ಡಿ.ಕೆ.ಶಿವಕುಮಾರ್
GROUND REPORT

Election Tour: ಇದು ಕರ್ನಾಟಕ ಕ್ಯಾಬಿನೆಟ್‌ನ ‘ಪವರ್‌ ಮಿನಿಸ್ಟರ್‌’ ಚುನಾವಣಾ ಸಿದ್ಧತೆ!

ಕನಕಪುರ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ ಎಂಬ ಗಟ್ಟಿ ನಂಬಿಕೆಯಲ್ಲಿರುವ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಕ್ಷೇತ್ರದಲ್ಲಿ ಪ್ರಚಾರದ ಕಡೆಗೆ ತಲೆ ಕೆಡಿಸಿಕೊಂಡಂತಿಲ್ಲ. ಕನಕಪುರದಲ್ಲಿ ಚುನಾವಣಾ ಪ್ರಚಾರದ ಗುರುತೂ ಕಾಣುವುದಿಲ್ಲ.

ರಾಜಕಾರಣಿಗಳು ಒಮ್ಮೆ ತಮ್ಮ ಕ್ಷೇತ್ರಗಳಲ್ಲಿ ರಾಜಕೀಯ ಕೋಟೆ ಕಟ್ಟಿಕೊಂಡರೆ ಮುಂದೆ ಹೇಗೆ ಚುನಾವಣೆ ಸಂದರ್ಭದಲ್ಲಿ ಆರಾಮಾಗಿರಬಹುದು ಎಂಬುದಕ್ಕೆ ರಾಮನಗರ ಜಿಲ್ಲೆ ಒಂದು ಉತ್ತಮ ಉದಾಹರಣೆಯಂತಿದೆ.

ಒಂದು ಕಡೆ ಕನಕಪುರದಲ್ಲಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಮತಗಳ ಭದ್ರಕೋಟೆ ಕಟ್ಟಿಕೊಂಡಿದ್ದರೆ, ಮತ್ತೊಂದು ಕಡೆ ತಮ್ಮ ಕ್ಷೇತ್ರ ರಾಮನಗರದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ರಾಜಕೀಯ ಕೋಟೆಯನ್ನು ಭದ್ರಪಡಿಸಿಕೊಂಡಿದ್ದಾರೆ. ಇನ್ನು ಪಕ್ಷ ಬದಲಿಸಿದ್ದರೂ ಮಾಗಡಿ ಮತ್ತು ಚನ್ನಪಟ್ಟಣದಲ್ಲೂ ಈ ಹಿಂದೆ ಗೆದ್ದಿದ್ದ ಶಾಸಕರೇ ಮರು ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.

ಕಳೆದ ಬಾರಿ ಜೆಡಿಎಸ್‌ನಿಂದ ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌.ಸಿ. ಬಾಲಕೃಷ್ಣ ಈಗ ಕಾಂಗ್ರೆಸ್‌ ಸೇರಿದ್ದಾರೆ. 2008ರಲ್ಲಿ ಚನ್ನಪಟ್ಟಣದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದ ಸಿ.ಪಿ. ಯೋಗೇಶ್ವರ್ 2013ರಲ್ಲಿ ಸಮಾಜವಾದಿ ಪಕ್ಷದಿಂದ ಗೆದ್ದಿದ್ದರು. ಈ ಬಾರಿ ಯೋಗೇಶ್ವರ್‌ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

2008ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್‌ ಮತ್ತು ಎರಡರಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದ್ದವು. ರಾಮನಗರದಲ್ಲಿ ಎಚ್.ಡಿ. ಕುಮಾರಸ್ವಾಮಿ, ಮಾಗಡಿಯಲ್ಲಿ ಎಚ್.ಸಿ. ಬಾಲಕೃಷ್ಣ, ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಗೆಲುವು ಕಂಡಿದ್ದರು.

ಹತ್ತು ವರ್ಷ ಕಳೆದರೂ ಜಿಲ್ಲೆಯಲ್ಲಿ ಈ ಗೆಲ್ಲುವ ಕುದುರೆಗಳೇ ಇನ್ನೂ ಓಟದಲ್ಲಿವೆ ಎಂಬುದು ಗಮನಾರ್ಹ. ಬಾಲಕೃಷ್ಣ ಮತ್ತು ಯೋಗೇಶ್ವರ್‌ ಪಕ್ಷ ಬದಲಿಸಿದ್ದರೂ ‘ಗೆಲುವು ನಮ್ಮದೇ’ ಎಂಬ ಉಮೇದಿನಲ್ಲಿದ್ದಾರೆ. ಪಕ್ಷಕ್ಕಿಂತ ವ್ಯಕ್ತಿ ಪ್ರಭಾವ ಹೆಚ್ಚಾಗುತ್ತಿರುವ ರಾಜಕೀಯ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಲ್ಲಿ ಈ ಹಿಂದೆ ಗೆದ್ದವರೇ ಮತ್ತೆ ಆಯ್ಕೆಯಾಗುವ ಖಚಿತ ವಿಶ್ವಾಸದಲ್ಲಿದ್ದಾರೆ.

ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಕಾಣದ ಪ್ರಚಾರದ ಅಬ್ಬರ

ಕನಕಪುರ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ ಎಂಬ ಗಟ್ಟಿ ನಂಬಿಕೆಯಲ್ಲಿರುವ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ಕ್ಷೇತ್ರದಲ್ಲಿ ಪ್ರಚಾರದ ಕಡೆಗೆ ತಲೆಕೆಡಿಸಿಕೊಂಡಂತಿಲ್ಲ. ಕನಕಪುರದಲ್ಲಿ ಚುನಾವಣಾ ಪ್ರಚಾರದ ಗುರುತೂ ಕಾಣುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ ಇನ್ನೂ ಇಲ್ಲಿ ತಮ್ಮ ಅಭ್ಯರ್ಥಿಗಳನ್ನೇ ಘೋಷಿಸಿಲ್ಲ.

ಡಿ.ಕೆ. ಶಿವಕುಮಾರ್ ಪರ ಅವರ ಸೋದರ ಡಿ.ಕೆ. ಸುರೇಶ್‌ ಪ್ರಚಾರ ನಡೆಸುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಜನ. ಆದರೆ, ಡಿ.ಕೆ. ಸುರೇಶ್‌ ಕೂಡಾ ಅಬ್ಬರದ ಪ್ರಚಾರವನ್ನೇನೂ ನಡೆಸುತ್ತಿಲ್ಲ. ಗೆಲುವು ಖಚಿತ ಎಂದುಕೊಂಡಿರುವ ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ತಮಗೆ ನೀಡಿರುವ ರಾಜ್ಯ ಚುನಾವಣಾ ಪ್ರಚಾರದ ಉಸ್ತುವಾರಿಯ ಕಡೆಗೆ ಹೆಚ್ಚು ಗಮನ ವಹಿಸಿದ್ದಾರೆ ಎನ್ನುವ ಮಾತುಗಳಿವೆ.

25ನೇ ವಯಸ್ಸಿನಲ್ಲೇ 1985ರ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರ ಎದುರು ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಡಿ.ಕೆ. ಶಿವಕುಮಾರ್, 1989ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಾತನೂರು ಕ್ಷೇತ್ರದಿಂದಲೇ ವಿಧಾನಸಭೆಗೆ ಆಯ್ಕೆಯಾದರು. ಸುಮಾರು ಮೂರು ದಶಕಗಳಿಂದ ಡಿ.ಕೆ. ಶಿವಕುಮಾರ್‌ ಸಾತನೂರು- ಕನಕಪುರ ಭಾಗಗಳಲ್ಲಿ ತಮ್ಮ ಹಿಡಿತ ಸಾಧಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಐದು ವರ್ಷಗಳಲ್ಲಿ ಕನಕಪುರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದಿದ್ದಾರೆ, ಕ್ಷೇತ್ರ ಅಭಿವೃದ್ಧಿ ಕಡೆಗೂ ಹೆಚ್ಚಿನ ಗಮನ ವಹಿಸಿದ್ದಾರೆ ಎನ್ನುವ ಮಾತುಗಳು ಕನಕಪುರದಲ್ಲಿ ಕೇಳಿ ಬರುತ್ತವೆ. ಕನಕಪುರದ ಹಲವು ಕೆರೆಗಳಲ್ಲಿ ನೀರು ತುಂಬಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಕನಕಪುರ ಸುತ್ತಮುತ್ತಲ ಹಳ್ಳಿಗಳಲ್ಲಿ ಬೇಸಿಗೆಯಲ್ಲೂ ಮೇವು, ಜೋಳ, ಹಿಪ್ಪುನೇರಳೆ ಗಿಡಗಳು ಸಮೃದ್ಧವಾಗಿವೆ.

ಅಕ್ರಮ ಗಣಿಗಾರಿಕೆಗೆ ಕಡಿವಾಣವಿಲ್ಲ

ಕನಕಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಮರಳುಗಾರಿಕೆಗೆ ಕಡಿವಾಣ ಬಿದ್ದಿಲ್ಲ ಹಾಗೂ ಡಿ.ಕೆ. ಶಿವಕುಮಾರ್ ಆಪ್ತರಿಗೆ ಮಾತ್ರ ಗುತ್ತಿಗೆ ನೀಡಿರುವ ಆರೋಪಗಳೂ ಇವೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಡಿ.ಕೆ. ಶಿವಕುಮಾರ್‌ ಮನೆ ಮೇಲೆ ಐಟಿ ದಾಳಿಯೂ ನಡೆದಿತ್ತು. ಆದರೆ, ಕನಕಪುರದಲ್ಲಿ ಈ ಅಂಶಗಳು ಡಿ.ಕೆ. ಶಿವಕುಮಾರ್ ಗೆಲುವಿನ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ.

ಅಕ್ರಮಗಳು, ಆರೋಪಗಳು ಏನೇ ಇದ್ದರೂ ಡಿ.ಕೆ. ಶಿವಕುಮಾರ್‌ ಕೆಲಸ ಮಾಡಿದ್ದಾರೆ ಎಂದೇ ಕ್ಷೇತ್ರದ ಜನ ಮಾತನಾಡುತ್ತಾರೆ. ಯಾರು ಬಂದರೂ ಅಕ್ರಮಗಳು ಇದ್ದೇ ಇರುತ್ತವೆ, ಅದರ ಜತೆಗೆ ಒಂದಿಷ್ಟು ಕೆಲಸ ಮಾಡುವುದೂ ಮುಖ್ಯ ಎಂಬುದು ಜನರ ಮಾತು.

“ಯಾರು ಆರಿಸಿ ಬಂದರೂ ಮಾಡುವ ಕೆಲಸ ಮುಖ್ಯ ಅಷ್ಟೇ. ಆದರೆ, ಡಿ.ಕೆ. ಶಿವಕುಮಾರ್ ಕನಕಪುರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ನಿಂತು ಗೆಲ್ಲುವವರು ಸದ್ಯ ಬೇರೆ ಪಕ್ಷಗಳಲ್ಲಿ ಯಾರೂ ಇಲ್ಲ. ಹೀಗಾಗಿ ಹೆಚ್ಚಿನ ಜನ ಅವರಿಗೇ ಮತ ಹಾಕುತ್ತಾರೆ” ಎನ್ನುತ್ತಾರೆ ತಾಮಸಂದ್ರ ಗ್ರಾಮದ ರಾಜಣ್ಣ.

ಬೇರೆ ಆಯ್ಕೆಯೇ ಇಲ್ಲ?

ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್‌ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಹೀಗಾಗಿಯೇ ಅವರು ತಮ್ಮ ಕ್ಷೇತ್ರಕ್ಕಿಂತ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲಿಸುವ ಪ್ರಚಾರದ ಹೊಣೆ ಹೊತ್ತು ಚುನಾವಣೆಯ ಸಂದರ್ಭದಲ್ಲೂ ಬಹುತೇಕ ಕ್ಷೇತ್ರದಿಂದ ಹೊರಗೆ ಇದ್ದಾರೆ. ಕನಕಪುರ ಕ್ಷೇತ್ರದ ಜನತೆಗೂ ಡಿ.ಕೆ. ಶಿವಕುಮಾರ್ ಬಿಟ್ಟು ಬೇರೆ ಆಯ್ಕೆಗಳು ಕಾಣುತ್ತಿಲ್ಲ.

ಜೆಡಿಎಸ್‌ನಿಂದ ಬಿಜೆಪಿಗೆ ಬಂದಿರುವ ನಂದಿನಿ ಗೌಡ ಬಿಟ್ಟರೆ ಕ್ಷೇತ್ರದಲ್ಲಿ ಚುನಾವಣೆಯ ವಿಷಯ ಬಂದಾಗ ಬೇರೆ ಹೆಸರುಗಳೇ ಕೇಳುತ್ತಿಲ್ಲ. ಹಿಂದೆ ಕನಕಪುರದಿಂದ ಗೆದ್ದಿದ್ದ ಶಾಸಕರ ಹೆಸರುಗಳೇ ಈಗ ಇಲ್ಲಿನ ಜನಕ್ಕೆ ನೆನಪಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ಡಿ.ಕೆ. ಶಿವಕುಮಾರ್‌ ರಾಜಕೀಯ ಪ್ರಭಾವ ಇಲ್ಲಿ ಕೆಲಸ ಮಾಡಿದೆ. ಚುನಾವಣಾ ವ್ಯವಸ್ಥೆಯನ್ನೇ ಮಂಕು ಮಾಡುವ ಇಂತಹ ವ್ಯಕ್ತಿ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಕೊಡುವ ಪೆಟ್ಟು ಎಂಥದ್ದು ಎಂಬುದನ್ನು ಬೇರೆ ಹೇಳಬೇಕಿಲ್ಲ.

ಕನಕಪುರದಲ್ಲಿ ಒಂದು ಕಡೆ ಗೆಲುವು ನಮದೇ ಎಂದುಕೊಂಡಿರುವ ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಪ್ರಚಾರದ ಬಗ್ಗೆ ಹೆಚ್ಚು ಗಮನಕೊಟ್ಟಿಲ್ಲ. ಮತ್ತೊಂದು ಕಡೆ ಈ ಕ್ಷೇತ್ರದಲ್ಲಿ ಪೈಪೋಟಿ ಕೊಡಲಾದರೂ ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ಬಿಜೆಪಿ ಮತ್ತು ಜೆಡಿಎಸ್‌ ಇನ್ನೂ ನಿರ್ಧರಿಸಿಲ್ಲ. ಉಳಿದ ಪಕ್ಷಗಳ ಈ ನಡೆ ಕ್ಷೇತ್ರದ ಜನರ ಆಯ್ಕೆಯ ಅಧಿಕಾರಕ್ಕೇ ಕಡಿವಾಣ ಹಾಕುವಂತೆ ಮಾಡಿರುವುದು ದುರಂತ.