ಅಧಿಕಾರದ ಆಸೆ ಇಲ್ಲ; ಬಂದಾಗ ಬಿಡಲು ಸನ್ಯಾಸಿ ಅಲ್ಲ: ಕುಮಾರಸ್ವಾಮಿ ಉರುಳಿಸಿದ ‘ಶಾಂಗ್ರಿಲಾ ದಾಳ’!
GROUND REPORT

ಅಧಿಕಾರದ ಆಸೆ ಇಲ್ಲ; ಬಂದಾಗ ಬಿಡಲು ಸನ್ಯಾಸಿ ಅಲ್ಲ: ಕುಮಾರಸ್ವಾಮಿ ಉರುಳಿಸಿದ ‘ಶಾಂಗ್ರಿಲಾ ದಾಳ’!

ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿರುವ ಜೆಡಿಎಸ್‌ ಮೈತ್ರಿಯೊಂದಿಗೆ ಬರುವ ಸಿಎಂ ಪಟ್ಟದ ಜತೆಗೆ ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ವರ್ಚಸ್ಸನ್ನು ಬಲಪಡಿಸಿಕೊಳ್ಳುವ ಉಮೇದಿನಲ್ಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯದಲ್ಲಿ ರಾಜಕೀಯ ಅತಂತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಈ ಅತಂತ್ರ ಪರಿಸ್ಥಿತಿಯ ಲಾಭ ಪಡೆಯಲು ಎಲ್ಲಾ ರೀತಿಯ ಕಸರತ್ತುಗಳೂ ರಾಜಕೀಯ ವಲಯದಲ್ಲಿ ಆರಂಭವಾಗಿವೆ. ಒಂದು ಕಡೆ ಬಿಜೆಪಿ, ‘ನಾವೇ ಸರಕಾರ ರಚಿಸುತ್ತೇವೆ’ ಎನ್ನುತ್ತಿದ್ದರೆ, ಮತ್ತೊಂದು ಕಡೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ತಾವು ಕಾಂಗ್ರೆಸ್‌ ಕೈ ಹಿಡಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ಫಲಿತಾಂಶ ಬರುವುದಕ್ಕೂ ಮುನ್ನಾ ದಿನವಾದ ಸೋಮವಾರ ರಾತ್ರಿಯಿಂದಲೇ ಮೈತ್ರಿ ರಾಜಕೀಯದ ಲೆಕ್ಕಾಚಾರಗಳೂ ಆರಂಭವಾಗಿದ್ದವು ಎಂಬ ಮಾಹಿತಿ ಇದೆ. ತಮಗೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಸೋಮವಾರ ಸಂಜೆಯ ವೇಳೆಗಾಗಲೇ ಗೊತ್ತಾಗಿತ್ತು ಎನ್ನಲಾಗುತ್ತಿದೆ. ಹೀಗಾಗಿಯೇ ಬಿಜೆಪಿ ಜೆಡಿಎಸ್‌ ಜತೆಗೆ ಮೈತ್ರಿಯ ಮಾತನಾಡುವುದಕ್ಕೂ ಮೊದಲೇ ಕಾಂಗ್ರೆಸ್ ಜೆಡಿಎಸ್‌ಗೆ ಬೆಂಬಲ ಘೋಷಿಸಿತ್ತು.

ಕಾಂಗ್ರೆಸ್‌ ಬೆಂಬಲವನ್ನು ಮುಕ್ತವಾಗಿ ಸ್ವೀಕರಿಸಿರುವ ಜೆಡಿಎಸ್‌ ಸರಕಾರ ರಚನೆಗೆ ತಮ್ಮನ್ನು ಆಹ್ವಾನಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಜತೆಗೆ ಬುಧವಾರ ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳವಾರ ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ತಾಜ್‌ ವೆಸ್ಟ್ ಎಂಡ್‌ ಹೋಟೆಲ್‌ನಲ್ಲಿ ತಂಗಿದ್ದ ಕುಮಾರಸ್ವಾಮಿ ಬುಧವಾರ ಬೆಳಿಗ್ಗೆ ವಸಂತನಗರದಲ್ಲಿರುವ ಶಾಂಗ್ರಿಲಾ ಹೋಟೆಲ್‌ಗೆ ಬಂದು ಜೆಡಿಎಸ್‌ ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, “ನಾಡಿನ ಜನತೆ ಜೆಡಿಎಸ್‌ ಸಂಭ್ರಮಿಸುವಂಥ ಜನಾದೇಶ ನೀಡಿಲ್ಲ. ನಾನು ಖುಷಿಯಿಂದ ಮುಖ್ಯಮಂತ್ರಿಯಾಗುವ ಪರಿಸ್ಥಿತಿಯಲ್ಲಿ ಇಲ್ಲ. ಆದರೂ ಹಿಂದಿನ ಚುನಾವಣೆಗಿಂತ ಈ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಜೆಡಿಎಸ್‌ಗೆ ಬಂದಿವೆ. ಹಿಂದೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಎಚ್‌.ಡಿ. ದೇವೇಗೌಡರಿಗೆ ಇದ್ದ ಇಮೇಜ್‌ಗೆ ಧಕ್ಕೆಯಾಗಿತ್ತು. ದೇವೇಗೌಡರಿಗೆ ಅಂಟಿದ್ದ ಆ ಕಪ್ಪು ಚುಕ್ಕೆಗೆ ನಾನೇ ಕಾರಣ. ಈಗ ಆ ಕಳಂಕವನ್ನು ಅಳಿಸಿ ಹಾಕುವ ಸಂದರ್ಭ ಬಂದಿದೆ. ಹೀಗಾಗಿ ಮತ್ತೊಮ್ಮೆ ಬಿಜೆಪಿ ಜತೆಗೆ ಹೋಗುವ ಮಾತೇ ಇಲ್ಲ” ಎಂದರು.

ಕುಮಾರಸ್ವಾಮಿ ತಮ್ಮ ಮಾತಿನ ನಡು ನಡುವೆ ಹಲವು ಜಾತ್ಯತೀತ ಪದವನ್ನು ತಂದರು. ದೇವೇಗೌಡರ ಜಾತ್ಯತೀತ ಇಮೇಜ್‌, ತಮ್ಮ ಪಕ್ಷದ ಜಾತ್ಯತೀತ ಇಮೇಜ್‌ ಮೊದಲಾದ ವಿಚಾರಗಳನ್ನು ತಮ್ಮದೇ ಆದ ಅಸ್ಪಷ್ಟ ಮಾತಿನ ಧಾಟಿಯಲ್ಲಿ ಮಂಡಿಸಿದರು. ಆದರೆ, ತಮ್ಮ ಜಾತ್ಯತೀತ ನಿಲುವಿನ ಬಗ್ಗೆ ಕುಮಾರಸ್ವಾಮಿ ಯಾವುದೇ ಸ್ಪಷ್ಟತೆಯನ್ನು ನೀಡಲಿಲ್ಲ.

ಶಾಂಗ್ರಿಲಾ ಹೋಟೆಲ್‌ನಲ್ಲಿ ಜೆಡಿಎಸ್‌ ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ
ಶಾಂಗ್ರಿಲಾ ಹೋಟೆಲ್‌ನಲ್ಲಿ ಜೆಡಿಎಸ್‌ ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ

ಹಾಗೆ ನೋಡಿದರೆ ಕುಮಾರಸ್ವಾಮಿ ಅವರಿಗೆ ದೇವೇಗೌಡರಿಗೆ ಇರುವಷ್ಟೂ ಜಾತ್ಯತೀತ ಬದ್ಧತೆ ಇಲ್ಲ ಎಂಬ ಮಾತಿದೆ. ದೇವೇಗೌಡರಿಗೆ ರಾಷ್ಟ್ರೀಯ ಮಟ್ಟದಲ್ಲಿರುವ ಜಾತ್ಯತೀತ ಇಮೇಜ್ ಅನ್ನು ಉಳಿಸಿಕೊಡಲು ಹಾಗೂ ತಮ್ಮ ಮೇಲಿದ್ದ ಕಳಂಕವನ್ನು ಅಳಿಸಿಕೊಳ್ಳಲು ಕರ್ನಾಟಕ ವಿಧಾನಸಭಾ ಚುನಾವಣೆಯ ಅತಂತ್ರ ಫಲಿತಾಂಶವನ್ನು ಬಳಸಿಕೊಳ್ಳುತ್ತಿರುವುದಾಗಿ ಕುಮಾರಸ್ವಾಮಿ ಅವರೇ ಹೇಳಿಕೊಂಡಿದ್ದಾರೆ.

Also read: Election Tour : ಮಾಜಿ ಸಿಎಂ ತವರಲ್ಲಿ ‘ಜಾತ್ಯತೀತ’ ಪಕ್ಷಕ್ಕೆ ಜಾತಿಯೇ ಬಲ!

ರಾಷ್ಟ್ರಮಟ್ಟದಲ್ಲಿ ಎಚ್‌.ಡಿ.ದೇವೇಗೌಡರಿಗೆ ಅಂಟಿರುವ ಕಪ್ಪುಚುಕ್ಕೆಯನ್ನು ಅಳಿಸಿಹಾಕುವ ಅವಕಾಶ ಈಗ ಸಿಕ್ಕಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಹೋಗುವುದಿಲ್ಲ.
- ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

‘ನಾನೇನು ಸನ್ಯಾಸಿಯಲ್ಲ’

“ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ನಮಗೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ. ಆದರೆ, ನಾವು ಕಾಂಗ್ರೆಸ್‌ ಜತೆಗೆ ಹೋಗುವುದು ಸ್ಪಷ್ಟವಾಗಿದೆ. ಬಿಜೆಪಿಯವರು ನಮ್ಮ ಶಾಸಕರನ್ನೂ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ, ನಮ್ಮ ಶಾಸಕರನ್ನು ನಾವು ಕಾಪಾಡಿಕೊಳ್ಳುತ್ತೇವೆ. ನಾನೇನು ಸನ್ಯಾಸಿಯಲ್ಲ. ನನಗೂ ರಾಜಕೀಯ ಗೊತ್ತಿದೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

“ಬಿಜೆಪಿ ಮತ್ತೆ ಆಪರೇಷನ್‌ ಕಮಲಕ್ಕೆ ಕೈ ಹಾಕಿದರೆ ಅದರ ದುಷ್ಪರಿಣಾಮವನ್ನು ಬಿಜೆಪಿ ಮತ್ತೆ ಎದುರಿಸಬೇಕಾಗುತ್ತದೆ. ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಕೈ ಹಾಕಿದರೆ ನಾವು ಬಿಜೆಪಿಯಲ್ಲಿರುವವರನ್ನು ಸೆಳೆದುಕೊಳ್ಳಬೇಕಾಗುತ್ತದೆ. ಬಿಜೆಪಿಯಿಂದ ಕನಿಷ್ಠ 10ರಿಂದ 15 ಶಾಸಕರು ಹೊರ ಬರಲು ತಯಾರಿದ್ದಾರೆ. ಆದರೆ, ಕುದುರೆ ವ್ಯಾಪಾರಕ್ಕೆ ಅವಕಾಶ ನೀಡಬೇಡಿ. ಮೊದಲು ನಮಗೆ ಸರಕಾರ ರಚನೆಗೆ ಅವಕಾಶ ಕೊಡಿ ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ” ಎಂದಿದ್ದಾರೆ ಕುಮಾರಸ್ವಾಮಿ.

ಮಾನ್ವಿಯ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಸಿಂಧನೂರು ಕ್ಷೇತ್ರದ ಜೆಡಿಎಸ್‌ ಶಾಸಕ ವೆಂಕಟರಾವ್ ನಾಡಗೌಡ ಪಕ್ಷದ ಶಾಸಕಾಂಗ ಪಕ್ಷಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದಾರೆ ಎಂಬ ಗುಮಾನಿಗಳಿಗೆ ಕೊನೆಗೂ ತೆರೆಬಿದ್ದಿದೆ. ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಮುಗಿಯುವ ಹೊತ್ತಿಗೆ ಇಬ್ಬರೂ ಹಾಜರಾಗಿ ತಾವು ಬೇರೆ ಯಾವ ಪಕ್ಷದ ಜತೆಗೂ ಹೋಗಿಲ್ಲ ಎಂಬುದನ್ನು ಖಾತರಿಪಡಿಸಿದರು.

ನಮ್ಮ ಪಕ್ಷದ ಒಬ್ಬೊಬ್ಬ ಶಾಸಕರಿಗೆ ನೂರು ಕೋಟಿ ರೂಪಾಯಿ ಹಾಗೂ ಸಂಪುಟ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಆಮಿಷ ಒಡ್ಡಿದೆ. ದೇಶದ ಬಡಜನರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳುತ್ತಿದ್ದ ಬಿಜೆಪಿಗೆ ಒಬ್ಬೊಬ್ಬ ಶಾಸಕರಿಗೆ ನೂರು ಕೋಟಿ ರೂಪಾಯಿ ನೀಡಲು ಎಲ್ಲಿಂದ ಹಣ ಬರುತ್ತದೆ. ಇವರು ನೀಡುತ್ತೇವೆ ಎನ್ನುತ್ತಿರುವ ಹಣ ಕಪ್ಪುಹಣವೋ, ಬಿಳಿಹಣವೋ?
- ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಎಲ್ಲರ ಗುರಿ 2019ರ ಲೋಕಸಭೆ

ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯನ್ನು 2018ರ ರಾಜ್ಯ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಬಿಂಬಿಸಲಾಗಿತ್ತು. ಆದರೆ, ಆ ಉಪ ಚುನಾವಣೆಯಲ್ಲಿ ಎರಡೂ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌, ಈ ಚುನಾವಣೆಯಲ್ಲಿ 78 ಸ್ಥಾನಗಳನ್ನು ಗಳಿಸುವಷ್ಟರಲ್ಲಿ ಸಾಕು ಸಾಕಾಗಿದೆ. ಕರ್ನಾಟಕದ ವಿಧಾನಸಭಾ ಚುನಾವಣೆಯನ್ನೂ ಕೂಡಾ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಲಾಗಿತ್ತು.

ಅಧಿಕಾರ ನಮ್ಮದೇ ಎಂದು ಹೇಳಿಕೊಳ್ಳುತ್ತಿದ್ದ ಎರಡೂ ಪಕ್ಷಗಳಿಗೂ ಬಹುಮತ ಸಿಕ್ಕಿಲ್ಲ. ಅಂತಿಮವಾಗಿ 37 ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವ ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ಎಲ್ಲಾ ಸಾಧ್ಯತೆಗಳೂ ದಟ್ಟವಾಗಿವೆ. ಕಾಂಗ್ರೆಸ್‌ ಜೊತೆಗೆ ಸರಕಾರ ರಚಿಸುತ್ತೇವೆ ಎಂದು ಘೋಷಿಸಿಕೊಂಡಿರುವ ಜೆಡಿಎಸ್ ರಾಜ್ಯದಲ್ಲಿ ಅಧಿಕಾರ ಅನುಭವಿಸುವ ಜತೆಗೆ, ರಾಷ್ಟ್ರಮಟ್ಟದಲ್ಲೂ ತನ್ನ ಜಾತ್ಯತೀತ ವರ್ಚಸ್ಸನ್ನು ಪ್ರದರ್ಶಿಸಿಕೊಳ್ಳಲು ಪ್ರಸ್ತುತ ಸಂದರ್ಭವನ್ನು ಬಳಸಿಕೊಳ್ಳುತ್ತಿದೆ.

2019ರ ಲೋಕಸಭಾ ಚುನಾವಣೆಯ ವೇಳೆಗೆ ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗುವ ಬಿಜೆಪಿ ಸಂಸದರ ಸಂಖ್ಯೆಯನ್ನು ಕುಗ್ಗಿಸಬೇಕೆಂದು ಕಾಂಗ್ರೆಸ್‌ ಲೆಕ್ಕಾಚಾರ ಹಾಕಿದೆ. ಆ ವೇಳೆಗೆ ಜೆಡಿಎಸ್‌ನ ವರ್ಚಸ್ಸನ್ನು ಸ್ವಚ್ಛವಾಗಿಸಿಕೊಳ್ಳಲು ಕುಮಾರಸ್ವಾಮಿ ಈಗಾಗಲೇ ಪ್ರಯತ್ನ ನಡೆಸಿದ್ದಾರೆ. ಒಂದು ಕಡೆ ರಾಜ್ಯದಲ್ಲಿ ಅಧಿಕಾರ ಜತೆಗೆ ರಾಷ್ಟ್ರೀಯ ಮಟ್ಟದಲ್ಲೂ ಜೆಡಿಎಸ್‌ನ ವರಿಷ್ಠ ದೇವೇಗೌಡರನ್ನು ಪರ್ಯಾಯ ರಾಜಕೀಯ ಶಕ್ತಿಯ ನಾಯಕರನ್ನಾಗಿಸುವ ಉಮೇದಿನಲ್ಲಿ ಕುಮಾರಸ್ವಾಮಿ ಇರುವಂತಿದೆ.