samachara
www.samachara.com
‘ಉಳುವ ರೈತ ಎಪಿಎಂಸಿಗೆ ಬಂದಾಗ’: ಕೃಷಿ ಬಿಕ್ಕಟ್ಟು ಮತ್ತು ರಾಜಕಾರಣಿಗಳ ಜಾಣ ಕಿವುಡು!
GROUND REPORT

‘ಉಳುವ ರೈತ ಎಪಿಎಂಸಿಗೆ ಬಂದಾಗ’: ಕೃಷಿ ಬಿಕ್ಕಟ್ಟು ಮತ್ತು ರಾಜಕಾರಣಿಗಳ ಜಾಣ ಕಿವುಡು!

ರೈತನಿಂದ 13-14 ರುಪಾಯಿಗೆ ಮಾರಲ್ಪಡುವ ಸಿಪ್ಪೆ ಸುಲಿದ ತೆಂಗಿನ ಕಾಯಿಯೊಂದು ಬೆಂಗಳೂರು ನಗರದಲ್ಲಿ 30 ರುಪಾಯಿಗೆ ಮಾರಾಟವಾಗುತ್ತದೆಂದರೆ ಮೇಲಿನ ಲಾಭದ ಪಾಲು ಯಾರದ್ದು?

ಹಿಂದೆಲ್ಲಾ ನಾವು ಒಂದು ವರ್ಷಕ್ಕೆ ಮುಂಚಿತವಾಗಿಯೇ ತೆಂಗಿನ ತೋಟದ ಫಸಲನ್ನು ಯಾರಾದರೂ ದಲ್ಲಾಳಿಗೆ ವಹಿಸಿಬಿಡುತ್ತಿದ್ದೆವು. ಎಲ್ಲಾ ಕಾಯಿಗಳನ್ನು ಆತನೇ ಕಿತ್ತು ಕಾಯಿಯೊಂದಕ್ಕೆ ಇಂತಿಷ್ಟು ಎಂದು ಕೊಡುತ್ತಿದ್ದ. ಅವರು ಕಾಯಿಗಳ ಅಳತೆಯ ಮೇಲೆ ಅವರು ಬೆಲೆ ಕಟ್ಟುತ್ತಿದ್ದರು. ಇತ್ತಿಚಿಗೆ ನಾವೇ ಕಾಯಿಗಳನ್ನು ಎಪಿಎಂಸಿಗೆ ತಂದು ಮಂಡಿ ಮಾಲೀಕರಿಗೆ ಮಾರುತ್ತಿದ್ದೇವೆ. ದಲ್ಲಾಳಿಗಳೇ ಬಂದು ಕೊಳ್ಳುವುದಕ್ಕಿಂತ ನಾವೇ ತಂದು ಮಾರಿದರೆ ಒಂದು ಕಾಯಿಗೆ ಒಂದೆರಡು ರುಪಾಯಿ ಹೆಚ್ಚಿಗೆ ಸಿಗಬಹುದೇನೋ ಎಂಬ ಆಸೆ ಅಷ್ಟೆ...

ಇದು ತುಮಕೂರು ತಾಲೂಕಿನ ರೈತರೊಬ್ಬರ ಮಾತು. ಹೀಗೆ ಎಪಿಎಂಸಿಗಳ ಮೇಲೆ ಕನಸನ್ನಿಟ್ಟುಕೊಂಡು ತಮ್ಮ ತೋಟ, ಗದ್ದೆ, ಹೊಲಗಳಲ್ಲಿನ ಫಸಲನ್ನು ಲಾರಿ, ಟೆಂಪೋಗಳಲ್ಲಿ ಹೇರಿಕೊಂಡು ಬರುವ ರೈತರ ಸಂಖ್ಯೆ ಕಡಿಮೆ ಏನಿಲ್ಲ. ತಮ್ಮ ಬೆಳೆಗೆ ಸರಿಯಾದ ಬೆಲೆಯನ್ನು ಪಡೆಯುವ ನಿಟ್ಟಿನಲ್ಲಿ ಹಲವಾರು ಮೈಲಿಗಳಷ್ಟು ದೂರದಿಂದ ಎಪಿಎಂಸಿ ಪ್ರಾಂಗಣಗಳಿಗೆ ತಮ್ಮ ಬೆಳೆ ಸಮೇತ ಬರುವ ಅದೆಷ್ಟೋ ರೈತರಿಗೆ ಸಿಗುವುದು ಅಲ್ಪ ತೃಪ್ತಿಯಷ್ಟೇ.

“ಇವತ್ತು ಬೆಳಗ್ಗೆ ಹುಣಿಸೆ ಹಣ್ಣಿನ ಬೆಲೆ ಜಾಸ್ತಿಯಾಗಿದೆ ಅಂತ ನೆರೆಯವರ್ಯಾರೋ ಹೇಳಿದ್ದು ಕೇಳಿ ಸುಮಾರು ಒಂದು ಕ್ವಿಂಟಾಲ್‌ನಷ್ಟಿದ್ದ ಹುಣಿಸೆಹಣ್ಣನ್ನು ತಂದಿದ್ದೆವು. ಅದೇನೇನೋ ಲೆಕ್ಕಾಚಾರ ಹಾಕಿ 1900 ರುಪಾಯಿ ಅಂದರು. ಅಕ್ಕ ಪಕ್ಕ ವಿಚಾರಿಸಿದಾಗ ಇನ್ನೂ ಕಾದರೆ ಬೆಲೆ ಕಡಿಮೆಯಾಗಬಹುದು ಎನ್ನುವ ಮಾತುಗಳೇ ಕೇಳಿದವು. ಸಿಕ್ಕಷ್ಟು ಸಿಗಲಿ ಎಂದು ಮಾರಿದೆವು. ಹಣ್ಣು ಕಿತ್ತಿ ಅದನ್ನು ಶುದ್ಧೀಕರಿಸುವ ವೇಳೆಗಾಗಲೇ ಕೂಲಿಯೂ ಸೇರಿ 1,200 ರುಪಾಯಿಗಳಷ್ಟು ಖರ್ಚು ಬಿದ್ದಿತ್ತು. ಎರಡು ಮೂಟೆ ಹುಣಿಸೆ ಹಣ್ಣನ್ನು 30 ಕಿಮೀ ದೂರದಿಂದ ಇಲ್ಲಿಗೆ ತರಲು ಆಟೋದವನು ಮೂಟೆಯೊಂದಕ್ಕೆ 250ರ ಲೆಕ್ಕದಲ್ಲಿ 500 ರುಪಾಯಿ ಪಡೆದ. ಸುಮಾರು 2 ವಾರಗಳ ನಮ್ಮ ಶ್ರಮಕ್ಕೆ ಸಿಕ್ಕಿದ್ದು 200 ರುಪಾಯಿಯಷ್ಟೇ. ಇಷ್ಟೆಲ್ಲಾ ತ್ರಾಸು ಪಡುವುದಕ್ಕಿಂತ ಮರಗಳನ್ನೇ ದಲ್ಲಾಳಿಗೆ ಬಿಟ್ಟುಕೊಟ್ಟಿದ್ದರೆ ಸಮಯವಾದರೂ ಉಳಿಯುತ್ತಿತ್ತೇನೋ,” ಎಂದು ಶಿರಾ ನಗರದ ಸಮೀಪದ ಹಳ್ಳಿಯಿಂದ ಬಂದ ಮಧ್ಯ ವಯಸ್ಸಿನ ಹೆಂಗಸೊಬ್ಬರು ತಮ್ಮ ಅಳಲು ತೋಡಿಕೊಂಡರು. ಇದು ಹಳ್ಳಿಗಾಡಿನ ರೈತರ ನೈಜ ಪರಿಸ್ಥಿತಿ.

ರೈತ ಭಾರತದ ಬೆನ್ನೆಲುಬು ಎಂದು ಹೊಗಳಿ ಅಟ್ಟಕೇರಿಸುತ್ತಿರುವುದರ ಮಧ್ಯೆ, ನಮ್ಮ ಅಕ್ಕ ಪಕ್ಕದ ರೈತರ ಬೆನ್ನು ಮೂಳೆ ಮುರಿದು ಹೋಗುವಷ್ಟು ಶ್ರಮಕ್ಕೆ ದೊರೆಯುವುದು ಬೆರಳೆಣಿಕೆಗೂ ಕಡಿಮೆ ಎನಿಸುವಷ್ಟು ಬಿಡುಗಾಸಷ್ಟೇ. ಇದು ಒಬ್ಬಿಬ್ಬರ ಕತೆಯೇನಲ್ಲ. ಕೋಟ್ಯಾಂತರ ರೈತರ ನಿತ್ಯ ಬವಣೆ.

ಗುಬ್ಬಿ ಸಮೀಪದ ಹಳ್ಳಿಯಿಂದ ಮೆಕ್ಕೆ ಜೋಳವನ್ನು ತಂದಿದ್ದ ರೈತನೋರ್ವ ವಾರ ಕಳೆದರೂ ಫಲಸನ್ನು ಮಾರದೇ ಕಾದು ಕುಳಿತಿದ್ದ. ವಿಚಾರಿಸಿದರೆ, ಗೊಬ್ಬರ, ಕೂಲಿ, ಲಾರಿ ಬಾಡಿಗೆಯ ಸಾಲವನ್ನಾದರೂ ತುಂಬುವಷ್ಟು ಬೆಲೆ ಸಿಗಲಿ ಎಂದು ಕಾಯುತ್ತಿದ್ದೇನೆ ಎಂಬ ಉತ್ತರ ಬಂತು. ಆತನದ್ದು ಮೆಕ್ಕೆಜೋಳ ಬೆಳೆಯಲು ಮಾಡಿದ ಸಾಲವನ್ನಾದರೂ ಹಿಂತಿರುಗಿಸಬೇಕೆಂಬ ಆಕಾಂಕ್ಷೆಯಷ್ಟೇ.

ಇದನ್ನು ಗಮನಿಸಿದರೆ ‘ಭಾರತದ ರೈತ ಸಾಲದಲ್ಲಿ ಹುಟ್ಟಿ, ಅದರಲ್ಲೇ ಬೆಳೆದು ಸಾಲದಲ್ಲೇ ಸಾಯುತ್ತನೆ,’ ಎಂಬ ಮಾತು ಅಕ್ಷರಸಹ ಸತ್ಯವೆನಿಸುತ್ತದೆ. ಮುಂದಿನ ಬೆಳೆ ಬರುವವರೆಗಿನ ಬದುಕಿನ ಕತೆಯೇನು ಎಂಬ ಪ್ರಶ್ನೆಗೆ, “ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟೇ,” ಎನ್ನುವ ಉತ್ತರ ಬಂತು.

ಮತ್ತೊಬ್ಬ ರೈತರು, ಕೈಯಲ್ಲಿದ್ದ ಹಣದ ಜೊತೆಗೆ ಒಂದಷ್ಟು ಸಾಲ ಮಾಡಿ ಮೂರು ಎಕರೆಯಷ್ಟು ಮೆಕ್ಕೆ ಜೋಳ ಬೆಳದಿದ್ದರು. ವ್ಯವಸಾಯದ ಖರ್ಚು ಸಹ ಗಿಟ್ಟುವುದಿಲ್ಲ ಎನ್ನುವ ಕಾರಣಕ್ಕೆ ಕೊಟ್ಟಿಗೆಯಲ್ಲಿದ್ದ ಮೂರು ಎಮ್ಮೆ, ಒಂದು ಹಸುವಿಗೆ ಹಿಂಡಿಯ ಬದಲು ಆ ಜೋಳವನ್ನೇ ಉಪಯೋಗಿಸುತ್ತಿದ್ದಾರೆ. ಎರಡು ಎಮ್ಮೆಗಳು ಹಾಲು ಕರೆಯುತ್ತಿದ್ದು, ಮೂರು ಹೊತ್ತಿನ ಊಟಕ್ಕೆನೂ ಕೊರತೆಯಾಗುತ್ತಿಲ್ಲ ಎನ್ನುವುದರಷ್ಟರಲ್ಲೇ ತೃಪ್ತಿ ಕಂಡುಕೊಂಡಿದ್ದಾರೆ.

ಮತ್ತೆ ಬೆಳೆ ಬೆಳೆಯಲು ಮಾಡಿದ ಸಾಲದ ಗತಿಯೇನು ಎನ್ನುವುದಕ್ಕೆ, “ಮುಂದಿನ ಮಳೆಗಾಲದವರೆಗೂ ನಾನು ಎಪಿಎಂಸಿನಲ್ಲೇ ಮೂಟೆ ಹೊರುತ್ತೇನೆ. ಮೂರು ತಿಂಗಳ ಕೂಲಿ ಹಣದಲ್ಲಿ ಸಾಲ ಹಿಂತಿರುಗಿಸಬಹುದು,” ಎನ್ನುವ ತಣ್ಣನೆಯ ಉತ್ತರ ಬಂತು.

ಹೀಗೆ ಒಬ್ಬೊಬ್ಬರದು ಒಂದೊಂದು ಕತೆ. ಕೃಷಿ ಪಾರಂಪರಿಕ ವೃತ್ತಿ ಎಂದು ಎಷ್ಟೇ ಕಷ್ಟ ಬಂದರೂ ಬಿಡದೆ, ಮಳೆಗಾಗಿ ಆಕಾಶ ನೋಡುವ ರೈತರು ಒಂದೆಡೆಯಾದರೆ, ಬೇರೆ ಕೆಲಸಗಳನ್ನು ಮಾಡಲು ತಿಳಿಯದೇ ಅನಿವಾರ್ಯವಾಗಿ ಕೃಷಿಯಲ್ಲಿಯೇ ಬದುಕು ಸಾಗಿಸುತ್ತಿರುವ ರೈತರೊಂದು ಕಡೆ. ಇವರ ನಡುವೆ ಕೃಷಿಯಲ್ಲಿಯೇ ಏನಾದರೂ ಸಾಧಿಸಬೇಕೆಂಬ ಛಲವಂತ ಯುವಪಡೆ ತಮ್ಮ ಹಳ್ಳಿಯ ತೋಟಗಳತ್ತ ಮರಳಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಆದಾಗ್ಯೂ ವ್ಯವಸಾಯದ ಬದುಕಿನಲ್ಲಿ ಸ್ವಲ್ಪ ನೆಮ್ಮದಿ ಕಾಣುತ್ತಿರುವುದು ಹತ್ತಾರು ಎಕರೆ ಕೃಷಿ ಭೂಮಿ ಹೊಂದಿದ್ದು, ನೀರಾವರಿ ಸೌಲಭ್ಯ ಹೊಂದಿರುವ ದೊಡ್ಡ ಹಿಡುವಳಿದಾರರಷ್ಟೇ.

ರೈತನ ಸಮಸ್ಯೆ ಎಂದರೆ ಕಣ್ಣುಗಳ ಮುಂದೆ ಬರುವುದು ‘ಸಾಲ ಮನ್ನಾ’ ಎನ್ನುವ ವಿಷಯ. ಕಳೆದ ಕೆಲ ವರ್ಷಗಳಿಂದ ಮಿತಿ ಮೀರಿರುವ ರೈತರ ಆತ್ಮಹತ್ಯೆಯನ್ನು ತಡೆಗಟ್ಟುವ ದಾರಿಯೆಂದರೆ ಅವರು ಮಾಡಿರುವ ಸಾಲವನ್ನು ಮನ್ನಾ ಮಾಡುವುದಷ್ಟೇ. ಇದರಿಂದ ರೈತನ ಬದುಕು ಸುಲಲಿತವಾಗುವುದೇ, ಸಮಸ್ಯೆಗಳ ಸೆರೆಯಿಂದ ರೈತನನ್ನು ಹೊರತರಬಹುದೇ ಎನ್ನುವುದಕ್ಕೆ ಆಳುವ ವರ್ಗದಲ್ಲಿ ಸರಿಯಾದ ಉತ್ತರವಿಲ್ಲ.

ಗೊಬ್ಬರ, ಬಿತ್ತನೆ ಬೀಜಗಳಿಗೆ ಸಹಾಯಧನವನ್ನು ನೀಡಿದರೆ, ಉಚಿತ ವಿದ್ಯುತ್‌ ಕಲ್ಪಿಸಿದರೆ, ಕೊಳವೆ ಬಾವಿ ತೋಡಲು ಹಣ ಕೊಟ್ಟರೆ ರೈತ ನೆಮ್ಮದಿಯಾಗಿ ಬದುಕುತ್ತಾನೆಯೇ ಎಂಬ ಪ್ರಶ್ನೆಗೂ ನಿರ್ಧಿಷ್ಟ ಉತ್ತರವಿಲ್ಲ. ಈ ಸಹಾಯ ಧನಗಳು ರೈತನ ಸಾಲದ ಸ್ವಲ್ಪ ಹೊರೆಯನ್ನಷ್ಟೇ ಕಡಿಮೆ ಮಾಡಬಲ್ಲವು ಎನ್ನುವುದನ್ನು ಬಿಟ್ಟರೆ, ಒಟ್ಟಾರೆ ರೈತನ ಸಮಸ್ಯೆಯ ಮೂಲವನ್ನು ಸರಿಪಡಿಸುವುದಿಲ್ಲ.

ರೈತನ ಬದುಕು ಸುಸೂತ್ರವಾಗುವುದು ತನ್ನ ಬೆಳೆಗೆ ತಕ್ಕದಾದ, ಮತ್ತು ಲಾಭವನ್ನು ಒಳಗೊಂಡ ಬೆಲೆ ದೊರೆತಾಗಲಷ್ಟೇ. ಈ ಬೆಲೆಯನ್ನು ದೊರಕಿಸುವ ನಿಟ್ಟಿನಲ್ಲಿ ಹಲವಾರು ಹೋರಾಟಗಳು ನಡೆಯುತ್ತಿವೆಯಾದರೂ ವಿಷಯ ಮುನ್ನೆಲೆಗೆ ತರುವಲ್ಲಿ ರೈತ ಸಮುದಾಯ ಹಿಂದೆ ಉಳಿದಿದೆ. ಅಥವಾ ಇದರ ಹಿನ್ನೆಲೆಯನ್ನು ಸರಿಯಾಗಿ ಅರ್ಥ ಮಾಡಿಸುವಲ್ಲಿ ಚಳವಳಿಗಳು ಹಿಂದೆ ಉಳಿದಿದೆ. ಇದೆರಡೂ ಕಾರಣಗಳು ಸರಿಯಾದವಲ್ಲ ಎಂದರೆ ಕೊನೆಯ ಕಾರಣ ರಾಜಕಾರಣಿಗಳ ಜಾಣ ಕಿವುಡು ಮಾತ್ರವೇ ಆಗಿರಲು ಸಾಧ್ಯ.

ಈ ಎಲ್ಲಾ ವಿಚಾರಗಳ ಮಧ್ಯೆ, ರೈತನ ಫಸಲಿಗೆ ಉತ್ತಮ ಬೆಲೆಯನ್ನು ಕಲ್ಪಿಸುವಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರತವಾಗಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.

ಹೌದು, ಎಪಿಎಂಸಿಗಳ ಹುಟ್ಟಿದ್ದೂ ಕೂಡ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ದೊರಕಿಸಿಕೊಡುವುದಕ್ಕಾಗಿಯೇ. ಆದರೆ ಎಪಿಎಂಸಿಗಳಿಗೆ ತಮ್ಮ ಫಸಲನ್ನು ಹೇರಿಕೊಂಡು ಬರುವ ರೈತರ ಶ್ರಮಕ್ಕೆ ತಕ್ಕ ಫ್ರತಿಫಲ ದೊರೆಯುತ್ತಿದೆಯೇ ಎಂಬ ಪ್ರಶ್ನೆಗೆ ಮೇಲಿನ ರೈತರ ಹೇಳಿಕೆಗಳೇ ಉತ್ತರ ನೀಡುತ್ತವೆ.

ರೈತನಿಂದ 13-14 ರುಪಾಯಿಗೆ ಮಾರಲ್ಪಡುವ ಸಿಪ್ಪೆ ಸುಲಿದ ತೆಂಗಿನ ಕಾಯಿಯೊಂದು ಬೆಂಗಳೂರು ನಗರದಲ್ಲಿ 30 ರುಪಾಯಿಗೆ ಮಾರಾಟವಾಗುತ್ತದೆಂದರೆ ಮೇಲಿನ ಲಾಭದ ಪಾಲು ಯಾರದ್ದು? ಸಾಗಾಣಿಕಾ ವೆಚ್ಚ, ದಾಸ್ತಾನು ವೆಚ್ಚ, ದಲ್ಲಾಳಿಗಳ ಲಾಭ, ಚಿಲ್ಲರೆ ವ್ಯಾಪಾರಗಳ ಲಾಭ ಎಂದು ತಲಾ ಒಂದೊಂದು ರುಪಾಯಿ ಸೇರಿಸಿದರೂ ಕಾಯಿಯೊಂದರ ಬೆಲೆ 20 ಮುಟ್ಟಬೇಕಿತ್ತಲ್ಲವೇ? ಮತ್ತೆ ಎಪಿಎಂಸಿ ಮಾರುಕಟ್ಟೆಗಳು ಯಾರಿಗೆ ಲಾಭ ಮಾಡಿಕೊಟ್ಟವು?

ತುಮಕೂರಿನ ಎಪಿಎಂಸಿ ಕಾರ್ಯದರ್ಶಿ ಆರ್‌.ಆರ್. ಪೆಂಡಾರಿ ಹೇಳುವಂತೆ ಕೃಷಿ ಉತ್ಪನ್ನ ಮಾರುಕಟ್ಟೆಗಳಿಂದ ರೈತರು ಲಾಭವನ್ನೇ ಗಳಿಸುತ್ತಿದ್ದಾರೆ.

“ಹಲವಾರು ರೈತರು ತಮ್ಮ ಬೆಳೆಯನ್ನು ಮಾರುಕಟ್ಟೆಗೆ ತರುತ್ತಾರೆ. ಮಂಡಿಗಳ ಮಾಲೀಕರು ನಿಗಧಿತ ಬೆಲೆ ಕೊಟ್ಟು ಆ ಕೃಷಿ ಉತ್ಪನ್ನಗಳನ್ನು ಕೊಳ್ಳುತ್ತಾರೆ. ಇಲ್ಲಿ ಕೃಷಿಕನ ಮುಂದೆಯೇ ಯಾವ ಮಂಡಿಗೆ ಮಾರಬೇಕೆಂಬ ಆಯ್ಕೆ ಇರುತ್ತದೆ. ತನಗೆಲ್ಲಿ ಲಾಭ ಎನಿಸುತ್ತದೆಯೋ ಅಲ್ಲೇ ಕೃಷಿಕ ತನ್ನ ಉತ್ಪನ್ನವನ್ನು ಮಾರುತ್ತಾನೆ,”
ಆರ್‌. ಆರ್‌. ಪೆಂಡಾರಿ, ತುಮಕೂರು ಎಪಿಎಂಸಿ ಕಾರ್ಯದರ್ಶಿ

ಹೌದು, ಕೃಷಿ ಉತ್ಪನ್ನವನ್ನು ಮಾರುವ ಬೆಲೆಯನ್ನು ನಿರ್ಧರಿಸುವುದು ಯಾರು? ಈ ಬೆಲೆ ನಿಗದಿಯ ಪ್ರಕ್ರಿಯೆಯಲ್ಲಿ ರೈತನೂ ಒಳಗೊಂಡಿರುತ್ತಾನೆಯೇ? ತನ್ನ ಮಾರಾಟದ ಬೆಲೆಯನ್ನು ಮಂಡಿಯ ಮಾಲೀಕ ನಿಗದಿ ಪಡಿಸಿಕೊಳ್ಳುವಾಗ ತನ್ನ ಉತ್ಪನ್ನದ ಬೆಲೆಯನ್ನು ರೈತನೇಕೆ ನಿಗದಿ ಮಾಡಬಾರದು? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಇಲ್ಲಿ ದೊರೆಯುವುದಿಲ್ಲ.

ರೈತನ ಏಳಿಗೆಗೆ ಎಂದು ಸ್ಥಾಪನೆಯಾದ ಎಪಿಎಂಸಿಗಳು ಕಣ್ಣುಗಳಲ್ಲಿ ಕನಸನ್ನು ಹುಟ್ಟುಹಾಕಿದೆಯಷ್ಟೇ ಹೊರತು, ನೆಮ್ಮದಿಯ ಬದುಕನ್ನೇನೂ ತಂದು ತಂದುಕೊಟ್ಟಿಲ್ಲ ಎಂಬುದು ಗ್ರಾಮೀಣ ಭಾಗದ ರೈತರ ಅನಿಸಿಕೆ. ಹಾಗಾದರೆ ಈ ಎಪಿಎಂಸಿಗಳು ಮಾಡಬೇಕಾಗಿದ್ದ ಕೆಲಸಗಳೇನು? ಎಪಿಎಂಸಿಗಳ ಕಾರ್ಯಕ್ಷಮತೆ ಸರಿಯಾದರೆ ರೈತನ ಸಮಸ್ಯೆಗಳು ಪರಿಹಾರವಾಗುತ್ತವೆಯೇ?

(ಉತ್ತರ ಹುಡುಕುವ ಪ್ರಯತ್ನ ಮುಂದಿನ ವರದಿಯಲ್ಲಿ)