samachara
www.samachara.com
ವಿಕೋಪಕ್ಕೆ ನಲುಗಿದ ಕೊಡಗಿನಲ್ಲಿ ಸಡಗರ ಸಂಭ್ರಮಗಳಿಲ್ಲದ ‘ಕೈಲ್ ಮುಹೂರ್ತ’ ಆಚರಣೆ
GROUND REPORT

ವಿಕೋಪಕ್ಕೆ ನಲುಗಿದ ಕೊಡಗಿನಲ್ಲಿ ಸಡಗರ ಸಂಭ್ರಮಗಳಿಲ್ಲದ ‘ಕೈಲ್ ಮುಹೂರ್ತ’ ಆಚರಣೆ

ಕಾವೇರಿ ತುಲಾ ಸಂಕ್ರಮಣ, ಹುತ್ತರಿ ಹಬ್ಬ ಬಿಟ್ಟರೆ ಕೊಡವರು ಆಚರಿಸುವ ಪ್ರಮುಖ ಹಬ್ಬ ಈ ‘ಕೈಲ್ ಮುಹೂರ್ತ’. ಆದರೆ ಈ ಬಾರಿಯ ಕೈಲ್ ಮುಹೂರ್ತ ಹಬ್ಬದ ಸಡಗರದ ಮೇಲೆ ವಿಕೋಪದ ಕರಿ ನೆರಳು ಆವರಿಸಿದೆ.

ವಿಶಿಷ್ಟ ಸಂಸ್ಕೃತಿಯ ಕೊಡವ ಜನಾಂಗ ಪ್ರತಿ ವರ್ಷವೂ ಗದ್ದೆಯಲ್ಲಿ ನಾಟಿ ಕಾರ್ಯ ಮುಗಿದ ನಂತರ ಆಚರಿಸುವ ಹಬ್ಬ ‘ಕೈಲ್ ಮುಹೂರ್ತ’. ಇದನ್ನು ಕೊಡವ ಭಾಷೆಯಲ್ಲಿ ‘ಕೈಲ್ ಪೊಳ್ದ್’ ಎಂದು ಕರೆಯಲಾಗುತ್ತದೆ. ಅಕ್ಟೋಬರ್ ತಿಂಗಳಿನಲ್ಲಿ ಆಚರಿಸುವ ಕಾವೇರಿ ತುಲಾ ಸಂಕ್ರಮಣ, ಬೆಳೆ ಕೊಯ್ಯುವ ಮುನ್ನ ಆಚರಿಸುವ ಹುತ್ತರಿ ಹಬ್ಬ ಬಿಟ್ಟರೆ, ಕೊಡವರು ಆಚರಿಸುವ ಪ್ರಮುಖ ಹಬ್ಬ ಈ ಕೈಲ್ ಮುಹೂರ್ತ.

ಮೇಲಿನ ಮೂರು ಹಬ್ಬಗಳಲ್ಲಿ ತುಲಾ ಸಂಕ್ರಮಣವನ್ನು ಮತ್ತು ಹುತ್ತರಿಯನ್ನು ಇತರ ಪ್ರಮುಖ ಜನಾಂಗವಾದ ಅರೆ ಭಾಷೆ ಗೌಡ ಹಾಗೂ ಒಕ್ಕಲಿಗ ಗೌಡ ಜನಾಂಗದವರೂ ಆಚರಿಸುತ್ತಾರೆ. ಆದರೆ ಕೈಲ್ ಮುಹೂರ್ತ ಹಬ್ಬವನ್ನು ಕೊಡವ ಜನಾಂಗದವರು ಮಾತ್ರ ಆಚರಿಸುತ್ತಾರೆ. ಆದರೆ, ಈ ಬಾರಿ ಕೊಡಗಿಗೆ ಅಪ್ಪಳಿಸಿದ ಭಾರೀ ಮಳೆ ವಿಕೋಪವನ್ನು ಉಂಟು ಮಾಡಿದ ಪರಿಣಾಮ ಹಬ್ಬದ ಕಳೆ ದಕ್ಷಿಣ ಕಾಶ್ಮೀರದಲ್ಲಿ ನಾಪತ್ತೆಯಾಗಿದೆ.

ಕೈಲ್ ಪೊಳ್ದ್ ಎಂಬ ಕೃಷಿ ಸಂಭ್ರಮ

ಮೂಲತಃ ಕೊಡವರು ಕೃಷಿಕರು. ನೂರಾರು ವರ್ಷಗಳಿಂದಲೂ ತಾವು ಉಣ್ಣುವ ಅನ್ನವನ್ನು ತಾವೇ ಬೆಳೆಯುತ್ತಾ ಬಂದವರು. ಇವರಲ್ಲಿ ಕೃಷಿಯ ಜತೆ ಜತೆಗೆ ಬೆಳೆದು ಬಂದ ಹಲವು ಹಬ್ಬಗಳಿವೆ. ಅವುಗಳಲ್ಲಿ ಕೈಲ್ ಮುಹೂರ್ತವೂ ಒಂದು. ಮಳೆಗಾಲದಲ್ಲಿ ತೀವ್ರ ಮಳೆಯ ನಂತರ, ಭತ್ತದ ಗದ್ದೆಗಳಲ್ಲಿ ನಾಟಿ ಕಾರ್ಯ ಮುಗಿಸಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ‘ಕೈಲ್ ಪೊಳ್ದ್’ ಎಂದರೆ ಆಯುಧಗಳ ಪೂಜೆ ಎಂದರ್ಥ; ಕೈಲ್‌ ಎಂದರೆ ಆಯುಧ, ಪೊಳ್ದ್‌ ಎಂದರೆ ಹಬ್ಬ.

ಸೂರ್ಯನು ಸಿಂಹ ರಾಶಿ ಪ್ರವೇಶಿಸುವ 18ನೇ ದಿನಕ್ಕೆ ಸರಿಯಾಗಿ ಇದನ್ನು ಆಚರಿಸಲಾಗುತ್ತದೆ. ಪಂಚಾಂಗದಾಚೆ ನೋಡಿದರೆ, ಈ ಸಮಯ ಸರಿ ಸುಮಾರು ನಾಟಿ ಕಾರ್ಯ ಪೂರ್ಣಗೊಂಡ ಅವಧಿಯಲ್ಲಿ ಬರುತ್ತದೆ. ಈ ಪೂಜೆ ಸಂದರ್ಭದಲ್ಲಿ ಆಷಾಢ ಮಾಸದಲ್ಲಿ ಗದ್ದೆ ಕೆಲಸದ ವೇಳೆ ದೇವರ ಮನೆಯಲ್ಲಿಟ್ಟಿದ ತಮ್ಮ ಆಯುಧಗಳಾದ ಕತ್ತಿ, ಕೋವಿಗಳನ್ನು ಹೊರಗೆ ತೆಗೆಯಲಾಗುತ್ತದೆ. ಅರ್ಥಾತ್‌ ಕಾಡು ಮೃಗಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಇವನ್ನು ಸಿದ್ಧ ಮಾಡಿಟ್ಟುಕೊಳ್ಳುತ್ತಾರೆ. ಇದೇ ವೇಳೆ ಗದ್ದೆ ಕೆಲಸ ಮುಗಿದ ಹತ್ಯಾರುಗಳಾದ ನೇಗಿಲು, ನೊಗ, ಗುದ್ದಲಿಗಳನ್ನು ತೊಳೆದು ದೇವರ ಮನೆ ಸೇರಿಸುತ್ತಾರೆ.

ಕೊಡವ ನ್ಯಾಷನಲ್‌ ಕೌನ್ಸಿಲ್‌ನಿಂದ ಸರಳ ‘ಕೈಲ್‌ ಪೊಳ್ದ್‌’ ಹಬ್ಬದ ಆಚರಣೆ.
ಕೊಡವ ನ್ಯಾಷನಲ್‌ ಕೌನ್ಸಿಲ್‌ನಿಂದ ಸರಳ ‘ಕೈಲ್‌ ಪೊಳ್ದ್‌’ ಹಬ್ಬದ ಆಚರಣೆ.

ವರ್ಷಕ್ಕೊಮ್ಮೆ ಆಚರಿಸುವ ಈ ಹಬ್ಬದಲ್ಲಿ ಆಯುಧಗಳಿಗೆ ಪೂಜೆಯ ನಂತರ ಹಿರಿಯರಿಗೆ ಎಡೆ ಇಡುವುದು , ಹಬ್ಬದ ಅಡುಗೆ ಮಾಡಿ ಸಂಭ್ರಮಿಸುವುದೂ ಪ್ರಮುಖವಾಗಿದೆ. ಮಳೆ ಕಡಿಮೆ ಆಗಿರುವುದರಿಂದ ಬೇಟೆಗೆ ತೆರಳುವವರೂ ತೆರಳುತ್ತಾರೆ. ಆದರೆ, ‘ಈಗೆಲ್ಲಿಯ ಸಂಭ್ರಮ ಎಂದು ಪ್ರಶ್ನಿಸುತ್ತಾರೆ?’ ವಿರಾಜಪೇಟೆ ತಾಲ್ಲೂಕಿನ ಸಣ್ಣ ರೈತ ಎಂ.ಕೆ. ಬೆಳ್ಳಿಯಪ್ಪ. ‘ಜಿಲ್ಲೆಯ ಬಹುತೇಕ ಕೊಡವ ಸಮಾಜದವರು ಈಗಾಗಲೇ ಅತ್ಯಂತ ಸರಳವಾಗಿ ಸಾಂಪ್ರದಾಯಿಕ ಹಬ್ಬವನ್ನು ಆಚರಿಸುವಂತೆ ಕರೆ ಕೊಟ್ಟಿವೆ. ಅದರಂತೆ ಈ ಬಾರಿ ಸರಳವಾಗಿ ಆಚರಿಸುತ್ತಿದ್ದೇವೆ,’ ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ಹಬ್ಬದ ಜತೆಗೆ ಹೊರತೆಗೆದ ಆಯುಧಗಳ ಮೂಲಕ ಗ್ರಾಮಗಳಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನೂ ಏರ್ಪಡಿಸಲಾಗುತ್ತದೆ. ಜತೆಗೆ ಮೈದಾನಗಳಲ್ಲಿ ಇತರ ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತದೆ. ಬಹುತೇಕ ಗ್ರಾಮಗಳಲ್ಲಿ ಕೊಡವ ಸಮಾಜಗಳಿದ್ದು, ಈ ‘ಕೈಲ್ ಮುಹೂರ್ತ’ ಹಬ್ಬವನ್ನು ಸಾಮೂಹಿಕವಾಗಿ ಹಬ್ಬದೂಟದ ಮೂಲಕ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಕಡುಬು ಮತ್ತು ಹಂದಿ ಮಾಂಸವನ್ನು ಸೇವಿಸುವುದು ರೂಢಿ. ಇದರ ಜತೆಗೆ ಮನರಂಜನೆಗೆ ಕೊಡವ ಪುರುಷರು ಮತ್ತು ಮಹಿಳೆಯರು ಸಾಂಪ್ರದಾಯಿಕ ಕೋಲಾಟ ಮತ್ತು ಉಮ್ಮತ್ತಾಟ್ ನೃತ್ಯ ಮಾಡುತ್ತಾರೆ. ಹೀಗೆ ಕೈಲ್‌ ಪೊಳ್ದ್‌ ಕೊಡಗಿನಲ್ಲಿ ಸಂಭ್ರಮದ ವಾತಾವರಣವನ್ನೇ ಸೃಷ್ಟಿಸುತ್ತದೆ.

ಆದರೆ, ಈ ಬಾರಿಯ ಕೈಲ್ ಮುಹೂರ್ತ ಹಬ್ಬದ ಸಡಗರದ ಮೇಲೆ ವಿಕೋಪದ ಕರಿ ನೆರಳು ಆವರಿಸಿದೆ. “ಅನೇಕ ನಾಟಿ ಮಾಡಿದ ಗದ್ದೆಗಳಲ್ಲಿ ಒಂದು ಅಡಿಯಿಂದ ಮೂರು ಅಡಿಗಳವರೆಗೆ ಜಾರಿ ಬಂದಿರುವ ಗುಡ್ಡದ ಮಣ್ಣು ನಿಂತಿದೆ. ಮತ್ತೊಂದೆಡೆ ದುಪ್ಪಟ್ಟು ಮಳೆಗೆ ಕಾಫಿ ಫಸಲು ಸಂಪೂರ್ಣ ನೆಲಕಚ್ಚಿದೆ. ಪರಿಸ್ಥಿತಿ ಹೀಗಿರುವಾಗ ಎಂತಹ ಹಬ್ಬ ಮಾಡುವುದು,” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸೋಮವಾರಪೇಟೆಯ ಕೃಷಿಕ ತೇಲಪಂಡ ಕವನ್ ಕಾರ್ಯಪ್ಪ.

ಸರಳ ಹಬ್ಬದಾಚರಣೆಯ ಇನ್ನೊಂದು ಚಿತ್ರ. 
ಸರಳ ಹಬ್ಬದಾಚರಣೆಯ ಇನ್ನೊಂದು ಚಿತ್ರ. 

ಈ ಬಾರಿ ಶತಮಾನದ ಭೀಕರ ದುರಂತಕ್ಕೆ ಕೊಡಗು ಸಿಲುಕಿ ಸುಮಾರು 15 ಮಂದಿ ಪ್ರಾಣ ಕಳೆದುಕೊಂಡರು. 200 ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲಸಮವಾಗಿದ್ದಲ್ಲದೆ, ಸುಮಾರು 13 ಹಳ್ಳಿಗಳೇ ನಾಶವಾಗಿ ಹೋಗಿವೆ. ಕೊಡಗಿನ ಹಳ್ಳಿಗಳು, ಪಟ್ಟಣಗಳಿಗೆ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ. ಸುಮಾರು 1800ರಷ್ಟು ಜನರು ಮಳೆ ಇಳಿದರೂ ನಿರಾಶ್ರಿತರ ಕೇಂದ್ರಗಳಲ್ಲೇ ದಿನ ದೂಡುತ್ತಿದ್ದಾರೆ.

ಈ ಸೂತಕದ ಛಾಯೆ ಹಬ್ಬದ ಮೇಲೆಯೂ ಬಿದ್ದಿದೆ. ರಸ್ತೆ ಸಂಪರ್ಕ ಇನ್ನೂ ಸರಿಯಾಗದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಮುಂದಿನ ಸೆಪ್ಟೆಂಬರ್ 9ರ ವರೆಗೆ ಪ್ರವಾಸಿಗರು ಆಗಮಿಸದಂತೆ ನಿರ್ಭಂದ ಹೇರಿದ್ದಾರೆ. ಕಾಫಿ ದರ ಕುಸಿತದ ಹಿನ್ನೆಲೆಯಲ್ಲಿ ನೂರಾರು ಕಾಫಿ ಬೆಳೆಗಾರರು ಹೋಂ ಸ್ಟೇ ನಡೆಸುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದರು. ಭೀಕರ ಮಳೆಯ ಕಾರಣದಿಂದ ಕೆಲವೆಡೆ ನಿರ್ಮಿಸಿದ್ದ ಹೋಂ ಸ್ಟೇಗಳೂ ನೆಲಸಮವಾಗಿದ್ದರೆ, ಅಳಿದುಳಿದ ಈ ಅತಿಥಿ ಗೃಹಗಳು ಪ್ರವಾಸಿಗರಿಲ್ಲದೆ ಬಣಗುಟ್ಟುತ್ತಿವೆ.

ಇವೆಲ್ಲದರ ಒಟ್ಟಾರೆ ಪರಿಣಾಮ ಕೈಲ್ ಮುಹೂರ್ತ ಹಬ್ಬದ ಸಂಭ್ರದಮದಲ್ಲಿ ತೇಲಬೇಕಾಗಿದ್ದ ಕೊಡವ ಜನರು ಸರಳವಾಗಿ ಸಂಪ್ರದಾಯವನ್ನಷ್ಟೇ ಆಚರಿಸುತ್ತಿದ್ದಾರೆ.