ಚೆಲುವರಾಯಸ್ವಾಮಿ, ಅಂಬರೀಶ್, ಎಂ.ಶ್ರೀನಿವಾಸ್ ಮತ್ತು ದರ್ಶನ್‌ ಪುಟ್ಟಣ್ಣಯ್ಯ
GROUND REPORT

Election Tour: ಸಕ್ಕರೆ ನಾಡಲ್ಲಿ ತೆನೆ ಹೊರಲು ‘ಕೈ’ ಸಡಿಲ!  

ಮಂಡ್ಯದಲ್ಲಿ ಕೆಲವು ಶಾಸಕರು ತಕ್ಕಮಟ್ಟಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ವಿಶ್ವಾಸ ಉಳಿಸಿಕೊಂಡಿದ್ದರೆ, ಕೆಲವರು ಕೆಲಸ ಮಾಡದಿರುವುದೇ ಸಾಧನೆಯಾಗಿದೆ!

‘ಮಂಡ್ಯ ಎಂದರೆ ರಾಜಕೀಯ, ರಾಜಕೀಯ ಎಂದರೆ ಮಂಡ್ಯ’ ಎನ್ನುವಂತಿದ್ದ ಸಕ್ಕರೆ ನಾಡಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಹೆಚ್ಚು ಆಸಕ್ತಿ ಹುಟ್ಟಿಸಿಲ್ಲ. ಈ ಬಾರಿಯಾದರೂ ಹೊಸ ಮುಖಗಳು ಚುನಾವಣಾ ಅಖಾಡದಲ್ಲಿ ಕಾಣಿಸಿಕೊಳ್ಳಬಹುದು ಎಂದು ಎಣಿಸಿದ್ದ ಮಂಡ್ಯದ ಜನತೆಗೆ ಅವೇ ಹಳೆಯ ಮುಖಗಳು ಬೇಸರ ಮೂಡಿಸಿವೆ.

ಒಂದು ಕಡೆ ಅವೇ ಹಳೆಯ ಮುಖಗಳು ಚುನಾವಣಾ ಕಣದಲ್ಲಿರುವುದು, ಯಾವ ಪಕ್ಷದ ಅಭ್ಯರ್ಥಿ ಗೆದ್ದರೂ ಹೇಳಿಕೊಳ್ಳುವಂಥ ಕೆಲಸ ಮಾಡದೇ ಇರುವುದು ಮಂಡ್ಯದ ಜನ ರಾಜಕೀಯದ ಬಗ್ಗೆ ರೋಸಿ ಹೋಗುವಂತೆ ಮಾಡಿದೆ. ಇದರ ಪರಿಣಾಮವೇ ಈ ಬಾರಿ ಹೆಚ್ಚಿನ ಜನ ರಾಜಕೀಯದ ಬಗ್ಗೆ ನಿರಾಸಕ್ತಿ ವಹಿಸಿರುವುದು.

ಏಳು ವಿಧಾನಸಭಾ ಕ್ಷೇತ್ರಗಳಿರುವ ಮಂಡ್ಯ ಜಿಲ್ಲೆಯಲ್ಲಿ ನೇರ ಪೈಪೋಟಿ ಇರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ. ಜಿಲ್ಲೆಯಲ್ಲಿ ಈ ಹಿಂದೆ ಜೆಡಿಎಸ್‌ನಲ್ಲಿದ್ದ ಕೆಲವರು ಕಾಂಗ್ರೆಸ್‌ಗೆ ಕಾಂಗ್ರೆಸ್‌ನಲ್ಲಿದ್ದವರು ಜೆಡಿಎಸ್‌ಗೆ ಜಿಗಿದಿರುವುದರಿಂದ ಯಾರು ಯಾವ ಪಕ್ಷದಲ್ಲಿದ್ದಾರೆ ಎಂಬ ಗೊಂದಲವನ್ನೂ ಜನರಲ್ಲಿ ಹುಟ್ಟುಹಾಕಿದೆ. ಕೆಲವು ಶಾಸಕರು ತಕ್ಕ ಮಟ್ಟಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ವಿಶ್ವಾಸ ಉಳಿಸಿಕೊಂಡಿದ್ದರೆ, ಇನ್ನು ಕೆಲವರು ಕೆಲಸ ಮಾಡದಿರುವುದೇ ಸಾಧನೆಯಾಗಿದೆ!

‘ಬೇಕಿಲ್ಲದವರಿಗೆ ಕಾಂಗ್ರೆಸ್‌ ಟಿಕೆಟ್’

ಕಾಂಗ್ರೆಸ್‌ ಈ ಬಾರಿಯೂ ಅಂಬರೀಶ್ ಅವರಿಗೆ ಟಿಕೆಟ್‌ ಕೊಟ್ಟಿರುವುದಕ್ಕೆ ಮಂಡ್ಯದಲ್ಲಿ ಅನೇಕರಿಗೆ ಅಸಮಾಧಾನವಿದೆ. ಕೆಲಸವನ್ನೂ ಮಾಡದ, ಮಂಡ್ಯದಲ್ಲೂ ಇರದ, ಅಲ್ಲದೇ ಮುಖ್ಯವಾಗಿ ಜನಸೇವೆಯೇ ಬೇಕಿಲ್ಲದ ಅಂಬರೀಶ್‌ಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಿ ಬರುತ್ತಿವೆ.

“ಚುನಾವಣೆಗೆ ಸ್ಪರ್ಧಿಸಲು ಅಂಬರೀಶ್‌ ಅವರಿಗೆ ಆಸಕ್ತಿ ಇಲ್ಲ. ಆದರೂ ಕಾಂಗ್ರೆಸ್‌ ಅವರಿಗೆ ಟಿಕೆಟ್ ಘೋಷಿಸಿದೆ. ಅಂಬರೀಶ್‌ ಇಲ್ಲಿಂದ ಆಯ್ಕೆಯಾದರೂ ಹೆಚ್ಚು ಬೆಂಗಳೂರಿನಲ್ಲೇ ಇರುವವರು. ಮಂಡ್ಯದಲ್ಲಿ ಹೇಳಿಕೊಳ್ಳುವಂಥ ಯಾವ ಅಭಿವೃದ್ಧಿ ಕೆಲಸಗಳನ್ನೂ ಅಂಬರೀಶ್‌ ಮಾಡಿಲ್ಲ” ಎನ್ನುತ್ತಾರೆ ಮಂಡ್ಯದ ಪ್ರಸಾದ್.

“ಮಂಡ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಗರ ಬೆಳೆಯುತ್ತಿದೆ. ಆದರೆ, ಅದಕ್ಕೆ ಬೇಕಾದ ರೂಪುರೇಷೆಗಳೇ ಇಲ್ಲ. ಕಾವೇರಿ ಕೊಳ್ಳದಲ್ಲಿದ್ದರೂ ಮಂಡ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕಸ ವಿಲೇವಾರಿ, ಒಳಚರಂಡಿ ವ್ಯವಸ್ಥೆ, ರಸ್ತೆಗಳ ಸಮಸ್ಯೆ - ಹೀಗೆ ಅನೇಕ ಸಮಸ್ಯೆಗಳು ಮಂಡ್ಯದಲ್ಲಿ ಹೆಚ್ಚಾಗುತ್ತಿವೆ. ಈ ಸಮಸ್ಯೆಗಳನ್ನು ಗುರುತಿಸಿ ಮಂಡ್ಯ ನಗರದ ಅಭಿವೃದ್ಧಿಗೆ ದೂರಾಲೋಚನೆಯಿಂದ ಕೆಲಸ ಮಾಡುವ ಒಬ್ಬ ಜನಪ್ರತಿನಿಧಿಯೂ ಇಲ್ಲಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪ್ರಸಾದ್.

“2013ರ ಚುನಾವಣೆಯಲ್ಲೇ, ‘ಇದೇ ನನ್ನ ಕೊನೆಯ ಚುನಾವಣೆ, ಇದೊಂದು ಬಾರಿ ಗೆಲ್ಲಿಸಿ’ ಎಂದು ಗೋಗರೆದಿದ್ದ ಅಂಬರೀಶ್‌ ಈಗ ಯಾವ ಮುಖ ಹೊತ್ತು ಮತ ಕೇಳಲು ಬರುತ್ತಾರೋ ಗೊತ್ತಿಲ್ಲ. ಕೆಲಸವನ್ನೂ ಮಾಡದೆ, ಕ್ಷೇತ್ರದಲ್ಲೂ ಇರದೆ, ರಾಜಕೀಯವಾಗಿ ಸಕ್ರಿಯರಾಗಿಯೂ ಇಲ್ಲದಿರುವ ಅಂಬರೀಶ್‌ ಮತ್ತೆ ವಿಧಾನಸಭೆ ಚುನಾವಣೆಗೆ ನಿಲ್ಲುವುದು ಎಷ್ಟು ಸರಿ” ಎಂಬ ಪ್ರಶ್ನೆ ಸುಭಾಶ್‌ ನಗರದ ಚಿಕ್ಕಣ್ಣ ಅವರದ್ದು.

ಅಂಬರೀಶ್
ಅಂಬರೀಶ್

ಚೆಲುವರಾಯಸ್ವಾಮಿ ಬಗ್ಗೆ ಅಸಮಾಧಾನ?

ಈ ಹಿಂದೆ ಜೆಡಿಎಸ್‌ನಲ್ಲಿದ್ದ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವ ಬಗ್ಗೆ ಅಂಬರೀಶ್‌ ಅವರಿಗೆ ಅಸಮಾಧಾನವಿದೆ ಎಂಬ ಮಾತುಗಳು ಕೇಳಿ ಬಂದಿವೆ. ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರಿಗೆ ಮಣೆ ಹಾಕಲಾಗುತ್ತಿದೆ ಎಂಬ ಬಗ್ಗೆ ಅಂಬರೀಶ್‌ ಕಾಂಗ್ರೆಸ್‌ ನಾಯಕರ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಮಂಡ್ಯದಲ್ಲಿ ಅಂಬರೀಶ್ ರಾಜಕೀಯ ನಿರಾಸಕ್ತಿಯು ಚೆಲುವರಾಯಸ್ವಾಮಿ ಅವರಗೆ ವರವಾಗುವ ಸಾಧ್ಯತೆಯೇ ಹೆಚ್ಚಾಗಿದೆ. ‘ಮಂಡ್ಯ ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ಚೆಲುವರಾಯಸ್ವಾಮಿ ಪ್ರಭಾವ ಬೆಳೆಯುವುದನ್ನು ಅಂಬರೀಶ್‌ಗೆ ಸಹಿಸಲಾಗುತ್ತಿಲ್ಲ’ ಎನ್ನುತ್ತಾರೆ ಮಂಡ್ಯದ ಜನ.

ಹಳೇ ಮುಖಗಳಲ್ಲೇ ಆಯ್ಕೆಯ ಗೊಂದಲ!

ಮಂಡ್ಯದಲ್ಲಿ ಕಾಂಗ್ರೆಸ್‌ ಅಂಬರೀಶ್ ಅವರಿಗೆ ಟಿಕೆಟ್‌ ಘೋಷಿಸಿದ್ದರೆ ಜೆಡಿಎಸ್‌ ಕೂಡಾ ಹಳೆಯ ಮುಖ ಎಂ.ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಿದೆ. ಈ ಹಿಂದೆ ಎರಡು ಬಾರಿ ಜೆಡಿಎಸ್‌ನಿಂದಲೇ ಆಯ್ಕೆಯಾಗಿದ್ದ ಶ್ರೀನಿವಾಸ್‌ ಕೂಡಾ ‘ಏನೂ ಕೆಲಸ ಮಾಡಿಲ್ಲ’ ಎಂಬ ಹಣೆಪಟ್ಟಿ ಹೊತ್ತಿದ್ದಾರೆ.

ಆದರೂ, ಅಂಬರೀಶ್‌ ನಿರಾಸಕ್ತಿ ಹಾಗೂ ಜೆಡಿಎಸ್‌ನ ಕುಮಾರಸ್ವಾಮಿ ಪ್ರಭಾವ ಈ ಬಾರಿ ಶ್ರೀನಿವಾಸ್‌ಗೆ ಮತ ತಂದು ಕೊಡುವ ಸಾಧ್ಯತೆ ಹೆಚ್ಚಾಗಿದೆ.

ಕಾಂಗ್ರೆಸ್‌ನಿಂದ ಅಂಬರೀಶ್‌ಗೆ ಟಿಕೆಟ್‌ ಘೋಷಣೆಯಾದಾಗ ರವಿಕುಮಾರ್‌ ಗಣಿಗ ಬೆಂಬಲಿಗರು ಕಾಂಗ್ರೆಸ್‌ ಕಚೇರಿಯಲ್ಲಿ ಗದ್ದಲ ಎಬ್ಬಿಸಿದ್ದರು. ಆದರೆ, ‘ರವಿಕುಮಾರ್‌ ಕೂಡಾ ಏಕಾ ಏಕಿ ಉದ್ಭವಿಸಿದ ಸ್ವಯಂ ಘೋಷಿತ ಯುವ ನಾಯಕ’ ಎನ್ನುತ್ತಾರೆ ಮಂಡ್ಯದ ಜನ.

“ಹೊಸ ವರ್ಷ, ಯುಗಾದಿ, ರಾಜಕೀಯ ಮುಖಂಡರ ಹುಟ್ಟುಹಬ್ಬಗಳಿಗೆ ಶುಭಾಶಯ ಕೋರಿ ಬ್ಯಾನರ್‌ ಹಾಕಿಸಿಕೊಳ್ಳುವವರು ಈಗ ಸಮಾಜ ಸೇವಕ ಹಾಗೂ ಯುವ ಮುಖಂಡ ಎಂದು ಘೋಷಿಸಿಕೊಳ್ಳುತ್ತಿದ್ದಾರೆ. ಚುನಾವಣೆ ಬರುವವರೆಗೂ ರವಿಕುಮಾರ್‌ ಯಾರು ಎಂಬುದೇ ಗೊತ್ತಿರಲಿಲ್ಲ. ಈಗ ಏಕಾಏಕಿ ಸುದ್ದಿಯಾಗಿದ್ದಾರೆ. ರವಿಕುಮಾರ್‌ ಕೂಡಾ ಮಂಡ್ಯದಲ್ಲಿ ಗೆಲ್ಲುವ ವ್ಯಕ್ತಿಯಲ್ಲ” ಎಂಬುದು ಮಂಡ್ಯದ ನಿವಾಸಿಯೊಬ್ಬರ ಮಾತು.

ಇನ್ನು ‘ಐದು ರೂಪಾಯಿ ಡಾಕ್ಟರ್‌’ ಎಂದೇ ಮಂಡ್ಯದಲ್ಲಿ ಹೆಸರಾಗಿರುವ ಶಂಕರೇಗೌಡ ಅವರನ್ನು ಬಿಜೆಪಿಗೆ ಸೆಳೆದುಕೊಳ್ಳುವ ಪ್ರಯತ್ನಗಳು ನಡೆದಿವೆ ಎನ್ನಲಾಗಿದೆ. ಆದರೆ, ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಸೋಲು ಖಚಿತ ಎಂಬ ಮಾತುಗಳಿವೆ.

ಚೆಲುವರಾಯಸ್ವಾಮಿ ಪ್ರಚಾರ
ಚೆಲುವರಾಯಸ್ವಾಮಿ ಪ್ರಚಾರ

ನಾಗಮಂಗಲದಲ್ಲಿ ‘ಸ್ವಾಮಿ ಗೌಡ’ ಅಬ್ಬರ

ನಾಗಮಂಗಲದಲ್ಲಿ ‘ಸ್ವಾಮಿ ಗೌಡ’ ಎಂದೇ ಕರೆಸಿಕೊಳ್ಳುವ ಚೆಲುವರಾಯಸ್ವಾಮಿ ಅಬ್ಬರ ಹೆಚ್ಚಾಗಿದೆ. ಶುಕ್ರವಾರ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿರುವ ಚೆಲುವರಾಯಸ್ವಾಮಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ, ನಾಗಮಂಗಲದಲ್ಲಿ ಗೆಲುವಿಗಾಗಿ ಅವರು ಸಾಕಷ್ಟು ಹಣವನ್ನೂ ಖರ್ಚು ಮಾಡುತ್ತಿದ್ದಾರೆ ಎಂಬ ಮಾತುಗಳಿವೆ.

“ಜೆಡಿಎಸ್‌ನಿಂದ ಆರಿಸಿ ಬಂದಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಮಂಡ್ಯ ಜಿಲ್ಲೆಯಲ್ಲೇ ನಾಗಮಂಗಲ ಮಾದರಿ ತಾಲ್ಲೂಕು ಎನ್ನುವಂತೆ ಅಭಿವೃದ್ಧಿ ಪಡಿಸಿದ್ದಾರೆ. ಅವರು ಮಾಡಿರುವ ಕೆಲಸ ನೋಡಿದರೆ ಜನ ಅವರಿಗೆ ಮತ ನೀಡಬಹುದು. ಆದರೆ, ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿರುವುದು ಅವರಿಗೆ ಹೊಡೆತ ಕೊಡಬಹುದು” ಎಂಬುದು ದಿಡಗ ಗ್ರಾಮದ ಸೋಮೇಗೌಡ ಅವರ ಮಾತು.

“ಈ ಹಿಂದೆ ಜೆಡಿಎಸ್‌ನಿಂದಲೇ ಶಾಸಕರಾಗಿದ್ದ ಸುರೇಶ್‌ ಗೌಡ ಹೇಳಿಕೊಳ್ಳುವಂಥ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಆದರೂ ಜನ ಜೆಡಿಎಸ್‌ ಮುಖ ನೋಡಿಕೊಂಡು ಸುರೇಶ್‌ ಗೌಡರಿಗೆ ಮತ ನೀಡಬಹುದು. ಈ ಬಾರಿ ಇಲ್ಲಿ ಚೆಲುವರಾಯಸ್ವಾಮಿಗೆ ನಿಜವಾದ ಎದುರಾಳಿ ಸುರೇಶ್‌ ಗೌಡ ಅಲ್ಲ, ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ” ಎನ್ನುತ್ತಾರೆ ಅವರು.

ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ನ ಡಾ.ಕೆ. ಅನ್ನದಾನಿ ಪರವಾದ ಜನಾಭಿಪ್ರಾಯವಿದೆ. ಹಾಲಿ ಕಾಂಗ್ರೆಸ್‌ ಶಾಸಕ ನರೇಂದ್ರಸ್ವಾಮಿ ವರ್ಚಸ್ಸು ಕ್ಷೇತ್ರದಲ್ಲಿ ತಗ್ಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ಜೆಡಿಎಸ್‌ ಅಲೆ ಹೆಚ್ಚಾಗಿರುವುದರಿಂದ ಅನ್ನದಾನಿ ಅವರಿಗೂ ಒಂದು ಅವಕಾಶ ಕೊಡುವ ಆಲೋಚನೆಯಲ್ಲಿ ಕ್ಷೇತ್ರದ ಜನರಿದ್ದಾರೆ.

ಇನ್ನು ಮದ್ದೂರಿನಲ್ಲಿ ಕಾಂಗ್ರೆಸ್‌ನಿಂದ ಜಿ.ಎಂ. ಮಧು ಕಣದಲ್ಲಿದ್ದಾರೆ. ಆದರೆ, ಹಾಲಿ ಶಾಸಕ ಜೆಡಿಎಸ್‌ನ ಡಿ.ಸಿ. ತಮ್ಮಣ್ಣ ಬಗ್ಗೆ ಜನರ ಒಲವಿದೆ. ಮಾಡಿರುವ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ತಮ್ಮಣ್ಣ ಇಲ್ಲಿ ಮತ ಕೇಳುತ್ತಿದ್ದಾರೆ. ಜನಪ್ರಿಯತೆ ಹಾಗೂ ಜನರ ಕೈಗೆ ಸಿಗುತ್ತಾರೆ ಎಂಬ ಮಾತಿನ ಜತೆಗೆ ಜೆಡಿಎಸ್‌ ಪ್ರಭಾವ ಈ ಬಾರಿಯೂ ತಮ್ಮಣ್ಣ ಪಾಲಿಗೆ ವರವಾಗುವ ಸಾಧ್ಯತೆ ಇದೆ.

ಅತ್ತಿಂದಿತ್ತ ಇತ್ತಿಂದತ್ತ!

ಶ್ರೀರಂಗಪಟ್ಟಣದಲ್ಲಿ ರವೀಂದ್ರ ಶ್ರೀಕಂಠಯ್ಯ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ ಸೇರಿದರೆ, ರಮೇಶ್‌ ಬಂಡಿಸಿದ್ದೇಗೌಡ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದಿದ್ದಾರೆ. ಈ ಇಬ್ಬರಿಗೂ ಎರಡೂ ಪಕ್ಷಗಳು ಟಿಕೆಟ್‌ ಘೋಷಿಸಿವೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗಿನ ಒಲವೇ ರಮೇಶ್‌ ಬಂಡಿಸಿದ್ದೇಗೌಡರನ್ನು ಈ ಬಾರಿಯೂ ಗೆಲ್ಲಿಸಬಹುದು.

ದರ್ಶನ್‌ - ಪುಟ್ಟಣ್ಣಯ್ಯ, 
ದರ್ಶನ್‌ - ಪುಟ್ಟಣ್ಣಯ್ಯ, 

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಜೆಡಿಎಸ್‌ನ ಸಿ.ಎಸ್‌. ಪುಟ್ಟರಾಜು ಮತ್ತು ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿ ರೈತ ಸಂಘದ ಪುಟ್ಟಣ್ಣಯ್ಯ ಪುತ್ರ ದರ್ಶನ್‌ ನಡುವೆ ಪೈಪೋಟಿ ಇದೆ. ಪುಟ್ಟರಾಜು ಗೆಲುವಿಗಾಗಿ ತಳಮಟ್ಟದ ಪ್ರಚಾರ ನಡೆಸಿದ್ದರೆ ದರ್ಶನ್‌ ತಂದೆ ಸಾವಿನ ಅನುಕಂಪ ಹಾಗೂ ಯುವ ನಾಯಕ ಎಂಬ ಅಂಶಗಳು ಗೆಲುವು ತಂದು ಕೊಡಬಹುದೆಂಬ ಲೆಕ್ಕಾಚಾರದಲ್ಲಿ ಇದ್ದಾರೆ.

ಪುಟ್ಟಣ್ಣಯ್ಯ ರೈತ ಹೋರಾಟ, ವಿಧಾನಸಭೆಯ ಭಾಷಣ ಏನೇ ಇದ್ದರೂ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಕೊಡಲಿಲ್ಲ ಎಂಬ ಅಪವಾದವಿದೆ. ಪುಟ್ಟಣ್ಣಯ್ಯ ಸಾವಿನ ನಂತರವೂ ಉಳಿದುಕೊಂಡಿರುವ ಈ ಅಪವಾದ ದರ್ಶನ್‌ಗೆ ಹೊಡೆತ ಕೊಡಬಹುದು.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಹಾಲಿ ಶಾಸಕ ನಾರಾಯಣಗೌಡ ಅವರಿಗೆ ಜೆಡಿಎಸ್ ಟಿಕೆಟ್‌ ಘೋಷಿಸಿದೆ. ಇಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎದುರಾಳಿಗಳಾಗಿವೆ. ಕಾಂಗ್ರೆಸ್‌ನಿಂದ ಕೆ.ಬಿ.ಚಂದ್ರಶೇಖರ್‌ ಅವರಿಗೆ ಟಿಕೆಟ್‌ ಘೋಷಣೆಯಾಗಿದೆ. ಇಲ್ಲೂ ಜಿಡಿಎಸ್‌- ಕಾಂಗ್ರೆಸ್‌ ನಡುವೇ ಜಿದ್ದಾಜಿದ್ದಿ.

ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದುಕೊಂಡಿರುವ ಜೆಡಿಎಸ್ ಈ ಬಾರಿ ಮಂಡ್ಯದಲ್ಲಿ ಆದಷ್ಟೂ ಹೆಚ್ಚಿನ ಕ್ಷೇತ್ರಗಳನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದೆ. ಮತ್ತೊಂದು ಕಡೆ ಮಂಡ್ಯ ಕ್ಷೇತ್ರದಲ್ಲೇ ಕಾಂಗ್ರೆಸ್‌ ಡೋಲಾಯಮಾನ ಸ್ಥಿತಿಯಲ್ಲಿರುವುದು ಜನರಲ್ಲಿ ಕಾಂಗ್ರೆಸ್‌ ಬಗ್ಗೆ ಗೊಂದಲ ಮೂಡುವಂತೆ ಮಾಡಿದೆ. ಜೆಡಿಎಸ್‌- ಕಾಂಗ್ರೆಸ್‌ ನಡುವಿನ ಅಬ್ಬರದ ಪೈಪೋಟಿಯಲ್ಲಿ ಬಿಜೆಪಿಯ ಸದ್ದೇ ಮಂಡ್ಯದಲ್ಲಿಲ್ಲ.

Also read: Election Tour : ಮಾಜಿ ಸಿಎಂ ತವರಲ್ಲಿ ‘ಜಾತ್ಯತೀತ’ ಪಕ್ಷಕ್ಕೆ ಜಾತಿಯೇ ಬಲ!