samachara
www.samachara.com
‘ಸೋಲಾರ್ ಸಾಲ ರೈತರಿಗೇ ಶೂಲ’: ಇಂಧನ ಸಚಿವರೂ ಆಗಿರುವ ಸಿಎಂ ಕುಮಾರಸ್ವಾಮಿ ಗಮನಕ್ಕೆ...
GROUND REPORT

‘ಸೋಲಾರ್ ಸಾಲ ರೈತರಿಗೇ ಶೂಲ’: ಇಂಧನ ಸಚಿವರೂ ಆಗಿರುವ ಸಿಎಂ ಕುಮಾರಸ್ವಾಮಿ ಗಮನಕ್ಕೆ...

ಬದಲಾಗುತ್ತಿರುವ ಜಗತ್ತು ನವೀಕರಿಸಬಹುದಾದ ಇಂಧನ ಮೂಲಗಳತ್ತ ಮುಖಮಾಡಿದೆ. ಸೋಲಾರ್‌ ವಿದ್ಯುತ್ ಉತ್ಪಾದನೆಗೆ ಒಲವು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆರಂಭಗೊಂಡ ಯೋಜನೆಯೊಂದು ರಾಜ್ಯ ರೈತರನ್ನು ಸಂಕಷ್ಟಕ್ಕೆ ದೂಡಿದೆ. 

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ನೇರವಾಗಿ ವಿಷಯಕ್ಕೆ ಬರುತ್ತೇನೆ; ಇದು ಕೇಂದ್ರ ಸರಕಾರದ ಯೋಜನೆಯೊಂದು ರೈತರಿಗೆ ನೆರವಾಗುವ ಬದಲಿಗೆ, ಹೊರೆಯಾಗಿ ಪರಿಣಮಿಸಿದ ಕುರಿತಾದ ವರದಿ.

ದೇಶದ ರೈತರಿಗೆ ಬದಲಿ ಆದಾಯ ಮೂಲ ಸೃಷ್ಠಿ ಮಾಡಲು ಕೇಂದ್ರ ಸರಕಾರದಿಂದ ‘ಸೋಲಾರ್ ರೂಫ್ ಟಾಪ್ ಫೋಟೊವೋಲ್ಟಾಯಿಕ್ ಸಿಸ್ಟೆಮ್’ ಎಂಬ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇದು ಕರ್ನಾಟಕದ ರೈತರನ್ನು ಸಾಲದ ಶೂಲಕ್ಕೆ ದೂಡುತ್ತಿದೆ. ಈ ಮೊದಲೇ ಇದ್ದ ಕೃಷಿ ಸಾಲದ ಗಾಯದ ಮೇಲೆ ಈ ಯೋಜನೆ ಬರೆ ಎಳೆಯುತ್ತಿದೆ.

ಏನಿದು ಸೋಲಾರ್ ಯೋಜನೆ?

ಸೋಲಾರ್ ರೂಫ್ ಟಾಪ್ ಫೋಟೊವೋಲ್ಟಾಯಿಕ್ ಸಿಸ್ಟೆಮ್ ಎಂಬ ಹೆಸರಿನಲ್ಲಿ ರೈತರ ಮನೆಯ ಮೇಲ್ಚಾವಣೆಗೆ ಸೋಲಾರ್ ಪ್ಲೇಟ್ ಅಳವಡಿಕೆ ಯೋಜನೆಯ ಮೂಲ ಉದ್ದೇಶವಾಗಿತ್ತು. ಇದರಲ್ಲಿ ಉತ್ಪಾದನೆಯಾಗುವ ವಿದ್ಯುತ್ ಅಗತ್ಯವಿರುವಷ್ಟು ಗೃಹ ಬಳಕೆಗೆ ಬಳಸಿ, ಉಳಿದಿದ್ದನ್ನು ಗ್ರಿಡ್‌ಗೆ ಮಾರುವ ಯೋಜನೆ ಇದಾಗಿದೆ.

ರೈತ ಸಬ್ಸಿಡಿ ತೆಗೆದುಕೊಳ್ಳಬಹುದು ಅಥವಾ ಬಿಡಬಹುದು. ಅದಕ್ಕೆ ಬೇರೆ ಬೇರೆ ರೇಟ್ ಇದೆ. 1-10ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್‌ ಪೂರೈಕೆ ಮಾಡಿದರೆ ಯೂನಿಟ್‌ಗೆ ರೂ. 9.56 ರೂಪಾಯಿ ನೀಡುತ್ತೇವೆ (ಸಬ್ಸಿಡಿ ರಹಿತ) ಕೊಡುತ್ತೇವೆಂದ ಬೆಸ್ಕಾಂ ಹೇಳಿತ್ತು. ಈಗ ದರವನ್ನು ಕಡಿಮೆ ಮಾಡಿರುವ ಬೆಸ್ಕಾಂ ಪ್ರತಿ ಯೂನಿಟ್‌ಗೆ 7.08 ರೂಪಾಯಿ ನೀಡುತ್ತಿದೆ. ಸಬ್ಸಿಡಿ ತೆಗೆದುಕೊಂಡರೆ, ಪ್ರತಿ ಯೂನಿಟ್‌ಗೆ 6.03 ರೂಪಾಯಿ ನೀಡುತ್ತಿದೆ. ಇದು ಯೋಜನೆ ಆರಂಭದಲ್ಲಿ ರೈತರು ಹಾಕಿಕೊಂಡ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದೆ.

ನಮಗೆ ತಾಂತ್ರಿಕ ಮಾಹಿತಿ/ಅನುಭವ ಇಲ್ಲ, ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣದ ನಂತರ ಯಾರೊಬ್ಬರೂ ಈ ಕಡೆ ತಲೆ ಹಾಕಿಲ್ಲ”
ಮಂಜುನಾಥ ಹೊಸಳ್ಳಿ, ಸೋಲಾರ್ ಘಟಕದ ಮಾಲೀಕರು. 

ಸಮಸ್ಯೆ ಏನು?

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೆಲ ಗ್ರಿಡ್ ಸಂಪರ್ಕದ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನಾ ಘಟಕದ ಫಲಾನುಭವಿಗಳನ್ನು/ಮಾಲಿಕರನ್ನು ‘ಸಮಾಚಾರ’ ಮಾತನಾಡಿಸಿದಾಗ, ಯೋಜನೆ ಹಲವು ಸಮಸ್ಯೆಗಳ ಆಗರವಾಗಿರುವುದು ಕಂಡುಬಂದಿದೆ.

ಬಹಳಷ್ಟು ರೈತರಿಗೆ ಸೋಲಾರ್ ಘಟಕದ ನಿರ್ವಹಣೆ ಗೊತ್ತಿಲ್ಲ. ಅಂದರೆ ನಿರ್ವಹಣಾ ಮಾಹಿತಿ/ ಜಾಗೃತಿ ಸರಿಯಾಗಿ ನೀಡಲಾಗಿಲ್ಲ. “ನಿಮ್ಮದೇನು ಕೆಲಸ ಇಲ್ರಿ ವಿದ್ಯುತ್ ಅದಕ್ಕದೇ ಉತ್ಪಾದನೆಯಾಗಿ ನೀವು ಬಳಸಿಕೊಂಡು ಉಳಿದಿದ್ದು ಗ್ರಿಡ್‌ಗೆ ಹೋಗಿ ಅದರಿಂದ ನಿಮಗೆ ರೊಕ್ಕ ಬರುತ್ತದೆ,’’ ಎಂಬ ಉಡಾಫೆ ಧೋರಣೆ ಅದಿಕಾರಿಗಳಿಂದ ಬರುತ್ತಿದೆ. ಯೋಜನಾ ಮಾಹಿತಿ ಹೊರತಾಗಿಯೂ, ರೈತರಿಗೆ ಹಾಕಿದ ಬಂಡವಾಳ ಹಾಗೂ ಬರುತ್ತಿರುವ ಆದಾಯ ಸಾಲದ ಹೊರೆಯನ್ನಷ್ಟೆ ಹೆಚ್ಚು ಮಾಡುತ್ತಿದೆ.

ಯಾವ ಗುಣಮಟ್ಟದ ಉಪಕರಣಗಳನ್ನು ಬಳಸಲಾಗಿದೆ ಎಂಬ ಮಾಹಿತಿ ಕೆಲವೇ ಜನರ ಹತ್ತಿರ ಮಾತ್ರವಿದೆ. ಘಟಕವನ್ನು ಅಳವಡಿಸಿದ ಸಂಸ್ಥೆ ಅದೆಲ್ಲವನ್ನೂ ಮುಚ್ಚಿಟ್ಟು ವಿದ್ಯುತ್ ಕಂಪನಿ ಉತ್ಪಾದನಾ ದೃಢೀಕರಣ ಪತ್ರ ನೀಡುವ ತನಕ ನಿಗಧಿತ ವಿದ್ಯುತ್ ಉತ್ಪಾದನೆಯಾಗುವಂತೆ ನೋಡಿಕೊಂಡು ಆಮೇಲೆ ಕಾಲ್ಕಿತ್ತಿದೆ ಎನ್ನುತ್ತಾರೆ ರೈತರು. ಸುಮಾರು 25ವರ್ಷಗಳಷ್ಟು ದೀರ್ಘ ಕಾಲದ ಅಭಿವೃದ್ಧಿಯ ಮಹದಾಸೆಯ ಯೋಜನೆ ಆರೇ ತಿಂಗಳಲ್ಲಿ ಕುಂಟಲು ಶುರುವಾಗಿದೆ.

ಇನ್ಸ್ಟಾಲೇಶನ್ ಮಾಡಿದ ಕಂಪನಿ ನಮಗೆ ಸೋಲಾರ್ ಘಟಕ ನಿರ್ಮಾಣದ ಒಟ್ಟೂ ಮೊತ್ತದ ಬಿಲ್ ಮಾತ್ರ ನೀಡಿದೆ, ಯಾವ ಯಾವ ಉಪಕರಣಗಳಿಗೆ ಎಷ್ಟು ಎಂಬುದನ್ನೇ ನಮೂದಿಸಿಲ್ಲ, ಅಲ್ಲದೇ ಗ್ಯಾರಂಟಿ, ವಾರಂಟಿಗಳನ್ನೂ ನಮೂದಿಸಿಲ್ಲ. 
ಗಣಪತಿ ಹೆಗಡೆ, ಬಾಳೇಗದ್ದೆ. 

ರೈತರ ಅನುಮಾನವೇನು?

ಕೆಲವು ರೈತರ ಅಭಿಪ್ರಾಯದಂತೆ ಇನಸ್ಟಾಲೇಶನ್ ಮಾಡಿದ ಕಂಪನಿಯು ವಿದ್ಯುತ್ ಕಂಪನಿ ದೃಢೀಕರಣ ಪತ್ರ ನೀಡಿದ ನಂತರ ಈ ಮೊದಲು ಅಳವಡಿಸಲಾಗಿದ್ದ ಉತ್ತಮ ದರ್ಜೆಯ ಕೇಬಲ್ ಮತ್ತು ಮೀಟರ್‌ಗಳನ್ನು ಬದಲಾಯಿಸಿದೆ. ನಂತರ ಪುನಃ ಅಳವಡಿಸಲಾದ ಕೇಬಲ್ ಮೂಲಕ ಉತ್ಪಾದನೆಗೊಂಡ ವಿದ್ಯುತ್ ಸರಿಯಾಗಿ ಗ್ರಿಡ್‌ಗೆ ಸಪ್ಲೈ ಆಗುತ್ತಿಲ್ಲ. ಘಟಕ ನಿರ್ಮಾಣವಾದ ಕೆಲವೇ ತಿಂಗಳುಗಳಲ್ಲಿ ಹಳ್ಳ ಹಿಡಯುತ್ತಿದೆ.

ಘಟಕ ನಿರ್ಮಾಣ ಪೂರ್ವದಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಆಗುತ್ತದೆಂದು ತಿಳಿಸಲಾಗಿತ್ತೋ ಅದರ 60% - 80%ಗೆ ಉತ್ಪಾದನೆ ಬಂದು ನಿಂತಿದೆ. ಅರಿವಿಗೆ ಬಾರದಂತೆ ಕಳಪೆ ದರ್ಜೆಯ ಉಪಕರಣಗಳನ್ನು ಅಳವಡಿಸಲಾಗಿದೆ ಎಂಬುದು ರೈತರ ಆರೋಪ. ಅನುಮಾನ ಪರಿಹಾರಕ್ಕೆ ಯಾರನ್ನು ಸಂಪರ್ಕಿಸಬೇಕೆಂಬುದು ತಿಳಿದಿಲ್ಲ. ಫಲಾನುಭವಿ ಮತ್ತು ಘಟಕ ಅಳವಡಿಸಿದ ಕಂಪನಿ ಮಧ್ಯೆ ಆಗಿರುವ ಒಪ್ಪಂದದ ಪ್ರತಿ ಬಹಳಷ್ಟು ರೈತರ ಹತ್ತಿರವಿಲ್ಲ. ಈ ಒಪ್ಪಂದ ಇಂಗ್ಲಿಷ್ ಭಾಷೆಯಲ್ಲಿರುವುದರಿಂದ ಹಳ್ಳಿಗರಿಗೆ ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದರ ಜತೆಗೆ ರೈತರ ಘಟಕದಿಂದ ಗ್ರಿಡ್‌ಗೆ ಪೂರೈಕೆಯಾದ ವಿದ್ಯುತ್‌ಗೆ ಸರಕಾರದಿಂದ ನಿಗಧಿಪಡಿಸಲಾದ ಬೆಲೆಯನ್ನು ವಿದ್ಯುತ್ ಕಂಪನಿಗಳು ನೀಡುತ್ತಿಲ್ಲ. ಹಲವಾರು ಬಾರಿ ಅಲೆಯಬೇಕಾಗುತ್ತದೆ. ಸುಮಾರು 6 ತಿಂಗಳುಗಳಿಂದ 2 ವರ್ಷಗಳವರೆಗೆ ಬಾಕಿ ಉಳಿಸಿಕೊಂಡ ಉದಾಹರಣೆಗಳೂ ಬೇಕಾದಷ್ಟಿವೆ. ಕೇಳಿದಾಗಲೆಲ್ಲ 'ಫಂಡಿಲ್ಲ' ಎಂಬುದೇ ಉತ್ತರ ಎನ್ನುತ್ತಾರೆ ರೈತರು.

ಸಮಸ್ಯೆ ಪರಿಹರಿಸೋರು ಯಾರು?

ನಮ್ಮ ಘಟಕಗಳಲ್ಲಿ ಅಳವಡಿಸಲಾದ ಉಪಕರಣಗಳ ಗುಣಮಟ್ಟದ ಬಗ್ಗೆ ನಮಗೆ ಖಾತ್ರಿಯಿಲ್ಲ. ಇದರ ಗುಣಮಟ್ಟ ಪರಿಶೀಲನೆ ಜವಾಬ್ಧಾರಿ ಯಾರದ್ದೆಂದು ತಿಳಿದಿಲ್ಲ. ಘಟಕ ನಿರ್ಮಾಣ ಮಾಡಿದ ಕಂಪನಿಯಿಂದ ಯಾರೂ ಬಂದು ಪರಿಶೀಲಿಸಿಲ್ಲ. "ಈಗಾಗಲೇ ಸಾಲ ಭಾದೆ ತಾಳದೇ ರೈತರ ಆತ್ಮಹತ್ಯೆ ಕುರಿತು ಕೇಳುತ್ತಿದ್ದೇವೆ. ಈ ಅಸಮರ್ಪಕ ಘಟಕಗಳು ಇನ್ನಷ್ಟು ರೈತರ ಆತ್ಮಹತ್ಯೆಗೆ ಕಾರಣವಾಗಲಿದೆ,” ಎಂದು ಸಂಕಷ್ಟಗಳನ್ನು ಹೇಳಿಕೊಳ್ಳುತ್ತಾರೆ ರೈತರು.

ಬದಲಾಗುತ್ತಿರುವ ಜಗತ್ತು ನವೀಕರಿಸಬಹುದಾದ ಇಂಧನ ಮೂಲಗಳತ್ತ ಮುಖಮಾಡಿದೆ. ಸೋಲಾರ್‌ ವಿದ್ಯುತ್ ಉತ್ಪಾದನೆಗೆ ಒಲವು ಹೆಚ್ಚಾಗಿದೆ. ಇದನ್ನು ಬಳಸಿಕೊಂಡು ರೈತ ಸಮುದಾಯಕ್ಕೆ ಬದಲಿ ಆದಾಯ ಮೂಲವನ್ನು ಸೃಷ್ಟಿಸುವ ಕೆಲಸವನ್ನು ಮೇಲಿನ ಯೋಜನೆ ಮಾಡಲು ಹೊರಟಿತ್ತು. ಆದರೆ ಅಧಿಕಾರಿಗಳ, ಮಧ್ಯವರ್ತಿ ಕಂಪನಿಗಳ ಅಸಪಮರ್ಪಕ ನಿರ್ವಹಣೆಯಿಂದಾಗಿ ಯೋಜನೆ ಹಳ್ಳ ಹಿಡಿಯುತ್ತಿದೆ. ಅಷ್ಟೆ ಅಲ್ಲ, ಸರಕಾರವನ್ನು ನಂಬಿಕೊಂಡು ಬಂಡವಾಳ ಹೂಡಿದ ರೈತರು ಕಂಗಾಲಾಗಿದ್ದಾರೆ. ಇದಿಷ್ಟು ಮಾಹಿತಿ ನೂತನ ಇಂಧನ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಸಿಎಂ ಕುಮಾರಸ್ವಾಮಿ ಗಮನಕ್ಕೆ...