ಎಚ್‌ಡಿಕೆ ಮುಂದೆ ಶೂನ್ಯ ಕೃಷಿಯ ಪ್ರಸ್ತಾವ; ಯುವ ಜನರಿಲ್ಲದ ಹಳ್ಳಿಗಳಲ್ಲಿ ‘ಕೃಷಿಕ್ರಾಂತಿ’ಯ ಮಂತ್ರ!
GROUND REPORT

ಎಚ್‌ಡಿಕೆ ಮುಂದೆ ಶೂನ್ಯ ಕೃಷಿಯ ಪ್ರಸ್ತಾವ; ಯುವ ಜನರಿಲ್ಲದ ಹಳ್ಳಿಗಳಲ್ಲಿ ‘ಕೃಷಿಕ್ರಾಂತಿ’ಯ ಮಂತ್ರ!

ಎಸಿ ರೂಮಿನಲ್ಲಿ ಕುಳಿತು ಮಾದರಿ ಕೃಷಿಯ ನೀಲನಕ್ಷೆ ತಯಾರಿಸುವ ಪರಿಪಾಠ ಈಗ ಹೆಚ್ಚಾಗಿದೆ. ಸರಕಾರ ಹೇಳುತ್ತಿರುವ ಮಾದರಿ ಕೃಷಿಗೂ, ಗ್ರಾಮೀಣ ಪ್ರದೇಶದ ಇಂದಿನ ಕೃಷಿಯ ಪರಿಸ್ಥಿತಿಗೂ ದೊಡ್ಡ ಅಂತರವಿದೆ.

“ಪಟ್ಟಣ ಸೇರಿರೋ ಮಕ್ಕಳು ಮತ್ತೆ ಹಳ್ಳಿಗಳ ಕಡೆಗೆ ಮುಖ ಮಾಡೋದು ಕಷ್ಟ. ಕೃಷಿ ಅನ್ನೋದು ಈಗೇನಿದ್ದರೂ ಹಳ್ಳಿಗಳಲ್ಲಿ ಉಳಿದಿರೋ ವಯಸ್ಸಾದವರ ವ್ಯವಸಾಯ ಅಷ್ಟೇ. ಮಕ್ಕಳು ಮತ್ತೆ ವ್ಯವಸಾಯಕ್ಕೆ ಬರ್ತಾರೆ ಅನ್ನೋ ಭರವಸೆ ಉಳಿದಿಲ್ಲ...”

- ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನ ಮಾರತಮ್ಮನಹಳ್ಳಿಯ ರೇವಯ್ಯ ಅವರ ಬೇಸರದ ಮಾತುಗಳಿವು. ಯುವ ಜನರು ಕೃಷಿಗೆ ವಿಮುಖರಾಗುತ್ತಿರುವ ಬಗ್ಗೆ ಹಳ್ಳಿಗಳಲ್ಲಿರುವ ಬಹುತೇಕ ಹಿರಿಯ ತಲೆಗಳ ಆತಂಕವಿದು. ಇದು ಕೇವಲ ಮಾರತಮ್ಮನಹಳ್ಳಿಯೊಂದರ ಕಥೆಯಲ್ಲ, ರಾಜ್ಯದ ಬಹುತೇಕ ಹಳ್ಳಿಗಳ ಸ್ಥಿತಿ ಹೆಚ್ಚೂ ಕಡಿಮೆ ಹೀಗೆಯೇ ಇದೆ.

“ಹಳ್ಳಿಗಳೇ ನಿಜವಾದ ಭಾರತ”, “ರೈತನೇ ದೇಶದ ಬೆನ್ನೆಲುಬು” ಎಂಬ ಘೋಷಣೆಗಳೆಲ್ಲವೂ ಈಗ ಸವಕಲಾಗಿವೆ. ಗ್ರಾಮೀಣ ಭಾಗದ ಕೃಷಿಯ ಇಂದಿನ ಪರಿಸ್ಥಿತಿ ಹಾಗೂ ಸರಕಾರಗಳ ನೀತಿ ನಿರೂಪಣೆಗಳ ನಡುವೆ ಸಾಕಷ್ಟು ಕಂದರವಿದೆ. ಕೃಷಿಯ ವಸ್ತು ಸ್ಥಿತಿ ಹಾಗೂ ಮಾದರಿ ಕೃಷಿಯ ಸಮೀಕರಣದಲ್ಲಿ ವೈರುಧ್ಯವೇ ಹೆಚ್ಚಾಗಿದೆ.

ವಿಪ್ರೊ ಪ್ರತಿಷ್ಠಾನದ ಅಧ್ಯಕ್ಷ ಅಜೀಂ ಪ್ರೇಮ್‌ ಜೀ ಮತ್ತು ಐಟಿಸಿಯ ಹಿರಿಯ ಉಪಾಧ್ಯಕ್ಷ ಜೋಗಾರಾವ್‌ ಇತ್ತೀಚೆಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮುಂದೆ ಶೂನ್ಯ ಕೃಷಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಇಸ್ರೇಲ್‌ ಕೃಷಿಯ ಬಗ್ಗೆ ಪ್ರಸ್ತಾಪಿಸಿದ್ದ ಎಚ್‌ಡಿಕೆ ಮುಂದೆ ಈಗ ಹೆಚ್ಚು ಬಂಡವಾಳ ಹಾಗೂ ಶ್ರಮ ಬೇಡದ ಶೂನ್ಯ ಕೃಷಿಯ ಮಾದರಿಯನ್ನು ‘ಉದ್ಯಮಿಗಳು’ ಮುಂದಿಟ್ಟಿದ್ದಾರೆ.

Also read: ಏನಿದು, ಸಿಎಂ ಮುಂದೆ ಅಜೀಂ ಪ್ರೇಮ್‌ಜಿ ಪ್ರಸ್ತಾಪಿಸಿದ ‘ಶೂನ್ಯ ಬಂಡವಾಳ ಕೃಷಿ’?  

ಶೂನ್ಯ ಕೃಷಿಯ ಬಗ್ಗೆ ಪ್ರಸ್ತಾಪಿಸಿರುವ ಅಜೀಂ ಪ್ರೇಮ್‌ ಜಿ ಹಾಗೂ ಜೋಗಾರಾವ್‌ ಇಬ್ಬರೂ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವವರು. ಶೂನ್ಯ ಕೃಷಿಯ ಬಗ್ಗೆ ಈ ಇಬ್ಬರು ಉದ್ಯಮಿಗಳು ನಾಡಿನ ಮುಖ್ಯಮಂತ್ರಿ ಮುಂದೆ ಪ್ರಸ್ತಾಪ ಮಾಡಿರುವುದು ಒಂದು ಕಡೆ ಕೃಷಿಯ ಖಾಸಗೀಕರಣದ ಆರಂಭದಂತೆ ಕಾಣುತ್ತಿದ್ದರೆ ಮತ್ತೊಂದು ಕಡೆ ಗ್ರಾಮೀಣ ಭಾಗದಲ್ಲಿ ಕೃಷಿಯ ಬಗ್ಗೆ ಯುವಜನರ ಅನಾದರ ಎದ್ದು ಕಾಣುತ್ತಿದೆ.

ಕೃಷಿಯ ಬಗ್ಗೆ ಹೊಸ ಪೀಳಿಗೆಯ ಅನಾದರ ಮತ್ತು ನಿರಾಸಕ್ತಿ ಕೃಷಿಯ ಖಾಸಗೀಕರಣಕ್ಕೆ ಕನ್ನೆನೆಲದಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಯುವ ಜನರು ಕೈ ಕೆಸರು ಮಾಡಿಕೊಳ್ಳದ ಕೆಲಸಗಳನ್ನು ಅರಸುತ್ತಾ ಹತ್ತಿರದ ಪಟ್ಟಣ, ನಗರಗಳಿಗೆ ಹರಿದುಹೋಗುತ್ತಿದ್ದಾರೆ. ಒಮ್ಮೆ ಹಳ್ಳಿಗಳಿಂದ ಹೊರಟು ಪಟ್ಟಣ ಸೇರಿದ ಯುವ ಜನರು ಮತ್ತೆ ಹಳ್ಳಿಗಳ ಕಡೆಗೆ ಮುಖ ಮಾಡುತ್ತಿಲ್ಲ. ಪಟ್ಟಣದಲ್ಲಿ ಹೋಟೆಲ್‌ ಸೇರಿ ಕೆಲಸ ಮಾಡಿದರೂ ಪರವಾಗಿಲ್ಲ, ಹಳ್ಳಿಯ ಜಮೀನಿನಲ್ಲಿ ಮಣ್ಣು ಅಗೆಯಲು ಯುವ ಜನರು ಸಿದ್ಧರಿಲ್ಲ.

ಹಳ್ಳಿಗಳು ಯುವ ಜನರಿಗೆ ಈಗ ಬದುಕು ಕಟ್ಟಿಕೊಳ್ಳಲಾಗದ ಹಳೆಯ ಕೊಂಪೆಗಳಂತೆ ಕಾಣುತ್ತಿವೆ. ಮೈಯಲ್ಲಿ ಹೆಚ್ಚು ಶಕ್ತಿ ಇಲ್ಲದ ವಯಸ್ಸಾದವರಷ್ಟೇ ಈಗ ಹಳ್ಳಿಗಳಲ್ಲಿ ಕೃಷಿಯ ಕೈ ಹಿಡಿದಿದ್ದಾರೆ. ಹೊಸ ತಲೆಮಾರು ಕೃಷಿಯ ಕಡೆಗೆ ಒಲವನ್ನೇ ತೋರುತ್ತಿಲ್ಲ. ಸಣ್ಣ ಹಿಡುವಳಿಯ ತುಂಡು ಕೃಷಿ ಭೂಮಿ, ಮಳೆಯ ಅಭಾವ, ಹೆಚ್ಚು ಆದಾಯ ಗಿಟ್ಟಿಸಿಕೊಡದ ಕೃಷಿ ಈಗ ಹೊಸ ತಲೆಮಾರಿಗೆ ಬೇಡವಾಗಿದೆ. ಒಮ್ಮೆ ಊರು ಬಿಟ್ಟ ಯುವ ಜನರು ಮತ್ತೆ ಊರಿಗೆ ಬಂದು ಕೃಷಿ ಕೆಲಸಕ್ಕೆ ತೊಡಗಿರುವ ಉದಾಹರಣೆಗಳು ಗ್ರಾಮೀಣ ಭಾಗದಲ್ಲಿ ಕಡಿಮೆ.

Also read: ಕುಮಾರಸ್ವಾಮಿ ಕನಸಿನ ಇಸ್ರೇಲ್ ಕೃಷಿ: ಏನಿದು ಮಂಡ್ಯದಲ್ಲಿ ಆರಂಭಗೊಂಡ ‘ಕಿಬೂತ್’ ಪ್ರಯೋಗ?

ಹಿಂದುಳಿದ ಜಿಲ್ಲೆಗಳ ಬಹುತೇಕ ಹಳ್ಳಿಗಳ ಸ್ಥಿತಿ ಈ ಹೊತ್ತಿಗೆ ಹೀಗೆಯೇ ಇದೆ. ನಾಲ್ಕೈದು ವರ್ಷಗಳ ಹಿಂದೆ ಕೃಷಿಯ ಬಗ್ಗೆ ಇದ್ದ ಕನಿಷ್ಠ ಆಸಕ್ತಿಯೂ ಈಗ ಯುವ ಜನರಲ್ಲಿ ಉಳಿದಿಲ್ಲ. ಕೃಷಿ ಬಗ್ಗೆ ಯುವ ಜನರ ಈ ಅಸಡ್ಡೆ ಕಂಡು ಹಳ್ಳಿಗಳ ಹಿರಿ ಜೀವಗಳಲ್ಲಿ ಆತಂಕ ಮನೆ ಮಾಡಿದೆ. ಒಮ್ಮೆ ಊರು ಬಿಟ್ಟ ಮಗ, ಮಗಳು ಮತ್ತೆ ಹಳ್ಳಿಗಳ ಕಡೆಗೆ ಮುಖ ಮಾಡುತ್ತಿಲ್ಲ. ಮೊದಲು ನಾಟಿ, ಕೊಯ್ಲಿನ ಸಮಯಕ್ಕಾದರೂ ಊರಿಗೆ ಬರುತ್ತಿದ್ದ ಬಹುತೇಕ ಮಕ್ಕಳು ಈಗ ಊರಿನ ಜಾತ್ರೆ, ಹಬ್ಬಗಳಿಗಷ್ಟೇ ಬರುತ್ತಾರೆ ಎಂಬ ಕೊರಗು ಹಳ್ಳಿಗಳಲ್ಲಿರುವ ಹಲವು ಹಿರಿ ಜೀವಿಗಳನ್ನು ಕಾಡುತ್ತಿದೆ.

“ಎಸ್ಸೆಸ್ಸೆಲ್ಸಿವರೆಗೆ ಓದಿದ್ದ ಮಗ ಒಂದಷ್ಟು ದಿನ ಬೇಸಾಯ ಮಾಡಿಕೊಂಡು ಊರಲ್ಲೇ ಇದ್ದ. ಮೂರು ಎಕರೆ ಜಮೀನಿನಲ್ಲಿ ಮುಂಗಾರಿಗೆ ಕಾಳು, ಹಿಂಗಾರಿಗೆ ರಾಗಿ ಬೆಳೆದುಕೊಂಡಿದ್ದೆವು. ಮೂರು ವರ್ಷದ ಹಿಂದೆ ಮಳೆ ಕಡಿಮೆಯಾಗಿ ರಾಗಿ ಬೆಳೆ ಕೈಗೆ ಬರಲಿಲ್ಲ. ಆಗ ಬೆಂಗಳೂರು ಸೇರಿದ ಮಗ ಈಗ ಊರಿಗೆ ವಾಪಸ್‌ ಬರಲು ಹಿಂದೇಟು ಹಾಕುತ್ತಿದ್ದಾನೆ. ಈ ಕೊಂಪೆಗೆ ಬಂದು ಮೂರು ಎಕರೆ ಜಮೀನಿನಲ್ಲಿ ಏನು ಮಾಡಲಿ ಎಂದು ಕೇಳುತ್ತಾನೆ. ಹೆಚ್ಚು ಮಾತನಾಡಿದರೆ ನಮ್ಮನ್ನೇ ಬೆಂಗಳೂರಿಗೆ ಬರುವಂತೆ ಒತ್ತಾಯಿಸುತ್ತಾನೆ” ಎನ್ನುತ್ತಾರೆ ಮಾರತಮ್ಮನಹಳ್ಳಿಯ ರೇವಯ್ಯ.

“ಮೊದಲು ಮಗ ನಾಟಿ ಸಮಯದಲ್ಲಿ, ಬೆಳೆ ಕಟಾವಿನ ಕಾಲದಲ್ಲಿ ಊರಿಗೆ ಬಂದು ಕೆಲಸ ಮಾಡಿ ಹೋಗುತ್ತಿದ್ದ. ಹೋದ ವರ್ಷದಿಂದ ಅದೂ ತಪ್ಪಿದೆ. ಟ್ರಾಕ್ಟರ್‌, ಕಳೆ ಕೀಳುವ ಮಷೀನ್‌, ಕಟಾವಿನ ಮಷೀನ್‌ ಇಲ್ಲದೇ ಹೊಗಿದ್ದರೆ ನಾವೂ ಕೃಷಿ ಬಿಡಬೇಕಿತ್ತು. ಇರುವ ಜಮೀನನ್ನು ಹಾಗೇ ಬಿಟ್ಟರೆ ಬೀಳು ಬೀಳುತ್ತದೆ ಎಂಬ ಕಾರಣಕ್ಕೆ ಹೇಗೋ ಕಷ್ಟ ಪಟ್ಟು ಬೇಸಾಯ ಮಾಡಿಕೊಂಡು ಹೋಗುತ್ತಿದ್ದೇವೆ” ಎಂಬ ಅಸಮಾಧಾನ ಅವರದ್ದು.

ಇದು ಸಣ್ಣ ಹಿಡುವಳಿಯ ತುಂಡು ಜಮೀನಿರುವವರ ಸಮಸ್ಯೆ ಮಾತ್ರವಲ್ಲ. ಹೆಚ್ಚು ಜಮೀನಿರುವ, ಅಚ್ಚುಕಟ್ಟಾದ ತೋಟ ಇರುವ ಬಹುತೇಕ ಮನೆಗಳ ಸಮಸ್ಯೆಯೂ ಇದೇ. ಹಳ್ಳಿಗಳು ಈಗ ಬದುಕು ಕಟ್ಟಿಕೊಳ್ಳುವ ನೆಲೆಗಳಲ್ಲ ಎಂದು ಬಹುತೇಕ ಯುವ ಜನರು ತೀರ್ಮಾನ ಮಾಡಿದಂತಿದೆ. ಮೊದಲು ಕಲಿತವರಷ್ಟೇ ಹಳ್ಳಿಗಳನ್ನು ಬಿಟ್ಟು ಪಟ್ಟಣ ಸೇರುತ್ತಿದ್ದರು. ಆದರೆ, ಈಗ ಕಲಿಯದ ಯುವಕರೂ ಪಟ್ಟಣ, ನಗರಗಳನ್ನು ಸೇರಿ ಹಳ್ಳಿಗಳನ್ನು ಮರೆಯುತ್ತಿದ್ದಾರೆ. ಹೆಚ್ಚು ಜಮೀನಿರುವ ಹಿರಿಯ ಜೀವಗಳದ್ದೂ ಈಗ ಇದೇ ಕೊರಗು.

“ಹಳ್ಳಿಗಳಲ್ಲಿ ಕೃಷಿಯ ಕೆಲಸ ಮಾಡಲಾಗದ ಸ್ಥಿತಿಯಲ್ಲಿರುವ ವಯಸ್ಸಾದವರು ಈಗ ಕೃಷಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ದುಡಿಯಲು ಶಕ್ತಿ ಇರುವ ಯುವ ಜನರು ಕೃಷಿಯಿಂದ ದೂರವಾಗಿ ಪಟ್ಟಣಗಳಲ್ಲಿ ಏನೇನೋ ಕೆಲಸ ಮಾಡುತ್ತಿದ್ದಾರೆ. ಕೃಷಿಯ ಬಗ್ಗೆ ಇಂದಿನ ಬಹುತೇಕ ಯುವ ಜನರಿಗೆ ಆಸಕ್ತಿ ಇಲ್ಲ. ಕೃಷಿ ಕೆಲಸ ಮಾಡುವುದು ಲಾಭದಾಯಕವಲ್ಲ, ಅದು ವಿದ್ಯಾವಂತರಲ್ಲದವರ ಕೆಲಸ ಎಂದು ಕಲಿತಿರುವ ಬಹುತೇಕ ಯುವ ಜನರು ಭಾವಿಸಿಕೊಂಡಿದ್ದಾರೆ” ಎನ್ನುತ್ತಾರೆ ಕುರುಬರಹಳ್ಳಿಯ ಮಾರಣ್ಣ.

“ಬಹುತೇಕ ಯುವ ಜನರು ಪಟ್ಟಣ, ನಗರ ಸೇರಿ ಅಲ್ಲಿ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದರ ಬದಲು ಹಳ್ಳಿಗಳಲ್ಲಿ ಜಮೀನು ಅಚ್ಚುಕಟ್ಟು ಮಾಡಿಕೊಂಡು ಕೃಷಿ ಮಾಡುವ ಮನಸ್ಸು ಮಾಡುತ್ತಿಲ್ಲ. ನಾವು ಇರುವವರೆಗೂ ಜಮೀನು, ತೋಟಗಳನ್ನು ಹೇಗೋ ಉಳಿಸಿಕೊಳ್ಳುತ್ತೇವೆ. ನಮ್ಮ ಮುಂದಿನ ತಲೆಮಾರು ಹಳ್ಳಿಗಳ ಕಡೆಗೆ ಮತ್ತೆ ವಾಪಸ್‌ ಬರುತ್ತದೆ ಎಂಬ ನಂಬಿಕೆ ನನಗಿಲ್ಲ” ಎಂದು ಬೇಸರಿಸಿಕೊಳ್ಳುತ್ತಾರೆ ಅವರು.

ಒಮ್ಮೆ ಪಟ್ಟಣ ಸೇರಿದ ಯುವ ಜನರು ಮತ್ತೆ ಹಳ್ಳಿಗಳ ಕಡೆಗೆ ಮುಖ ಮಾಡುವುದು ಕಷ್ಟ. ಕೃಷಿ ಇಂದಿಗೆ ಲಾಭದಾಯಕವಲ್ಲ ಎಂಬ ಮನಸ್ಥಿತಿ ಬಹುತೇಕರಲ್ಲಿದೆ. ಹೀಗಾಗಿ ಕೃಷಿಯ ಕಡೆಗೆ ಯುವ ಜನರು ಆಕರ್ಷಿತರಾಗುತ್ತಿಲ್ಲ. ಬೆಳೆಗೆ ಸರಿಯಾದ ಬೆಲೆ ಸಿಗದೇ ಇರುವುದು, ಮಾರುಕಟ್ಟೆಯ ಅನಿಶ್ಚಿತತೆ, ನೈಸರ್ಗಿಕ ವಿಕೋಪಗಳ ಕಾರಣಕ್ಕೆ ಕೃಷಿಯನ್ನು ನೆಚ್ಚಿಕೊಳ್ಳುವಂಥ ಸ್ಥಿತಿಯಲ್ಲಿ ಯುವ ಜನರು ಇಲ್ಲ. ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ಕೊಡಿಸುವ, ಮಾರುಕಟ್ಟೆ ಸ್ಥಿರವಾಗಿರುವಂತೆ ನೋಡಿಕೊಳ್ಳುವ ಹಾಗೂ ನೈಸರ್ಗಿಕ ವಿಕೋಪದ ಪರಿಸ್ಥಿತಿಯಲ್ಲಿ ಸೂಕ್ತ ಪರಿಹಾರ ಒದಗಿಸುವ ಕಡೆಗೆ ಸರಕಾರ ಮನಸ್ಸು ಮಾಡಬೇಕು. ಈ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಿದರೆ ಮಾತ್ರ ಕೃಷಿಯ ಭವಿಷ್ಯದ ಬಗ್ಗೆ ಭರವಸೆ ಉಳಿಸಿಕೊಳ್ಳಬಹುದು.
- ಚಾಮರಸ ಮಾಲಿ ಪಾಟೀಲ್‌, ಗೌರವಾಧ್ಯಕ್ಷ, ರೈತ ಸಂಘ ಹಾಗೂ ಹಸಿರು ಸೇನೆ

ಒಂದು ಕಡೆ ರಾಜಧಾನಿಯಲ್ಲಿ ಕುಳಿತು ಸರಕಾರ ಹಾಗೂ ಖಾಸಗಿ ಕಂಪೆನಿಗಳ ದೊಡ್ಡ ಜನರು ಮಾದರಿ ಕೃಷಿಯ ಹಚ್ಚ ಹಸುರಿನ ಕನಸು ಕಾಣುತ್ತಿದ್ದರೆ ಹಿಂದುಳಿದ ಭಾಗಗಳ ಗ್ರಾಮೀಣ ಪ್ರದೇಶದಲ್ಲಿ ಯುವಕರಿಗೆ ಈ ಹೊತ್ತಿಗೆ ಕೃಷಿ ಬದುಕಿನ ಭರವಸೆಯಾಗಿಯೇ ಉಳಿದಿಲ್ಲ. ಕೃಷಿಯ ಬಗ್ಗೆ ಯುವಜನರ ಈ ಅನಾದರಕ್ಕೆ ಪ್ರಕೃತಿಯೂ ಪೂರಕವಾಗಿಯೇ ಇದೆ. ಒಂದು ವರ್ಷ ಕಡಿಮೆ ಮಳೆ ಬಂದು ಬೆಳೆ ಹಾನಿಯಾದರೆ, ಮತ್ತೊಂದು ವರ್ಷ ಹೆಚ್ಚು ಮಳೆ ಬಂದು ಬೆಳೆ ಹಾನಿಯಾಗುತ್ತದೆ. ಈ ನೈಸರ್ಗಿಕ ವಿಕೋಪವೂ ಯುವ ಜನರು ಕೃಷಿಯಿಂದ ದೂರವಾಗುವಂತೆ ಮಾಡಿದೆ.

“ಒಂದು ವರ್ಷ ಸರಿಯಾಗಿ ಮಳೆಯಾದರೆ, ನಾಲ್ಕು ವರ್ಷ ಮಳೆ ಬರುವುದಿಲ್ಲ. ತೋಟ ನಿಗಾ ಮಾಡಲು ಬೋರ್‌ವೆಲ್‌ಗಳಲ್ಲಿ ನೀರಿಲ್ಲ. ಮೇಲು ಬೆಳೆ ಬೆಳೆದುಕೊಂಡು ಕಷ್ಟದಲ್ಲಿ ಜೀವನ ಸಾಗಿಸುವ ಬದಲು ಪಟ್ಟಣಗಳ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿಕೊಂಡು ಅಷ್ಟೋ ಇಷ್ಟೋ ಉಳಿಸಿ ಪಟ್ಟಣದಲ್ಲೇ ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದೇನೆ” ಎಂಬುದು ಹಳ್ಳಿ ಬಿಟ್ಟು ತುಮಕೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಉಮೇಶ್‌ ಅವರ ಮಾತು.

“ಸರಕಾರಿ ಕೆಲಸದಲ್ಲಿರುವ ಕೆಲವರು ಕೆಲಸದ ಜತೆಗೆ ಕೃಷಿಯನ್ನೂ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ, ಖಾಸಗಿ ಫ್ಯಾಕ್ಟರಿಗಳಲ್ಲಿ ದುಡಿಯುವ ನಮಗೆ ಆ ಅನುಕೂಲ ಇಲ್ಲ. ನಾಟಿಗೆ, ಕೊಯ್ಲಿಗೆ ರಜೆ ಕೊಡಿ ಎಂದು ಕೇಳಲು ಈಗ ಆಗುವುದಿಲ್ಲ. ಇಲ್ಲಿನ ಕೆಲಸದಲ್ಲಿ ಜವಾಬ್ದಾರಿ ಹೆಚ್ಚಿದಂತೆಲ್ಲಾ ಹಳ್ಳಿಯ ಕೆಲಸಗಳನ್ನು ಮರೆಯುವುದು ಅನಿವಾರ್ಯ. ಪರಿಸ್ಥಿತಿ ಎಲ್ಲವೂ ಚೆನ್ನಾಗಿದ್ದರೆ ಫ್ಯಾಕ್ಟರಿ ಕೆಲಸವನ್ನೂ ಮಾಡಿಕೊಂಡು, ಕೃಷಿಯನ್ನೂ ಮಾಡಬಹುದು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ” ಎನ್ನುತ್ತಾರೆ ಉಮೇಶ್‌.

ಯುವಕರು ಕೃಷಿಯನ್ನೂ ನೋಡಿಕೊಂಡು, ಪಟ್ಟಣಗಳಲ್ಲಿ ಕೆಲಸವನ್ನೂ ನಿಭಾಯಿಸಿಕೊಂಡು ಹೋಗುವುದು ಕಷ್ಟ ಎಂಬುದನ್ನು ಹಳ್ಳಿಗಳಲ್ಲಿರುವ ಬಹುತೇಕ ಹಿರಿಯರೂ ಒಪ್ಪುತ್ತಾರೆ. ಆದರೆ, ಮನೆ ಮಕ್ಕಳು ಊರನ್ನು ಮರೆಯುತ್ತಿರುವುದು ಹಾಗೂ ಮುಂದೆ ಅವರು ಮತ್ತೆ ಹಳ್ಳಿಗಳಿಗೆ ಮರಳಲಾಗದ ಸ್ಥಿತಿಯ ಬಗ್ಗೆ ಹಿರಿಯರಲ್ಲಿ ತೀವ್ರ ಹತಾಶೆಯಿದೆ.

ಹೇಗಾದರೂ ಮಾಡಿ ಮಕ್ಕಳನ್ನು ಮತ್ತೆ ಹಳ್ಳಿಗಳಿಗೆ ಬರುವಂತೆ ಮಾಡಬೇಕು ಎಂಬ ಬಯಕೆ ಹಳ್ಳಿಗಳಲ್ಲಿರುವ ವಯಸ್ಸಾದವರದ್ದು. ಆದರೆ, ವಯಸ್ಸಾದ ಹಿರಿಯರನ್ನು ಪಟ್ಟಣಗಳಿಗೆ ಕರೆ ತರುವ ಬಗ್ಗೆ ಯೋಚಿಸುತ್ತಿರುವ ಮಕ್ಕಳು ಮತ್ತೆ ಹಳ್ಳಿಗಳ ಕಡೆಗೆ ಮುಖ ಮಾಡುವ ಸಾಧ್ಯತೆ ಕಡಿಮೆ. ಇತ್ತ ಯುವ ಜನರಿಲ್ಲದ ಸ್ಥಿತಿಯಲ್ಲಿರುವ ಹಳ್ಳಿಗಳು ನಿಧಾನವಾಗಿ ವೃದ್ಧಾಶ್ರಮಗಳ ಸ್ವರೂಪ ಪಡೆದುಕೊಳ್ಳುತ್ತಿವೆ.