samachara
www.samachara.com
ಯಡಿಯೂರಪ್ಪ
GROUND REPORT

ELECTION TOUR: ಶಿಕಾರಿಪುರದಲ್ಲಿ ಜಾತಿ ಮತಗಳೇ ನಿರ್ಣಾಯಕ; ಯಡಿಯೂರಪ್ಪ ಪಕ್ಕಾ!

ಯಡಿಯೂರಪ್ಪ ಬಿಜೆಪಿಯ ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದೇ ಗುರುತಿಸಲ್ಪಟ್ಟು, ರಾಜ್ಯಾದ್ಯಂತ ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಶಿಕಾರಿಪುರ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಬಿ.ಎಸ್.ಯಡಿಯೂರಪ್ಪ ವರ್ಣರಂಜಿತ ರಾಜಕಾರಣಿ. ಸೈಕಲ್ ಹಿಡಿದು ಸುತ್ತಾಡೋ ಕಾಲದಿಂದಲೂ ಪಕ್ಷ ಸಂಘಟಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು. ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡರು. ಅಲ್ಲಲ್ಲಿ ವಿರೋಧ ಅಲೆ ಗೋಚರಿಸಿದರೂ, ಇಂದು ಬಿಜೆಪಿ ಪಕ್ಷದ ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದೇ ಗುರುತಿಸಲ್ಪಟ್ಟು, ರಾಜ್ಯಾದ್ಯಂತ ಪ್ರಚಾರದ ಭರಾಟೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಶಿಕಾರಿಪುರ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ELECTION TOUR: ಶಿಕಾರಿಪುರದಲ್ಲಿ ಜಾತಿ ಮತಗಳೇ ನಿರ್ಣಾಯಕ; ಯಡಿಯೂರಪ್ಪ ಪಕ್ಕಾ!

ಯಡಿಯೂರಪ್ಪ ಲಿಂಗಾಯತರು. 2013ರ ವಿಧಾನ ಸಭಾ ಚುನಾವಣೆಯ ಅಂಕಿ ಅಂಶಗಳ ಪ್ರಕಾರ ಶಿಕಾರಿಪುರದಲ್ಲಿ ಇದ್ದಿದ್ದು ಒಟ್ಟು1,38,616 ಮತದಾರರು. ಈ ಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮತದಾರರು ಲಿಂಗಾಯತರೇ. ಇವರಲ್ಲಿ 20ರಿಂದ 49ವರ್ಷ ಪ್ರಾಯದ ಮತದಾರರು ಶೇಕಡಾ 81ರಷ್ಟು. ಈ ಕ್ಷೇತ್ರದಲ್ಲಿ 1983ರಿಂದಲೂ ಚುನಾಯಿತರಾಗುತ್ತಿರುವ ಯಡಿಯೂರಪ್ಪ 1999-2004ರ ಅವಧಿಯಲ್ಲಿ ಮಾತ್ರ ಅವರದೇ ಸಮುದಾಯದರಾದ ಕಾಂಗ್ರೆಸ್ ಪಕ್ಷದ ಮಹಾಲಿಂಗಪ್ಪ ಎದುರು ಸೋಲು ಕಂಡಿದ್ದರು. 2013ರಲ್ಲಿ ಕೆ.ಜೆ.ಪಿ.ಯನ್ನು ಪ್ರತಿನಿಧಿಸಿ ಗೆದ್ದಿದ್ದ ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿಕೊಂಡು 2014ರಲ್ಲಿ ಸಂಸದರಾದರು. ಖಾಲಿಯಾದ ತಮ್ಮ ಶಾಸಕ ಸ್ಥಾನಕ್ಕೆ ಮಗ ರಾಘವೇಂದ್ರನನ್ನು ನಿಲ್ಲಿಸಿ ಆರಿಸಿ ತಂದರು.

ಮತದಾರ ಏನಂತಾನೆ?

“ಈ ಸಲ ನಾವು ಯಡಿಯೂರಪ್ಪನನ್ನೇ ಬೆಂಬಲ ಮಾಡಬೇಕಂತ ನಿಕ್ಕಿ ಮಾಡಿವ್ರಿ” ಅಂತ ಮಾತು ಪ್ರಾರಂಭಿಸಿದವರು ಉಡಗುಣಿಯ ಹಿರಿಯ ಜೀವ ವಿಜಯೇಂದ್ರಪ್ಪ ಮತ್ತು ಹನುಮಂತಪ್ಪ. “ಯಡಿಯೂರಪ್ಪ ರೈತರಿಗೆ ಅನುಕೂಲ ಆಗಂತದ್ದು ಏನೂ ಮಾಡಿಲ್ಲ. ಬೋರುಗಳೆಲ್ಲ ನಿಂತುಬಿಟ್ಟಿವೆ. ರೈತರ ಸಮಸ್ಯೆ ಬಹಳಾನೇ ಇದೆ. ಭತ್ತ ಮತ್ತು ಜೋಳದ ಬೆಳೆ ಬಂದಿದೆ. ಆದರೆ ಬೆಳೆಯಲ್ಲೂ ನಷ್ಟವಾಗಿದೆ ಅಲ್ಲದೇ ಸರಿಯಾದ ಬೆಲೆಯೂ ಸಿಗಲಿಲ್ಲ. ಸರಕಾರದಿಂದ ಬೆಲೆ ನಿಗಧಿ ಮಾಡಸ್ತೀನಿ ಅಂದರು ಯಡಿಯೂರಪ್ಪ ಆದರೆ ಅವರ ಕೈನಲ್ಲಿ ಈಗ ಅಧಿಕಾರ ಇಲ್ಲ. ಹಿಂದೆ ಅಧಿಕಾರ ಇದ್ದಾಗಲೂ ಈ ಕುರಿತು ಯಡಿಯೂರಪ್ಪ ಏನೂ ಮಾಡಿಲ್ಲ. ಕರೆ-ಕಟ್ಟೆ ಕಟ್ಟಿಸಿದಾರೆ. ರಸ್ತೆಗಳನ್ನು ಮಾಡ್ಸಿದಾರೆ. ಇಡೀ ಕೇತ್ರ ಅಭಿವೃದ್ಧಿ ಮಾಡೋ ಜವಾಬ್ಧಾರಿ ಇರ್ತದಲ್ಲಾ ಪಾಪ, ಈಗಂತೂ ಇಲೆಕ್ಷನ್ ಹುಚ್ ಹತ್ತಿ ಬಿಡ್ತು ನಮ್ ಕಡಿ ನದರ್ ಇಲ್ಲ” ಎಂದರು.

ಶಿಕಾರಿಪುರ ಸರಕಾರಿ ಆಸ್ಪತ್ರೆಗೆ ಹೋದರೆ ಶಿವಮೊಗ್ಗಕ್ಕೆ ಚೀಟಿ ಕೊಡ್ತಾರೆ ಇಲ್ಲಾಂದ್ರೆ ಪ್ರೈವೇಟಾಗಿ ಅದೇ ಡಾಕ್ಟರ್ ಮನೆಗೇ ಹೋಗಿ ಔಷಧ ತಗೋಬೇಕು. ಇದಕ್ಕೇಕೆ ಸರಕಾರಿ ಆಸ್ಪತ್ರೆ ಇರುವುದು? ಇದನ್ನೆಲ್ಲ ಯಡಿಯೂರಪ್ಪ ಏಕೆ ಕಂಟ್ರೋಲ್ ಮಾಡಿಲ್ಲ?
-ಮಂಜಪ್ಪ, ಶಿಕಾರಿಪುರ
ಮಂಜಪ್ಪ, ಶಿಕಾರಿಪುರ
ಮಂಜಪ್ಪ, ಶಿಕಾರಿಪುರ

ಯಡಿಯೂರಪ್ಪ ಅವರ ಬಗ್ಗೆ ಕೆವಲರಿಗೆ ಈ ರೀತಿ ಅಸಮಾಧಾನ ಹಾಗೂ ತಕರಾರು ಇದ್ದರೆ ಇನ್ನು ಕೆಲವರು ಹೇಳುವುದೇ ಬೇರೆ. “ಮತ್ತೆ ಯಡಿಯೂರಪ್ಪನೇ ಬರಬೇಕು ನಮಗೆ. ಯಾಕಂದ್ರೆ ಅವರಿಗೆ ಸಮಾನರಾದ ಮುಖಂಡರು ಬೇರೆ ಯಾರೂ ಇಲ್ಲ. ಹಿಂದೆರಡು ಚುನಾವಣೆಯಲ್ಲಿ ಯಡಿಯೂರಪ್ಪ ಪ್ರತಿಸ್ಪರ್ಧಿಯಾಗಿದ್ದ ಶಿಖಾರಿಪುರದ ಕಾಂಗ್ರೆಸ್‌ನ ಶಾಂತವೀರಪ್ಪ ಗೌಡ್ರು ಈಗ ಬಿಜೆಪಿ ಸೇರಿದಾರೆ ಹಾಗಾಗಿ ಅವರೆದುರು ನಿಲ್ಲುವಂಥ ಲೀಡರೇ ಇಲ್ಲ” ಎನ್ನುತ್ತಾರೆ ಶಿರಾಳಕೊಪ್ಪದ ಗುರು, ಮೃತ್ಯುಂಜಯ ಮುಂತಾದವರು.

ಜತೆಗೆ, ಗ್ರಾಮ ಪಂಚಾಯತ ಸದಸ್ಯರ ಮನೆ ಮದುವೆ ದಿಬ್ಬಣಕ್ಕೆ ಬಸ್ಸಿನ ವ್ಯವಸ್ಥೆ ಮಾಡಿದ್ದನ್ನೂ ಹಂಚಿಕೊಂಡ ಅವರು, ‘ಮತ ಯಂತ್ರ ಏನು ಅವಾಂತರ ಮಾಡಿಬಿಡ್ತದೋ’ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.

ಕೆ.ಎಮ್.ಎಫ್. ಫ್ಯಾಕ್ಟರಿಯಲ್ಲಿ ಉದ್ಯೋಗ ನೀಡುವಾಗ ಸ್ಥಳೀಯರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ.
ಯೂಸುಫ್, ಸಾಂಡಾ ಗ್ರಾಮ
ಯೂಸುಫ್, ಸಾಂಡಾ ಗ್ರಾಮ
ಯೂಸುಫ್, ಸಾಂಡಾ ಗ್ರಾಮ

ಯಡಿಯೂರಪ್ಪ ಅವರ ಕುರಿತು ಜಕ್ಕನಹಳ್ಳಿ ಜನತೆಗೆ ಒಲುವು ಇದ್ದಂತಿಲ್ಲ. ಅವರು ಹೇಳಿವುದಿಷ್ಟು, “ನಾವು ಈ ಬಾರಿ ಬಿಜೆಪಿಯನ್ನು ತರಲ್ಲ. ಕಾಂಗ್ರೆಸ್ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತರ್ತೇವೆ. ನಮ್ಮಲ್ಲಿ ಜಿ.ಪಂ. ಸದಸ್ಯ ಕಾಂಗ್ರೆಸ್‌ನವರು, ಶಾಸಕರಿಗಿಂತಲೂ ಹೆಚ್ಚು ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಸಂಸದ, ಮಗ ರಾಘವೇಂದ್ರ ಶಾಸಕರೆಂದು ಹಳ್ಳಿಯ ಅಭಿವೃದ್ಧಿ ವಿಚಾರವಾಗಿ ಹೋದರೆ, ಅವರ ಸೆಕ್ರೆಟರಿಯಿಂದಲೇ ನಮ್ಮನ್ನು ಮಾತಾಡಿಸುತ್ತಾರೆ. ಭೇಟಿಗೆ ಅವಕಾಶನೇ ಕೊಡಲ್ಲ. ಒತ್ತಾಯಿಸಿದರೆ ನೀವು ಎಷ್ಟು ಮತ ಹಾಕೀರಿ ಅಂತ ಗೊತ್ತೈಯ್ತಿ ಅಂತಂದು ನಮ್ಮನ್ನು ಹೊರಕಳಿಸ್ತಾರೆ” ಅಂತಾರೆ ಜಕ್ಕನಹಳ್ಳಿ ಗ್ರಾಮ ಪಂಚಾಯತಿಯ ಮಾಜೀ ಅಧ್ಯಕ್ಷ ಮಂಜಣ್ಣ.

ಸ್ಥಳೀಯ ಫ್ಯಾಕ್ಟರಿಯಲ್ಲಿ ಸ್ಥಳೀಯರಿಗಿಲ್ಲ ಉದ್ಯೋಗ:

“ಸಾಂಡಾದಲ್ಲಿ ಕೆ.ಎಮ್‌.ಎಫ್‌ ಪ್ಯಾಕ್ಟರಿ ಮಾಡಿದ ಯಡಿಯೂರಪ್ಪ ಸ್ಥಳೀಯರಾರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಅಧಿಕಾರಿಗಳು ಮಂಡ್ಯ ಕಡೆಯವರು. ಇಲ್ಲಿನವರಿಗೆ ಅನ್ಯಾಯವಾಗಿದೆ. ಹಿಂದೆ ಕಾಂಗ್ರೆಸ್ ಶಾಸಕರಿದ್ದಾಗ ಅಭಿವೃದ್ಧಿ ಆದಷ್ಟು ಆಮೇಲೆ ಆಗಿಲ್ಲ. ಯಡಿಯೂರಪ್ಪ ನಮ್ಮಂಥ ಬಡವರು ಹೋದರೆ ಭೇಟಿಯೂ ಆಗಲ್ಲ” ಅಂತಾರೆ ಸಾಂಡಾದ ಯೂಸೂಪ್ ಮತ್ತು ಅಕ್ಬರ್ ಖಾನ್.

ELECTION TOUR: ಶಿಕಾರಿಪುರದಲ್ಲಿ ಜಾತಿ ಮತಗಳೇ ನಿರ್ಣಾಯಕ; ಯಡಿಯೂರಪ್ಪ ಪಕ್ಕಾ!

‘ಕುಡಿಯುವ ನೀರು, ಬಡವರಿಗೆ ಮನೆಗಳನ್ನೆಲ್ಲ ಇಂದಿನ ಕಾಂಗ್ರೆಸ್ ಸರಕಾರವೇ ನೀಡಿದೆ’ ಎಂದು ಹೇಳಿ ಅವರು ಯಡಿಯೂರಪ್ಪ ಅವರ ಬಗ್ಗೆ ತಮಗಿರುವ ತಕರಾರುಗಳನ್ನು ಹೇಳಿದರು.

ನಮಗಿಲ್ಲ ಪಟ್ಟಾ:

“ಬಗರಹುಕಂ ಗೋಮಾಳ ಸಾಗುವಳಿದಾರರಿಗೆ ಪಟ್ಟಾ ಕೊಡ್ತೀನಿ ಅಂತ ಯಡಿಯೂರಪ್ಪ ಹೇಳುತ್ತಲೇ ಬಂದಿದ್ದಾರೆ. ಆದರೆ ಈವರೆಗೂ ನೀಡಿಲ್ಲ. ಇಲ್ಲಿಂದ ಶಿವಮೊಗ್ಗಾ ತನಕ ಪಾದಯಾತ್ರೆ ಮಾಡಿದರೆ ಕೊಡ್ತೀನಿ ಅಂದರು. ಆದರೆ ಕೊಡ್ಲಿಲ್ಲ. ಸ್ವತಃ ಅವರೇ ಮುಖ್ಯಮಂತ್ರಿಯಾದಾಗಲೂ ನೀಡಿಲ್ಲ. ಪಕ್ಕದ ಸೊರಬ ಕ್ಷೇತ್ರದಲ್ಲಿ ಸುಮಾರು 600 ರೈತರಿಗೆ ಪಟ್ಟಾ ನೀಡಲಾಗಿದೆ, ನಮ್ಮಲ್ಲೇಕಿಲ್ಲ?” ಎಂಬುದು ಶಿಖಾರಿಪುರ ಕ್ಷೇತ್ರದ ರೈತರ ಆರೋಪವಾಗಿದೆ.

ಕಾಂಗ್ರೆಸ್‌ನಿಂದ ಫಿಟ್‌ ಕ್ಯಾಂಡಿಡೇಟ್ ಹಾಕಿದ್ರೆ ಫುಲ್ ಚಾನ್ಸ್ ಇದೆ. ಇಲ್ಲಾಂದ್ರೆ ಏನಾಗ್ತಯ್ತೋ? ಗೊತ್ತಿಲ್ಲ.
ಸಿದ್ದಣ್ಣ, ಜಕ್ಕನಹಳ್ಳಿ
ಸಿದ್ದಣ್ಣ, ಜಕ್ಕನಹಳ್ಳಿ
ಸಿದ್ದಣ್ಣ, ಜಕ್ಕನಹಳ್ಳಿ

ಬಡವರಿಗಿಲ್ಲ ಕಿಮ್ಮತ್ತು:

“ಪಟ್ಟಣದ ಕೆಲ ರಸ್ತೆಗಳನ್ನು ತರಾತುರಿಯಿಂದ ನಿರ್ಮಿಸಲಾಗುತ್ತಿದೆ. ಗ್ರಾಮೀಣ ಭಾಗ ನೆನೆಗುದಿಗೆ ಬಿದ್ದಿದೆ. ಎಲ್ಲ ಅಧಿಕಾರಿಗಳನ್ನೂ ಯಡಿಯೂರಪ್ಪ ಪಕ್ಕದಲ್ಲಿಟ್ಟುಕೊಂಡಿದ್ದಾರೆ. ನಿವೃತ್ತಿ ಆದವರನ್ನೇ ಮೂಲೆಯಲ್ಲಿ ಕುಳ್ಳಿರಿಸಿ ಪಗಾರ ನೀಡ್ತಾರಂತೆ. ಅದರ ಬದಲು ಈಗ ಕಲಿತು ಬಂದ ಹೊಸಬರಿಗೆ ನೌಕರಿ ನೀಡಬಹುದಲ್ಲ. ಇನ್ನೊಬ್ಬರು ಬದುಕಲು ಅವಕಾಶವಾಗುತ್ತಿತ್ತು. ಯಡಿಯೂರಪ್ಪ ಮತ್ತು ಅವರ ಜನ ಹೇಳಿದವರಿಗೆ ಮಾತ್ರ ಸವಲತ್ತು. ಬಡವರಿಗೇಕೆ ತೊಂದರೆ ಕೊಡ್ತೀರಿ ಎಂದು ಅಧಿಕಾರಿಗಳನ್ನು ಯಡಿಯೂರಪ್ಪ ಯಾವತ್ತೂ ಕೇಳಿಲ್ಲ. ಜನ ಉದ್ಧಾರ ಆಗಬಾರದು ಯಾವಾಗಲೂ ತಮ್ಮ ಕಾಲಸಂದಿಯಲ್ಲೇ ನುಸುಳುತ್ತಿರಬೇಕು ಎಂಬುದು ಯಡಿಯೂರಪ್ಪ ಲೆಕ್ಕಾಚಾರ” ಎಂಬ ಕೆಲವು ಜನರ ಆರೋಪವೂ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿತು.

ರಸ್ತೆ ನಿರ್ಮಾಣ ಮಾಡುತ್ತಿರುವುದು
ರಸ್ತೆ ನಿರ್ಮಾಣ ಮಾಡುತ್ತಿರುವುದು

ತಪ್ಪಿತೇ ಜೆಡಿಎಸ್ ಲೆಕ್ಕಾಚಾರ?:

ಜೆಡಿಎಸ್‌ನಿಂದ ಮತ್ತಿಕೋಟೆಯ ಎಚ್.ಡಿ.ಬಳಿಗಾರ್ ಹೆಸರು ಘೋಷಣೆಯಾಗಿದೆ. ಮೊದಲು ಕೆ.ಎ.ಎಸ್. ಅಧಿಕಾರಿಗಳಾಗಿದ್ದ ಇವರು ಇತ್ತೀಚೆಗೆ ರಾಜಕೀಯಕ್ಕೆ ಬಂದವರು. ತಳವಾರ ಸಮುದಾಯದವರಾದ್ದರಿಂದ ಲಿಂಗಾಯತ ಮತ ಪಡೆಯುವುದು ಇವರಿಗೆ ಕಷ್ಟ.

ಆದರೆ ಕಾಂಗ್ರೆಸ್‌ ಪಕ್ಷದಿಂದ ಕುರುಬ ಜನಾಂಗಕ್ಕೆ ಸೇರಿದ ಶಿಕಾರಿಪುರದ ಗೋಣಿ ಮಹಾಂತೇಶ್ ಮತ್ತು ಲಿಂಗಾಯತರಾದ ಆರ್. ಪ್ರಸನ್ನ ಕುಮಾರ್ ಶಿವಮೊಗ್ಗಾ ಇವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಅಲ್ಲಲ್ಲಿ ಹಾಲಿ ಜಿ.ಪಂ. ಸದಸ್ಯ ನರಸಿಂಹ ನಾಯಕರ ಹೆಸರೂ ಕೇಳಿ ಬರುತ್ತಿತ್ತು. ಆದರೆ ಕಾಂಗ್ರೆಸ್‌ ಪಕ್ಷದಿಂದ ಗೋಣಿ ಮಹಾಂತೇಶ್ ಅವರು ಚುನಾವಣಾ ಕಣಕ್ಕೆ ಇಳಿದಿದ್ದಾರೆ.

“ಪ್ರಸನ್ನ ಕುಮಾರ್ ಸ್ಥಳೀಯರಲ್ಲದಿದ್ದರೂ ಲಿಂಗಾಯತ ಸಮುದಾಯಕ್ಕೆ ಸೇರಿದವರಾದ್ದರಿಂದ ಅವರಿಗೆ ಚಾನ್ಸ್ ಹೆಚ್ಚು ಏಕೆಂದರೆ ಯಡಿಯೂರಪ್ಪನವರ ಆಸ್ತಿಯಾದ ಪ್ರಬಲ ಲಿಂಗಾಯತ ಮತ ಬ್ಯಾಂಕ್ ಛಿದ್ರಗೊಳಿಸಲು ಇನ್ನೊಬ್ಬ ಲಿಂಗಾಯತ ಪ್ರಾಬಲ್ಯವಿರುವ ವ್ಯಕ್ತಿಯೇ ಕಣಕ್ಕಿಳಿಯಬೇಕು. ಆಗ ಮಾತ್ರ ನೇರ ಹಣಾಹಣಿ ಏರ್ಪಡಬಹುದು,” ಎನ್ನುತ್ತಾರೆ ಚಿಕ್ಕಸಾಲೂರು, ದೊಡ್ಡ ಸಾಲೂರು ಮತ್ತು ಸುತ್ತಲಿನ ಜನತೆ.

ನಮ್ಮ ಮತ ಯಡಿಯೂರಪ್ಪಗೇ, ಅವರು ನಮಗೆ ಮನೆ ಕೊಟ್ಟಾರ.
ಚಿಕ್ಕಮ್ಮ, ಚಿಕ್ಕಸಾಲೂರು
ಚಿಕ್ಕಮ್ಮ, ಚಿಕ್ಕಸಾಲೂರು
ಚಿಕ್ಕಮ್ಮ, ಚಿಕ್ಕಸಾಲೂರು

ಒಟ್ಟಾರೆಯಾಗಿ ಶಿಕಾರಿಪುರದಿಂದ ಶಿರಾಳಕೊಪ್ಪ ಹಾಗೂ ಅಲ್ಲಿನ ಅಕ್ಕಪಕ್ಕದ ಗ್ರಾಮಗಳ ಜನಮತದ ಪ್ರಕಾರ ಬಿಜೆಪಿಗೆ ಸುಮಾರು ಶೇಕಡಾ 55-60ರಷ್ಟು ಮತ್ತು ಉಳಿದ ಪಕ್ಷಗಳಿಗೆ ಸುಮಾರು ಶೇಕಡ 40-45ರಷ್ಟು ಮತಗಳು ಬೀಳುತ್ತವೆ. ಇನ್ನು ಮತ್ತೊಂದು ಬದಿಯಲ್ಲಿ ಬಿಜೆಪಿಗೆ ಸುಮಾರು ಶೇಕಡಾ 60-70ರಷ್ಟು. ಉಳಿದ ಪಕ್ಷಗಳಿಗೆ ಸುಮಾರು ಶೇಕಡ 30-40ರಷ್ಟು ಮತಗಳು ಬೀಳಬಹುದು ಎನ್ನಲಾಗುತ್ತಿದೆ. ಇದಕ್ಕೆ ಯಡಿಯೂರಪ್ಪ ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಬಿಂಬಿಸಿರುವುದೇ ಸ್ಥಳೀಯರಲ್ಲಿ ಬಿಜೆಪಿ ಕಡೆಗೆ ಒಲವು ಹೆಚ್ಚಲು ಕಾರಣ.