samachara
www.samachara.com
ELECTION TOUR: ‘ಪರಿವಾರದ ಜಿಲ್ಲೆ’ಗಳಲ್ಲಿ ಅಭಿವೃದ್ಧಿಯೇ ಅಜೆಂಡಾ; ಬದಲಾದ ಜನ,  ಬಿಜೆಪಿ! 
GROUND REPORT

ELECTION TOUR: ‘ಪರಿವಾರದ ಜಿಲ್ಲೆ’ಗಳಲ್ಲಿ ಅಭಿವೃದ್ಧಿಯೇ ಅಜೆಂಡಾ; ಬದಲಾದ ಜನ, ಬಿಜೆಪಿ! 

ಮಂಗಳೂರಿನಲ್ಲಿ ಮೇಲ್ಮಟ್ಟಕ್ಕೆ ಕಾಣಿಸುವ ರಾಜಕೀಯ ಚಿತ್ರಣ ಒಂದಾದರೆ, ತಳಮಟ್ಟದಲ್ಲಿ ಜನ ಸಾಮಾನ್ಯರು ಎರಡು ದಶಕಗಳ ಅಂತರದಲ್ಲಿ ಆದ ಗಾಯಗಳನ್ನು ಮರೆತು ‘ಅಭಿವೃದ್ಧಿ’ ಎಂಬ ಹಾದಿಗೆ ಹೊರಳಿಕೊಳ್ಳುವ ಮನಸ್ಸು ಮಾಡಿದ್ದಾರೆ.

ಕಡಲ ತಡಿಯ ಈ ಊರಿಗೆ ಒಂದೊಂದು ಭಾಷೆಯಲ್ಲಿ ಒಂದೊಂದು ಹೆಸರಿದೆ. ಮಂಗಳೂರು ಎಂಬುದು ಕನ್ನಡದ ವಾಕ್ಯಗಳಲ್ಲಿ, ಸರಕಾರಿ ಕಡತಗಳಲ್ಲಿ ಬಳಸುವ ಹೆಸರು. ತುಳು ಭಾಷಿಕರು ಇದನ್ನು ಕುಡ್ಲ ಎಂದು ಕರೆಯುತ್ತಾರೆ. ಬ್ಯಾರಿಗಳ ಪಾಲಿಗೆ ಮೈಕಳ. ನೆರೆಯ ರಾಜ್ಯ ಕೇರಳದ ಮಲೆಯಾಳಿ ಭಾಷಿಕರಿಗೆ ಇದು ಮಂಗಳಾಪುರ.

ಹೀಗೆ, ಹೆಸರಿನ ಮೂಲಕವೇ ಭಿನ್ನ ಅನ್ನಿಸುವಂತಹ ಕರ್ನಾಟಕದ ದಕ್ಷಿಣ ತುದಿಯ ಈ ನಗರದಲ್ಲೀಗ ಚುನಾವಣೆಯ ಚಟುವಟಿಕೆ ಗರಿಗೆದರಿದೆ. ಹಾಗೆ ನೋಡಿದರೆ, ಒಂದು ತಿಂಗಳ ಹಿಂದೆಯೇ ಚುನಾವಣೆ ಅಖಾಡಕ್ಕೆ ಇಳಿದವರು ಸಿಪಿಐಎಂ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇಳಿದಿರುವ ಕಮ್ಯುನಿಸ್ಟ್ ಪಾರ್ಟಿ ಈಗಾಗಲೇ ಒಂದು ಸುತ್ತಿನ ಮನೆ ಮನೆ ಭೇಟಿ ಪೂರ್ಣಗೊಳಿಸಿದೆ.

ಇವರಿಗೆ ಹೋಲಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿ ಟಿಕೆಟ್ ಹಂಚಿಕೆ ಗೊಂದಲ ನಿವಾರಿಸಿಕೊಂಡು ನಾಮಪತ್ರಗಳನ್ನು ಸಲ್ಲಿಸಿವೆ. ಸೋಮವಾರ ಬಿಜೆಪಿ ಇರುವ ಎಂಟು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ದೊಡ್ಡ ಸಂಖ್ಯೆಯ ಜನರನ್ನು ಸೇರಿಸಿ ನಾಮಪತ್ರ ಸಲ್ಲಿಸಿದೆ. ಕಾಂಗ್ರೆಸ್‌ನ ಹಾಲಿ ಶಾಸಕ ಲೋಬೊ ಹಾಗೂ ಸಚಿವ ಯು. ಟಿ. ಖಾದರ್ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟಾರೆ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಮಂಗಳವಾರದಿಂದ ಪ್ರಮುಖ ಪಕ್ಷಗಳು ಕಾರ್ಯಕರ್ತರು ಫೀಲ್ಡ್‌ಗೆ ಇಳಿದಿದ್ದಾರೆ. ಪ್ರಚಾರ ಭರಾಟೆ ನಿಧಾನವಾಗಿ ಬಿಸಿ ಏರುತ್ತಿದೆ. ಈಗಾಗಲೇ ಇರುವ ವಾತಾವರಣದ ಬಿಸಿಯ ಜತೆಗೆ ಸಾರ್ವಜನಿಕ ಸಾರಿಗೆಗಳಲ್ಲಿ, ಅಂಗಡಿ ಕಟ್ಟೆಗಳಲ್ಲಿ ಜನ ಅಭ್ಯರ್ಥಿಗಳ ನಾಮಪತ್ರದ ವಿವರಗಳನ್ನು, ಜತೆಗೆ ಘೋಷಿಸಿಕೊಂಡ ಆಸ್ತಿಯ ಬಗ್ಗೆ ‘ಗುಣಗಾನ’ ಮಾಡಲಾರಂಭಿಸಿದ್ದಾರೆ.

ಇವು ದಕ್ಷಿಣ ಜಿಲ್ಲೆಯಲ್ಲಿ ಮೇಲ್ಮಟ್ಟಕ್ಕೆ ಕಾಣಿಸುವ ರಾಜಕೀಯ ಚಿತ್ರಣ. ತಳಮಟ್ಟದಲ್ಲಿ ಜನ ಸಾಮಾನ್ಯರು ಎರಡು ದಶಕಗಳ ಅಂತರದಲ್ಲಿ ಆದ ಗಾಯಗಳನ್ನು ಮರೆತು ‘ಅಭಿವೃದ್ಧಿ’ ಎಂಬ ಹಾದಿಗೆ ಹೊರಳಿಕೊಳ್ಳುವ ಮನಸ್ಸು ಮಾಡಿದ್ದಾರೆ. ‘ಧರ್ಮ ರಾಜಕಾರಣ’ ಎಂಬ ದುಬಾರಿ ಜೂಜಿನ ಅಭಿವ್ಯಕ್ತಿಯನ್ನು ಹತ್ತಿರದಿಂದ ನೋಡಿದವರೇ ಈಗ ರಸ್ತೆ, ನೀರು, ಊರು ಎಂಬ ನೆಲದ ಆಲೋಚನೆಗೆ ಮರಳುತ್ತಿರುವ ಸೂಚನೆಗಳನ್ನು ಚುನಾವಣೆ ನೀಡುತ್ತಿದೆ. ಮಂಗಳೂರು ಮಾತ್ರವಲ್ಲ, ಇಡೀ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೆರೆಯ ಉಡುಪಿಯಲ್ಲಿ ಹೀಗೊಂದು ಹೊಸ ಆಲೋಚನೆಯ ಅಲೆ ಕಾಣಿಸುತ್ತಿದೆ.

ಇಂತಹದೊಂದು ಯೋಚನೆಗೆ ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನುಡಿ ಬರೆಯಲಾಗಿದೆ ಎಂಬುದು ಗಮನಾರ್ಹ. ಬಿಜೆಪಿಯ ಯುವ ನಾಯಕ, ಹಿಂದುತ್ವ ಪ್ರತಿಪಾದಿಸಿಯೇ ರಾಜಕಾರಣ ಏಳ್ಗೆ ಕಂಡ ಸುನೀಲ್ ಕುಮಾರ್, 'ಅಭಿವೃದ್ಧಿಗಾಗಿ ಗೆಲ್ಲಿಸಿ’ ಎಂಬ ಪ್ರಣಾಳಿಕೆಯನ್ನು ಜನರ ಮುಂದಿಟ್ಟಿದ್ದಾರೆ. ನಾಲ್ಕು ಪುಟಗಳ ಈ ಪ್ರಣಾಳಿಕೆಯಲ್ಲಿ ಶಾಶ್ವತ ಹಾಗೂ ಜನೋಪಯೋಗಿ ಅಭಿವೃದ್ಧಿ ಕೆಲಸಗಳು, ವಿನೂತನ ಕಲ್ಪನೆಯ ಜನಪರ ಕಾರ್ಯಗಳನ್ನು ಪಟ್ಟಿ ಮಾಡಲಾಗಿದೆ.

ಕಾರ್ಕಳದ ಶಾಸಕ, ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಪ್ರಣಾಳಿಕೆ. 
ಕಾರ್ಕಳದ ಶಾಸಕ, ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಪ್ರಣಾಳಿಕೆ. 

ಕೊನೆಯ ಪುಟದಲ್ಲಿ ಕೆರೆ, ರಸ್ತೆ, ಆಸ್ಪತ್ರೆ, ಶಾಲೆ ಅಭಿವೃದ್ಧಿಯ ಚಿತ್ರಗಳು ಕಾಣಿಸುತ್ತಿವೆ. ‘ಸಾಧಿಸಿದ್ದು ಬಹಳಷ್ಟಿದೆ, ಸಾಧಿಸಬೇಕಾದ್ದು ಇನ್ನಷ್ಟು’ ಎಂದು ಹೇಳಿಕೊಂಡಿರುವ ಸುನೀಲ್ ಕುಮಾರ್ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹಿಂದುತ್ವ, ಧರ್ಮದ ಸೊಗಡು ಇಲ್ಲದಿರುವುದು ಸ್ಥಳೀಯರಿಗೆ ಅಚ್ಚರಿ ತಂದಿದೆ. ಅಷ್ಟರ ಮಟ್ಟಿಗೆ ತಮ್ಮ ಜನಪ್ರತಿನಿಧಿ ಬದಲಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

“ಹಿಂದೂ ಕಾರ್ಯಕರ್ತರ ಹತ್ಯೆ ಆಯಿತು. ಕಾಂಗ್ರೆಸ್ ಸರಕಾರ ಬಂದ ಮೇಲೆ ಜಾತಿಗಳನ್ನು ಒಡೆಯಲಾಯಿತು. ದೇವಸ್ಥಾನಗಳನ್ನು ಕಡೆಗಣಿಸಲಾಯಿತು. ಆದರೆ ಅದಷ್ಟೇ ಜನರನ್ನು ಸೆಳೆಯಲು ಸಾಕಾಗುವುದಿಲ್ಲ. ಮೊದಲ ಬಾರಿ ಗೆದ್ದಾಗ ಇದೇ ತಪ್ಪನ್ನು ಮಾಡಿದ್ದೆವು. ಹೀಗಾಗಿ ಈ ಬಾರಿ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ,’’ ಎನ್ನುತ್ತಾರೆ ಸುನೀಲ್ ಕುಮಾರ್ ಅನುಯಾಯಿಯೊಬ್ಬರು.

ಕಾರ್ಕಳ ಬಿಜೆಪಿ ರೀತಿಯಲ್ಲಿಯೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಬಾರಿಯ ಚುನಾವಣೆಯ ಅಜೆಂಡಾ ಆಗಿ ಅಭಿವೃದ್ಧಿ ಅಜೆಂಡಾವನ್ನು ಕಮಲ ಪಕ್ಷ ಜನರ ಮುಂದಿಟ್ಟಿದೆ ಎಂಬುದು ಗಮನ ಸೆಳೆಯುವ ಅಂಶ. ಇದು ಮೇಲ್ನೋಟಕ್ಕೆ ಆದರೂ, ಚುನಾವಣೆ ಬಂದಾಗ ರಾಮ ಮಂದಿರ, ಧರ್ಮಗಳಿಗಿಂತ ಜನಪರ ಕೆಲಸಗಳ ಅನಿವಾರ್ಯತೆಯನ್ನು ಪಕ್ಷ ಮನಗೊಂಡಿದೆ.

ಬದಲಾದ ಆಲೋಚನೆ:

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಐದಾರು ತಿಂಗಳು ಇರುವಾಗಲೇ ದಕ್ಷಿಣ ಕನ್ನಡ ಹೊತ್ತಿ ಉರಿಯಲು ಶುರು ಮಾಡಿತ್ತು. ಮಂಗಳೂರು ಉತ್ತರ ಕ್ಷೇತ್ರದ ಕಾಟಿಪಳ್ಳದಲ್ಲಿ ಹತ್ಯೆ, ಪ್ರತಿ ಹತ್ಯೆಗಳು ನಡೆದು ಕೋಮು ಸಂಘರ್ಷದ ಕಾರ್ಮೋಡ ಕವಿದಿತ್ತು. ಆದರೆ ಅಷ್ಟೇ ವೇಗವಾಗಿ ತಲೆಯ ಮೇಲೆ ಕವಿದಿದ್ದ ಕೋಮು ಹತ್ಯೆಗಳ ಕಾರ್ಮೋಡಗಳನ್ನು ಸರಿಸುವಂತಹ ಜನರ ಸೌಹಾರ್ದಪರ ನಡವಳಿಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಲ್ಲಿ ಶಾಂತಿಗೆ ನಾಂದಿ ಹಾಡಿತ್ತು. ಅದು ಚುನಾವಣೆವರೆಗೂ ಮುಂದುವರಿದಿದೆ.

“ಪೊನ್ನುರಾಜ್‌ ಅಂತ ಒಬ್ಬರು ಡಿಸಿ(ಜಿಲ್ಲಾಧಿಕಾರಿ) ಇದ್ದರು. ಅವರು ಹೋದ ಮೇಲೆ ಸಾಕಷ್ಟು ಸಮಸ್ಯೆಯಾಗಿತ್ತು. ಎರಡೂ ಕಡೆಯಿಂದ ಹೆಣಗಳು ಬಿದ್ದಿದ್ದವು. ಈಗ ಐದಾರು ತಿಂಗಳಿಂದ ವ್ಯವಸ್ಥೆ ಸರಿಯಾಗಿದೆ. ಸಣ್ಣ ಗಲಾಟೆ ಆದರೂ ಪೊಲೀಸರು ಬರುತ್ತಾರೆ,’’ ಎಂದರು ಆಟೋ ಡ್ರೈವರ್ ಯಶೋಧರ.

ಯಶೋಧರ ರೀತಿಯಲ್ಲೇ ಅನೇಕರು ಬದಲಾದ ಊರಿನಲ್ಲಿ ತಮ್ಮ ನಿರೀಕ್ಷೆಗಳನ್ನೂ ಬದಲಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ಕೋಮು ಸಂಘರ್ಷ ಲಾಭಕ್ಕಿಂತ ನಷ್ಟವನ್ನೇ ಹೆಚ್ಚು ಮಾಡಿದೆ ಎಂಬ ಅಭಿಪ್ರಾಯವನ್ನು ಜನ ಮುಕ್ತವಾಗಿ ಹಂಚಿಕೊಳ್ಳುತ್ತಾರೆ.

ನಮಗೆ ಬೇಕಿರುವುದು ಒಳ್ಳೆಯ ಆಡಳಿತ, ಯಾರು ಬಂದ್ರೆ ಏನು ಎಂಬ ಪ್ರಬುದ್ಧತೆ ಇಲ್ಲಿನ ಕಾಲೇಜು ವಿದ್ಯಾರ್ಥಿಗಳಿಂದ ವ್ಯಕ್ತವಾಗುತ್ತಿದೆ. ಕೋಮು ಸಂಘರ್ಷ ಪಕ್ಕಕ್ಕಿಟ್ಟು, ರಸ್ತೆ, ನೀರು, ಉದ್ಯೋಗದ ಕಡೆಗೆ ಯೋಚನೆ ಮಾಡಬೇಕಾದ ಒತ್ತಡ ಜನರಿಂದಲೇ ಬರುತ್ತಿದೆ ಎಂಬುದನ್ನು ಸ್ವತಃ ಬಿಜೆಪಿ ಸಂಘಟಕರೂ ಒಪ್ಪಿಕೊಳ್ಳುತ್ತಾರೆ.

ಲೋಕನಾಥ್, ಮಂಗಳೂರು ನಿವಾಸಿ (ಬಲಭಾಗದಲ್ಲಿ)
ಲೋಕನಾಥ್, ಮಂಗಳೂರು ನಿವಾಸಿ (ಬಲಭಾಗದಲ್ಲಿ)
ಒಳ್ಳೆಯ ಕೆಲಸ ಮಾಡುವವರು ಜನರ ಶಾಸಕರಾಗಿ ಬೇಕಾಗಿದೆ. ಅವರು ಬೇರೆ, ಇವರು ಬೇರೆ ಎಂದುಕೊಂಡು ಹೊಡೆದಾಟ ಮಾಡಿಸುವವರಿಂದ ಯಾವ ಪ್ರಯೋಜನವೂ ಇಲ್ಲ. ಯಾರು ಜನರ ಮನಸ್ಸನ್ನು ಅರ್ಥಮಾಡಿಕೊಂಡು ಊರಿಗೆ ರಸ್ತೆ, ನೀರು ನೀಡುತ್ತಾರೋ ಅವರಿಗೆ ನನ್ನ ಮತ. 
ಲೋಕನಾಥ್, ಪೆಣಂಬದೂರಿನ ಬಸ್‌ ನಿಲ್ದಾಣದಲ್ಲಿ ಸಿಕ್ಕ ಸ್ಥಳೀಯರು. 

ಸದ್ಯಕ್ಕೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಧರ್ಮ ರಾಜಕಾರಣ ದಕ್ಷಿಣ ಕನ್ನಡ ಚುನಾವಣೆ ಅಜೆಂಡವಾಗದೆ ಅಭಿವೃದ್ಧಿ ರಾಜಕಾರಣ ಮುನ್ನೆಲೆಗೆ ಬಂದಿದೆ ಮತ್ತು ಅದೇ ಮಾದರಿಯಲ್ಲಿ ಚುನಾವಣೆಯನ್ನು ಎದುರಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಕಾಂಗ್ರೆಸ್ ಕೂಡ ಇದೇ ಅಜೆಂಡಾವನ್ನಾಗಿ ಇಟ್ಟುಕೊಂಡು ಜನರ ಮುಂದೆ ಮತ ಕೇಳಲು ಬಂದಿದೆ.

ಪರಿವಾರದ ಜಿಲ್ಲೆ:

ಬಿಜೆಪಿ ಕಾರ್ಯಕರ್ತರ ಪಾಲಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ‘ಪರಿವಾರದ ಜಿಲ್ಲೆಗಳು’. “ಜನಸಂಘದ ಕಾಲದಿಂದಲೂ ಇಲ್ಲಿನ ಜನ ಬಿಜೆಪಿ ಬೆಂಬಲಿಸಿಕೊಂಡು ಬಂದಿದ್ದಾರೆ. ಕಳೆದ ಬಾರಿಯ ಚುನಾವಣೆಯ ಫಲಿತಾಂಶ ಅನಿರೀಕ್ಷಿತ. ಅದು ಬದಲಾದ ಜನರ ಮನಸ್ಥಿತಿ ಎಂಬುದು ನಮಗೆ ಅರ್ಥವಾಗಿದೆ. ಹೀಗಾಗಿ ಈ ಬಾರಿ ಭಿನ್ನ ಪ್ರಚಾರ ತಂತ್ರ ಅನುಸರಿಸುತ್ತಿದ್ದೇವೆ. ಹೀಗಾಗಿ ಈ ಬಾರಿಯ ಫಲಿತಾಂಶ ಯಾರೂ ನಿರೀಕ್ಷಿಸದ ರೀತಿಯಲ್ಲಿ ಇಲ್ಲಿ ಬರುತ್ತದೆ ನೋಡ್ತಿರಿ,’’ ಎಂದವರು ರಾಜೇಶ್ ಕೊಠಾರಿ.

ಮಂಗಳೂರು ದಕ್ಷಿಣ ಬಿಜೆಪಿ ಕಚೇರಿಯಲ್ಲಿ ಮಾತಿಗೆ ಸಿಕ್ಕ ಕೊಠಾರಿ ಸ್ಥಳೀಯ ಬಿಜೆಪಿ ವಕ್ತಾರರು ಕೂಡ. ಕೇಬಲ್ ಟಿವಿ ಆಪರೇಟರ್ ಆಗಿರುವ ಅವರು ಮೋದಿ ಸರಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ. ಜಿಎಸ್‌ಟಿ ಬಂದ ನಂತರ ತಮಗೆ ಆದ ತೊಂದರೆಯನ್ನೂ ಅಷ್ಟೇ ಸ್ಪಷ್ಟವಾಗಿ ವಿವರಿಸುತ್ತಾರೆ. ಆದರೂ, “ನಮಗೆ ಚಿನ್ಹೆ ಮುಖ್ಯ. ನಾವು ಪಕ್ಷವನ್ನು ನಂಬಿಕೊಂಡು ಬಂದವರು. ನೋಡೋಣ ಇವತ್ತಲ್ಲ ನಾಳೆ ನಮ್ಮ ನ್ಯೂನತೆಗಳನ್ನು ಸರಿ ಮಾಡಿಕೊಂಡು ಜನರಿಗೆ ಇನ್ನಷ್ಟು ಹತ್ತಿರವಾಗುತ್ತೇವೆ,’’ ಎಂದು ರಾಜೇಶ್ ಕೊಠಾರಿ ಆಶಯ ವ್ಯಕ್ತಪಡಿಸುತ್ತಾರೆ.

ಅವರ ಮಾತಿನಲ್ಲಿ ವ್ಯಕ್ತವಾಗುವ ಬದಲಾವಣೆ ಎಂಬುದು ಅಭಿವೃದ್ಧಿ ಕಡೆಗಿನ ನಡಿಗೆ. ಕೋಮು ಸಂಘರ್ಷದ ಕುಲುಮೆಯಾಗಿ ಈ ಜಿಲ್ಲೆಗಳು ಬಳಕೆಯಾಗಿವೆ. ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಬಿಜೆಪಿ. ಜತೆಗೆ ಮುಸ್ಲಿಂ ರಾಜಕೀಯ ಪಕ್ಷಗಳಾದ ಎಸ್‌ಡಿಪಿಐ ಕೊಡುಗೆಯೂ ಇದೆ. ಇದೀಗ, ಕೇಸರಿ ಮತ್ತು ಹಸಿರು ಧರ್ಮ ಪ್ರಚಾರದಲ್ಲಿ ಕೊಂಚ ಬದಲಾವಣೆಯಾಗಿದೆ.

ಇವರು ಬದಲಾಗುವ ಮುನ್ನವೇ ಜನ ಬದಲಾಗಿದ್ದಾರೆ. ಕೋಮು ಸಂಘರ್ಷ ಸಾಕಾಗಿದೆ, ರಕ್ತಪಾತ ನಿಲ್ಲಬೇಕಿದೆ. ಆ ಕಾರಣಕ್ಕೆ ಇಲ್ಲಿನ ಬುದ್ಧಿವಂತ ಜನ ಚುನಾವಣೆ ವೇಳೆ, ಅಭ್ಯರ್ಥಿಗಳ ಆಸ್ತಿಪಾಸ್ತಿ, ಅವರು ನೀಡುತ್ತಿರುವ ಜನಪರ ಕಾರ್ಯಗಳ ಪ್ರಣಾಳಿಕೆಯನ್ನು ಗಮನಿಸುತ್ತಿದ್ದಾರೆ. ಅನಿವಾರ್ಯವಾಗಿ ಬಿಜೆಪಿಯಂತಹ ರಾಜಕೀಯ ಪಕ್ಷ ಕೂಡ ‘ಹಿಂದುತ್ವದ ಪ್ರಯೋಗ ಶಾಲೆ’ಯಲ್ಲಿ ಅಭಿವೃದ್ಧಿ ಮಂತ್ರದಂಡವನ್ನೇ ಇಟ್ಟುಕೊಂಡು ಚುನಾವಣೆಗೆ ಇಳಿದಿದೆ.

ಅಭಿವೃದ್ಧಿಯ ಜತೆಗೆ ಬಿಜೆಪಿ ಎರಡೂ ಜಿಲ್ಲೆಗಳಲ್ಲಿ ಒಟ್ಟು 6 ಬಂಟ ಸಮುದಾಯಕ್ಕೆ ಟಿಕೆಟ್ ನೀಡುವ ಮೂಲಕ ಮೇಲ್ಜಾತಿ ರಾಜಕಾರಣಕ್ಕೆ ಅಪ್ಪಿಕೊಂಡಿರುವುದು ಸ್ಪಷ್ಟವಿದೆ. “ಬಿಲ್ಲವರು ದೊಡ್ಡ ಸಂಖ್ಯೆಯಲ್ಲಿರುವ ಜಿಲ್ಲೆ. ಒಂದು ಕಾಲದಲ್ಲಿ ಜನಾರ್ಧನ್ ಪೂಜಾರಿ ಅವರ ಎದುರಿಗೆ ನವೀನ್ ಕುಮಾರ್ ಕಟೀಲ್‌ ಗೆಲ್ಲಿಸಿ ಕಳುಹಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಸಮುದಾಯ. ಆದರೆ ಬಿಜೆಪಿ ಅವರನ್ನು ನೆಚ್ಚಿಕೊಂಡು ಮತ ರಾಜಕೀಯ ಮಾಡುವುದು ಕಷ್ಟ ಎಂದು ಭಾವಿಸಿದಂತಿದೆ. ಕಳೆದ ಚುನಾವಣೆಯಿಂದ ಅವರು ಈ ಪಾಠ ಕಲಿತಿರಬಹುದು. ಆ ಕಾರಣಕ್ಕೆ ಈ ಬಾರಿ ಬಂಟ್ ಸಮುದಾಯವನ್ನು ಅಪ್ಪಿಕೊಂಡು ಅಭಿವೃದ್ಧಿ ಮಂತ್ರಕ್ಕೆ ಮೊರೆ ಹೋಗಿದೆ,’’ ಎನ್ನುತ್ತಾರೆ ಸ್ಥಳೀಯ ರಾಜಕೀಯ ವಿಶ್ಲೇಷಕರೊಬ್ಬರು.