samachara
www.samachara.com
ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ
GROUND REPORT

ELECTION TOUR: ಕಾಗೋಡು ಹೋರಾಟದ ಉತ್ತರಾಧಿಕಾರಿಯ ಹುಡುಕಾಟದಲ್ಲಿ ಎದುರಿಗೆ ಸಿಕ್ಕ ಗೋಪಾಲಕೃಷ್ಣ ಬೆವರೊರೆಸಿಕೊಂಡು, ಕಣ್ಣೀರಿಟ್ಟರು!

ಒಂದಾನೊಂದು ಕಾಲದಲ್ಲಿ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಿದವರು ಈಡಿಗರು. ಕಾಗೋಡು ಗೇಣಿದಾರರ ಹೋರಾಟ ಪರಂಪರೆಯ ಸಮುದಾಯ ಇದು. ಚುನಾವಣೆ ಸಮಯದಲ್ಲಿ ಹೊಸ ನಾಯಕನನ್ನು ಹುಡುಕುತ್ತಿದೆ.

ಪ್ರಶಾಂತ್ ಹುಲ್ಕೋಡು

ಪ್ರಶಾಂತ್ ಹುಲ್ಕೋಡು

ಸಾಗರದಿಂದ ಶಿವಮೊಗ್ಗ ಹೋಗುವ ಹಾದಿಯಲ್ಲಿ ಸಿಗುವ ಐಬಿ ಎದುರಿಗೆ ಬಲಕ್ಕೆ ಹೊರಳಿದರೆ ರಾಘವೇಶ್ವರ ಸ್ವಾಮಿ ಸಭಾ ಭವನ ಕಾಣಿಸುತ್ತದೆ. ಒಳಕ್ಕೆ ಕಾಲಿಟ್ಟರೆ ರಾಘವೇಶ್ವರ ಭಾರತಿ ಸ್ವಾಮಿ ಹಸುವನ್ನು ತಬ್ಬಿ ನಿಂತ ಚಿತ್ರ ಕಣ್ಣಿಗೆ ಬೀಳುತ್ತದೆ. ಅದರ ಮೊದಲ ಮಹಡಿ, ಮಂಗಳವಾರ ಉರಿ ಬಿಸಿಲಲ್ಲೂ ಕಿಕ್ಕಿರಿದು ತುಂಬಿತ್ತು.

ಚುನಾವಣೆ ಸಮಯದಲ್ಲಿ ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ ತಮ್ಮ ಬಲ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದ್ದು ರಾಘವೇಶ್ವರ ಸಭಾಭವನದ ವೇದಿಕೆಯನ್ನು, ಕರೆತಂದಿದ್ದು ಎರಡು ಸಾವಿರ ಜನರನ್ನು.

ಕಪ್ಪು ಕನ್ನಡಕ ತೊಟ್ಟು, ಸುತ್ತ ಹತ್ತಾರು ಬಿಜೆಪಿ ಹಾಗೂ ಸಂಘಪರಿವಾರದ ನಾಯಕರನ್ನು ಕೂರಿಸಿಕೊಂಡಿದ್ದ ಬೇಳೂರು ಬೆವತು ಹೋಗಿದ್ದರು. ಕಾರಣ ಸಾಗರದ ತಾಪಮಾನ 41 ಡಿಗ್ರಿ ದಾಟಿತ್ತು.

ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ
ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ

ಬೇಳೂರು ಸಮ್ಮುಖದಲ್ಲಿ ವೇದಿಕೆಯಲ್ಲಿ ನಡೆದ ಭಾಷಣಗಳು ಹಾಗೂ ಬೆಳವಣಿಗೆಗಳು- ಬಿಜೆಪಿಯಂತಹ ಧರ್ಮಾಧಾರಿತ ರಾಜಕಾರಣವನ್ನು ನಂಬಿರುವ ಪಕ್ಷ ಕೂಡ, ಚುನಾವಣೆ ಬಂದಾಗ ಜಾತಿ ಎಂಬ ಗಾಳಕ್ಕೆ ‘ನಂಜಿನ ಹುಳ’ ಹೇಗೆ ಆಗಬೇಕಾಗುತ್ತದೆ ಎಂಬುದನ್ನು ಸಾರಿ ಹೇಳಿದವು.

ಇತ್ತ ರಾಘವೇಶ್ವರ ಸಭಾಭವನದಲ್ಲಿ ಬೇಳೂರು ಶಕ್ತಿ ಪ್ರದರ್ಶನದ ಜತೆ ಜತೆಗೆ, ಬಿಜೆಪಿಯಲ್ಲಿಯೇ ಉಳಿದುಕೊಂಡ ಪದಾಧಿಕಾರಿಗಳ ಲೇವಡಿ ನಡೆಯುತ್ತಿತ್ತು. ಅತ್ತ ಅರ್ಧ ಕಿ. ಮೀ ಅಂತರದಲ್ಲಿದ್ದ ಸಾಗರ ತಾಲೂಕು ಬಿಜೆಪಿ ಕಚೇರಿಗೆ ಬೀಗ ಬಿದ್ದಿತ್ತು. ಒಬ್ಬ ಪೇದೆ ಕಾವಲು ಕಾಯುತ್ತಿದ್ದ. ಕೇರಳ, ಕೊಪ್ಪಗಳಿಂದ ಬಂದ ವೀಕ್ಷಕರು ಅಕ್ಷರಶಃ ಪ್ಯಾಕ್‌ಅಪ್ ಮಾಡಿದ್ದರು.

ಬಿಜೆಪಿ ಕಚೇರಿ 
ಬಿಜೆಪಿ ಕಚೇರಿ 

ಬಿಜೆಪಿ ರಾಜ್ಯಾಧ್ಯಕ್ಷರ ಟಿಕೆಟ್ ಹಂಚಿಕೆಯ ಒಂದು ನಿರ್ಧಾರ ಕೇವಲ ಸಾಗರ ಬಿಜೆಪಿಯನ್ನಷ್ಟೇ ಅಲ್ಲ, ಇಡೀ ಶಿವಮೊಗ್ಗ ಜಿಲ್ಲೆಯ ಉಳಿದ ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ. ಅದಕ್ಕೆ ಗುರುವಾರ ನಡೆದ ಬೇಳೂರು ಒಂದು ಸಭೆ ಮುನ್ನುಡಿ ಅಷ್ಟೆ.

ನಡೆದಿದ್ದೇನು?:

ಬಿಜೆಪಿ ಎರಡನೇ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಸಾಗರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ವಿರುದ್ಧ ಸೋತರೂ ಅಳಿಯ ಬೇಳೂರು ಗೋಪಾಲಕೃಷ್ಣ ಈ ಬಾರಿ ಬಿಜೆಪಿ ಪಕ್ಷದಿಂದ ಕಣಕ್ಕೆ ಇಳಿಯುವ ಮನಸ್ಸು ಮಾಡಿದ್ದರು.

“ಕಳೆದ ನಾಲ್ಕು ವರ್ಷಗಳಲ್ಲಿ ವರ್ಷಕ್ಕೆ ಒಂದು ಕೋಟಿಯಂತೆ ಬೇಳೂರು ಖರ್ಚು ಮಾಡಿಕೊಂಡು ಬಂದಿದ್ದರು. ಕ್ರಿಕೆಟ್ ಮಾತ್ರ ಅಲ್ಲ, ಲಗೋರಿ, ಚಿನ್ನಿ ದಾಂಡುವಿನಂತಹ ಅಪ್ಪಟ ದೇಸಿ ಕ್ರೀಡಾ ಕೂಟಗಳಿಗಾಗಿ 40 ಲಕ್ಷ ಪ್ರತಿ ವರ್ಷ ದೇಣಿಗೆ ರೂಪದಲ್ಲಿ ನೀಡುತ್ತಿದ್ದರು,’’ ಎಂದು ಬೇಳೂರು ಟ್ರ್ಯಾಕ್ ರೆಕಾರ್ಡ್‌ ಬಿಚ್ಚಿಡುತ್ತಾರೆ ಅವರ ಬೆಂಬಲಿಗರು.

ಬೇಳೂರು ರಾಜಕೀಯ ಶ್ರಮದ ಹಿಂದೆ ಬಿಜೆಪಿ ಟಿಕೆಟ್‌ ಪಡೆಯುವುದು ಹಾಗೂ ಸಾಗರದಿಂದ ಶಾಸಕನಾಗಿ ಆಯ್ಕೆಯಾಗುವುದು ಮಾತ್ರವೇ ಇದ್ದಂತೆ ಕಾಣಿಸುತ್ತಿರಲಿಲ್ಲ. ಬೇಳೂರು ಮಹತ್ವಾಕಾಂಕ್ಷೆಯನ್ನು ಸರಳವಾಗಿ ಮುಂದಿಡುತ್ತಾರೆ ಖಾದಿ ಅಂಗಿ, ಬಿಳಿ ಲುಂಗಿ ತೊಟ್ಟು ನಿಂತಿದ್ದ ಸಂಘಪರಿವಾರ ಸಕ್ರಿಯ ಕಾರ್ಯಕರ್ತ ಗುರುರಾಜ್.

“ಬೇಳೂರು ಎಷ್ಟಾದರೂ ಕಾಗೋಡು ತಿಮ್ಮಪ್ಪರ ಅಳಿಯ. ಬಂಗಾರಪ್ಪ ನಂತರ ಈಡಿಗ ಸಮುದಾಯ ಕಾಗೋಡು ತಿಮ್ಮಪ್ಪ ಅವರನ್ನೇ ನಾಯಕರು ಎಂದು ಒಪ್ಪಿಕೊಂಡಿದ್ದಾರೆ. ಇದು ಅವರ ಕೊನೆಯ ಚುನಾವಣೆ. ಮುಂದಿನ ಬಾರಿಗೆ ಸಾಗರ ಮಾತ್ರವಲ್ಲ, ಈಡಿಗರ ನಿರ್ಣಾಯಕ ಮತಗಳಿರುವ ಸೊರಬ, ಹೊಸನಗರ, ತೀರ್ಥಹಳ್ಳಿ ಕ್ಷೇತ್ರಗಳಲ್ಲೂ ಬೇಳೂರು ಪ್ರಭಾವ ಬೆಳೆಸಿಕೊಳ್ಳುವ ಹಾದಿಯಲ್ಲಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಇದನ್ನು ಅರ್ಥ ಮಾಡಿಕೊಳ್ಳದೆ ಹೋಯಿತು,’’ ಎನ್ನುತ್ತಾರೆ ಗುರುರಾಜ್.

ಸಾಗರ ಮಟ್ಟಿಗೆ ಬಿಜೆಪಿ ಪಕ್ಷವನ್ನೂ ಮೀರಿ ಬೇಳೂರು ಗೋಪಾಲಕೃಷ್ಣ ಬೆಳೆದಿದ್ದರು. ಕಳೆದ ಬಾರಿ ಕೆಜೆಪಿ ಪಕ್ಷವನ್ನು ಯಡಿಯೂರಪ್ಪ ಕಟ್ಟಿದಾಗ, ಬಿಜೆಪಿಯನ್ನು ನಂಬಿಕೊಂಡು ಪ್ರಬಲ ಪೈಪೋಟಿ ನೀಡಿದ್ದರು. ಬಿಜೆಪಿಯ ಸ್ಥಳೀಯ ಪದಾಧಿಕಾರಿಗಳೂ ಸೇರಿದಂತೆ, ಸಂಘಪರಿವಾರದ ಆರ್‌ಎಸ್‌ಎಸ್‌, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಪದಾಧಿಕಾರಿಗಳೂ ಅವರನ್ನೇ ತಮ್ಮ ‘ಕಾಗೋಡು ಪರಂಪರೆಯ ನಾಯಕ’ ಎಂದು ನಂಬಿಕೊಳ್ಳುವಂತೆ ಮಾಡಿದ್ದರು.

ಹೀಗಾಗಿಯೇ, ಟಿಕೆಟ್ ನಿರಾಕರಣೆ, ಬಿಜೆಪಿಗೇ ಮುಳುವಾಗಿ ಪರಿಣಾಮಿಸಿದೆ. ಮತ್ತು ಬಿಜೆಪಿ ಪಾಲಿಗೆ ಕೆಜೆಪಿಯೇ ಅನಧಿಕೃತ ವಿರೋಧಪಕ್ಷವಾಗಿ ಕುಳಿತುಕೊಂಡಿದೆ.

ಸ್ವರ್ಗದ ಗಲ್ಲಿಯಲ್ಲಿ ಕಾಂಗ್ರೆಸ್:

 ಜನ್ನತ್ ನಗರ
ಜನ್ನತ್ ನಗರ

ಸಾಗರದಲ್ಲಿ ಬಿಜೆಪಿ ಒಡೆದ ಮನೆಯಾಗಿದ್ದರೆ, ಕಾಂಗ್ರೆಸ್ ಕಾರ್ಯಕರ್ತರು ನಿರಮ್ಮಳವಾಗಿದ್ದಾರೆ. ಇಲ್ಲಿ ಈಡಿಗರ ಮತಗಳ ಜತೆಗೆ ನಿರ್ಣಾಯಕ ಅಂತ ಅನ್ನಿಸುವುದು ಮುಸ್ಲಿಂರ ಅಭಿಪ್ರಾಯ ಮತ್ತು ಮತಗಳು.

ಇಲ್ಲೊಂದು ‘ಜನ್ನತ್ ಗಲ್ಲಿ’ ಎಂಬ ಏರಿಯಾ ಇದೆ. ಜನ್ನತ್ ನಗರ ಎಂದು ಇಲ್ಲಿನ ಫಲಕ ಹೇಳುತ್ತದೆ. ಇಲ್ಲಿರುವ ಮುಸ್ಲಿಂ ಮತಗಳು ಈ ಬಾರಿ ಸಾವಿರ ದಾಟಿವೆ. 2013ರ ಚುನಾವಣೆಗೂ ಮುನ್ನ ಇಲ್ಲೊಂದು ಕೋಮು ಗಲಭೆ ನಡೆದಿತ್ತು. ಪರಿಣಾಮ ಬೇಳೂರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

“ಅದು ನಡೆದು ಸುಮಾರು ವರ್ಷಗಳಾಯಿತು. ಅವತ್ತಿಗೆ ನಾಲ್ಕಾರು ದಿನ ಕರ್ಫ್ಯೂ ಇತ್ತು. ಇವತ್ತಿಗೂ ಮುಸ್ಲಿಂರು ಮತ ಹಾಕುವ ಮುನ್ನ ಆ ಘಟನೆಯನ್ನು ನೆನಪು ಮಾಡಿಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕುವುದಿಲ್ಲ,’’ ಎನ್ನುತ್ತಾರೆ ಸ್ಥಳೀಯ ಮುಸ್ಲಿಂ ಮುಖಂಡ ಅಜೀಂ ಭಾಯ್.

ಇವರಿಗೆ ಲೋಕಸಭಾ ಚುನಾವಣೆಯೊಂದರಲ್ಲಿ ಯಡಿಯೂರಪ್ಪ ಮಗ ರಾಘವೇಂದ್ರ ಪರವಾಗಿ ಪ್ರಚಾರ ಮಾಡಿದ ಹಿನ್ನೆಲೆ ಇದೆ. ಅದಾದ ಮೇಲೆ ಕಾಂಗ್ರೆಸ್ ಪಕ್ಷ ಸೇರಿ ಕಾಗೋಡು ಜತೆ ಮುನಿಸಿಕೊಂಡ ಇತಿಹಾಸವೂ ಇವರಿಗಿದೆ.

ಅಜೀಂ ಭಾಯ್, ಸ್ಥಳೀಯ ಮುಸ್ಲಿಂ ಮುಖಂಡ
ಅಜೀಂ ಭಾಯ್, ಸ್ಥಳೀಯ ಮುಸ್ಲಿಂ ಮುಖಂಡ

ಅಂದು ನಡೆದ ಕೋಮು ಗಲಭೆ ಬಿಜೆಪಿ ವಿರುದ್ಧ ಮುಸ್ಲಿಂ ಮತಗಳು ಬೀಳುವುದನ್ನು ಖಾತ್ರಿ ಪಡಿಸಿದವಾದರೂ, ಕಾಂಗ್ರೆಸ್‌ ಅನಿವಾರ್ಯ ಕರ್ಮ ಎಂದು ಈ ಮತಗಳು ಭಾವಿಸಿಕೊಂಡಿವೆ. ಕಾರಣ, ಕಾಗೋಡು ನಡವಳಿಕೆ, ಬಿಜೆಪಿ ಬಂದರೆ ಎಂಬ ಭಯ.

ಸಾಗರದಲ್ಲಿ ತಮ್ಮ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡವರಿಗೂ ಕಾಗೋಡು ತಿಮ್ಮಪ್ಪ ನಿರಾಸೆ ಮಾಡಿದ್ದಾರೆ. ಅವಮಾನಗಳನ್ನು ಮಾಡಿದ್ದಾರೆ. ವೈಯಕ್ತಿಕ ಕೆಲಸಗಳಿಗೆ ಹೋದಾಗ ಫೈಲ್‌ ತೆಗೆದು ಮುಖಕ್ಕೆ ಎಸೆದಿದ್ದಾರೆ. ಹೆಚ್ಚು ಕಡಿಮೆ ಎಲ್ಲಾ ಸಮಾಜವಾದಿ ಹಿನ್ನೆಲೆಯ ರಾಜಕಾರಣಿಗಳ ರೀತಿಯಲ್ಲೇ ವರ್ತಿಸಿದ್ದಾರೆ ಕಾಗೋಡು.

ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜತೆಗೆ, ಸಿಗಂದೂರು ದೇವಿಗೆ ಕೈಮುಗಿದ ಆರೋಪವನ್ನೂ ಹೊತ್ತುಕೊಂಡಿದ್ದಾರೆ. ಹೀಗೆ, ಜನ ಕಾಗೋಡು ಅವರ ಬಗ್ಗೆ ಗೊಂದಲದಲ್ಲಿದ್ದಾಗಲೇ ಬಿಜೆಪಿ ಈ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಡೆದಿದೆ.

ಹಾಗಂತ ಅದು ಲಾಭವೇ ಆಗುತ್ತದೆ ಅಂತ ಇಲ್ಲ. ಯಾಕೆಂದರೆ, ಬೇಳೂರು ಪಕ್ಷೇತರರಾಗಿ ನಿಂತರ ಒಂದಷ್ಟು ಮುಸ್ಲಿಂ ಮತಗಳು ಬೀಳುವ ಸಾಧ್ಯತೆ ಇದೆ. ಆ ಕಾರಣಕ್ಕೆ, ದಶಕಗಳ ಹಿಂದಿನ ತಮ್ಮ ಧರ್ಮ ರಾಜಕಾರಣವನ್ನು ಪಕ್ಕಕ್ಕಿಟ್ಟಿರುವ ಬೇಳೂರು, ‘ನಾನು ಎಲ್ಲರ ನಾಯಕ’ ಎಂದು ಹೇಳಲು ಹೊರಟಿದ್ದಾರೆ. ಜನ್ನತ್ ಗಲ್ಲಿಯ ಅಜೀಂ ಭಾಯ್ ತರದವರು “ಪಕ್ಷೇತರರಾಗಿ ನಿಂತರೆ ಗೋಪಾಲಕೃಷ್ಣ ಅವರಿಗೆ ಒಂದಷ್ಟು ನಮ್ಮ ಮತಗಳು ಬೀಳುತ್ತವೆ,’’ ಎಂದು ಸುಳಿವು ನೀಡುತ್ತಾರೆ.

ಇಂತಹ ಏನೇ ಸ್ಥಳೀಯ ಲೆಕ್ಕಾಚಾರಗಳು ನಡೆದರೂ, ಕಾಗೋಡು ಗೆಲ್ಲುತ್ತಾರೆ ಎಂಬ ಭರವಸೆ ಬಿಜೆಪಿಯವರಿಗೇ ಇದೆ. ಬೇಳೂರು ಮುಂದಿನ ವರ್ಷಕ್ಕೆ ಅಸ್ಥಿತ್ವ ಉಳಿಸಿಕೊಂಡರೆ ಸಾಕು ಎಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿದೆ.

“ನೀವು ಬೇಕಾದರೆ ಶಿವಾಜಿ ಜಯಂತಿ, ರಕ್ಷಾ ಬಂಧನ ಕಾರ್ಯಕ್ರಮ ಮಾಡಿಕೊಳ್ಳಿ. ಬೇಳೂರನ್ನು ಮಾತ್ರ ಕಾಂಗ್ರೆಸ್‌ಗೆ ಕೊಡಿ ಅಂತ ಕಾಂಗ್ರೆಸ್‌ನವರು ಕೇಳಿಕೊಳ್ಳುತ್ತಿದ್ದರು. ಈ ಅವರಿಗೆ ಹಾದಿ ಸುಗಮವಾಯಿತು ನೋಡಿ,’’ ಎನ್ನುತ್ತಾರೆ ಸಂಘಪರಿವಾರದ ಹಿನ್ನೆಲೆಯ ಬೇಳೂರು ಅನುಯಾಯಿಯೊಬ್ಬರು.

ಬೇಳೂರು ಅಭಿಮಾನಿ
ಬೇಳೂರು ಅಭಿಮಾನಿ

ಇದು ಹೊರನೋಟಕ್ಕೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುತ್ತಿರುವ ಸೈದ್ಧಾಂತಿಕ ರಾಜಕಾರಣದ ನಿಜವಾದ ಅಂತರಾಳ. ಯಾವುದೇ ನಿರ್ದಿಷ್ಟ ಅಜೆಂಡಾಗಳೇ ಇಲ್ಲದೆ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ ಕೇವಲ ಗತದ ಲೆಕ್ಕಾಚಾರಗಳ ಮೇಲಷ್ಟೆ ವಿಶ್ಲೇಷಣೆಗೆ ಒಳಪಡುತ್ತಿಲ್ಲ, ಬದಲಿಗೆ ಭವಿಷ್ಯದ ಲೆಕ್ಕಾಚಾರಗಳನ್ನೂ ಒಳಗೊಂಡಿದೆ. ಮೇಲ್ನೋಟಕ್ಕೆ ಪಕ್ಷಗಳ ಸಮರ ಅಂತ ಅನ್ನಿಸಿದರೂ, ಆಳದಲ್ಲಿ ಅಧಿಕಾರ ರಾಜಕಾರಣದ ಪರಂಪರೆಯನ್ನು ಮುಂದುವರಿಸುವ ಬೃಹತ್ ಕಸರತ್ತು ಎಂಬುದನ್ನು ಪ್ರಜ್ಞಾವಂತ ಮತದಾರರಿರುವ ಮಲೆನಾಡು ಭಾಗದ ರಾಜಕಾರಣ ಜಾಹೀರು ಮಾಡಿದೆ.

ಕೊನೆಯಲ್ಲಿ ಸ್ಮರಣೆ ಕತೆ:

1951ರಲ್ಲಿ ಸಾಗರ ಭಾಗದ ಗೇಣಿದಾರರ ಹೋರಾಟದ ಮೈಲಿಗಲ್ಲು ಕಾಗೋಡು ಸತ್ಯಾಗ್ರಹ. ಇವತ್ತು (ಏಪ್ರಿಲ್ 18) ರಾಜ್ಯದಲ್ಲಿ ನಡೆದ ಐತಿಹಾಸಿಕ ರೈತ ಹೋರಾಟದ ಸ್ಮರಣೆ ದಿನ. ಹೋರಾಟ ನಡೆದ ತಾಲೂಕಿನಲ್ಲಿನ ಚುನಾವಣೆ ಗದ್ದಲ ಎಷ್ಟರ ಮಟ್ಟಿಗೆ ಇದೆ ಎಂದರೆ, ಸಾಗರದಲ್ಲಿ ಕಾಗೋಡು ಹೋರಾಟವನ್ನು ನೆನಪಿಸಿಕೊಳ್ಳಲು ಕರೆ ನೀಡಿದ ಸೂಚನೆಗಳಿಲ್ಲ. ಹೋರಾಟವನ್ನು ಮೆಲಕು ಹಾಕುವ ಜನರಿದ್ದರಾದರೂ, ಅವರು ಸಮುದಾಯದ ನಾಯಕರಾಗಿ ಬೆಳೆದಿಲ್ಲ. ಕಾಗೋಡು ಸತ್ಯಾಗ್ರಹದ ರೂವಾರಿ ಗಣಪತಿಯಪ್ಪ ಇಂದು ಬದುಕಿಲ್ಲ. ಹೋರಾಟ ನೆರಳಿನಲ್ಲಿ ಬೆಳೆದಿರುವ ತಿಮ್ಮಪ್ಪ, ಗೋಪಾಲಕೃಷ್ಣ, ಹಾಲಪ್ಪ ತರದವರಿಗೆ ಕಾಗೋಡು ಸತ್ಯಾಗ್ರಹದ ಸ್ಮರಣೆ ಅಗತ್ಯವಿಲ್ಲ.