samachara
www.samachara.com
‘ಕಣ್ಣು ತೆರೆಯಲಿ ಕೆಎಂಎಫ್‌’ ಭಾಗ- 2:  ಕೊಬ್ಬು ಕಳ್ಳರು, ತುಪ್ಪ ಮಾರುವವರು...
GROUND REPORT

‘ಕಣ್ಣು ತೆರೆಯಲಿ ಕೆಎಂಎಫ್‌’ ಭಾಗ- 2: ಕೊಬ್ಬು ಕಳ್ಳರು, ತುಪ್ಪ ಮಾರುವವರು...

ಕೊಬ್ಬಿನಂಶ ಮಿನಿಮಮ್ 200 ಕೆ. ಜಿ.ಯಷ್ಟು ಪ್ರತಿದಿನ ಸಂಗ್ರಹವಾಗುತ್ತದೆ. ಇದಕ್ಕೆ ಇಂದಿನ ಮಾರುಕಟ್ಟೆ ಬೆಲೆ ಏನಿಲ್ಲವೆಂದರೂ 60000 ರೂಪಾಯಿಗಳಾಗುತ್ತವೆ. ಆದರೆ ಇದು ಎಲ್ಲಿಯೂ ಲೆಕ್ಕಕ್ಕೆ ಸಿಗುತ್ತಿಲ್ಲ.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಉತ್ತರಕನ್ನಡ ಜಿಲ್ಲೆಯ ಹೈನುಗಾರಿಕೆಯ ಮೂಲ ಸಮಸ್ಯೆಯನ್ನು ಸರಣಿಯ ಭಾಗ-1 ಬಿಡಿಸಿಟ್ಟಿತ್ತು. ದೂರದ ಧಾರವಾಡದ ಹಾಲು ಒಕ್ಕೂಟದ ಕೆಳಗೆ ಬರುವಂತೆ ಮಾಡಿರುವ ಒಂದು ಆಡಳಿತಾತ್ಮಕ ನಿರ್ಧಾರ ಜಿಲ್ಲೆಯ ರೈತರ ಪ್ರತಿ ಲೀಟರ್ ಹಾಲಿಗೆ ಕನಿಷ್ಟ 10 ರೂಪಾಯಿ ನಷ್ಟು ಉಂಟು ಮಾಡುತ್ತಿದೆ. ಸಮಸ್ಯೆ ಸರಣಿ ಅಷ್ಟಕ್ಕೆ ನಿಲ್ಲುವುದಿಲ್ಲ.

ಜತೆಗೆ, ಹಳ್ಳಿಗಳ ಹಾಲು ಉತ್ಪಾದಕರ ಸಹಕಾರಿ ಸಂಘವು ರೈತರ ಹಾಲಿನ ಗುಣಮಟ್ಟ ಪರೀಕ್ಷಿಸಿ ಒಕ್ಕೂಟದಿಂದ ನಿರ್ದೇಶಿತ ಗುಣಮಟ್ಟವಿದ್ದಲ್ಲಿ ಮಾತ್ರ ಅದನ್ನು ಸಂಗ್ರಹಿಸಿ ಒಕ್ಕೂಟಕ್ಕೆ ಕಳುಹಿಸುತ್ತದೆ. ಆದರೆ ರೈತನಿಗೆ ಕೊಡಬೇಕಾದ ಹಣವನ್ನು ಮಾತ್ರ 3-6 ತಿಂಗಳಿನ ನಂತರವೇ ಕೊಡುತ್ತದೆ. ಈ ಮಧ್ಯೆ ಯಾವುದೋ ಒಂದು ದಿನಾಂಕದಂದು ಹಾಲು ಉತ್ಪಾದಕರ ಸಹಕಾರಿ ಸಂಘವು ಒಕ್ಕೂಟಕ್ಕೆ ಪೂರೈಸಿದ ಹಾಲು ನಿಗಧಿತ ಗುಣಮಟ್ಟವಿಲ್ಲವೆಂದು ಎಷ್ಟೋ ದಿನಗಳ ನಂತರ ಒಕ್ಕೂಟವು ಸಂಘಕ್ಕೆ ತಿಳಿಸಿ ಆ ದಿನಾಂಕದಂದು ಸಂಘದಿಂದ ಪೂರೈಕೆಯಾದ ಯಾವ ಹಾಲಿಗೂ ಪೇಮೆಂಟ್ ನೀಡುವುದಿಲ್ಲ.

ಇದು ಗ್ರಾಮೀಣ ಹಾಲು ಉತ್ಪಾದಕ ಸಂಘವನ್ನು ಅಡ್ಡಕತ್ತರಿಯಲ್ಲಿ ಸಿಗಿಸುತ್ತಿದೆ. ರೈತರಿಂದ ಹಾಲು ತೆಗೆದುಕೊಳ್ಳುವಾಗ ಗುಣಮಟ್ಟ ಪರೀಕ್ಷಿಸಿ ಸಂಗ್ರಹಿಸಿ ಒಕ್ಕೂಟಕ್ಕೆ ಕಳುಹಿಸಲ್ಪಟ್ಟರೂ ಆ ಹಾಲು ಒಕ್ಕೂಟದಿಂದ ರಿಜೆಕ್ಟ್ ಆಗಿ ಪೇಮೆಂಟ್ ಬರದಿದ್ದರೆ, ರೈತನಿಗೆ ಯಾರು ಹಣವನ್ನು ನೀಡಬೇಕು? ರೈತನಿಗೆ ಏನು ಉತ್ತರ ನೀಡಬೇಕೆಂಬುದೇ ತಿಳಿಯುವುದಿಲ್ಲ ಎನ್ನುತ್ತಾರೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿಯೋರ್ವರು. ಇಂಥ ಸಂದರ್ಭದಲ್ಲಿ ರೈತನ ಹೊಟ್ಟೆಮೇಲೆಯೇ ತಣ್ಣೀರು ಬಟ್ಟೆಯಿಟ್ಟು ಎಲ್ಲ ಮೌನವಾಗುತ್ತಾರೆ.

ಈ ರೀತಿ ರಿಜೆಕ್ಟ್ ಮಾಡಲ್ಪಟ್ಟ ಹಾಲನ್ನು ವಾಪಸ್ ಕಳುಹಿಸಲಾಗುವುದಿಲ್ಲ. ಬದಲಿಗೆ ಎಲ್ಲ ಹಾಲಿನ ಜೊತೆ ಇದನ್ನೂ ಸೇರಿಸಿಯೇ ಒಕ್ಕೂಟದಿಂದ ಬಿಕರಿ ಮಾಡಲ್ಪಟ್ಟಿರುತ್ತದೆ. ಒಕ್ಕೂಟದ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಿಂದ ಪ್ರತಿ ದಿನ ನೂರಾರು ಲೀಟರ್ ಹಾಲು ಈ ರೀತಿ ಬಿಕರಿ ಮಾಡಲ್ಪಡುತ್ತದೆ. ಇದರಿಂದ ಬಂದ ಹಣ ಎಲ್ಲಿ ಹೋಗುತ್ತದೆ? ಇದರ ಲೆಕ್ಕ ಒಕ್ಕೂಟದ ವಾರ್ಷಿಕ ಅಢಾವೆಯಲ್ಲೂ ಕಾಣುವುದಿಲ್ಲ. ವಾರ್ಷಿಕ ಮೊತ್ತ ಹಲವು ಲಕ್ಷವಿರಬಹುದು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಮಾಜಿ ನಿರ್ದೇಶಕರೊಬ್ಬರು.

ಕೊಬ್ಬು ಕಳ್ಳರಿದ್ದಾರೆ:

ಉತ್ತರಕನ್ನಡ ಜಿಲ್ಲೆಯ ಕರಾವಳಿ ಮತ್ತು ಘಟ್ಟದ ಮೇಲಿನ ಕೆಲವು ತಾಲೂಕುಗಳ ಗ್ರಾಮೀಣ ಭಾಗದ ಹಾಲು ಉತ್ಪಾದಕ ಸಹಕಾರಿ ಸಂಘಗಳಿಂದ ಸಂಗ್ರಹಿಸಿದ ಹಾಲಿನ ಕ್ಯಾನ್ ಶಿರಸಿ ತಾಲೂಕಿನ ಹನುಮಂತಿಯಲ್ಲಿ ಇರುವ ಒಕ್ಕೂಟದ ಚಿಲ್ಲಿಂಗ್ ಪ್ಲಾಂಟ್‌ಗೆ ಬರುತ್ತದೆ. ಮುಂಜಾನೆಯೇ ಹಿಂಡಲ್ಪಟ್ಟ ಹಾಲು ಹಲವಾರು ಹಂತದಲ್ಲಿ ಕುಲುಕುತ್ತಾ ಚಿಲ್ಲಿಂಗ್ ಪ್ಲಾಂಟ್ ಗೆ ತಂದಾಗ ಕ್ಯಾನ್ ಮೇಲ್ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.

ಪ್ರತಿದಿನ ಸುಮಾರು 45000ಲೀಟರ್ ಹಾಲನ್ನು ಚಿಲ್ಲಿಂಗ್ ಪ್ಲಾಂಟ್ಗೆ ತರುವಾಗ ಸಂಗ್ರಹವಾಗುವ ಕೊಬ್ಬಿನ ಪ್ರಮಾಣ 12-15 ಕೆ. ಜಿ.. ಇದು ಫಿಲ್ಟ್ರೇಶನ್ ಪ್ರಾಸೆಸ್‌ನಲ್ಲಿ ಹಾಲಿನ ಜೊತೆ ಮಿಶ್ರಣವಾಗದೇ ಫಿಲ್ಟರ್ ಮೇಲ್ಭಾಗದಲ್ಲಿ ಶೇಖರಣೆಗೊಳ್ಳುತ್ತದೆ. ಇದಕ್ಕೆ ಮಾರುಕಟ್ಟೆ ಬೆಲೆ ಆಯಾ ಕಾಲದ ಬೇಡಿಕೆಗೆ ತಕ್ಕಂತೆ ಕೆ. ಜಿ. ಗೆ 150-300ರೂಪಾಯಿಗಳಿರುತ್ತವೆ. ಆದರೆ ಕೊಬ್ಬಿಗಾಗಿ ಪ್ರತ್ಯೇಕ ಬೆಲೆ ಯಾರಿಗೂ ಸಿಗುವಿದಿಲ್ಲ. ಪ್ರತಿದಿನ ಈ ಕೊಬ್ಬಿನ ಆದಾಯ ದೋಚುವವರು ಯಾರು? ಏನಿಲ್ಲವೆಂದರೂ ರೂ.2000-4500 ರಷ್ಟು ಹಣ ಪ್ರತಿದಿನ ಕಾಣದ ಕೈಗಳಿಗೆ ಬದಲಾಗುತ್ತದೆ? ಹನುಮಂತಿ ಆಜುಬಾಜು ಹಸು ಸಾಕಣೆ ಮಾಡದವರೂ ತುಪ್ಪ ಮಾರುತ್ತಾರಂತೆ. ಅವರಿಗೂ, ಈ ಕಾಣೆಯಾದ ಕೊಬ್ಬಿಗೂ ಹತ್ತಿರದ ಸಂಬಂಧ ಇದೆ ಎಂಬುದು ಸ್ಥಳೀಯರು ನೀಡುವ ಮಾಹಿತಿ.

ಧಾರವಾಡದ ಹಾಲು ಒಕ್ಕೂಟ. 
ಧಾರವಾಡದ ಹಾಲು ಒಕ್ಕೂಟ. 

ಒಕ್ಕೂಟದಲ್ಲೂ ಕೊಬ್ಬು ಅವ್ಯವಹಾರ:

ಚಿಲ್ಲಿಂಗ್ ಪ್ಲಾಂಟ್ ಮತ್ತು ಬಲ್ಕ್ ಮಿಲ್ಕ ಕೂಲರ್‌ಗಳಿಂದ ಒಕ್ಕೂಟಕ್ಕೆ ಕಳುಹಿಸಲ್ಪಡುವ ಹಾಲಿನ ಕೊಬ್ಬಿನಲ್ಲಿ ಸರಾಸರಿ ಕೊಬ್ಬು ನಷ್ಟವೆಂದು 0.5% ಲೆಸ್ ಮಾಡುತ್ತಾರೆ. ರೈತನಿಗೆ ಅವನ ಹಾಲಿನಲ್ಲಿ 3.5% ಕೊಬ್ಬಿದೆ ಎಂದೇ ತೋರಿಸಲಾಗುತ್ತದೆ. ಆದರೆ ರೈತನ ಹಾಲಿನಲ್ಲಿ 4%ಕಿಂತ ಹೆಚ್ಚು ಕೊಬ್ಬು ಇರುತ್ತದೆ. ಪ್ಯಾಕಿಂಗ್ ಸಮಯದಲ್ಲಿ 3.5% ಕೊಬ್ಬನ್ನೇ ಉಳಿಸಲಾಗುತ್ತದೆ. ಆದರೆ 0.5% ನಷ್ಟವಾಗದೇ ಹಾಗೇ ಉಳಿದಿರುತ್ತೆ. ಹಾಗೆ ಉತ್ತರಕನ್ನಡದಿಂದ ಹೋಗುವ ಕನಿಷ್ಟ 40000ಲೀಟರ್ ಹಾಲಿನಿಂದ ಹೊರತೆಗೆದ ಕೊಬ್ಬಿನಂಶ ಮಿನಿಮಮ್ 200 ಕೆ. ಜಿ.ಯಷ್ಟು ಪ್ರತಿದಿನ ಸಂಗ್ರಹವಾಗುತ್ತದೆ. ಇದಕ್ಕೆ ಇಂದಿನ ಮಾರುಕಟ್ಟೆ ಬೆಲೆ ಏನಿಲ್ಲವೆಂದರೂ 60000 ರೂಪಾಯಿಗಳಾಗುತ್ತವೆ. ಆದರೆ ಇದು ಎಲ್ಲಿಯೂ ಲೆಕ್ಕಕ್ಕೆ ಸಿಗುತ್ತಿಲ್ಲ. ಈ ಅವ್ಯವಹಾರದ ವಾರ್ಷಿಕ ಮೊತ್ತ ನೀವೇ ಅಂದಾಜು ಮಾಡಿ ನೋಡಿ.

ಐದು ರೂಪಾಯಿ ಕಥೆ:

ಕೊಬ್ಬು ಕಳವಿನ ಕತೆ ಹೀಗಾದರೆ, ರೈತರ ಹಾಲನ್ನು ಅಳೆಯುವ ಮಾಪನದ ವಿಚಾರದಲ್ಲೂ ಒಂದಷ್ಟು ಸಂಕೀರ್ಣ ಸಮಸ್ಯೆಗಳಿವೆ. ರೈತರಿಂದ ಹಾಲು ಉತ್ಪಾದಕ ಸಂಘವು ಲೀಟರ್ ಲೆಕ್ಕದಲ್ಲಿ ಹಾಲನ್ನು ಖರೀದಿಸುತ್ತದೆ. ಆದರೆ ಒಕ್ಕೂಟವು ಸಂಘದಿಂದ ಖರೀದಿಸುವಾಗ ಕೆ.ಜಿ. ಲೆಕ್ಕದಲ್ಲಿ ಖರೀದಿಸುತ್ತದೆ. ಸರಕಾರದಿಂದ ನೀಡಲಾಗುವ ಪ್ರೋತ್ಸಾಹ ಧನ/ಸಹಾಯಧನ ಲೀಟರ್ ಆಧಾರದಲ್ಲಿ ಕೊಡುತ್ತದೋ ಅಥವಾ ಕೆ.ಜಿ. ಆಧಾರದಲ್ಲಿ ಕೊಡುತ್ತದೋ ಇಂದಿನವರೆಗೂ ಯಾರಿಗೂ ತಿಳಿದಿಲ್ಲ. ಏಕೆಂದರೆ, ಸರಕಾರ ಒಂದು ಲೀಟರಿಗೆ ರೂ.5 ಪ್ರೋತ್ಸಾಹ ಧನ ಕೊಡುತ್ತೇನೆಂದು ಹೇಳಿದರೂ, ಉತ್ಪಾದಕರ ಸಂಘದಿಂದ ಒಕ್ಕೂಟ ಖರೀದಿ ಮಾಡುವುದು ಕೆ.ಜಿ.ಯಲ್ಲಾದ್ದರಿಂದ ಲೆಕ್ಕಾಚಾರವೇ ಬಗೆಹರಿಯುವುದಿಲ್ಲವೆನ್ನುತ್ತಾರೆ ಓರ್ವ ಸಂಘದ ಕಾರ್ಯದರ್ಶಿ.

1ಲೀ. ಹಾಲನ್ನು ತೂಗಿದಾಗ 1.03 ಕೆ. ಜಿ. ಆಗುತ್ತದೆ. ಹಾಲು ಒಯ್ಯುವ ಕ್ಯಾನ್ 40ಲೀಟರ್‌ನದ್ದು. ಕೆ. ಜಿ ಲೆಕ್ಕದಲ್ಲಿ ಒಂದು ಕ್ಯಾನ್‌ 41.2 ಕೆ.ಜಿ. ಆಗುತ್ತದೆ. ಒಟ್ಟಾರೆ 5000 ಕ್ಯಾನ್ ಹಾಲು ಪ್ರತಿದಿನ ಸಂಗ್ರಹವಾಗುತ್ತಿದೆ. ಸರಕಾರ ಪ್ರೋತ್ಸಾಹಧನ ನೀಡುವಾಗ ಒಕ್ಕೂಟವು ತಾನು ಸಂಗ್ರಹಿಸುವ ಒಟ್ಟೂ ಕೆ.ಜಿ.ಯನ್ನೇ ಲೀಟರ್ ಎಂದು ಹೇಳುತ್ತದೆ. 5000 ಕ್ಯಾನ್‌ಗಳಿಂದ ಸುಮಾರು 6000ಲೀ.. ಹೆಚ್ಚುವರಿ ಲೆಕ್ಕವನ್ನು ಒಕ್ಕೂಟ ಸರಕಾರಕ್ಕೆ ತೋರಿಸುತ್ತದೆ. ಇದರಿಂದ ಸರಕಾರದಿಂದ ಪಡೆದ ಹಣವನ್ನು ರೈತರಿಗೆ ಪ್ರತಿ ಲೀ.ಗೆ ರೂ.5 ಸಂದಾಯ ಮಾಡಿದ ನಂತರವೂ ಹೆಚ್ಚುವರಿ ಲೆಕ್ಕ ತೋರಿಸಲ್ಪಟ್ಟ 6000ಲೀಟರ್ ಬಾಬ್ತು ರೂ.30000 ಒಕ್ಕೂಟದಲ್ಲಿ ಪ್ರತಿ ದಿನ ಉಳಿಯುತ್ತಿದೆ ಎಂಬುದು ಈ ಅವ್ಯವಹಾರ ಬಲ್ಲವರು ನೀಡುವ ಅಂದಾಜು. ಈ ಹಣ ಎಲ್ಲಿ ಹೋಗುತ್ತದೆ? ಉತ್ತರ ಹುಡುಕಬೇಕಿದೆ.

ಸಹಕಾರಿ ಸಂಘದ ಶೇರು:

ತಮ್ಮ ಶೇರು ಒಕ್ಕೂಟದಲ್ಲಿ ಎಷ್ಟಿದೆ ಎಂಬುದು ಯಾವ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೂ ತಿಳಿದಿಲ್ಲ. ಸಂಘದಿಂದ ಒಕ್ಕೂಟಕ್ಕೆ ಪ್ರತಿದಿನ ಕಳುಹಿಸಲಾಗುವ ಪ್ರತಿ ಕೆ. ಜಿ. ಹಾಲಿಗೆ 10 ಪೈಸೆಯನ್ನು ಒಕ್ಕೂಟವು ಶೇರು ಹಣವೆಂದು ಮುರಿದುಕೊಳ್ಳುತ್ತದೆ. ಇದು ಉತ್ತರಕನ್ನಡ ಜಿಲ್ಲೆಯದೊಂದೇ ವಾರ್ಷಿಕ ಸುಮಾರು 16ಲಕ್ಷ ರೂಪಾಯಿ ಹಣವನ್ನು ಒಕ್ಕೂಟಕ್ಕೆ ಶೇರಿನ ಹೆಸರಿನಲ್ಲಿ ಹೂಡಿಕೆ ಮಾಡುತ್ತದೆ. ವಾರ್ಷಿಕ ವರದಿಯಲ್ಲಿ, ಒಕ್ಕೂಟವು ಕೊಡುವ ದೃಢೀಕರಣ ಪತ್ರದಲ್ಲಿ ಸಂಘದ ಒಟ್ಟೂ ಶೇರಿನ ಮೊತ್ತವನ್ನು ಪ್ರಕಟಿಸುವುದಿಲ್ಲ. ಆದರೆ ಡಿವಿಡೆಂಡ್ ಕೊಟ್ಟ ಕುರಿತು ಉಲ್ಲೇಖಿಸುತ್ತದೆ. ಎಷ್ಟು ಶೇರಿಗೆ ಎಷ್ಟು ಡಿವಿಡೆಂಡ್ ಎಂಬ ಬಗ್ಗೆ ಒಕ್ಕೂಟದಿಂದ ಯಾವತ್ತೂ ಮಾಹಿತಿ ನೀಡಲಾಗಿಲ್ಲ.

ಉದಾಹರಣೆಗೆ ಒಕ್ಕೂಟದ ಪ್ರತಿಶೇರಿನ ಮುಖಬೆಲೆ ರೂ.1000 ಇದೆ. ಸಂಘದಿಂದ 10 ಪೈಸೆಯಂತೆ ಮುರಿದುಕೊಂಡ ಹಣ 4800ರೂಪಾಯಿಗಳಾದಾಗ ಸಂಘವು 4 ಶೇರನ್ನು ಮಾತ್ರ ಪಡೆಯುತ್ತದೆ. ಉಳಿದ 800 ರೂಪಾಯಿ ಒಕ್ಕೂಟದಲ್ಲೇ ಉಳಿಯುವ ಬಗ್ಗೆ ಉತ್ಪಾದಕ ಸಂಘಕ್ಕೆ ಮಾಹಿತಿ ನೀಡಲಾಗುವುದಿಲ್ಲ. ಒಕ್ಕೂಟದಲ್ಲಿ ತಮ್ಮ ಶೇರಿನ ಮೊತ್ತ ಎಷ್ಟಾಗಿದೆ ಎಂಬುದು ಗ್ರಾಮೀಣ ಹಾಲು ಉತ್ಪಾದಕ ಸಂಘಗಳಿಗೆ ತಿಳಿದಿಲ್ಲ. ಕೇಳಿದರೆ ಉತ್ತರವೂ ದೊರೆಯುತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಪಡೆಯಲು ಒಂದಷ್ಟು ವ್ಯರ್ಥ ಪ್ರಯತ್ನಗಳಷ್ಟೆ ನಡೆದಿವೆ.

ಮನೆಯಂಗಳದಲ್ಲೇ ಎಡವಿತು:

ದೊಡ್ಲ ಉತ್ಪನ್ನಗಳು. 
ದೊಡ್ಲ ಉತ್ಪನ್ನಗಳು. 

ಉತ್ತರ ಕರ್ನಾಟಕದ ಪ್ರಸಿದ್ಧ ಅವಳಿ ನಗರ ಎಂದೇ ಖ್ಯಾತಿಯ ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿ ಹಾಲಿನ ಬೇಡಿಕೆ ಇದೆ. ಆದರೆ ಅಲ್ಲಿನ ಗ್ರಾಹಕರ ಇಚ್ಛೆಗನುಗುಣವಾಗಿ ಒಕ್ಕೂಟದಿಂದ ಹಾಲು ಪೂರೈಕೆಯಾಗುತ್ತಿಲ್ಲ. ಇದರಿಂದ ಕೊಲ್ಲಾಪುರದ ದೊಡ್ಳ, ಸಂಕೇಶ್ವರರ ಆದಿತ್ಯ, ಯಲ್ಲಾಪುರ ಕಿರವತ್ತಿಯ ಕೃಷ್ಣ ಡೇರಿಯಂಥ ಖಾಸಗಿ ಡೇರಿಗಳು ಮಾರುಕಟ್ಟೆ ಹಿಡಿತ ಸಾಧಿಸುತ್ತಿವೆ.

ಖಾಸಗಿ ಡೇರಿಗಳು ಮಾರಲು ಬೇಕಾದ ಹಾಲನ್ನು ಬೇರೆ ಒಕ್ಕೂಟಗಳಿಂದ ಖರೀದಿಸಿ ಅವಳಿ ನಗರವಲ್ಲದೇ ಉತ್ತರಕನ್ನಡ ಜಿಲ್ಲೆಯಲ್ಲೂ ಮಾರಾಟ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಸರಿಯಾದ ಪ್ರಮಾಣದಲ್ಲಿ ಸಪ್ಲೈ ಇಲ್ಲದುದು ಧಾರವಾಡ ಒಕ್ಕೂಟದ ‘ನಂದಿನಿ ಬ್ರಾಂಡ್’ ಕುಸಿತಕ್ಕೆ ಪ್ರಮುಖ ಕಾರಣ. ಇಂದಿಗೂ ಜನರು ಮೊದಲು ನಂದಿನಿ ಬ್ರಾಂಡ್ ಕೇಳುತ್ತಾರೆ. ಸಪ್ಲೈ ಸಿಗದಾಗ ಬೇರೆ ಹಾಲನ್ನು ಅವಲಂಭಿಸುತ್ತಾರೆ. ಆದರೆ ಮಾರುಕಟ್ಟೆ ಅಭಿವೃದ್ಧಿಗೆ ಒಕ್ಕೂಟದ್ದು ತೋರಿಕೆಯ ಪ್ರಯತ್ನ ಮಾತ್ರವೇ ಕಾಣಿಸುತ್ತದೆ. ಒಕ್ಕೂಟದ ಮಾರಾಟ ವಿಭಾಗದ ಅಧಿಕಾರಿಗಳು ಖಾಸಗಿ ಡೇರಿಗಳ ಮಾರಾಟ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಹಾಲು ಉತ್ಪಾದಕರ ಆರೋಪ.

ಗರ್ಭಧಾರಣೆಯ ಸಮಸ್ಯೆಗಳು:

ಹೀಗೆ, ಹಾಲು ಮಾರಾಟ, ಕೊಬ್ಬಿನ ಕಳ್ಳತನ, ಶೇರಿನಲ್ಲೂ ಮೋಸ, ಮಾರುಕಟ್ಟೆ ಕುಸಿತದ ಕತೆಗಳಾದರೆ, ಜಾನುವಾರುಗಳ ಗರ್ಭಧಾರಣೆ ವಿಚಾರದಲ್ಲೂ ಉತ್ತರಕನ್ನಡದ ಹೈನೋದ್ಯಮಿಗಳು ಮೋಸಕ್ಕೆ ಗುರಿಯಾಗುತ್ತಿರುವುದು ಮತ್ತೊಂದು ಕತೆ.

ಸಾಂದರ್ಭಿಕ ಚಿತ್ರ. 
ಸಾಂದರ್ಭಿಕ ಚಿತ್ರ. 
/ಕೆಎಂಎಫ್‌ ವೆಬ್‌ಸೈಟ್. 

ಕೃತಕ ಗರ್ಭಧಾರಣೆಗೆ ಬಳಸುವ ವೀರ್ಯಾಣು ಪಡೆಯಲಾದ ಹೋರಿಯ ವಂಶ ವಿವರ ಒಕ್ಕೂಟ ಕೊಡುತ್ತಿಲ್ಲ. ವೀರ್ಯಾಣು ಪಡೆಯಲಾದ ಹೋರಿಯ ತಾಯಿ ಹಸು ನೀಡಿದ ಹಾಲಿನ ಪ್ರಮಾಣ ಮುಂತಾದ ತಾಂತ್ರಿಕ ವಿವರಣೆಗಳನ್ನು ಕೊಡುತ್ತಿಲ್ಲ. ಆದ್ದರಿಂದ ಉತ್ತರಕನ್ನಡ ಜಿಲ್ಲೆಗೆ ಒಕ್ಕೂಟದ ಮೂಲಕ ಪೂರೈಕೆಯಾಗುತ್ತಿರುವ ವೀರ್ಯಾಣು ಯಾವ ಗುಣಮಟ್ಟದ್ದೆಂದು ಗೊತ್ತಿಲ್ಲ.

ಹೊತ್ತಿಗೆ 5 ಲೀ. ಹಾಲು ಹಿಂಡುವ ತಾಯಿ ಹಸುವಿನ ಕರು ಹೋರಿಯಾಗಿದ್ದರೆ, ಅದರ ವೀರ್ಯಾಣು ಬಳಸಿ ಮಾಡಲಾದ ಕೃತಕ ಗರ್ಭಧಾರಣೆಯಿಂದ ಹುಟ್ಟಿದ ಕರು ಹಸುವಾದಾಗ ಹೆಚ್ಚು ಕಮ್ಮಿ 5ಲೀ. ಮಾತ್ರ ಕೊಡುತ್ತದೆ. ಆದರೆ ವೀರ್ಯಾಣು ಸರಬರಾಜು ಮಾಡುವ ಅಧಿಕೃತ ಸಂಸ್ಥೆಯಲ್ಲಿ ಉತ್ತಮ ಹಾಲು ಹಿಂಡುವ ಅಂದರೆ ಹೊತ್ತಿಗೆ 20 ಲೀ. ಹಿಂಡುವ ತಳಿಗಳ ವೀರ್ಯಾಣುಗಳೂ ಲಭ್ಯವಿದ್ದರೂ, ಅವು ರಾಜಕೀಯ ಇಚ್ಚಾಶಕ್ತಿ ಅಧಿಕವಾಗಿರುವ ಪ್ರದೇಶಗಳಿಗೆ ಸೀಮಿತವಾಗಿವೆ. ಧಾರವಾಡ ಹಾಲೂ ಒಕ್ಕೂಟ ಸರಿಯಾಗಿ ಬೇಡಿಕೆಯ ಇಂಡೆಂಟ್ ಕಳುಹಿಸುತ್ತಿಲ್ಲ ಎಂಬ ಆರೋಪವೂ ಇದೆ.

ಈ ಎಲ್ಲ ರೈತ ಶೋಷಣೆಗಳನ್ನು ಸಹಿಸಲಾಗದೇ, ಸರಿಪಡಿಸಲೂ ಆಗದೇ ಉತ್ತರಕನ್ನಡದ ಕೆಲವು ರೈತರು ಮತ್ತು ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಅನುಭವ ಪಡೆದ ನಿರ್ದೇಶಕರು ಒಂದೆಡೆ ಸೇರಿ ಚಿಂತನೆ ನಡೆಸಿದ್ದಾರೆ ಕೂಡ. ಪರಿಣಾಮವಾಗಿ ಉತ್ತರಕನ್ನಡ ಜಿಲ್ಲೆಯನ್ನು ದಕ್ಷಿಣಕನ್ನಡ ಹಾಲು ಒಕ್ಕೂಟಕ್ಕೆ ಸೇರ್ಪಡೆಗೊಳಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭವಾಯಿತು. ಮುಂದೆ ಇದು ಹೋರಾಟದ ರೂಪ ಪಡೆಯಿತು. ದಶಕಗಳಿಗೂ ಹೆಚ್ಚುಕಾಲ ನಡೆದ ಹಾಲು ಉತ್ಪಾದಕರ ಹೋರಾಟ ಇನ್ನೇನು ರೈತಪರ ಫಲಿತಾಂಶ ಪಡೆಯುತ್ತೆ ಅನ್ನುವಾಗಲೇ ಅದನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು. ಅದು ಹೈನೋದ್ಯಮದ ಅವಸಾನದ ಹಾದಿ ಹಿಡಿಯುವ ಮುನ್ನ ನಡೆದ ಕೊನೆಯ ಪ್ರಯತ್ನದ ವಿವರಗಳು.

(ನಾಳೆಗೆ)