ಬಾಹ್ಯಾಕಾಶದಿಂದ ಬರುತ್ತಿರುವ ನಿಗೂಢ ‘ರೇಡಿಯೋ ಸಿಗ್ನಲ್ಸ್‌’ ಬೆನ್ನತ್ತಿ...
FEATURE STORY

ಬಾಹ್ಯಾಕಾಶದಿಂದ ಬರುತ್ತಿರುವ ನಿಗೂಢ ‘ರೇಡಿಯೋ ಸಿಗ್ನಲ್ಸ್‌’ ಬೆನ್ನತ್ತಿ...

ಫ್ಲಾಷ್‌ ಲೈಟ್‌ನಂತೆ ಮೈಕ್ರೋ ಸೆಕೆಂಡ್‌ನಲ್ಲಿ ಬಂದು ಹೋಗುವ ಈ ಎಫ್‌ಆರ್‌ಬಿಗಳು ಪ್ರಬಲವಾಗಿರುತ್ತವೆ. ಎಷ್ಟರ ಮಟ್ಟಿಗೆ ಅಂದರೆ ಸೂರ್ಯ 10,0000 ವರ್ಷಗಳಲ್ಲಿ ಉತ್ಪಾದಿಸಿದ ಶಕ್ತಿಯಷ್ಟು.

ಬಾಹ್ಯಾಕಾಶದಿಂದ ನಿರಂತರವಾಗಿ ಬರುತ್ತಿರುವ ನಿಗೂಢ ರೇಡಿಯೋ ಅಲೆಗಳು ವಿಜ್ಞಾನಿಗಳಿಗೆ ಕೌತುಕ ಹುಟ್ಟಿಸಿದೆ. ಪದೇ ಪದೇ ಬರುತ್ತಿರುವ ಈ ‘ಫಾಸ್ಟ್‌ ರೇಡಿಯೋ ಬರ್ಸ್ಟ್‌ (ಎಫ್‌ಆರ್‌ಬಿ)’ಗಳ ಬಗ್ಗೆ ತಮ್ಮದೇ ಆದ ಸಿದ್ಧಾಂತಗಳನ್ನು ವಿಜ್ಞಾನಿಗಳು ನೇಚರ್‌ ನಿಯತಕಾಲಿಕದಲ್ಲಿ ಬಹಿರಂಗಗೊಳಿಸಿದ್ದಾರೆ.

ಒಟ್ಟು 13 ಎಫ್‌ಆರ್‌ಬಿಗಳು ಭಿನ್ನ ಪುನರಾವರ್ತನೆಗಳನ್ನು ಹೊಂದಿದ್ದು, 1.5 ಜ್ಯೋತಿರ್‌ವರ್ಷ ದೂರದಲ್ಲಿರುವ ಒಂದೇ ಮೂಲದಿಂದ ಬರುತ್ತಿರುವುದು ವಿಶೇಷ. ಆದರೆ ಇದಕ್ಕೆ ಸೂಕ್ತ ಉತ್ತರವನ್ನು ಕಂಡುಕೊಳ್ಳಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ. “ಎಫ್‌ಆರ್‌ಬಿಗಳು ಪ್ರಕ್ಷುಬ್ಧವಾಗಿರುವ, ದಟ್ಟ ಮತ್ತು ಕ್ರಮಬದ್ಧವಲ್ಲದ ಗಾಲಾಕ್ಷಿಗಳಿಂದ ಹುಟ್ಟಿಕೊಂಡಿರುವಂತೆ ಕಾಣಿಸುತ್ತದೆ,” ಎನ್ನುತ್ತಾರೆ ಕೆನಡಾದ ಮೆಕ್‌ಗಿಲ್‌ ವಿವಿಯ ಖಗೋಳ ಶಾಸ್ತ್ರಜ್ಞ ಮತ್ತು ಅಧ್ಯಯನಗಳ ಸಹ ಲೇಖಕ ಶ್ರೀಹರ್ಷ ತೆಂಡೂಲ್ಕರ್.

‘ಅಲ್‌ಜಝೀರಾ’ಗೆ ಪ್ರತಿಕ್ರಿಯೆ ನೀಡಿರುವ ಅವರು, ಒಂದೊಮ್ಮೆ ಸ್ಪೋಟಗಳು ಮತ್ತೆ ಮತ್ತೆ ನಡೆಯುತ್ತಿದ್ದಲ್ಲಿ ಮೂಲ ಮಾದರಿ ನಶಿಸಿ ಹೋಗಿರುವ ಸಾಧ್ಯತೆ ಇರುತ್ತದೆ ಎಂದು ವಿವರಿಸಿದ್ದಾರೆ. “ಎರಡು ನ್ಯೂಟ್ರಾನ್‌ ಸ್ಟಾರ್‌ಗಳ ವಿಲೀನ ಅಥವಾ ಒಂದು ನ್ಯೂಟ್ರಾನ್ ಸ್ಟಾರ್‌ ಮತ್ತು ಕಪ್ಪು ಕುಳಿಯ ವಿಲೀನದಿಂದಲೂ ಎಫ್‌ಆರ್‌ಬಿಗಳು ಬಿಡುಗಡೆಯಾಗುತ್ತವೆ,” ಎನ್ನುವ ತೆಂಡೂಲ್ಕರ್‌, ಆದರೆ ಇದು ಪುನರಾವರ್ತನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

ಫ್ಲಾಷ್‌ ಲೈಟ್‌ನಂತೆ ಮೈಕ್ರೋ ಸೆಕೆಂಡ್‌ನಲ್ಲಿ ಬಂದು ಹೋಗುವ ಈ ಎಫ್‌ಆರ್‌ಬಿಗಳು ಪ್ರಬಲವಾಗಿರುತ್ತವೆ. ಎಷ್ಟರ ಮಟ್ಟಿಗೆ ಅಂದರೆ ಸೂರ್ಯ 10,000 ವರ್ಷಗಳಲ್ಲಿ ಉತ್ಪಾದಿಸಿದ ಶಕ್ತಿಯಷ್ಟು ಎಂದು ತಿಳಿಸುತ್ತಾರೆ ಅವರು. ಹಾಗಂಥ ಎಫ್‌ಆರ್‌ಬಿಗಳು ಅಪರೂಪವೇನಲ್ಲ. 2007ರಿಂದ ಈ ರೀತಿಯ 60 ಎಫ್‌ಆರ್‌ಬಿಗಳು ಪತ್ತೆಯಾಗಿವೆ. ಆದರೆ ಇದಕ್ಕೆ ಕಾರಣ ಏನು ಎಂಬ ಬಗ್ಗೆ ಗಂಭೀರ ಚರ್ಚೆ, ಅಧ್ಯಯನಗಳು ಆರಂಭವಾಗಿವೆ.

ಇದನ್ನು ಬೇರೊಂದು ಗ್ರಹದಲ್ಲಿರುವ ಬುದ್ಧಿವಂತ ಜೀವಿಗಳು ಕಳುಹಿಸಿರಬಹುದು ಎಂಬ ಸಾಧ್ಯತೆಗಳು ತೀರಾ ತೀರಾ ವಿರಳ ಎನ್ನುತ್ತಾರೆ ತೆಂಡೂಲ್ಕರ್‌. “ಓರ್ವ ವಿಜ್ಞಾನಿಯಾಗಿ ನಾನು ಇದನ್ನು 100ಕ್ಕೆ ನೂರರಷ್ಟು ತಳ್ಳಿ ಹಾಕಲು ಸಾಧ್ಯವಿಲ್ಲ. ಆದರೆ ಈ ಎಫ್‌ಆರ್‌ಬಿಗಳಿಗೆ ಬುದ್ಧಿವಂತ ಜೀವಿಗಳೇ (ಏಲಿಯನ್ಸ್‌) ಮೂಲ ಎಂಬುದು ಯಾವುದೇ ಖಗೋಳಶಾಸ್ತ್ರಜ್ಞರ ತಲೆಯಲ್ಲಿ ಇಲ್ಲ,” ಎಂಬುದು ಅವರ ವಿವರಣೆ.

 ‘ಕೆನಡಿಯನ್‌ ಹೈಡ್ರೋಜನ್‌ ಇಂಟೆನ್ಸಿಟಿ ಮ್ಯಾಪಿಂಗ್‌ ಎಕ್ಸಪರಿಮೆಂಟ್‌’ (ಸಿಎಚ್‌ಐಎಂಇ) ಭಾಗವಾಗಿ ಅಳವಡಿಸಿರುವ ಶಕ್ತಿಶಾಲಿ ಟೆಲಿಸ್ಕೋಪ್ ಹೀಗಿದೆ. 
‘ಕೆನಡಿಯನ್‌ ಹೈಡ್ರೋಜನ್‌ ಇಂಟೆನ್ಸಿಟಿ ಮ್ಯಾಪಿಂಗ್‌ ಎಕ್ಸಪರಿಮೆಂಟ್‌’ (ಸಿಎಚ್‌ಐಎಂಇ) ಭಾಗವಾಗಿ ಅಳವಡಿಸಿರುವ ಶಕ್ತಿಶಾಲಿ ಟೆಲಿಸ್ಕೋಪ್ ಹೀಗಿದೆ. 

ಈ ರೇಡಿಯೋ ಅಲೆಗಳನ್ನು ‘ಕೆನಡಿಯನ್‌ ಹೈಡ್ರೋಜನ್‌ ಇಂಟೆನ್ಸಿಟಿ ಮ್ಯಾಪಿಂಗ್‌ ಎಕ್ಸಪರಿಮೆಂಟ್‌ (ಸಿಎಚ್‌ಐಎಂಇ)‘ ಪತ್ತೆ ಹಚ್ಚಿದೆ. ಇದು ವಿಶ್ವದ ಶಕ್ತಿಶಾಲಿ ರೇಡಿಯೋ ಟೆಲಿಸ್ಕೋಪ್‌ ಆಗಿದ್ದು, ಒಂದು ಫುಟ್‌ಬಾಲ್‌ ಗ್ರೌಂಡ್‌ನಷ್ಟು ವಿಸ್ತಾರದಲ್ಲಿದೆ. ಕೆನಡಾದ ಬ್ರಿಟಿಷ್‌ ಕೊಲಂಬಿಯಾನ ಭಾಗದಲ್ಲಿ ಇದನ್ನು ಸ್ಥಾಪಿಸಲಾಗಿದ್ದು, 100 ಮೀಟರ್‌ ಉದ್ದದ ಅರ್ಧ ವೃತ್ತಾಕಾರದ ನಾಲ್ಕು ಪೈಪ್‌ಗಳು ಇದರಲ್ಲಿವೆ. ಸಾವಿರಕ್ಕೂ ಹೆಚ್ಚು ಆಂಟೆನಾಗಳನ್ನು ಇದು ಒಳಗೊಂಡಿದ್ದು, ರೆಡಿಯೋ ಸಿಗ್ನಲ್‌ಗಳನ್ನು ರೆಕಾರ್ಡ್‌ ಮಾಡಿಕೊಂಡು ಬಾಹ್ಯಾಕಾಶದ ಚಿತ್ರಗಳನ್ನು ಪುನರ್‌ರಚಿಸುವ ಸಾಮರ್ಥ್ಯ ಹೊಂದಿವೆ.

ಈ ಬೇಸಿಗೆಯಲ್ಲಿ ‘ಸಿಎಚ್‌ಐಎಂಇ’ಯ ಸ್ಥಾಪನೆ ನಡೆಯುತ್ತಿದ್ದಾಗಲೇ ಈ ಎಫ್‌ಆರ್‌ಬಿಗಳನ್ನು ಗುರುತಿಸಲಾಗಿತ್ತು. ಆಗಿನ್ನೂ ರೇಡಿಯೋ ಟೆಲಿಸ್ಕೋಪ್‌ ಪೂರ್ಣ ಪ್ರಮಾಣದಲ್ಲಿ ಸ್ಥಾಪಿನೆಯಾಗಿರಲಿಲ್ಲ. ಮುಂದೆ ಪೂರ್ಣ ಪ್ರಮಾಣದಲ್ಲಿ ಸ್ಥಾಪನೆಯಾದ ನಂತರ ಇದೀಗ ಈ ರೀತಿಯ ಇನ್ನೂ ಹೆಚ್ಚಿನ ರೇಡಿಯೋ ಸಿಗ್ನಲ್‌ಗಳು ದಾಖಲಾಗುತ್ತಿವೆ.

ಅನ್ಯ ಗ್ರಹಗಳಲ್ಲಿ ಅಥವಾ ಬಾಹ್ಯಾಕಾಶದಲ್ಲಿ ನಮ್ಮಂತೆಯೇ ಜೀವಿಗಳು ಇರಬಹುದು, ಏಲಿಯನ್‌ಗಳ ಅಸ್ಥಿತ್ವದಲ್ಲಿವೆ ಎಂಬ ವಾದಗಳಿಗೆ ಪೂರಕವಾಗಿ ಇಂತಹ ರೇಡಿಯೋ ಸಂಕೇತಗಳು ಹೊಸ ಹುಡುಕಾಟಕ್ಕೆ ಪ್ರೇರಣೆ ನೀಡುತ್ತವೆ. ಇದೀಗ ಇಂತಹ ರೇಡಿಯೋ ವೇವ್‌ಗಳನ್ನು ವಿಜ್ಞಾನಿಗಳು ಬೆನ್ನತ್ತಿದ್ದಾರೆ. ಮುಂದೊಂದು ದಿನ ಬಾಹ್ಯಕಾಶದಲ್ಲಿ ಅಡಗಿರಬಹುದಾದ ಕೌತುಕಗಳನ್ನು ಇವು ತೆರೆದಿಟ್ಟರೂ ಇಡಬಹುದು.