ಗೇರು ಬೀಜದ ಹೊಗೆ, ಮೋದಿ ಅಲೆ: ಎರಡೂ ಇಲ್ಲದ ಉಡುಪಿ ಚುನಾವಣೆ!
GROUND REPORT

ಗೇರು ಬೀಜದ ಹೊಗೆ, ಮೋದಿ ಅಲೆ: ಎರಡೂ ಇಲ್ಲದ ಉಡುಪಿ ಚುನಾವಣೆ!

ಈ ಬಾರಿ ಉಡುಪಿಯಲ್ಲಿ ಜಾತಿ ಕೆಲಸ ಮಾಡುತ್ತದಾರೂ, ಅದೇ ಪ್ರಮುಖ ಅಂಶವಾಗಿ ನಿಲ್ಲುವುದಿಲ್ಲ. ಪಕ್ಷದಷ್ಟೇ ಮನ್ನಣೆ ಅಭ್ಯರ್ಥಿಗಳಿಗೂ ಇದೆ. ಹಿಂದುತ್ವದ ಪ್ರಯೋಗಶಾಲೆ ಅನ್ನಿಸಿಕೊಂಡರೂ ಧರ್ಮದ ಎದುರಿಗೆ ಅಭಿವೃದ್ಧಿಯನ್ನು ಬಿಜೆಪಿಯೇ ಮುಂದಿಟ್ಟಿದೆ.

“ಗೇರು ಬೀಜದ ಫ್ಯಾಕ್ಟರಿಗಳು ಮುಚ್ಚಿ ಸುಮಾರು ದಿನ ಆಯಿತು. ಮೊದಲಿನ ಹಾಗೆ ವಾರ ವಾರ ಸಾಲ ಮರು ಜಮಾವಣೆ ಆಗುತ್ತಿಲ್ಲ. ಜಿಎಸ್‌ಟಿ ಬಂದ ನಂತರ ಫ್ಯಾಕ್ಟರಿ ಮಾಲೀಕರಿಗೂ, ಕೆಲಸಗಾರರಿಗೂ ಹೊಡೆತ ಬಿದ್ದಿದೆ. ಹಣದ ಓಡಾಟ ಕಡಿಮೆಯಾಗಿದೆ,’’ ಎಂದರು ಹೆಬ್ರಿಯಿಂದ ಕಾರ್ಕಳ ಮಾರ್ಗದ ಬಸ್‌ ಒಂದರಲ್ಲಿ ಸಿಕ್ಕ ಸಹಕಾರ ಸಂಘದ ಪ್ರತಿನಿಧಿ ರವೀಶ್.

ಎಸ್‌ಎಸ್‌ಎಲ್‌ಸಿವರೆಗೆ ಓದಿರುವ ಇವರು 20 ವರ್ಷಗಳ ಹಿಂದೆ ಚಿಕ್ಕಮಗಳೂರಿನಿಂದ ಬದುಕು ಹುಡುಕಿಕೊಂಡು ಉಡುಪಿಗೆ ಬಂದವರು. ಬಾರ್‌ಗಳಿಂದ ಹಿಡಿದು, ಚಪ್ಪಲಿ ಅಂಗಡಿಗಳವರೆಗೆ ಕೆಲಸಗಳನ್ನು ಮಾಡಿ ಕೊನೆಗೆ ಸಹಕಾರ ಸಂಘದ ಪ್ರತಿನಿಧಿಯಾಗಿ ಊರೂರು ಸುತ್ತುತ್ತಿದ್ದಾರೆ. ಜನರ ಸಂಪರ್ಕ ಇದೆ, ರಾಜಕೀಯ ಜ್ಞಾನವೂ ಇದೆ, ದೇಶದ ಆಡಳಿತದ ಬಗ್ಗೆ ಅಭಿಪ್ರಾಯಗಳಿವೆ. ಹಾಗಂತ ಅದನ್ನು ನೇರವಾಗಿ ಹೇಳಿಕೊಳ್ಳಲು ಹಿಂದೇಟು ಹಾಕುತ್ತಾರೆ.

ಇದು ರವೀಶ್ ಮಾತ್ರ ಅಲ್ಲ, ಉಡುಪಿ ಜಿಲ್ಲೆಯ ನಾನಾ ಊರುಗಳಲ್ಲಿ ಸಿಕ್ಕ ಸಾಮಾನ್ಯ ಜನರ ನಡವಳಿಕೆಯಲ್ಲಿ ಇಂತಹದ್ದೇ ಒಂದು ಸಾಮ್ಯತೆ ಕಾಣಿಸುತ್ತದೆ. ‘ಎಂಕ್ಲೆಗ್‌ ದಾಯೆ ರಾಜಕೀಯ ಮಾತ, ಒರಿ ಏರೋ ಗೆಂದ್ವೆರ್ ಬುಡ್ಲೆ” (ನಮಗ್ಯಾಕೆ ರಾಜಕೀಯ ಎಲ್ಲ. ಯಾರೋ ಒಬ್ರು ಗೆಲ್ತಾರೆ ಬಿಡಿ) ಎಂಬ ಹೇಳಿಕೆ ಇಲ್ಲಿನ ಸಾಮಾನ್ಯ ವರ್ಗದ ಜನರಿಂದ ಬರುತ್ತದೆ.

ಉಡುಪಿ ಬುದ್ಧಿವಂತರ ಜಿಲ್ಲೆ. ಫಲಿತಾಂಶ ಹೊರಬಿದ್ದಾಗಲೆಲ್ಲಾ ರಾಜ್ಯ ಮಟ್ಟದಲ್ಲಿ ಇದರ ಹೆಸರು ಕೇಳಿ ಬರುತ್ತದೆ. ಪಕ್ಕದ ಮಂಗಳೂರು ಜಿಲ್ಲೆಗೆ ಹೋಲಿಸಿದರೆ, ಕರಾವಳಿ ಭಾಗವಾಗಿದ್ದರೂ ಆಡಳಿತಾತ್ಮಕ ದೃಷ್ಟಿಯಿಂದ ಉಡುಪಿ ವೈವಿಧ್ಯಪೂರ್ಣವಾಗಿದೆ. ಇದರ ಕೆಲವು ಭೂ ಭಾಗಗಳು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೂ, ಇನ್ನೊಂದಿಷ್ಟು ಭಾಗ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿಕೊಳ್ಳುತ್ತವೆ. ಆಡಳಿತವಾಗಿ ಚುದುರಿರುವ ಜಿಲ್ಲೆಯಲ್ಲಿ ಆಯಾ ತಾಲೂಕಿಗೆ ಒಗ್ಗಿಕೊಂಡ ಕನ್ನಡದ ಭಿನ್ನ ದನಿಗಳೂ ಕೇಳಿಸುತ್ತವೆ. ಕುಂದಾಪುರದ ಕನ್ನಡ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಸರಕನ್ನು ಹಂಚುವುದಕ್ಕೆ ಹೇರಳವಾಗಿ ಬಳಕೆಯಾಗುತ್ತಿದೆ.

ಇಲ್ಲಿನ ರಾಜಕೀಯ, ವಿಧಾನಸಭೆಯ ವಿಚಾರಕ್ಕೆ ಬಂದರೆ ಒಟ್ಟು ಐದು ಕ್ಷೇತ್ರಗಳನ್ನು ಉಡುಪಿ ಜಿಲ್ಲೆ ಒಳಗೊಂಡಿದೆ. ಕಾರ್ಕಳ, ಉಡುಪಿ, ಕಾಪು, ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಗಳು ತಮ್ಮದೇ ಆದ ರಾಜಕೀಯ ಲೆಕ್ಕಾಚಾರಗಳ ಮೂಲಕ ಈಗಾಗಲೇ ಒಂದು ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತಿದೆ. ಮಾರ್ಚ್‌ ಮೂರನೇ ವಾರದ ಹೊತ್ತಿಗೆ ಬಹುತೇಕ ಕ್ಷೇತ್ರಗಳ ಪ್ರಮುಖ ಪಕ್ಷಗಳ ಟಿಕೆಟ್ ಫೈನಲ್ ಆಗಿರುವ ಹಿನ್ನೆಲೆಯಲ್ಲಿ ಚುನಾವಣೆಯ ಫಲಿತಾಂಶದ ದಿಕ್ಸೂಚಿಯೊಂದನ್ನು ಮುಖ್ಯವಾಹಿನಿಯ ಮಂದಿ ಬಿಚ್ಚಿಡುತ್ತಾರೆ.

ಕಾರ್ಕಳದಲ್ಲಿ ಸುಕು:

ಕರ್ನಾಟಕ ಬಿಜೆಪಿಯ ಯುವ ಮುಖ, ಸಂಘ ಪರಿವಾರದ ಹಿನ್ನೆಲೆಯ ರಾಜಕಾರಣಿ ಸುನೀಲ್ ಕುಮಾರ್ ಕಾರ್ಕಳದಿಂದ ಮರು ಆಯ್ಕೆ ಬಯಸಿದ್ದಾರೆ. ಅದಕ್ಕಾಗಿ ರಸ್ತೆಗಳನ್ನು ಹಾಕಿಸಿದ್ದಾರೆ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಅಲ್ಲಲ್ಲಿ ಮಾಡಿಸಿದ್ದಾರೆ. ಅದರ ಜತೆಗೆ, “ರಾಜ್ಯದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಇದರ ಬಗ್ಗೆ ಕಾಂಗ್ರೆಸ್ ಕ್ರಮ ಕೈಗೊಂಡಿಲ್ಲ. ಆ ಸಿಟ್ಟೂ ಜನರಲ್ಲಿದೆ. ಅದೇ ನಮ್ಮ ಅಭ್ಯರ್ಥಿ ಮರು ಆಯ್ಕೆಯನ್ನು ಖಾತ್ರಿಪಡಿಸುತ್ತದೆ,’’ ಎನ್ನುತ್ತಾರೆ ಹೆಬ್ರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಧಾಕರ್ ಹೆಗಡೆ.

ಹೆಗಡೆ ಹೇಳುವಂತೆ ಕಾರ್ಕಳ ಜನ ಹಿಂದೂ ಕಾರ್ಯಕರ್ತರ ಹತ್ಯೆಯ ಆಕ್ರೋಶದಿಂದಲೇ ಚುನಾವಣೆಯನ್ನು ಎದುರು ನೋಡುತ್ತಿಲ್ಲ. ಬದಲಿಗೆ, ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿನ ಗೊಂದಲವೂ ಇಲ್ಲಿ ಬಿಜೆಪಿಗೆ ಸಹಾಯ ಮಾಡಿದೆ.

ಜಾತಿಯನ್ನೂ ಗಣನೆಗೆ ತೆಗೆದುಕೊಳ್ಳದೆ ನಾಲ್ಕು ಬಾರಿ ವೀರಪ್ಪ ಮೋಯ್ಲಿ, ಗೋಪಾಲ್ ಭಂಡಾರಿಯಂತ ಸಣ್ಣ ಸಮುದಾಯದ ನಾಯಕರನ್ನು ವಿಧಾನಸಭೆಗೆ ಕಳುಹಿಸಿದವರು ಇಲ್ಲಿನ ಮತದಾರರರು. ನಗರ ಪ್ರದೇಶದ ಕೊಂಕಣಿ ಸಮುದಾಯವೂ ಸೇರಿದಂತೆ ಕಾಂಗ್ರೆಸ್ ಬೇರುಗಳು ಇಲ್ಲಿ ಕಾಣಸಿಗುತ್ತವೆ. ಕೆಲಸ ಮಾಡಲು ಕಾರ್ಯಕರ್ತರೂ ತಯಾರಿದ್ದಾರೆ. ಆದರೆ ಕಾಂಗ್ರೆಸ್ ಹಿರಿಯ ನಾಯಕರು ಕಾರ್ಕಳ ಟಿಕೆಟ್ ನೀಡುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅದೇ ಸುನೀಲ್ ಕುಮಾರ್ ಗೆಲುವನ್ನು ಖಾತ್ರಿಪಡಿಸುತ್ತಿದೆ.

ಸುನೀಲ್ ಕುಮಾರ್ ಉಗ್ರ ಹಿಂದುತ್ವದ ಪ್ರತಿಪಾದಿಸುವ ರಾಜಕಾರಣಿ ಅಂತ ಹೊರ ನೋಟಕ್ಕೆ ಅನ್ನಿಸಿದರೂ, ಕ್ಷೇತ್ರದ ವಿಚಾರದಲ್ಲಿ ಜನರ ಜತೆಗಿನ ಸಂಪರ್ಕ ಚೆನ್ನಾಗಿದೆ. ಇತರೆ ಬಿಜೆಪಿ- ಸಂಘಪರಿವಾರದ ರಾಜಕಾರಣಿಗಳಂತೆ, ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಸುನೀಲ್ ಕುಮಾರ್ ದೂರದೃಷ್ಟಿ ರಸ್ತೆಗೆ, ನೀರಿಗೆ ಮಾತ್ರ ಸೀಮಿತವಾಗಿದೆ. ಆದರೂ, ಜನ ಧರ್ಮ ನಾಯಕ ಎನ್ನುವುದಕ್ಕಿಂತ ಅವರನ್ನು ಅಭಿವೃದ್ಧಿಯ ಹರಿಕಾರ ಎಂದೇ ಗುರುತಿಸಲು ಇಷ್ಟಪಡುತ್ತಿದ್ದಾರೆ. “ಪಕ್ಷ ಯಾವುದೇ ಇರಲಿ, ಗೆದ್ದ ಮೇಲೆ ಕೆಲಸ ಮಾಡಿದರೆ ಸಾಕು,’’ ಎನ್ನುತ್ತಾರೆ ಕಾರ್ಕಳದ ಸಾಮಾನ್ಯ ಜನ.

ಕುಂದಾಪುರದಲ್ಲಿ ಹಾಲಾಡಿ:

ಗಮ್ಮತ್ತಿನ ಸಂಗತಿ ಏನೆಂದರೆ, ಕಾರ್ಕಳದ ಜನ ಅಭಿವೃದ್ಧಿಯನ್ನು ಇಟ್ಟುಕೊಂಡು ಅಭ್ಯರ್ಥಿಯನ್ನು ಅಳೆಯಲು ಹೊರಟಿದ್ದಾರೆ. ಅದೇ ಜಿಲ್ಲೆಯ ಕುಂದಾಪುರ ಕ್ಷೇತ್ರದಲ್ಲಿ ಜನ ವ್ಯಕ್ತಿಯ ಒಳ್ಳೆಯತನಕ್ಕೆ ಮನ್ನಣೆ ನೀಡಿಕೊಂಡು ಬಂದಿದ್ದಾರೆ.

ತೀರಾ ಅಪರೂಪಕ್ಕೆ ರಾಜ್ಯಮಟ್ಟದಲ್ಲಿ ಕೇಳಿ ಬರುವ, ದಕ್ಷಿಣ ಕನ್ನಡದ ರಾಜಕೀಯಕ್ಕೆ ಬಂದರೆ ಜನಪ್ರಿಯ ಅನ್ನಿಸಿಕೊಂಡಿರುವ ಸಿಂಪಲ್ ವ್ಯಕ್ತಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರದ ಬಿಜೆಪಿ ಅಭ್ಯರ್ಥಿ.

ಬಿಜೆಪಿ ಅಧಿಕಾರದಲ್ಲಿದ್ದ ದಿನಗಳಲ್ಲಿಯೇ ಕಲ್ಲಡ್ಕ ಪ್ರಭಾಕರ್ ಭಟ್ಟರ ಶಾಲೆಗೆ ಹೋಗುತ್ತಿದ್ದ ದೇವಸ್ಥಾನದ ಹಣವನ್ನು ನಿಲ್ಲಿಸಿದವರು ಇವರು. “ಇವರು ಎಷ್ಟು ಸಿಂಪಲ್ ಅಂದರೆ ಮದುವೆ ಕೂಡ ಆಗಿಲ್ಲ,’’ ಎನ್ನುತ್ತಾರೆ ಕುಂಟಾಡಿ ನಿತೇಶ್. ಕಾರ್ಕಳ ಮೂಲದ ಕುಂಟಾಡಿ ಹತ್ತಿರದಿಂದ ನೋಡಿದ ಜಿಲ್ಲೆಯ ರಾಜಕಾರಣಿಗಳ ಭಿನ್ನ ಮುಖಗಳನ್ನು ಪರಿಚಯಿಸುತ್ತಾರೆ.

ಶ್ರೀನಿವಾಸ್ ಶೆಟ್ಟಿ ರಾಜಕಾರಣದ ಸ್ವರೂಪವೇ ಬಿನ್ನ. ಶಂಕುಸ್ಥಾಪನೆ, ಉದ್ಘಾಟನೆಯಂತಹ ಸರಕಾರಿ ಕಾರ್ಯಕ್ರಮಗಳಲ್ಲಿ ಅವರು ಕಾಣಸಿಗುವುದಿಲ್ಲ. ಆದರೆ ಯಾರೇ ಮನೆಗೆ ಹೋದರೂ ಹಣ ಕೊಟ್ಟು ಕಳುಹಿಸುತ್ತಾರೆ. ಅವರು ಮನೆ ಬಿಟ್ಟರೆ ಎಲ್ಲೂ ಹೊರಗೆ ಕಾಣಿಸುವುದಿಲ್ಲ
ಕುಂಟಾಡಿ ನಿತೇಶ್‌, ಸ್ಥಳೀಯರು.

ಕಳೆದ ಬಾರಿ ಬಿಜೆಪಿ ಪಕ್ಷದೊಳಗಿನ ನಾಯಕತ್ವ ಗೊಂದಲದ ಪರಿಣಾಮ ಈಗಲೂ ಕುಂದಾಪುರದಲ್ಲಿ ಕಾಣಸಿಕ್ಕಿದೆ. 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದ ಶ್ರೀನಿವಾಸ ಶೆಟ್ಟಿ ಗೆದ್ದಿದ್ದರು. ನಾಲ್ಕೂವರೆ ವರ್ಷಗಳ ನಂತರ ಬಿಜೆಪಿ ಸೇರಿಕೊಂಡರು. ಇದು ಕಷ್ಟಕಾಲದಲ್ಲಿ ಪಕ್ಷದ ಜತೆಗಿದ್ದವರಿಗೆ ಇರುಸುಮುರುಸು ತಂದಿದೆ. ಆದರೆ ಇದು ಶ್ರೀನಿವಾಸ ಶೆಟ್ಟರಿಗೆ ಇರುವ ಜನಪ್ರಿಯತೆಯನ್ನು ಕಡಿಮೆ ಮಾಡುವ ಸಾಧ್ಯತೆಗಳಿಲ್ಲ.

ಅದೇ ವೇಳೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ರಾಕೇಶ್ ಮಲ್ಲಿ ಅವರ ಹಣ ಹೆಚ್ಚು ಸದ್ದು ಮಾಡುತ್ತಿದೆ. ಪೈಪೋಟಿ ನೀಡಲು ಸಿದ್ಧತೆಯೂ ಜೋರಾಗಿದೆ. ಇಷ್ಟರ ನಡುವೆಯೂ “ಹಾಲಾಡಿ ಗೆಲ್ಲಬಹುದು, ಆದರೆ ಅಂತರ ಕಡಿಮೆಯಾಗಬಹುದು” ಎಂಬುದು ತಳಮಟ್ಟದಲ್ಲಿ ಕೇಳಿ ಬರುತ್ತಿರುವ ಅಭಿಪ್ರಾಯ.

ಹಾಲಾಡಿ ಗೆದ್ದು ಬಂದರೂ, ಮನೆ ಬಿಟ್ಟು ಹೊರಗೆ ಬರುವುದು, ಅಭಿವೃದ್ಧಿ ಅಂತ ಮಾತನಾಡುವುದು ಸಾಧ್ಯವೇ ಇಲ್ಲ ಎಂದು ಗೊತ್ತಿದ್ದರೂ ಜನ ಮತ ಹಾಕುತ್ತಾರೆ, ಯಾಕೆಂದರೆ ಕಾರ್ಕಳದ ಮತದಾರರಂತೆ ಕುಂದಾಪುರದವರೂ ಕೂಡ ಹೊಡಿ, ಬಡಿ, ಕಡಿ ರಾಜಕಾರಣದಿಂದ ಬೇಸತ್ತಿದ್ದಾರೆ ಮತ್ತು ಅವರು ರಾಜಕೀಯ ಶಾಂತಿಯ ಹುಡುಕಾಟದಲ್ಲಿದ್ದಾರೆ.

ಸೊರಕೆ- ಮದ್ವರಾಜ್; ಚಿನ್ನ- ಮುನ್ನ

ಕಾಪು ಸಮುದ್ರ ದಂಡೆಯ ಅಂಚಿನಲ್ಲಿರುವ ವಿಧಾನಸಭಾ ಕ್ಷೇತ್ರ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್ ಕುಮಾರ್ ಸೊರಕೆ ಸಚಿವರಾಗಿದ್ದವರು. ಸ್ಥಾನದಿಂದ ಕೈಬಿಟ್ಟಿದ್ದು ಅಂದು ಸೊರಕೆಗೆ ಅಸಮಾಧಾನ ಆಗಿತ್ತಾದರೂ ಈಗ ಕ್ಷೇತ್ರದ ಜನ ಸಮಾಧಾನ ವ್ಯಕ್ತಪಡಿಸುತ್ತಾರೆ.

ಸೊರಕೆ ಮಂತ್ರಿ ಸ್ಥಾನ ತಪ್ಪಿದ ಮೇಲೆ ಒಳ್ಳೆಯ ಕೆಲಸ ಮಾಡಿದ್ದಾರೆ. ಕೆಲಸ ಅಂದರೆ ಅದೇ ರಸ್ತೆ, ನೀರು ಸೌಲಭ್ಯ ನೀಡುವುದು. ಅದು ಜನರಲ್ಲಿ ಒಳ್ಳೆಯ ಭಾವನೆ ತಂದುಕೊಟ್ಟಿದೆ
ಸುಕುಮಾರ್‌ ಮುನಿಯಾಲ್‌, ಸ್ಥಳೀಯ ಪತ್ರಕರ್ತ.

ಇಡೀ ಜಿಲ್ಲೆಯ ರಾಜಕಾರಣದ ಕುರಿತು ವಿಶೇಷ ಒಳನೋಟಗಳೊಂದಿಗೆ ಮಾತನಾಡುವ ಸುಕುಮಾರ್, ಸೊರಕೆ ಗೆಲುವು ಅನಾಯಾಸ ಎನ್ನುತ್ತಾರೆ. ಇದಕ್ಕೆ ಸೊರಕೆ ಕೆಲಸದ ಜತೆಗೆ ಬಿಜೆಪಿ ಟಿಕೆಟ್ ಹಂಚಿಕೆಯ ಯಡವಟ್ಟೂ ಕಾರಣ. ಪಕ್ಷದ ಆಂತರಿಕ ಸಮೀಕ್ಷೆಯಲ್ಲಿ ಹೆಸರು ಬಂದವರಿಗೆ ಟಿಕೆಟ್ ನೀಡಿಲ್ಲ, ಸ್ಥಳೀಯ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬ ಆರೋಪ ಇಲ್ಲಿಯೂ ಕೇಳಿಬಂದಿದೆ.

ಕಾಪು ಪಾಲಿಗೆ ಸೊರಕೆ ಚಿನ್ನ. ಆದರೆ, ಪಕ್ಕದ ಉಡುಪಿ ಪಾಲಿಗೆ ಸಚಿವ ಪ್ರಮೋದ್ ಮಧ್ವರಾಜ್ ಮುನ್ನನ ರೀತಿ ಇದ್ದಾರೆ. ಅವರೇ ಉಡುಪಿಯ ಕಾಂಗ್ರೆಸ್ ಅಭ್ಯರ್ಥಿ. ಕೊನೆಯ ಕ್ಷಣದವರೆಗೂ ಪ್ರಮೋದ್ ಮಧ್ವರಾಜ್ ರಾಜಕೀಯ ನಡೆಗಳು ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದವು. ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹ ಹಬ್ಬಿತ್ತು. ಅದಕ್ಕೆ ಅವರಿಗಿರುವ ಉದ್ಯಮಿ ಹಿನ್ನೆಲೆಯೂ ಕಾರಣವಾಗಿತ್ತು.

ಗೆಲ್ಲುವ ಮುಂಚೆ, ಜನರಿಗೆ ಕೊಡುಗೈ ದಾನಿಯಾಗಿದ್ದ ಪ್ರಮೋದ್, ಇತ್ತೀಚಿನ ದಿನಗಳಲ್ಲಿ ಜನರಿಂದ ದೂರವೇ ಉಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡದಾದ್ಯಂತ ಬಿಜೆಪಿಯನ್ನು ತಿರಸ್ಕರಿಸುವ ಪಣ ತೊಟ್ಟವರಂತೆ ಜನ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು. ಗೆದ್ದವರು ಭಾರಿ ಅಂತರದಿಂದ ಗೆದ್ದಿದ್ದರು. ಅದರಲ್ಲಿ ಪ್ರಮೋದ್ ಮದ್ವರಾಜ್ ಕೂಡ ಒಬ್ಬರಾಗಿದ್ದರು. ಅಷ್ಟೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡು ಗೆಲ್ಲಿಸಿದ ನಂತರ ಶಾಸಕ ನಮ್ಮ ಕೈಗೆ ಸಿಗುತ್ತಿಲ್ಲ ಎಂಬ ಚಿಕ್ಕ ಅಸಮಾಧಾನ ಜನರದಲ್ಲಿದೆ.

ಉಡುಪಿಯ ಬಿಜೆಪಿ ರಘುಪತಿ ಭಟ್ಟರನ್ನು ವಾಪಾಸ್ ಕರೆತಂದಿದೆ. ಸಿಡಿ ಕಳಂಕವನ್ನು ಜನ ಮರೆತಿದ್ದಾರೆ, ಭಟ್ಟರ ಒಳ್ಳೆಯತನಗಳುನ್ನು ಮೆಲುಕು ಹಾಕಲು ಜನ ಆರಂಭಿಸಿದ್ದಾರೆ. ಅವರು ಶಾಸಕರಾಗಿದ್ದ ವೇಳೆ ಮಾಡಿದ ಅಭಿವೃದ್ದಿ ಕೆಲಸಗಳು ಜತೆಗೆ ಜಾತಿ, ಸಂಘ ಪರಿವಾರದ ಬೆಂಬಲದಿಂದ ಭಟ್ಟರು ಪ್ರಬಲ ಪೈಪೋಟಿ ನೀಡಬಹುದು ಎಂದು ಬಿಜೆಪಿ ಕಾರ್ಯಕರ್ತರು ನಂಬಿದ್ದಾರೆ. ಅದೇ ಹುರುಪಿನಿಂದ ಕೆಲಸ ಮಾಡುತ್ತಿದ್ದಾರೆ.

“ನಮ್ಮ ಶ್ರಮ ನಾವು ಹಾಕ್ತಾ ಇದೀವಿ. ಆದರೆ ದುಡ್ಡು ಟೈಮಿಗೆ ಸರಿಯಾಗಿ ಬರ್ತಿಲ್ಲ ಮಾರ್ರೆ,’’ ಎನ್ನುತ್ತಾರೆ ಚುನಾವಣೆಗಾಗಿಯೇ ಬಿಜೆಪಿ ಕಾರ್ಯಕರ್ತರಾದ ಸಂಜೀವ್ ಶೆಟ್ಟಿ.

ಇದಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಮೋದ್ ಮದ್ವರಾಜ್ ಬಳಿ ಹೇರಳ ಹಣ ಇದೆ ಎಂದು ಜನ ಹೇಳುತ್ತಾರೆ. ಬೇಸರಗಳ ಆಚೆಗೂ, ಕಳೆದ ಬಾರಿ ಪ್ರಮೋದ್ ಮಧ್ವರಾಜ್‌ ಪಡೆದ ಮತಗಳೇ ಅವರ ಇವತ್ತಿನ ನಾಗಲೋಟವನ್ನು ಮುನ್ನಡೆಸುತ್ತಿವೆ. ಅವುಗಳಲ್ಲಿ ಅರ್ಧದಷ್ಟು ಮರಳಿ ಬಂದರೂ ಕಾಂಗ್ರೆಸ್ ಗೆಲುವು ಇಲ್ಲಿ ನಿರಾಯಾಸ.

ಅಭಿವೃದ್ಧಿ ವರ್ಸಸ್‌ ಧರ್ಮ:

ಉಡುಪಿ ಜಿಲ್ಲೆಯಲ್ಲಿ ಉಳಿದಿರುವ ಕೊನೆಯ ಕ್ಷೇತ್ರ ಬೈಂದೂರು. ಕಾಂಗ್ರೆಸ್ ಪಕ್ಷದ ಗೋಪಾಲ್ ಪೂಜಾರಿಗೆ ಸುದೀರ್ಘ ಆಡಳಿತಾವಕಾಶ ನೀಡಿದ ಮಣ್ಣಿದು. ಅವರು ಐದನೇ ಬಾರಿಗೆ ಮರು ಆಯ್ಕೆ ಬಯಸಿ ಜನರ ಮುಂದೆ ಬಂದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ವರ್ಸಸ್‌ ಧರ್ಮ ರಾಜಕಾರಣ ಕಾವು ಪಡೆದುಕೊಂಡಿದೆ.

ಬಿಜೆಪಿ ಬಂಟ ಸಮುದಾಯದ ಸುಕುಮಾರ ಶೆಟ್ಟರನ್ನು ಕಣಕ್ಕಿಳಿಸಿದೆ. 1994ರಲ್ಲಿ ಜಯರಾಮ ಶೆಟ್ಟರ ನಂತರ ಕ್ಷೇತ್ರಕ್ಕೆ ಬಂಟ ಶಾಸಕರೊಬ್ಬರು ಸಿಕ್ಕಿಲ್ಲ. ಹೀಗಾಗಿ, ಪ್ರಬಲ ಜಾತಿಯ ಅಭ್ಯರ್ಥಿ, ಜತೆಗೆ ಹಿಂದುತ್ವದ ರಾಜಕಾರವನ್ನು ಮುಂದಿಟ್ಟು ಕಾಂಗ್ರೆಸ್ ಎದುರಿಸಲು ಹೊರಟಿದೆ ಬಿಜೆಪಿ. ಪಕ್ಕದ ಕುಂದಾಪುರ ಬಿಜೆಪಿ ನಾಯಕ ಹಾಲಾಡಿ ಶ್ರೀನಿವಾಸ ಶೆಟ್ಟರ ಅಭಯವೂ ಸಿಕ್ಕರೆ ಸುಕುಮಾರ ಶೆಟ್ಟರ ಗೆಲುವು ಸುಲಭ ಎಂಬ ಪ್ರಮಾಣಿಕ ಲೆಕ್ಕಾಚಾರವನ್ನು ಬಿಜೆಪಿ ಕಾರ್ಯಕರ್ತರು ಮುಂದಿಡುತ್ತಾರೆ.

“ಈ ಲೆಕ್ಕಾಚಾರವನ್ನು ಮೀರಿ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲಿ ಗೆಲ್ಲುತ್ತಾರೆ. ಉತ್ತಮ ಅಭಿವೃದ್ಧಿ ಕೆಲಸಗಳು ಅವರ ಬೆನ್ನಿಗಿವೆ. ಅದಕ್ಕಿಂತ ಹೆಚ್ಚಾಗಿ ಬಂಟ ಸಮುದಾಯಕ್ಕೆ ವಿರುದ್ಧ ನೆಲೆಯಲ್ಲಿ ಉಳಿದ ಜಾತಿಗಳ ಮತದಾರರು ನಿಲ್ಲುತ್ತಾರೆ ಎಂಬ ಭರವಸೆ ಇದೆ. ಕಾಂಗ್ರೆಸ್‌ಗೂ ಇಲ್ಲಿ ಉತ್ತಮ ಬಂಟ ನಾಯಕತ್ವ ಇದೆ,’’ ಎನ್ನುತ್ತಾರೆ ಬೈಂದೂರಿನ ದೀಪಕ್ ನಾವುಂದ. ಕಾನೂನು ವಿದ್ಯಾರ್ಥಿಯಾಗಿರುವ ದೀಪಕ್, ಕೆಪಿಸಿಸಿ ಐಟಿ ಘಟಕದ ಪ್ರಧಾನ ಕಾರ್ಯದರ್ಶಿ ಕೂಡ.

ಇನ್ನೂ 20 ದಿನಗಳ ಕಾಲಾವಕಾಶ ಇರುವುದರಿಂದ ಹಾಗೂ ಎರಡೂ ಪಕ್ಷಗಳಲ್ಲಿ ಗೆಲುವಿಗೆ ಸಿದ್ಧ ಮಾದರಿಯ ಸೂತ್ರಗಳೂ ಇರುವುದರಿಂದ ಇಲ್ಲಿ ಏನು ಬೇಕಾದರೂ ನಡೆಯಬಹುದಾಗಿದೆ.

ಉಪ ಸಂಹಾರ:

ಒಟ್ಟಾರೆ, ಉಡುಪಿ ಜಿಲ್ಲೆಯ ಈ ಬಾರಿ ಚುನಾವಣೆಯಲ್ಲಿ; ಐದೂ ಕ್ಷೇತ್ರಗಳ ಪೈಕಿ ಜಾತಿ ಕೆಲಸ ಮಾಡುತ್ತದೆಯಾದಾರೂ, ಅದೇ ಪ್ರಮುಖ ಅಂಶವಾಗಿ ನಿಲ್ಲುವುದಿಲ್ಲ. ಪಕ್ಷ ಮುಖ್ಯ ಅಂತ ಅನ್ನಿಸಿದರೂ, ವ್ಯಕ್ತಿಗಳಿಗೂ ಇಲ್ಲಿ ಮಣೆ ಹಾಕಲಾಗುತ್ತದೆ. ಹಿಂದುತ್ವದ ಹಾರ್ಡ್‌ ಲ್ಯಾಂಡ್‌ ಅನ್ನಿಸಿಕೊಂಡರೂ ಅಭಿವೃದ್ಧಿ ವಿಚಾರವನ್ನು ಬಿಜೆಪಿಯೇ ಮುಂದಿಟ್ಟಿದೆ. ಪ್ರಧಾನಿ ಮೋದಿ ಫ್ಯಾಕ್ಟರ್ ಬಗ್ಗೆ ಮೇಲ್ಮಟ್ಟದಲ್ಲಿ ಒಲವಿದೆಯಾದರೂ, ಸಾಮಾನ್ಯ ಜನರ ಭಾವನೆ ಕೇಂದ್ರ ಸರಕಾರದ ವಿರುದ್ಧವಾಗಿದೆ. ಇದು ಈ ಹೊತ್ತಿಗೆ ಕಾಣಿಸುತ್ತಿರುವ ಚಹರೆಗಳು.