samachara
www.samachara.com
ಖಾಸಗಿ ಲೇವಾದೇವಿ ಕಡಿವಾಣಕ್ಕೆ ಸರಕಾರದ ಸುತ್ತೋಲೆ; ತಳಮಟ್ಟದಲ್ಲಿ ಇರುವ ನಿರೀಕ್ಷೆಗಳೇನು? 
GROUND REPORT

ಖಾಸಗಿ ಲೇವಾದೇವಿ ಕಡಿವಾಣಕ್ಕೆ ಸರಕಾರದ ಸುತ್ತೋಲೆ; ತಳಮಟ್ಟದಲ್ಲಿ ಇರುವ ನಿರೀಕ್ಷೆಗಳೇನು? 

ಅಕ್ರಮ ಲೇವಾದೇವಿ ಕಾನೂನು ಬಿಗಿಯಾದರೆ ತೆರೆಮರೆಯಲ್ಲಿ, ಕಾನೂನು ಸಡಿಲವಾದರೆ ರಾಜರೋಷವಾಗಿ ನಡೆಯುವ ಪ್ರಕ್ರಿಯೆ.

ರತ್ನಾಕರ; ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶದ ಓರ್ವ ಚಿಕ್ಕ ರೈತ. ಸಣ್ಣ ವಯಸ್ಸಿನಲ್ಲಿಯೇ ತಂದೆ ಇಹಲೋಕ ತ್ಯಜಿಸಿದ್ದರಿಂದ ಸಂಸಾರ ಜವಾಬ್ಧಾರಿ ಕಾಲಕ್ಕಿಂತ ಮುನ್ನವೇ ಹೆಗಲೇರಿತು. ಅವನ ಉತ್ಪನ್ನ ವರ್ಷ ಪೂರ್ತಿ ಖರ್ಚಿಗೆ ಸಾಲುತ್ತಿರಲಿಲ್ಲ. ಆದರೂ ಕೃಷಿ ಜತೆ ಕೂಲಿಗೂ ಹೋಗುತ್ತ ಹೇಗೋ ಸಂಸಾರ ನಿಭಾಯಿಸುತ್ತಿದ್ದ. ತಾಯಿ, ಮಡದಿ ಹಾಗೂ ಓರ್ವ ಮಗನನ್ನು ಹೊಂದಿದ್ದ ಚಿಕ್ಕ, ಚೊಕ್ಕ ಸಂಸಾರ ಅವನದು. ಮಗನಿನ್ನೂ ಚಿಕ್ಕವ. ಇರುವ ಭತ್ತದ ಗದ್ದೆಯಲ್ಲಿ ಗಂಡ, ಹೆಂಡತಿ ನಿಯತ್ತಾಗಿ ದುಡಿದು ಹುಲ್ಲು, ಭತ್ತ ಬೆಳೆದು ಒಂದು ಹಸುವನ್ನೂ ಸಾಕಿಕೊಂಡಿದ್ದರು. ಯಾರ ಗೊಡವೆಗೂ ಹೋಗದ ಸರಳ ಸಂಸಾರ ಅದು. ಕಲಿತದ್ದೂ ಕಡಿಮೆ. ಬ್ಯಾಂಕ್ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಗಳ ವ್ಯವಹಾರದ ಗಂಧವೂ ಇಲ್ಲದಿದ್ದರೂ ಸಾಲ-ಸೋಲ ಮಾಡದೇ ನೆಮ್ಮದಿಯಿಂದಿದ್ದರು.

ಹೀಗಿರುವಾಗ, ದುರಾದೃಷ್ಟವೆಂಬಂತೆ ರತ್ನಾಕರನ ಹೆಂಡತಿ ಖಾಯಿಲೆಗೆ ಬಿದ್ದಳು. ಆಸ್ಪತ್ರೆಗೆ ಸೇರಿಸಲ್ಪಟ್ಟಳು. ಶಸ್ತ್ರ ಚಿಕಿತ್ಸೆಗೆ ಒಳಗಾದಳು. 15 ದಿನ ಆಸ್ಪತ್ರೆಯಲ್ಲಿಯೇ ಆರೋಗ್ಯ ಸುಧಾರಿಸಿ ಹೊರಬರುವಷ್ಟರಲ್ಲಿ 35,000 ರೂಪಾಯಿ ಬಿಲ್ಲಾಗಿತ್ತು. ಕೈಯ್ಯಲ್ಲಿದ್ದ ಅಲ್ಪ ಸ್ವಲ್ಪ ಹಣವೂ ಆಸ್ಪತ್ರೆ ಓಡಾಟದಲ್ಲಿ ಖಾಲಿಯಾಗಿತ್ತು. ಹಸುವನ್ನು ಮಾರಿದ್ದಕ್ಕೆ ಹತ್ತು ಸಾವಿರ ಬಂದರೂ, ಇನ್ನೂ 25,000 ಖೋತಾ ಬಿದ್ದಿತು. ತಡವಾದರೆ ಆಸ್ಪತ್ರೆ ಬಿಲ್ ಏರುತ್ತಿತ್ತು. ಪರಿಚಿತರ ಹತ್ತಿರ ಸಾಲ ಕೇಳಿದ ದೊರೆಯಲಿಲ್ಲ.

ಅದೇ ಸಮಯದಲ್ಲಿ ಪೇಟೆಯ ಅನಂತಣ್ಣನಿಂದ ಬಡ್ಡಿ ಸಾಲ ಪಡೆಯುವಂತೆ ಸಲಹೆ ನೀಡಿದ. ರತ್ನಾಕರ ಆಸ್ಪತ್ರೆ ಬಿಲ್ ಭರಿಸಲು ಸಾಲ ಕೇಳಿದ. ತಮ್ಮ ಶುಲ್ಕ, ಬಡ್ಡಿ ಮತ್ತು ಮೊದಲ ಕಂತು ಮುರಿದೇ ಸಾಲ ಕೊಡುವುದಾದ್ದರಿಂದ 30,000ರೂಪಾಯಿ ಸಾಲ ಪಡೆದರೆ 25,000ರೂಪಾಯಿ ಆಸ್ಪತ್ರೆಗೆ ಕಟ್ಟಬಹುದು ಎಂದ ಅನಂತಣ್ಣ. ತಿಂಗಳಿಗೆ 5% ಬಡ್ಡಿ ಹಣ ರೂ.1500, ಪ್ರಾರಂಭಿಕ ಶುಲ್ಕ ರೂ.2000 ಹಾಗೂ 24 ತಿಂಗಳ ಅವಧಿಯ ಮೊದಲ ಅಸಲಿನ ಕಂತಾಗಿ 1250ರೂ. ಸೇರಿಸಿ ಒಟ್ಟೂ ರೂ.4750 ನ್ನು ಮುರಿದುಕೊಂಡು ರೂ. 25250 ಎಣಿಸಿ ನೀಡಿದ. ಪ್ರತಿ ತಿಂಗಳೂ ತಪ್ಪದೇ 1ನೇ ತಾರೀಖಿನಂದು ಬಡ್ಡಿ ಅಸಲು ಸೇರಿ ರೂ.2750ನ್ನು ಎರಡು ವರ್ಷ ಅಂದರೆ 24ತಿಂಗಳು ನೀಡಲು ತಿಳಿಸಿ, ತಪ್ಪಿದಲ್ಲಿ ದಂಡ ಕಟ್ಟಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ.

ರತ್ನಾಕರನಿಗೆ ಲೆಕ್ಕ ತಿಳಿಯುವುದಿಲ್ಲ. ಕಂತಿನ ಹಣ 30 ತಿಂಗಳಿನಿಂದಲೂ ಕಟ್ಟುತ್ತಲೇ ಇದ್ದಾನೆ. ಈ ಕುರಿತು ಕೇಳಿ ಅನಂತಣ್ಣನಿಂದ ಹೊಡೆತ ತಿಂದಿದ್ದೂ ಆಯಿತು. ತನ್ನ ನೋವನ್ನು ತಾನೇ ನುಂಗಿ ಕೂಲಿನಾಲಿ ಮಾಡಿ ಹಣ ಕಟ್ಟುತ್ತಲೇ ಇದ್ದಾನೆ. ತಾನು ಇನ್ನೂ ಎಷ್ಟು ಹಣ ಕಟ್ಟಬೇಕೆಂಬುದೂ ತಿಳಿದಿರಲಿಲ್ಲ. ಆ ಸಮಯದಲ್ಲಿ ಅನಂತಣ್ಣನ ಆಪ್ತ ರತ್ನಾಕರನ ದೂರದ ಸಂಬಂಧಿ ಮಧ್ಯೆ ಪ್ರವೇಶಿಸಿ ರಕ್ಷಿಸದಿದ್ದರೆ ಇನ್ನೂ ಎಷ್ಟು ವರ್ಷ ಹಣ ಕಟ್ಟುತ್ತಲೇ ಇರಬೇಕಾಗಿತ್ತು...

ಇದು ರತ್ನಾಕರ(ಹೆಸರು ಬದಲಾಯಿಸಲಾಗಿದೆ)ನ ಸಮಸ್ಯೆಯೊಂದೇ ಅಲ್ಲ; ಅನಧಿಕೃತ ಲೇವಾದೇವಿ ವ್ಯವಹಾರ ನಡೆಸುವವರಿಂದ ಸಾಲ ಪಡೆದ ಎಲ್ಲ ಸಾಲಗಾರರ ಪರಿಸ್ಥಿತಿ. ಗೂಂಡಾಗಿರಿಯೊಂದೇ ಇವರ ಸಾಲ ವಸೂಲಿ ಅಸ್ತ್ರ. ಕಾನೂನು ಬದ್ಧವಾದ ಯಾವ ದಾಖಲೆಗಳೂ ಇರದುದರಿಂದ ಎಲ್ಲ ಕಾಯ್ದೆ ಕಾನೂನುಗಳಿಂದಲೂ ನುಣುಚಿಕೊಂಡಿರುತ್ತಾರೆ.

ಸರಕಾರದಿಂದ ಸುತ್ತೋಲೆ:

ಖಾಸಗಿ ಲೇವಾದೇವಿದಾರರು, ಸಣ್ಣ ರೈತರು, ಗಿರವಿದಾರರು, ವ್ಯಾಪಾರಿಗಳು ಹಾಗೂ ದುರ್ಬಲ ವರ್ಗದವರ ಮೇಲೆ ದಬ್ಬಾಳಿಕೆ ರೀತಿಯಲ್ಲಿ ಬಲವಂತದ ಸಾಲ ವಸೂಲಿ ಕ್ರಮಕ್ಕೆ ಕಡಿವಾಣ ಹಾಕಲು ಮತ್ತು ನಿಯಂತ್ರಿಸಲು ಎಲ್ಲ ಪ್ರಾದೇಶಿಕ ಆಯುಕ್ತರು, ಎಲ್ಲ ವಲಯಗಳ ಪೊಲೀಸ್ ಮಹಾ ನಿರೀಕ್ಷಕರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿ ಟಿ. ಎಮ್. ವಿಜಯ್ ಬಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ. ಮತ್ತು ಇದಕ್ಕೆ ಜನರ ಬೆಂಬಲವೂ ವ್ಯಕ್ತವಾಗುತ್ತಿದೆ.

ಕಿರುಕುಳ ನೀಡುವ ಲೇವಾದೇವಿದಾರರಿಂದ ಸಾಲ ಪಡೆದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಸುತ್ತೋಲೆ ಸರಿಯಾಗಿದೆ. ಆದರೆ ಅದು ಬರೀ ಸುತ್ತೋಲೆಗೆ ಮಾತ್ರ ಸೀಮಿತವಾಗದೆ, ಅನುಷ್ಠಾನಕ್ಕೂ ಬರಬೇಕಿದೆ. 
ಯೋಗೀಶ್ ನಾಯ್ಕ, ನೊಂದ ನಾಗರಿಕ, ಕಾರವಾರ. 

ಕರ್ನಾಟಕ ಋಣಭಾರ ಪರಿಹಾರ ಮಸೂದೆ 2018 ಅಡಿ ರಾಜ್ಯದಲ್ಲಿನ ಋಣಭಾರ ಪೀಡಿತ ಸಣ್ಣ ರೈತರಿಗೆ, ಭೂ ರಹಿತ ಕೃಷಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗದ ಜನರಿಗೆ ಋಣಭಾರದ ಸಮಸ್ಯೆಗಳ ಪರಿಹಾರಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಕರ್ನಾಟಕ ಸರಕಾರ ಪರಿಶೀಲಿಸುತ್ತಿದೆ. ಅಧಿಕೃತ ಹಾಗೂ ಅನಧಿಕೃತ ಖಾಸಗಿ ಲೇವಾದಾರರಿಂದ ಸಾಲಗಾರರ ಮೇಲೆ ಆಗುವ ದಬ್ಬಾಳಿಕೆ, ಕಿರುಕುಳಗಳಿಗೆ ಅಂತ್ಯ ಹಾಡಿ, ಅವರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಗಮನಿಸಿದರೆ ಅಧಿಕೃತ ಲೇವಾದೇವಿದಾರರು ಇರುವುದು 78 ಮಾತ್ರ. ಇಂತವರಿಂದ ಅಗತ್ಯ ದಾಖಲೆಗಳೊಂದಿಗೆ ವ್ಯವಹಾರ ಮಾಡಿದಲ್ಲಿ ಮಾತ್ರ ಅನ್ಯಾಯವಾದಲ್ಲಿ ನ್ಯಾಯದ ಮೊರೆ ಹೋಗಬಹುದು. ಒಂದು ಅಂದಾಜಿನ ಪ್ರಕಾರ ಅನಧಿಕೃತ ಲೇವಾದೇವಿದಾರರು ಸಾವಿರಾರು ಜನರಿದ್ದಾರೆ. ಸಾಮಾನ್ಯ ಜನರ ಹಣದ ತೀರ ಅಗತ್ಯತೆಗಳೇ ಇಂತವರ ಅಸ್ಥಿತ್ವದ ಮೂಲ ಕಾರಣ.

ಅಕ್ರಮ ಲೇವಾದೇವಿ ಕಾನೂನು ಬಿಗಿಯಾದರೆ ತೆರೆಮರೆಯಲ್ಲಿ, ಕಾನೂನು ಸಡಿಲವಾದರೆ ರಾಜರೋಷವಾಗಿ ನಡೆಯುವ ಪ್ರಕ್ರಿಯೆ. “ಸರಕಾರ, ಪೊಲೀಸರು ಬಿಗಿಯಾದರೆ ಸಾಲ ವಸೂಲಾತಿ ಒತ್ತಡ ಕಡಿಮೆ ಇರುತ್ತದೆ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಮೊದಲಿಗಿಂತ ಹೆಚ್ಚಾಗುತ್ತದೆ. ಕೆಲವೊಮ್ಮೆ ಇದೇ ಆತ್ಮಹತ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಸರಕಾರ ಕಡಿವಾಣ ರೂಪಿಸುವುದೇ ಆದರೆ ಒಂದೇ ಮನಸ್ಸಿನಿಂದ ಜಾರಿಗೆ ತರಬೇಕು. ಇಲ್ಲದಿದ್ದರೆ ಸಾಲ ಪಡೆದವರು ಅಡಕತ್ತರಿಯಲ್ಲಿ ಸಿಲುಕುತ್ತಾರೆ,’’ ಎನ್ನುತ್ತಾರೆ ಸ್ಥಳೀಯ ಲೇವಾದೇವಿಯ ಹಿಂಸೆಗೆ ಗುರಿಯಾದ ರೈತರೊಬ್ಬರು.

ಈ ಹಿನ್ನೆಲೆಯಲ್ಲಿ, ಒಂದು ಸುತ್ತೋಲೆ, ಮೇಲ್ಮಟ್ಟದ ಹೇಳಿಕೆಗಳು ಖಾಸಗಿ ಲೇವಾದೇವಿಗೆ ಕಡಿವಾಣ ಹಾಕುವ ಬದಲು ಇನ್ನಷ್ಟು ಒತ್ತಡ ಹೆಚ್ಚಾಗಲು ಕಾರಣವಾದರೂ ಆಗಬಹುದು. ಸುತ್ತೋಲೆ ಹೊರಡಿಸಿದ ಸರಕಾರ ಅದರ ಪರಿಣಾಮಕಾರಿ ಅನುಷ್ಠಾನದ ಕಡೆಗೆ ಗಮನ ಹರಿಸಿದರಷ್ಟೆ ಜನರನ್ನು ಸಾಲದ ಹೊರೆಯಿಂದ ತಪ್ಪಿಸುವ ಆಶಯ ಪೂರೈಸಲು ಸಾಧ್ಯವಾಗುತ್ತದೆ.