samachara
www.samachara.com
ELECTION TOUR: ಮಂಗಳೂರಿಗೆ ಬರುವ ಮೋದಿ ಬಾಳಿಗರನ್ನು ಭೇಟಿ ಆಗದೆ ಹೋಗುವರೇ?
GROUND REPORT

ELECTION TOUR: ಮಂಗಳೂರಿಗೆ ಬರುವ ಮೋದಿ ಬಾಳಿಗರನ್ನು ಭೇಟಿ ಆಗದೆ ಹೋಗುವರೇ?

ನರೇಂದ್ರ ಮೋದಿ ತಮ್ಮದೇ ಪಕ್ಷದ ಕಾರ್ಯಕರ್ತ, ಮಾಹಿತಿ ಹಕ್ಕು ಹೋರಾಟಗಾರ ವಿನಾಯಕ ಬಾಳಿಗಾ ಹತ್ಯೆಗೆ ನ್ಯಾಯ ಒದಗಿಸುವ ಭರವಸೆ ನೀಡುತ್ತಾರಾ? ಅಥವಾ ಬಾಳಿಗ ಕೊಲೆ ಆರೋಪಿಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಸೆಲ್ಫಿ ತೆಗೆದುಕೊಂಡು ವಾಪಾಸಾಗುತ್ತಾರಾ?

ಮಂಗಳೂರಿನ ಬೆಸೆಂಟ್ ಕಾಲೇಜಿನ ಎದುರಿಗೆ ಹೊಸತಾಗಿ ಆರಂಭವಾಗಿರುವ ಫಿಶ್‌ಬೌಲ್‌ ಎಂಬ ಹೋಟೆಲ್‌ ಪಕ್ಕದ ಓಣಿಯಲ್ಲಿ ಹೋದರೆ ಎಡಕ್ಕೆ ಸಿಗುವುದು ಆ ಮನೆ; ಹೆಸರು ಲಕ್ಷ್ಮಿ ಕುಂಜ್.

ಹಳೆಯ ಮನೆಯ ಹೊರ ಜಗುಲಿಯ ಸುತ್ತ ಗ್ರಿಲ್ ಅಳವಡಿಸಲಾಗಿದೆ. ಹಗಲಿನ ಹೊತ್ತು ಎಷ್ಟೊತ್ತಿಗೆ ಇಲ್ಲಿಗೆ ಭೇಟಿ ನೀಡಿದರೂ 87ರ ಪ್ರಾಯದ ಹಿರಿಯ ಜೀವವೊಂದು ಕಣ್ಣಿಗೆ ಬೀಳುತ್ತದೆ. ಅವರ ಹೆಸರು ಬಿ. ಆರ್‌. ಬಾಳಿಗ, ಹತ್ಯೆಗೀಡಾದ ವಿನಾಯಕ್ ಬಾಳಿಗ ಅವರ ತಂದೆ. ಹತ್ತು ತಿಂಗಳ ಹಿಂದಷ್ಟೆ ಪತ್ನಿ ಕೂಡ ಅವರನ್ನು ಅಗಲಿದ್ದಾರೆ.

“ಅಮ್ಮ ಮಗನ ಸಾವಿನ ಶಾಕ್‌ನಿಂದ ಹೊರಗೆ ಬರಲೇ ಇಲ್ಲ. ಮೊದಲು ಮೂರ್ನಾಲ್ಕು ತಿಂಗಳು ಏನನ್ನೂ ತಿನ್ನುತ್ತಿರಲಿಲ್ಲ. ಆರೋಗ್ಯ ಕ್ಷೀಣಿಸುತ್ತ ಕೊನೆಗೆ ಮೃತಪಟ್ಟರು. ಅಪ್ಪ ಮಗನ ಮತ್ತು ಪತ್ನಿಯ ಸಾವನ್ನು ನೋಡಿದ ನಂತರ ತೀವ್ರ ನೋವಿನಲ್ಲಿದ್ದಾರೆ. ಇವರು ಸಾಯುವ ಮುಂಚೆಯಾದರೂ ಅಣ್ಣನ ಸಾವಿಗೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ,” ಎಂದರು ಅನುರಾಧಾ ಬಾಳಿಗ.

ವಿನಾಯಕ್ ಬಾಳಿಗ ಕೊಲೆ ಪ್ರಕರಣದ ಸದ್ಯದ ಸ್ಥಿತಿ ಇದು.

ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದ ವಿನಾಯಕ್ ಬಾಳಿಗ ಬಿಜೆಪಿಯ ಬೂತ್ ಮಟ್ಟದ ಸಕ್ರಿಯ ಕಾರ್ಯಕರ್ತರೂ ಆಗಿದ್ದರು. “ಅಣ್ಣ ಬದುಕಿದ್ದರೆ ಚುನಾವಣೆ ಸಮಯದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದ. ಇವತ್ತು ಅವನು ಇಲ್ಲ. ನಾವು ಮತ ಚಲಾವಣೆ ಮಾಡುವ ಬಗ್ಗೆ ಇನ್ನೂ ಆಲೋಚನೆ ಮಾಡಿಲ್ಲ. ಯಾರಿಗಾಗಿ ಅವನು ಕೆಲಸ ಮಾಡಿದನೋ, ಅವರೇ ಕೊನೆಗಾಲದಲ್ಲಿ ಬರಲಿಲ್ಲ. ಈವರೆಗೂ ಒಬ್ಬೇ ಒಬ್ಬೇ ಬಿಜೆಪಿ ನಾಯಕರು ಭೇಟಿ ನೀಡಿ ಪರಿಸ್ಥಿತಿ ವಿಚಾರಿಸಿಲ್ಲ,’’ ಎಂದು ಆಕ್ರೋಶ ಹೊರಹಾಕುತ್ತಾರೆ ಅನುರಾಧಾ.

ಬಿಜೆಪಿ ಕಾರ್ಯಕರ್ತರ ಪಕ್ಷ. ಕಮ್ಯುನಿಸ್ಟ್‌ ಪಕ್ಷಗಳ ಸದಸ್ಯರ ರೀತಿಯಲ್ಲೇ ದಕ್ಷಿಣ ಕನ್ನಡದ ಬಿಜೆಪಿ ಸದಸ್ಯರೂ ಕೂಡ ಕ್ರೀಯಾಶೀಲರಾಗಿದ್ದಾರೆ. ನಿಸ್ವಾರ್ಥವಾಗಿ ಕೆಲಸ ಮಾಡುವವರ ದೊಡ್ಡ ಸಂಖ್ಯೆ ಇದೆ. ಅದರಲ್ಲಿ ಒಬ್ಬರಾಗಿದ್ದವರು ವಿನಾಯಕ್ ಬಾಳಿಗ.

ತಮ್ಮನ್ನು ತಾವು ಪಕ್ಷ ರಾಜಕಾರಣಕ್ಕೆ ಸೀಮಿತಗೊಳಿಸಿಕೊಳ್ಳದ ವಿನಾಯಕ್ ಬಾಳಿಗ, ಮಾಹಿತಿ ಹಕ್ಕು ಕಾಯ್ದೆಯನ್ನು ವ್ಯವಸ್ಥಿತವಾಗಿ ಬಳಸುತ್ತಿದ್ದರು. ಅವರ ದೊಡ್ಡ ಹೋರಾಟ ಇದ್ದದ್ದು ವೆಂಕಟರಮಣ ದೇವಸ್ಥಾನದ ಆಡಿಟ್ ಸುತ್ತ. “ಇನ್ನೊಂದು ವಾರದಲ್ಲಿ ಆಡಿಟ್ ಬಗ್ಗೆ ಒಂದು ಕ್ಲಾರಿಟಿ ಸಿಗುತ್ತದೆ. ಅದಾದ ಮೇಲೆ ನಾನು ಸ್ವಲ್ಪ ಫ್ರೀ ಆಗ್ತೀನಿ. ಮನೆ ರಿಪೇರಿ ಮಾಡಿಸಬೇಕು ಎಂದು ಹೇಳಿದ್ದ,’’ ಎಂದು ಅನುರಾಧಾ ಕಣ್ಣೀರಿಟ್ಟರು.

ಅನುರಾಧಾ ಬಾಳಿಗ, ವಿನಾಯಕ್ ಬಾಳಿಗ ಸಹೋದರಿ. 
ಅನುರಾಧಾ ಬಾಳಿಗ, ವಿನಾಯಕ್ ಬಾಳಿಗ ಸಹೋದರಿ. 

ಮಾರ್ಚ್‌ 21, 2016ರಂದು ಬೆಳಗ್ಗೆ ಬಾಳಿಗ ತಮ್ಮ ಮನೆಯ ಎದುರಿಗೆ ಕೊಲೆಯಾಗಿ ಹೋದರು. “ಬೆಳಗ್ಗೆ ಅಣ್ಣ ಎದ್ದು ಸ್ನಾನ ಮಾಡಿ ಪಕ್ಕದ ದೇವಸ್ಥಾನಕ್ಕೆ ಹೋಗುವ ರೂಢಿ ಇಟ್ಟುಕೊಂಡಿದ್ದ. ಅವತ್ತು ಕೂಡ ಹಾಗೆಯೇ ಹೋದವನು ಮರಳಿ ಬರಲೇ ಇಲ್ಲ. ಆತ ವಾಪಾಸ್ ಬರುವಾಗ ಹಂತಕರು ಇದೇ ಓಣಿಯಲ್ಲಿ ಅಡ್ಡ ಹಾಕಿ ಹಲ್ಲೆ ಮಾಡಿದ್ದಾರೆ. ನಮ್ಮ ಪಕ್ಕದ ಮನೆಯವರು ಯಾರೋ ಹೊಡೆಯುತ್ತಿದ್ದಾರೆ ಎಂದು ಕೂಗಿದರು. ನಾವು ಹೋಗುವ ಹೊತ್ತಿಗೆ ಅವನ ದೇಹ ರಕ್ತಸಿಕ್ತವಾಗಿತ್ತು. ಕೊನೆಯ ಉಸಿರು ಬಿಡುತ್ತಿದ್ದ. ಆಂಬ್ಯುಲೆನ್ಸ್ ಕರೆಸಿ ಅದಕ್ಕೆ ಹಾಕುವ ಹೊತ್ತಿಗೆ ಅವನ ಕೊನೆಯ ಉಸಿರು ನಿಂತು ಹೋಗಿತ್ತು,’’ ಎಂದು ಹೇಳಿ ಮುಗಿಸುವ ಹೊತ್ತಿಗೆ ಅನುರಾಧ ಅವರ ದುಃಖದ ಕಟ್ಟೆ ಒಡೆದಿತ್ತು.

ವಿನಾಯಕ್ ಬಾಳಿಗ ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದರು. ಬಿಜೆಪಿಯ ಬೂತ್‌ ಮಟ್ಟದ ಕಾರ್ಯಕರ್ತರಾಗಿದ್ದರು. ಐದು ಜನರ ಕುಟುಂಬಕ್ಕೆ ಆಧಾರ ಸ್ಥಂಭವಾಗಿದ್ದರು. ಅದಲ್ಲಕ್ಕಿಂತ ಹೆಚ್ಚಾಗಿ ಅವರ ಇಬ್ಬರು ತಂಗಿಯರಿಗೆ ಸುರಕ್ಷತಾ ಭಾವ ಮೂಡಿಸಿದ್ದ ಅಣ್ಣನಾಗಿದ್ದರು.

ಹೀಗಾಗಿ, ಅಣ್ಣ ಬಿಟ್ಟು ಹೋದ ಕೆಲಸವನ್ನು ಯಾವತ್ತೂ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲೇರದ ತಂಗಿಯರು ಮುಂದುವರಿಸಿದ್ದಾರೆ. “ಅಣ್ಣನ ಕನಸು ಇದ್ದದ್ದು ದೇವಸ್ಥಾನದ ಆಡಿಟ್ ಆಗಬೇಕು ಅನ್ನುವುದು. ಅದನ್ನು ಮಾಡಿಸಿದರೆ ಎಲ್ಲಾ ಸತ್ಯಗಳು ಹೊರಗೆ ಬರುತ್ತವೆ,’’ ಎಂದು ಅನುರಾಧಾ ತಮ್ಮ ಮುಂದಿನ ಗುರಿಗಳ ಕುರಿತು ಮಾತನಾಡಿದರು.

ವಿನಾಯಕ್ ಬಾಳಿಗ ಕೊಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಅನುರಾಧಾ ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನಿ ಮೋದಿವರೆಗೆ ಪತ್ರ ಬರೆದಿದ್ದಾರೆ. ಅವರು ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಉತ್ತರವೂ ಸಿಕ್ಕಿದೆ. ಸದ್ಯ ಇವರ ಮನವಿಯ ಸ್ಥಿತಿಯನ್ನು ‘ಸಮಾಚಾರ’ ಪರಿಶೀಲಿಸಿದರೆ, ಅನುರಾಧ ಪತ್ರ ಮಂಗಳೂರು ಕಮಿಷನರ್‌ಗೆ ವರ್ಗಾವಣೆಯಾಗಿದೆ. ಮುಂದಿನ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲ.

ಪ್ರಧಾನಿ ಕಚೇರಿಯಿಂದ ಬಂದ ಮರುತ್ತರ. 
ಪ್ರಧಾನಿ ಕಚೇರಿಯಿಂದ ಬಂದ ಮರುತ್ತರ. 

“ವಿನಾಯಕ್ ಬಾಳಿಗ ಪ್ರಕರಣ ಕೊಂಕಣಿ ಸಮುದಾಯದಲ್ಲಿ ಬಿಜೆಪಿಗೆ ಮತ ತಂದು ಕೊಡಲು ಸಮಸ್ಯೆಯಾಗಬಹುದು. ನಮ್ಮ ಅಭ್ಯರ್ಥಿಗೂ (ವೇದವ್ಯಾಸ್ ಕಾಮತ್) ವಿನಾಯಕ್ ಬಾಳಿಗ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈಗೂ ಪರಿಚಯ ಅಷ್ಟೆ,’’ ಎಂಬ ಸಮಜಾಯಿಷಿ ನೀಡುತ್ತಾರೆ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ವಕ್ತಾರರೊಬ್ಬರು.

ಆದರೆ ಇಷ್ಟು ಸುಲಭವಾಗಿ ದಕ್ಷಿಣ ಕನ್ನಡದ ಬಿಜೆಪಿ ವಿನಾಯಕ್ ಬಾಳಿಗರ ಹತ್ಯೆಯ ಭಾರವನ್ನು ಇಳಿಸಿಕೊಳ್ಳುವುದು ಕಷ್ಟವಿದೆ. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಸದ್ಯ ಜಾಮೀನಿನ ಮೇಲೆ ಓಡಾಡಿಕೊಂಡಿರುವ ನರೇಶ್ ಶೆಣೈ ಇವತ್ತಿಗೂ ಸ್ಥಳೀಯ ಬಿಜೆಪಿ ಜತೆ ನಿರಂತರ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಪಕ್ಷದ ಕಾರ್ಯಕರ್ತರು ಒಪ್ಪಿಕೊಳ್ಳುತ್ತಾರೆ. “ನಾಯಕರಾಗಿ ಬೆಳೆದ ಮೇಲೆ ಎಲ್ಲವೂ ನಡೆಯುತ್ತದೆ,’’ ಎಂದು ನೋವಿನಿಂದಲೇ ಅವಲತ್ತುಕೊಂಡವರು ಬಿಜೆಪಿಯ ಕಾರ್ಯಕರ್ತರೊಬ್ಬರು.

ಒಂದು ಕಡೆ ಬಿಜೆಪಿಯವರು ಬಾಳಿಗ ಮನೆ ಕಡೆ ತಲೆ ಹಾಕಿಲ್ಲ ಎಂಬ ನೋವು ಕುಟುಂಬದಲ್ಲಿದೆ.

ಜತೆಗೆ, “ನಮ್ಮ ಸಮುದಾಯ ಕೂಡ ಸ್ಪಂದಿಸಲಿಲ್ಲ. ಹೆಚ್ಚಿನವರಿಗೆ ಭಯ ಇದೆ. ನಾವು ಬಾಳಿಗ ಕುಟುಂಬಕ್ಕೆ ನೆರವು ನೀಡಿದರೆ ನಮ್ಮನ್ನೂ ಕೊಲೆ ಮಾಡಬಹುದು. ಆರೋಪಿ ಹೊರಗೆ ಓಡಾಡಿಕೊಂಡಿದ್ದಾನೆ ಎಂದು ಕೆಲವರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ನಾವು ಯಾವ ನಂಬಿಕೆ ಮೇಲೆ ನ್ಯಾಯವನ್ನು ಎದಿರುನೋಡಬೇಕು ಹೇಳಿ,’’ ಎಂದು ಪ್ರಶ್ನಿಸುತ್ತಾರೆ ಬಾಳಿಗರ ಸಹೋದರಿ ಹರ್ಷಾ.

ಬಾಳಿಗ ಕೊಲೆ ಪ್ರಕರಣ ತಾರ್ಕಿಕ ಅಂತ್ಯ ಇನ್ನೂ ಕಂಡಿಲ್ಲ. ನ್ಯಾಯ ನಿರೀಕ್ಷೆಯಲ್ಲಿ ಹಿರಿಯ ಜೀವ ಬಿ. ಆರ್. ಬಾಳಿಗ ಇದ್ದಾರೆ. ಕುಟುಂಬದ ಹೆಣ್ಣು ಮಕ್ಕಳು ನ್ಯಾಯಾಲಯದ ಮೆಟ್ಟಿಲು ಕಾಯುತ್ತಿದ್ದಾರೆ. ಇದರ ನಡುವೆಯೇ ದಕ್ಷಿಣ ಕನ್ನಡದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿಗೆ. ರಾಷ್ಟ್ರೀಯ ಪಕ್ಷ ತನ್ನದೇ ಕಾರ್ಯಕರ್ತನ ಕೊಲೆಯ ವಿಚಾರದಲ್ಲಿ ಮೌನ ಹೊದ್ದುಕೊಂಡು ಮತ ಯಾಚನೆಗೆ ಹೊರಟಿರುವುದು ಬಿಜೆಪಿಯ ಬೆಂಬಲಿಗರಲ್ಲೂ ಅಸಮಾಧಾನ ಮೂಡಿಸಿದೆ.

“ನಾನು ಕಳೆದ 20 ವರ್ಷಗಳಿಂದ ಬಿಜೆಪಿ ಬಿಟ್ಟು ಬೇರೆಯವರಿಗೆ ಓಟು ಹಾಕಿಲ್ಲ. ನಾಳೆಯೂ ಹಾಕುವುದಿಲ್ಲ ಕೂಡ. ಆದರೆ ವಿನಾಯಕ್ ಬಾಳಿಗ ವಿಚಾರದಲ್ಲಿ ನಮ್ಮ ನಾಯಕರು ನಡೆದುಕೊಂಡಿದ್ದು ನೋವು ಉಂಟು ಮಾಡಿದೆ. ಪಕ್ಷಕ್ಕಾಗಿ ಕೆಲಸ ಮಾಡಿದ ಕಾರ್ಯಕರ್ತನ ಪರವಾಗಿ ನಿಲ್ಲಬೇಕಾದ ಸಮಯದಲ್ಲಿ ಯಾಕೆ ಎಲ್ಲ ಮೌನವಹಿಸಿದ್ದಾರೆ ಎಂಬುದು ಅವತ್ತೂ ಅರ್ಥವಾಗಲಿಲ್ಲ, ಇವತ್ತಿಗೂ ಅರ್ಥವಾಗಿಲ್ಲ,’’ ಎನ್ನುತ್ತಾರೆ ರಾಜೇಶ್ ಪೈ.

ಬಾಳಿಗ ಮನೆಯ ಹಾದಿಯನ್ನು ತೋರಿಸಿದ ಪೈ ಹೇಳಿಕೆಯಲ್ಲಿ ಪ್ರಾಮಾಣಿಕತೆ ಇತ್ತು, ನೋವಿತ್ತು. “ಮೇ. 1ರಂದು ಮೋದಿ ಉಡುಪಿಗೆ, 9ರಂದು ಮಂಗಳೂರಿಗೆ ಬರುವ ಕಾರ್ಯಕ್ರಮ ಇದೆ. ಆ ಸಮಯದಲ್ಲಿ ನಮ್ಮ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತನನ್ನು ನೆನಪಿಸಿಕೊಳ್ಳುತ್ತಾರೆ ಎಂಬ ಭರವಸೆ ಇದೆ,’’ ಎನ್ನುತ್ತಾರೆ ರಾಜೇಶ್ ಪೈ.

ಊರಿಗೆ ಬರುವ ಮೋದಿ, ತಮ್ಮದೇ ಪಕ್ಷದ ಕಾರ್ಯಕರ್ತ, ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆಯ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಲು ಪ್ರಯತ್ನಿಸಿದ ನಾಗರಿಕನ ಸಾವಿಗೆ ನ್ಯಾಯ ಒದಗಿಸುವ ಭರವಸೆ ನೀಡುತ್ತಾರಾ? ಅಥವಾ ಬಾಳಿಗ ಕೊಲೆ ಆರೋಪಿಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಸೆಲ್ಫಿ ತೆಗೆದುಕೊಂಡು ವಾಪಾಸಾಗುತ್ತಾರಾ? ಬಿಜೆಪಿ ಕಾರ್ಯಕರ್ತರೇ ಎದುರು ನೋಡುತ್ತಿದ್ದಾರೆ.