samachara
www.samachara.com
ಕಟಕಟೆಯಲ್ಲಿ ಅತ್ಯಾಚಾರದ ಸಂತ್ರಸ್ಥೆಯರು: ರಮೇಶ್ ಕುಮಾರ್ ಹೋಲಿಕೆ, ಕ್ಷಮಾಪಣೆಗಳ ಆಚೆಗೆ...
FEATURE STORY

ಕಟಕಟೆಯಲ್ಲಿ ಅತ್ಯಾಚಾರದ ಸಂತ್ರಸ್ಥೆಯರು: ರಮೇಶ್ ಕುಮಾರ್ ಹೋಲಿಕೆ, ಕ್ಷಮಾಪಣೆಗಳ ಆಚೆಗೆ...

ರಮೇಶ್ ಕುಮಾರ್ ಅವರ ಅಸೂಕ್ಷ್ಮ ಭಾಷೆ ಬಳಕೆಯ ಆಚೆಗೂ ಅವರು ಆಡಿದ ಪ್ರತಿ ಮಾತಿನಲ್ಲಿ ಸತ್ಯವೇ ಇದೆ. ಇಂದು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ಥರಾಗಿರುವವರು ನ್ಯಾಯದ ಮೊರೆ ಹೋದಾಗ ಅನುಭವಿಸುವ ಮಾನಸಿಕ ಯಾತನೆ ಅವರು ವಿವರಿಸಿದ ಮಾದರಿಯಲ್ಲಿಯೇ ಇದೆ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

“ನನಗೆ ತಂದೆ ತಾಯಿ ಇಲ್ಲ. ಸಾಕಿ ಬೆಳೆಸಿದ್ದೆಲ್ಲ ಚಿಕ್ಕಪ್ಪನೆ. ನಾನು 12 ವರ್ಷದವಳಿದ್ದಾಗ ಸ್ವಂತ ಚಿಕ್ಕಪ್ಪನೆ ನನ್ನ ಮೇಲೆ ಅತ್ಯಾಚಾರ ನಡೆಸಿದ. ನಂತರ ಸತತ 9 ವರ್ಷಗಳ ಕಾಲ ಆತ ನನ್ನನ್ನು ಬಳಸಿಕೊಂಡಿದ್ದ. ಆಗ ನನಗೆ ಇದನ್ನು ವಿರೋಧಿಸುವ, ಈ ಹೇಸಿಗೆಯನ್ನು ಪ್ರಶ್ನಿಸಿ ಕಾನೂನು ಮೊರೆ ಹೋಗುವ ಧೈರ್ಯ ಇರಲಿಲ್ಲ; ದಾರಿಯಾಗಲಿ ಗೊತ್ತಿರಲಿಲ್ಲ. ನಾನು ಕಾಲೇಜಿಗೆ ಕಾಲಿಟ್ಟ ನಂತರ ನನಗೆ ಸ್ನೇಹಿತರು ಸಿಕ್ಕಿದರು. ಅವರ ಸಹಾಯದಿಂದ ಚಿಕ್ಕಪ್ಪನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿ, ನ್ಯಾಯಾಂಗ ಹೋರಾಟಕ್ಕೆ ಇಳಿದಿದ್ದೇನೆ. ನನಗೀಗ 23 ವರ್ಷ ಪದವಿಯ ಕೊನೆಯ ವರ್ಷದಲ್ಲಿದ್ದೇನೆ...”

ಇದು 2 ವರ್ಷಗಳ ಹಿಂದೆ ಭಾರಿ ಸುದ್ದಿಯಾದ ಬೆಂಗಳೂರು ಮೂಲದ ಅತ್ಯಾಚಾರ ಪ್ರಕರಣವೊಂದರ ಸಂತ್ರಸ್ಥೆಯ ಹಿನ್ನೆಲೆ ಹಾಗೂ ಪರಿಚಯ.

ಕರ್ನಾಟಕದ ವಿಧಾನಸಭೆಯ ಗಂಭೀರ ಚರ್ಚೆಯ ನಡುವೆ ಸಭಾಧ್ಯಕ್ಷ ರಮೇಶ್ ಕುಮಾರ್ ಅತ್ಯಾಚಾರ ಪ್ರಕರಣಗಳ ಸಂತ್ರಸ್ಥೆಯರ ನ್ಯಾಯಾಂಗ ವಿಚಾರಣೆಯ ವಿಷಯವನ್ನು ಎಳೆದು ತಂದರು. ಹಾಸ್ಯಭರಿತರಾಗಿ ಸಂತ್ರಸ್ಥೆಯರಿಗೆ ತಮ್ಮನ್ನು ತಾವು ಹೋಲಿಕೆ ಮಾಡಿಕೊಂಡ ಸಭಾಧ್ಯಕ್ಷರು, ನ್ಯಾಯಾಂಗ ಪ್ರಕ್ರಿಯೆಯ ಮಾನಸಿಕ ಹಿಂಸೆಯನ್ನು ಅಸೂಕ್ಷ್ಮವಾದ ಭಾಷೆಯಲ್ಲಿ ಬಿಡಿಸಿಟ್ಟರು.

ಸಹಜವಾಗಿಯೇ ಇದು ಮಹಿಳೆಯ ವಿಚಾರದಲ್ಲಿ ಸೂಕ್ಷ್ಮವಾಗಿರುವವರ ಗಮನ ಸೆಳೆಯಿತು. ಅವರಿಂದ ಖಂಡನೆಗೆ ಒಳಗಾಯಿತು. ‘ಸಭಾಧ್ಯಕ್ಷರ ಸ್ಥಾನದಲ್ಲಿ ಕುಳಿತರಿಂದ ಇಂತಹ ಮಾತುಗಳು ಸರಿಯಲ್ಲ’ ಎಂದು ಮಹಿಳಾ ಜನಪ್ರತಿನಿಧಿಗಳೂ ಅಭಿಪ್ರಾಯ ಮಂಡಿಸಿದರು. ಕೊನೆಗೆ, 24 ಗಂಟೆ ಒಳಗೆ ಸ್ಪೀಕರ್ ರಮೇಶ್ ಕುಮಾರ್ ಕ್ಷಮಾಪಣೆ ಕೋರಿದ್ದಾರೆ.

ಕ್ಷಮಾಪಣೆಯ ಆಚೆಗೆ:

ರಮೇಶ್ ಕುಮಾರ್ ಅವರ ಅಸೂಕ್ಷ್ಮವಾಗಿರುವ ಭಾಷೆ ಬಳಕೆಯ ಆಚೆಗೂ ಅವರು ಆಡಿದ ಪ್ರತಿ ಮಾತಿನಲ್ಲಿ ಸತ್ಯವೇ ಇದೆ. ಇವತ್ತು ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ಥರಾಗಿರುವವರು ನ್ಯಾಯದ ಮೊರೆ ಹೋದಾಗ ಅನುಭವಿಸುವ ಮಾನಸಿಕ ಯಾತನೆ ಸಭಾಧ್ಯಕ್ಷರು ವಿವರಿಸಿದ ಮಾದರಿಯಲ್ಲಿಯೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ 2016ರ ಬೆಂಗಳೂರು ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ಕಳೆದ 2 ವರ್ಷಗಳಲ್ಲಿ ಅವರು ಎದುರುಗೊಂಡ ನ್ಯಾಯಾಂಗ ವ್ಯವಸ್ಥೆಯನ್ನು ‘ಸಮಾಚಾರ’ಕ್ಕೆ ವಿವರಿಸುತ್ತಾರೆ.

“ಮೊದಲ ಬಾರಿ ಅತ್ಯಾಚಾರ ನಡೆದಾಗ ನನಗೆ ಕೇವಲ 12 ವರ್ಷ. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಆದರೂ ಕೊನೆಗೊಂದು ದಿನ ಧೈರ್ಯ ಮಾಡಿ ಆತನ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದೆ. ಈ ವಿಚಾರ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಬಹುತೇಕ ಎಲ್ಲಾ ಟಿವಿ ಮಾಧ್ಯಮದವರು ಈ ಸುದ್ದಿಯನ್ನು ಪ್ರಸಾರ ಮಾಡಿದ್ದರು. ಹೀಗಾಗಿ ನನಗೆ ನ್ಯಾಯ ಸಿಗುತ್ತದೆ ಎಂದು ನಂಬಿದ್ದೆ,” ಎಂದವರು ಆರಂಭದ ದಿನಗಳನ್ನು ಬಿಡಿಸಿಟ್ಟರು.

ನಂತರ ಒಳಪಟ್ಟಿದ್ದು ನ್ಯಾಯಾಂಗ ವಿಚಾರಣೆಗೆ. ಅದರ ವಿವರಗಳನ್ನು ಸಂತ್ರಸ್ಥೆ ವಿವರಿಸುವುದು ಹೀಗೆ:

“ಮೊದಲ ಐದು ಬಾರಿ ನನ್ನನ್ನು ಕೋರ್ಟ್‌ಗೆ ಕರೆಸಿ ವಿಚಾರಣೆ ನಡೆಸದೆ ವಾಪಸ್ ಕಳಿಸಿದ್ದರು. ನಂತರ ವಿಚಾರಣೆ ಆರಂಭವಾದಾಗ ನನ್ನ ಎದೆ ಒಡೆದು ಹೋಗುವಂತಿತ್ತು. ಕೇವಲ ನಾಲ್ಕು ಜನ ಮಾತ್ರ ಇದ್ದ ನ್ಯಾಯಾಲಯದಲ್ಲಿ ಕ್ಯಾಮೆರಾಗಳ ಎದುರು ವಿಚಾರಣೆ ಆರಂಭವಾಗಿತ್ತು. (ಇನ್‌ ಕ್ಯಾಮೆರಾ ಪ್ರೊಸೀಡಿಂಗ್ಸ್- ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣಗಳಲ್ಲಿ ನ್ಯಾಯಾಧೀಶರು ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ ನಡೆಸಬೇಕಿದೆ) ನನ್ನ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಜರಾಗುತ್ತಿದ್ದರು. ಅವರ ಎದುರಿಗೇ ಡಿಫೆನ್ಸ್ ಲಾಯರ್ ಕೇಳುತ್ತಿದ್ದ ಒಂದೊಂದು ಪ್ರಶ್ನೆಯೂ ದೇಹದ ಮೇಲೆ ಬೆಂಕಿ ಇಟ್ಟಂತೆ ಅನುಭವವಾಗುತ್ತಿತ್ತು.”

“ತಡವಾಗಿ ಪ್ರಕರಣ ದಾಖಲಿಸಿದ್ದು ಯಾಕೆ? 12 ವಯಸ್ಸಿನಲ್ಲೇ ನಿನಗೆ ಸೆಕ್ಸ್ ಬಗ್ಗೆ ಮಾಹಿತಿ ಇದೆ ಎಂದಾದರೆ ನಿನ್ನ ನಡತೆ ಎಂತಹದ್ದು? ಅತ್ಯಾಚಾರ ಸಂದರ್ಭದಲ್ಲಿ ಆರೋಪಿ ನಿನ್ನನ್ನು ಹೇಗೆ ಮುಟ್ಟಿದ? ಮೊದಲು ಎಲ್ಲಿ ಮುಟ್ಟಿದ? ಬಟ್ಟೆಯನ್ನು ಹೇಗೆ ಕಳಚಿದ? ಆಗ ಯಾವ ಬಣ್ಣದ ಬಟ್ಟೆ ಹಾಕಿದ್ದೆ? ನೀನು ಆಗ ಏಕೆ ಪ್ರತಿಭಟಿಸಲಿಲ್ಲ? ಹೀಗೆ ಹತ್ತಾರು ಅಸಹ್ಯಕರ ಪ್ರಶ್ನೆಗಳ ಮೂಲಕ ನನ್ನನ್ನು ಜೀವಂತ ಕೊಂದರು. ಅವರು ಎದುರಿಗೆ ಪ್ರಶ್ನೆಗಳನ್ನ ಕೇಳ್ತಾ ಇದ್ದರೆ ಮೈಮೇಲೆ ಹುಳ ಬಿಟ್ಟಂಗಾಗುತ್ತೆ. ಪ್ರತಿವಾದದ ಹೆಸರಿನಲ್ಲಿ ನಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತಾರೆ. ನ್ಯಾಯಾಲಯಗಳ ಸಹವಾಸವೇ ಬೇಡ ಅನ್ನಿಸಿ ಪ್ರಕರಣ ವಾಪಾಸ್ ತೆಗೆದುಕೊಳ್ಳುವಂತೆ ಮಾಡುವ ಪ್ರಯತ್ನ ಮಾಡುತ್ತಾರೆ,’’ ಎಂದು ವಿವರಿಸಿದರು ಆಕೆ.

ಆದರೆ ಇಂತಹ ವಿಚಾರಣೆ ಸಾಮಾನ್ಯ ಎನ್ನುತ್ತಾರೆ ವಕೀಲರು. ಇದೇ ಪ್ರಕರಣದಲ್ಲಿ ಸತ್ಯ ಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿರುವ ಪೂಜಾ ವೆಂಕಟೇಶ್, “ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಕಾರಣಕ್ಕೆ ಆರೋಪಿ ಪರ ಹಾಜರಾಗುವ ಡಿಫೆನ್ಸ್ ಲಾಯರ್‌ಗೆ ಎಲ್ಲಾ ರೀತಿಯ ಪ್ರಶ್ನೆಗಳನ್ನೂ ಕೇಳಲು ಅವಕಾಶ ಕಲ್ಪಿಸಲಾಗುತ್ತದೆ,’’ ಎಂದು ಮಾಹಿತಿ ನೀಡುತ್ತಾರೆ. ಮತ್ತು, ಈ ಕಾರಣಕ್ಕಾಗಿಯೇ, “ಎಷ್ಟೋ ಅತ್ಯಾಚಾರ ಪ್ರಕರಣಗಳ ದೂರು ದಾಖಲಾಗುವುದೇ ಇಲ್ಲ,” ಎನ್ನುತ್ತಾರೆ.

ಭಾರತದಲ್ಲಿ ಪ್ರತಿದಿನ 57 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ ಎನ್ನುತ್ತದೆ ಎನ್‌ಸಿಆರ್‌ಬಿ ಅಂಕಿ ಅಂಶಗಳು. ಪ್ರತಿ 30 ನಿಮಿಷಕ್ಕೆ ಒಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತದೆ. 2001 ರಿಂದ 2013ರ ಅವಧಿಯಲ್ಲಿ ಸುಮಾರು 2,64,130 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ವರ್ಷದಿಂದ ವರ್ಷಕ್ಕೆ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಏರುತ್ತಲೇ ಇವೆ.

2008 ರಿಂದ 2012ರ ವರೆಗಿನ 4 ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ 2,798 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಆದರೆ ಶಿಕ್ಷೆಗೆ ಒಳಗಾದರು ಪ್ರಮಾಣ ಮಾತ್ರ ಕೇವಲ ಶೇ.14ಕ್ಕೂ ಕಡಿಮೆ.

ಶಿಕ್ಷೆ ವಿಧಿಸುವ ಮೊದಲು ನಡೆಯುವ ವಿಚಾರಣೆ ‘ನಿಷ್ಪಕ್ಷಪಾತ’ದ ಹೆಸರಿನಲ್ಲಿ ಸಂತ್ರಸ್ಥೆಯರಿಗೆ ಅತ್ಯಂತ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಸೃಷ್ಟಿಸುತ್ತದೆ. 2016ರ ಅತ್ಯಾಚಾರ ಪ್ರಕರಣ ಸಂತ್ರಸ್ಥೆ ಇಂತಹ ಹತ್ತಾರು ಪ್ರಸಂಗಗಳಿಗೆ ಈಡಾಗಿದ್ದಾರೆ ಕೂಡ.

"ವಿಚಾರಣೆ ಆರಂಭವಾದಾಗ ಪೊಲೀಸರು ನನ್ನನ್ನು ನ್ಯಾಯಾಲಯಕ್ಕೆ ಹಿಜಾಬ್ ಹಾಕಿ ಮುಂಭಾಗದಿಂದ ಕರೆತಂದು ಹಿಂಭಾಗದಿಂದ ಕಳುಹಿಸಿದ್ದರು. ಪ್ರತಿಬಾರಿ ನಮ್ಮ ಚಿಕ್ಕಪ್ಪನ ಕಡೆಯ 40-50 ಜನ ನ್ಯಾಯಾಲಯದಲ್ಲಿ ಜಮಾಯಿಸುತ್ತಿದ್ದರು. ನನ್ನ ಅಪಹರಿಸುವ ಪ್ರಯತ್ನವೂ ನಡೆದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈವರೆಗೆ ಅವರು ನಾಲ್ವರು ವಕೀಲರನ್ನು ಬದಲಿಸಿದ್ದಾರೆ. ಹೊಸ ವಕೀಲ ಬಂದಾಗಲೆಲ್ಲ ಮತ್ತೆ ಮೊದಲಿನಿಂದ ವಿಚಾರಣೆ ಆರಂಭಿಸುತ್ತಾರೆ. ಕಳೆದ ಎರಡು ವರ್ಷದಿಂದ ನಾನು ನಿಂತಲ್ಲೇ ನರಕ ಅನುಭವಿಸುತ್ತಿದ್ದೇನೆ. ಅತ್ಯಾಚಾರದ ಕುರಿತ ವಿಚಾರಣೆಯ ಸಂದರ್ಭದಲ್ಲಿ ನಮಗಾಗುವ ನೋವು, ಅಪಮಾನ ಯಾವ ಹೆಣ್ಣು ಮಕ್ಕಳಿಗೂ ಬೇಡ," ಎಂದು ಕಣ್ಣೀರಾಗುತ್ತಾರೆ ಆಕೆ.

ದೇಶದಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣಗಳ ವಿಚಾರಣೆಯ ಪರಿಸ್ಥಿತಿ ಹೀಗಿದೆ. ಇನ್‌ ಕ್ಯಾಮೆರಾ ಹೆಸರಿನಲ್ಲಿ ಮುಚ್ಚಿದ ಕೋಣೆಯಲ್ಲಿ ನಡೆಯುವ ವಿಚಾರಣೆಗಳನ್ನು ಎದುರಿಸಲು ಸಂತ್ರಸ್ಥೆಯರಿಗೆ ಹಿಂಸೆಯಾಗುತ್ತಿದೆ. ಇದನ್ನು ತಮಾಷೆಯ ವಸ್ತುವಾಗಿಸಿಕೊಂಡು, ಅದಕ್ಕೆ ಕ್ಷಮಾಪಣೆ ಕೋರಿದರೆ ಇದರಿಂದ ಸಭೆಯ ಕಾಲಕ್ಷೇಪವಾಯಿತೇ ಹೊರತು, ಇನ್ನೇನೂ ಸಾಧಿಸಿದಂತಾಗುವುದಿಲ್ಲ. ಆಡಿದ ಮಾತಿನ ನೆಪವನ್ನು ಮುಂದಿಟ್ಟುಕೊಂಡು, ಅತ್ಯಾಚಾರ ಸಂತ್ರಸ್ಥೆಯರ ನ್ಯಾಯಾಂಗ ವಿಚಾರಣಾ ಪ್ರಕ್ರಿಯೆಗಳನ್ನು ಬದಲಿಸುವ ಕುರಿತು ಆಲೋಚನೆ ಮಾಡುವುದು ಒಳ್ಳೆಯದು.