samachara
www.samachara.com
ದೇವರ ಸ್ವಂತನಾಡಲ್ಲೀಗ ಮಹಾಮಳೆ ತಂದ ಕೊಳೆ ತೊಳೆಯುವ ಧಾವಂತ
GROUND REPORT

ದೇವರ ಸ್ವಂತನಾಡಲ್ಲೀಗ ಮಹಾಮಳೆ ತಂದ ಕೊಳೆ ತೊಳೆಯುವ ಧಾವಂತ

ನೆರೆ ತಂದ ಪ್ರಕೃತಿ ತನ್ನ ಮುನಿಸಿನಿಂದ ಹೊರ ಬರುತ್ತಿದ್ದರೆ ದೇವರ ಸ್ವಂತ ನಾಡಿನ ಜನ ಕೊಚ್ಚಿ, ಎರ್ನಾಕುಲಂನಲ್ಲಿ ತಮ್ಮ ಸಹಜ ಬದುಕಿಗೆ ಹೊರಳಿಕೊಳ್ಳುತ್ತಿದ್ದಾರೆ.‌

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕೇರಳದ ಅತೀ ದೊಡ್ಡ ನಗರ ಕೊಚ್ಚಿ ಇದೇ ಮೊದಲ ಬಾರಿಗೆ ಮಳೆ‌ ಮತ್ತು ಪ್ರವಾಹದ ಕಾರಣಕ್ಕೆ ಸುದ್ದಿಯಾಗಿತ್ತು. ಕೊಚ್ಚಿಯಲ್ಲಿ ಇಂಥಹದ್ದೊಂದು ಪ್ರವಾಹ ಯಾಕೆ ಬಂತು ಎಂದು ಕಾರಣ ಹುಡುಕುತ್ತಾ ಹೊರಟರೆ ಅಲ್ಲಿ ಪ್ರಖ್ಯಾತ ಪೆರಿಯಾರ್ ನದಿಯ ಹೆಸರು ಕೇಳಿಸುತ್ತದೆ.

ಪೆರಿಯಾರ್ ನದಿ ಉಕ್ಕಿ ಹರಿದ ಉದಾಹರಣೆ ಕಡಿಮೆ.‌ ಅದಕ್ಕೆ‌‌ ನದಿ ತುಂಬಾ ಕಟ್ಟಿದ 6 ಅಣೆಕಟ್ಟುಗಳ ಕೊಡುಗೆಯೂ ಇದೆ. ಆದರೆ ಈ ಬಾರಿ ಪೆರಿಯಾರ್ ಉಕ್ಕಿ ಹರಿಯಿತು. ಪರಿಣಾಮ ನದಿಯಿಂದಾಗಿ ಮತ್ತು ಮಳೆಯಿಂದಾಗಿ 75ಕ್ಕೂ ಹೆಚ್ಚು ನಿರಾಶ್ರಿತರ ಶಿಬಿರಗಳನ್ನು ತೆರೆಯಬೇಕಾಯಿತು.

ಪೆರಿಯಾರ್ ನದಿ ಉಕ್ಕಿ‌ ಹರಿದಿದ್ದೇಕೆ ಎಂದರೆ ಅಲ್ಲೂ ಮತ್ತೊಂದಿಷ್ಟು ಕಾರಣಗಳು ಸಿಗುತ್ತವೆ. ನದಿ ಹರಿಯುವ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆ ನದಿಗೆ ಸಾಕಷ್ಟು ನೀರನ್ನೂ, ನದಿ ಪಾತ್ರಗಳಲ್ಲಿ ಪ್ರವಾಹವನ್ನೂ ತಂದೊಡ್ಡಿತ್ತು. ಇದರ ಜತೆಗೆ ಅಣೆಕಟ್ಟುಗಳು ಈ‌ಬಾರಿ ಕೈಕೊಟ್ಟಿದ್ದು ಪ್ರವಾಹವನ್ನು ಹೆಚ್ವಿಸಿತ್ತು.

ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಇಡುಕ್ಕಿಯ ಬೆಟ್ಟಗಳ ಸಾಲಿನ ಮಧ್ಯದಿಂದ ಹರಿಯುತ್ತಾ ಚೆರಾಯಿ ಸಮೀಪ ಪೆರಿಯಾರ್ ನದಿ ಸಮುದ್ರ ಸೇರುವವರೆಗೆ‌ ನದಿಗೆ ಕಟ್ಟಿದ 6 ಅಣೆಕಟ್ಟುಗಳೇ ಅದರ ಪಾಲಿಗೆ ಪ್ರವಾಹ‌ ನಿಯಂತ್ರಕಗಳು. ಇವುಗಳಲ್ಲಿ ಮೂರು ಅಣೆಕಟ್ಟುಗಳ ಬಾಗಿಲನ್ನು ಈ ಬಾರಿ ತೆರೆಯಲಾಗಿದೆ‌; ಅದೂ ಏಕ ಕಾಲಕ್ಕೆ. ಹೀಗೆ ಒಟ್ಟು ಮೂರು ಅಣೆಕಟ್ಟುಗಳಿಂದ 12 ಬಾಗಿಲುಗಳನ್ನು ತೆರೆಯಲಾಗಿತ್ತು. ಇದರಿಂದ‌‌ ನದಿ ಹರಿಯುವಿಕೆಯ ಗರಿಷ್ಠ ಮಟ್ಟವನ್ನು‌‌ ಮೀರಿ‌ ಈ‌ ಬಾರಿ 2 ಮೀಟರ್ ಹೆಚ್ಚು ಎತ್ತರದಲ್ಲಿ‌ ಹರಿದಿದೆ ಎನ್ನುತ್ತಾರೆ ಮಾತೃಭೂಮಿ ಪತ್ರಿಕೆಯ ಹಿರಿಯ ವರದಿಗಾರ ಸಿರಾಜ್.

ಕೇರಳದಲ್ಲಿ ತುಂಬಿ ಹರಿಯುತ್ತಿರುವ ನದಿ ಪಾತ್ರ
ಕೇರಳದಲ್ಲಿ ತುಂಬಿ ಹರಿಯುತ್ತಿರುವ ನದಿ ಪಾತ್ರ
/ ಸಮಾಚಾರ

ಮೂರು ಅಣೆಕಟ್ಟುಗಳು:
ಈ ಮೂರು ಅಣೆಕಟ್ಟುಗಳೂ ಈ ಹಿಂದೆ ಏಕ ಕಾಲಕ್ಕೆ ಭರ್ತಿಯಾದ ಉದಾಹರಣೆಗಳಿಲ್ಲ. ಬರೋಬ್ಬರಿ 26 ವರ್ಷದ ಕೆಳಗೆ 1992ರಲ್ಲಿ ಇಡುಕ್ಕಿ ಡ್ಯಾಂ ಭರ್ತಿಯಾಗಿತ್ತು. ಈ ಬಾರಿ ಕೇರಳದ ಎಲ್ಲಾ ಭಾಗಗಳಲ್ಲೂ ಮಳೆಯಾಗಿದ್ದರಿಂದ ಒಮ್ಮೆಗೆ ಅಣೆಕಟ್ಟುಗಳು ಭರ್ತಿಯಾದವು. ಇದರಿಂದ ಅನಿವಾರ್ಯವಾಗಿ ಸರಕಾರ ಡ್ಯಾಂ ಗೇಟು ತೆರೆದು ನೀರು ಬಿಡಲೇಬೇಕಾಯಿತು.

ಇಂದಿಗೂ ಇದಮಲಯಾರ್ ಅಣೆಕಟ್ಟೆಯ 4, ಇಡುಕ್ಕಿಯ 2 ಮತ್ತು ಚೆರುತ್ತೋನಿಯ 3 ಬಾಗಿಲುಗಳು‌ ತೆರೆದೇ ಇವೆ. ಇದರಿಂದ ಇಂದಿಗೂ ನದಿ ತುಂಬಿ ಹರಿಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಇಲ್ಲಿನ ಅಲುವದಲ್ಲಿರುವ ಮಣಪ್ಪುರಂನ ಶತಮಾನಗಳ ಇತಿಹಾಸ ಇರುವ ಶಿವ ದೇವಾಲಯ ಇನ್ನೂ‌ ನೀರನಲ್ಲೇ‌ ಮುಳುಗಿರುವುದನ್ನು ಕಾಣಬಹುದು.

1962, 1992 ಮತ್ತು 2013ನಲ್ಲಿ ಮಾತ್ರ ನದಿಯಲ್ಲಿ ಈ ರೀತಿ‌‌ ನೀರು ಬಂದು ದೇವಾಲಯ ಮುಳುಗಿತ್ತು ಎನ್ನುತ್ತಾರೆ ಇಲ್ಲಿನ ಹಿರಿಯರೊಬ್ಬರು. ಹಾಗೆಂದು ಈ ರೀತಿ ಎರಡು ವಾರಗಳ ಕಾಲ ಇಷ್ಟು ನೀರು ನಿಂತ ಉದಾಹರಣೆಗಳಿಲ್ಲ ಎಂಬುದರತ್ತ ಅವರು ಗಮನ ಸೆಳೆಯುತ್ತಾರೆ.

ಈ ಶಿವ ದೇವಾಲಯ ದಾಟಿದ ನಂತರ ಕೆಳಗೆ ಪೆರಿಯಾರ್ ನದಿ ಎರಡು ತಿರುವನ್ನು ಪಡೆದುಕೊಳ್ಳುತ್ತದೆ. ಇದರಲ್ಲಿ ಎಡಭಾಗದ್ದು ಕೊಚ್ಚಿ ನಗರದತ್ತ ತೆರಳಿದರೆ ಬಲಭಾಗದ್ದು ಗ್ರಾಮೀಣ ಪ್ರದೇಶದತ್ತ ನುಗ್ಗುತ್ತದೆ.‌ ಇಲ್ಲಿ‌ ನದಿಯ ನೀರು ಬುಧವಾರದಿಂದ ಒಂದಷ್ಟು ಜನರ ನಿದ್ದೆ ಕೆಡಿಸಿದೆ.

ಮಂಗಳವಾರ ಇಲ್ಲಿ‌ ಮೊದಲ ಬಾರಿಗೆ ನೀರು ಏರಿಕೆ‌ ಕಂಡು ಬಂದಿತ್ತು. ಅವತ್ತು ಇದಮಲಯಾರ್ ಅಣೆಕಟ್ಟಿನ ಬಾಗಿಲುಗಳನ್ನು ತೆಗೆಯಲಾಗಿತ್ತು. ಮರು ದಿನ ಇಡುಕ್ಕಿ ಅಣೆಕಟ್ಟಿನ ಬಾಗಿಲು ತೆಗೆಯುತ್ತಿದ್ದಂತೆ ಇಲ್ಲಿನ ಜನರನ್ನು ನಿರಾಶ್ರಿತರ ಕೇಂದ್ರಗಳಿಗೆ ಕರೆದುಕೊಂಡು ಬರಲಾಗಿತ್ತು.

ಚೆಂಗಮನಾಡ್ ಸರಕಾರಿ ಶಾಲೆ, ಅಹನಾ ಅಡಿಟೋರಿಯಂ ಕುನ್ನಿಕರ, ಕೇರಳ ಅಡಿಟೋರಿಯಂ ಪುತ್ತಮೇರಿಕರಕ್ಕೆ ಸುಮಾರು ಎರಡು ಸಾವಿರಕ್ಕೂ ಅಧಿಕ‌ ಜನರನ್ನು ಕರೆ ತರಲಾಗಿತ್ತು. ಅಸಲಿಗೆ ಇವರ ಯಾರ ಮನೆಗಳಿಗೂ ಪ್ರವಾಹದಿಂದ ಹಾನಿಯಾಗಿರಲಿಲ್ಲ. ಮುಂಬರಲಿರುವ ಪ್ರವಾಹದ ಮುನ್ಸೂಚನೆ ಮೇಲೆಯಷ್ಟೇ ಅವರನ್ನು ಶಿಫ್ಟ್ ಮಾಡಲಾಗಿತ್ತು ಎನ್ನುತ್ತಾರೆ ಚೆಂಗಮನಾಡ್‌ನ ಮನೋರಮಾ ಪತ್ರಿಕೆಯ ಸ್ಥಳೀಯ ಪ್ರತಿನಿಧಿ ಜಿತಿನ್.

ಮುಳುಗಿರುವ ಶಿವ ದೇವಾಲಯ
ಮುಳುಗಿರುವ ಶಿವ ದೇವಾಲಯ
/ ಸಮಾಚಾರ

ಹಾಗೆ‌‌‌ ನೋಡಿದರೆ ಕೊಚ್ಚಿಯನ್ನೂ ಒಳಗೊಂಡ ಎರ್ನಾಕುಲಂ ಜಿಲ್ಲೆಯಲ್ಲಿ‌ ಮಳೆಯಿಂದ ಯಾರೂ ಸತ್ತಿಲ್ಲ. ಸತ್ತಿರುವ ಇಬ್ಬರು‌ ಮಕ್ಕಳು ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ ಅಷ್ಟೇ ಎನ್ನುತ್ತಾರೆ ಎರ್ನಾಕುಲಂ ಸಾರ್ವಜನಿಕ‌ ಮಾಹಿತಿ ಅಧಿಕಾರಿ ಸಿರಾಜ್.

ಪ್ರವಾಹದಿಂದ ಒಟ್ಟಾರೆ 23 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇದರಲ್ಲಿ ಪೆರಿಯಾರ್ ನದಿಯ ಕೊಡುಗೆ ಹೆಚ್ಚಿದೆ. ಇನ್ನು ಎರ್ನಾಕುಲಂನಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿ ಕಡಲ್ಕೊರೆತ ಉಂಟಾಗಿದ್ದು 50 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ಮನೆಗಳ ಜನರು ಸೇರಿ ಪರವೂರು, ಯಳಂದಿಕರ, ನಂದಿಯಾಟ್ ಕುನ್ನು, ಚೇಲತ್ತುರಿತ್, ಕುತ್ತಿಯಾಟ್ ತೋಡ್ ಪುತ್ತನ್ ಮೇಲಿಕರಗಳಲ್ಲಿ ಬಡವರ ಮನೆಗಳಿದ್ದು ಅವರ ಮನೆಗಳ ಸಮೀಪಕ್ಕೂ ನೀರು ಬಂದಿತ್ತು. ಇವರನ್ನೆಲ್ಲಾ ಸರಕಾರ ಮೊದಲೇ ಸುರಕ್ಷಿತ ಜಾಗಗಳಿಗೆ ಕಳುಹಿಸಿದೆ ಎಂದು ಅಲುವಾದ ಸೇತುವೆ ಮೇಲೆ‌ ನಿಂತು ಹೇಳಿದರು ನಾಸಿರ್.

ಆದರೆ ಇವತ್ತು ಹೆಚ್ಚಿನ ನಿರಾಶ್ರಿತರ ಕೇಂದ್ರಗಳು ಖಾಲಿಯಾಗಿವೆ. ಚೆಂಗಮನಾಡ್‌ನ ಕಿರಿಯ ಪ್ರಾಥಮಿಕ ಶಾಲೆಯಲ್ಲಿದ್ದ 60 ಕುಟುಂಬಗಳು ನೆರೆ ಇಳಿಯುತ್ತಿದ್ದಂತೆ ತಮ್ಮ ಆವಾಸ ಸ್ಥಾನಗಳಿಗೆ ವಾಪಾಸಾಗಿವೆ. ಅಲ್ಲಿಗೆ ನಾವು ಹೋದಾಗ ಶಾಲೆ ನಡೆಯುತ್ತಿತ್ತು. ನಿರಾಶ್ರಿತರ‌ ಕೇಂದ್ರ 5 ದಿನಗಳಿಗೆ ಖಾಲಿಯಾಗಿತ್ತು. ಪ್ರವಾಹ‌ ಬಂದಾಗ ಇಲ್ಲಿ 75 ನಿರಾಶ್ರಿತರ‌ ಕೇಂದ್ರ ತೆರಯಲಾಗಿತ್ತು. 2000 ಜನರಿದ್ದರು. ಈಗ 10 ಕ್ಯಾಂಪ್ ಗಳಿವೆ. ಅದರಲ್ಲಿ ಸುಮಾರು 800 ಜನರಿದ್ದಾರೆ. ಇನ್ನೂ ಹೆಚ್ಚಿನ ಜನರು ಮನೆಗಳಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ನೀಡುತ್ತಾರೆ ಸಿರಾಜ್.

ಒಂದೆಡೆ ನಿರಾಶ್ರಿತರ ಕೇಂದ್ರಗಳಿಂದ ಜನರು ಮನೆಗಳಿಗೆ ವಾಪಾಸಾಗುತ್ತಿದ್ದರೆ ಹವಾಮಾನ ಇಲಾಖೆಯ ರೆಡ್ ಅಲರ್ಟ್ ಮಧ್ಯದಲ್ಲೂ ಕೊಚ್ಚಿಯ ಆಗಸ ಸೋಮವಾರ ತಿಳಿಯಾಗಿತ್ತು. ಬಿಸಿಲು ಮೈ ಸುಡುತ್ತಿತ್ತು. “ಭಾನುವಾರದಿಂದ ಮಳೆ ತಗ್ಗಿದೆ. ಸೋಮವಾರವೂ ಮಳೆ ಬಂದಿಲ್ಲ. ಇವತ್ತು ಪೂರ್ತಿ ಬಿಸಿಲು.” ಎಂದರು ಚೆಂಗಮನಾಡ್ ಶಾಲೆ ಹೊರಗೆ ಗೂಡಂಗಡಿಯಲ್ಲಿ ಅಂಗಿಯ ಗುಂಡಿ ಕಿತ್ತು ಕುಳಿತಿದ್ದ ಚಾಕೋ. ಈ ಪರಿಸ್ಥಿತಿ ಆಲುವ‌, ಅಂಗಮಲಿ, ಕಾಲಡಿ, ಪೆರುವಂದ್ಊರು ದಾಟಿ ಇಡುಕ್ಕಿಯ ಬೆಟ್ಟಗಳ ತಪ್ಪಲಿನಲ್ಲಿ ಬರುವ ಕೋದಮಂಗಲಂವರೆಗೂ ಮುಂದುವರಿದಿತ್ತು.

ಇಲ್ಲಿನ‌ ಹವಾಮಾನ‌‌ ಇಲಾಖೆ ಮಾಹಿತಿ ಪ್ರಕಾರವೂ ಮಳೆ ಕಡಿಮೆಯಾಗುತ್ತಿದೆ. ಕೊಚ್ವಿ ಸುತ್ತಮುತ್ತ ಸೋಮವಾರ ಕೇವಲ 3 ಸೆಂಟಿಮೀಟರ್ ಮಳೆ ಸುರಿದಿದ್ದರೆ ಮಂಗಳವಾರ 3.02 ಸೆಂಟಿಮೀಟರ್ ಮಾತ್ರ ಮಳೆಯಾಗಿದೆ.‌ ಸದ್ಯ ಪರಿಸ್ಥಿತಿ ಸಹಜ ಸ್ಥಿತಿಯತ್ತ ಸಾಗುತ್ತಿದೆ ಎನ್ನುತ್ತಾರೆ ಎರ್ನಾಕುಲಂನ‌ ಸಹಾಯಕ ಸಾರ್ವಜನಿಕ‌‌ ಸಂಪರ್ಕಾಧಿಕಾರಿ ಇಜಾಜ್.

ಹೀಗೆ ಪ್ರಕೃತಿ ತನ್ನ ಮುನಿಸಿನಿಂದ ಹೊರ ಬರುತ್ತಿದ್ದರೆ ದೇವರ ಸ್ವಂತ ನಾಡಿನ ಜನ ಕೊಚ್ಚಿ, ಎರ್ನಾಕುಲಂನಲ್ಲಿ ತಮ್ಮ ಸಹಜ ಬದುಕಿಗೆ ಹೊರಳಿಕೊಳ್ಳುತ್ತಿದ್ದಾರೆ.‌ ಹೊರಗಡೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ 100 ಕೋಟಿ‌ ರೂಪಾಯಿ ಪರಿಹಾರದ ಬಗ್ಗೆ ಅವರಿಗೆ ಗಮನವಿಲ್ಲ. ಮಳೆ‌ ತಂದ ಕೊಳೆ ತೊಳೆದು ಸಹಜ ಬದುಕಿಗೆ ಹೊರಳಿಕೊಂಡರೆ ಸಾಕು ಎಂಬ ಧಾವಂತ ಅವರಲ್ಲಿದೆ.