samachara
www.samachara.com
ಹೆಂಗಸರು ಮುಟ್ಟಾಗುವುದೇ ತಪ್ಪೇ?:  ನೇಪಾಳದಲ್ಲೊಂದು ವಿದ್ರಾವಕ ಘಟನೆ...
FEATURE STORY

ಹೆಂಗಸರು ಮುಟ್ಟಾಗುವುದೇ ತಪ್ಪೇ?: ನೇಪಾಳದಲ್ಲೊಂದು ವಿದ್ರಾವಕ ಘಟನೆ...

ಆಕೆಯ ಹೆಸರು ಅಂಬಾ ಬೋರಾ ವಯಸ್ಸು ಕೇವಲ 35. ಆಕೆಗೆ ಇಬ್ಬರು ಮಕ್ಕಳು ಒಬ್ಬನಿಗೆ ವಯಸ್ಸು 9 ಮತ್ತೊಬ್ಬನಿಗೆ 12. ಆಕೆ ಮುಟ್ಟಾಗಿದ್ದೆ ಅವಳ ಹಾಗೂ ಆಕೆಯ ಮಕ್ಕಳ ಸಾವಿಗೆ ಕಾರಣವಾಗಬಹುದು ಎಂದು ಸ್ವತಃ ಆಕೆ ಸಹ ಊಹಿಸಿರಲಿಕ್ಕಿಲ್ಲ.

ನೇಪಾಳದ ಕಟ್ಮಂಡುವಿನ ಹಳ್ಳಿಯೊಂದರಲ್ಲಿ ಶತನಮಾನಗಳಿಂದ ಬೇರು ಬಿಟ್ಟುಕೊಂಡಿರುವ ಮೌಢ್ಯ ಸಂಪ್ರದಾಯಕ್ಕೆ ತಾಯಿ ತನ್ನ ಇಬ್ಬರು ಮಕ್ಕಳ ಜೊತೆ ಬುಧವಾರ ಸಾವನ್ನಪ್ಪಿದ್ದಾಳೆ. ಜಗತ್ತು ಆಧುನಿಕವಾಗಿ ಎಷ್ಟೇ ಬದಲಾದರೂ ಕೆಲವು ಸಾಂಪ್ರದಾಯಿಕ ಮನಸ್ಥಿತಿಗಳು ಮಾತ್ರ ಯಾವ ಕಾಲದಲ್ಲೂ ಬದಲಾಗುವುದಿಲ್ಲ ಎಂಬುದಕ್ಕೆ ಈ ಹೃದಯವಿದ್ರಾವಕ ಘಟನೆ ಸಾಕ್ಷಿಯಾಗಿದೆ.

ಆಕೆಯ ಹೆಸರು ಅಂಬಾ ಬೋರಾ ವಯಸ್ಸು ಕೇವಲ 35. ಆಕೆಗೆ ಇಬ್ಬರು ಮಕ್ಕಳು ಒಬ್ಬನಿಗೆ ವಯಸ್ಸು 9 ಮತ್ತೊಬ್ಬನಿಗೆ 12. ಇನ್ನೂ ಜಗತ್ತನ್ನೇ ಕಾಣದ ಮಕ್ಕಳ ಸಾವಿಗೆ ನೇಪಾಳದ ಹಿಂದೂಗಳು ಆಚರಿಸಿಕೊಂಡು ಬರುತ್ತಿರುವ 'ಜೋಪಡಿ' ಎಂಬ ಅನಿಷ್ಟ ಪದ್ಧತಿ ಅನಾಮತ್ತಾಗಿ ಮರಣ ಶಾಸನ ಬರೆದುಬಿಟ್ಟಿದೆ. ಆಕೆ ಮುಟ್ಟಾಗಿದ್ದೆ ಅವಳ ಹಾಗೂ ಆಕೆಯ ಮಕ್ಕಳ ಸಾವಿಗೆ ಕಾರಣವಾಗಬಹುದು ಎಂದು ಸ್ವತಃ ಆಕೆ ಸಹ ಊಹಿಸಿರಲಿಕ್ಕಿಲ್ಲ.

ನೇಪಾಳದಲ್ಲಿ ಕೆಲ ಸಂಪ್ರದಾಯವಾದಿ ಮನಸ್ಥಿತಿಗಳು ಈಗಲೂ ಹೆಂಗಸರು ಮುಟ್ಟಾಗುವುದನ್ನು, ಹೆರಿಗೆಯ ನಂತರದ ದಿನಗಳನ್ನು ಅಪವಿತ್ರ ಎಂದೇ ಭಾವಿಸಿವೆ. ಮುಟ್ಟಾದ ಹೆಂಗಸರು ದೇವರ ವಿಗ್ರಹವನ್ನಾಗಲಿ, ವ್ಯಕ್ತಿಗಳನ್ನಾಗಲಿ ಅಥವಾ ಮನೆಯ ಯಾವುದೇ ವಸ್ತುಗಳನ್ನು ಮುಟ್ಟುವುದು ಅಪವಿತ್ರ ಹಾಗೂ ಅದು ಕೇಡಿನ ಸೂಚಕ ಎಂದೇ ನಂಬಲಾಗುತ್ತಿದೆ. ಹೀಗಾಗಿ ಹೆಂಗಸರು ಮುಟ್ಟಾದಾಗ ಅಥವಾ ಹೆರಿಗೆಯಾದ ಸಂದರ್ಭದಲ್ಲಿ ಆಕೆಯನ್ನು ಆಕೆಯ ಮಕ್ಕಳ ಜೊತೆಗೆ ಊರಿನಿಂದ ಹೊರಗೆ ಕಳುಹಿಸುವುದು ಇಲ್ಲಿನ ಸಂಪ್ರದಾಯ.

ಊರಿನಿಂದ ಹೊರನಡೆಯುವ ಮಹಿಳೆಯರು ಅಲ್ಲೇ ನಿರ್ಮಿಸಲಾಗಿರುವ ಸಣ್ಣ ಬಾಗಿಲಿಲ್ಲದ ಜೋಪಡಿಯಲ್ಲೇ (ಗುಡಿಸಲು) ಜೀವನ ಕಳೆಯಬೇಕು. ಮುಟ್ಟಿನ ಅವಧಿ ಮುಗಿದ ನಂತರವೇ ಅವರಿಗೆ ಮತ್ತೆ ಊರಿನೊಳಕ್ಕೆ ಪ್ರವೇಶ. ಹೀಗೆ ಮುಟ್ಟಾದ ಕಾರಣ ಊರಿನಿಂದ ತನ್ನ ಮಕ್ಕಳ ಸಮೇತ ಹೊರ ನಡೆದ ಅಂಬಾ ಬೋರಾ, ತನ್ನ ಮುಟ್ಟಿನ ದಿನಗಳನ್ನು ಅಲ್ಲೇ ಕಳೆದಿದ್ದಾಳೆ.

ಆದರೆ ನೇಪಾಳದಲ್ಲಿ ಇದು ಮೈ ಮರಗಟ್ಟುವ ಚಳಿಗಾಲ. ಹೀಗಾಗಿ ಆಕೆ ಮಕ್ಕಳಿಗೆ ಚಳಿ ಕಾಯಿಸಲು ಮನೆಯೊಳಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಹಚ್ಚಿದ್ದಾಳೆ. ಆದರೆ ಮನೆತುಂಬ ಹೊಗೆ ಅವರಿಸಿ ಉಸಿರಾಡಲೂ ಸಾಧ್ಯವಾಗದೆ, ಉಸಿರುಗಟ್ಟಿ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮಾರನೇಯ ದಿನ ಬೆಳಗ್ಗೆ ಆಕೆಯ ಅತ್ತೆ ಚೋಪಡಿಯ ಬಳಿಗೆ ಬಂದಾಗ ಪ್ರಕರಣ ಬಯಲಾಗಿದೆ.

ಅನಿಷ್ಟ ಪದ್ಧತಿಗೆ ಮಹಿಳೆಯರು ಜೀವ ಚೆಲ್ಲುತ್ತಿರುವುದು ನೇಪಾಳದಲ್ಲಿ ಇದೇ ಮೊದಲೇನಲ್ಲ. ಈ ಅನಿಷ್ಟ ಪದ್ಧತಿಯಿಂದಾಗಿ ಈಗಾಗಲೇ ಸಾಕಷ್ಟು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ 21 ವರ್ಷದ ಮಹಿಳೆ ಮುಟ್ಟಿನ ಸಂದರ್ಭದಲ್ಲಿ ಜೋಪಡಿಯಲ್ಲಿ ಮಲಗಿದ್ದಾಗ ಉಸಿರುಗಟ್ಟಿ ಸತ್ತಿದ್ದಳು, ಅಲ್ಲದೆ ಅದೇ ತಿಂಗಳ ಮತ್ತೊಬ್ಬಳು ಹಾವು ಕಚ್ಚಿದ್ದರಿಂದ ಸಾವನ್ನಿಪ್ಪಿದ್ದಳು.

ನೇಪಾಳದಲ್ಲಿ ಈ ಮೌಢ್ಯ ಪದ್ಧತಿ ನಿಷೇಧಿಸಲ್ಪಟ್ಟು ದಶಕಗಳೇ ಕಳೆದಿವೆ. 'ಜೋಪಡಿ' ಪದ್ಧತಿಯನ್ನು ಒತ್ತಾಯಪೂರ್ವಕವಾಗಿ ಮಹಿಳೆಯರ ಮೇಲೆ ಹೇರುವುದು ಕಂಡು ಬಂದರೆ ಅಂತವರಿಗೆ 3 ತಿಂಗಳು ಜೈಲು ಹಾಗೂ 3 ಸಾವಿರ ದಂಡ ವಿಧಿಸುವ ಕಾನೂನು ಚಾಲ್ತಿಯಲ್ಲಿದೆ. ಆದರೂ ಸಂಪ್ರದಾಯವಾದಿ ಮನಸ್ಥಿತಿಗಳ ಮುಂದೆ ಯಾವ ಕಾನೂನುಗಳು ಸಹ ಏನೂ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಷ್ಟೆ.

ಪ್ರಸ್ತುತ ನೇಪಾಳ ಸರಕಾರ ಹಾಗೂ ಮಾನವ ಹಕ್ಕು ಆಯೋಗ ಅಂಬಾ ಬೋರಾ ಹಾಗೂ ಆಕೆಯ ಮಕ್ಕಳ ಧಾರುಣ ಸಾವಿನ ನಂತರ ಎಚ್ಚೆತ್ತಿದೆ. 'ಮೌಢ್ಯ ಕಂದಾಚಾರಗಳ ವಿರುದ್ಧ ಕಾನೂನುಗಳು ಕಠಿಣವಾಗದೆ ಮಹಿಳೆಯರ ಸಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ' ಎಂದು ನೇಪಾಳದ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಆಯುಕ್ತೆ ಮೋನಾ ಅನ್ಸಾರಿ ಹೇಳಿದ್ದಾರೆ.

ನಮ್ಮ ನೆರೆ ರಾಷ್ಟ್ರವಾದ ನೇಪಾಳದಲ್ಲಿ ಇನ್ನಾದರೂ ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಕಠಿಣ ಕಾನೂನುಗಳು ಜಾರಿಯಾಗಲಿ. ಅದೇ ವೇಳೆ ನಮ್ಮಲ್ಲಿಯೇ ಜಾರಿಯಲ್ಲಿರುವ ಇಂತಹ ಪದ್ಧತಿಗಳನ್ನು ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಉಳಿಸಿಕೊಳ್ಳುವ ಹುನ್ನಾರಗಳು ಕಡಿಮೆಯಾಗಲಿ. ಜಗತ್ತಿನ ಮಹಿಳೆಯರು ನೆಮ್ಮದಿಯಾಗಿ ಬದುಕುವಂತಾಗಲಿ ಎಂಬುದು ಆಶಯವಾಗಿರಲಿ.