samachara
www.samachara.com
‘ಮೇಕರ್ಸ್ ಆಫ್ ಮೆಟ್ರೊ’: ಐಶಾರಾಮಿ ಸಾರಿಗೆ ವ್ಯವಸ್ಥೆ; ಕಟ್ಟುವವರ ಜೀವನ ಅವ್ಯವಸ್ಥೆ
GROUND REPORT

‘ಮೇಕರ್ಸ್ ಆಫ್ ಮೆಟ್ರೊ’: ಐಶಾರಾಮಿ ಸಾರಿಗೆ ವ್ಯವಸ್ಥೆ; ಕಟ್ಟುವವರ ಜೀವನ ಅವ್ಯವಸ್ಥೆ

ಬೆಂಗಳೂರಿನ ಬಾನು ಹಾಗೂ ಭೂಮಿಯೊಳಗೆ ತಣ್ಣಗೆ ಓಡಾಡುವ ಮೆಟ್ರೊ ರೈಲಿನ ಯೋಜನೆಗೆ ಶ್ರಮ ಹಾಕುತ್ತಿರುವ ನಿರ್ಮಾಣ ಕಾರ್ಮಿಕರ ದಯನೀಯ ಬದುಕು ಇಲ್ಲಿದೆ.

ದಯಾನಂದ

ದಯಾನಂದ

ಬೆಂಗಳೂರಿನ ಟ್ರಾಫಿಕ್ಸ್‌ ಸಮಸ್ಯೆಗೆ ಪರಿಹಾರ ಒದಗಿಸುವ ‘ಘನ’ ಉದ್ದೇಶದೊಂದಿಗೆ ಆರಂಭವಾದ ಯೋಜನೆ ‘ನಮ್ಮ ಮೆಟ್ರೊ’. ಪೂರ್ತಿಯಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಸಂಚಾರ ಸಮಸ್ಯೆ ತಗ್ಗಿಸಿರುವ ಮೆಟ್ರೊ ನಿರ್ಮಾಣದ ಹಿಂದೆ ಉತ್ತರ ಭಾರತದಿಂದ ಬಂದ ಸಾವಿರಾರು ಕಾರ್ಮಿಕರ ಶ್ರಮವಿದೆ. ಆದರೆ, ಮೆಟ್ರೊ ನಿರ್ಮಾಣದ ಈ ಕಾರ್ಮಿಕರ ಬದುಕು ನೀವು ನೋಡಿರುವ ಮೆಟ್ರೊ ರೈಲಿನಷ್ಟು ಸುಂದರವಾಗಿಲ್ಲ. ಅಷ್ಟೆ ಅಲ್ಲ, ಈ ಕಾರ್ಮಿಕರನ್ನು ನಡೆಸಿಕೊಳ್ಳುವ ಕುರಿತು ಹೈಕೋರ್ಟ್‌ ನೀಡಿದ ಆದೇಶವನ್ನೂ ಬಿಎಂಆರ್‌ಸಿಎಲ್‌ ಪ್ರತಿ ದಿನ ಉಲ್ಲಂಘಿಸುತ್ತಿದೆ.

ನಮ್ಮ ಮೆಟ್ರೊ ಎರಡನೇ ಹಂತದ ಕಾಮಗಾರಿ ನಡೆಯುತ್ತಿರುವ ಮೈಸೂರು ರಸ್ತೆಯಲ್ಲಿ ಕೆಲಸ ಮಾಡುತ್ತಿರುವ ಮೆಟ್ರೊ ನಿರ್ಮಾಣ ಕಾರ್ಮಿಕರಿಗೆ ಒದಗಿಸಿರುವ ವಸತಿ ವ್ಯವಸ್ಥೆಯ ಅವ್ಯವಸ್ಥೆ ಬಗ್ಗೆ ‘ಸಮಾಚಾರ’ಕ್ಕೆ ಮಾಹಿತಿ ಲಭ್ಯವಾಗಿತ್ತು. ಮಾಹಿತಿಯ ಬೆನ್ನತ್ತಿ ಸ್ಥಳಕ್ಕೆ ಭೇಟಿ ನೀಡಿದ ‘ಸಮಾಚಾರ’ದ ಪ್ರತಿನಿಧಿಗೆ ಕಂಡ ಮೆಟ್ರೊ ಕಾರ್ಮಿಕರ ಬದುಕಿನ ಚಿತ್ರಣ ಇಲ್ಲಿದೆ.

ಶುಕ್ರವಾರ ಬೆಳ್ಳಂಬೆಳಿಗ್ಗೆ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಕೆಲವೇ ವಾಹನಗಳು ಸದ್ದು ಮಾಡುತ್ತಿದ್ದವು. ಬೆಳಿಗ್ಗೆ ಆರು ಗಂಟೆಗೆ ನಾಯಂಡಹಳ್ಳಿಯಿಂದ ಕೆಂಗೇರಿ ಕಡೆಗೆ ನಡೆಯುತ್ತಾ ಹೋದಂತೆ ರಸ್ತೆಯ ಮಧ್ಯೆ ಚಾಚಿಕೊಂಡಿರುವ ಮೆಟ್ರೊ ಪಿಲ್ಲರ್‌ಗಳ ತುದಿಗೆ ಆಗಷ್ಟೇ ಮೂಡುತ್ತಿದ್ದ ಸೂರ್ಯನ ಕಿರಣಗಳು ಸೋಕುತ್ತಿದ್ದವು.

ಬೆಂಗಳೂರಿನಿಂದ ಮೈಸೂರಿಗೆ ಹೋಗುವ ಹಾಗೂ ಮೈಸೂರಿನಿಂದ ಬರುವ ಬಸ್‌ಗಳನ್ನು ಬಿಟ್ಟರೆ ರಸ್ತೆಯಲ್ಲಿ ಓಡಾಡುತ್ತಿದ್ದುದು ಕೆಲವು ಕ್ಯಾಬ್‌ಗಳು ಮಾತ್ರ. ರಾಜರಾಜೇಶ್ವರಿನಗರ ಜಂಕ್ಷನ್‌, ಜ್ಞಾನಭಾರತಿ ಎಂಟ್ರನ್ಸ್‌ ದಾಟಿ ಮುಂದೆ ಹೋಗಿ ಅವರಿವರನ್ನು ವಿಚಾರಿಸಿದಾಗ ಮೆಟ್ರೊ ಕಾರ್ಮಿಕರ ‘ಲೇಬರ್‌ ಕ್ಯಾಂಪ್‌’ ಕೊನೆಗೂ ಪತ್ತೆಯಾಯಿತು.

ಕೆಂಗೇರಿ ಕಡೆಗೆ ಹೋಗುವ ಮಾರ್ಗದಲ್ಲಿ ಮೈಸೂರು ಮುಖ್ಯರಸ್ತೆಯಲ್ಲಿ ಎಡಕ್ಕೆ ಸಿಗುವ ಕೆಂಚೇನಹಳ್ಳಿ ರಸ್ತೆಯಲ್ಲಿ ನೂರು ಹೆಜ್ಜೆ ನಡೆದಾಗ ಎಡಕ್ಕೆ ಮೆಟ್ರೊ ಕಾರ್ಮಿಕರ ಲೇಬರ್‌ ಕ್ಯಾಂಪ್‌ ಕಣ್ಣಿಗೆ ಬಿತ್ತು. ವೃಷಭಾವತಿಯ ಮಗ್ಗುಲಿಗೆ ಕಾಣುವ ಖಾಲಿ ಜಾಗದಲ್ಲಿ ಮೆಟ್ರೊ ನಿರ್ಮಾಣ ಕಾರ್ಮಿಕರಿಗೆ ತಗಟಿನ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಲಾಗಿದೆ.

ಮೈಸೂರು ರಸ್ತೆ ಬಳಿಯ ಲೇಬರ್‌ ಕ್ಯಾಂಪ್. 
ಮೈಸೂರು ರಸ್ತೆ ಬಳಿಯ ಲೇಬರ್‌ ಕ್ಯಾಂಪ್. 

ಇದು ಲೇಬರ್‌ ಕ್ಯಾಂಪ್‌:

ಲೇಬರ್‌ ಕ್ಯಾಂಪ್‌ಗೆ ಮುಖ್ಯರಸ್ತೆಯ ಕಡೆಯಿಂದ ದೊಡ್ಡದೊಂದು ಕಬ್ಬಿಣದ ಗೇಟ್ ಇದೆ. ಅದೇ ರಸ್ತೆಯಲ್ಲಿ ಮುಂದೆ ಸಾಗಿ ಎಡಕ್ಕೆ ತಿರುಗಿ, ಮುಂದೆ ನಡೆದರೆ ಈ ಲೇಬರ್‌ ಕ್ಯಾಂಪ್‌ನ ಹಿಂಬಾಗಿಲು ಸಿಗುತ್ತದೆ. ಇಲ್ಲಿಂದಲೇ ಒಳ ಹೊಕ್ಕಾಗ ಕಂಡಿದ್ದು ಮೆಟ್ರೊ ಕಟ್ಟುತ್ತಿರುವ ನಿರ್ಮಾಣ ಕಾರ್ಮಿಕರು ಬದುಕು ಸಾಗಿಸುತ್ತಿರುವ ಸ್ಥಿತಿ.

ತಗಡಿನ ಶೀಟ್‌ಗಳಿಂದ ನಿರ್ಮಿಸಿರುವ ಲೇಬರ್‌ ಕ್ಯಾಂಪ್‌ನ ಒಂದೊಂದು ಕೊಠಡಿಗಳಲ್ಲಿ ಸುಮಾರು ಹತ್ತು ಜನ ಮಲಗುವಷ್ಟು ಜಾಗವಿದೆ. ಆದರೆ, ಕೊಠಡಿಗಳಿಗೆ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಒಂದು ಕೊಠಡಿಯಲ್ಲೂ ಗಾಳಿಯಾಡಲು ಚಿಕ್ಕ ಕಿಟಕಿಯೂ ಇಲ್ಲ.

ಶೆಡ್‌ಗಳ ಹಿಂದೆಯೇ ಬೆಳೆದು ನಿಂತಿರುವ ಗಿಡಗಳು, ಮತ್ತೊಂದು ಬದಿಗೆ ವೃಷಭಾವತಿಯ ಒಡಲಲ್ಲಿ ಸದ್ದು ಮಾಡದೆ ಹರಿಯುತ್ತಿರುವ ಅರ್ಧ ಬೆಂಗಳೂರಿನ ಕೊಳಚೆ ನೀರು. ಶೆಡ್‌ಗಳ ಹಿಂದು ಮುಂದೆಲ್ಲಾ ಕಸದ ರಾಶಿ, ಎರಡು ದೊಡ್ಡ ತೊಟ್ಟಿಗಳಲ್ಲಿ ಪಾಚಿ ಕಟ್ಟಿರುವ ನೀರು, ಅದೇ ನೀರಲ್ಲಿ ಸ್ನಾನ. ಮಗ್ಗುಲಿಗೆ ಎರಡು ಸಾಲು ಶೌಚಾಲಯಗಳು ಕೆಲವು ಶೌಚಾಲಯಗಳಲ್ಲಿ ತುಂಬಿರುವ ಕಸ, ಕೆಲವು ಶೌಚಾಲಯಗಳ ಬಾಗಿಲುಗಳು ಮುರಿದು ಬಿದ್ದಿವೆ. ಶುಚಿತ್ವವಿಲ್ಲದ ಇಲ್ಲಿನ ಸ್ಥಿತಿ ಕಾರ್ಮಿಕರಿಗೆ ಅನಾರೋಗ್ಯ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ.

ತಗಡಿನ ಶೆಡ್‌ಗಳ ಪಕ್ಕದಲ್ಲೇ ಕೊಳೆಯುತ್ತಿರುವ ಕಸ
ತಗಡಿನ ಶೆಡ್‌ಗಳ ಪಕ್ಕದಲ್ಲೇ ಕೊಳೆಯುತ್ತಿರುವ ಕಸ

ಇಡೀ ಲೇಬರ್‌ ಕ್ಯಾಂಪ್‌ ಸುತ್ತಿ ಬಂದರೂ ಶುಚಿತ್ವ ಎಂಬುದರ ಹೇಳ ಹೆಸರಿಲ್ಲದಂತಿರುವ ಶೆಡ್‌ಗಳೇ ಕಾಣುತ್ತವೆ. ಇಂಥ ಶೋಚನೀಯ ಸ್ಥಿತಿಯಲ್ಲಿ ಸುಮಾರು 400 ಮಂದಿ ಕಾರ್ಮಿಕರು ಬದುಕುತ್ತಿದ್ದಾರೆ. ಕನಿಷ್ಠ ಮೂಲಸೌಕರ್ಯದ ನಿರ್ವಹಣೆಯ ಕೊರತೆ ಈ ಲೇಬರ್‌ ಕ್ಯಾಂಪ್‌ನಲ್ಲಿ ಕಣ್ಣಿಗೆ ರಾಚುವಂತಿದೆ.

ಬಿಎಂಆರ್‌ಸಿಎಲ್‌ ಹೇಳುವ ‘ವಿಶ್ವದರ್ಜೆಯ ಸಾರಿಗೆ ವ್ಯವಸ್ಥೆ’ಯನ್ನು ನಿರ್ಮಿಸುತ್ತಿರುವ ಕಾರ್ಮಿಕರು ಬದುಕುತ್ತಿರುವ ಸ್ಥಿತಿ ಇದು. ಶುಚಿಯಾಗಿರುವ ಪ್ಲಾಟ್‌ ಫಾರ್ಮ್‌, ಎಸಿ ಕೋಚ್‌, ಸ್ವಯಂ ಚಾಲಿತ ಬಾಗಿಲುಗಳು, ಮುಂಬರುವ ನಿಲ್ದಾಣದ ಮಾಹಿತಿ ನೀಡುವ ಇನಿದನಿಗಳು – ಮೆಟ್ರೊ ಎಂದರೆ ಇದಷ್ಟೇ ಎಂದು ತಿಳಿದುಕೊಂಡರೆ ಅದು ತಪ್ಪು.

‘ಇದ್ದಷ್ಟು ದಿನ ನಡೆಯುತ್ತದೆ’

ಮೆಟ್ರೊ ಕಾಮಗಾರಿಯಲ್ಲಿ ಕೆಲಸ ಮಾಡುವ ಬಹುತೇಕ ನಿರ್ಮಾಣ ಕಾರ್ಮಿಕರು ಉತ್ತರ ಭಾರತದವರು. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಯುವಕರು ಗುತ್ತಿಗೆ ಕಾರ್ಮಿಕರಾಗಿ ಇಲ್ಲಿ ದುಡಿಯುತ್ತಿದ್ದಾರೆ. ತಮ್ಮ ರಾಜ್ಯಗಳಲ್ಲಿ ಇಲ್ಲಿನಷ್ಟು ಕನಿಷ್ಠ ಕೂಲಿಯೂ ಸಿಗುವುದಿಲ್ಲ ಎಂಬ ಕಾರಣಕ್ಕೆ ರಾಜ್ಯಕ್ಕೆ ವಲಸೆ ಬರುವ ಈ ಕಾರ್ಮಿಕರು ಇಲ್ಲಿ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ.

“ನಮ್ಮ ಊರಿನಲ್ಲಿ ಕೆಲಸವೂ ಇಲ್ಲ, ಕೂಲಿಯೂ ಇಲ್ಲ. ನಮ್ಮ ಊರಿನ ಕೆಲವರು ಇಲ್ಲಿಗೆ ಕೆಲಸಕ್ಕೆ ಬಂದಿದ್ದರು. ಅವರ ಜತೆಗೆ ನಾನೂ ಇಲ್ಲಿಗೆ ಬಂದಿದ್ದೇನೆ. ತಿಂಗಳಿಗೆ 9000 ರೂಪಾಯಿ ಸಂಬಳ ಸಿಗುತ್ತಿದೆ. ದಿನಕ್ಕೆ ಸುಮಾರು 12 ಗಂಟೆ ಕೆಲಸ ಮಾಡಿಸುತ್ತಾರೆ. ವಾರಕ್ಕೊಂದು ದಿನ ರಜೆ ಇದೆ. ಶುಚಿತ್ವದ ಬಗ್ಗೆ ಯೋಚನೆ ಮಾಡುವ ಸ್ಥಿತಿಯಲ್ಲಿ ನಾವು ಇಲ್ಲ. ಇದ್ದಷ್ಟು ದಿನ ಹೇಗೋ ನಡೆಯುತ್ತದೆ” ಎನ್ನುತ್ತಾರೆ ಲೇಬರ್‌ ಕ್ಯಾಂಪ್‌ನ ಕಾರ್ಮಿಕರೊಬ್ಬರು.

‘ಮೇಕರ್ಸ್ ಆಫ್ ಮೆಟ್ರೊ’: ಐಶಾರಾಮಿ ಸಾರಿಗೆ ವ್ಯವಸ್ಥೆ; ಕಟ್ಟುವವರ ಜೀವನ ಅವ್ಯವಸ್ಥೆ

“ನಾನು ಇಲ್ಲಿಗೆ ಬಂದು ಒಂದು ವರ್ಷವಾಯಿತು. ಆಗಿನಿಂದಲೂ ಇಲ್ಲಿ ಶುಚಿತ್ವದ ಕೆಲಸ ಮಾಡಿಲ್ಲ. ಜೋರಾಗಿ ಮಳೆ ಬಂದರೆ ಇಲ್ಲಿರುವ ಕಸವೆಲ್ಲಾ ಮಳೆ ನೀರಿಗೆ ಕೊಚ್ಚಿಕೊಂಡು ಪಕ್ಕದಲ್ಲಿರುವ ಮೋರಿಗೆ ಹೋಗುತ್ತದೆ. ಹೀಗಾಗಿ ಯಾರೂ ಶುಚಿತ್ವದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವಿರುವ ಸ್ಥಿತಿಯಲ್ಲಿ ಶುಚಿತ್ವ ಎಂದೆಲ್ಲಾ ಪ್ರಶ್ನಿಸಲು ಸಾಧ್ಯವೇ” ಎಂಬ ಪ್ರಶ್ನೆ ಮತ್ತೊಬ್ಬ ಕಾರ್ಮಿಕರದ್ದು.

ಒಬ್ಬೊಬ್ಬ ಗುತ್ತಿಗೆದಾರರು ಸಾವಿರಾರು ಜನರನ್ನು ಗುಂಪು ಗುಂಪಾಗಿ ನಿರ್ಮಾಣ ಕಾಮಗಾರಿಗೆ ಕರೆತರುವ ವ್ಯವಸ್ಥೆಯೂ ಇಲ್ಲಿದೆ. ಇಲ್ಲಿನ ಕಾರ್ಮಿಕರಿಗೆ ಕೆಲಸದ ಭದ್ರತೆ ಎಂಬುದು ಇಲ್ಲ. ಇರುವಷ್ಟು ದಿನ ಕೆಲಸ ಮಾಡುವುದು, ಇಲ್ಲಿ ಸಾಕು ಎನಿಸಿದಾಗ ಬೇರೆ ಕೆಲಸ ಕಡೆ ಕೆಲಸಕ್ಕೆ ಹೋಗುವುದು, ಕೊನೆಗೆ ಈ ಕೆಲಸವೇ ಸಾಕು ಎನಿಸಿದಾಗ ತಮ್ಮೂರಿಗೆ ಮರಳುವುದು. ‘ಸಮಾಚಾರ’ ಪ್ರತಿನಿಧಿಯೊಂದಿಗೆ ಅಳುಕಿನಲ್ಲೇ ಮಾತನಾಡಿದ ಕೆಲವು ಕಾರ್ಮಿಕರು ಬಿಚ್ಚಿಟ್ಟಿದ್ದಿಷ್ಟು.

ಮೆಟ್ರೊ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳ ಬಗ್ಗೆ ನಿಮ್ಮಿಂದ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪರಿಶೀಲಿಸುತ್ತೇನೆ.
- ವೆಂಕಟರಮಣಪ್ಪ, ಕಾರ್ಮಿಕ ಸಚಿವ

ಕಾರ್ಮಿಕ ನಿಯಮಗಳ ಉಲ್ಲಂಘನೆ:

ನಿರ್ಮಾಣ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಲೇಬರ್‌ ಕ್ಯಾಂಪ್‌ಗಳಲ್ಲಿ ಶುಚಿತ್ವ ಕಾಪಾಡಬೇಕಾದ್ದು ಅಗತ್ಯ ಎನ್ನುತ್ತದೆ ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996’. ಈ ಕಾಯ್ದೆಯ ಸೆಕ್ಷನ್‌ 33 ಕಾರ್ಮಿಕರಿಗೆ ಸೂಕ್ತವಾದ ಶೌಚಾಲಯ ಹಾಗೂ ಮೂತ್ರಿಗಳ ವ್ಯವಸ್ಥೆ ಇರಬೇಕು ಎಂದು ಹೇಳಿದರೆ, ಸೆಕ್ಷನ್‌ 34 ಶುಚಿಯಾದ ಜಾಗದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತದೆ. ಆದರೆ, ಇಲ್ಲಿನ ವ್ಯವಸ್ಥೆ ಈ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಶುಚಿತ್ವ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ
ಶುಚಿತ್ವ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ

ಅಲ್ಲದೆ ಇಲ್ಲಿನ ಬಹುತೇಕ ಕಾರ್ಮಿಕರು ಬೇರೆ ರಾಜ್ಯಗಳಿಂದ ಇಲ್ಲಿಗೆ ವಲಸೆ ಬಂದಿರುವುದರಿಂದ ‘ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ’ಯಡಿ ಅವರಿಗೆ ಸೇವಾ ಭದ್ರತೆ ಒದಗಿಸುವುದರ ಜತೆಗೆ ಕಾರ್ಮಿಕರ ಗುರುತಿನ ಚೀಟಿ ನೀಡಬೇಕಾದ್ದು ಅಗತ್ಯ. ಆದರೆ, ಇಲ್ಲಿನ ಬಹುತೇಕ ಕಾರ್ಮಿಕರಿಗೆ ಗುರುತಿನ ಚೀಟಿಗಳಿಲ್ಲ. ಹೀಗಾಗಿ ‘ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ’ಯನ್ನೂ ಇಲ್ಲಿ ಉಲ್ಲಂಘಿಸಲಾಗಿದೆ.

ಮರೆತು ಹೋದ ಹೈಕೋರ್ಟ್‌ ಆದೇಶ:

ಈ ಹಿಂದೆ ಮೆಟ್ರೊ ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದ ವೇಳೆ ಸುರಕ್ಷತಾ ಕ್ರಮಗಳಿಲ್ಲದ ಕಾರಣಕ್ಕೆ ಹಲವು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರೆ, ಕೆಲವರು ಗಂಭೀರವಾಗಿ ಗಾಯಗೊಂಡು ಕೈ ಕಾಲು ಕಳೆದುಕೊಂಡಿದ್ದರು.

ಆಗ ಮೆಟ್ರೊ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸ್ಯಾಮುಯೆಲ್‌ ಸತ್ಯಶೀಲನ್‌ ಎಂಬುವರು 2012ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಕಾರ್ಮಿಕರ ಸಮಸ್ಯೆಗಳ ಪರಿಶೀಲನೆಗೆ ಸಮಿತಿ ರಚಿಸುವಂತೆ ನಿರ್ದೇಶನ ನೀಡಿತ್ತು.

ಹೈಕೋರ್ಟ್‌ ಆದೇಶದ ಪ್ರತಿ ಇಲ್ಲಿದೆ:

WP48094-12-18-08-2014.pdf
download

2014ರ ಆಗಸ್ಟ್‌ 18ರಂದು ಈ ಪ್ರಕರಣದ ಆದೇಶ ನೀಡಿದ್ದ ನ್ಯಾಯಮೂರ್ತಿಗಳಾದ ಡಿ.ಎಚ್‌. ವಘೇಲಾ ಮತ್ತು ಅಶೋಕ್‌ ಹಿಂಚಿಗೇರಿ ಅವರಿದ್ದ ನ್ಯಾಯಪೀಠ, ಕೇಂದ್ರ ಹಾಗೂ ರಾಜ್ಯ ಕಾರ್ಮಿಕ ಇಲಾಖೆಯ ಆಯುಕ್ತರು ಅಥವಾ ಅವರ ಪ್ರತಿನಿಧಿ, ಬಿಎಂಆರ್‌ಸಿಎಲ್‌ ಪ್ರತಿನಿಧಿ, ಗುತ್ತಿಗೆದಾರರ ಪ್ರತಿನಿಧಿ, ಕಾರ್ಮಿಕರ ಪ್ರತಿನಿಧಿಯನ್ನು ಒಳಗೊಂಡ ಸಮಿತಿ ತಿಂಗಳಿಗೊಮ್ಮ ಸಭೆ ನಡೆಸಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿತ್ತು.

ಅಲ್ಲದೆ, ನಿರ್ಮಾಣ ಕಾರ್ಮಿಕರ ಹಕ್ಕುಗಳನ್ನು ಕಾಪಾಡುವಂತೆ ಹಾಗೂ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆಯಾಗದಂತೆ ನಿಗಾ ವಹಿಸುವಂತೆ ಕಾರ್ಮಿಕ ಆಯುಕ್ತರಿಗೆ ನಿರ್ದೇಶನ ನೀಡಿತ್ತು. ಈ ಆದೇಶ ಹೊರ ಬಿದ್ದು 4 ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಎಂಆರ್‌ಸಿಎಲ್‌ ಮತ್ತು ಕಾರ್ಮಿಕ ಇಲಾಖೆಗೆ ಹೈಕೋರ್ಟ್‌ನ ಈ ಆದೇಶ ಮರೆತು ಹೋದಂತಿದೆ.

ಬೆಂಗಳೂರಿನ ಕನಸಾಗಿದ್ದ ಮೆಟ್ರೊ ರೈಲು ಓಡಾಡಲು ಆರಂಭವಾಗಿ ಆರು ವರ್ಷಗಳು ಕಳೆದಿದ್ದರೂ, ಉತ್ತರ– ದಕ್ಷಿಣ ಮತ್ತು ಪೂರ್ವ– ಪಶ್ಚಿಮ ಕಾರಿಡಾರ್‌ನಲ್ಲಿ ಮೆಟ್ರೊ ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಿದ್ದು ಮೂರು ವರ್ಷಗಳ ಹಿಂದೆಯಷ್ಟೇ. ಮೊದಲ ಹಂತದ ಮೆಟ್ರೊ ಯೋಜನೆ ಪೂರ್ಣಗೊಂಡ ಬಳಿಕ ಎರಡನೇ ಹಂತದ ಯೋಜನೆಗಾಗಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ದೊಡ್ಡ ಯೋಜನೆಯ ಕಟ್ಟುವ ಕೆಲಸ ಮಾಡುತ್ತಿರುವ ಕಾರ್ಮಿಕರ ಬದುಕು ಮಾತ್ರ ನಿಕೃಷ್ಟವಾಗಿದೆ.