samachara
www.samachara.com
‘ಕಣ್ಣುತೆರೆಯಲಿ ಕೆಎಂಎಫ್‌- ಭಾಗ 3’: ದಶಕದ ಹೋರಾಟ, ರಾಜಕೀಯ & ಹೊಸ ಭರವಸೆ
GROUND REPORT

‘ಕಣ್ಣುತೆರೆಯಲಿ ಕೆಎಂಎಫ್‌- ಭಾಗ 3’: ದಶಕದ ಹೋರಾಟ, ರಾಜಕೀಯ & ಹೊಸ ಭರವಸೆ

ರೈತಸಂಘಟನೆ ಮುಂಚೂಣಿಯಲ್ಲಿದ್ದ ಕೆಲವರು ಗ್ರಾಮೀಣ ಭಾಗದ ರೈತರ ಒಲುಮೆ ಪಡೆದರು. ಇದು ಮತ್ತೊಂದು ರಾಷ್ಟ್ರೀಯ ಪಕ್ಷದ ದುರೀಣರಿಗೆ ಸಿಟ್ಟು ತರಿಸಿತು. ಇಲ್ಲಿಂದ ಈ ಪ್ರಕರಣ ವಿಶೇಷ ತಿರುವು ಪಡೆಯಿತು.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಉತ್ತರಕನ್ನಡದ ಹೈನೋದ್ಯಮದ ಶಾಪಗ್ರಸ್ತ ಸ್ಥಿತಿ, ಅದಕ್ಕೆ ಇರುವ ಕಾರಣಗಳನ್ನು ಸರಣಿಯ ‘ಭಾಗ-1’ ಮತ್ತು ಭಾಗ-2’ರಲ್ಲಿ ‘ಸಮಾಚಾರ’ ವಿವರವಾಗಿ ತೆರೆದಿಟ್ಟಿತ್ತು. ವಿವರಿಸಿದ ಹಲವು ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಉತ್ತರಕನ್ನಡದಲ್ಲಿ ದಶಕಗಳ ಕಾಲ ಹೋರಾಟವೊಂದು ನಡೆದಿತ್ತು. ಆ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರು ತಮಗಿಂತ ಹೆಚ್ಚು ಹಣವನ್ನು ಅಲ್ಲಿನ ಒಕ್ಕೂಟದಿಂದ ಪಡೆಯುತ್ತಿರುವುದು ಉತ್ತರಕನ್ನಡದ ಹೈನೋದ್ಯಮಿಗಳ ಗಮನಕ್ಕೆ ಬರಲು ಹೆಚ್ಚು ಸಮಯ ಏನೂ ಬೇಕಾಗಲಿಲ್ಲ. ಇಲ್ಲಿನ ಕೆಲವು ಹಾಲು ಉತ್ಪಾದಕ ರೈತರು ತಮಗೂ ಅಷ್ಟೇ ಹಣ ನಿಗಧಿಪಡಿಸಲು ಧಾರವಾಡ ಒಕ್ಕೂಟವನ್ನು ಒತ್ತಾಯಿಸಿದರು. ರಾಜಕೀಯ ರಹಿತ ಒತ್ತಾಯದ ಪ್ರತಿಫಲ ಶೂನ್ಯವಾದಾಗ, ಅವರೆಲ್ಲ ಸೇರಿ ಸಂಘಟಿತ ಪ್ರಯತ್ನ ಮಾಡಲು ಚಿಂತನೆ ನಡೆಸಿದರು. ಇದರ ಫಲವೇ ದಶಕಗಳಿಗೂ ಹೆಚ್ಚುಕಾಲ ನಡೆದ ಹೋರಾಟಕ್ಕೆ ನಾಂದಿಯಾಯಿತು.

ಒಕ್ಕೂಟದ ಬೈಲಾ ಪ್ರಕಾರ, ಅದರ ವ್ಯಾಪ್ತಿಯಲ್ಲಿ ಎರಡು ಬೆಲೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ಬಯಲು ಸೀಮೆ ಜಿಲ್ಲೆಗಳ ರೈತರಿಗೆ ಅಲ್ಲಿನ ಬೆಳೆಗಳ ತ್ಯಾಜ್ಯವೇ ಉತ್ತಮ ಮೇವಾಗಿ ಲಭ್ಯವಿರುವುದರಿಂದ ಒಕ್ಕೂಟ ನಿರ್ಧರಿಸಿದ ಬೆಲೆ ಸಮರ್ಥನೀಯವೇ ಆಗಿತ್ತು. ಹೀಗೆ ಕೃಷಿ ತ್ಯಾಜ್ಯವನ್ನೇ ಹೈನುಗಾರಿಕೆಗೆ ಬಳಸಿ ಹಾಲು ಉತ್ಪಾದಕ ವೆಚ್ಛ ಕಡಿಮೆ ಮಾಡಬಹುದಾದ ಭಾಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಬನವಾಸಿ ಭಾಗ ಮಾತ್ರ. ಜಿಲ್ಲೆಯ ವ್ಯಾಪ್ತಿಗೆ ಹೋಲಿಸಿದಲ್ಲಿ ಇದು ಅತ್ಯಂತ ಕಡಿಮೆ ಪ್ರದೇಶ.

ಆದರೆ ಶಿರಸಿಯ ಇತರ ಭಾಗಗಳು ಮತ್ತು ಕರಾವಳಿಯನ್ನು ಸೇರಿಸಿ ಇತರ ಎಲ್ಲ ತಾಲೂಕುಗಳ ರೈತರು ಹಿಂಡಿ ಮೇವುಗಳನ್ನು ಕೊಂಡು ತಂದೇ ಹೈನುಗಾರಿಕೆ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರಕನ್ನಡ ಜಿಲ್ಲೆಗಳೆರಡರ ಪರಿಸ್ಥಿತಿಗೆ ಬಹಳ ಸಾಮ್ಯವಿದೆ. ಇಂಥ ಸಮಯದಲ್ಲಿ ಉತ್ತರಕನ್ನಡ ಜಿಲ್ಲೆಯ ರೈತರು ಹೇಗೆ ಬಚಾವಾಗಬಹುದು ಎಂಬುದೇ ಸಂಘಟಿತ ರೈತರ ಎದುರು ಇದ್ದ ಬೃಹತ್ ಪ್ರಶ್ನೆ.

ಉತ್ತರಕನ್ನಡಕ್ಕೆ ಮಾತ್ರ ಒಂದು ಬೆಲೆ ನೀಡಿದಲ್ಲಿ ಉಳಿದ ಕಡೆಗಳಿಂದ ವಿರೋಧದ ಕೂಗೇಳುತ್ತದೆ. ಒಕ್ಕೂಟದ ಅಡಿ ಬರುವ ಎಲ್ಲ ಜಿಲ್ಲೆಗಳ ರೈತರಿಗೂ ಬೆಲೆ ಏರಿಸಿದಲ್ಲಿ ಒಕ್ಕೂಟ ನಷ್ಟಕ್ಕೆ ಜಾರುತ್ತದೆ. ಉತ್ತರಕನ್ನಡಕ್ಕೇ ಒಂದು ಒಕ್ಕೂಟ ರಚಿಸಬೇಕೆಂದರೆ, ರಚನೆಗೆ ಇರಬೇಕಾದ ಅಗತ್ಯಕ್ಕಿಂತ ಕಡಿಮೆ ಹಾಲು ಉತ್ಪಾದನೆಯಾಗುತ್ತಿದೆ. ಅಂದಿನ ಪರಿಸ್ಥಿತಿ ವಿಶ್ಲೇಷಿಸಿ, ಉತ್ತರ ಕನ್ನಡ ರೈತರ ಸ್ಥಿತಿ ನೋಡಿ ಅಂಥ ಸಮಯದಲ್ಲಿ ಇವರ ಸಹಾಯಕ್ಕೆ ಬಂದವರು ಧಾರವಾಡ ಹಾಲು ಒಕ್ಕೂಟದ ಅಂದಿನ ಹಿರಿಯ ಅಧಿಕಾರಿ. ಅವರು ಉತ್ತರಕನ್ನಡ ಜಿಲ್ಲೆಯನ್ನು ಧಾರವಾಡ ಒಕ್ಕೂಟದಿಂದ ಬೇರ್ಪಡಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸುವ ಉಪಾಯ ಹೇಳಿದ್ದಲ್ಲದೆ, ಅಲ್ಲಿನ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ಪ್ರಸ್ತಾಪಿಸಿದರು. ಅಲ್ಲಿಂದ ಗ್ರೀನ್ ಸಿಗ್ನಲ್ ಕೂಡ ಬಂದಿತ್ತು. ಈ ಎಲ್ಲ ಪ್ರಕ್ರಿಯೆಗಳು ನಡೆದಿದ್ದು 1997-98 ರ ಸಮಯದಲ್ಲಿ.

ಈ ಎಲ್ಲ ವಿಷಯಗಳು ರೈತಪರವೆಂದು ಮನಗಂಡ ಸಂಘಟಕರು ಕೆಲವು ರಾಜಕೀಯ ಮುಖಂಡರನ್ನು ಭೇಟಿ ಮಾಡಿ ಸಹಾಯ ಕೋರಿದ್ದು ಪ್ರಯೋಜನವಾಗಲಿಲ್ಲ. ಪರಿಣಾಮ ‘ಉತ್ತರಕನ್ನಡದ ಹಾಲು ಒಕ್ಕೂಟದ ರಚನಾ ಸಮಿತಿ’ ಯನ್ನು ಹುಟ್ಟುಹಾಕಿ ಅದರ ಮೂಲಕ ಕಾರ್ಯ ಚಟುವಟಿಕೆಗಳನ್ನು ಪ್ರಾರಂಭಿಸಿದರು. 1998ರಲ್ಲೇ ಹೊಸ ಒಕ್ಕೂಟ ರಚನೆಯ ಯೋಜನಾ ಪ್ರಸ್ಥಾವನೆಯನ್ನೂ ಕ್ರಮಬದ್ಧವಾಗಿ ರಚಿಸಿ ಕೆಎಮ್‌ಎಫ್‌ಗೆ ಸಲ್ಲಿಸಲಾಯಿತು. ಈ ಪ್ರಯತ್ನಕ್ಕೆ ಜಿಲ್ಲೆಯ ಹಾಲು ಉತ್ಪಾದನೆ ಮೊತ್ತ ತಾಂತ್ರಿಕವಾಗಿ ಸಮಸ್ಯೆಯಾದಾಗ, ಉತ್ತರಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸುವ ಪ್ರಸ್ತಾವನೆ ಮುಂಚೂಣಿಗೆ ತರಲಾಯಿತು. ಈ ರೀತಿಯಲ್ಲಿ ವ್ಯವಸ್ಥಿತ ಪ್ರಯತ್ನ ಪ್ರಾರಂಭವಾದಾಗ ಸ್ಥಳೀಯ ಮುಖಂಡರ ಕಣ್ಣು ಕೆಂಪಾಯಿತು.

ಉತ್ತರಕನ್ನಡ ಜಿಲ್ಲೆಯನ್ನು ಕೈಬಿಡಲು ಧಾರವಾಡ ಒಕ್ಕೂಟದ ವಾರ್ಷಿಕ ಮಹಾ ಸಭೆಯಲ್ಲಿ ತೀರ್ಮಾನಿಸಿ, ಉಪನಿಯಮ1.3ರಲ್ಲೂ ತಿದ್ದುಪಡಿ ತಂದು ಅನುಕೂಲ ಮಾಡಿಕೊಡಲಾಯಿತು. ಇಲ್ಲಿಯವರೆಗೂ ನಡೆಸಿಕೊಂಡು ಬಂದ ರೈತರ ಪ್ರಯತ್ನಕ್ಕೆ ಸುಗಮ ಹಾದಿ ದೊರೆಯಿತು. ನಂತರ ಸರಕಾರ ಮಟ್ಟದಲ್ಲಿಯೂ ಅನುಮತಿ ದೊರೆತು ಉತ್ತರಕನ್ನಡ ಜಿಲ್ಲೆಯ ಶಾಸ್ತ್ರೋಕ್ತ ಹಸ್ತಾಂತರಕ್ಕೆ ವೇದಿಕೆ ಏನೋ ಸಿದ್ಧವಾಯಿತು.

ಈವರೆಗೂ ಮುಂಚೂಣಿಯಲ್ಲಿದ್ದವರು ರೈತ ಸಂಘಟನೆಯ ಮುಖಂಡರೊಬ್ಬರು. ರೈತಸಂಘಟನೆ ಮುಂಚೂಣಿಯಲ್ಲಿದ್ದ ಕೆಲವರು ಗ್ರಾಮೀಣ ಭಾಗದ ರೈತರ ಒಲುಮೆ ಪಡೆದರು. ಇದು ಮತ್ತೊಂದು ರಾಷ್ಟ್ರೀಯ ಪಕ್ಷದ ದುರೀಣರಿಗೆ ಸಿಟ್ಟು ತರಿಸಿತು. ಇಲ್ಲಿಂದ ಈ ಪ್ರಕರಣ ವಿಶೇಷ ತಿರುವು ಪಡೆಯಿತು.

ಧಾರವಾಡ ಹಾಲು ಒಕ್ಕೂಟ ವ್ಯಾಪ್ತಿಯ ಒಂದು ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷರಿಂದ ನ್ಯಾಯಾಲಯದಲ್ಲಿ ಉತ್ತರಕನ್ನಡ ಜಿಲ್ಲೆಯ ಹಸ್ತಾಂತರವಾಗದಂತೆ ತಕರಾರು ಸಲ್ಲಿಸಲಾಯಿತು. ಅಲ್ಲಿಯೂ ತೀರ್ಪು ರೈತಪರವೇ ಬಂತು. ನಂತರ ಮೇಲ್ಮನವಿ ಸಲ್ಲಿಸಲಾಯಿತಾದರೂ, ತೀರ್ಪು ರೈತ ಪರವೇ ಆಯಿತು.

ರೈತ ಸಂಘಟನೆಯ ಕೆಲವರು ಈ ಹೋರಾಟಕ್ಕೆ ತಮ್ಮದೇ ಅಸ್ತಿಯ ಮೇಲೆ ಸಹಕಾರ ಸಂಘದಲ್ಲಿ ಸಾಲ ಪಡೆದು ಈ ಹೋರಾಟದ ಖರ್ಚಿಗಾಗಿ ಬಳಸಿದರು. ಧಾರವಾಡ, ಬೆಂಗಳೂರು, ದಕ್ಷಿಣಕನ್ನಡಗಳಿಗೆ ದಿನವೂ ಓಡಾಟವಾಯಿತು. ಆದರೂ ಎದೆಗುಂದದ ಸಂಘಟಕರು ಇತರ ಹಾಲು ಉತ್ಪಾದಕ ಸಂಘಗಳನ್ನೂ ಹುರಿದುಂಬಿಸಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮಾಡಿದರು.

ಈ ಎಲ್ಲ ಪ್ರಕ್ರಿಯೆಗಳನ್ನು ನೋಡಿ ಸಿಡಿಮಿಡಿಗೊಂಡ ರಾಷ್ಟ್ರೀಯ ಪಕ್ಷದ ದುರೀಣರು ತಮ್ಮ ಪ್ರಭಾವ ಬಳಸಿ ಹೋರಾಟದ ಮುಂಚೂಣಿಯಲ್ಲಿದ್ದ ಮುಖಂಡನನ್ನು ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಸ್ಥಾನದಿಂದ ಬಲಾತ್ಕಾರವಾಗಿ ಕೆಳಗಿಳಿಸಿದರು. ಹೊಸದಾಗಿ ತಮ್ಮದೇ ಬೆಂಬಲಿಗನನ್ನು ಅಧ್ಯಕ್ಷನನ್ನಾಗಿಸಿ ಈವರೆಗೆ ಕಾನೂನಾತ್ಮಕವಾಗಿ ಹೋರಾಡಲು ಕಾರಣವಾಗಿದ್ದ ನ್ಯಾಯಾಲಯದಲ್ಲಿ ಹೋಡಿದ್ದ ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಪ್ರಚೋದಿಸಿ ಯಶಸ್ವಿಯಾದರು. ಇದು ರೈತರಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ಕಾರಣವಾಯಿತು. ಜಿಲ್ಲಾ ಉಸ್ತುವಾರಿ ಸಚಿವರ ಆಶ್ವಾಸನೆ ಆಧರಿಸಿ ಧರಣಿ ನಿಲ್ಲಿಸಲಾಯಿತಾದರೂ ಸಚಿವರ ಆಶ್ವಾಸನೆಯ ಕಾರ್ಯರೂಪಕ್ಕೆ ಬರಲಿಲ್ಲ.

ಈ ಹೊತ್ತಿಗೂ ಹೈಕೋರ್ಟ್‌ನಿಂದ ಉತ್ತರಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಲು ನೀಡಿದ್ದ ಆದೇಶ ಅನುಷ್ಠಾನಕ್ಕೆ ಬರಲೇ ಇಲ್ಲ. ಪ್ರತಿ ದಿನ ಸುಮಾರು 4.5 ಲಕ್ಷದಷ್ಟು ನಷ್ಟ ಅನುಭವಿಸುವ ದುಃಸ್ಥಿತಿ ಉತ್ತರಕನ್ನಡ ಹಾಲು ಉತ್ಪಾದಕರ ಪಾಲಿಗೆ ಖಾಯಂ ಆಗಿಯೇಹೋಯ್ತು. ಎರಡು ರಾಷ್ಟ್ರೀಯ ಪಕ್ಷಗಳ ಜಿದ್ದಾಜಿದ್ದಿನಲ್ಲಿ ಇಡಿಯ ಉತ್ತರಕನ್ನಡ ಜಿಲ್ಲೆಯ ಹಾಲು ಉತ್ಪಾದಕರು ತಮ್ಮ ಬೆವರಿನ ಕೋಟಿ ಕೋಟಿ ಬೆಲೆ ತೆರಬೇಕಾಯಿತು, ತೆರುತ್ತಲೇ ಇರಬೇಕಾಯಿತು.

“ನಾವು ನಮ್ಮವರೆಂದು ಚುನಾವಣೆಯಲ್ಲಿ ಆರಿಸಿ ಕಳುಹಿಸಿದವರೇ ನಮಗೆ ಅನ್ಯಾಯವೆಸಗಿದ್ದಾರೆ. ನಾವು ಯಾಕೆ ಸುಮ್ಮನೆ ಕುಳಿತುಕೊಳ್ಳಬೇಕು? ಹಾಲು ಉತ್ಪಾದಕರೆಲ್ಲ ಒಗ್ಗೂಡಿ ಕೋರ್ಟ್‌ ಆದೇಶ ಜಾರಿಗೆ ಹೊಸ ಹೋರಾಟ ಕಟ್ಟುತ್ತೇವೆ,’’ ಎಂಬ ಹೊಸ ಆಶಯದ ಮಾತುಗಳನ್ನು ಆಡುತ್ತಾರೆ ಹಲಸಿನಹಳ್ಳಿ ಹಾಲು ಉತ್ಪಾದಕ ಸಂಘದ ಸದಸ್ಯ ರವಿ ಹೆಗಡೆ.

‘ಸಮಾಚಾರ’ದ ಸರಣಿ ಉತ್ತರಕನ್ನಡದ ಹೈನೋದ್ಯಮ ಮತ್ತು ಅದರ ಜತೆ ತೊಡಗಿಸಿಕೊಂಡವರಿಗೆ ಹೊಸ ಭರವಸೆಯೊಂದನ್ನು ಹುಟ್ಟುಹಾಕಿದೆ. ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಅವರ ಹೋರಾಟಕ್ಕೆ ಹೊಸ ಸ್ಫೂರ್ತಿಯನ್ನು ತುಂಬಿದೆ. ಆದಷ್ಟು ಬೇಗ ಉತ್ತರ ಕನ್ನಡದ ಹೈನುಗಾರಿಕೆ ಹೊಸ ಹಾದಿಗೆ ಹೊರಳಿಕೊಳ್ಳಲಿ, ಇಲ್ಲಿನ ರೈತರ ಪ್ರಗತಿಗೆ ಅದು ಪೂರಕವಾಗಿರಲಿ ಎಂಬುದು ನಮ್ಮ ಆಶಯ.