samachara
www.samachara.com
ಯಡಿಯೂರಪ್ಪಗೆ ಹೂಗುಚ್ಚ; ಶೋಭಾ ಮುಖ ಮಂದಸ್ಮಿತ: ಇದು ಬಿಜೆಪಿ ಕಚೇರಿಯ ಬುಧವಾರದ ಹೈಲೈಟ್‌!
GROUND REPORT

ಯಡಿಯೂರಪ್ಪಗೆ ಹೂಗುಚ್ಚ; ಶೋಭಾ ಮುಖ ಮಂದಸ್ಮಿತ: ಇದು ಬಿಜೆಪಿ ಕಚೇರಿಯ ಬುಧವಾರದ ಹೈಲೈಟ್‌!

ಬುಧವಾರ ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕರೊಂದಿಗೆ ಸರ್ಕಾರ ರಚಿಸಲು ಕೈಗೊಳ್ಳಬೇಕಾದ ಹೆಣೆದ ತಂತ್ರ ಪ್ರತಿ ತಂತ್ರಗಳಿಗೆ ಕಚೇರಿ ಸಾಕ್ಷಿಯಾಯಿತು. ಇಡೀ ದಿನ ಕಚೇರಿಯಲ್ಲಿ ನಡೆದಿದ್ದೇನು? ಎಂಬ ಟೈಮ್‌ಲೈನ್ ‘ಸಮಾಚಾರ’ ಇಲ್ಲಿ ಕಟ್ಟಿಕೊಟ್ಟಿದೆ.

2018ರ ವಿಧಾನಸಭಾ ಚುನಾವಣಾ ಫಲಿತಾಂಶ ಅತಂತ್ರವಾಗಿದೆ. ಇದರ ಬೆನ್ನಲ್ಲೆ ಕರ್ನಾಟಕದ ರಾಜಕೀಯ ಅಕ್ಷರಶಃ ‘ಕುದುರೆ ವ್ಯಾಪಾರ’ದ ಸಂತೆಯಾಗಿ ಮಾರ್ಪಟ್ಟಿದೆ. ಮೂರು ಪಕ್ಷಗಳೂ ರಾಜ್ಯಪಾಲರೆದುರು ಸರ್ಕಾರ ರಚಿಸಲು ಅವಕಾಶ ಕೊಡುವಂತೆ ದುಂಬಾಲು ಬೀಳುತ್ತಿವೆ.

ಇನ್ನೊಂದೆಡೆ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕ್ಷಣ ಕ್ಷಣಕ್ಕೂ ಹೊಸ ಹೊಸ ರಾಜಕೀಯ ವಿದ್ಯಮಾನಗಳು ಜರುಗುತ್ತಿವೆ. ಬುಧವಾರ ರಾಜ್ಯ ಬಿಜೆಪಿ ನಾಯಕರು ಕೇಂದ್ರ ನಾಯಕರೊಂದಿಗೆ ಸರ್ಕಾರ ರಚಿಸಲು ಕೈಗೊಳ್ಳಬೇಕಾದ ಹೆಣೆದ ತಂತ್ರ ಪ್ರತಿ ತಂತ್ರಗಳಿಗೆ ಕಚೇರಿ ಸಾಕ್ಷಿಯಾಯಿತು. ಇಡೀ ದಿನ ಕಚೇರಿಯಲ್ಲಿ ನಡೆದಿದ್ದೇನು? ಎಂಬ ಟೈಮ್‌ಲೈನ್ 'ಸಮಾಚಾರ’ ಇಲ್ಲಿ ಕಟ್ಟಿಕೊಟ್ಟಿದೆ.

ಬಿ.ಎಸ್.ವೈ.ನೇತೃತ್ವದಲ್ಲಿ 104 ಶಾಸಕರ ಶಾಸಕರ ಬೆಂಬಲದ ಔಪಚಾರಿಕ ಪತ್ರವನ್ನು ಹೊತ್ತು ರಾಜ್ಯಪಾಲ ವಜೂಬಾಯ್ ವಾಲಾ ಅವರನ್ನು ಭೇಟಿ ಮಾಡುವ ಮೂಲಕ ಬಿಜೆಪಿಯ ರಾಜಕೀಯ ನಡೆಗಳು ಆರಂಭವಾದವು. ರಾಜ್ಯಪಾಲರಿಗೆ ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಶಾಸಕಾಂಗ ಪಕ್ಷದ ನಾಯಕನಾದ ತಮ್ಮನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅನುಮತಿ ನೀಡಬೇಕು ಎಂದೂ ಕೋರಿದರು.

ಈ ವೇಳೆ ಬಿಜೆಪಿ ನಾಯಕರ ಮಾತುಗಳನ್ನು ಕೇಳಿಸಿಕೊಂಡ ರಾಜ್ಯಪಾಲ ವಜೂಬಾಯ್ ವಾಲಾ, ಸರ್ಕಾರ ರಚನೆಗೆ ಆಹ್ವಾನಿಸುವ ಭರವಸೆಯನ್ನು ಬಿಜೆಪಿಗೆ ನೀಡಿದರು ಎಂದು ನಂತರ ಹೊರಬಂದ ನಾಯಕರು ತಿಳಿಸಿದರು. “ಅಗತ್ಯ ಇರುವ 9 ಶಾಸಕರ ಒಪ್ಪಿಗೆ ಪತ್ರವನ್ನು ಸಲ್ಲಿಸುತ್ತೇವೆ. ಅದಕ್ಕೆ ಸಮಯಾವಕಾಶ ನೀಡುವಂತೆ ರಾಜ್ಯಪಾಲರನ್ನು ಮನವರಿಕೆ ಮಾಡಿಕೊಡಲಾಯಿತು,’’ ಎಂಬ ಮಾಹಿತಿ ಬಿಜೆಪಿ ಕಡೆಯಿಂದ ಹೊರಬಿತ್ತು.

ಅಲ್ಲಿಂದ ಅನಂತ್ ಕುಮಾರ್ ಅವರೊಂದಿಗೆ ನೇರವಾಗಿ ಬಿಜೆಪಿ ಕಚೇರಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ‘‘ರಾಜ್ಯಪಾಲರನ್ನು ಭೇಟಿ ಮಾಡಿ ದೊಡ್ಡ ಪಕ್ಷವಾಗಿರುವ ಬಿಜೆಪಿಯನ್ನು ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದ್ದೇವೆ. ಅದಕ್ಕೆ ರಾಜ್ಯಪಾಲರೂ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ನಾವು ಅಗತ್ಯ ಸಂಖ್ಯಾಬಲದ ಶಾಸಕರ ಬಲವನ್ನು ತೋರಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಗ್ಯಾರಂಟಿ,” ಎಂದರು. ಆದರೆ ಸರ್ಕಾರಕ್ಕೆ ಅಗತ್ಯವಾದ 9 ಶಾಸಕರನ್ನು ಎಲ್ಲಿಂದ ತರುತ್ತೀರಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೆ "ಕಾದು ನೋಡಿ,” ಎಂದಷ್ಟೇ ಹೇಳಿ ಹೊರಟರು.

ಯಡಿಯೂರಪ್ಪಗೆ ಹೂಗುಚ್ಚ; ಶೋಭಾ ಮುಖ ಮಂದಸ್ಮಿತ: ಇದು ಬಿಜೆಪಿ ಕಚೇರಿಯ ಬುಧವಾರದ ಹೈಲೈಟ್‌!

ಇದರ ಬೆನ್ನಲ್ಲೇ ಮೂರನೇ ಮಹಡಿಯಲ್ಲಿ ಅನಂತ್ ಕುಮಾರ್, ಯಡಿಯೂರಪ್ಪ ಅವರಿಗೆ ಪುಷ್ಪಗುಚ್ಚ ನೀಡುವ ಮೂಲಕ ಬಿಜೆಪಿ ಶಾಸಕಾಂಗ ನಾಯಕನ್ನಾಗಿ ಆರಿಸಲಾಗಿದೆ ಎಂದು ಘೋಷಿಸಿದರು. ಇದಕ್ಕೆ ಸಭಾಂಗಣದಲ್ಲಿ ಹಾಜರಿದ್ದ ಶಾಸಕರೂ ಚಪ್ಪಾಳೆಯ ಕರಾಡತನ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ವೇದಿಕೆಯಲ್ಲಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರ ಮುಖದಲ್ಲಿ ನಗು ಎದ್ದು ಕಾಣುವಂತಿತ್ತು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಮುಂತಾದವರಿವರೂ ನಗುತ್ತಾ ಫೋಟೋಗೆ ಫೋಸ್ ನೀಡಿದರು. ಈ ವೇಳೆ ಅನಂತ್ ಕುಮಾರ್ ಶಾಸಕರನ್ನು ಉದ್ದೇಶಿಸಿ ಮಾತನಾಡಿದರು.

ಪತ್ರಕರ್ತರನ್ನು ಹೊರ ಹಾಕಿದ ಕಾರ್ಯಕರ್ತರು:

ಈ ವೇಳೆ ಪತ್ರಕರ್ತರು ಪೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದರು. ಧಿಡೀರನೆ ಬಿಜೆಪಿ ಕಾರ್ಯಕರ್ತರು ಪತ್ರಕರ್ತರನ್ನು ಹೊರ ಹೋಗುವಂತೆ ನೂಕುತ್ತಾ ಬಂದರು. ಇದರಿಂದ ಆಶ್ಚರ್ಯಗೊಂಡ ಪತ್ರಕತ್ರರು ‘ನೀವೇ ತಾನೇ ಮೂರನೇ ಮಹಡಿಗೆ ಕರೆದಿದ್ದು, ಮತ್ತೆ ಯಾಕೆ ಹೊರ ದಬ್ಬುತ್ತಿದ್ದೀರಿ ‘ ಎಂದು ಪ್ರಶ್ನಿಸಿದರು. ಆದರೆ ಬಿಜೆಪಿ ಮಾಧ್ಯಮ ವಿಭಾಗದ ಪದಾಧಿಕಾರಿಗಳು “ಇಲ್ಲ ಇಲ್ಲ ನಾಯಕರ ಫೋಟೋ ತೆಗೆದುಕೊಳ್ಳಲು ಮಾತ್ರ ಕರೆದಿದ್ದು,” ಎಂದು ಉತ್ತರಿಸಿದರು. ಈ ವೇಳೆ ಪತ್ರಕತ್ರರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಜಟಾಪಟಿ ನಡೆದವು.

ಮಧ್ಯಾಹ್ನದ ಹೊತ್ತಿಗೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಪ್ರಕಾಶ್ ಜವ್ಡೇಕರ್, ಜೆ.ಪಿ.ನಡ್ಡಾ, ಧರ್ಮೇಂದ್ರ ಪ್ರಧಾನ್, ಮುರಳಿಧರ ರಾವ್ ಮೂರನೆ ಮಹಡಿಯಲ್ಲಿ ನಾಯಕರನ್ನು ಸೇರಿಕೊಂಡರು. ಶಾಸಕರಿಗೆ ಅಗತ್ಯ ಮುನ್ಸೂಚನೆ, ನಡೆದುಕೊಳ್ಳಬೇಕಾದ ರೀತಿಗಳ ಸಲಹೆಯನ್ನು ನೀಡ ತೊಡಗಿದರು. ಯಾವುದೇ ಆಸೆ ಆಮಿಷಗಳಿಗೆ ಕಿವಿ ಕೊಡದಿರುವಂತೆ ಕಿವಿಮಾತಿನ ಪಾಠ ನಡೆಯಿತು.

ಗಣಿಧಣಿ ಸೋಮಶೇಖರ ರೆಡ್ಡಿ, ಮುನಿರಾಜು, ಅರವಿಂದ ಲಿಂಬಾವಳಿ, ತಾರಾ ಮುಂದಾವರು ಹಾಜರಿದ್ದರು. ಆದರೆ ಈ ವೇಳೆಗೆ ಪತ್ರಕತ್ರರನ್ನು ಹೊರ ಹಾಕಲಾಗಿತ್ತು. “ ನಮ್ಮ ಶಾಸಕರನ್ನು ನಗರಕ್ಕೆ ಬರುವಂತೆ ಸೂಚನೆ ನೀಡಿದ್ದೇವೆ. ಎಲ್ಲರನ್ನೂ ಒಂದೆಡೆ ಇರುವ ವ್ಯವಸ್ಥೆ ಮಾಡಲಾಗಿದೆ” ಎಂದು ಹೇಳುವ ಮೂಲಕ ಸಂಸದ ಪ್ರಹ್ಲಾದ್ ಜೋಶಿ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳುವ ಸೂಚನೆನೀಡಿದರು.

ಇನ್ನೊಂದೆಡೆ ಬಿಜೆಪಿ ವಕ್ತಾರರಾದ ವಾಮಾನಾಚಾರ್ಯ, ಪ್ರಕಾಶ್ ಸೇರಿದಂತೆ ಹಲವರು ಪತ್ರಕರ್ತರ ನಡುವೆ ಓಡಾಡುತ್ತಾ “ ನಮ್ಮದು ದೊಡ್ಡ ಪಕ್ಷ, ಸರ್ಕಾರ ರಚಿಸುವ ಹಕ್ಕು ಇದೆ. ಅದನ್ನು ನಾವು ಮಾಡಿಯೇ ತೀರುತ್ತೇವೆ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮಾಮೂಲಿಯಂತೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿವೆ” ಎಂದು ಅಭಿಪ್ರಾಯಗಳನ್ನು ನೀಡುತ್ತಿದ್ದರು.

ಶಾಸಕರ ಕಾಲಿಗೆ ಬಿದ್ದ ಕಾರ್ಯಕರ್ತರು:

ಬುಧವಾರ ಬಿಜೆಪಿ ಕಚೇರಿ ಮುಂದೆ ಕಂಡು ಬಂದ ಓಬಿ ವ್ಯಾನ್‌ಗಳ ಚಿತ್ರ. 
ಬುಧವಾರ ಬಿಜೆಪಿ ಕಚೇರಿ ಮುಂದೆ ಕಂಡು ಬಂದ ಓಬಿ ವ್ಯಾನ್‌ಗಳ ಚಿತ್ರ. 

ಬಿಜೆಪಿ ದೊಡ್ಡ ಪಕ್ಷವಾಗಿದ ಹೊರಹೊಮ್ಮಿದ್ದರಿಂದ ಪುಳಕಿತರಾಗಿದ್ದ ಕಾರ್ಯಕರ್ತರು ಮಲ್ಲೇಶ್ವರ ಕಚೇರಿಯನ್ನು ಹೂವುಗಳಿಂದ ಶೃಂಗರಿಸಿರುವುದು ಎದ್ದು ಕಾಣುತ್ತಿತ್ತು. ಬಿಜೆಪಿ  ಕಾರ್ಯಕರ್ತರು, ಶಾಸಕರು, ಪತ್ರಕರ್ತರು ಹಾಗೂ ಜನ ಸಾಗರವೇ ಜಮಾವಣೆಯಾಗಿತ್ತು. ಬಾಡಿ ಹೋಗಿದ್ದ ಬಿಜೆಪಿ ಕಾರ್ಯಕರ್ತರ ಮುಖದಲ್ಲಿ ಮತ್ತೆ ನಗುವಿನ ಅಲೆ ಎದ್ದು ಕಾಣುತ್ತಿತ್ತು.

ಶಾಸಕರನ್ನು ಹೊಗಳುವುದು, ಕೈ ಕುಲುಕುವುದು, ಸೆಲ್ಪಿ ತೆಗೆದುಕೊಳ್ಳುವ ದೃಷ್ಯಗಳು ಕಾಣ ಬರತೊಡಗಿದವು. ಕೆಲವರಂತೂ ಗೆದ್ದ ಶಾಸಕರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು. ಜೊತೆಗೆ ಸೋತ ಅಭ್ಯರ್ಥಿಗಳು, ತೆರೆ ಮರೆಯಲ್ಲಿ ನಿಂತು ಪಕ್ಷವನ್ನು ಬೆಂಬಲಿಸಿದ ದಲಿತ, ಮುಸ್ಲಿಂ ನಾಯಕರು, ಲಿಂಗಾಯತ ಮುಖಂಡರು ಬಿಜೆಪಿ ಕಚೇರಿ ಆವರಣಕ್ಕೆ ಎಂಟ್ರಿ ಕೊಡತೊಡಗಿದರು. ಎಲ್ಲರ ಮುಖದಲ್ಲಿ ಏನೋ ಸಾಧನೆ ಮಾಡಿದ ಸಂತೋಷ ಉಕ್ಕುತ್ತಿದ್ದವು. ಕೆಲವರ ಮುಖದಲ್ಲಿ ಏನಾಗುವುದೋ ಎಂಬ ಆತಂಕವೂ ಎದ್ದು ಕಾಣುತ್ತಿತ್ತು.

ಕೆಲವರಂತೂ ಪತ್ರಕರ್ತರನ್ನೇ “ ಏನಾಗಬಹುದು ಸಾರ್, ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕಾಗಿ ಕುದುರೆ ವ್ಯಾಪಾರ ಮಾಡ್ತಿವೆ ಅಲ್ಲವೇ,” ಇತ್ಯಾದಿಯಾಗಿ ಪ್ರಶ್ನಿಸುತ್ತಿದ್ದರು.

ಎಂ.ಪಿ.ರೇಣುಕಾಚಾರ್ಯ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಎಂ.ಪಿ.ಕುಮಾರಸ್ವಾಮಿ ಮತ್ತಿತರ ಶಾಸಕರು, “ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ದೊಡ್ಡ ಪಕ್ಷಕ್ಕೆ ಮಾತ್ರ ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಸುಪ್ರೀಂಕೋರ್ಟ್  ಹೇಳಿದೆ. ಹೀಗಾಗಿ ಬಿಜೆಗೆ ಮಾತ್ರ ಸರ್ಕಾರ ರಚಿಸುವ ಹಕ್ಕುಇದೆ,” ಎನ್ನುವ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಗಳನ್ನು ಟೀಕಿಸಿದರು. ಆದರೆ ಉಳಿದ ಶಾಸಕರ ಸಂಖ್ಯಾ ಬಲ ಎಲ್ಲಿಂದ ತರುತ್ತೀರಿ ಎಂದಾಗ ಮಾತ್ರ “ ಬಿಜೆಪಿ ಸರ್ಕಾರ ಮಾಡುತ್ತದೆ ಅಷ್ಟೆ” ಎಂದು ನುಣುಚಿಕೊಳ್ಳತೊಡಗಿದರು.

“ನಮ್ಮ ಶಾಸಕರನ್ನು ಸೆಳೆಯಲು ಬಿಜೆಪಿ ತಲಾ ನೂರು ಕೋಟಿ ರೂ.ಆಮಿಷ ಒಡ್ಡಿದೆ” ಎಂದು ಎಚ್.ಡಿ.ಕುಮಾರ ಸ್ವಾಮಿ ಆರೋಪ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಶಾಸಕ ಎಂ.ಪಿ. ರೇಣುಕಾಚಾರ್ಯ “ಬಿಜೆಪಿ ಪಕ್ಷಕ್ಕೆ ಅಂಥ ದುರ್ಗತಿ ಬಂದಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ರಾಜಕೀಯ ಪಕ್ಷದ ಮುಖಂಡನಾಗಿ ಕುಮಾರಸ್ವಾಮಿಯವರು ಸೌಹಾರ್ದಯುವಾಗಿ ನಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು. ಆ ನಂತರ ತಮ್ಮನ್ನು ಸುತ್ತುವರಿದ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿ ಫೋಟೋಗೆ ಫೋಸ್ ನೀಡಿದರು.

ಪತ್ರಿಕಾಗೋಷ್ಠಿ ರಿಹರ್ಸಲ್ ಮಾಡಿದ ಪತ್ರಕರ್ತರು

ಕಚೇರಿ ಮುಂದೆ ಪ್ರಾದೇಶಿಕ ಮತ್ತು ರಾಷ್ಟ್ರೀಯ ಚಾನಲ್ ಗಳ ವಾಹನಗಳೂ ದಂಡು ಹಾಕಿದ್ದವು. ಕ್ಷಣ ಕ್ಷಣದ ಮಾಹಿತಿಗಳನ್ನ ಕೂಡಲೆ ಲೈವ್ ಕೊಡಲು ಪತ್ರಕರ್ತರು ನೆಲ ಮಹಡಿಯಲ್ಲಿ ಕ್ಯಾಮರಾಗಳನ್ನು ರೆಡಿಯಾಗಿಟ್ಟು ರಿಹರ್ಸಲ್ ಕೂಡ ಮಾಡಿದರು. ಕಚೇರಿಗೆ ಆಗಮಿಸುವ ಶಾಸಕರನ್ನು ಕರೆದು ಅಲ್ಲಿ ನಿಲ್ಲಿಸಿ ಹೂವು ಕೊಟ್ಟು ಅದನ್ನು ಅರಳುವಂತೆ ಮಾಡಿಸಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಈಗ ಬಂದ ಸುದ್ದಿ ಎಂದು ಬೆಳಗಿನ ಸುದ್ದಿಗಳನ್ನು ಲೈವ್ ಕೊಡುತ್ತಿದ್ದರು.

ಒಟ್ಟಿನಲ್ಲಿ 2013ರಲ್ಲಿ ಬಿಜೆಪಿ ಸರ್ಕಾರ ರಾಜೀನಾಮೆ ನೀಡಿದಾಗ ಇದ್ದ ಜನ ಸಾಗರ ಮತ್ತೆ ಇಂದು ಕಂಡು ಬಂತು. ಬಿಜೆಪಿ ಕಾರ್ಯಕರ್ತರ ಹುಮ್ಮಸ್ಸು, ಚಿತ್ರ ವಿಚಿತ್ರ ಸನ್ನಿವೇಶಗಳಿಗೂ ಸಾಕ್ಷಿಯಾಯಿತು. ಆದರೆ ಯಾರು ಸರ್ಕಾರ ರಚಿಸಲಿದ್ದಾರೆ ಎಂದು ಹೇಳಲಾಗದಿದ್ರೂ, ಹೊಸ ಸರ್ಕಾರ ಬರುವವರೆಗೂ ಯಾವ್ಯಾವ ಬೆಳವಣಿಗೆಗಳು ಆಗಲಿವೆ. ಬಿಜೆಪಿ ಯಾವ ದಾಳ ಉರುಳಿಸಲಿದೆ. ಯಾರು ಸರ್ಕಾರ ರಚಿಸಲಿದ್ದಾರೆ. ಯಾರು ಮಾರಾಟವಾಗಲಿದ್ದಾರೆ, ಯಾರು ಕೊಂಡು ಕೊಳ್ಳಲಿದ್ದಾರೆ ಇತ್ಯಾದಿ ಹೈಡ್ರಾಮಗಳನ್ನು ನೋಡಿ ಜನರು ನಗುವುದಂತೂ ಗ್ಯಾರಂಟಿ.