samachara
www.samachara.com
‘ಕಣ್ಣುತೆರೆಯಲಿ ಕೆಎಂಎಫ್‌’-ಭಾಗ 1: ಉತ್ತರ ಕನ್ನಡ ಜಿಲ್ಲೆಯೂ; ಶಾಪಗ್ರಸ್ತ ಹೈನೋದ್ಯಮವೂ...
GROUND REPORT

‘ಕಣ್ಣುತೆರೆಯಲಿ ಕೆಎಂಎಫ್‌’-ಭಾಗ 1: ಉತ್ತರ ಕನ್ನಡ ಜಿಲ್ಲೆಯೂ; ಶಾಪಗ್ರಸ್ತ ಹೈನೋದ್ಯಮವೂ...

ಬದಲಿ ಆದಾಯ ಮೂಲವಾಗಿ ರೂಪುಗೊಂಡ ಹೈನೋದ್ಯಮವು ಉತ್ತರ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಇದಕ್ಕೆ ಹಲವಾರು ಕಾರಣಗಳಿದ್ದು ಎಲ್ಲವನ್ನೂ ಅನಾವರಣಗೊಳಿಸುವ ಪ್ರಯತ್ನ ‘ಸಮಾಚಾರ’ದ್ದು...

ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಸಿದ್ದಾಪುರ ಮಾರ್ಗದ ಕಾನಸೂರಿನಿಂದ ಎಡಕ್ಕೆ ಹೊರಳಿದರೆ ಕಾಡಿನ ಮಧ್ಯೆ ಹಾವಿನಂತೆ ಸಾಗಿದ ರಸ್ತೆ. ಅಲ್ಲಿ ಸುಮಾರು 4 ಕಿ. ಮೀ. ಸಾಗಿದರೆ ಅರಿಶಿಣಗೋಡ ಎಂಬ ಹಳ್ಳಿಯಿದೆ. ಸಿದ್ದಾಪುರ ತಾಲೂಕಿಗೆ ಸೇರಿದ್ದಾದರೂ, ಸಮೀಪದ ತಾಲೂಕು ಕೇಂದ್ರ ಶಿರಸಿ. ಎಲ್ಲ ಮಲೆನಾಡಿನ ಹಳ್ಳಿಗಳಂತೆ ಗುಡ್ಡಗಾಡಿನ ಮಧ್ಯೆ ರಮಣೀಯವಾದ ಹಳ್ಳಿ ಇದು. ಹೊರಗಿನಿಂದ ಹೋದವರಿಗೆ ರಮಣೀಯವೇನೋ ಹೌದು; ಆದರೆ ಅಲ್ಲಿನ ರೈತರದು ಸಂಕಷ್ಟಗಳ ನಡುವಿನ ಬದುಕು.

ಇದೇ ಅರಿಶಿಣಗೋಡಿನ ಪ್ರಭಾತ್ ಉಮೇದುವಾರು ಕೃಷಿಕ. ಸಣ್ಣ ಹಿಡುವಳಿದಾರನಾದರೂ ಕೃಷಿ, ತೋಟಗಾರಿಕೆ, ಹೈನೋದ್ಯಮಗಳನ್ನು ನಡೆಸುತ್ತ ಭವ್ಯ ಭವಿಷ್ಯದ ಕನಸು ಹೊತ್ತ ರೈತ. ಇವನಿಗೂ ಇತ್ತೀಚೆಗೆ ಹೈನುಗಾರಿಕೆಯ ಕಹಿ ಅನುಭವ ಎದೆಗುಂದಿಸಿದೆ. ಮೊದಲು ಎರಡು ಹಸುಗಳನ್ನು ಕಟ್ಟಿ ಸಮೀಪದ ಹಾಲು ಸೊಸ್ಶೆಟಿಗೆ ಹಾಲು ಮಾರುತ್ತಿದ್ದ. ಪ್ರತಿ ಲೀಟರ್‌ ಹಾಲಿಗೆ 23ರೂಪಾಯಿ ದೊರೆಯುತ್ತಿತ್ತು. ಆದರೆ ಇತ್ತೀಚೆಗೆ 21.50ರೂಪಾಯಿಗೆ ದರ ಇಳಿದಿದೆ. ಇದರಿಂದ ಹಸು ಸಾಕಣೆ ಖರ್ಚು ನಿಭಾಯಿಸಲಾಗದೇ ಹಿಂಡಿ, ಮಿನರಲ್ ಕಡಿಮೆ ಕೊಡತೊಡಗಿದ. ಇದರಿಂದ ಎಸ್.ಎನ್.ಎಫ್. ಮತ್ತು ಕೊಬ್ಬಿನಂಶ ಕಡಿಮೆಯಾಗಿ ಹಾಲು ಖರೀದಿ ಮಾಡುವ ಸಹಕಾರಿ ಸಂಘದಿಂದ ನಿರಾಕರಿಸಲ್ಪಟ್ಟಿತು. ಬೇಸತ್ತ ಪ್ರಭಾತ್ ಸಮೀಪದಲ್ಲಿದ್ದ ಖಾಸಗಿ ಡೇರಿಗೆ ತನ್ನ ಹಾಲನ್ನು ನೀಡತೊಡಗಿದ. ಅಲ್ಲಿ 1.5ರೂಪಾಯಿ ಜಾಸ್ತಿ ಅಂದರೆ 23ರೂಪಾಯಿ ದೊರೆಯುತ್ತಿತ್ತು. ಆದರೆ ಸರಕಾರದಿಂದ ದೊರೆಯುವ ಪೋತ್ಸಾಹಧನ 5ರೂಪಾಯಿ ದೊರೆಯುತ್ತಿರಲಿಲ್ಲ. ಇದರಿಂದ ಆರ್ಥಿಕ ಹಿನ್ನಡೆಯಾಗಿ ನಷ್ಟ ಭರಿಸಲಾಗದೇ ಒಂದೇ ಹಸುವಿಗೆ ಸೀಮಿತಗೊಂಡ. ಈಗ ಹಾಲು ಮಾರಾಟದ ಸಹಕಾರಿ ಸಂಘಕ್ಕೆ ಹಾಲು ಕೊಡುತ್ತಿಲ್ಲ. ಮುಂದೆ ಇದೇ ಸ್ಥಿತಿ ಇದ್ದರೆ ಹೈನುಗಾರಿಕೆ ಬಿಡುವ ಚಿಂತನೆ ಅವನದು. ಇದು ಇವನೊಬ್ಬನ ಕತೆಯಲ್ಲ, ಈ ಭಾಗದ ಹಲವು ಕೃಷಿಕರ ಚಿಂತನೆ. ಕೆಲವು ರೈತರು ಹೈನೋಧ್ಯಮ ತೊರೆದ ಉದಾಹರಣೆಗಳು ಸುತ್ತಮುತ್ತಲಿನ ಪ್ರತಿ ಹಳ್ಳಿಗಳಲ್ಲಿ ಸಿಗುತ್ತದೆ.

ರಾಜ್ಯಾದ್ಯಂತ ಲಕ್ಷಾಂತರ ಜನರಿಗೆ ಸ್ವಾವಲಂಭಿ ಬದುಕು ಕಲ್ಪಿಸಿಕೊಟ್ಟಿದ್ದು ಹೈನೋದ್ಯಮ. ಮನೆಯಲ್ಲಿ ಕನಿಷ್ಟ ಒಂದು ಹಸುವನ್ನು ಕಟ್ಟಿಕೊಂಡವರು ಹಾಲು ಮಾರಾಟದ ಮೂಲಕವೇ ಆರ್ಥಿಕ ಏಳಿಗೆ ಕಂಡ ಸಾಕಷ್ಟು ಉದಾಹರಣೆಗಳು ನಮಗಿಲ್ಲಿ ಸಿಗುತ್ತವೆ. ಲಭ್ಯ ಮಾಹಿತಿ ಪ್ರಕಾರ, ಕರ್ನಾಟಕದ ಹಾಲು ಉತ್ಪಾದನೆಯಲ್ಲಿ ದೇಶದ ರಾಜ್ಯಗಳ ಪೈಕಿ ಆರನೇ ಸ್ಥಾನದಲ್ಲಿದೆ. ಸುಮಾರು 20 ವರ್ಷಗಳ ಹಿಂದೆ, 2001ರಲ್ಲಿ ಕರ್ನಾಟಕದಲ್ಲಿ ಪ್ರತಿ ದಿನ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣವೇ 45. 84 ಟನ್‌ನಷ್ಟಿತ್ತು. ವಿಶೇಷ ಅಂದರೆ, ಹೀಗೆ ಉತ್ಪಾದನೆಯಾಗುವ ಹಾಲನ್ನು ಮಾರಾಟ ಮಾಡಲು ಸಹಕಾರಿ ಪದ್ಧತಿಯನ್ನು ಅಳವಡಿಸಿಕೊಂಡ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ. ಕೆಎಂಎಫ್ ಅಥವಾ ಕರ್ನಾಟಕ ಮಿಲ್ಕ್‌ ಫೆಡರೇಶನ್ ಈ ನಿಟ್ಟಿನಲ್ಲಿ ಮಾದರಿ ಸಂಸ್ಥೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಎಂಎಫ್ ಬದಲಾಗುತ್ತಿರುವ ರೀತಿ, ಅದರ ಆಡಳಿತಾತ್ಮ ಮಿತಿಗಳು ತಳಮಟ್ಟದಲ್ಲಿ ಪರಿಣಾಮಗಳನ್ನು ಬೀರಲು ಆರಂಭಿಸಿವೆ. ಅರಿಶಿಣಗೋಡಿನ ಪ್ರಭಾತ್ ರೀತಿಯಲ್ಲಿ ಹಲವರಿಗೆ ಹೈನೋದ್ಯಮದಲ್ಲಿ ಮುಂದುವರಿಯಲು ಕಷ್ಟವಾಗುತ್ತಿದೆ.

ಇಷ್ಟಕ್ಕೂ ಉತ್ತರ ಕನ್ನಡ ಜಿಲ್ಲೆಯ ರೈತರೇಕೆ ಹೈನೋದ್ಯಮವನ್ನು ನೆಚ್ಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹುಡುಕಿಕೊಂಡು ಹೊರಟರೆ, ಹತ್ತ ಹಲವು ವಿಚಾರಗಳು ಮುನ್ನೆಲೆ ಬರುತ್ತವೆ. ಅವಗಳನ್ನು ಸರಣಿ ರೂಪದಲ್ಲಿ ‘ಸಮಾಚಾರ’ ನಿಮಗಿಲ್ಲಿ ಅರ್ಥಪಡಿಸುವ ಪ್ರಯತ್ನ ಮಾಡಿದೆ.

ತಳಮಟ್ಟದ ಪರಿಸ್ಥಿತಿ?:

ಉತ್ತರ ಕನ್ನಡದ ರೈತರು ಅರಣ್ಯ ಮಧ್ಯೆ ವಾಸಿಸುತ್ತಿದ್ದು, ಬಯಲುಸೀಮೆ ರೈತರಷ್ಟು ಎಕರೆವಾರು ಭೂಮಿ ಹೊಂದಿಲ್ಲ. ಇವರು ಗುಂಟೆ ಸಾಹುಕಾರರು! ದಶಕಗಳ ಹಿಂದಿನವರೆಗೂ ಇಲ್ಲಿ ಹಸುಗಳನ್ನು ಅರಣ್ಯದಲ್ಲಿ ಮೇಯಿಸಿ ಸಲಹುವ ಪರಿಪಾಠವಿತ್ತು. ಅರಣ್ಯಗಳಿಗೆ ಟ್ರೆಂಚ್ ಹೊಡೆದು ಬದುಗಳನ್ನು ನಿರ್ಮಿಸಿದ್ದರಿಂದ ಹಸುಗಳನ್ನು ಮೇಯಿಸುವ ತಾಣವಿಲ್ಲದೇ ಮನೆಯಲ್ಲೇ ಕಟ್ಟಿ ಸಾಕಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಇದರಿಂದ ಹೈನೋದ್ಯಮದಲ್ಲಿ ಉತ್ಪಾದನಾ ವೆಚ್ಚ ಸಹಜವಾಗಿಯೇ ಏರಿದೆ. ಹುಲ್ಲು, ಹಿಂಡಿ ಎಲ್ಲವನ್ನೂ ಕೊಂಡು ತಂದೇ ಹಸು ಸಾಕಣೆ ಮಾಡಬೇಕಾದೆ. ಮೊದಲೆಲ್ಲಾ ಸರ್ವೇಸಾಮಾನ್ಯವಾಗಿ ರೈತರ ಮನೆಗಳಲ್ಲಿ ಎಮ್ಮೆ, ಸೀಮೆ ಹಸು ಮತ್ತು ನಾಟಿ ಹಸುಗಳೆಂದು ಏನಿಲ್ಲವೆಂದರೂ 5-20 ಹಸು-ಕರುಗಳಿರುತ್ತಿದ್ದವು. ಇತ್ತೀಚೆಗೆ ಅವೆಲ್ಲ ಮಾರಲ್ಪಟ್ಟು ಒಂದೆರಡಕ್ಕೆ ಸೀಮಿತವಾಗಿದ್ದಾರೆ. ಅಲ್ಲೋ ಇಲ್ಲೋ ಕೆಲವು ವಿಶೇಷ ಸಾಕಣೆದಾರರನ್ನು ಬಿಟ್ಟರೆ ಉಳಿದವರ ಹೈನುಗಾರಿಕೆಯ ಪ್ರಗತಿ ಅಷ್ಟಕ್ಕಷ್ಟೆ ಎಂಬಂತಾಗಿದೆ.

ಇದಕ್ಕೆ ಮೂಲ ಕಾರಣ, ಉತ್ತರ ಕನ್ನಡ ಜಿಲ್ಲೆಯ ಹೈನೋದ್ಯಮಿಗಳನ್ನು ಸುಮಾರು 80 ಕಿ. ಮೀ ದೂರದಲ್ಲಿರುವ ಧಾರವಾಡದ ಒಕ್ಕೂಟದ ಅಡಿಯಲ್ಲಿ ತಂದಿದ್ದು.

ಧಾರವಾಡ ಒಕ್ಕೂಟವು ಉತ್ತರ ಕನ್ನಡದ ಜೊತೆ ಧಾರವಾಡ, ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡಿದೆ. ಉಳಿದ ಜಿಲ್ಲೆಗಳಿಗಿಂತ ಉತ್ತರ ಕನ್ನಡ ಜಿಲ್ಲೆಯು ಬೇರೇಯೇ ಆದ ಕೃಷಿ ಬೌಗೋಳಿಕ ಲಕ್ಷಣ ಹೊಂದಿದೆ. ಇಲ್ಲಿನ ಬೆಳೆ, ಸಂಸ್ಕಂತಿ ಮತ್ತು ಜೀವವೈವಿದ್ಯತೆಗಳೇ ಬೇರೆಯಾಗಿದೆ ಮತ್ತು ಇಲ್ಲಿನ ಮೂಲತಳಿಗಳ ಹಾಗೂ 50ಃ50 ಅನುಪಾತದ ಮಿಶ್ರ ತಳಿಗಳ ಹಾಲಿನ ಗುಣಮಟ್ಟ ಹೊಂದಿತ್ತು.

ಆದರೆ, “ವಿದೇಶೀ ತಳಿಗಳಿಂದ ಲಾಭ ಜಾಸ್ತಿ ಎಂಬ ಆಸೆಗೆ ಅವುಗಳ ತಳಿ ಶುದ್ಧತೆಗೆ ಹೆಚ್ಚು ಒತ್ತು ನೀಡಿ ನಮ್ಮಲ್ಲಿರುವ ಉತ್ತಮ ಗುಣಮಟ್ಟದ ಮೂಲ ತಳಿಗಳನ್ನು ಕಳೆದುಕೊಂಡೆವು. ಅವುಗಳಿಗೆ ರೋಗವೂ ಕಡಿಮೆ ಇತ್ತು, ನಿರ್ವಹಣೆಯೂ ಸುಲಭವಾಗಿತ್ತು,’’ ಎಂದು ಈಗ ಇಲ್ಲಿನ ರೈತರು ನಡೆದ ಪ್ರಮಾದವನ್ನು ವಿವರಿಸುತ್ತಾರೆ.

ಇಂದು ಅಮೂಲ್ ಉತ್ಪನ್ನ ದೇಶದಲ್ಲೆಲ್ಲ ಉತ್ತಮವೆನ್ನಲು ಅಲ್ಲಿನ ಮೂಲತಳಿಗಳನ್ನೊಳಗೊಂಡ ಮಿಶ್ರ ತಳಿಗಳ ಹಾಲೇ ಕಾರಣ ಎನ್ನಲಾಗುತ್ತಿದೆ. ವಿದೇಶೀ ತಳಿಗಳನ್ನು ಅತಿಯಾಗಿ ಅವಲಂಭಿಸಿದ್ದು ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿದ್ದ ಮೂಲ ತಳಿಗಳ ನಿರ್ಮೂಲನೆಗೆ ಕಾರಣವಾಗುವಂಥ ಪ್ರಮಾದ ಉತ್ತರ ಕನ್ನಡದಲ್ಲಿ ಜರುಗಿಹೋಗಿದೆ. ಇದರ ಜತೆಗೆ ಧಾರವಾಡ ಹಾಲು ಒಕ್ಕೂಟದ ಅಡಿಯಲ್ಲಿ ಪಡೆಯುತ್ತಿರುವ ಕಡಿಮೆ ದರ ಹಾಗೂ ಇತರೆ ಆಡಳಿತಾತ್ಮಕ ಸಮಸ್ಯೆಗಳು ಇಲ್ಲಿನನ ಹೈನೋದ್ಯಮಿಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.

ಅದು ಎಸ್‌ಎನ್‌ಎಫ್ ಸೂತ್ರ:

ಕೆಎಂಎಫ್‌ ಚಿನ್ಹೆ. 
ಕೆಎಂಎಫ್‌ ಚಿನ್ಹೆ. 

ವಿದೇಶೀ ತಳಿಗಳ ಹಾಲಿನಿಂದ ಎಸ್.ಎನ್.ಎಫ್. ನಿಗಧಿತ ಮಾನಕ್ಕಿಂತ ಕಡಿಮೆಯಾಗಿ ಉತ್ಪಾದಕರ ಹಾಲು ಒಕ್ಕೂಟದಿಂದ ನಿರಾಕರಿಸಲ್ಪಟ್ಟಿತು. ಈ ವಿಷಯದಲ್ಲಿ ಒಕ್ಕೂಟವು ತಾನು ಪಡೆಯಬಹುದಾದ ಅಧಿಕ ಲಾಭವನ್ನು ಮಾತ್ರ ಪರಿಗಣಿಸಿದೆಯೇ ಹೊರತು, ರೈತರ ಉನ್ನತಿಯನ್ನಲ್ಲವೆನ್ನುವುದು ಹಲವು ಕಾರಣಗಳಿಗಾಗಿ ಸ್ಪಷ್ಟವಾಗುತ್ತದೆ.

ಎಸ್.ಎನ್.ಎಫ್ ಸೂತ್ರ ನಿರ್ಧರಿಸುವಾಗ ಯಾವ ಯಾವ ಭಾಗದ ಹಸುಗಳ ಹಾಲು ಹಿಂಡಿ ಪರೀಕ್ಷಿಸಿ ಸರಾಸರಿ ನಿರ್ಧರಿಸಲಾಯಿತು? ಎಂಬ ಪ್ರಶ್ನೆಗೆ ಇವತ್ತಿಗೂ ಒಕ್ಕೂಟದಿಂದ ಉತ್ತರವಿಲ್ಲ. ಈ ಪ್ರಶ್ನೆ ಕೇಳಿದರೆ ಏರಿಯಾ ವೈಸ್ ಮಿನರಲ್ ಮಿಕ್ಷ್ಚರ್ ಬಿಡುಗಡೆ ಮಾಡಿದ್ದೇವೆ ಎಂದು ಒಕ್ಕೂಟ ಉತ್ತರಿಸುತ್ತದೆ. ಆದರೆ ಅದನ್ನು ಖರೀದಿಸಿ ಬಳಸಿದರೆ ರೈತನಿಗೆ ಉತ್ಪಾದಕ ವೆಚ್ಛ ಅಧಿಕವಾಗುತ್ತದೆ. ಎಸ್‌. ಎನ್. ಎಫ್ ಸೂತ್ರ ಎಂಬುದು ಒಕ್ಕೂಟ ಉದ್ದಾರಕ್ಕೆ ಬಿಸಿನೆಸ್ ಐಡಿಯಾ ಆಯಿತೇ ವಿನಃ, ರೈತರಿಗೆ ಅನುಕೂಲ ಆಗಲೇ ಇಲ್ಲ.

ಕರ್ನಾಟಕದಲ್ಲಿ ಈ ವರೆಗೆ 3 ಬಾರಿ ಎಸ್.ಎನ್.ಎಫ್. ಮಾನದಂಡವನ್ನು ಬದಲಾಯಿಸಲಾಗಿದೆ. ಈ ರೀತಿ ಬದಲಾಯಿಸುವಾಗೆಲ್ಲ ಬೆಂಗಳೂರನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಿ ನಿರ್ಧಾರ ಮಾಡಲಾಗಿದೆ ಹಾಗೂ ಇತರ ಭಾಗಗಳನ್ನು ನಿರ್ಲಕ್ಷಿಸಲಾಗಿದೆ.

ಸೂತ್ರದ ಜತೆಗೆ ದರದ್ದೂ ಸಮಸ್ಯೆ:

ಉತ್ತರ ಕನ್ನಡ ಜಿಲ್ಲೆಯ ಹಾಲು ಉತ್ಪಾದಕರಿಗೆ ಅತಿ ಕಡಿಮೆ ದರ ದೊರೆಯುತ್ತಿದೆ. ಪಕ್ಕದ ದಕ್ಷಿಣ ಕನ್ನಡ ಹಾಲು ಒಕ್ಕೂಟವು ತನ್ನ ಹಾಲು ಉತ್ಪಾದಕರಿಗೆ ಕನಿಷ್ಟ ಕೊಬ್ಬು ಮತ್ತು ಎಸ್.ಎನ್.ಎಫ್ ಇರುವ ಹಾಲಿನ ಪ್ರತಿ ಲೀಟರ್‌ಗೆ ರೂ. 28. 67 ನೀಡುತ್ತಿದೆ. ಪ್ರತಿ ಪಾಯಿಂಟ್ ಕೊಬ್ಬಿಗೆ 0.17ರೂ ಹೆಚ್ಚು ನೀಡುತ್ತಿದೆ. ಒಟ್ಟಾರೆ ಅಲ್ಲಿನ ರೈತರು ಸರಾಸರಿ 32-33ರೂಪಾಯಿ ಅಲ್ಲಿನ ಒಕ್ಕೂಟದಿಂದ ಮತ್ತು 5 ರೂಪಾಯಿ ಸರಕಾರದ ಪ್ರೋತ್ಸಾಹ ಧನ ಪಡೆದು ಒಟ್ಟು 37-38 ರೂಪಾಯಿ ಪ್ರತಿ ಲೀಟರ್‌ಗೆ ಪಡೆಯುತ್ತಾರೆ.

ಆದರೆ ಉತ್ತರ ಕನ್ನಡದಲ್ಲಿ ಪ್ರತಿ ಲೀಟರ್‌ಗೆ 26.50ರೂಪಾಯಿಗಳನ್ನು ಪಡೆಯುತ್ತಾರೆ. ಬರೋಬ್ಬರಿ 10.50-11.60 ರೂಪಾಯಿ ಪ್ರತಿ ಲೀಟರ್‌ಗೆ ಪಕ್ಕದ ಜಿಲ್ಲೆಯ ರೈತರು ಹೆಚ್ಚುವರಿಯಾಗಿ ಪಡೆಯುತ್ತಿದ್ದರೆ, ಉತ್ತರ ಕನ್ನಡ ಹೈನೋದ್ಯಮಿಗಳು ಕಡಿಮೆ ದರದಲ್ಲಿ ಗುಣಮಟ್ಟದ ಹಾಲು ಮಾರಾಟ ಮಾಡುತ್ತಿದ್ದಾರೆ.

ಇವತ್ತು ಏನಿಲ್ಲ ಎಂದರೂ ಪ್ರತಿ ದಿನ ಉತ್ತರ ಕನ್ನಡ ಜಿಲ್ಲೆಯ ರೈತರು ಪ್ರತಿ ದಿನ 45 ಸಾವಿರ ಲೀಟರ್ ಹಾಲನ್ನು ಒಕ್ಕೂಟಕ್ಕೆ ಪೂರೈಸುತ್ತಾರೆ. ಕನಿಷ್ಟ 10 ರೂಪಾಯಿ ಪ್ರತಿ ಲೀಟರ್ ಹಾಲಿಗೆ ಕಡಿಮೆ ಎಂದರೂ ನಷ್ಟದ ಪ್ರಮಾಣ 4,50,000 ರೂಪಾಯಿ. ಇದರ ತಿಂಗಳ ಹಾಗೂ ವಾರ್ಷಿಕ ಲೆಕ್ಕಾಚಾರವನ್ನು ನೀವು ಮಾಡಿನೋಡಿ.

“4 ಲೀಟರ್ ಹಾಲು ಹಿಂಡುವ ಹಸು ಸಾಕಲು ದಿನವೊಂದಕ್ಕೆ 200 ರೂಪಾಯಿ ಖರ್ಚಾಗುತ್ತದೆ. ನನ್ನ ಬಳಿ ಎರಡು ಹಸುಗಳಿವೆ. ಮನೆ ಬಳಕೆಗೆ 2ಲೀಟರ್ ಇಟ್ಟುಕೊಂಡು, 6 ಲೀಟರ್ ಹಾಲು ಡೇರಿಗೆ ಮಾರುತ್ತೇನೆ. ಇದರಿಂದ ದಿನಕ್ಕೆ 159ರೂಪಾಯಿಗಳು ದೊರೆಯುತ್ತಿದೆ. ನನ್ನಂತೆಯೇ ಹೈನುಗಾರಿಕೆ ಮಾಡುವ ದಕ್ಷಿಣಕನ್ನಡದ ರೈತರು ಇಷ್ಟೆ ಉತ್ಪಾದನೆಗೆ ಪ್ರತಿದಿನ ನನಗಿಂತ 41ರೂಪಾಯಿ ಹೆಚ್ಚು ಗಳಿಸುತ್ತಾರೆ. ಹೀಗಿರುವಾಗ ಉತ್ತರ ಕನ್ನಡದವರು ಯಾಕೆ ಹೈನೋದ್ಯಮ ನಡೆಸಬೇಕು,’’ ಎಂಬುದು ಪ್ರಗತಿಪರ ಕೃಷಿಕ ರಾಘವೇಂದ್ರ ಬೆಟ್ಟಕೊಪ್ಪ ಅವರ ಪ್ರಶ್ನೆ.

ನಷ್ಟದ ಕಷ್ಟ ಎಲ್ಲರಿಗೂ:

ಹೈನೋದ್ಯಮದಲ್ಲಿ ರೈತರಿಗೆ ದೊರೆಯುತ್ತಿರುವ ಕಡಿಮೆ ಆದಾಯದ ಪರಿಣಾಮ ಸ್ಥಳೀಯ ಹಾಲು ಮಾರಾಟ ಸಹಕಾರಿ ಸಂಘದಮೇಲೆ ತೀವ್ರವಾಗಿ ಆಗಿದೆ. ರೈತರ ಕೃಷಿ ಜಮೀನು ಅಭಿವೃದ್ಧಿ ಮೇಲಾಗಿದೆ. ರೈತ ಮಕ್ಕಳ ವಿಧ್ಯಾಭಾಸದ ಮೇಲಾಗಿದೆ. ಆರೋಗ್ಯ ಸೌಲಭ್ಯ ಪಡೆಯಲೂ ಹಿನ್ನಡೆಯಾಗಿದೆ. ಖಾಸಗಿ ಹೈನೋದ್ಯಮ ಸಂಸ್ಥೆಗಳು ಮೇಲುಗೈ ಸಾಧಿಸುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಸಹಜವಾಗಿಯೇ ಹೈನುಗಾರಿಕೆ ಯಾಕೆ ಬೇಕು ಎಂಬ ಪ್ರಶ್ನೆಯನ್ನು ರೈತರು ಮುಂದಿಡುತ್ತಿದ್ದಾರೆ. ಇವರ ಪ್ರಶ್ನೆಗೆ ಉತ್ತರ ಇರುವುದು ಸಮಸ್ಯೆಯ ಮೂಲವನ್ನು ಹುಡುಕುವುದರಲ್ಲಿ. ಆ ಕೆಲಸವನ್ನು ಇದೇ ಸರಣಿಯ ‘ಸಮಾಚಾರ’ದ ಮಂದಿನ ವರದಿಗಳು ಮಾಡಲಿವೆ...

(ನಾಳೆಗೆ)