samachara
www.samachara.com
‘ಕೆಸಿ ವ್ಯಾಲಿ ಫಾಲೋಅಪ್‌’: ಬರದ ನಾಡಿಗೆ ನೀರುಣಿಸಲು ಹೊರಟ ಬೆಳ್ಳಂದೂರು ಕೆರೆಯ ನರಕ ದರ್ಶನ
GROUND REPORT

‘ಕೆಸಿ ವ್ಯಾಲಿ ಫಾಲೋಅಪ್‌’: ಬರದ ನಾಡಿಗೆ ನೀರುಣಿಸಲು ಹೊರಟ ಬೆಳ್ಳಂದೂರು ಕೆರೆಯ ನರಕ ದರ್ಶನ

ಕೆಸಿ ವ್ಯಾಲಿ ಯೋಜನೆಯ ನೀರು ಹರಿಯಲು ಪ್ರಾರಂಭಿಸಿ ಕೆಲವು ದಿನಗಳು ಕಳೆಯುವ ಮೊದಲೇ ನೊರೆಯನ್ನು ಕಂಡಿದೆ. ನೊರೆ ಮೂಲವಾಗಿರುವ ಬೆಳ್ಳಂದೂರು ಕೆರೆಯ ಸ್ಥಿತಿ ಹೇಗಿದೆ ಎಂಬುದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ. 

ಜುಲೈ 24ರ ಮಂಗಳವಾರ ಕರ್ನಾಟಕ ಹೈಕೋರ್ಟ್ ಕೆಸಿ ವ್ಯಾಲಿ ಯೋಜನೆಯ ವಿಚಾರದಲ್ಲಿ ಮಹತ್ವದ ತೀರ್ಪು ನೀಡಿದೆ. ಬರಪೀಡಿತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜೆಲ್ಲೆಗಳ ಕೆರೆಗಳಿಗೆ ವ್ಯಾಲಿಯಿಂದ ನೀರು ಹರಿಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ. 

ಸತತ ಬರ ಅನುಭವಿಸುತ್ತಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 6 ತಾಲೂಕುಗಳಿಗೆ ಬೆಂಗಳೂರಿನ ತಾಜ್ಯ ನೀರನ್ನು ಸಂಸ್ಕರಿಸಿ ಬಿಡುವುದೇ ಕೆಸಿ ವ್ಯಾಲಿ ಯೋಜನೆ. ಈ ಕುರಿತು ಕರ್ನಾಟಕ ಸರಕಾರ ಬಿಡುಗಡೆ ಮಾಡಿದ್ದ ಕಿರು ಚಿತ್ರವೊಂದು, ಭಾರತದ ಇತಿಹಾಸದಲ್ಲೇ ಮಹತ್ತರವಾದ ಮೈಲಿಗಲ್ಲು ಎಂದು ಯೋಜನೆಯನ್ನು ಕರೆದಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ 134 ಕರೆಗಳಿಗೆ ಏತ ನೀರಾವರಿ ಮತ್ತು ಏರುಗುರುತ್ವ ಕೊಳವೆಗಳ ಮೂಲಕ ನೀರು ಹರಿಸಲು ಕಾರ್ಯ ಯೋಜನೆಗೆ ‘ಕೋರಮಂಗಲ ಚಲ್ಲಗಟ್ಟ ಬೃಹತ್‌ ಏತ ನೀರಾವರಿ ಯೋಜನೆ’ ಎಂದು ಮಾಹಿತಿ ನೀಡಿತ್ತು.

ಕೋರಮಂಗಲ ಚಲ್ಲಘಟ್ಟ ಕಣಿವೆ(ಕೆ ಸಿ ವ್ಯಾಲಿ) ಪ್ರದೇಶದಿಂದ 310 ದಶಲಕ್ಷ ಲೀಟರ್‌, ಬೆಳ್ಳಂದೂರು ಕೆರೆಯಿಂದ 90 ದಶಲಕ್ಷ ಲೀಟರ್ ಮತ್ತು ಕಾಡುಬೀಸನಹಳ್ಳಿಯಿಂದ 40 ದಶಲಕ್ಷ ಲೀಟರ್‌ ‘ಸಂಸ್ಕರಿತ ಕೊಳಚೆ ನೀುರು’ ಉತ್ಪಾದನೆಯಾಗುತ್ತದೆ. ಮೊದಲು ಕೆಸಿ ವ್ಯಾಲಿಯಿಂದ ಹೊರಟ ನೀರು ಬೆಳ್ಳಂದೂರು ಕೆರೆ ಸೇರುತ್ತದೆ. ನಂತರ ಬೆಳ್ಳಂದೂರು ಕೆರೆಯಿಂದ 400 ದಶಲಕ್ಷ ಲೀಟರ್‌ ನೀರು ಮತ್ತು ಕಾಡುಬೀಸನಹಳ್ಳಿ ಕೆರೆಯ 40 ದಶಲಕ್ಷ ಲೀಟರ್‌ ಕೊಳಚೆ ನೀರು ಸಂಸ್ಕರಿತಗೊಂಡು ಸುಮಾರು 40 ಕಿಲೋಮೀಟರ್‌ನಷ್ಟು ದೂರವಿರುವ ನರಸಾಪುರಕ್ಕೆ ಹರಿದು ಸಾಗುತ್ತದೆ. ಅಲ್ಲಿಂದ ಬೇರೆ ಬೇರೆ ತಾಲೂಕುಗಳ ಕೆರೆಗಳಿಗೆ ಪಂಪ್‌ ಮಾಡುವುದರ ಮೂಲಕ, ಉಳಿದ ಕೆಲವು ಕೆರೆಗಳಿಗೆ ಗುರುತ್ವಾಕರ್ಷಣ ಬಲದಿಂದಲೇ ನೀರು ಹರಿಯುತ್ತದೆ.

ಜೂನ್‌ 2ರಂದು ಈ ಯೋಜನೆಯ ನೀರು ಮೊದಲು ನರಸಾಪುರ ಸಮೀಪದ ಲಕ್ಷ್ಮಿಸಾಗರ ಕೆರೆಗೆ ಹರಿದಿತ್ತು. ಬರದಿಂದ ನರಳಿದ್ದ ಜನರು ಸಂಸತದಿಂದ ಕೇಕೆ ಹಾಕಿದ್ದರು. ಆದರೆ ಈ ನೀರನ್ನು ಕೃಷಿಗೆ, ಜಾನುವಾರುಗಳಿಗೆ, ಕುಡಿಯುವುದಕ್ಕೆ ಬಳಸುವುದೇಗೆ ಎಂಬ ಆತಂಕ ಬೆನ್ನಿಗೇ ಕೇಳಿಬಂತು. ಈ ಕುರಿತು ಜೂನ್‌ ತಿಂಗಳಿನಲ್ಲಿಯೇ ಶಾಶ್ವತ ನೀರಾವರಿ ಹೋರಾಟ ಸಮಿತಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಹೈಕೋರ್ಟ್‌ ನೀರು ಹರಿಸುವುದನ್ನು ನಿಲ್ಲಿಸುವಂತೆ ಸೂಚಿಸಿತು.

Also read: ‘ನೊರೆ ನೀರಿ’ಗೆ ಹೈಕೋರ್ಟ್‌ ಬರೆ: ಕೆಸಿ ವ್ಯಾಲಿ ನೀರು ಪಂಪ್‌ ಮಾಡದಂತೆ ಮಧ್ಯಂತರ ಆದೇಶ

ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಬೇಕು ಎಂದು ಹೊರಟ್ಟಿದ್ದೇನೋ ಸರಿ. ಆದರೆ, ಬೆಂಗಳೂರಿನ ಜನ ಬಳಸಿ ಬಿಟ್ಟ ನೀರೇ ಯಾಕೆ ಎಂಬ ಪ್ರಶ್ನೆಯೂ ಯೋಜನೆಯ ಆರಂಭದ ಹಂತದಲ್ಲಿಯೇ ಹುಟ್ಟಿತ್ತು. ನೀರು ಶುದ್ಧೀಕರಣಗೊಂಡು ಬರುತ್ತದೆ ಎಂದಾದಾದರೂ ಕೂಡ ಮಾನಸಿಕವಾಗಿ ಅದು ಕೊಳಚೆ ನೀರು ಎಂಬ ಭಾವನೆ ಬೇರೂರಿತ್ತು. ಈಗ ಹರಿಯುತ್ತಿರುವ ನೊರೆ ಅದನ್ನು ಇಮ್ಮಡಿಗೊಳಿಸಿದೆ. ಇನ್ನೂ ಶುದ್ಧೀಕರಣಗೊಳ್ಳದ ಬೆಳ್ಳಂದೂರು ಕೆರೆಯ ನೀರನ್ನೇ ಇದು ನೆನಪಿಗೆ ತರಿಸುತ್ತದೆ. ಇಷ್ಟಕ್ಕೂ ಬೆಳ್ಳಂದೂರು ಕೆರೆಯ ಸ್ಥಿತಿ ಇವತ್ತು ಹೇಗಿದೆ? ಈ ಕುರಿತಾದ ಗ್ರೌಂಡ್ ರೀಪೋರ್ಟ್ ಇದು.

ಹೇಗಿದೆ ಬೆಳ್ಳಂದೂರು ಕೆರೆ?:

ಸಾಮಾನ್ಯವಾಗಿ ನೊರೆಯನ್ನು ಕಕ್ಕಿ, ಬೆಂಕಿ ಉಗುಳಿ ಕುಖ್ಯಾತಿ ಪಡೆದ ಬೆಳ್ಳಂದೂರು ಕೆರೆಗೆ ‘ಅಮಾನಿ ಕೆರೆ’ ಎಂದೂ ಕೂಡ ಕೆರಯಲಾಗುತ್ತದೆ. ಸುಮಾರು 3.6 ಕಿಲೋಮೀಟರ್‌ ಉದ್ದ ಮತ್ತು 1.4 ಕಿಲೋಮೀಟರ್‌ನಷ್ಟು ಅಗಲವಿರುವ ಬೆಳ್ಳಂದೂರು ಕೆರೆ 891 ಎಕರೆಯಷ್ಟು ಭಾರಿ ವಿಸ್ತೀರ್ಣವನ್ನು ಹೊಂದಿದ್ದು ಬೆಂಗಳೂರಿನ ಅತಿದೊಡ್ಡ ಕೆರೆ ಎಂಬ ಖ್ಯಾತಿಯನ್ನೂ ಕೂಡ ಪಡೆದಿದೆ. ಸರಿ ಸುಮಾರು 30 ಅಡಿಗಳಷ್ಟು ಆಳವನ್ನೂ ಕೂಡ ಹೊಂದಿತ್ತು. ಆದರ ಈಗ ಅದರ ಅರ್ಧದಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಈ ಕೆರೆಯ ನೀರು ಕೃಷಿಗೆ ಬಳಕೆಯಾಗುತ್ತಿತ್ತು. ಆದರೆ ಇಂದು ಕೆರೆಯ ಹತ್ತಿರವೂ ಸುಳಿಯಲಾಗದ ಪರಿಸ್ಥಿತಿಯನ್ನು ತಲುಪಿದೆ.

ಬೆಳ್ಳಂದೂರು ಕೆರೆ ಪಿನಾಕಿನಿ ನದಿ ಜಲಾನಯನ ಪ್ರದೇಶದ ಭಾಗ. ಕೆರೆಗಳ ಸರಣಿಯಲ್ಲಿ ಇದೂ ಕೂಡ ಒಂದು. ಬೆಂಗಳೂರು ನಗರದಲ್ಲಿನ ಲಾಲ್‌ಬಾಗ್‌, ನಾಗಸಂದ್ರ, ಮಡಿವಾಳ, ಆಗರ, ಕೋರಮಂಗಲ, ಚನ್ನಘಟ್ಟ, ಹಲಸೂರು ಕೆರೆ ಸೇರಿದಂತೆ ಹಲವಾರು ಕೆರೆಗಳಿಂದ ನೀರು ಹರಿದು ಬರುತ್ತದೆ. ಈ ಕೆರೆ ತುಂಬಿದ ಬಳಿಕ ಹೆಚ್ಚಾದ ನೀರು ವರ್ತೂರು ಕೆರೆಯತ್ತ ಸಾಗುತ್ತದೆ. ಬೆಳ್ಳಂದೂರು ಕೆರೆ 148 ಚದರ ಕಿಲೋಮೀಟರ್‌ಗಳಷ್ಟು ಜಲಾನಯನ ಪ್ರದೇಶ ಹೊಂದಿದ್ದು, ದೊಡ್ಡ ಜಲ ಮೂಲವಾಗಿತ್ತು. ಆದರೆ ಇಂದು ಬೆಂಗಳೂರಿನ ಶೇ.40ರಷ್ಟು ಕೊಳಚೆ ನೀರನ್ನು ತನ್ನ ಗರ್ಭದೊಳಗೆ ಸೇರಿಸಿಕೊಳ್ಳುತ್ತಿದೆ.

ಮುಂಜಾನೆಯ ಮಂಜು ಕವಿದಂತೆ ಸದಾ ದಟ್ಟ ಧೂಳಿನಿಂದಲೇ ಕೂಡಿರುವ ಬೆಳ್ಳಂದೂರು ಮುಖ್ಯ ರಸ್ತೆಯನ್ನು ಬಿಟ್ಟು ಎಡಭಾಗಕ್ಕೆ ಹೊರಳಿದರೆ ಸ್ವಲ್ಪ ನೆಮ್ಮದಿಯೆನಸುವ ದಾರಿಗಳು ಕಾಣಸಿಗುತ್ತವೆ. ಅಲ್ಲಿಂದ ಸುಮಾರು ಒಂದು ಕಿಲೋಮೀಟರಿನಷ್ಟು ದೂರದಲ್ಲಿದೆ ಬೆಳ್ಳಂದೂರು ಕೆರೆಯ ಅಂಚು.

ಕೆರೆಯಂಚಿನ ಕಿಲೋಮೀಟರ್‌ಗಳಷ್ಟು ಉದ್ಧಕ್ಕೂ ಕೂಡ ಕೊಳೆತ ಹಸಿಪದಾರ್ಥಗಳ ನಾತ ಮೂಗು ಮುಚ್ಚಿಸುವಂತಾಗುತ್ತದೆ. ಅಷ್ಟಷ್ಟು ದೂರಕ್ಕೂ ಕೂಡ ಸತ್ತು ಕೊಳೆತ ಪ್ರಾಣಿಗಳ ಕಳೇಬರದಿಂದ ಹೊರಸೂಸುವ ಕೆಟ್ಟ ವಾಸನೆ ಭೂಲೋಕದ ಮೇಲೆಯೇ ನಕರ ದರ್ಶನ ಮಾಡಿಸುತ್ತದೆ.

ಬೆಳ್ಳಂದೂರು ಕೆರೆಯೊಳಗೆ ಕೊಳೆತ ಮತ್ತು ಕೊಳೆಯದಿರುವ ಕಸ.
ಬೆಳ್ಳಂದೂರು ಕೆರೆಯೊಳಗೆ ಕೊಳೆತ ಮತ್ತು ಕೊಳೆಯದಿರುವ ಕಸ.

ಕೆರೆ ಏರಿಯಗುಂಟ ಸಾಗಿದರೆ ಮುಂದೆ ಸಿಗುವುದು ಕೆಂಪಾಪುರ. ಕೆಂಪಾಪುರ ಪ್ರಾರಂಭವಾಗುತ್ತಲೇ ವಾಯು ಸೇನೆಯ ಪ್ರವೇಶ ನಿರ್ಬಂಧಿತ ಪ್ರದೇಶಗಳು ಕಾಣಿಸಲು ಆರಂಭಿಸುತ್ತವೆ. ಸಾಗಿದಷ್ಟು ದೂರಕ್ಕೂ ಕೂಡ ಜನಸಂಖ್ಯೆ ವಿರಳ. ರಸ್ತೆಯ ಎರಡೂ ಬದಿಗೂ ಎತ್ತರದ ಕಲ್ಲಿನ ಕಾಪೌಂಡ್‌ಗಳು. ಅಲ್ಲಲ್ಲಿ ಸಿಗುವ ಗೇಟುಗಳು ಸದಾ ಮುಚ್ಚಿರುತ್ತವೆ. ಕಬ್ಬಿಣ ಗೇಟಿನ ಮಧ್ಯ ಭಾಗದಲ್ಲಿರುವ ಕೆಲವು ರಂಧ್ರಗಳಷ್ಟೇ ತೆರೆದಿರುತ್ತವೆ. ಇದರೊಳಗಿಂದ ಶಸ್ತ್ರ ಸಜ್ಜಿತ ಕಾವಲುಗಾರನೊಬ್ಬರ ಇಣುಕಿ ನೋಡುತ್ತಿರುತ್ತಾರೆ.

ದಾರಿಯುದ್ದಕ್ಕೂ ನೀಲಕಂಠನ್‌ ವಾಯು ಸುರಂಗ ಕೇಂದ್ರ, ಏರ್‌ಕ್ರಾಫ್ಟ್‌ ಅಂಡ್‌ ಸಿಸ್ಟಮ್‌ ಟಿಸ್ಟಿಂಗ್‌ ಎಸ್ಟಬ್ಲಿಷ್‌ಮೆಂಟ್‌, ನಾಗರಿಕ ವಿಮಾನ ವಿನ್ಯಾಸ ಮತ್ತು ಅಭಿವೃದ್ಧಿ ಕೇಂದ್ರ, ಏರ್‌ಫೋರ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಯುನಿಟ್‌ ಹೀಗೆ ತರಹಾವೇರಿ ಹೆಸರಿನ ಪ್ರತ್ಯೇಕ ತಡೆಗೋಡೆಗಳನ್ನು ಹೊಂದಿರುವ ವಾಯುಸೇನೆಯ ಕಟ್ಟಡಗಳು ಕಾಣಸಿಗುತ್ತವೆ. ಇವೆಲ್ಲವೂ ಇರುವುದು ಬೆಳ್ಳಂದೂರು ಕೆರೆಯ ಅಂಚಿನಲ್ಲಿಯೇ. ಎಲ್ಲೆಡೆಯೂ ಕೂಡ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದ್ದು, ಕೆರೆಯ ಜತೆ ಜನರ ಸಂಬಂಧವನ್ನೇ ಕಡಿದುಹಾಕಿವೆ.

ವಾಯು ಸೇನೆ ಖಾರ್ಖಾನೆಯೊಂದರ ಕಾವಲು ಗೋಪುರ.
ವಾಯು ಸೇನೆ ಖಾರ್ಖಾನೆಯೊಂದರ ಕಾವಲು ಗೋಪುರ.

ಮುಂದಿನ ಹಾದಿ ಯಮನೂರಿನತ್ತ ಸಾಗುತ್ತದೆ. ಮರುಗೇಶಪಾಳ್ಯದವರೆಗೂ ಕಾಡಿನಂತಿದ್ದು, ರಸ್ತೆಯ ಮೇಲೆ ಚಲಿಸುವ ವಾಹನಗಳನ್ನು ಬಿಟ್ಟರೆ ನಡೆದಾಡುವ ಮನುಷ್ಯರ ಸಂಖ್ಯೆ ತೀರಾ ವಿರಳ. ಒಂದು ಬದಿಗೆ ದಟ್ಟ ಕಾಡಿನಂತೆ ಗಿಡಮರಗಳಿದ್ದು, ಮತ್ತೊಂದು ಬದಿಯಲ್ಲಿ ವಾಯುಸೇನೆಯ ತಡೆಗೋಡೆಗಳಿವೆ. ಹಾದಿಯ ಮಧ್ಯೆ ಬೆಳ್ಳಂದೂ ಕೆರೆಗೆ ನೀರು ಹೊತ್ತೊಯ್ಯುವ ರಾಜಕಾಲುವೆ ಅಡ್ಡಲಾಗಿ ಸಿಗುತ್ತದೆ. ಇದರ ಸ್ಥಿತಿ ನೋಡಿದರೆ, ಶುದ್ಧೀಕರಣದ ನಂತರವೂ ಇಲ್ಲಿನ ನೀರಿಗೆ ರೂಪ ಸಿಗುವ ಸಾಧ್ಯತೆಗಳು ಕಡಿಮೆ ಎನ್ನಿಸುತ್ತದೆ.

ಬೆಳ್ಳಂದೂರು ಕೆರೆಯ ದುಸ್ಥಿತಿಯ ಕುರಿತು ಬೇಸರ ವ್ಯಕ್ತಪಡಿಸುವ ಸುಮಾರು 25ರ ಪ್ರಾಯದ ಸ್ಥಳೀಯ ಲಾರೆನ್ಸ್, “ಈ ರಾಜಕಾಲುವೆಯಲ್ಲಿ ಯಾರನ್ನಾದರೂ ಕೊಲೆ ಮಾಡಿ ಎಸೆದು ಹೋದರೂ ಗೊತ್ತಾಗುವುದಿಲ್ಲ. ಕೆರೆಗೆ ಕಾರ್ಖಾನೆಗಳ ತ್ಯಾಜ್ಯ ಹರಿಯುವುದನ್ನು ತಪ್ಪಿಸಲಾಗಿದೆ. ಆದರೆ ಜನ ಮಾತ್ರ ಕಸವನ್ನು ಎಸೆಯುತ್ತಲೇ ಇದ್ದಾರೆ. ಇದು ಬೆಳ್ಳಂದೂರು ಕೆರೆ ಸೇರುತ್ತಿದೆ,’’ ಎಂದರು.

ಈ ನೀರು ಬೆಂಗಳೂರಿನ ಹಲವಾರು ಕೆರೆಗಳಿಂದ ಬಂದು ಇಲ್ಲಿ ಶೇಖರಣೆಯಾಗಿ ನಂತರ ವರ್ತೂರು ಕೆರೆಗೆ ಹರಿಯುತ್ತದೆ ಎನ್ನುತ್ತಾರೆ ಲಾರೆನ್ಸ್‌. ಆದರೆ ಅಲ್ಲಿಂದ ಮುಂದೆ ಎಲ್ಲಿಗೆ ಹೋಗುತ್ತದೆ ಎನ್ನುವುದಕ್ಕೆ ಅವರ ಬಳಿ ಉತ್ತರವಿಲ್ಲ. ಈ ನೀರನ್ನು ಶುದ್ಧೀಕರಿಸಿ ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಿಗೆ ತುಂಬಿಸಲಾಗುತ್ತದೆ ಎಂದಾಗ ಲಾರೆನ್ಸ್ ಸಿಡಿಮಿಡಿಗೊಂಡರು. ನಾವು ಅನುಭವಿಸುತ್ತಿರುವುದು ಸಾಲದೇ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.

ಲಾರೆನ್ಸ್‌ರಂತೆಯೇ ಬೆಳ್ಳಂದೂರು ಮತ್ತು ಸುತ್ತಮುತ್ತಲಿನ ಸ್ಥಳೀಯ ಜನಕ್ಕೆ ಕೆಸಿ ವ್ಯಾಲಿ ಯೋಜನೆ ಬಗ್ಗೆ ಮಾಹಿತಿ ಇಲ್ಲ. ಬಾಳೆಹಣ್ಣು ಮಾರುತ್ತಿದ್ದ ವೃದ್ಧರೊಬ್ಬರು ಈ ನೀರನ್ನು ಶುದ್ದೀಕರಿಸಿ ಕುಡಿಯಲು ನೀಡಲು ಹೊರಟಿದೆ ಸರಕಾರ ಎಂದಾಗ ಹುಬ್ಬೇರಿಸಿದರು. ‘ನಮ್ಮ ಕರ್ಮವನ್ನು ಅವರಿಗ್ಯಾಕೆ ಉಣಿಸಬೇಕು’ ಎನ್ನುವ ಸಾಂತ್ವಾನದ ನುಡಿಗಳು ಅವರದ್ದಾಗಿತ್ತು.

ಈಗ ಹೈಕೋರ್ಟ್‌ ಆದೇಶದಿಂದ ಕೆಸಿ ವ್ಯಾಲಿ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸುವುದು ನಿಂತಿದೆ. ಆದರೆ, ಅದರ ಮೂಲ ಬೆಳ್ಳಂದೂರು ಕೆರೆಯ ಸ್ಥಿತಿಯೇ ಚಿಂತಾಜನಕವಾಗಿದೆ. ಬೆಂಗಳೂರು ಅಭಿವೃದ್ಧಿಗಾಗಿಯೇ ಇಲಾಖೆಯೊಂದನ್ನು ತೆರೆದು ಕುಳಿತಿರುವ ಸರಕಾರ ಎಷ್ಟರ ಮಟ್ಟಿಗೆ ಹೊಣೆಗೇಡಿಯಾಗಿದೆ ಎಂಬುದು ಅರ್ಥವಾಗಬೇಕು ಎಂದರೆ, ಒಮ್ಮೆ ಬೆಳ್ಳಂದೂರು ಕೆರೆಯ ಅಂಚಿಗೆ ಭೇಟಿ ಕೊಡಿ.