samachara
www.samachara.com
ಕೊಡಗಿನ ವಿಕೋಪವನ್ನು ಸ್ಥಳೀಯರು ಎದುರಿಸಿದ ಬಗೆ: ಹೀಗೊಂದು ಪ್ರತ್ಯಕ್ಷ ವರದಿ
GROUND REPORT

ಕೊಡಗಿನ ವಿಕೋಪವನ್ನು ಸ್ಥಳೀಯರು ಎದುರಿಸಿದ ಬಗೆ: ಹೀಗೊಂದು ಪ್ರತ್ಯಕ್ಷ ವರದಿ

ಕೊಡಗಿನವಳಾದ ನನಗೆ ಮಳೆ ಹೊಸತಲ್ಲ. ಸಾಮಾನ್ಯವಾಗಿ ಮಳೆಗಾಲ ಅಂದರೆ ಮಳೆ ಇದ್ದದ್ದೇ. ಆದರೆ ಯಾಕೋ ಈ ಬಾರಿಯ ಮಳೆಗಾಲ ಮೊದಲಿನ ಹಾಗಿಲ್ಲ ಅಂತ ಮೊದಲ ನೋಟಕ್ಕೆ ಅನ್ನಿಸಿತ್ತು.

ಕಾವೇರಿ ಕೊಡಗು

ಕಾವೇರಿ ಕೊಡಗು

ಪಿಎಚ್‌ಡಿ ಕಾರಣಕ್ಕೆ ಬೆಂಗಳೂರಿನಲ್ಲಿ ಇದ್ದವಳಿಗೆ ಊರಿಗೆ ಹೋಗುವ ಅನಿವಾರ್ಯತೆ ತಂದಿದ್ದು ಅಣ್ಣನ ಸಾವು. ಬುಧವಾರ ಮನೆಯಿಂದ ಬಂದ ಕರೆ ಕಹಿ ಸುದ್ದಿಯನ್ನು ಹೊತ್ತು ತಂದಿತ್ತು. ಜತೆಗೆ, ‘ಊರಲ್ಲಿ ಭಾರಿ ಮಳೆ, ನಿಧಾನ ಬಾ’ ಎಂಬ ಎಚ್ಚರಿಕೆಯೂ ಹಿಂದೆಯೇ ಕೇಳಿ ಬಂತು.

ಕೊಡಗಿನವಳಾದ ನನಗೆ ಮಳೆ ಹೊಸತಲ್ಲ. ಸಾಮಾನ್ಯವಾಗಿ ಮಳೆಗಾಲ ಅಂದರೆ ಮಳೆ ಇದ್ದದ್ದೇ ಅಂದುಕೊಂಡು ಬೆಂಗಳೂರು ಬಿಟ್ಟು ಸೋಮವಾರಪೇಟೆ ತಲುಪುವಾಗ ಹೊತ್ತಾಗಿತ್ತು. ಮಳೆ ಸುರಿಯುತ್ತಲೇ ಇತ್ತು. ಗಾಳಿ ಕೂಡ ಜೋರಾಗಿ ಬೀಸುತ್ತಿತ್ತು. ಯಾಕೋ ಈ ಬಾರಿಯ ಮಳೆಗಾಲ ಮೊದಲಿನ ಹಾಗಿಲ್ಲ ಅಂತ ಮೊದಲ ನೋಟಕ್ಕೆ ಅನ್ನಿಸಿತ್ತು.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/facebook

ಕೊಡಗು ಜಿಲ್ಲೆಯಲ್ಲಿ ಮಳೆ ಸುರಿಯುವುದು, ಭಾರಿ ಮಳೆ ಸುರಿಯುವುದು ಜನರಿಗೆ ಕಾಮನ್ ವಿಚಾರ. ತಿಂಗಳುಗಟ್ಟಲೆ ಇಲ್ಲಿ ಆಗಸದಿಂದ ನೀರು ಹನಿಯುತ್ತಲೇ ಇರುತ್ತದೆ. ಭೂಮಿ ಪಾಚಿ ಕಟ್ಟುತ್ತದೆ. ಕಾಲು ಜಾರುತ್ತದೆ. ಮಳೆಗಾಲ ಅಂದರೆ ಕೊಡಗಿನ ಜನರಿಗೆ ಅತಿಶಯೋಕ್ತಿಯೇನು ಆಗಿರಲಿಲ್ಲ. ಆದರೆ ಈ ಬಾರಿ ಮಳೆಗಾಲ, ಅದರಲ್ಲೂ ಕಳೆದ ನಾಲ್ಕೈದು ದಿನಗಳಿಂದ ನನ್ನ ಸುತ್ತ ಮುತ್ತ ಕೇಳಿ ಬರುತ್ತಿರುವ ಸಂಗತಿಗಳು ಮಳೆಗಾಲ ಆಚೆಗೆ ಸೃಷ್ಟಿಯಾದ ಪ್ರಕೃತಿಯ ಸಂಕಷ್ಟಗಳನ್ನು ಅರ್ಥಪಡಿಸಿದೆ.

ಮನೆಯಲ್ಲಿ ನಡೆದ ಸಾವಿಗೆ ಗುರುವಾರ ಅಂತ್ಯಕ್ರಿಯೆ ನಡೆಸಬೇಕಿತ್ತು. ಸಂಬಂಧಿಕರಲ್ಲಿ ಹಲವರು ಬಂದರು; ಜೀವ ಕೈಲಿ ಹಿಡಿದುಕೊಂಡು. ಇನ್ನು ಕೆಲವರು ಅರ್ಧ ದಾರಿಗೆ ಬಂದು ವಾಪಾಸಾದರು. ಕೆಲವರು ಇವತ್ತಿಗೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೊನೆಗೆ ಅಂತ್ಯಕ್ರಿಯೆಗಾಗಿ ತೆಗೆದ ಗುಂಡಿಯೊಳಗೂ ನೀರು ತುಂಬಿಕೊಂಡಿತ್ತು. ಕೊನೆಗೆ ನೀರು ನಿಂತಿದ್ದ ಗುಂಡಿಯೊಳಗೆ ಹೆಣ ಇಳಿಸಿ ಮಣ್ಣು ಮಾಡಿ ಬಂದೆವು. ಅದು ಈ ಬಾರಿಯ ಮಳೆ ಮತ್ತು ಮರೆಯಲಾಗದ ನೆನಪಿನ ಮೊದಲ ತುಣಕು.

ಮಳೆಗೆ ಕೊಡಗಿನ ಜನ ತಯಾರಿದ್ದರು. ಆದರೆ ಮಳೆಯಿಂದಾದ ಹಾನಿಗೆ ಅವರು ಸಿದ್ಧರಿರಲಿಲ್ಲ. ಮಡಿಕೇರಿ ಸಮೀಪದ ಮಕ್ಕಂದೂರು, ಪಾಲೂರು ಪ್ರದೇಶಗಳಲ್ಲಿ ಇವತ್ತಿಗೂ ದಟ್ಟ ಕಾಡಿದೆ. ಮಳೆಗಾಲ ಮೂರು ತಿಂಗಳು ಇಲ್ಲಿ ನೆಲ ಹಸಿಯೇ ಇರುತ್ತದೆ. ಈ ಬಾರಿ ಇಲ್ಲಿನ ಭೂಮಿ ಕುಸಿಯುತ್ತಿದೆ. ಅದನ್ನು ಜನ ನಿರೀಕ್ಷೆ ಮಾಡಿರಲಿಲ್ಲ. ಮಳೆಗಾಲಕ್ಕಾಗಿ ಕಟ್ಟಿಗೆ ಕಡಿದಿಟ್ಟುಕೊಂಡಿದ್ದರು, ದರಗು, ಸೊಪ್ಪುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು, ಹಪ್ಪಳ ಸಂಡಿಗೆ ತಯಾರಿಸಿಕೊಂಡಿದ್ದರು. ಆದರೆ ಮನೆಯ ಬುಡವೇ ಜಾರಿ ಹೋಗುತ್ತದೆ ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಅದಕ್ಕೆ ಏನು ಸಿದ್ಧತೆ ಮಾಡಕೊಳ್ಳಬೇಕು ಎಂಬುದು ಗೊತ್ತಿರಲಿಲ್ಲ.

ಕೆಲವು ತಿಂಗಳ ಹಿಂದೆ ಮಡಿಕೇರಿಯಲ್ಲಿ ಲಘು ಭೂ ಕಂಪನದ ಅನುಭವವಾಗಿತ್ತು. ಈಗ ಅದೇ ಪ್ರದೇಶಗಳಲ್ಲಿ ಗುಡ್ಡ ಕುಸಿಯುತ್ತಿರುವುದರಿಂದ ಜನ ಭೂಕಂಪನದ ಪರಿಣಾಮ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಸ್ಥಳೀಯರು ಮಳೆ ಮತ್ತು ಹಾನಿಗೆ ತಮ್ಮದೇ ಆದ ಹಲವು ಕಾರಣಗಳನ್ನು ಮುಂದಿಡುತ್ತಿದ್ದಾರೆ. ಇದರಲ್ಲಿ ಕೆಲವು ಸತ್ಯಕ್ಕೆ ಹತ್ತಿರ ಇವೆ ಅನ್ನಿಸುತ್ತಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/facebook

ಮೂರು ದಿನಗಳ ಮಳೆಯ ನಂತರ ನಿನ್ನೆ ಸ್ವಲ್ಪ ಸಮಯ ಬಿಡುವು ಸಿಕ್ಕಿತು. ಸೋಲಾರ್ ದೀಪ ಕೆಲಸ ಮಾಡಿತು. ನಮ್ಮ ಮೊಬೈಲ್‌ಗಳು ಚಾರ್ಜ್‌ ಆದವು. ಬಿಟ್ಟರೆ, ಬುಧವಾರದಿಂದ ಇಲ್ಲೀವರೆಗೆ ನಾನಿಲ್ಲಿ ನೋಡುತ್ತಿರುವುದು ಮಳೆ ಮತ್ತು ಗಾಳಿ ಮಾತ್ರ.

ನಮ್ಮ ಸಂಬಂಧಿಯೊಬ್ಬರ ಮನೆ ಮಡಿಕೇರಿಯಲ್ಲಿದೆ. ಅವರು ಸೋಮವಾರಪೇಟೆಯ ನಮ್ಮ ಮನೆಯಲ್ಲಿರುವಾಗಲೇ ಅವರ ಮನೆ ಹಿಂಬದಿಯ ಗುಡ್ಡ ಕುಸಿಯಲು ಶುರುವಾಗಿದೆ ಎಂಬ ಸುದ್ದಿ ಬಂತು. ಅವರ ಮನೆ ಕುಸಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ ಎಂಬುದು ಹೊತ್ತಾಯಿತು. ಈಗವರು ಮನೆಯ ಸಾಮಾನುಗಳನ್ನಾದರೂ ಹೊರಗೆ ಸಾಗಿಸಲು ಪ್ರಯಾಸದಿಂದ ಮಡಿಕೇರಿ ತಲುಪಿದ್ದಾರೆ. ಜಿಲ್ಲಾಡಳಿತ ಕೂಡ ಅವರಿಗೆ ಮನೆ ಖಾಲಿ ಮಾಡಲು ತಿಳಿಸಿದೆ ಅಂತೆ. ಇನ್ನೂ ಅನೇಕರು ಗಂಜೀ ಕೇಂದ್ರಗಳಿಗೆ ಬಂದಿದ್ದಾರೆ. ಆದರೆ ಒಂದೇ ಊರಿನ ಜನರ ನಡುವೆ ಸಂಪರ್ಕಗಳು ಕಡಿತವಾಗಿವೆ. ಯಾರು ಎಲ್ಲಿದ್ದಾರೆ ಎಂಬ ಬಗೆಗೆ ಹೆಚ್ಚು ಮಾಹಿತಿ ಇಲ್ಲ.

ಹೆಚ್ಚು ಕಡಿಮೆ ಮಡಿಕೇರಿ ಎಲ್ಲಾ ಕಡೆಗಳಿಂದಲೂ ಸಂಪರ್ಕ ಕಡಿದುಕೊಂಡಿದೆ. ನಾಗರಹೊಳೆ ಅಭಯಾರಣ್ಯ ರಸ್ತೆಯಿಂದ ಕೊಡಗು ಜಿಲ್ಲೆಗೆ ಬರಬಹುದು ಅನ್ನುತ್ತಿದ್ದಾರೆ. ಆದರೆ ಮಡಿಕೇರಿ ಸಂಪರ್ಕಿಸುವ ರಸ್ತೆಗಳು ಮುಚ್ಚಿ ಹೋಗಿವೆ. ಜಿಲ್ಲೆಯ ತಾಲೂಕು ಕೇಂದ್ರಗಳ ನಡುವಿನ ಸಂಪರ್ಕಗಳು ಕಡಿತಗೊಂಡಿವೆ. ಈ ಕಾರಣಕ್ಕಾಗಿ ಹೊರಗಿನಿಂದ ನೆರವಿನ ಹುಮ್ಮಸ್ಸು ಹೊತ್ತು ಬರುವವರನ್ನು ಸದ್ಯ ಬರಲೇ ಬೇಡಿ ಅನ್ನುತ್ತಿದ್ದೇವೆ.

ಸ್ಥಳೀಯರಿಗೆ ಇಲ್ಲಿನ ಬೌಗೋಳಿಕ ಪ್ರದೇಶದ ಅರಿವಿದೆ. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗಲು ಹಳ್ಳ, ತೊರೆಗಳನ್ನು ಹೇಗೆ ಬಳಸಿಕೊಂಡು ಸಾಗಬೇಕು ಎಂಬುದು ಗೊತ್ತಿದೆ. ನೆರೆ ತುಂಬಿ ಹರಿಯುತ್ತಿರುವಾಗ ಹೊರಗಿನವರು ಓಡಾಡುವುದು ಅಪಾಯಕಾರಿ. ಹೀಗಾಗಿ, ನೆರವು ನೀಡಲು ಹೊರಗಿನವರು ತೋರಿಸುವ ಉತ್ಸಾಹಕ್ಕೆ ನಾವು ಚಿರಋಣಿಗಳು. ಆದರೆ, ನೆರವಿಗೆ ಬಂದವರೇ ಹೊರೆಯಾದರೆ ಕಷ್ಟ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/facebook

ನೆರೆ ಬಂದ ಪ್ರದೇಶಗಳಲ್ಲಿ ಓಡಾಡುತ್ತಿರುವ ಸ್ಥಳೀಯರು ಹೇಳುವ ಪ್ರಕಾರ, ಎಷ್ಟೋ ಪ್ರದೇಶಗಳಿಗೆ ಹೆಲಿಕಾಪ್ಟರ್ ಮಾತ್ರವೇ ನೆರವು ನೀಡಲು ಸಾಧ್ಯ ಅಂತೆ. ಅಂದರೆ ನಡುಗಡ್ಡೆಗಳಾಗಿರುವ ಊರುಗಳನ್ನು ಸಂಪರ್ಕಿಸಲು ಸೂಕ್ತ ವ್ಯವಸ್ಥೆ ಅಗತ್ಯವಿದೆ. ಹೀಗಾಗಿ, ತಜ್ಞರ ತಂಡಗಳು ರಕ್ಷಣಾ ಕಾರ್ಯಾಚರಣೆ, ನೆರವು ಕಾರ್ಯಾಚರಣೆ ನಡೆಸಬೇಕಿದೆ. ಇಂತಹ ಸಮಯದಲ್ಲಿ ಯಾವ ಸಿದ್ಧತೆಗಳೂ, ಮಾಹಿತಿಯೂ ಇಲ್ಲದವರು ನೆರೆಗೆ ಇಳಿಯುವುದು ಸಮಸ್ಯೆಯಾಬಹುದು. ಈ ಕಾರಣಕ್ಕೆ ಮುನ್ನಚ್ಚರಿಕೆಯನ್ನು ಹೊರಗಿನವರಿಗೆ ಕೊಡುತ್ತಿದ್ದೇವೆ.

ಇದರ ನಡುವೆ ಮಡಿಕೇರಿಗೆ ಸದ್ಯದ ಅಗತ್ಯ ಇರುವುದು ವೈದ್ಯಕೀಯ ನೆರವು. ಇಂತಹ ಹಿನ್ನೆಲೆಯವರು ಯಾರೇ ಇದ್ದರೂ ಮಡಿಕೇರಿ ಡಿಎಚ್‌ಓ (9449843263) ಅವರನ್ನು ಸಂಪರ್ಕಿಸಿ. ವೈದ್ಯಕೀಯ ನೆರವು ನೀಡಲು ಮಾನವ ಸಂಪನ್ಮೂಲದ ಕೊರತೆ ಕಾಡುತ್ತಿದೆ ಎಂದು ಅಧಿಕಾರಿ ಹೇಳುತ್ತಿದ್ದರು.

ಇದು ಕಳೆದ ನಾಲ್ಕು ದಿನಗಳ ಕೊಡಗಿನ ಮನೆ ಮತ್ತು ಅದು ಸೃಷ್ಟಿಸಿರುವ ಪರಿಸ್ಥಿತಿಯ ಚಿತ್ರಣ. ನಾವೀಗಾಗಲೇ ನೆರೆ ಪ್ರದೇಶಗಳಿಗೆ ಹೋಗುತ್ತಿದ್ದೇವೆ. ಹೊರಗಿನ ಸಂಪರ್ಕದ ಅಗತ್ಯ ಬಿದ್ದರೆ ಖಂಡಿತಾ ಸಂಪರ್ಕಿಸುತ್ತೇವೆ...