ELECTION TOUR : ಚಾಮುಂಡೇಶ್ವರಿ ಭಯದಲ್ಲಿ ಬಾದಾಮಿ ಕನಸು ಕಂಡ ಸಿದ್ದರಾಮಯ್ಯ?
GROUND REPORT

ELECTION TOUR : ಚಾಮುಂಡೇಶ್ವರಿ ಭಯದಲ್ಲಿ ಬಾದಾಮಿ ಕನಸು ಕಂಡ ಸಿದ್ದರಾಮಯ್ಯ?

1983ರಲ್ಲಿ ಮೊದಲ ಬಾರಿ ಗೆದ್ದ ಹಾಗೂ 2006ರ ಉಪ ಚುನಾವಣೆಯಲ್ಲಿ ರಾಜಕೀಯ ಮರುಜನ್ಮ ಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗ ಕಾಡುತ್ತಿರುವ ಸೋಲಿನ ಭೀತಿ ಸಿದ್ದರಾಮಯ್ಯ ಅವರನ್ನು ಉತ್ತರದ ಕಡೆಗೆ ಮುಖ ಮಾಡುವಂತೆ ಮಾಡಿದೆ.

ಪಂದ್ಯ ಗೆದ್ದರೂ ನಾಯಕ ಸೋಲುವ ಸ್ಥಿತಿಯನ್ನು ರಾಜ್ಯ ಕಾಂಗ್ರೆಸ್ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲೇ ಕಂಡಿದೆ. ಕಾಂಗ್ರೆಸ್‌ ಈ ಬಾರಿಯೂ ಹೆಚ್ಚೂ ಕಡಿಮೆ ಅದೇ ಸ್ಥಿತಿಯಲ್ಲಿದೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದರೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಕೊರಟಗೆರೆಯಲ್ಲಿ ಸೋತಿದ್ದರು. ಇಂಥದ್ದೇ ಸೋಲಿನ ಭೀತಿ ಈಗ ಸಿದ್ದರಾಮಯ್ಯ ಅವರಿಗೆ ಎದುರಾಗಿದೆ. ಬಾದಾಮಿಯ ಕನಸಿನಲ್ಲಿರುವ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವೇ ಇದ್ದಂತಿಲ್ಲ.

ಚಾಮುಂಡೇಶ್ವರಿ- ಬಾದಾಮಿಯ ಗೊಂದಲದಲ್ಲಿ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆಯಲ್ಲಿ ಗೆಲುವನ್ನು ದೂರವಾಗಿಸಿಕೊಳ್ಳುತ್ತಿರುವ ಲಕ್ಷಣಗಳು ಕಾಣುತ್ತಿವೆ. ಸಿದ್ದರಾಮಯ್ಯ ಹಿಡಿತವಿರುವ ವರುಣಾ ಕ್ಷೇತ್ರದ ಪಕ್ಕದ ಕ್ಷೇತ್ರದಲ್ಲೇ ಈ ಬಾರಿ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ.

1983ರಲ್ಲಿ ಮೊದಲ ಬಾರಿ ಗೆದ್ದ ಹಾಗೂ 2006ರ ಉಪ ಚುನಾವಣೆಯಲ್ಲಿ ರಾಜಕೀಯ ಮರುಜನ್ಮ ಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಡುತ್ತಿರುವ ಸೋಲಿನ ಭೀತಿ ಈ ಬಾರಿ ಸಿದ್ದರಾಮಯ್ಯ ಅವರನ್ನು ಉತ್ತರದ ಕಡೆಗೆ ಮುಖ ಮಾಡುವಂತೆ ಮಾಡಿದೆ. ಈ ಬಾರಿ ಖುದ್ದು ಸಿದ್ದರಾಮಯ್ಯ ಅವರಿಗೇ ಚಾಮುಂಡೇಶ್ವರಿ ತಮ್ಮ ಕೈ ಹಿಡಿಯುವುದಿಲ್ಲ ಎನ್ನುವುದು ಖಾತ್ರಿಯಾಗಿದೆ ಎಂಬ ಮಾತುಗಳಿವೆ.

ಚುನಾವಣೆ ಸಮೀಪವಾಗುತ್ತಿದ್ದ ದಿನಗಳಿಂದಲೂ ಸಿದ್ದರಾಮಯ್ಯ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳೇ ಕೇಳಿಬಂದಿದ್ದವು. ಆದರೆ, ಸಿದ್ದರಾಮಯ್ಯ ಮಾತ್ರ ಅಡ್ಡಗೋಡೆಯ ಮೇಲೆ ದೀಪ ಇಡುತ್ತಲೇ ಬಂದಿದ್ದರು. ಈಗ ಅವರು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವುದು ಖಚಿತವಾಗಿದೆ. ಇದು ಸಹಜವಾಗಿಯೇ ಚಾಮುಂಡೇಶ್ವರಿ ಕ್ಷೇತ್ರದ ಜನರ ಊಹೆಯನ್ನು ನಿಜವಾಗಿಸಿದೆ.

ಚಾಮುಂಡೇಶ್ವರಿ ಹೆಸರಿನಲ್ಲಿ ವರುಣಾ ಪ್ರಚಾರ!:

“ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಖುದ್ದು ಸಿದ್ದರಾಮಯ್ಯ ಅವರಿಗೇ ಇಲ್ಲ. ಹೀಗಾಗಿಯೇ ಅವರು ಬಾದಾಮಿಯ ಕಡೆಗೆ ಆಸಕ್ತಿ ತೋರಿರುವುದು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಹೆಸರಿನಲ್ಲಿ ಮಗ ಯತೀಂದ್ರ ಪರ ಪ್ರಚಾರ ಮಾಡಿದ್ದಾರೆ. ಸಿದ್ದರಾಮಯ್ಯ ಇಲ್ಲಿ ಗೆಲ್ಲುವುದಿಲ್ಲ, ಅದಕ್ಕೇ ಬಾದಾಮಿಯನ್ನೂ ಆರಿಸಿಕೊಂಡಿರುವುದು ಎಂದು ಮಾತು ಜನರ ಬಾಯಲ್ಲಿ ಹರಿದಾಡುತ್ತಿದೆ. ಸಿದ್ದರಾಮಯ್ಯ ಸೋಲಿಗೆ ಈ ಬಾಯಿ ಮಾತೂ ಕಾರಣವಾಗಲಿದೆ” ಎನ್ನುತ್ತಾರೆ ದೊಡ್ಡಕವಲಂದೆಯ ನಾಗೇಶ್.

Also read: ‘ಅಹಿಂದ’ ಮತ ಕ್ರೋಢೀಕರಣಕ್ಕೆ ರಣತಂತ್ರ: ಸಿದ್ದರಾಮಯ್ಯ ಅಶ್ವಮೇಧದ ಕುದುರೆ ಬಾದಾಮಿಗೆ 

“ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಲ್ಲಿರುವಷ್ಟು ಹಿಡಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿಲ್ಲ. ಸಿದ್ದರಾಮಯ್ಯ ಜತೆಗಿರುವ ಒಕ್ಕಲಿಗ ಮುಖಂಡರು ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ದಕ್ಕಿಸಿಕೊಡುವಂಥ ಮುಖಂಡರಲ್ಲ. ಇದರಿಂದಾಗಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಗೆಲುವಿನ ಬಗ್ಗೆ ಮೊದಲಿನಿಂದಲೂ ಅನುಮಾನವಿದೆ. ಹೀಗಾಗಿಯೇ ಅವರು ಬಾದಾಮಿ ಕಡೆಗೆ ಮುಖ ಮಾಡಿರುವುದು” ಎಂಬುದು ನಾಗೇಶ್‌ ಅವರ ಮಾತು.

ಜೆಡಿಎಸ್‌ ಅಭ್ಯರ್ಥಿ ಜಿ.ಟಿ. ದೇವೇಗೌಡ ಪ್ರಾಬಲ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಜೆಡಿಎಸ್ ಗೆದ್ದರೆ ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಎಂಬ ಅಲೆ ಒಕ್ಕಲಿಗ ಸಮುದಾಯದಲ್ಲಿದೆ. ಇದು ಸಹಜವಾಗಿಯೇ ಸಿದ್ದರಾಮಯ್ಯ ಅವರಿಗೆ ಹೊಡೆತ ಕೊಡುತ್ತದೆ.
- ದೇವರಾಜು, ಮಾರ್ಬಳ್ಳಿ

ಜೆಡಿಎಸ್‌ ಜತೆಗೆ ಬಿಜೆಪಿ ಕೈ?:

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಲು ಜೆಡಿಎಸ್‌ ಜತೆಗೆ ಬಿಜೆಪಿ ಕೈಜೋಡಿಸಿದೆ ಎಂಬ ಮಾತುಗಳು ಇಲ್ಲಿ ಕೇಳಿಬರುತ್ತಿವೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ವಿ.ಶ್ರೀನಿವಾಸ್ ಪ್ರಸಾದ್‌ ಹೇಗಾದರೂ ಮಾಡಿ ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕೆಂದು ಜೆಡಿಎಸ್‌ಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯವಿಲ್ಲ. ಹೀಗಾಗಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ. ದೇವೇಗೌಡ ಅವರ ಗೆಲುವು ಖಾತ್ರಿಯಾಗಿಸಲು ಶ್ರೀನಿವಾಸ್‌ ಪ್ರಸಾದ್‌ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಇರುವ ಸಿಟ್ಟನ್ನು ತೀರಿಸಿಕೊಳ್ಳಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅವರಿಗೆ ಸೋಲಿಣಿಸಲೇಬೇಕು ಎಂದು ಶ್ರೀನಿವಾಸ್‌ ಪ್ರಸಾದ್‌ ಪಣ ತೊಟ್ಟಿದ್ದಾರೆ.
- ಸಿದ್ಧರಾಜು, ನಂಜನಗೂಡು

ಸಿದ್ದರಾಮಯ್ಯ ಕೈ ಹಿಡಿಯದ ಒಕ್ಕಲಿಗರು:

ಸಿದ್ದರಾಮಯ್ಯ ಕುರುಬರ ನಾಯಕ ಎಂಬ ಹಣೆಪಟ್ಟಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮ ಬೀರಿದೆ. ಒಕ್ಕಲಿಗರು ಹಾಗೂ ಲಿಂಗಾಯತರು ಹೆಚ್ಚಾಗಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುರುಬರ ಮತಗಳು ಹೆಚ್ಚಿಲ್ಲ. ಸಿದ್ದರಾಮಯ್ಯ ಕುರುಬರ ಪರವಾಗಿ ಮಾತ್ರ ಕೆಲಸ ಮಾಡಿದ್ದಾರೆ, ಅವರು ಒಕ್ಕಲಿಗರ ವಿರೋಧಿ ಎಂಬ ಜನಾಭಿಪ್ರಾಯ ಇಲ್ಲಿ ಈ ಚುನಾವಣೆಯಲ್ಲಿ ಹೆಚ್ಚು ಪರಿಣಾಮ ಬೀರಲಿದೆ.

“ಸಿದ್ದರಾಮಯ್ಯ ಒಕ್ಕಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ತಮ್ಮ ಜಾತಿಯವರಿಗೆ ಮಾತ್ರ ಮಣೆ ಹಾಕುತ್ತಾರೆ ಎಂಬ ಮಾತೇ ಇಲ್ಲಿ ಹೆಚ್ಚಾಗಿದೆ. ಸಿದ್ದರಾಮಯ್ಯ ಕೆಲಸ ಮಾಡಿಸಿಕೊಡುವುದು ಕುರುಬರಿಗೆ ಮಾತ್ರ, ಒಕ್ಕಲಿಗರನ್ನು ಕಂಡರೆ ಅವರಿಗೆ ಆಗುವುದಿಲ್ಲ ಎಂಬ ಅಭಿಪ್ರಾಯವೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಚ್ಚಾಗಿದೆ. ಇದು ಸಿದ್ದರಾಮಯ್ಯ ಅವರಿಗೆ ಹೊಡೆತ ಕೊಡುವ ಸಾಧ್ಯತೆಯೇ ಹೆಚ್ಚು” ಎಂಬುದು ಮೈಸೂರಿನ ಯಶಸ್‌ ಅವರ ಮಾತು.

ಕಾಡುತ್ತಿರುವ ರಾಕೇಶ್‌ ಕೊರತೆ:

ಸಿದ್ದರಾಮಯ್ಯ ಅವರಿಗೆ ಈ ಚುನಾವಣೆಯಲ್ಲಿ ಪುತ್ರ ರಾಕೇಶ್‌ ಕೊರತೆ ಎದ್ದು ಕಾಣುತ್ತಿದೆ. ರಾಕೇಶ್‌ ಇದ್ದಿದ್ದರೆ ಚಾಮುಂಡೇಶ್ವರಿ ಕ್ಷೇತ್ರದ ಗೆಲುವಿಗಾಗಿ ಸಿದ್ದರಾಮಯ್ಯ ಇಷ್ಟೆಲ್ಲಾ ಪರದಾಡಬೇಕಾದ ಅಗತ್ಯವೇ ಇರಲಿಲ್ಲ ಎಂಬ ಮಾತುಗಳಿವೆ.

“ರಾಕೇಶ್‌ ಇದಿದ್ದರೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೇ ಬರುವ ಅಗತ್ಯ ಇರಲಿಲ್ಲ. ಎಲ್ಲವನ್ನೂ ರಾಕೇಶ್‌ ನಿಭಾಯಿಸುತ್ತಿದ್ದರು. ಆದರೆ, ರಾಕೇಶ್‌ ಸಾವು ಈ ಬಾರಿ ಸಿದ್ದರಾಮಯ್ಯ ಅವರ ಚುನಾವಣೆಯ ಮೇಲೂ ಪರಿಣಾಮ ಬೀರಿದೆ” ಎಂಬುದು ಕಳವಾಡಿಯ ಹೇಮಂತ್‌ ಅವರ ಮಾತು.

“ರಾಕೇಶ್‌ ಬದುಕಿದ್ದರೆ ವರುಣಾ ಕ್ಷೇತ್ರಕ್ಕೆ ಯತೀಂದ್ರ ಬರುತ್ತಲೇ ಇರಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಇಲ್ಲಿಗೆ ಬಂದು ಸ್ಪರ್ಧಿಸುವ ಯೋಚನೆಯನ್ನೇ ಮಾಡುತ್ತಿರಲಿಲ್ಲ. ಈ ಬಾರಿ ಸಿದ್ದರಾಮಯ್ಯ ಬಾದಾಮಿಯ ಕಡೆಗೆ ಮುಖ ಮಾಡುವ ಸಂದರ್ಭವೂ ಸೃಷ್ಟಿಯಾಗುತ್ತಿರಲಿಲ್ಲ. ಮಗ ರಾಕೇಶ್‌ ಸಾವು ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ತಕ್ಕಮಟ್ಟಿಗೆ ಅತಂತ್ರ ಮಾಡಿದೆ” ಎನ್ನುತ್ತಾರೆ ಹೇಮಂತ್.

ಒಂದು ಕಡೆಗೆ ಗೆಲುವಿಗಾಗಿ ಬಾದಾಮಿಯತ್ತ ಚಿತ್ತ ಹರಿಸಿರುವ ಸಿದ್ದರಾಮಯ್ಯ, ಮತ್ತೊಂದು ಕಡೆ ಜೆಡಿಎಸ್‌ ಅಲೆ, ಸಿದ್ದರಾಮಯ್ಯ ಸೋಲಿಗಾಗಿ ಬಿಜೆಪಿ ಜೆಡಿಎಸ್‌ ಜತೆಗೆ ಕೈಜೋಡಿಸಿರುವುದು ಸಿದ್ದರಾಮಯ್ಯ ಅವರಿಗೆ ಈಗ ಚಾಮುಂಡೇಶ್ವರಿ ಕ್ಷೇತ್ರವನ್ನು ನುಂಗಲಾರದ ತುತ್ತಾಗಿಸಿದೆ. ಇದೇ ಕಾರಣಕ್ಕೆ ಚಾಮುಂಡೇಶ್ವರಿ ಕೈ ಹಿಡಿಯದಿದ್ದರೂ ಬಾದಾಮಿ ಸಿಹಿ ತಂದು ಕೊಡುವ ವಿಶ್ವಾಸದಲ್ಲಿ ಸಿದ್ದರಾಮಯ್ಯ ಇರುವಂತಿದೆ.