samachara
www.samachara.com
‘ಕೇರಳ ಪ್ರವಾಹದ ಸಾಕ್ಷತ್ ವರದಿ’: ದೇವರ ನಾಡಿನ ಮೊದಲ ಬಲಿಯನ್ನು ಹುಡುಕುತ್ತಾ...
GROUND REPORT

‘ಕೇರಳ ಪ್ರವಾಹದ ಸಾಕ್ಷತ್ ವರದಿ’: ದೇವರ ನಾಡಿನ ಮೊದಲ ಬಲಿಯನ್ನು ಹುಡುಕುತ್ತಾ...

ನಾವು ಹಿಂದೆ ತಿರುಗಿ ನೋಡುತ್ತಿದ್ದಾಗಲೇ ರಭಸದಿಂದ ನುಗ್ಗಿದ ನೀರು ಕಾರನ್ನು ತಳ್ಳಿಕೊಂಡು ಹೋಯಿತು ಎಂದು ದುರ್ಘಟನೆಯನ್ನು ವಿವರಿಸುತ್ತಾರೆ ವಿಲ್ಸನ್. ಇದು ಕೇರಳದಲ್ಲಿ ಇವತ್ತು ಕಂಡುಬರುತ್ತಿರುವ ಪ್ರವಾಹದ ಭೀಕರತೆಗೆ ಮುನ್ನಡಿ ಬರೆದ ಮೊದಲ ಘಟನೆ.

ಕೋಯಿಕ್ಕೋಡ್‌ನಿಂದ ವಯನಾಡು ರಸ್ತೆಯಲ್ಲಿ ತಾಮರಶೇರಿ ದಾಟಿ ನಂತರ ಬರುವ ವೆಸ್ಟ್ ಕೈದಪೊಯಿಲ್‌ನಲ್ಲಿ ಎಡಕ್ಕೆ ಹೊರಳಿಕೊಂಡರೆ, ಅದು ಕಣ್ಣಪ್ಪನ್ ಗುಂಡ್‌ಗೆ ತಲುಪುತ್ತದೆ.‌ ಮಂಗಳೂರಿನಿಂದ ಹೊರಟರೆ ಕೋಯಿಕ್ಕೋಡ್‌ವರೆಗೂ ಮುಂಗಾರಿನ ಮಾರುತಗಳಿಗೆ ಬಳುಕುತ್ತಾ ನಿಂತ ತೆಂಗಿನ ಮರಗಳು ಮತ್ತು ಅಡಿಕೆ ಮರಗಳಷ್ಟೇ ಕಾಣ ಸಿಗುತ್ತವೆ. ಆದರೆ ಈ ರಸ್ತೆಯಲ್ಲಿ ಮೊದಲ ಬಾರಿಗೆ ರಬ್ಬರ್ ಪ್ಲಾಂಟೇಷನ್ ಗಳು ಎದುರಾಗುತ್ತವೆ‌.

ಈ ರಬ್ಬರ್ ಪ್ಲಾಂಟೇಷನ್ ಇಲ್ಲಿನ ಜನರಿಗೆ ಕೈತುಂಬಾ ಸಂಪಾದನೆಯನ್ನು ತಂದಿಟ್ಟಿತ್ತು.‌ ಜತೆಗೆ ಒಂದಷ್ಟು ಜನರು ದೂರದ ಅರಬ್ ದೇಶಗಳಲ್ಲಿ ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಪರಿಣಾಮ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾಡು ಪ್ರದೇಶಗಳಲ್ಲೂ ಸುಂದರ ಆರ್‌ಸಿಸಿ ಮನೆಗಳಲ್ಲಿ ಜನರು ಕಾಣ ಸಿಗುತ್ತಾರೆ.

ಎಂದಿನ ಮಳೆಗಾಲದಂತೆ ಕಳೆದ ಬುಧವಾರ ಈ ಊರಿನಲ್ಲಿ‌ ಮಳೆ ಆರಂಭವಾಗಿತ್ತು. ಅದಕ್ಕೂ ಮೊದಲು ಹವಾಮಾನ ಇಲಾಖೆ ‘ಭಾರಿ ಮಳೆಯ ಮುನ್ಸೂಚನೆ’ ನೀಡಿತ್ತಾದರೂ, “ತಪ್ಪು ಮಾಹಿತಿಗಳನ್ನು‌ ನೀಡಿದ ಇತಿಹಾಸವೇ ಇಲಾಖೆಗೆ ಇರುವಾಗ ನಾವಿದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ,” ಎನ್ನುತ್ತಾರೆ ಸ್ಥಳೀಯರಾದ ವಿಲ್ಸನ್ ಮತ್ತು ಇತರರು.

ಬುಧವಾರ(ಆಗಸ್ಟ್ 8)ದಂದು ರಾತ್ರಿ ಸುಮಾರು 9.30 ಗಂಟೆ ಹೊತ್ತಿಗೆ ನಿಧಾನಕ್ಕೆ ಮಳೆ ಆರಂಭವಾಗಿತ್ತು. ಮಳೆ‌ಸುರಿಯುತ್ತಿರಲು ಅಲ್ಲಿದ್ದ ನೂರಾರು ಜನ ಸುಭದ್ರವಾಗಿ ಕಟ್ಟಿಕೊಂಡ ಮನೆಗಳಲ್ಲಿ ಚಳಿಗೆ ಮುದುರಿಕೊಂಡು ಹೊದ್ದು ಮಲಗಿದ್ದರು.

ರಾತ್ರಿ ಹನ್ನೆರಡಾಗಿರಬಹುದು; ಸಮೀಪದ ಬೆಟ್ಟದಿಂದ ದೊಡ್ಡ ಶಬ್ದವೊಂದು ಕೇಳಿ ಬಂತು. ಅದಾಗಿ ಆ ರಾತ್ರಿ 9 ಸಲ ಹೀಗೆ‌ ಭೂಮಿ‌ ಕುಸಿದ ಶಬ್ದ ರಾತ್ರಿ ಎಚ್ಚರವಿದ್ದ ಕೆಲವರಿಗೆ ಕೇಳಿಸಿತು. ಅವರಲ್ಲಿ ವಿನೋದ್, ಜೀಜೋ ಕೂಡ ಸೇರಿದ್ದರು.‌ ಏನಾಯಿತು ಎಂದು ಅವರು ಎದ್ದು ಕೂರುವುದರೊಳಗೆ ಸುತ್ತ ಮುತ್ತಲಿನ‌ ಮನೆಯವರೆಲ್ಲಾ ಎದ್ದು ಕೂತಿದ್ದರು.‌ ಭೂ ಕುಸಿತ ಸಂಭವಿಸಿದ ಮಟ್ಟಿ ಕುನ್ನು ಜಾಗದ ಸಮೀಪವೇ ಇದ್ದ ಎರಡು ಮನೆಯವರು ಮೊಬೈಲ್ ಕೈಗೆತ್ತಿಕೊಂಡು ಸಿಕ್ಕ ಸಿಕ್ಕವರಿಗೆ ಫೋನಾಯಿಸಿದ್ದರು. ಭೂ ಕುಸಿತ ಸಂಭವಿಸಿದ ಜಾಗದಿಂದ ರಸ್ತೆ ಮಾರ್ಗದಲ್ಲಿ 6 ಕಿಲೋ ಮೀಟರ್ (ನೇರ ಮಾರ್ಗದಲ್ಲಿ ಅದಕ್ಕಿಂತಲೂ ಸಮೀಪ) ದೂರ ಕಣ್ಣಪ್ಪನ್ ಗುಂಡ್ ಜನರನ್ನು ಎಬ್ಬಿಸಲು ಆರಂಭಿಸಿದ್ದರು. "ಇಲ್ಲಿ ಭೂಕುಸಿತ ಸಂಭವಿಸಿದೆ.‌‌ ನಿಮ್ಮ‌ಕಡೆಗೆ ಮಣ್ಣು‌ ನೀರು‌ ಒಟ್ಟಾಗಿ ನುಗ್ಗುತ್ತಿದೆ. ಬೇಗ ಓಡಿ ಎಂದು ನಮಗೆಲ್ಲಾ ಕರೆ ಬಂತು. ನಾವು ಉಟ್ಟ ಬಟ್ಟೆಯಲ್ಲೇ ಓಡಿ ಹೋದೆವು,” ಎಂದು ಅಂದು‌ ನಡೆದ ಘಟನಾವಳಿಯನ್ನು‌‌ ಮೆಲುಕು ಹಾಕುತ್ತಾರೆ ಮ್ಯಾಥ್ಯೂ.

ಕೋಯಿಕ್ಕೋಡ್‌ನ ಅಳಿದುಳಿದ ಮನೆಯ ಮುಂದೆ ಮ್ಯಾಥ್ಯೂ.
ಕೋಯಿಕ್ಕೋಡ್‌ನ ಅಳಿದುಳಿದ ಮನೆಯ ಮುಂದೆ ಮ್ಯಾಥ್ಯೂ.
/ಸಮಾಚಾರ. 

ಹಾಗೆ ಕರೆ ಬಂದಾಗ ಎಲ್ಲಾ‌ ಮನೆಯವರು ಎತ್ತರದ ಸುರಕ್ಷಿತ ಜಾಗಗಳಿಗೆ ಓಡುತ್ತಿದ್ದರೆ 23 ವರ್ಷದ ಬಿಸಿ ರಕ್ತದ ಯುವಕ ರೆಜಿತ್ ಏನಾಯಿತು ಎಂದು ನೋಡಲು ತನ್ನ ಆಲ್ಟೋ ಕಾರನ್ನು ಎತ್ತಿಕೊಂಡ ಅದರಲ್ಲಿ ಮೂರು ಜನರನ್ನು ಕೂರಿಸಿಕೊಂಡು ಗುಡ್ಡದ ಬುಡದತ್ತ ಹೊರಟಿದ್ದರು. ದಾರಿಯಲ್ಲಿ‌ ಹೋಗುತ್ತಿದ್ದಾಗ ಮಟ್ಟಿ ಕುನ್ನು ಜಾಗದ ಕೆಳಗೆ ಸೇತುವೆಯೊಂದು ಮಣ್ಣಿನಿಂದ ಕಟ್ಟಿಕೊಂಡು ನೀರು ರಸ್ತೆಯಲ್ಲಿ‌ ನುಗ್ಗುತ್ತಿತ್ತು. ಅದನ್ನು ಕಂಡ‌ ರೆಜಿತ್ ಕಾರು ನಿಲ್ಲಿಸಿದರು. ಆಗ ಅದರಲ್ಲಿದ್ದ ಉಳಿದ ಮೂವರು ಬಾಗಿಲು ತೆಗೆದು‌ ಓಟ ಕಿತ್ತರು. ರೆಜಿತ್‌ಗೆ ಮೊದಲೇ ಅಪಘಾತದಲ್ಲಿ ಎರಡೂ ಕಾಲಿಗೆ ಗಾಯವಾಗಿತ್ತು. ಓಡಲು ಸಾಧ್ಯವಿರಲಿಲ್ಲ. ಆತ ಕಾರನ್ನು ರಿವರ್ಸ್ ತೆಗೆಯಲು ಯತ್ನಿಸುತ್ತಿದ್ದ. ಓಡುತ್ತಿದ್ದ ನಾವು ಹಿಂದೆ ತಿರುಗಿ ನೋಡುತ್ತಿದ್ದಾಗಲೇ ರಭಸದಿಂದ ನುಗ್ಗಿದ ನೀರು ಕಾರನ್ನು ತಳ್ಳಿಕೊಂಡು ಹೋಯಿತು ಎಂದು ಕಣ್ಣೆದುರು ನಡೆದ ದುರ್ಘಟನೆಯನ್ನು ವಿವರಿಸುತ್ತಾರೆ ವಿಲ್ಸನ್. ಇದು ಕೇರಳದಲ್ಲಿ ಇವತ್ತು ಕಂಡುಬರುತ್ತಿರುವ ಪ್ರವಾಹದ ಭೀಕರತೆಗೆ ಮುನ್ನಡಿ ಬರೆದ ಮೊದಲ ಘಟನೆ.

ಅವತ್ತು ಸುಮಾರು‌‌ ನಾಲ್ಕು ಗಂಟೆಯವರೆಗೆ ಇದೇ ರೀತಿ ನೀರು ಹರಿಯಿತು.‌ ಹರಿದ ರಭಸಕ್ಕೆ ಕೆಳಗೆ ಮತ್ತೊಂದು ಸೇತುವೆ ಬ್ಲಾಕ್ ಅಗಿ ಸುತ್ತ ಮುತ್ತಲಿದ್ದ ಮನೆಗಳನ್ನು‌ಕೊಚ್ಚಿಕೊಂಡು ಹೋಯಿತು. ಆರ್‌ಸಿಸಿ ಮನೆಗಳು ತಳದಿಂದಲೇ ಕೊಚ್ಚಿಕೊಂಡು ಧರೆಗುರುಳಿದವು. ಒಂದೆರಡಲ್ಲ 15 ಮನೆಗಳಿಗೆ ಹೀಗೆ ಭಾಗಶಃ‌ ಅಥವಾ ಪೂರ್ತಿ ಹಾನಿಯಾಯಿತು.‌ ಅಲ್ಲಿದ್ದ ಅಷ್ಟೂ 60 ಮನೆಗಳಿಗೆ ಕೆಸರು‌ ನೀರು‌ ನುಗ್ಗಿತು. ಒಂದೇ ದಿನ ಸುರಿದ 30 ಸೆಂಟಿಮೀಟರ್ (ಒಂದು ಅಡಿ) ಮಳೆ ಕೊಚ್ಚಿಕೊಂಡು‌ ಹೋದ ತೆಂಗಿನ ಮರಗಳಿಗೆ ಲೆಕ್ಕವೇ ಇಲ್ಲ.

“ನಾನು ಇಲ್ಲಿಯವರೆಗೆ ಈ ರೀತಿಯ ಮಳೆ‌ ನೋಡಿಲ್ಲ.‌ ನಮ್ಮ‌ ಅಜ್ಜ 1920 ರ ಸುಮಾರಿಗೆ ಭಾರಿ ಮಳೆಯೊಂದು ಬಂದಿತ್ತು ಎಂದ ಹೇಳಿದ ನೆನಪು ಎನ್ನುತ್ತಾರೆ,” ಮ್ಯಾಥ್ಯೂ. ಅವರೀಗ 60ರ ಆಸು ಪಾಸಿನಲ್ಲಿದ್ದಾರೆ.

ಮ್ಯಾಥ್ಯೂ ಹೇಳಿದ‌ ಮಾತಿಗೆ ಸಾಕ್ಷಿ ಬೇಕಿರಲಿಲ್ಲ.‌ ಕಣ್ಣಪ್ಪನ್ ಗುಂಡ್ ನೋಡಿದ ಯಾರಿಗೇ ಆದರೂ ಹಾಗೆ ಅನಿಸಿಯೇ ಅನಿಸುತ್ತಿತ್ತು. ಭೀಕರ ಪ್ರವಾಹಕ್ಕೆ ಕೊಚ್ಚಿ ಹೋದ ಅವಶೇಷಗಳು‌ ಅಲ್ಲಿ‌ನಡೆದ ಘಟನಾವಳಿಗಳಿಗೆ ಸಾಕ್ಷಿ ನುಡಿಯುತ್ತಿದ್ದವು.

ಸ್ಥಳದಲ್ಲಿ‌ ಕೇರಳ ಅಗ್ನಿ ಶಾಮಕ ದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.‌ ಗುರುವಾರ 4 ಜೆಸಿಬಿಗಳ‌ ಮೂಲಕ ಆರಂಭವಾದ ಕಾರ್ಯಾಚರಣೆ ಇನ್ನೂ‌ ಮುಗಿದಿಲ್ಲ.‌ ಭೂಕುಸಿತದ ಮರುದಿನ ಅಂದರೆ ಗುರುವಾರ ಆರಂಭವಾದ ಕಾರ್ಯಾಚರಣೆಯಲ್ಲಿ‌ ಶುಕ್ರವಾರವಷ್ಟೇ ಮುಚ್ಚಿಕೊಂಡಿದ್ದ ಸೇತುವೆಯನ್ನು ಬಿಡಿಸಿಕೊಡಲು ಸಾಧ್ಯವಾಗಿದೆ.‌ ಈ ನಡುವೆ ಕೊಚ್ಚಿಕೊಂಡು ಹೋಗಿದ್ದ ರೆಜಿತ್ ಶವ ಸಿಕ್ಕಿತ್ತು.‌ “ಮೂರು ಕಿಲೋಮೀಟರ್ ಕೆಳಗೆ ಮಣ್ಣಿನಾಳದಲ್ಲಿ ಸಿಕ್ಕ‌ ಹೆಣವನ್ನು ಗುರುತು ಹಿಡಿಯಲು ಮೊದಲು ಸಾಧ್ಯವಾಗುಲಿಲ್ಲ,” ಎನ್ನುತ್ತಾರೆ ಇರ್ಫಾನ್.

ಪ್ರವಾಹದ ಮೊದಲ ಬಲಿ ಪಡೆದ ರೆಜತ್ ಕಾರು ಪತ್ತೆಯಾದಾಗ ಕಂಡ ಚಿತ್ರಣ. 
ಪ್ರವಾಹದ ಮೊದಲ ಬಲಿ ಪಡೆದ ರೆಜತ್ ಕಾರು ಪತ್ತೆಯಾದಾಗ ಕಂಡ ಚಿತ್ರಣ. 
/ಸಮಾಚಾರ. 

ಭಾನುವಾರ ಸಂಜೆ ‘ಸಮಾಚಾರ’ದ ಈ ವರದಿಗಾರ ಸ್ಥಳಕ್ಕೆ‌ ಭೇಟಿ‌ ನೀಡುವ ಕೆಲವೇ ಹೊತ್ತಿನ‌ ಮೊದಲು ರೆಜಿತ್ ಆಲ್ಟೋ ಕಾರು ಪತ್ತೆಯಾಗಿತ್ತು. ಕಾರು ಎನ್ನಲು ಅದರಲ್ಲಿ ಯಾವ ಕುರುಹುಗಳೂ ಇರಲಿಲ್ಲ.‌ ಮುಂಭಾಗದ ಎರಡು ಚಕ್ರ ಮಾತ್ತ ಉಳಿದಿತ್ತು. ಘಟಿಸಿ ಹೋದ ಭೀಕರತೆಯನ್ನು‌ ನೋಡಲು ನೂರಾರು‌ ಜನರು ಅಲ್ಲಿ ಸೇರಿದ್ದರು. ಜತೆಗೆ ಸಾರಿಗೆ ಸಚಿವ ಶಶೀಂದ್ರನ್, ಕೋಯಿಕ್ಕೋಡ್ ಉಸ್ತುವಾರಿ ಸಚಿವ ಮತ್ತು ಅಬಕಾರಿ ಸಚಿವ ಟಿ. ಪಿ. ರಾಮಕೃಷ್ಣನ್, ಸಂಸದರು, ಶಾಸಕರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಈ ಮೂಲಕ ದೇವರ ನಾಡಲ್ಲಿ ‘ಹೊಸ ಪ್ರವಾಸೋದ್ಯಮ’ ಆರಂಭವಾಗಿದೆ ಎಂದು ಮಾರ್ಮಿಕವಾಗಿ ವಿವರಿಸಿದರು ಆಟೋ ಚಾಲಕರೊಬ್ಬರು.

ಸ್ಥಳಕ್ಕೆ ಕೇವಲ ರಾಜಕೀಯ ನಾಯಕರು‌ ಬಂದಿದ್ದು ಮಾತ್ರ. ಯಾವುದೇ ಭರವಸೆಗಳನ್ನು‌ ನೀಡಿಲ್ಲ.‌ ಕಾಗದದ ಮೇಲೆ ಆಶ್ವಾಸನೆಗಳಿಗೆ, ಆದರೆ ಅವು ಸಿಗುವ ಬಗ್ಗೆ ಯಾವುದೇ ಭರವಸೆಗಳಿಲ್ಲ ಎನ್ನುತ್ತಾರೆ ಮ್ಯಾಥ್ಯೂ ಮತ್ತು ವಿಲ್ಸನ್. ಇವರ ಕುಟುಂಬಸ್ಥರೂ ಸೇರಿ ಒಟ್ಟು 140 ಕುಟಂಬಗಳ 380ಕ್ಕೂ ಹೆಚ್ಚು ಜನ ಮೈಲೆಲಾಂಪರದಲ್ಲಿರುವ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರಾಶ್ರಿತರಾಗಿ ದಿನ ಕಳೆಯುತ್ತಿದ್ದಾರೆ. ಇದೇ ರೀತಿ 120 ಕ್ಕೂ ಹೆಚ್ಚು ಕುಟಂಬಗಳು ಮಾಪಳ ಹಿರಿಯ ಪ್ರಾಥಮಿಕ ಶಾಲೆ ಆಶ್ರಯ ಪಡೆಯುತ್ತಿವೆ. ಮಳೆ ಕಡಿಮೆಯಾದ ಬಳಿಕ ಇವರೆಲ್ಲಾ ಮನೆಗಳಿಗೆ ವಾಪಾಸಾಗಲು ಸಿದ್ದವಾಗಿದ್ದಾರೆ. ಆದರೆ ಪೂರ್ತಿ ಮನೆ ಕಳೆದುಕೊಂಡವರು ಎಲ್ಲಿಗೆ ಹೋಗಿಬೇಕು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಕೋಝಿಕೋಡ್‌ನಲ್ಲಿ‌ ಜೀವ ಕಳೆದುಕೊಂಡಿದ್ದು‌ ರೆಜಿತ್ ಮಾತ್ರ. ಆದರೆ ಈ ತರದ ಭೂ ಕುಸಿತ, ಪ್ರವಾಹಗಳು ಜಿಲ್ಲೆಯ ಮುಕ್ಕಂ, ಮಾವೂರು, ಕೊಡಂಚೇರಿ, ಕರಞೋಲಮಲ, ಕುಂಡಾಯಿತ್ತೋಡ್, ಕುಟ್ಯಾಡಿಗಳ‌ಲ್ಲಿಯೂ ನಡೆದಿವೆ ಎನ್ನುವ ಮಾಹಿತಿಯನ್ನು‌‌ ಮುಂದಿಡುತ್ತಾರೆ ಇಲ್ಲಿನ ‘ಮಲಯಾಳ‌‌ ಮನೋರಮಾ’ ಪತ್ರಿಕೆಯ ವರದಿಗಾರ ಮಿತ್ರರೊಬ್ಬರು. ಅಲ್ಲಿ‌ಯೂ ಕೂಡ ಹೆಚ್ಚು ಕಡಿಮೆ ಕಣ್ಣಪ್ಪನ್ ಗುಂಡ್‌ನ‌ ಪ್ರವಾಹದ ಚಿತ್ರಣಗಳೇ ಕಾಣಸಿಗುತ್ತವೆ.

ಕೇರಳದ ಮಟ್ಟಿಗೆ ಮಳೆ ಎಲ್ಲಾ ಕಡೆಯಲ್ಲಿ ಸುರಿಯುತ್ತಿದ್ದರೂ ಉತ್ತರ ಕೇರಳದಲ್ಲಿ ಬರುವ ಕಾಸರಗೋಡು, ಕಣ್ಣೂರಿನಲ್ಲಿ ಅದು ಅಪಾಯದ ಮಟ್ಟವನ್ನು ತಲುಪಿಲ್ಲ. ಆದರೆ ಮಧ್ಯ‌‌‌ ಕೇರಳ ಮತ್ತು ದಕ್ಷಿಣ ಭಾಗಗಳಲ್ಲಿ ಮಳೆಯ ರುದ್ರ ನರ್ತನ ಮತ್ತಷ್ಟು ಜೋರಾಗಿದೆ. ಅಲ್ಲಿನ ವಿವರಗಳು ಈ ಪ್ರಕೃತಿಯ ಮುನಿಸಿನ ಭೀಕರತೆಯನ್ನು ವಿವರಿಸುವಂತಿವೆ. ಅಂತಹ ಹಲವು ಕತೆಗಳು, ಪಾಠಗಳನ್ನು ‘ಸಮಾಚಾರ’ ನಿಮ್ಮೆದುರು ಬಿಡಿಸಿಡಲಿದೆ.