samachara
www.samachara.com
‘ಸ್ವಯಂಕೃತ ಅಪರಾಧ’: ಇಡುಕ್ಕಿಯನ್ನೇ ಏಕೆ ಪ್ರಕೃತಿ ಇಕ್ಕಟ್ಟಿಗೆ ಸಿಲುಕಿಸಿತು?
GROUND REPORT

‘ಸ್ವಯಂಕೃತ ಅಪರಾಧ’: ಇಡುಕ್ಕಿಯನ್ನೇ ಏಕೆ ಪ್ರಕೃತಿ ಇಕ್ಕಟ್ಟಿಗೆ ಸಿಲುಕಿಸಿತು?

ಮಳೆ, ದೇವರ ಸ್ವಂತ‌ ನಾಡಿನ ಜನರಿಗೆ ಇಲ್ಲದ ತಲೆನೋವು ತಂದಿದೆ.‌ ಮತ್ತೆ ಈ ವಿಕೋಪಗಳಿಗೆ ಕಾರಣ ಯಾರು ಎಂದು ಕೇಳಿದರೆ; ಉತ್ತರ ಇಲ್ಲಿನ ಅಪ್ರಾಮಾಣಿಕ, ಅನೈತಿಕ ಜನ ಮತ್ತು ಅವರನ್ನು ನಿಯಂತ್ರಿಸಲಾಗದ ಸರಕಾರ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

Summary

ಜನರ ದುರಾಸೆ, ನೈಸರ್ಗಿಕ ಸಂಪನ್ಮೂಲದ ಮೇಲೆ ಸವಾರಿ ಮತ್ತು ಜನಪ್ರತಿನಿಧಿ ವರ್ಗದ ಹೊಣೆಗೇಡಿತನಗಳು ಜತೆಯಾದರೆ ಏನಾಗುತ್ತದೆ ಎಂಬುದಕ್ಕೆ ಮಾದರಿ ಕೇರಳದ ಇಡುಕ್ಕಿಯ ಇವತ್ತಿನ ಸ್ಥಿತಿ. ಮತ್ತದು ಇಡುಕ್ಕಿಯ ಪ್ರವಾಹ, ಭೂ ಕುಸಿತದ ಹಿನ್ನೆಲೆಯಲ್ಲಿ ಸಂಭವಿಸಿದ ಜೀವಹಾನಿ, ಆಸ್ತಿ ಹಾನಿಗಳಿಗೆ ಮೂಲ ಕಾರಣ ಕೂಡ. ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನೀವು ಈ ಸ್ಟೋರಿಯನ್ನು ಓದಬೇಕು...

ಇಡುಕ್ಕಿ‌ ಹೆಸರಿಗೆ ಜಿಲ್ಲಾ ಕೇಂದ್ರ. ಆದರೆ "ಅಲ್ಲಿ ಇರುವುದು ಕಾಡು ಮಾತ್ರ. ಸಣ್ಣ ಗ್ರಾಮ ಪಂಚಾಯತ್ ಮಟ್ಟದ ಪೇಟೆ ಅಲ್ಲಿದೆ ಅಷ್ಟೆ. ಇಡುಕ್ಕಿ‌ ರಾಷ್ಟ್ರೀಯ ಉದ್ಯಾವನದ ಕಾರಣಕ್ಕೆ ಪ್ರಾಮುಖ್ಯತೆ ಪಡೆದಿದೆ,” ಎನ್ನುತ್ತಾರೆ ಇಡುಕ್ಕಿಯ ಗ್ರಾಮ ಪಂಚಾಯತ್ ಅಧಿಕಾರಿ ಸಚಿನ್.

ಸಚಿನ್ ಹೇಳುವ ಕಾಡು ಪ್ರದೇಶಗಳನ್ನೇ ಹಾಸು ಹೊದ್ದ ಮಲಗಿರುವ ಇಡುಕ್ಕಿ ಪಶ್ಚಿಮ ಘಟ್ಟದ ನೀಲಗಿರಿ ಬೆಟ್ಟದ ಸಾಲಿನಲ್ಲಿ ಬರುತ್ತದೆ. ಈ ಬೆಟ್ಟಗಳಿಗೆ ಅನ್ವರ್ಥನಾಮವೇ ಮಳೆಯ‌ ಕಾಡುಗಳು. ಇಲ್ಲಿ ಮಳೆ ಎನ್ನುವುದು‌ ನಿತ್ಯ ನಿರಂತರ.‌ ಹಾಗಾಗಿ ಎಲ್ಲೆಲ್ಲೂ ಹಸಿರು ಕಣ್ಣಿಗೆ ರಾಚುತ್ತದೆ. ಇಂಥಹ ಇಡುಕ್ಕಿ ಎಂಬ ಸುಂದರ ಭೂ ಪ್ರದೇಶ ಸಮುದ್ರ ಮಟ್ಟದಿಂದ ಸುಮಾರು 1500 ರಿಂದ 2500 ಅಡಿಗಳಷ್ಟು ಎತ್ತರದಲ್ಲಿ ಬರುತ್ತದೆ.

ಹೇಳಿ‌ ಕೇಳಿ‌ ಮಳೆಯ ಕಾಡುಗಳು. ಜತೆಗೆ ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿದೆ.‌ ಹೀಗಾಗಿ ಈ ರಣ ಭೀಕರ ದಟ್ಟ ಕಾಡುಗಳಲ್ಲಿ‌ ಭಾರೀ‌ ಮಳೆಯನ್ನು ಎದುರಿಸುತ್ತಾ ಮನುಷ್ಯರಾದವರು ಬದುಕಲಾರರು ಎಂದು ನೀವೀಗ ಅಂದುಕೊಳ್ಳಬಹುದು. ಆದರೆ‌‌ ನಿಮ್ಮ ಊಹೆಗೆ ವಿರುದ್ಧವಾದ ವಾತಾವರಣ ಇಲ್ಲಿದೆ.

ಎರ್ನಾಕುಲಂನಿಂದ ಇಡುಕ್ಕಿಯನ್ನು ಸಂಪರ್ಕಿಸುವ ಕೋಥಮಂಗಲಂ ಬೆಟ್ಟ ಗುಡ್ಡಗಳ ತಿರುವು‌ ಮುರುವು ಹಾದಿಯನ್ನು ಅನುಸರಿಸಿದರೆ ಅಲ್ಲಿ ಅಚ್ಚರಿಗಳೇ ಎದುರಾಗುತ್ತವೆ. ಪ್ರಕೃತಿದತ್ತವಾಗಿ ಬಂದ ಸುಂದರ ಕಣಿವೆ, ಕಲ್ಲು ಬಂಡೆಗಳ ಕಡಿದಾದ ಬೆಟ್ಟಗಳು ಕಣ್ಣಿಗೆ ಮುದ‌ನೀಡುತ್ತವೆ‌. ಇದೇ ಬೆಟ್ಟಗಳಿಂದ ಬಳುಕುತ್ತಾ ಇಳಿಯುವ ಹತ್ತಾರು ಜಲಪಾತಗಳು, ಗಾಳಿಗೆ ಅವುಗಳಿಂದ ಹಾರುವ ನೀರ ಹನಿಗಳ ಧೂಮ ಲೀಲೆ, ಕಣಿವೆ ಮಧ್ಯದಿಂದ ಮಂದಗಾಮಿನಿಯಂತೆ ಘನ ಗಂಭೀರವಾಗಿ ಹರಿಯುವ ಪ್ರಖ್ಯಾತ ಪೆರಿಯಾರ್ ನದಿ 'ಇಡುಕ್ಕಿ'ಗೆ ಭಾರತದ ಪ್ರವಾಸೋದ್ಯಮದ ನಕಾಶೆಯಲ್ಲಿ ಪ್ರಮುಖ ಸ್ಥಾನವನ್ನೇ ಕಲ್ಪಿಸಿವೆ.

ಇಡುಕ್ಕಿಯ ಕಣಿವೆಗಳಲ್ಲಿ ಹರಿಯುತ್ತಿರುವ ಪೆರಿಯಾರ್ ನದಿ. 
ಇಡುಕ್ಕಿಯ ಕಣಿವೆಗಳಲ್ಲಿ ಹರಿಯುತ್ತಿರುವ ಪೆರಿಯಾರ್ ನದಿ. 
/ಸಮಾಚಾರ. 

ಇದೇ ಇಡುಕ್ಕಿಯ ಸೌಂದರ್ಯ ಇಲ್ಲಿನ ಸ್ಥಳೀಯರ ಕಣ್ಣಿಗೆ ಭರಪೂರ ನೈಸರ್ಗಿಕ ಸಂಪನ್ಮೂಲದ‌ ಕೇಂದ್ರವಾಗಿ ಕಾಣಿಸಿಕೊಂಡಿದೆ. ಸಮಸ್ಯೆ ಆರಂಭವಾಗಿದ್ದೇ ಇಲ್ಲಿ.

ಘಾಟಿ ರಸ್ತೆಯ ತಿರುವು ಮುರುವಿನ ಹಾದಿಯಲ್ಲಿ ಕಾಣಿಸುವ ಇಲ್ಲಿನ ಸುಂದರ ದೃಶ್ಯ ಕಾವ್ಯಗಳ ಜತೆಗೆ ಕಡಿದಾದ ಕಣಿವೆಗಳಲ್ಲಿ ಮತ್ತೊಂದಿಷ್ಟು ಅಚ್ಚರಿಗಳು ಎದುರಾಗುತ್ತವೆ. ಇದು ಮನುಷ್ಯ ಮಾತ್ರವೇ ನಿರ್ಮಿಸಬಹುದಾದ ಸಾಹಸದ ಜಗತ್ತು. ಹಲವು ಕಡೆಗಳಲ್ಲಿ‌ 45 ಡಿಗ್ರಿಗಿಂತಲೂ ಹೆಚ್ಚು ಪ್ರಪಾತವಾಗಿರುವ ಜಾಗಗಳಲ್ಲಿ ಜನರು ತೆಂಗು, ಅಡಿಕೆ ಕೃಷಿಗಳನ್ನು‌ ಮಾಡಿದ್ದಾರೆ. ಹಲವು ಕಡೆಗಳಲ್ಲಿ ರಬ್ಬರ್ ಪ್ಲಾಂಟೇಷನ್ ಗಳಿವೆ. ಇವುಗಳ ಮಧ್ಯೆ ಸುಸಜ್ಜಿತ ಆರ್.ಸಿ.ಸಿ ಮನೆಗಳಿವೆ. ಕೆಲವು ಮನೆಗಳಂತೂ ಯಾವ ಅರಮನೆಗಳಿಗೂ ಕಡಿಮೆ ಇಲ್ಲ.‌ ಪರಿಸ್ಥಿತಿ ಎಂಥ ವಿಕೋಪಕ್ಕೆ ಹೋಗಿದೆ ಎಂದರೆ ಈ ಘಾಟಿ ಮಧ್ಯೆಯೇ ಹಲವು ಸಣ್ಣ ಪೇಟೆಗಳು ಸೃಷ್ಟಿಯಾಗಿವೆ. ಬಸ್ ನಿಲುಗಡೆಗಳಿಗೆ ಲೆಕ್ಕವೇ ಇಲ್ಲ. ಇದೆಲ್ಲವನ್ನೂ ಮೀರಿ ಇವರಿಗಾಗಿ ಪೊಲೀಸ್ ಠಾಣೆಯೂ ಈ ಕಾಡಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.

‘'ಸುಂದರ ನೈಸರ್ಗಿಸ ಸಂಪತ್ತನ್ನು ಸವಿಯಲು‌ ಬರುವವರಿಗಾಗಿ ಹೋಮ್ ಸ್ಟೇಗಳು‌, ಲಾಡ್ಜ್ ಗಳು ತಲೆ ಎತ್ತಿವೆ. ಇವತ್ತಿಗೆ ಈ‌ ಬೆಟ್ಟ ಸಾಲುಗಳೂ ಊರುಗಳಾಗಿವೆ,” ಎನ್ನುತ್ತಾರೆ ಕರ್ನಾಟಕದ ಹೆಬ್ರಿಯಲ್ಲಿ ಒಂದಷ್ಟು ಸಮಯವಿದ್ದು ಇದೀಗ ಇದೇ ಬೆಟ್ಟಗುಡ್ಡಗಳಲ್ಲಿ‌ ಮನೆ ಮಾಡಿಕೊಂಡಿರುವ ಬಿಜು. ಅರಳು ಹುರಿದಂತೆ ಕನ್ನಡ ಮಾತನಾಡುವ ಬಿಜು ಇಲ್ಲಿನ ಜನರ ಖಯಾಲಿಗಳ ಬಗ್ಗೆ ಗಮನ ಸೆಳೆಯುತ್ತಾರೆ. ಮೊದಲಿಗೆ ಬಂದು‌ ಕಾಡಿನಲ್ಲಿ‌ ಸಣ್ಣ ಮನೆಯೊಂದನ್ನು‌ ಕಟ್ಟಿಕೊಳ್ಳುವುದು. ನಿಧಾನಕ್ಕೆ ಅಲ್ಲೊಂದು ತೋಟ ಮಾಡಿಕೊಂಡು ಜನ ತಮ್ಮ ಬದುಕನ್ನು ಗಟ್ಟಿ ಮಾಡಿಕೊಳ್ಳುವ ಪರಿಪಾಠ ಸಮೂಹ‌ ಸನ್ನಿಯ ರೂಪ ಪಡೆದುಕೊಂಡಿದೆ ಎಂಬುದು ಬಿಜು ಮಾತುಗಳು.

ಹೀಗೆ ಪ್ರಕೃತಿಯ ಮೇಲೆ ಬಲವಂತದ ಸವಾರಿಯನ್ನು‌ ಇಲ್ಲಿನ ಜನರು ಮಾಡಿದ್ದು ಅದರ ಪ್ರತ್ಯಕ್ಷ ಪರಿಣಾಮಗಳು ಈಗ ಗೋಚರಿಸುತ್ತಿವೆ.

ಮಳೆ‌ ಬರುತ್ತಿದ್ದಂತೆ ಪೆರಿಯಾರ್‌ ನದಿಯ‌ ನೀರು ಇವರ ತೋಟಗಳಿಗೆ ನುಗ್ಗಿದೆ. ಜತೆಗೆ ಕಣಿವೆಗಳಿಂದ ಉರುಳಿದ ಕಲ್ಲು ಬಂಡೆಗಳು ಮನೆಗಳ ಮೇಲೆಯೂ ಬಿದ್ದಿದೆ. ಇನ್ನೊಂದು ಆಯಾಮದಲ್ಲಿ ನೋಡಿದರೆ ಇದು ಇಲ್ಲಿನವರೇ ಸೃಷ್ಟಿಸಿಕೊಂಡ ಕೃತಕ ಪ್ರಾಕೃತಿಕ ವಿಕೋಪ.

ನಿರಾಶ್ರಿತರ ಕೇಂದ್ರ:

ಇಲ್ಲಿಯವರೆಗೆ ಪ್ರಕೃತಿಗೆ ಸವಾಲೊಡ್ಡಿ ಜೀವಿಸಿದ ಇಡುಕ್ಕಿ ಜನ ಇಂದು ಅದೇ ಪ್ರಕೃತಿ‌‌ ಮುನಿಸಿಕೊಳ್ಳುತ್ತಿದ್ದಂತೆ ನಿರಾಶ್ರಿತರ ಕೇಂದ್ರಗಳಿಗೆ ಬಂದಿದ್ದಾರೆ. ಇಡುಕ್ಕಿ ಜಿಲ್ಲೆಯಲ್ಲಿ 18 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ.‌ ಇವುಗಳಲ್ಲಿ 1430 ಜನ ಆಶ್ರಯ ಪಡೆದಿದ್ದಾರೆ. ಇದರಲ್ಲಿ ಬರೋಬ್ಬರಿ 11 ಶಿಬಿರಗಳು ಇಡುಕ್ಕಿ‌ಯಲ್ಲೇ ಇವೆ. ಮತ್ತು ಇದರಲ್ಲಿ‌ ಇರುವವರು ಮತ್ತಿದೇ ಗುಡ್ಡಗಾಡಿನ ಜನ.‌

ಇನ್ನು, “ದೇವಿಕೊಳಂ ತಾಲೂಕಿನಲ್ಲಿ 6 ಮತ್ತು ಉಡುಂಬನ್ ಚೋಳದಲ್ಲಿ 1 ಕೇಂದ್ರಗಳನ್ನು ತೆರೆಯಲಾಗಿದೆ‌,” ಎಂಬ ಮಾಹಿತಿ‌‌ ನೀಡುತ್ತಾರೆ ಇಡುಕ್ಕಿಯ ಸಾರ್ವಜನಿಕ ಸಂಪರ್ಕ‌ ಇಲಾಖೆಯ ಅಧಿಕಾರಿ ಸಂತೋಷ್. ಇದರಲ್ಲಿ ಹೆಚ್ಚಿನ ಜನರೆಲ್ಲಾ‌ ಮಳೆ‌ ಕಡಿಮೆಯಾಗುತ್ತಿದ್ದಂತೆ ತಮ್ಮ‌ ತಮ್ಮ ಮನೆಗಳಿಗೆ ವಾಪಾಸಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆ:

ಆ ಕಡೆ ಇಡುಕ್ಕಿ ಈ‌ ಕಡೆ ಚೆರುದೋಣಿ.. ಸೇತುವೆ ಕಾಯುವುದೇ ಎನ್.ಡಿ.ಆರ್.ಎಫ್ ಕೆಲಸ. 
ಆ ಕಡೆ ಇಡುಕ್ಕಿ ಈ‌ ಕಡೆ ಚೆರುದೋಣಿ.. ಸೇತುವೆ ಕಾಯುವುದೇ ಎನ್.ಡಿ.ಆರ್.ಎಫ್ ಕೆಲಸ. 
/ಸಮಾಚಾರ. 

ಈ ಬೆಟ್ಟಗುಡ್ಡಗಳ ಜನರನ್ನು ರಕ್ಷಣೆ ಮಾಡಲು ಜನಸಾಮಾನ್ಯರಾದವರಿಗೆ ಸಾಧ್ಯವೇ ಇಲ್ಲ. ಅಷ್ಟು ಕಡಿದಾದ ಬೆಟ್ಟಗಳು‌ ಇವು.‌ ಈ ಕಾರಣಕ್ಕೆ ಇಡುಕ್ಕಿಗೆ ರಕ್ಷಣಾ ಕಾರ್ಯಚರಣೆಗೆ ಎನ್.ಡಿ.ಆರ್.ಎಫ್ 4 ಅಧಿಕಾರಿಗಳ‌ ನೇತೃತ್ವದಲ್ಲಿ 47 ಜನರ ತಂಡವನ್ನು ಕರೆಸಿಕೊಳ್ಳಲಾಗಿದೆ. ತಮಿಳುನಾಡಿನ ಅರಕ್ಕೋಣಂನಿಂದ ಬಂದಿರುವ ಇವರು ಇಲ್ಲಿ‌ ಬೀಡು ಬಿಟ್ಡಿದ್ದಾರೆ‌. 76 ಸೈನಿಕರೂ ಇಲ್ಲಿಗೆ ಬಂದಿದ್ದಾರೆ. ಆಗಸ್ಟ್ 10ರಂದು ಇಡುಕ್ಕಿಗೆ ಬಂದಿರುವ ಈ ತಂಡಗಳು ಮುನ್ನಾರ್‌ನ 'ಪ್ಲಂ‌ ಜೂಡಿ ರೆಸಾರ್ಟ್'ನಲ್ಲಿ ವಿದೇಶಿಯರು ಸೇರಿದಂತೆ ಸಿಲುಕಿಕೊಂಡಿದ್ದ 57 ಜನರನ್ನು ರಕ್ಷಣೆ ಮಾಡಿದೆ.

ಅದು ಬಿಟ್ಟರೆ ಇವರು ಯಾರಿಗೂ ಹೇಳಿಕೊಳ್ಳುವ ಕೆಲಸಗಳಿಲ್ಲ. “ಸದ್ಯಕ್ಕೆ ನಮಗೆ ಇಲ್ಲಿರಲು‌ ಸೂಚನೆ ಬಂದಿದೆ. ಎಷ್ಟು ದಿನ ಇರಲಿಕ್ಕೆ ಹೇಳುತ್ತಾರೋ ಅಷ್ಟು ದಿನ‌ ಇರುತ್ತೇವೆ. ಯಾವುದೇ ಕೆಲಸವಿಲ್ಲ,” ಎಂದರು ಎನ್.ಡಿ.ಅರ್.ಎಫ್. ಸಿಬ್ಬಂದಿಯೊಬ್ಬರು.

ಇಡುಕ್ಕಿಯನ್ನು‌ ಸಂಪರ್ಕಿಸುವ ಚೆರುತ್ತೋಣಿ ಸೇತುವೆ ಮಳೆಯಿಂದಾಗಿ ಕುಸಿತವಾಗಿದ್ದು ಆ ಸೇತುವೆಯನ್ನು ಅವರು ಕಾಯುತ್ತಾ‌‌ ನಿಂತಿದ್ದರು. ಸದ್ಯಕ್ಕೆ ಇಡುಕ್ಕಿ ಅಕ್ಷರಶಃ ನಡುಗಡ್ಡೆಯಾಗಿದ್ದು, ಸುಲಭದ ದಾರಿಗಳೆಲ್ಲಾ ಬಂದ್ ಆಗಿವೆ. ಚೆರುತ್ತೋಣಿಯಲ್ಲಿ ಸೇತುವೆ ಕುಸಿದಿದ್ದು ಕೂಗಳತೆಯ ದೂರದಲ್ಲಿರುವ ಇಡುಕ್ಕಿ ಕೈಗೆ ಎಟುಕದಾಗಿದೆ.

ಚೆರುದೋಣಿಯ ಕೆಳ ಭಾಗದಲ್ಲಿ‌ ಬರುವ ಈ ಸೇತುವೆಗೆ ಆಗಸ್ಟ್ 8 ರ ಬುಧವಾರ ಒಮ್ಮೆಲೆ‌ ನೀರು ಹರಿದು ಬಂದಿದ್ದರಿಂದ ಸುತ್ತ ಮುತ್ತಲಿನ ಭಾಗಗಳು ಕುಸಿದು ಸೇತುವೆಯ‌ ಸಾಮರ್ಥ್ಯದ ಬಗ್ಗೆಯೇ‌‌‌ ಅನುಮಾನಗಳು ಎದ್ದಿವೆ. ಅದರ ಪರೀಕ್ಷೆ ನಡೆಯುತ್ತಿದೆ. ಒಂದೊಮ್ಮೆ ಸಂಚಾರಕ್ಕೆ ಯೋಗ್ಯ ಎಂದು ಕೇರಳದ ಪಿಡಬ್ಲ್ಯೂ‌ಡಿ‌ ಎಂಜಿನಿಯರ್‌ಗಳು ಹೇಳಿದಲ್ಲಿ ಮಾತ್ರ ಇದರಲ್ಲಿ ಸಂಚಾರ ಸಾಧ್ಯವಾಗಲಿದೆ‌ ಎಂದರು ಸ್ಥಳದಲ್ಲಿದ್ದ ಅಗ್ನಿ ಶಾಮಕದಳದ ಅಧಿಕಾರಿ.

ಈ‌ ಸೇತುವೆಗೆ ಹಾನಿಯಾಗಿರುವುದರ ಜತೆಗೆ ಸುತ್ತ ಮುತ್ತಲಿನ ಅಂಗಡಿ ಮುಂಗಟ್ಟುಗಳಿಗೂ ಹಾನಿಯಾಗಿದೆ. ಆದರೆ ಇದಕ್ಕೆ ಪ್ರಕೃತಿ ಕಾರಣವಲ್ಲ.‌ "ಜನರೇ ನದಿ ಪಾತ್ರದ ಭಾಗಗಳನ್ನು ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದರು.‌ಈಗ ಪ್ರವಾಹಕ್ಕೆ ಕೊಚ್ಚಿ ಹೋಯಿತು ಎಂದು ಬೊಬ್ಬೆ ಹಾಕುತ್ತಿದ್ದಾರೆ,” ಎನ್ನುತ್ತಾರೆ ಇಲ್ಲಿನ‌ ನಿವಾಸಿ ರಾಜೇಂದ್ರ.

ಇಡುಕ್ಕಿ, ಚಿರುಡೋಣಿ ಅಣೆಕಟ್ಟುಗಳು. (ಸಾಂದರ್ಭಿಕ ಚಿತ್ರ)
ಇಡುಕ್ಕಿ, ಚಿರುಡೋಣಿ ಅಣೆಕಟ್ಟುಗಳು. (ಸಾಂದರ್ಭಿಕ ಚಿತ್ರ)
/ಮಲೆಯಾಳಂ ಮನೋರಮಾ. 

ಇಲ್ಲಿಗೆ ಪ್ರವಾಹ ತೀರಾ‌ ಹೊಸದೇನೂ ಅಲ್ಲ. 1973ರಲ್ಲಿ ಚೆರುದೋಣಿ, ಅದರ ಮೇಲ್ಭಾಗದಲ್ಲಿರುವ ಇಡುಕ್ಕಿ‌ ಅಣೆಕಟ್ಟನ್ನು ಇಂದಿರಾ ಗಾಂಧಿ ಉದ್ಘಾಟಿಸಿದ್ದರು. ಆ ನಂತರ ಹಲವು ಸಂದರ್ಭದಲ್ಲಿ‌ ಇದೇ ರೀತಿ‌ ನೀರು ಹರಿದು ಬಂದಿತ್ತು. 1992ರಲ್ಲಿ ಕೊನೆಯ ಬಾರಿಗೆ ಇಡುಕ್ಕಿ ಅಣೆಕಟ್ಟೆಯ ಬಾಗಿಲುಗಳನ್ನು ತೆರೆಯಲಾದಾಗ ಇವತ್ತಿನ ಸ್ಥಿತಿಯಲ್ಲೇ ಪ್ರವಾಹ ಬಂದಿತ್ತು. ಒಂದು ವ್ಯತ್ಯಾಸವೆಂದರೆ, “ಅವತ್ತು ಇಷ್ಟೊಂದು‌ ಮನೆಗಳು ಈ‌ ನದಿ‌ ಪಾತ್ರದಲ್ಲಿ ಇರಲಿಲ್ಲ. ಹಾನಿಯಾಗಲೂ ಕೃಷಿಯೂ ಇರಲಿಲ್ಲ. ಹಾಗಾಗಿ ಪ್ರವಾಹದಿಂದ ಏನೂ ಆಗಿರಲಿಲ್ಲ,” ಎನ್ನುತ್ತಾರೆ ಇಲ್ಲಿನ ಮೀನು ಟೆಂಪೋದ ಚಾಲಕ ಅಲಿಯಾ.

ಇದೇ ಮಾತನ್ನು ಹೇಳುತ್ತಾರೆ ಪಂಚಾಯತ್ ಅಧಿಕಾರಿ ಸಚಿನ್.‌ ಇವೆಲ್ಲಾ ಅರಣ್ಯ ಇಲಾಖೆ ಜಾಗ.‌ ಇದನ್ನು ಸ್ಥಳೀಯರು ಆಕ್ರಮಿಸಿಕೊಂಡಿದ್ದಾರೆ. ಇವೆಲ್ಲಾ ಕಳೆದ 20-30 ವರ್ಷಗಳ ಬೆಳವಣಿಗೆ.‌ ಇವರಿಗೆಲ್ಲಾ ಸ್ಥಳೀಯ ರಾಜಕಾರಣಿಗಳ ಬೆಂಬಲ‌ವಿದ್ದು ಇವರನ್ನು ಒಕ್ಕಲೆಬ್ಬಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

ಕೆಲವರಂತೂ ಲಂಚ ನೀಡಿ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂದು ಅರಣ್ಯ ಪ್ರದೇಶದ ಭೂಮಿಯನ್ನೇ ಪಟ್ಟಾ ಜಮೀನಾಗಿ‌ ಮಾಡಿಕೊಂಡಿದ್ದಾರೆ ಎಂಬ ವಿಚಾರದ ಬಗ್ಗೆ ಅವರು ಗಮನ ಸೆಳೆಯುತ್ತಾರೆ. ಇದೇ‌ ಜನರಲ್ಲಿ ಇವತ್ತು 12 ಕ್ಕೂ ಹೆಚ್ಚು ಜನರು ಸಾವನ್ನಪ್ಪಿಸ್ದಾರೆ.‌ ಇವರಲ್ಲಿ ಹೆಚ್ಚಿನವರ ಸಾವಿಗೆ ಗುಡ್ಡ ಕುಸಿತಗಳೇ ಕಾರಣಗಳಾಗಿವೆ ಎಂಬುದು‌ ಗಮನಾರ್ಹ.

ಮುಗಿಯದ ಗೋಳು:

ಕೇರಳದಾದ್ಯಂತ ಹೆಚ್ವಿನ‌ ಭಾಗಗಳಲ್ಲಿ ಮಳೆ‌ ಕಡಿಮೆಯಾಗಿದ್ದರೂ ಇಡುಕ್ಕಿಯಲ್ಲಿ ಕಡಿಮೆಯಾಗಿಲ್ಲ. ಆದರೆ ಈ ಬಾರಿ ಸ್ವಲ‌ ಹೆಚ್ವೇ ಮಳೆ‌ ಸುರಿದಿದ್ದರಿಂದ ಪ್ರವಾಹ‌ ನಿಯಂತ್ರಕಗಳಾಗಿದ್ದ ಅಣೆಕಟ್ಟುಗಳಲ್ಲಿ‌ ನೀರು‌ ಹಿಡಿದಿಡಲಾಗುತ್ತಿಲ್ಲ. ಸೋಮವಾರದಂದು ಮುಚ್ಚಿದ್ದ ಚೆರುತ್ತೋಣಿಯ ಇನ್ನೆರಡು ಬಾಗಿಲುಗಳು‌‌ ಮಂಗಳವಾರ ಸಂಜೆ ತೆರೆದುಕೊಂಡಿದ್ದು ಐದೂ ಗೇಟುಗಳಿಂದ ನೀರು ಪೆರಿಯಾರ್ ನದಿಗೆ ಹರಿದು ಬರುತ್ತಿದೆ. ಇದರಿಂದ ಇಡುಕ್ಕಿ ಮತ್ತಷ್ಟು ದಿನ ಜನರ ಕೈಗೆ ಎಟುಕದಾಗಿದೆ.

ಇಡುಕ್ಕಿಯ ಮೇಲ್ಭಾಗದಲ್ಲಿ ತಮಿಳುನಾಡಿನಲ್ಲಿರುವ ಮುಲ್ಲಪೆರಿಯಾರ್ ಅಣೆಕಟ್ಟು ಕೂಡ ಗರಿಷ್ಠ ಮಟ್ಟವನ್ನು ತಲುಪುತ್ತಿದ್ದು ಇನ್ನು‌‌ನೀರು ಹಿಡಿದಿಡಲು ಸಾಧ್ಯವಿಲ್ಲ‌‌ ಎಂದು ಅಧಿಕಾರಿಗಳು‌ ಮುನ್ನೆಚ್ಚರಿಕೆ ನೀಡಿದ್ದಾರೆ. ಇದರಿಂದ ಮತ್ತೆ ನದಿ ಪಾತ್ರದ ಜನರನ್ನು‌ ನಿರ್ವಸಿತರ ಕೇಂದ್ರಗಳಿಗೆ ಕಳುಹಿಸುವ ಕೆಲಸಗಳು ಚಾಲನೆ ಪಡೆದುಕೊಂಡಿವೆ.

ಬಿರುಸಾದ ಮಳೆ:

ಎರ್ನಾಕುಲಂನಲ್ಲಿ ಮಂಗಳವಾರ ಸಂಜೆ ಸುರಿದ ಧಾರಕಾರ ಮಳೆ. 
ಎರ್ನಾಕುಲಂನಲ್ಲಿ ಮಂಗಳವಾರ ಸಂಜೆ ಸುರಿದ ಧಾರಕಾರ ಮಳೆ. 
/ಸಮಾಚಾರ. 

ಇಡುಕ್ಕಿಯಲ್ಲಿ ಮಳೆ ಬಿರುಸಾಗಿದ್ದು ಪೆರಿಯಾರ್ ನದಿಗೆ ಸಾಕಷ್ಟು‌ ನೀರು ಹರಿದು‌ ಬರುತ್ತಿದೆ‌. ಇದರ ಜತೆಗೆ ತಣ್ಣಗಾಗಿದ್ದ ಮಳೆ‌ ಎರ್ನಾಕುಲಂ, ಕೊಚ್ಚಿಯಲ್ಲಿ ಮಂಗಳವಾರದಿಂದ ಮತ್ತೆ ಬಿರುಸಾಗಿದೆ.

ಮಂಗಳವಾರ ಸಂಜೆ ಇಲ್ಲಿ ಭಾರೀ‌ ಮಳೆ ಸುರಿದಿದ್ದು, ರಸ್ತೆಗಳೆಲ್ಲಾ‌ ಜಲಾವೃತವಾಗಿ ಸಂಚಾರಕ್ಕೆ ತೊಡಕಾಗಿದ್ದಲ್ಲದೆ ಹಲವು ತಗ್ಗು ಪ್ರದೇಶಗಳಿಗೂ ನೀರು‌ ನುಗ್ಗಿದೆ. ಇದೀಗ ಪೆರಿಯಾರ್ ನದಿ ಮತ್ತೆ ಮೇಲೇರುತ್ತಿದ್ದು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಇಂದು‌ ಮಧ್ಯಾಹ್ನ 3 ಗಂಟೆವರೆಗೆ ಕೊಚ್ಚಿ ವಿಮಾನ‌‌ ನಿಲ್ದಾಣವನ್ನು ಸ್ಥಗಿತಗೊಳಿಸಲಾಗಿದೆ.

ಹೀಗೆ ದಕ್ಷಿಣ ಕೇರಳದ ಇಡುಕ್ಕಿ ಆಸುಪಾಸಿನಲ್ಲಿ‌ ಮತ್ತು ಮಧ್ಯ ಕೇರಳದ ಕೊಚ್ಚಿ-ಎರ್ನಾಕುಲಂನಲ್ಲಿ ಏಕಕಾಲದಲ್ಲಿ ಸುರಿಯುತ್ತಿರುವ ಮಳೆ ದೇವರ ಸ್ವಂತ‌ ನಾಡಿನ ಜನರಿಗೆ ಇಲ್ಲದ ತಲೆನೋವು ತಂದಿದೆ.‌ ಮತ್ತೆ ಈ ವಿಕೋಪಗಳಿಗೆ ಕಾರಣ ಯಾರು ಎಂದು ಕೇಳಿದರೆ- ಸಚಿನ್ ಹೇಳಿದ ಹಾಗೆ- ಇಲ್ಲಿನ ಅಪ್ರಾಮಾಣಿಕ, ಅನೈತಿಕ ಜನ ಮತ್ತು ಅವರನ್ನು ನಿಯಂತ್ರಿಸಲಾಗದ ಸರಕಾರ ಅಷ್ಟೆ.