samachara
www.samachara.com
ELECTION TOUR: ‘ಅದೇ ನೋಟು, ಅದೇ ಓಟು’: ತೀರ್ಥಹಳ್ಳಿಯ ರಾಜಕಾರಣವನ್ನು ಕೂತೇ ಮಾತನಾಡಬೇಕು! 
GROUND REPORT

ELECTION TOUR: ‘ಅದೇ ನೋಟು, ಅದೇ ಓಟು’: ತೀರ್ಥಹಳ್ಳಿಯ ರಾಜಕಾರಣವನ್ನು ಕೂತೇ ಮಾತನಾಡಬೇಕು! 

ಮಲೆನಾಡಿನ ಸೆರಗಿನಲ್ಲಿರುವ ತೀರ್ಥಹಳ್ಳಿ ರಾಜ್ಯ ರಾಜಕಾರಣದಲ್ಲಿ ಸದಾ ನೆನಪಿರುವ ವಿಧಾನ ಸಭಾ ಕ್ಷೇತ್ರ. ಅಂತಹದೊಂದು ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಕಾಲದ ಚುನಾವಣೆ ಸ್ವರೂಪ ಹೇಗಿದೆ? ಗ್ರೌಂಡ್ ರಿಪೋರ್ಟ್‌ ಇಲ್ಲಿದೆ.

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

‘ಕರ್ನಾಟಕದಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವಿಶಿಷ್ಠ ಹೆಸರು ಗಳಿಸಿಕೊಂಡಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಕವಿಗಳು, ರಾಜಕಾರಣಿಗಳು, ಸಹಕಾರಿ ದಿಗ್ಗಜರೂ ಸಮಾಜದ ಅನನ್ಯ (?) ಕ್ಷೇತ್ರಗಳಲ್ಲಿ ತೀರ್ಥಹಳ್ಳಿಯ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ’ ಹೀಗಂತ ಶುರುವಾಗುತ್ತದೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರ ಪ್ರಣಾಳಿಕೆ.

ನಂದಿತ ಪ್ರಕರಣವನ್ನು ಬಳಸಿಕೊಂಡು ಕೋಮು ರಾಜಕಾರಣವನ್ನು ಬಳಸಿಕೊಳ್ಳಲು ಮುಂದಾಗುವ ಮೂಲಕ ಜ್ಞಾನೇಂದ್ರ ತಾವೊಬ್ಬ ಅಪ್ಪಟ ಹಿಂದೂ ಎಂದು ತೋರಿಸಿಕೊಳ್ಳಲು ಹೊರಟವರು. ಅವರ ಪಕ್ಷ ಹಾಗೂ ಸಿದ್ಧಾಂತ ಸಾಹಿತಿ- ಬುದ್ಧಿಜೀವಿಗಳನ್ನು ಸಮಾಜದ ಕಂಟಕಗಳು ಎಂದು ನೋಡುತ್ತಿದೆ. ಅಂತಹ ಸಮಯದಲ್ಲಿ ತೀರ್ಥಹಳ್ಳಿಯಲ್ಲಿ ಚುನಾವಣೆಗೆ ನಿಲ್ಲಲು ಹೊರಟಾಗ ಅವರು ತಮ್ಮ ಪ್ರಣಾಳಿಕೆಯನ್ನು ಬುದ್ಧಿಜೀವಿಗಳಿಂದಲೇ ಆರಂಭಿಸುತ್ತಾರೆ. ಕಾರಣ ಇಷ್ಟೆ, ಸ್ವಾತಂತ್ರ್ಯ ನಂತರ ದೇಶದ ಯಾವುದೇ ತಾಲೂಕಿನಲ್ಲಿ ನಡೆಯದಷ್ಟು ರಾಜಕೀಯದ ಪರ್ಯಾಯದ ಹುಟುಕಾಟ ಇಲ್ಲಿ ನಡೆದಿದೆ. ಅದಕ್ಕೊಂದು ಪರಂಪರೆಯನ್ನು ಇಲ್ಲಿ ಕಟ್ಟಿಕೊಂಡು ಬದಲಾಗುತ್ತಿದೆ.

ಇವತ್ತಿನ ‘ಕ್ರೌಡ್ ಫಂಡಿಂಗ್’ ತರಹದ, ಜನರೇ ಅಭ್ಯರ್ಥಿಯ ಆರ್ಥಿಕ ಹೊಣೆಗಾರಿಕೆ ಹೊತ್ತುಕೊಳ್ಳುವ ಪ್ರಕ್ರಿಯೆಯನ್ನು ಮೊದಲ ಬಾರಿಗೆ ಪ್ರಯೋಗಕ್ಕೆ ಒಳಪಡಿಸಿದ ಕ್ಷೇತ್ರ ಇದು. ಶಾಂತವೇರಿ ಗೋಪಾಲಗೌಡರು ಒಕ್ಕಲಿಗರೇ ಆದರೂ ಗೇಣಿದಾರರ ಪರವಾಗಿ ನಿಲ್ಲುವ ಜಾತಿ ಮೀರಿದ ಜನನಾಯಕ ಎನ್ನಿಸಿಕೊಂಡವರು. ಬರಿಗೈ ರಾಜಕಾರಣಿ. ಅವರು ಒಮ್ಮೆ ಸೋತು ಮತ್ತೆ ಚುನಾವಣೆಗೆ ನಿಂತಾಗ ಜನರೇ ಓಟು, ನೋಟು ಎರಡನ್ನೂ ಕೊಟ್ಟು ಕಾಂಗ್ರೆಸ್ ವಿರುದ್ಧ ಗೆಲ್ಲಿಸಿ ಕಳುಹಿಸುವಷ್ಟು ಪ್ರಜ್ಞಾವಂತಿಕೆಯನ್ನು ತೋರಿಸಿದ್ದುರು, ಅದೂ ಐದು ದಶಕಗಳ ಹಿಂದೆಯೇ.

ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ

ಅದರ ಪರಿಣಾಮ ಇವತ್ತಿಗೂ ಇಲ್ಲಿ ಕಾಣಿಸುತ್ತಿದೆ. ಬಿಜೆಪಿ ಅಥವಾ ಇನ್ಯಾವುದೇ ಪಕ್ಷವಾದರೂ, ಇಲ್ಲಿ ಚುನಾವಣೆಗೆ ನೆಪದಲ್ಲಿ ಜನರ ಎದುರಿಗೆ ಬರುವಾಗ ಬುದ್ಧಿಜೀವಿಗಳನ್ನು ನೆನಪುಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಉದಾಹರಣೆಗೆ ಬಿಜೆಪಿಯ ಹೊಸ ಪ್ರಣಾಳಿಕೆ.

ನೀರಸ ಪ್ರಣಾಳಿಕೆಗಳು:

ಪ್ರಣಾಳಿಕೆಗಳು ರಾಜ್ಯಮಟ್ಟದಲ್ಲಿಯೇ ನೀರಸ ಪ್ರತಿಕ್ರಿಯೆಗೆ ಒಳಗಾಗಿವೆ. ಯಾರಿಗೂ ಪ್ರಣಾಳಿಕೆಗಳು ಮುಖ್ಯವಲ್ಲದಿದ್ದರೂ, ಸಂಪ್ರದಾಯದಂತೆ ಒಂದಷ್ಟು ಭರವಸೆಗಳನ್ನು ನೀಡಲಾಗುತ್ತಿದೆ. ತೀರ್ಥಹಳ್ಳಿಗೆ ಮಾಜಿ ಶಾಸಕ ಆರಗ ಜ್ಞಾನೇಂದ್ರ ಕೊಟ್ಟ ಪ್ರಣಾಳಿಕೆ ನೋಡಿದರೆ ನಗು ಬರುವಂತಿದೆ. ಕೃಷಿ ಮತ್ತು ತೋಟಗಾರಿಕೆ ಹೆಸರಿನಲ್ಲಿ 10 ಭರವಸೆಗಳು, ಕೆರೆ, ನದಿ ಮತ್ತು ಅಂತರ್ಜಲ ಅಭಿವೃದ್ಧಿ ಅಡಿಯಲ್ಲಿ ಮೂರು ಭರವಸೆಗಳು, ಶಿಕ್ಷಣದ ಅಡಿಯಲ್ಲಿ ಒಂದು ಭರವಸೆ, ಆರೋಗ್ಯದ ಅಡಿಯಲ್ಲಿ ಮೂರು ಭರವಸೆಗಳು, ಕುಡಿಯುವ ನೀರಿನ ವಿಭಾಗದಲ್ಲಿ ಒಂದು ಭರವಸೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ, ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ, ಕ್ರೀಡೆಗಳು ಸೇರಿ ಒಟ್ಟು 12 ಭರವಸೆಗಳನ್ನು ನೀಡಿದ್ದಾರೆ. ಕೊನೆಯದಾಗಿ ಸಾಮಾಜಿಕ ಎಂಬ ವಿಭಾಗದಲ್ಲಿ 8 ಭರವಸೆಗಳಿದ್ದೂ, ಸ್ಪಷ್ಟತೆ ಕಾಣಿಸುವುದಿಲ್ಲ.

ಚುನಾವಣಾ ಪ್ರಣಾಳಿಕೆ
ಚುನಾವಣಾ ಪ್ರಣಾಳಿಕೆ

ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಾಳೆಯದಲ್ಲೂ ಇದೆ. ಹೆಸರಿಗೆ ಮಾದರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆ, ಹಣಾಹಣಿಗೆ ಇಳಿದಾಗ ಯಾವ ಮಟ್ಟಕ್ಕೆ ಹೋದರೂ ಸರಿಯೇ ಗೆಲ್ಲಲೇಬೇಕು ಎಂಬ ಛಲ ಕಾಣಿಸುತ್ತಿದೆಯೇ ಹೊರತು, ಕ್ಷೇತ್ರದ ಕುರಿತು ಮುಂದಾಲೋಚನೆಗಳು ಕಾಣಿಸುತ್ತಿಲ್ಲ.

“ತೀರ್ಥಹಳ್ಳಿಯ ಪ್ರಜ್ಞಾವಂತ ಮತದಾರರನ್ನು ಹಾದಿ ತಪ್ಪಿಸಿದ ಸಂಪೂರ್ಣ ಶ್ರೇಯಸ್ಸು ಡಿ. ಬಿ. ಚಂದ್ರೇಗೌಡರಿಗೆ ಸಲ್ಲುತ್ತದೆ. ಸ್ವೀಲ್ ಪಾತ್ರೆ, ಬಟ್ಟೆಯಿಂದ ಹಿಡಿದು ಚುನಾವಣೆ ಸಮಯದಲ್ಲಿ ಹಣ ಹಂಚುವ ಪ್ರತೀತಿಗೆ ಇಲ್ಲಿ ಚಾಲನೆ ಕೊಟ್ಟವರು ಡಿಬಿಸಿ. ಅದೇ ಜನತಾ ಪರಿವಾರದ ಅವನತಿಯ ಆರಂಭದ ದಿನಗಳು,’’ ಎನ್ನುತ್ತಾರೆ ತಾಲೂಕಿನ ಹಿರಿಯ ರೈತ ಹೋರಾಟಗಾರರೊಬ್ಬರು.

 ಡಿ. ಬಿ. ಚಂದ್ರೇಗೌಡ
ಡಿ. ಬಿ. ಚಂದ್ರೇಗೌಡ

ಪಕ್ಕದ ತಾಲೂಕಿನ ಡಿ. ಬಿ. ಚಂದ್ರೇಗೌಡರಿಗೆ ತೀರ್ಥಹಳ್ಳಿಯಲ್ಲಿ ಆಭ್ಯರ್ಥಿಯಾಗುವ ಅವಕಾಶ ಕೇವಲ ಅವರು ಒಕ್ಕಲಿಗರು ಎಂಬ ಕಾರಣಕ್ಕೆ ಮಾತ್ರ ಅಲ್ಲ. ಡಿಬಿಸಿ ಅವರ ಸಮಾಜವಾದಿ ಹಿನ್ನೆಲೆಯ ರಾಜಕಾರಣವೂ ನೆರವಿಗೆ ಬಂದಿತ್ತು. ಮುಂದೆ ಬಿಜೆಪಿಯಲ್ಲಿ ಅಂತ್ಯವಾದ ಡಿಬಿಸಿ ಕೆಲವು ವರ್ಷಗಳಿಂದ ಬಹಿರಂಗವಾಗಿ ಕಾಣಿಸುತ್ತಿಲ್ಲ. ಅವರು ಪಾರ್ಕಿನ್ಸನ್‌ ಎಂಬ ಕಾಯಿಲೆಗೆ ತುತ್ತಾಗಿದ್ದಾರೆ.

ಡಿಬಿಸಿ ನಂತರ ತೀರ್ಥಹಳ್ಳಿ ರಾಜಕಾರಣ ಹೊರಳಿಕೊಂಡಿದ್ದು ನಗರ ಕೇಂದ್ರಿತ ಬಿಜೆಪಿ ಪಕ್ಷದೆಡೆಗೆ. ನಿಧಾನವಾಗಿ ಹಳ್ಳಿಯ ಮಟ್ಟಕ್ಕೆ ಇಳಿಯಲು ಶುರುವಾದ ಬಿಜೆಪಿಗೆ ತಾಲೂಕಿನಲ್ಲಿ ಜನ ಮನ್ನಣೆ ನೀಡಿದರು. ಪಕ್ಕದ ಕರಾವಳಿಯಲ್ಲೇ ಕೋಮು ಗಲಭೆಯಾದರೂ, ತೀರ್ಥಹಳ್ಳಿ ಮಾತ್ರ ಶಾಂತವಾಗಿರುತ್ತಿತ್ತು. ನಂದಿತಾ ಪ್ರಕರಣವೊಂದು ತಾಲೂಕಿಗೆ ಕಪ್ಪು ಚುಕ್ಕೆ.