಸಿಗೆ ಕೊಳೆ ರೋಗ: ಸಂಘಟಿತ ಹೋರಾಟದ ಜತೆಗೆ ಅಧ್ಯಯನ ವರದಿಯೂ ಅಗತ್ಯ

ಅತಿವೃಷ್ಟಿಯಿಂದ ಅಡಿಕೆ ಮತ್ತು ಕಾಳುಮೆಣಸಿಗೆ ಕೊಳೆರೋಗ ಬಂದಿದೆ. ರೈತರಿಗೆ ನಷ್ಟವಾಗಿದೆ. ಪರಿಹಾರಕ್ಕೆ ಆಗ್ರಹಿ ಜಿಲ್ಲಾಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆ ಸೆಪ್ಟಂಬರ್ 1ರಂದು ಉತ್ತರಕನ್ನಡದ ಶಿರಸಿಯಲ್ಲಿ ನಡೆದಿದೆ. ಪರಿಣಾಮ?

ಮಳೆ ಅತಿಯಾಗಿ ಮಲೆನಾಡು, ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಡಿಕೆ ಮತ್ತು ಉಪಬೆಳೆಯಾದ ಕಾಳು ಮೆಣಸಿಗೆ ಕೊಳೆರೋಗ ಬಾಧಿಸುತ್ತಿದೆ. ಹೆಚ್ಚು ಕಡಿಮೆ ಪ್ರತಿ ಕೃಷಿಕರ ತೋಟದಲ್ಲಿಯೂ ಅಡಿಕೆ ಉದುರಿ ಹೋಗಿದೆ. ಕಾಳು ಮೆಣಸಿನ ಆದಾಯಕ್ಕೂ ಹೊಡೆತ ಬಿದ್ದಿದೆ.

ಹೀಗಿರುವಾಗ, ಸ್ಥಳೀಯ ರೈತರ ಹಿತವನ್ನು ಯಾರು ಕಾಯಬೇಕು? ಅವರ ಸಂಕಷ್ಟಗಳನ್ನು ಸರಕಾರಕ್ಕೆ ಯಾರು ಮುಟ್ಟಿಸಬೇಕು? ಆದ ಬೆಳೆ ನಷ್ಟಕ್ಕೆ ಪರಿಹಾರವನ್ನು ಯಾರು ಕೊಡಿಸಬೇಕು? ಯಾವ ಮಾನದಂಡದ ಮೇಲೆ ಸರಕಾರ ನಷ್ಟ ತುಂಬಬೇಕು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ‘ಸಮಾಚಾರ’ದ ಈ ವರದಿ.

ಅದೊಂದು ಪ್ರಯತ್ನ:

ಉತ್ತರ ಕನ್ನಡ ಜಿಲ್ಲಾ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಶಿರಸಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ. 
ಉತ್ತರ ಕನ್ನಡ ಜಿಲ್ಲಾ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಶಿರಸಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ. 

ಈ ಬಾರಿಯ ಮಳೆ ಕೊಡಗಿನಂತಹ ಪುಟ್ಟ ಜಿಲ್ಲೆಯನ್ನು ಇನ್ನಲ್ಲದಂತೆ ಕಾಡಿದೆ. ಅಲ್ಲಿನ ಗುಡ್ಡ ಕುಸಿತ ಸಾವು ನೋವುಗಳಿಗೆ ಕಾರಣವಾಗಿದೆ. ಆದರೆ ಕರಾವಳಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗದಲ್ಲಿ ಇದೇ ಮಳೆ ಕೃಷಿಗೆ ಸಂಕಷ್ಟ ತಂದಿಟ್ಟಿದೆ. ಅಡಿಕೆ, ಕಾಳು ಮೆಣಸು, ಏಲಕ್ಕಿಯಂತಹ ವಾಣಿಜ್ಯ ಬೆಳೆಗಳನ್ನು ನಾಶ ಮಾಡಿದೆ.

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಅಡಿಯಲ್ಲಿ ಇತ್ತೀಚೆಗೆ ಭಾರಿ ಪ್ರತಿಭಟನೆಯೊಂದನ್ನು ಶಿರಸಿಯಲ್ಲಿ ನಡೆಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಇತರ ತಾಲೂಕುಗಳ ಕೆಲ ಭಾಗಗಳಲ್ಲಿ ರೋಗದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಈಡಾಗಲಿದ್ದಾರೆ. ಇದಕ್ಕೆ ಹೇಗೆ ಪರಿಹಾರ ಕಾರ್ಯಕ್ರಮಗಳನ್ನು ರೂಪಿಸಬೇಕು ಮತ್ತು ಇಲ್ಲಿನ ರೈತರ ಬೇಡಿಕೆಯ ಕೂಗನ್ನು ಸರಕಾರಕ್ಕೆ ಹೇಗೆ ಮುಟ್ಟಿಸಬೇಕು ಎನ್ನುವ ನಿಟ್ಟಿನಲ್ಲಿ ಆಯೋಜನೆಯೊಂಡಿದ್ದ ಕಾರ್ಯಕ್ರಮ ಅದು.

ಟ್ರಸ್ಟ್ ಏನೋ, ಅಳೆದು ತೂಗಿ ರೈತರಿಗೆ ಅನುಕೂಲವಾಗುವಂತೆ ಗಣ್ಯರನ್ನು ಆಯ್ಕೆ ಮಾಡಿ ವೇದಿಕೆಗೆ ಆಹ್ವಾನಿಸಿತ್ತು. ಸಹಕಾರಿ ಮತ್ತು ರಾಜಕೀಯ ಧುರೀಣರುಗಳಿಗೆ ಸಮನಾಗಿ ವೇದಿಕೆ ಹಂಚಲಾಗಿತ್ತು. ಎಲ್ಲಾ ಗಣ್ಯರೂ ರೈತರ ಕಷ್ಟಗಳ ಕುರಿತು ಸಂತಾಪ ಸೂಚಿಸಿ ನಿಮ್ಮೊಡನೆ ನಾವಿದ್ದೇವೆ ಎನ್ನುವುದಕ್ಕೆ ಮಾತ್ರ ಸೀಮಿತವಾದರು. ಕೆಲವರು ಅದರಲ್ಲಿಯೆ ಸ್ವಲ್ಪ ಮುತ್ಸದ್ದಿತನ ತೋರಲು, ವಿವಿಧ ಯೋಜನೆಯಡಿ ಈ ಬೆಳೆಯನ್ನು ಸೇರಿಸಬೇಕೇಂಬ ಬಗೆಗೆ ಪ್ರಬಂಧ ಮಂಡಿಸಿದರು. ಅದು ಸಧ್ಯದ ರೈತರ ಸಂಕಷ್ಟ ದೂರಮಾಡಲು ಅಪ್ರಯೋಜಕ ಎನ್ನುವ ಮಾತೂ ರೈತರಿಂದಲೇ ಕೇಳಿಬಂತು.

ನಂತರ ಸೇರಿದ ರೈತರೆಲ್ಲ ದುರೀಣರ ಜೊತೆ ಮೆರವಣಿಗೆಯಲ್ಲಿ ಸಾಗಿ, ಸಹಾಯಕ ಕಮೀಶನರ್ ಕಚೇರಿ ಎದುರು ಕೊಳೆ ಬಾಧಿತ ಅಡಿಕೆ ಸುರುವಿ ಸರಕಾರಕ್ಕೆ ಮನವಿ ನೀಡುವುದರ ಮೂಲಕ ಸಂಪನ್ನಗೊಳಿಸಲಾಯಿತು.

ಸರಕಾರ ತಕ್ಷಣ ರೈತರ ಅಹವಾಲಿಗೆ ಸ್ಪಂದಿಸಲು ಅನುಕೂಲವಾಗಲಿ ಎಂಬ ಉತ್ತಮ ಉದ್ದೇಶದಿಂದ ಕೊಳೆ ರೋಗ ಬಾಧಿಸಿದ ತಾಲೂಕುಗಳ ಜನಪ್ರತಿನಿಧಿಗಳು ಹಾಗೂ ಸಹಕಾರಿ ದುರೀಣರನ್ನು ಒಂದೆಡೆ ಸೇರಿಸಲಾಯಿತು. ಆದರೆ ಸೂಕ್ತ ಸಲಹೆ ನೀಡಬಲ್ಲ ತಜ್ಞರನ್ನು ಒಳಗೊಳ್ಳದಿದ್ದುದು ಹಿನ್ನಡೆಯಾಯಿತು. ಧಾರವಾಡ ಕೃಷಿ ವಿಶ್ವ ವಿದ್ಯಾಲಯದಿಂದ ನಡೆಸಲ್ಪಡುವ ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಕಾಲೇಜುಗಳು ಶಿರಸಿಯಲ್ಲೇ ಇದ್ದರೂ ರೋಗ ವಿಜ್ಞಾನಿಗಳ ಅಥವಾ ತಜ್ಞರ ಉಪಸ್ಥಿತಿ ಪರಿಣಾಮಕಾರಿಯಾಗಿ ಕಂಡು ಬರಲಿಲ್ಲ. ಪ್ರತಿಭಟನೆಗೆ ಪುಷ್ಠಿ ನೀಡುವಂತ ತಜ್ಞ ವರದಿಯೇ ತಯಾರಾಗಲಿಲ್ಲ.

ತಾಂತ್ರಿಕ ಅಧ್ಯಯನ ವರದಿ:

ಈ ಹಿಂದೆ ದೇಶದ ವಿವಿಧೆಡೆಗಳಲ್ಲಿ ಪ್ರವಾಹ, ಬರ, ಮತ್ತು ಹವಾಮಾನ ವೈಪರೀತ್ಯದಂಥ ಪ್ರಕೃತಿ ವಿಕೋಪಗಳಿಂದ ರೈತರಿಗೆ ಸಂಕಷ್ಟ ಒದಗಿದಾಗ 'ಕ್ಷಿಪ್ರ ತಾಂತ್ರಿಕ ಅಧ್ಯಯನವನ್ನು’ ಗ್ರಾಮ ಮಟ್ಟದಲ್ಲಿ ನಡೆಸಿ, ಆಗಬಹುದಾದ ನಷ್ಟ ಅಂದಾಜಿಸಿ ಪರಿಹಾರ ಮೊತ್ತ ನಿರ್ಧರಿಸಿದ ಉದಾಹರಣೆಗಳಿವೆ.

ಇಂತಹ ಅಧ್ಯಯನ ಆಧಾರದಲ್ಲಿ ನಷ್ಟದ ಮೊತ್ತವೊಂದೇ ಅಲ್ಲದೇ ರೈತ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕೃಷಿ ಕ್ರಮಗಳ ಕುರಿತು ಅಗತ್ಯ ವೈಜ್ಞಾನಿಕ ಮತ್ತು ಸಂಶೋಧನಾಧಾರಿತ ಮಾರ್ಗದರ್ಶನವನ್ನೂ ತಾಂತ್ರಿಕ ಸಂಸ್ಥೆಗಳಿಂದ ನೀಡಲಾಗುತ್ತೆ. ಇದರಿಂದ ರೈತನ ಸಂಕಷ್ಟ ಕಡಿಮೆಯಾಗುವುದರ ಜೊತೆಗೆ ಮತ್ತೆ ಸಮಸ್ಯೆಗೆ ಸಿಲುಕದಂಥ ಕೃಷಿ ತಾಂತ್ರಕತೆಯ ಮಾರ್ಗದರ್ಶನವೂ ದೊರೆಯುತ್ತದೆ. ನೈಜ ಕೃಷಿ ಅಭಿವೃದ್ಧಿ ಸಾಧ್ಯವಾಗುತ್ತದೆ.

ಪಶ್ಚಿಮ ಘಟ್ಟದ ಕೃಷಿಕರನ್ನು ಒಂದು ಕಾಲದಲ್ಲಿ ಆಕರ್ಷಿಸಿದ್ದ ವೆನಿಲ್ಲಾ ಬೆಳೆ. 
ಪಶ್ಚಿಮ ಘಟ್ಟದ ಕೃಷಿಕರನ್ನು ಒಂದು ಕಾಲದಲ್ಲಿ ಆಕರ್ಷಿಸಿದ್ದ ವೆನಿಲ್ಲಾ ಬೆಳೆ. 
/ಅಗ್ರಿ ಫಾರ್ಮ್. 

ಈ ಹಿಂದೆ ಸಾಲ ಮಾಡಿ ವೆನಿಲಾ ಬೆಳೆದಾಗ ರೋಗ ಮತ್ತು ಕೊಳೆಯಿಂದ ಬೆಳೆ ಸಂಪೂರ್ಣ ನಾಶವಾಗಿತ್ತು. ಆಗಲೂ ತಾಂತ್ರಿಕ ಅಧ್ಯಯನದ ಬೆಂಬಲ ಇಲ್ಲದೇ ರೈತರಿಗೆ ಯಾವುದೇ ವೈಜ್ಞಾನಿಕ ಪರಿಹಾರ ದೊರೆತಿರಲಿಲ್ಲ. ದಶಕ ಕಳೆದರೂ ಸಾಲ ತೀರಿಸಲಾಗದ ಉದಾಹರಣೆಗಳು ಸಹಕಾರಿಗಳ ಮುಂದಿವೆ. ಕೆಲವು ಸಹಕಾರಿ ಸಂಘಗಳು ತಂತ್ರಜ್ಞರ ಸೇವೆ ನೀಡುತ್ತಿರುವುದಾದರೂ ಇಂಥ ತಂತ್ರಜ್ಞರ ವರದಿಗೆ ಸರಕಾರ ಸ್ವಲ್ಪವೂ ಸ್ಪಂದಿಸುವುದಿಲ್ಲ ಎಂಬ ಆರೋಪಗಳಿವೆ. ಸರಕಾರದಿಂದ ಶಿಫಾರಸು ಮಾಡಲ್ಪಟ್ಟ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾಲಯಗಳ ವರದಿಯನ್ನು ಮಾತ್ರ ಸರಕಾರ ಪುರಸ್ಕರಿಸುತ್ತದೆ.

ಸಂಘಟಿತ ಹೋರಾಟ:

ಅಡಿಕೆ ಮತ್ತು ಕಾಳುಮೆಣಸು ಬೆಳೆಗಳ ವೈಜ್ಞಾನಿಕ ಕ್ಷಿಪ್ರ ತಾಂತ್ರಿಕ ಅಧ್ಯಯನ ವರದಿ ಇಲ್ಲಿವರೆಗೂ ನಡೆಸಿದ ದಾಖಲೆ ದೊರೆಯುತ್ತಿಲ್ಲ. ಇದರಿಂದ ಸರಕಾರಿ ಮಟ್ಟದಲ್ಲಿ ಪರಿಹಾರ ನಿರ್ಣಯಿಸುವಾಗ ಹಾದಿ ತಪ್ಪುತ್ತದೆ. ನ್ಯಾಯಯುತ ನಿರ್ಣಯ ಅಸಾಧ್ಯವಾಗುತ್ತದೆ. ಈ ಮೊದಲೇ ನಿಗಧಿತ ಪರಿಹಾರ ಮೊತ್ತ ಮಾತ್ರ ದೊರೆಯುತ್ತದೆ. ಯಾವ ಪ್ರಮಾಣದಲ್ಲಿ ಸಂಕಷ್ಟವಿದೆಯೋ ಆ ಪ್ರಮಾಣದ ಪರಿಹಾರ ದೊರೆಯುವುದೇ ಇಲ್ಲ. ಸರಕಾರದಿಂದ ಪೂರ್ವ ನಿಗಧಿತ ಪರಿಹಾರ ಮೊತ್ತ ರೈತನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಾಗುತ್ತದೆ. ಮತ್ತೆ ಸಾಲದ ಪ್ರಮಾಣ ಏರುತ್ತದೆ. ಆರ್ಥಿಕ ಅಭದ್ರತೆಗೆ ಭದ್ರ ಬುನಾದಿಯಾಗುತ್ತದೆ.

ಉತ್ತರಕನ್ನಡದ ಸುಮಾರು 17,075 ಹೆ. ಪ್ರದೇಶದಲ್ಲಿ 42,640 ಮೆ.ಟನ್‌ ಅಡಿಕೆ ಮತ್ತು ಸುಮಾರು 431 ಹೆ. ಪ್ರದೇಶದಲ್ಲಿ 181 ಮೆ.ಟನ್‌ ಕಾಳುಮೆಣಸು ಬೆಳೆಯಲಾಗುತ್ತಿದೆ. ಈ ಬೆಳೆಗಳು ಯಾವುದೇ ಕಾರಣದಿಂದ ವೈಫಲ್ಯ ಹೊಂದಿದಲ್ಲಿ ಬಹು ದೊಡ್ಡ ಪ್ರಮಾಣದ ರೈತ ಸಮುದಾಯ ಏಟು ತಿನ್ನುತ್ತದೆ.

ಇಲ್ಲಿನ ಬಹುತೇಕ ಜನಪ್ರತಿನಿಧಿಗಳು ಅಡಿಕೆ ಕೃಷಿ ಕುಟುಂಬಗಳಿಂದ ಬಂದವರು. ಆದರೂ ಹವಾಮಾನ ವೈಪರೀತ್ಯದಂಥ ಸಮಸ್ಯೆಗಳು ವಕ್ಕರಿಸಿದಾಗ ರೈತ ಏಕಾಂಗಿಯಾಗಿಬಿಡುತ್ತಾನೆ. ಸಮಸ್ಯೆ ಕುರಿತು ಆಯೋಜಿಸಲ್ಪಡುವ ಹೋರಾಟ, ಪ್ರತಿಭಟನೆಗಳೆಲ್ಲ ಒಂದಿಲ್ಲೊಂದು ರೀತಿಯಲ್ಲಿ ಯಾರದೋ ವ್ಯಕ್ತಿ ಪ್ರತಿಷ್ಠೆ ಬೆಳೆಸುವ, ರಾಜಕೀಯ ದಾಳ ಉರುಳಿಸುವ ವೇದಿಕೆಗಳಾಗಿ ಉಪಯೋಗಿಸಲ್ಪಡುತ್ತಿವೆ.

ಪರಿಸ್ಥಿತಿ ಹೀಗಿರುವಾಗ, ಸಂಘಟಿತ ಹೋರಾಟ ನಡೆದರೂ ಫಲಿತಾಂಶ ಮಾತ್ರ ಶೂನ್ಯವೇ ಆಗಿರುತ್ತದೆ. ಅಥವಾ, ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೋರಾಟದ ಜತೆಗೆ, ಪೂರಕ ಅಧ್ಯಯನ ವರದಿಗಳನ್ನು ತಯಾರಿಸುವ ಕೌಶಲ್ಯವೂ ಅಳವಡಿಸಿಕೊಳ್ಳುವ ಅನಿವಾರ್ಯತೆ ಇವತ್ತಿಗಿದೆ.

Spl Credit: Cover Photo/ Vinaya Almane Dattathreya.