samachara
www.samachara.com
ಕೇಂದ್ರೀಯ ವಿದ್ಯಾಲಯದಿಂದ ವಾಯುಪಡೆಗೆ: ವಿಂಗ್‌ ಕಮಾಂಡರ್‌ ಅಭಿನಂದನ್‌ ಬೆಂಗಳೂರು ನಂಟು...
FEATURE STORY

ಕೇಂದ್ರೀಯ ವಿದ್ಯಾಲಯದಿಂದ ವಾಯುಪಡೆಗೆ: ವಿಂಗ್‌ ಕಮಾಂಡರ್‌ ಅಭಿನಂದನ್‌ ಬೆಂಗಳೂರು ನಂಟು...

ಇಡೀ ಭಾರತ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಸುರಕ್ಷಿತ ವಾಪಾಸಾತಿಗೆ ಕಾಯುತ್ತಿದ್ದಾಗ, ಜೀವನ್ ಬೀಮಾ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹೊರಗೆ ಹಾಕಲಾಗಿದ್ದ ಪೋಸ್ಟರ್‌ ಮಾತ್ರ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.

ಇತ್ತೀಚೆಗೆ ದೇಶದಲ್ಲಿ ಅತಿಹೆಚ್ಚು ಚಾಲ್ತಿಯಲ್ಲಿರುವ ಹೆಸರು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್. ಕೇವಲ ಒಂದೇ ದಿನದಲ್ಲಿ ಯುವಕರ ಪಾಲಿನ ಹಿರೋ ಆಗಿ ಬದಲಾದ ವಾಯು ಸೇನೆಯ ಅಧಿಕಾರಿ. ಭಾರತದ ಗಡಿ ದಾಟಿ ಒಳ ಬಂದಿದ್ದ ಪಾಕಿಸ್ತಾನದ ಎಫ್ 16 ವಿಮಾನವನ್ನು ಬೆನ್ನತ್ತಿದವರು ಪಾಕ್‌ ವಶವಾಗಿದ್ದರು. ಅದರನ್ನು ‘ಶಾಂತಿಯ ದ್ಯೋತಕ’ವಾಗಿ ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು.

ಅದಕ್ಕೂ ಮೊದಲು ಭಾರತ ಅಭಿನಂದನ್ ವಾಪಾಸಾತಿಗೆ ಕಾಯುತ್ತಿದ್ದಾಗ, ಬೆಂಗಳೂರಿನ ಜೀವನ್ ಬೀಮಾ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದ ಹೊರಗೆ “BRAVO! ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ (ಕೆವಿಎನ್‌ಎಎಲ್ ಅಲ್ಯೂಮಿನಿ 1998-1999). ನಾವು ಕೇಂದ್ರಿಯ ವಿದ್ಯಾಲಯದ ಕುಟುಂಬದವರೇ. ನಿಮಗೆ ಪ್ರಾಮಾಣಿಕವಾಗಿ ವಂದಿಸುತ್ತೇವೆ ಮತ್ತು ನೀವು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಲು ಪ್ರಾರ್ಥಿಸುತ್ತೇವೆ. ಜೈ ಹಿಂದ್” ಎಂದು ಅಭಿನಂದನ್ ಅವರ ಚಿತ್ರ ಸಹಿತ ಹಾಕಲಾಗಿದ್ದ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು.

ಜೀವನ್‌ ಭೀಮಾ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ. 
ಜೀವನ್‌ ಭೀಮಾ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ. 

ಬೆಂಗಳೂರಿನ ವಿದ್ಯಾರ್ಥಿಯಾಗಿದ್ದ ಅಭಿನಂದನ್!

ಇಂದು ಇಡೀ ಭಾರತದಾದ್ಯಂತ ಪ್ರಚಲಿತಕ್ಕೆ ಬಂದಿರುವ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಅವರ ಹೆಂಡತಿ ತನ್ವಿ ಮರ್ವಾಹ ಇಬ್ಬರೂ ದ್ವಿತೀಯ ಪಿಯುಸಿವರೆಗೆ ಬೆಂಗಳೂರಿನಲ್ಲೇ ಓದಿದ ವಿದ್ಯಾರ್ಥಿಗಳು ಎಂಬುದು ಹೆಮ್ಮೆಯ ವಿಚಾರ.

ಹೆಚ್‌ಎಎಲ್ ಮೂರನೇ ಹಂತದಲ್ಲಿರುವ ಜೀವನ್ ಬೀಮಾ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲೇ ಓದಿದ ಈ ಇಬ್ಬರೂ 1998-99 ರ ಬ್ಯಾಚ್‌ನ ಶಾಲಾ ಅಲ್ಯೂಮಿನಿ ಗ್ರೂಪ್‌ನ ಸದಸ್ಯರಾಗಿದ್ದಾರೆ.

ಬೆಂಗಳೂರಿನಲ್ಲಿ ಪಿಯುಸಿ ಓದಿದ ಬಳಿಕ ಮಹಾರಾಷ್ಟ್ರದ ಪುಣೆಯಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಪದವಿ ಪಡೆದ ಅಭಿನಂದನ್ 2004 ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಜೆಟ್ ಪೈಲಟ್ ಆಗಿ ನೇಮಕವಾಗುತ್ತಾರೆ. ಆತನ ಹೆಂಡತಿ ತನ್ವಿ ಮರ್ವಾಹ ಸಹ ಭಾರತೀಯ ವಾಯುಪಡೆಯ ನಿವೃತ್ತ ಪೈಲಟ್.

ಇಷ್ಟಕ್ಕೂ ಅಭಿನಂದನ್ ಬೆಂಗಳೂರಿನಲ್ಲೇ ಓದಿದ ವಿದ್ಯಾರ್ಥಿ ಎಂಬ ಮಾಹಿತಿ ಹೊರಬಿದ್ದೇ ಒಂದು ರೋಚಕ ಕಥೆ.

ಪಾಕಿಸ್ತಾನದ ಸೇನೆಯಿಂದ ಭಾರತೀಯ ಪೈಲಟ್ ಅಭಿನಂದನ್ ಬಂಧನ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಅಮೇರಿಕದಲ್ಲಿದ್ದ ಎಂ. ಎಸ್. ಆನಂದ್ ಶಂಕರ್ ಎಂಬುವವರು ಕೇಂದ್ರೀಯ ವಿದ್ಯಾಲಯದಲ್ಲೇ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿರುವ ತನ್ನ ತಾಯಿ ದುರ್ಗ ಶಿವಕುಮಾರ್‌ಗೆ ಕರೆ ಮಾಡಿ ಈತ ತನ್ನ ಜೂನಿಯರ್ ಎಂದೂ, ಆತನ ಪತ್ನಿ ತನ್ವಿ ಈಗಲೂ ಶಾಲೆಯ ಅಲ್ಯೂಮಿನಿ ಗ್ರೂಪ್‌ನಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

“ಮಗ ನೀಡಿದ ಈ ವಿವರಣೆಯು ಅಭಿನಂದನ್ ಮತ್ತು ತನ್ವಿ ಅವರನ್ನು ನೆನಪಿಸಿಕೊಳ್ಳುವುದಕ್ಕೆ ಸಹಾಯವಾಯಿತು. ನಾನು ಅವರಿಗೆ ಕಲಿಸಲಿಲ್ಲ. ಆದರೆ ಆತನ ಬಗ್ಗೆ ನನಗೆ ಗೊತ್ತು. ಓದುವ ಕಾಲದಲ್ಲಿ ಆತ ದೃಢವಾದ ದುಂಡು ಮುಖದ ಹುಡುಗನಾಗಿದ್ದ. ಪಠ್ಯ ಚಟುವಟಿಕೆಗಳ ಜೊತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದ ವಿದ್ಯಾರ್ಥಿ ಅಭಿನಂದನ್. ನಮ್ಮ ಶಾಲೆಯ 5 ತಂಡಗಳ ಪೈಕಿ ಒಂದು ತಂಡಕ್ಕೆ ಆತ ನಾಯಕನೂ ಆಗಿದ್ದ” ಎಂದು ಅಭಿನಂದನ್ ಬಗ್ಗೆ ತಮ್ಮ ಹಳೆಯ ನೆನಪುಗಳನ್ನು ಪಿಟಿಐ ಎದುರು ತೆರೆದಿಡುತ್ತಾರೆ ಶಿಕ್ಷಕಿ ದುರ್ಗಾ ಶಿವಕುಮಾರ್.

ಕೇಂದ್ರೀಯ ವಿದ್ಯಾಲಯದಲ್ಲಿ ಒಂದು ಸಂಪ್ರದಾಯವಿದೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷರನ್ನೂ ಸೇರಿಸಿ ನಾಲ್ಕು ಅಥವಾ ಐದು ತಂಡಗಳನ್ನಾಗಿ ವಿಭಜಿಸಲಾಗುತ್ತದೆ. ನಂತರ ಈ ತಂಡಗಳ ನಡುವೆ ಸ್ಫರ್ಥೆಯನ್ನು ಏರ್ಪಡಿಸಿ ಗೆದ್ದ ತಂಡಕ್ಕೆ ಬಹುಮಾನ ನೀಡಲಾಗುತ್ತದೆ.

“ಇದೇ ಬೆಂಗಳೂರಿನ ಸಿ. ವಿ. ರಾಮನ್ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ಡಿ.ಆರ್‌.ಡಿ.ಓ ನಲ್ಲಿ 10 ನೇ ತರಗತಿ ಮುಗಿಸಿದ್ದ ಅಭಿನಂದನ್ 11 ನೇ ತರಗತಿಗೆ ಈ ಶಾಲೆಗೆ ಬಂದು ಸೇರಿಕೊಂಡಿದ್ದ. ಹೀಗೆ ಶಾಲೆಗೆ ಸೇರಿ ಕೇವಲ ಒಂದು ವರ್ಷದಲ್ಲಿ ಶಿಕ್ಷಕರ ಮನಸ್ಸಿನಲ್ಲಿ ಆಳವಾದ ಅಭಿಮಾನವನ್ನು ಗಳಿಸಿದ್ದ, ತಂಡವೊಂದರ ನಾಯಕನಾಗುವ ಮಟ್ಟಕ್ಕೂ ಬೆಳೆದಿದ್ದ. ತಂಡವೊಂದರ ನಾಯಕನಾಗುವ ಎಲ್ಲಾ ಸಾಮರ್ಥ್ಯವೂ ಆತನಲ್ಲಿ ಇತ್ತು” ಎಂದು ಅಭಿನಂದನ್ ಶಾಲಾ ದಿನಗಳ ಬಗ್ಗೆ ಮಾಹಿತಿ ನೀಡುತ್ತಾರೆ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಮನೋಹರನ್ ಪಿಳ್ಳೈ.

“ಅಭಿನಂದನ್ ಈ ಶಾಲೆಯಲ್ಲಿ ಓದುವಾಗ ನಾನು ಈ ಶಾಲೆಯಲ್ಲಿ ವೃತ್ತಿ ಆರಂಭಸಿರಲಿಲ್ಲ. ಆದರೆ ಆತನ ಬಗ್ಗೆ ಇಲ್ಲಿನ ಹಲವರು ಹೇಳುವುದನ್ನು ಕೇಳಿದ್ದೇನೆ. ಹೀಗೆ ಅವರು ಅಭಿನಂದನ್ ಬಗ್ಗೆ ಹೇಳುವಾಗ ನನಗೆ ರೋಮಾಂಜನವಾಗುತ್ತದೆ. ಭಾರತೀಯ ವಾಯುಪಡೆಗೆ ಇಂತಹ ಧೈರ್ಯವಂತ ಪೈಲಟ್‌ನನ್ನು ನೀಡಿದ ಶಾಲೆಯಲ್ಲೇ ನಾನು ಕೆಲಸ ನಿರ್ವಹಿಸುತ್ತಿದ್ದೇನೆ ಎಂಬುದೇ ನನ್ನ ಪಾಲಿಗೆ ಹೆಮ್ಮೆಯ ವಿಚಾರ. ಇದನ್ನು ನೆನೆದರೆ ನನ್ನ ಕಣ್ಣೀರನ್ನು ತಡೆಯಲು ನನ್ನಿಂದಲೇ ಸಾಧ್ಯವಾಗುವುದಿಲ್ಲ” ಎಂದು ಭಾವನಾತ್ಮಕವಾಗಿ ನುಡಿಯುತ್ತಾರೆ ಪ್ರಾಂಶುಪಾಲ ಪಿಳ್ಳೈ.

ಅಭಿನಂದನ್ ನಮ್ಮ ಶಾಲೆಯ ವಿದ್ಯಾರ್ಥಿ ಎಂಬುದು ತಿಳಿದ ಕೂಡಲೇ ಇದ್ದಕ್ಕಿದ್ದಂತೆ ಇಡೀ ಶಾಲೆ ಹಳೆಯ ದಾಖಲೆಗಳನ್ನು ಹೊರತೆಗೆಯಲು ಆರಂಭಿಸಿತು. ಈ ಸಂದರ್ಭದಲ್ಲಿ ಅಭಿನಂದನ್ ಇರುವ ಅಲ್ಯೂಮಿನಿ ವಿದ್ಯಾರ್ಥಿಗಳ ಹಳೆಯ ಪೋಟೋಗಳು ದೊರೆತವು. ಅಲ್ಲದೆ ಅಭಿನಂದನ್ ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಾಸಾಗಲು ವಿದ್ಯಾರ್ಥಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

“ಕೊನೆಗೂ ಅಭಿನಂದನ್ ಸುರಕ್ಷಿತವಾಗಿ ಮರಳಿ ಬಂದಾಗ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖರಾದ ತಕ್ಷಣ ಅವರನ್ನು ಶಾಲೆಗೆ ಆಹ್ವಾನಿಸಲಾಗುವುದು,” ಎಂದು ಮನೋಹರನ್ ಪಿಳ್ಳೈ ‘ಪಿಟಿಐ’ಗೆ ತಿಳಿಸಿದ್ದಾರೆ.

ಫೆ. 28 ರ ಗುರುವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಲ್ಲಿನ ಸಂಸತ್ ನ ಜಂಟಿ ಸಭೆ ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ‘ಶಾಂತಿ ಸಂಕೇತವಾಗಿ’ ನಾವು ಅಭಿಮಾನ್‌ನನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದ್ದರು.

ಮೂರು ದಿನ ಪಾಕಿಸ್ತಾನದ ಸೇನೆಯ ವಶದಲ್ಲಿದ್ದ ಅಭಿನಂದನ್‌ರನ್ನು ಮಾರ್ಚ್.1 ಶುಕ್ರವಾರ ರಾತ್ರಿ 9.20 ಕ್ಕೆ ವಾಘಾ-ಅಟ್ಟಾರ ಗಡಿಯಲ್ಲಿ ಪಾಕಿಸ್ತಾನ ಸೇನೆ ಅಧಿಕಾರಿಗಳು ಭಾರತದ ವಾಯುಪಡೆ ಅಧಿಕಾರಿಗಳಿಗೆ ಒಪ್ಪಿಸುವುದರೊಂದಿಗೆ ಎರಡೂ ದೇಶಗಳ ನಡುವೆ ಮೂಡಿದ್ದ ಯುದ್ಧದ ಭೀತಿಗೆ ತೆರೆ ಎಳೆಯಲಾಗಿತ್ತು.