samachara
www.samachara.com
ಶತಮಾನದ ನಂತರ ‘ಸೆರೆ ಸಿಕ್ಕ’ ಆಫ್ರಿಕಾದ ಕಪ್ಪು ಸುಂದರಿ; ನೀವೂ ಕಣ್ತುಂಬಿಕೊಳ್ಳಿ...
FEATURE STORY

ಶತಮಾನದ ನಂತರ ‘ಸೆರೆ ಸಿಕ್ಕ’ ಆಫ್ರಿಕಾದ ಕಪ್ಪು ಸುಂದರಿ; ನೀವೂ ಕಣ್ತುಂಬಿಕೊಳ್ಳಿ...

ಹಗಲಲ್ಲಿ ಕಾಣಿಸಿಕೊಳ್ಳದ ಕರಿ ಚಿರತೆ ಜನವರಿಯಲ್ಲಿ ರಾತ್ರಿ ಹೊತ್ತು ಕ್ಯಾಮೆರಾ ಮುಂದೆ ಬಂದು ಪೋಸ್ ನೀಡಿ ಹೋಗಿದೆ. ಈ ಮೂಲಕ 1909ರ ನಂತರ ಮೊದಲ ಬಾರಿಗೆ ಅಂದರೆ ಬರೋಬ್ಬರಿ 110 ವರ್ಷಗಳ ನಂತರ ಕರಿ ಚಿರತೆಯೊಂದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

Team Samachara

ಬ್ಲ್ಯಾಕ್‌ ಪ್ಯಾಂಥರ್‌ ಹೆಸರಿನ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಕನ್ನಡದಲ್ಲೂ ‘ಕರಿ ಚಿರತೆ’ ಹೆಸರಿನ ಸಿನಿಮಾ ಬಂದಿತ್ತು. ಇತ್ತೀಚೆಗೆ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ತೊಟ್ಟ ಕಪ್ಪು ಬಣ್ಣದ ಉಡುಗೆ 'ಬ್ಲ್ಯಾಕ್‌ ಪ್ಯಾಂಥರ್‌' ಹೆಸರಿನಿಂದ ಜನಪ್ರಿಯವಾಗಿತ್ತು. ಆದರೆ ಈ ಎಲ್ಲಾ ಅವಧಿಯಲ್ಲಿ ಆಫ್ರಿಕಾದ ಕರಿ ಚಿರತೆಯನ್ನು ಮಾತ್ರ ಎಲ್ಲರೂ ಮರೆತಿದ್ದರು.

ಕನಿಷ್ಠ ಅಂಥಹದ್ದೊಂದು ಪ್ರಾಣಿ ಇದೆಯಾ ಎಂಬುದರ ಬಗ್ಗೆ ಸಣ್ಣ ಆಲೋಚನೆಯನ್ನೂ ಯಾರೊಬ್ಬರು ಮಾಡಿರಲಿಲ್ಲ. ಕೊನೆಗೆ ನನ್ನನ್ನು ನೆನೆಸಿಕೊಳ್ಳುವವರು ಯಾರೂ ಇಲ್ಲ ಎಂದು ಬೇಸರಗೊಂಡ ಆಫ್ರಿಕಾದ ಕರಿ ಚಿರತೆ ತಾನಾಗಿಯೇ ಮುಂದೆ ಬಂದು ತನ್ನ ದರ್ಶನ ನೀಡಿದೆ.

1909ರಲ್ಲಿ ಕೊನೆಯ ಬಾರಿಗೆ ಆಫ್ರಿಕಾದ ಕರಿ ಚಿರತೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿತ್ತು. ಇಥಿಯೋಪಿಯಾದ ಅಡಿಸ್‌ ಅಬಾಬಾದಲ್ಲಿ ಈ ಚಿರತೆ ಕಾಣಿಸಿಕೊಂಡಿತ್ತು. ಅಲ್ಲಿಂದ ನಂತರ ಆಫ್ರಿಕಾ ಖಂಡದಲ್ಲಿ ಯಾರೂ ಕರಿ ಚಿರತೆಯನ್ನು ಕಂಡಿರಲಿಲ್ಲ. ಅಥವಾ ಕಂಡಿದ್ದರೂ ಅದು ಜಾಗತಿಕ ಮಟ್ಟಕ್ಕೆ ತಿಳಿದು ಬಂದಿರಲಿಲ್ಲ.

ಹೀಗಿರುವಾಗ ಕೀನ್ಯಾದ ‘ಲೈಕಿಪಿಯಾ ವೈಲ್ಡರ್ಸ್‌ನೆಸ್‌ ಕ್ಯಾಂಪ್‌’ ಸುತ್ತ ಕರಿ ಚಿರತೆ ಕಂಡಿರುವುದಾಗಿ ಸ್ಥಳೀಯರು ಹೇಳಿದ್ದರು. ಸರಿ ನೋಡೋಣ ಎಂದು ಒಂದಷ್ಟು ಕ್ಯಾಮೆರಾಗಳನ್ನು ಗುಡ್ಡೆ ಹಾಕಿಕೊಂಡು ಬ್ರಿಟನ್‌ನ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ವಿಲ್‌ ಬುರಾಡ್‌ ಲೂಕಾಸ್‌ ಅವುಗಳ ಚಿತ್ರ ತೆಗೆಯಲು ಹೊರಟಿದ್ದರು.

ಆದರೆ ಎಷ್ಟು ಹುಡುಕಿದರೂ ಬ್ಲ್ಯಾಕ್‌ ಪ್ಯಾಂಥರ್‌ ಮಾತ್ರ ಕಣ್ಣಿಗೆ ಬಿದ್ದಿರಲಿಲ್ಲ. ಕೊನೆಗೆ ಅವರು ಒಂದಷ್ಟು ಸೆನ್ಸಾರ್‌ಗಳಿದ್ದ ಅಟೋಮ್ಯಾಟಿಕ್‌ ಕ್ಯಾಮೆರಾಗಳನ್ನು ಚಿರತೆ ಬರುವ ಸಾಧ್ಯತೆಗಳಿದ್ದ ದಾರಿಗಳಲ್ಲಿ ನೆಟ್ಟು ರಾತ್ರಿ ಹೊತ್ತಾದರೂ ಚಿರತೆ ಕಾಣಿಸಿಕೊಳ್ಳಬಹುದು ಎಂದು ಕಾಯುತ್ತಾ ಕುಳಿತರು. ಆಗ ಸೆರೆಯಾದವು ಈ ಚಿತ್ರಗಳು.

ಶತಮಾನದ ನಂತರ ‘ಸೆರೆ ಸಿಕ್ಕ’ ಆಫ್ರಿಕಾದ ಕಪ್ಪು ಸುಂದರಿ; ನೀವೂ ಕಣ್ತುಂಬಿಕೊಳ್ಳಿ...

ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಹಗಲಲ್ಲಿ ಕಾಣಿಸಿಕೊಳ್ಳದ ಕರಿ ಚಿರತೆ ಜನವರಿಯಲ್ಲಿ ರಾತ್ರಿ ಹೊತ್ತು ಕ್ಯಾಮೆರಾ ಮುಂದೆ ಬಂದು ಪೋಸ್ ನೀಡಿ ಹೋಗಿದೆ. ಈ ಮೂಲಕ 1909ರ ನಂತರ ಮೊದಲ ಬಾರಿಗೆ ಬರೋಬ್ಬರಿ 110 ವರ್ಷಗಳ ನಂತರ ಬ್ಲ್ಯಾಕ್‌ ಪ್ಯಾಂಥರ್‌ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

1909ರಲ್ಲಿ ಕರಿ ಚಿರತೆಯ ಚಿತ್ರ ತೆಗೆಯುವಾಗ ಇನ್ನೂ ಬಣ್ಣದ ಚಿತ್ರ ತೆಗೆಯವ ಕ್ಯಾಮೆರಾಗಳು ಬಂದಿರಲಿಲ್ಲ. ಇದೀಗ ಆಫ್ರಿಕಾದ ಕರಿ ಚಿರತೆಯ ಕಲರ್‌ ಚಿತ್ರ ಸೆರೆಯಾಗಿದ್ದು, ಜಾಗತಿಕ ವನ್ಯಜೀವಿ ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.

ಚಿತ್ರ ಸೆರೆ ಹಿಡಿಯುವ ಸಂದರ್ಭದಲ್ಲಿ ಸ್ಯಾನ್‌ ಡಿಯಾಗೋ ಝೂನ ತಜ್ಞರು ಕೂಡ ಅಲ್ಲೇ ಅಧ್ಯಯನಕ್ಕಾಗಿ ಕ್ಯಾಂಪ್‌ ಹಾಕಿಕೊಂಡಿದ್ದರು. ಸೆರೆಯಾಗಿರುವುದು ಕರಿ ಚಿರತೆಯೇ ಎಂಬುದನ್ನು ಇವರು ದೃಢೀಕರಿಸಿದ್ದಾರೆ. ಜತೆಗೆ ಇದು ಹೆಣ್ಣು ಚಿರತೆ ಎಂದು ವಿವರ ನೀಡಿದ್ದಾರೆ.

ಈ ಮೂಲಕ, “ಆಫ್ರಿಕಾದಲ್ಲಿ ಕರಿ ಚಿರತೆಗಳಿವೆ ಎಂಬುದಕ್ಕೆ ಕಳೆದ 100 ವರ್ಷಗಳಲ್ಲಿ ಮೊದಲ ಬಾರಿಗೆ ವೈಜ್ಞಾನಿಕ ಪುರಾವೆ ಸಿಕ್ಕಿದೆ,” ಎಂದು ಸ್ಯಾನ್‌ ಡಿಯಾಗೋ ಝೂನ ತಜ್ಞ ನಿಕೋಲಸ್‌ ಪಿಲ್‌ಫೋರ್ಡ್‌ ತಿಳಿಸಿದ್ದಾರೆ. ಈ ಚಿತ್ರಗಳೀಗ ಜರ್ನಲ್‌ ಆಫ್‌ ಆಫ್ರಿಕನ್‌ ಇಕಾಲಜಿಯಲ್ಲಿ ಪ್ರಕಟವಾಗಿದ್ದು, ಚಿತ್ರಗಳು ಮತ್ತು ವಿಡಿಯೋಗಳ ಗುಣಮಟ್ಟ ತೀರಾ ಅಪರೂದ್ದಾಗಿದ್ದು ಪ್ರಾಣಿಯ ಬಗ್ಗೆ ಅತ್ಯಂತ ಹೆಚ್ಚಿನ ವಿವರಣೆ ಮತ್ತು ಆಳವಾದ ಒಳನೋಟವನ್ನು ನೀಡುತ್ತಿವೆ ಎಂದಿದ್ದಾರೆ.

ಚಿತ್ರ ಕೃಪೆ: www.burrard-lucas.com