‘ಮುಂದೆ ಬರುವ ಚುನಾವಣೆಗೆ ಸಿದ್ಧರಾಗಿ’: ಆಪರೇಷನ್‌ ಕಮಲದ ಸುಳಿವು ಕೊಟ್ಟ ಯಡಿಯೂರಪ್ಪ!
GROUND REPORT

‘ಮುಂದೆ ಬರುವ ಚುನಾವಣೆಗೆ ಸಿದ್ಧರಾಗಿ’: ಆಪರೇಷನ್‌ ಕಮಲದ ಸುಳಿವು ಕೊಟ್ಟ ಯಡಿಯೂರಪ್ಪ!

“ಮುಂದೆ ಬರುವ ಯಾವುದೇ ರೀತಿಯ ಚುನಾವಣೆಗಳಿಗೆ ಈಗಲೇ ಸಿದ್ಧರಾಗಿರಿ. ಯಾವುದೇ ಕಾರಣಕ್ಕೂ ಹಿಂದೆಗೆಯಬಾರದು” ಎನ್ನುವ ಮೂಲಕ ಆಪರೇಶನ್ ಕಮಲದ ಮುನ್ಸೂಚನೆ ನೀಡಿದ್ದಾರೆ ನೂತನ ಸಿಎಂ ಬಿ.ಎಸ್‌. ಯಡಿಯೂರಪ್ಪ.

ಒಂದೆಡೆ ಸರ್ಕಾರ ರಚನೆಗೆ ಶಾಸಕರ ಕೊರತೆ, ಸರ್ಕಾರ ರಚನೆಗೆ ಸುಪ್ರೀಂ ಅಸ್ತು, ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ಶಾಸಕರ ಧರಣಿ, ಜೈಕಾರ, ಧಿಕ್ಕಾರಗಳು. ಮತ್ತೊಂದೆಡೆ ಕೊನೆಗೂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವ ವಚನ ಸ್ವೀಕರಿಸಿ ಆಡಿದ ಮಾತುಗಳು ಹಲವು ಕೂತೂಹಲಗಳಿಗೆ ಕಾರಣವಾದವು.

ಎಲ್ಲರ ನಿರೀಕ್ಷೆಯನ್ನೂ ಮೀರಿಸುವಂತೆ ಸಿಎಂ ಆದ ಮೇಲೆ ಪ್ರಥಮ ಬಾರಿಗೆ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷದ ಶಾಸಕರು, ಸಂಸದರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, “ ಮುಂದೆ ಬರುವ ಯಾವುದೇ ರೀತಿಯ ಚುನಾವಣೆಗಳಿಗೆ ಈಗಲೇ ಸಿದ್ಧರಾಗಿರಿ. ಯಾವುದೇ ಕಾರಣಕ್ಕೂ ಹಿಂದೆಗೆಯಬಾರದು” ಎನ್ನುವ ಮೂಲಕ ಆಪರೇಶನ್ ಕಮಲದ ಮುನ್ಸೂಚನೆ ನೀಡಿದ್ದಾರೆ.

“ಮುಂದೆ 2 ಸ್ಥಾನಗಳಿಗೆ ನಡೆವ ಚುನಾವಣೆಗಳು, ಉಪ ಚುನಾವಣೆಗಳನ್ನು ಗೆಲ್ಲಲು ಸರ್ವ ಸನ್ನದ್ದರಾಗಿರಿ. ಸಂಸತ್ತಿಗೆ ನಡೆವ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಿಸಬೇಕು. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮವಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಲ ತುಂಬಬೇಕು. ಎಲ್ಲ ಸ್ಥಾನಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಅವರು ಶಾಸಕರಿಗೆ ಕರೆ ನೀಡಿದರು.

ವಿಶ್ವಾಸ ಮತ ಸಾಬೀತಿಗೆ 15 ದಿನವೂ ಬೇಕಿಲ್ಲ

“ವಿಶ್ವಾಸ ಮತ ಸಾಬೀತು ಮಾಡಲು ನಮಗೆ 15 ದಿನಗಳೂ ಬೇಕಿಲ್ಲ. ಹೀಗಾಗಿ ನಾವು ಆದಷ್ಟು ಬೇಗ ವಿಶ್ವಾಸ ಮತ ಸಾಬೀತು ಮಾಡಲಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಯಾರೂ ಲೆಕ್ಕ ಹಾಕಲಾಗದಷ್ಟಿದೆ. ಜನರು ನಮಗೆ ಭಾರಿ ಶಕ್ತಿ ನೀಡಿದ್ದಾರೆ. ನಾವು ಸರ್ಕಾರ ರಚನೆ ಮಾಡುವುದು ಗ್ಯಾರಂಟಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನಮ್ಮ ಕಾರ್ಯಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ್ದಾರೆ. ಅವರಿಗೆ ನಾವೆಲ್ಲ ಕೃತಜ್ಞತೆ ಸಲ್ಲಿಸಬೇಕು. ವಿಶ್ವಾಸ ಸಾಬೀತಿಗೆ ಇನ್ನೂ ಹಲವು ದಿನಗಳಿವೆ. ಕ್ಷೇತ್ರಗಳಿಗೆ ತೆರಳಿ ಜನರಿಗೆ ಗೆಲುವಿನ ಸುಭಾಷಯ ತಿಳಿಸಿ. ಜನರೊಂದಿಗೆ ಸಂಪರ್ಕದಲ್ಲಿರುವ ಮೂಲಕ ಅವರ ಅಹವಾಲುಗಳನ್ನು ಆಲಿಸಿ” ಎಂದರು.

ಬಿಜೆಪಿ ಅವಧಿಯ ಯೋಜನೆಗಳಿಗೆ ಮರು ಜೀವ

“ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿಬಿಟ್ಟಿದೆ. ತಮ್ಮ ನೇತೃತ್ವದ ಬಿಜೆಪಿ ಸರ್ಕಾದಲ್ಲಿ ಜಾರಿಗೆ ತಂದ ಭಾಗ್ಯ ಲಕ್ಷ್ಮಿ ಬಾಂಡ್, ಸೈಕಲ್ ನೀಡಿಕೆ ಮುಂತಾದವುಗಳನ್ನು ಮುಂದುವರೆಸಬೇಕಾಗಿದೆ. ಜನರು ನಮ್ಮ ಸರ್ಕಾರದ ಕೆಲಸಗಳನ್ನು ಮೆಚ್ಚಿ ಪ್ರಚಂಡ ಮತದಿಂದ ಆರಿಸಿ ಕಳುಹಿಸಿದ್ದಾರೆ” ಎನ್ನುವ ಮೂಲಕ ಬಿಎಸ್‌ವೈ ತಮ್ಮ ಕಾಲದ ಯೋಜನೆಗಳಿಗೆ ಮರು ಜೀವ ನೀಡುವ ಸೂಚನೆ ನೀಡಿದರು.

“ಚುನಾವಣೆ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಎಷ್ಟೆಲ್ಲಾ ನಿಂದಿಸಿಕೊಂಡವು. ಲಿಂಗಾಯತ ಧರ್ಮ, ವೀರಶೈವ ಎಂದು ಜನರನ್ನು ಹೊಡೆಯಲು ಯತ್ನಿಸಿದವು. ಜೆಡಿಎದ್‌ನನ್ನು ಬಿಜೆಪಿಯ ಬಿ ಟೀಮ್ ಎಂದು ಕರೆಯಲಾಯಿತು. ಆದರೆ ಈಗ ಅವರು ಯಾರ ಜೊತೆ ಇದ್ದಾರೆ ಎಂದು ರಾಜ್ಯದ ಜನತೆಯೇ ನೋಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ ಬಿಎಸ್ ವೈ, ಗೂಂಡಾಗಿರಿ ರಾಜಕೀಯಕ್ಕೆ ಇನ್ನು ಮುಂದೆ ಜಾಗವಿಲ್ಲ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ

ಎರಡು ದಿನಗಳಲ್ಲಿ ಸಾಲ ಮನ್ನಾ

"ರಾಜ್ಯದ ಜನತೆ ಅಪಾರ ನಂಬಿಕೆಯನ್ನಿಟ್ಟು ನಮ್ಮನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಹತ್ತು ಹಲವು ಜವಾಬ್ದಾರಿಗಳು ನಮ್ಮ ಮೇಲಿವೆ. ಹತ್ತಾರು ಭರವಸೆಗಳನ್ನು ನೀಡಿದ್ದೇವೆ. ಅವುಗಳನ್ನು ಮೊದಲು ಪೂರೈಸಬೇಕಿದೆ. ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡುವ ಬಗ್ಗೆ ಇಂದು ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದಿದ್ದೇನೆ. ಒಂದೆರಡದು ದಿನಗಳಲ್ಲಿ ಎಲ್ಲವನ್ನೂ ಪರಾಮರ್ಶಿಸಿ ಸಹಕಾರ ಸಂಘಗಳು, ನೇಕಾರರ ಸಾಲ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇರುವ ಸಾಲಗಳನ್ನು ಮನ್ನಾ ಮಾಡುತ್ತೇವೆ” ಎಂದು ಅವರು ಭರವಸೆ ನೀಡಿದರು.

“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಹತ್ತು ಹಲವು ಯೋಜನೆಗಳು ಸ್ಥಗಿತಗೊಂಡಿವೆ. ರಾಜ್ಯದಲ್ಲಿ ಸುಮಾರು 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವಕ್ಕೆಲ್ಲಾ ಪರಿಹಾರ ಕಂಡುಹಿಡಿಯವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಅವರು ಶಾಸಕರಿಗೆ ನೆನಪಸಿದರು.

Also read: ಮೊದಲ ದಿನವೇ ರೈತರ ಮೂಗಿಗೆ ‘ಸಾಲ ಮನ್ನಾ’ ತುಪ್ಪ ಸವರಿದ ಸಿಎಂ ಯಡಿಯೂರಪ್ಪ

ಯಾವುದೇ ಸಂದರ್ಭದಲ್ಲಿ ಅಧಿವೇಶನ ಕರೆಯಬಹುದು

ವಿಶ್ವಾಸ ಮತ ಯಾಚನೆಗಾಗಿ ಯಾವುದೇ ಸಂದರ್ಭದಲ್ಲಿ ಅಧಿವೇಶನ ಕರೆಯಬಹುದು. ತಡ ಮಾಡದೆ ನೀವು ಬಂದು ನಮ್ಮನ್ನು ಸೇರಿಕೊಳ್ಳಬೇಕಾಗುತ್ತದೆ. ಹೀಗಾಗಿ ನಿರಂತರ ಸಂಪರ್ಕದಲ್ಲಿರಿ ಎಂದ ಅವರು, ಜನರಿಂದ ತಿರಸ್ಕೃತವಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಗಳು ಅಧಿಕಾರ ಕಬಳಿಸಲು ಪ್ರಜಾಪ್ರಭುತ್ವಕ್ಕೇ ಅವಮಾನ ಮಾಡುತ್ತಿವೆ. ಹತಾಶೆಯಿಂದ ಬೀದಿಯಲ್ಲಿ ಕುಳಿತಿವೆ ಎಂದು ವಾಗ್ದಾಳಿ ನಡೆಸಿದು.

ಶಾಸಕರನ್ನು ಕೂಡಿಹಾಕಿ ಗೂಂಡಾಗಿರಿ

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ಶಾಸಕರ ಮೇಲೆ ಗೂಂಡಾಗಿರಿ ಮಾಡುತ್ತಿವೆ ಎಂದು ಬೇಹುಗಾರಿಕೆ ಇಲಾಖೆಯಿಂದ ಮಾಹಿತಿ ಬಂದಿದೆ. ನಂಬಿಕೆ ಇಲ್ಲದವರಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮದೇ ಶಾಸಕರನ್ನು ಒಂದೆಡೆ ಕೂಡಿ ಹಾಕಿದ್ದಾರೆ. ಅವರಿಗೆ ಮಾತನಾಡಲ ಯಾರೊಡನೆಯೂ ಮಾತನಾಡಲು ಬಿಡುತ್ತಿಲ್ಲ. ಮೊಬೈಲ್ ಬಳಸಲೂ ಬಿಡುತ್ತಿಲ್ಲ. ಮನೆಯವರು ಬೆರೆಯಲೂ ಬಿಡುತ್ತಿಲ್ಲ. ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅವಮಾನ ಎಂದು ಬಿಎಸ್‌ವೈ ಆರೋಪಿಸಿದರು.

ನಾವು ಎಲ್ಲರ ನಿರೀಕ್ಷೆಗಳನ್ನೂ ಮೀರಿ ಬಹುಮತ ಸಾಬೀತು ಮಾಡುತ್ತೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗಳಲ್ಲಿ ಸಾಕಷ್ಟು ಮಂದಿ ಅತೃಪ್ತರಿದ್ದಾರೆ. ಆವರು ನಮ್ಮೊಂದಿಗೆ ಕೈ ಜೋಡಿಸುವುದು ಗ್ಯಾರಂಟಿ.
- ಬಿ. ಶ್ರೀರಾಮುಲು, ಬಿಜೆಪಿ ಶಾಸಕ

ಜೆಡಿಎಸ್, ಕಾಂಗ್ರೆಸ್ ವಿರುದ್ಧ ಕಮಲ ಪಡೆ ಯೋಜಿತ ದಾಳಿ

ರೆಸಾರ್ಟ್‌ಗಳಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಿರುದ್ಧ ಬಿಜೆಪಿಯ ಒಕ್ಕಲಿಗ ಮತ್ತು ದಲಿತ ನಾಯಕರು ಗಂಟೆಗೊಬ್ಬರಂತೆ ಯೋಜಿತ ವಾಗ್ದಾಳಿ, ಟೀಕೆ, ಲೇವಡಿ ಮಾಡಿದರು. ಈ ಮೂಲಕ ಇಡೀ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು ಮಾತ್ರ ತಪ್ಪು ಮಾಡುತ್ತಿವೆ ಎಂದು ಬಿಂಬಿಸಲು ಯತ್ನಿಸಿದರು. ಕೇಂದ್ರ ಸಚಿವ ಅನಂತ್ ಕುಮಾರ್ ಬಿ.ಎಸ್.ಯಡಿಯೂರಪ್ಪ ದೇಶದಲ್ಲೇ ಅತಿ ದೊಡ್ಡ ರೈತ ನಾಯಕ ಎಂದು ಹಾಡಿ ಹೊಗಳಿದರು.

ಆರ್. ಅಶೋಕ್ ಮಾತನಾಡಿ, “ಕಾಂಗ್ರೆಸ್ ಹತಾಶೆಯಿಂದ ಪ್ರಜಾಪ್ರಭುತ್ವವನ್ನು ಅಪಹರಣ ಮಾಡಲು ರೆಸಾರ್ಟ್ ರಾಜಕಾರಣ ಮಾಡುತ್ತಿವೆ. ಈ ಮೂಲಕ ಶಾಸಕರನ್ನು ನಂಬಿಕೆ ಇಲ್ಲದವದವರಂತೆ ನಡೆಸಿಕೊಳ್ತಿವೆ” ಎಂದು ಆರೋಪಿಸಿದರು. ನಂತರ ಮಾತನಾಡಿದ ಮತ್ತೊಬ್ಬ ನಾಯಕಿ ಶೋಭಾ ಕರಂದ್ಲಾಜೆ, “ಕಾಂಗ್ರೆಸ್ ಎಲ್ಲ ಕಡೆ ಸೋತಿದೆ. ಜನರು ಅವರಿಗೆ ಅತಿ ಕಡಿಮೆ ಮತ ನೀಡಿವೆ ಆದರೂ ಅಧಿಕಾರಕ್ಕಾಗಿ ಹತಾಶೆಯ ಕೆಲಸಕ್ಕೆ ಕೈ ಹಾಕಿದ್ದಾರೆ” ಎಂದು ಲೇವಡಿ ಮಾಡಿದರು. ಶಾಸಕ ಅರವಿಂದ ಲಿಂಬಾವಳಿ ಕೂಡ ಜೆಡಿಎಸ್, ಕಾಂಗ್ರೆಸ್ ನಾಯಕರನ್ನು ತರಾಟೆ ತೆಗೆದುಕೊಂಡರು.

ಬೆಳಿಗ್ಗೆಯಿಂದಲೇ ಶಾಸಕರು, ಸಂಸದರು, ಕಾರ್ಯಕರ್ತರ ದಂಡೇ ಬಿಜೆಪಿ ಕಚೇರಿಯತ್ತ ಬರತೊಡಗಿದರು. ಯಡಿಯೂರಪ್ಪ ತುಮಕೂರಿಗೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದು ಬರುವ ವೇಳೆಗೆ ಈಡೀ ಬಿಜೆಪಿ ಕಚೇರಿಗೆ ಜನ ಜಂಗುಳಿಯಿಂದ ತುಂಬಿ ಹೋಗಿತ್ತು. ಶಾಸಕರ ಮುಖದಲ್ಲಿ ಮಂದಹಾಸ. ಪರಸ್ಪರ ಸುಭಾಷಯ, ಕುಶಲೋಪರಿ, ಸಿಹಿ ಹಂಚಿಕೆ ಎದ್ದು ಕಾಣುತ್ತಿದ್ದವು.