ಎ.ಮಂಜು, ಎಚ್‌.ಡಿ.ರೇವಣ್ಣ ಮತ್ತು ಮಂಜೇಗೌಡ
GROUND REPORT

ELECTION TOUR: ಮಲೆನಾಡ ಹೆಬ್ಬಾಗಿಲಲ್ಲಿ ಜೆಡಿಎಸ್‌ನದ್ದೇ ಪಾರುಪತ್ಯ!

ಜೆಡಿಎಸ್‌ ಪ್ರಬಲವಾಗಿರುವ ಹಾಸನದಲ್ಲಿ ಈ ಬಾರಿ ಪೈಪೋಟಿ ಕೊಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಆದರೆ, ಜಿಲ್ಲೆಯಲ್ಲಿ ಜೆಡಿಎಸ್‌ ಪರ ಒಲವು ಹೆಚ್ಚಾಗಿರುವುದರಿಂದ ಕಾಂಗ್ರೆಸ್‌ ಪ್ರಯತ್ನ ಫಲ ಕೊಡುವುದು ಅನುಮಾನ.

ಕರ್ನಾಟಕದಿಂದ ಪ್ರಧಾನಿಯೊಬ್ಬರನ್ನು ದೇಶಕ್ಕೆ ಕೊಟ್ಟ ಜಿಲ್ಲೆ ಹಾಸನ. ಒಂದು ಕಡೆಗೆ ಮಲೆನಾಡು, ಮತ್ತೊಂದು ಕಡೆಗೆ ಬಯಲು ಸೀಮೆಯನ್ನು ಹೊಂದಿರುವ ಹಾಸನ ‘ಮಲೆನಾಡಿನ ಹೆಬ್ಬಾಗಿಲು’ ಎಂದೇ ಹೆಸರಾಗಿದೆ. ಹಿಂದಿನಿಂದಲೂ ಜೆಡಿಎಸ್‌ ಪಾರಮ್ಯ ಸಾಧಿಸಿಕೊಂಡು ಬಂದಿರುವ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ಜೆಡಿಎಸ್‌ ಸ್ಥಾನ ಭದ್ರವಾಗಿದೆ.

‘ರಾಜ್ಯಕ್ಕೆ ಯಾರೇ ಮುಖ್ಯಮಂತ್ರಿಯಾದರೂ ಹಾಸನಕ್ಕೆ ಮಾತ್ರ ಎಚ್‌.ಡಿ. ರೇವಣ್ಣನೇ ಮುಖ್ಯಮಂತ್ರಿ’ ಎಂಬ ಮಾತು ಹಾಸನದಲ್ಲಿದೆ. ಅಷ್ಟರಮಟ್ಟಿಗೆ ಹಾಸನದಲ್ಲಿ ರೇವಣ್ಣ ಪ್ರಭಾವವಿದೆ. ಹಾಸನದ ಮಟ್ಟಿಗೆ ರೇವಣ್ಣ ಹಾಗೂ ಎಚ್‌.ಡಿ. ದೇವೇಗೌಡರ ಪ್ರಭಾವವಿರುವುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ.

ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ ಪ್ರಾಬಲ್ಯವಿದ್ದರೂ ಅರಕಲಗೂಡು ಮತ್ತು ಬೇಲೂರಿನಲ್ಲಿ ಕಾಂಗ್ರೆಸ್‌ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಅರಕಲಗೂಡಿನಲ್ಲಿ ಕಾಂಗ್ರೆಸ್‌ನ ಎ. ಮಂಜು ಈ ಬಾರಿಯೂ ಕಣದಲ್ಲಿದ್ದಾರೆ. ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಿಗಿ ಸಡಿಲಗೊಂಡಿದೆ ಎಂಬ ಮಾತುಗಳಿವೆ.

ತತ್ವ-ಸಿದ್ಧಾಂತ ಹೊಂದಿರುವ ಸಜ್ಜನ ರಾಜಕಾರಣಿ ಎಂದು ಹೆಸರಾಗಿರುವ ಎ.ಟಿ. ರಾಮಸ್ವಾಮಿ ಈ ಬಾರಿ ಅರಕಲಗೂಡಿನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎ. ಮಂಜು ಅವರಿಗೆ ರಾಮಸ್ವಾಮಿ ಪ್ರಬಲ ಪೈಪೋಟಿ ಕೊಡುವ ನಿರೀಕ್ಷೆ ಇದೆ. ಎ. ಮಂಜು ಸಚಿವರಾಗಿದ್ದರೂ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಮಾತುಗಳು ಕ್ಷೇತ್ರದಲ್ಲಿವೆ. ಹೀಗಾಗಿ ಜೆಡಿಎಸ್‌ ಒಲವು ಹಾಗೂ ಎ. ಮಂಜು ವಿರುದ್ಧದ ಜನಾಭಿಪ್ರಾಯ ಇಲ್ಲಿ ರಾಮಸ್ವಾಮಿ ಅವರನ್ನು ಗೆಲ್ಲಿಸಬಹುದು.

ಬೇಲೂರಿನಲ್ಲಿ ಅನುಕಂಪ

ಅತ್ತ ಅರಕಲಗೂಡಿನಲ್ಲಿ ಎ.ಟಿ. ರಾಮಸ್ವಾಮಿ ಪರವಾದ ಒಲವು ಕಂಡರೆ ಬೇಲೂರಿನಲ್ಲಿ ಕಾಂಗ್ರೆಸ್‌ ಈ ಬಾರಿಯೂ ಗೆಲ್ಲುವ ಅಲೆ ಇದೆ. ಬೇಲೂರು ಕ್ಷೇತ್ರದಲ್ಲಿ ಕೀರ್ತನಾ ರುದ್ರೇಶ ಗೌಡ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಕಾಂಗ್ರೆಸ್‌ ಶಾಸಕರಾಗಿದ್ದ ವೈ.ಎನ್‌. ರುದ್ರೇಶ ಗೌಡ ಸಾವಿನ ಅನುಕಂಪ ಇಲ್ಲಿ ಕೆಲಸ ಮಾಡಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.

ಬೇಲೂರಿನಲ್ಲಿ ಜೆಡಿಎಸ್‌ನಿಂದ ಕೆ.ಎಸ್‌.ಲಿಂಗೇಶ್‌ ಕಣದಲ್ಲಿದ್ದರೆ, ಬಿಜೆಪಿ ಎಚ್‌.ಕೆ. ಸುರೇಶ್‌ ಅವರನ್ನು ಸ್ಪರ್ಧೆಗಿಳಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ಸ್ಪರ್ಧೆಯಲ್ಲಿ ಒಂದಷ್ಟು ಪ್ರಮಾಣದ ಮತಗಳನ್ನು ಬಿಜೆಪಿ ಸೆಳೆಯಬಹುದು, ಆದರೆ ಬಿಜೆಪಿ ಗೆಲುವು ಕಷ್ಟ ಎಂಬ ಮಾತುಗಳು ಕ್ಷೇತ್ರದಲ್ಲಿವೆ.

ಎ ಟಿ ರಾಮಸ್ವಾಮಿ
ಎ ಟಿ ರಾಮಸ್ವಾಮಿ
ಜೆಡಿಎಸ್ ಹಿಡಿತವಿರುವ ಹಾಸನ ಜಿಲ್ಲೆಯಲ್ಲಿ ಕನಿಷ್ಠ ಐದು ಕ್ಷೇತ್ರಗಳಲ್ಲಾದರೂ ಈ ಬಾರಿ ಕಾಂಗ್ರೆಸ್‌ ಗೆಲ್ಲಿಸಬೇಕೆಂದು ಸಿದ್ದರಾಮಯ್ಯ ಕನಸು ಕಂಡಿದ್ದಾರೆ. ಆದರೆ, ಹಾಸನದಲ್ಲಿ ಜೆಡಿಎಸ್‌ ಮಣಿಸುವುದು ಅಷ್ಟು ಸುಲಭವಲ್ಲ. ಜೆಡಿಎಸ್‌ ಪರ ಒಲವು ಈ ಬಾರಿಯ ಚುನಾವಣೆಯಲ್ಲೂ ಸಾಬೀತಾಗಲಿದೆ. 
-ಶಶಿಕಿರಣ್, ಹಾಸನ

ಗೆಲ್ಲುವ ವಿಶ್ವಾಸದಲ್ಲಿ ಜೆಡಿಎಸ್‌

ಜಿಲ್ಲೆಯಲ್ಲಿ ಈ ಬಾರಿ ಏಳೂ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಜೆಡಿಎಸ್‌ ಇದೆ. ಜೆಡಿಎಸ್ ಪ್ರಾಬಲ್ಯ ಹೊಂದಿರುವ ಹಾಸನ, ಹೊಳೆನರಸೀಪುರ, ಸಕಲೇಶಪುರ, ಶ್ರವಣಬೆಳಗೊಳ, ಅರಸೀಕೆರೆ ಕ್ಷೇತ್ರಗಳಲ್ಲಿ ಈ ಬಾರಿಯೂ ಅನಾಯಾಸವಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸ ಜೆಡಿಎಸ್‌ನದ್ದು. ಉಳಿದಂತೆ ಅರಕಲಗೂಡಿನಲ್ಲಿ ಎ.ಟಿ. ರಾಮಸ್ವಾಮಿ ಗೆಲ್ಲಬಹುದು ಎಂಬ ಮಾತುಗಳಿರುವುದರಿಂದ ಬೇಲೂರು ಕೈ ತಪ್ಪಿದರೂ ಆರು ಸ್ಥಾನಗಳನ್ನಂತೂ ತೆಕ್ಕೆಗೆ ತೆಗೆದುಕೊಳ್ಳುವ ಉಮೇದು ಜೆಡಿಎಸ್‌ನದ್ದು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎಚ್‌.ಎಸ್‌. ಪ್ರಕಾಶ್‌ಗೆ ಜೆಡಿಎಸ್‌ ಬಲದ ಜತೆಗೆ ಸರಳ ವ್ಯಕ್ತಿತ್ವದ ರಾಜಕಾರಣಿ ಎಂಬ ಹೆಸರಿದೆ. ಅಭಿವೃದ್ಧಿ ಕೆಲಸಗಳೂ ಜಿಲ್ಲಾ ಕೇಂದ್ರದಲ್ಲಿ ತಕ್ಕಮಟ್ಟಿಗೆ ಕಾಣುತ್ತವೆ. ಈ ಅಂಶಗಳೇ ಈ ಬಾರಿಯೂ ಪ್ರಕಾಶ್‌ ಕೈಹಿಡಿಯುವ ಸಾಧ್ಯತೆ ಇದೆ. ಬಿಜೆಪಿಯಿಂದ ಪ್ರೀತಂ ಜೆ. ಗೌಡ ಮತ್ತು ಕಾಂಗ್ರೆಸ್‌ನಿಂದ ಮಹೇಶ್ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್‌ಗೆ ಪೈಪೋಟಿ ಕೊಟ್ಟಿದ್ದ ಕಾಂಗ್ರೆಸ್‌ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂದು ಕೆಲಸ ಮಾಡುತ್ತಿದೆ.

ಮಂಜೇಗೌಡ ವ್ಯರ್ಥ ಪ್ರಯತ್ನ?

ಕಾಂಗ್ರೆಸ್‌ನಿಂದ ಹೊಳೆನರಸೀಪುರ ಕ್ಷೇತ್ರದಲ್ಲಿ ಕಣದಲ್ಲಿರುವ ಬಾಗೂರು ಮಂಜೇಗೌಡ ಚುನಾವಣೆಗೆ ಸ್ಪರ್ಧಿಸಿರುವುದು ವ್ಯರ್ಥ ಪ್ರಯತ್ನ ಎನ್ನುತ್ತಾರೆ ಇಲ್ಲಿನ ಜನ. ಎಚ್‌.ಡಿ. ರೇವಣ್ಣ ಪ್ರಭಾವವಿರುವ ಕ್ಷೇತ್ರದಲ್ಲಿ ಮಂಜೇಗೌಡ ಪರ ಯಾವುದೇ ಒಲವು ಕಾಣುತ್ತಿಲ್ಲ.

“ಬಾಡೂಟ ಮತ್ತು ಹಣ ಬಲದಿಂದ ಹೊಳೆನರಸೀಪುರವನ್ನು ಕೈವಶ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ಮಂಜೇಗೌಡ ಇದ್ದಾರೆ. ಆದರೆ, ಎಚ್‌.ಡಿ. ರೇವಣ್ಣ ಪ್ರಭಾವದ ಎದುರು ಮಂಜೇಗೌಡ ಸೋಲುವುದು ಖಚಿತ. ಅಲ್ಲದೆ, ಮಾಜಿ ಸಂಸದ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೆಟ್‌ ಕೈತಪ್ಪಿರುವ ಸಿಟ್ಟಿದೆ. ಈ ಸಿಟ್ಟು ಕೂಡಾ ಮಂಜೇಗೌಡ ಸೋಲಿಗೆ ಕಾರಣವಾಗಬಹುದು” ಎನ್ನುತ್ತಾರೆ ಹೊಳೆನರಸೀಪುರದ ನಾಗೇಶ್‌.

ಸಕಲೇಶಪುರ ಮೀಸಲು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ನಿವೃತ್ತ ಐಎಎಸ್‌ ಅಧಿಕಾರಿ ಸಿದ್ದಯ್ಯ ಅವರನ್ನು ಕಣಕ್ಕಿಳಿಸಿದೆ. ಆದರೆ, ಜೆಡಿಎಸ್‌ ಪ್ರಭಾವದ ಎದುರು ಸಿದ್ದಯ್ಯ ಗೆಲುವು ಕಷ್ಟ ಎಂಬ ಮಾತಿದೆ. ಈ ಬಾರಿಯೂ ಇಲ್ಲಿ ಎಚ್‌.ಕೆ. ಕುಮಾರಸ್ವಾಮಿ ಗೆಲ್ಲುವ ಉಮೇದಿನಲ್ಲಿದ್ದಾರೆ.

ಜೆಡಿಎಸ್‌ ಭದ್ರಕೋಟೆಯಾಗಿರುವ ಹಾಸನದಲ್ಲಿ ಈ ಬಾರಿ ಕೈ ಬಾವುಟ ಹಾರಿಸಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಆದರೆ, ಜೆಡಿಎಸ್‌ನ ಸಾಂಪ್ರದಾಯಿಕ ಮತದಾರರನ್ನು ಸೆಳೆಯುವುದು ಸುಲಭದ ಮಾತಲ್ಲ. ಅಲ್ಲದೆ, ಜಿಲ್ಲೆಯಲ್ಲಿ ದೇವೇಗೌಡ ಹಾಗೂ ರೇವಣ್ಣ ಪ್ರಭಾದ ಮುಂದೆ ಇತರೆ ಪಕ್ಷಗಳ ಕಸರತ್ತುಗಳು ಕೆಲಸ ಮಾಡುವುದು ಕಷ್ಟ.