samachara
www.samachara.com
ಹರಪ್ಪ ನಾಗರೀಕತೆಯನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ದ ಸಮಾಧಿಯಲ್ಲಿ ಸಿಕ್ಕ ‘ನಿಗೂಢ ಜೋಡಿ’!
FEATURE STORY

ಹರಪ್ಪ ನಾಗರೀಕತೆಯನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ದ ಸಮಾಧಿಯಲ್ಲಿ ಸಿಕ್ಕ ‘ನಿಗೂಢ ಜೋಡಿ’!

ಅರ್ಧ ಮೀಟರ್‌ ಆಳದ ಮರಳಿನ ಹೊಂಡದಲ್ಲಿ ಅವರನ್ನು ಹೂಳಲಾಗಿತ್ತು. ಹೂಳುವಾಗ ಆತನಿಗೆ 38 ವರ್ಷ, ಆಕೆಗೆ 35 ವರ್ಷ ಎಂದು ಅಂದಾಜಿಸಲಾಗಿದೆ. ಸಿಕ್ಕಿರುವ ಈ ಶವಗಳು ಹೇಳುತ್ತಿರುವ ಕತೆ ಕುತೂಹಲಕಾರಿಯಾಗಿದೆ. 

ಅವರಿಬ್ಬರು 5,500 ವರ್ಷಗಳ ಹಿಂದೆ ಬದುಕಿದ್ದವರು. ವಿಶ್ವದ ಪುರಾತನ ನಾಗರೀಕತೆಗಳಲ್ಲಿ ಒಂದಾದ ಹರಪ್ಪ ನಾಗರೀಕತೆಯ ಅವಧಿಯಲ್ಲಿ ಬಾಳಿ ಬದುಕಿದವರು. 2015ರಲ್ಲಿ ಇವತ್ತಿನ ಹರ್ಯಾಣದ ರಖಿಗರಿ ಗ್ರಾಮದಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾದ ಪ್ರಾಚ್ಯಶಾಸ್ತ್ರಜ್ಞರು ಉತ್ಖನನ ನಡೆಸುತ್ತಿದ್ದಾಗ ಇವರಿಬ್ಬರ ಶವಗಳು ಸಮಾಧಿಯೊಳಗೆ ಸಿಕ್ಕಿದವು.

ಅವರಿಬ್ಬರನ್ನೂ ಒಟ್ಟಿಗೆ ಸಮಾಧಿ ಮಾಡಲಾಗಿತ್ತು. ಇದು ತಜ್ಞರಿಗೆ ಬೆರಗು ಮೂಡಿಸಿತ್ತು. ಯಾಕೆಂದರೆ ಯಾವುದೇ ನಾಗರೀಕತೆಯ ಉತ್ಖನನ ಸಂದರ್ಭದಲ್ಲಿ ಈ ರೀತಿ ಜೋಡಿಗಳು ಒಟ್ಟಾಗಿ ಸಿಗುವುದು ತೀರಾ ತೀರಾ ಅಪರೂಪ. ಅದರಲ್ಲೂ ಹರಪ್ಪ ನಾಗರೀಕತೆಯಲ್ಲಿ ಸತಿ ಪದ್ಧತಿಯಂತ ವ್ಯವಸ್ಥೆಗಳು ಇದ್ದ ಕುರುಹುಗಳಿಲ್ಲ. ಜತೆಗೆ 62ಕ್ಕೂ ಹೆಚ್ಚು ಸಮಾಧಿಗಳು ಸಿಕ್ಕಿದ್ದು ಎಲ್ಲೂ ಜೋಡಿ ಸಮಾಧಿಗಳು ಸಿಕ್ಕಿಲ್ಲ. ಹೀಗಿರುವಾಗ ಸಮಾಧಿಯೊಳಗೆ ಜೋಡಿ ಸಿಕ್ಕಿರುವುದು ಹರಪ್ಪ ನಾಗರೀಕತೆ ಉತ್ಖನದಲ್ಲೇ ಅತೀ ವಿಶೇಷವಾದುದು. ಸರಿ ಅವುಗಳ ಮೇಲೆ ಸಂಶೋಧನೆ, ಅಧ್ಯಯನ ಶುರುವಿಟ್ಟುಕೊಂಡರು. ಹಾಗೆ ಅಧ್ಯಯನ ನಡೆಸುತ್ತಾ ಹೋದವರಿಗೆ ಹಲವು ಸತ್ಯಗಳು ತಿಳಿದು ಬಂದಿವೆ.

ಇವುಗಳನ್ನೆಲ್ಲಾ ಒಟ್ಟು ಸೇರಿಸಿ ಅಂತರಾಷ್ಟ್ರೀಯ ವಿಜ್ಞಾನ ಮ್ಯಾಗಜೀನ್‌ ‘ಎಸಿಬಿ ಜರ್ನಲ್‌ ಆಫ್‌ ಅನಾಟಮಿ ಆಂಡ್‌ ಸೆಲ್‌ ಬಯಾಲಜಿ’ಯಲ್ಲಿ ಒಂದು ಲೇಖನ ಪ್ರಕಟವಾಗಿದೆ. “ಜೋಡಿಗಳಿಬ್ಬರೂ ಒಬ್ಬರನ್ನೊಬ್ಬರು ದಿಟ್ಟಿಸುತ್ತಿರುವ ಭಂಗಿಯಲ್ಲಿ ಸಿಕ್ಕಿದ್ದಾರೆ. ನಾವು ಅವರನ್ನು ಜೋಡಿಗಳು ಎಂದು ಭಾವಿಸಿದ್ದೇವೆ. ಇಬ್ಬರೂ ಒಂದೇ ಸಮಯದಲ್ಲಿ ಸತ್ತಿದ್ದಾರೆ ಎಂದು ಕಾಣುತ್ತಿದೆ. ಹೀಗಾಗಿ ಒಟ್ಟಿಗೆ ಸಮಾಧಿ ಮಾಡಿರಬೇಕು. ಆದರೆ ಹೇಗೆ ಸತ್ತರು ಎಂಬುದು ನಿಗೂಢವಾಗಿದೆ,” ಎನ್ನುತ್ತಾರೆ ಅಧ್ಯಯನ ತಂಡದ ಮುಖ್ಯಸ್ಥರಾದ ವಸಂತ್‌ ಶಿಂಧೆ.

ಅರ್ಧ ಮೀಟರ್‌ ಆಳದ ಮರಳಿನ ಹೊಂಡದಲ್ಲಿ ಅವರನ್ನು ಹೂಳಲಾಗಿತ್ತು. ಹೂಳುವಾಗ ಆತನಿಗೆ 38 ವರ್ಷ, ಆಕೆಗೆ 35 ವರ್ಷ ಎಂದು ಅಂದಾಜಿಸಲಾಗಿದೆ. ಇಬ್ಬರೂ ಸಾಮಾನ್ಯ ಎತ್ತರವನ್ನು ಹೊಂದಿದ್ದರು. ಆತ 5.8 ಅಡಿ ಎತ್ತರವಿದ್ದರೆ, ಆಕೆ 5.6 ಅಡಿ ಎತ್ತರವಿದ್ದಳು. ಸಾಯುವಾಗ ಅವರಿಬ್ಬರೂ ಆರೋಗ್ಯವಂತರಾಗಿದ್ದರು. ಅವರ ಮೂಳೆಯಲ್ಲಿ ಯಾವುದೇ ಖಾಯಿಲೆ, ರೋಗದ ಲಕ್ಷಗಳು ಕಂಡು ಬಂದಿಲ್ಲ. ಯಾವುದೇ ಗಾಯದ ಗುರುತುಗಳು, ಮೆದುಳು ಜ್ವರದಂಥ ರೋಗದ ಲಕ್ಷಣಗಳೂ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಸಮಾಧಿಯಲ್ಲಿ ಕುಂಬಾರಿಕೆಯ ವಸ್ತುಗಳು ಮತ್ತು ಮಹಿಳೆಯ ಭುಜದ ಸಮೀಪ ಮಣಿಯೊಂದು ಸಿಕ್ಕಿದ್ದು ಇದು ಹಾರದ ಭಾಗವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಹರಪ್ಪ ನಾಗರೀಕತೆಯ ಕಾಲದ ಸಮಾಧಿಗಳು.
ಹರಪ್ಪ ನಾಗರೀಕತೆಯ ಕಾಲದ ಸಮಾಧಿಗಳು.
/ಬಿಬಿಸಿ

ಹರಪ್ಪ ನಾಗರೀಕತೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಾ ಬಂದವರಿಗೆ ಸಮಾಧಿಗಳಲ್ಲಿ ಸಾಮಾನ್ಯವಾಗಿ ಮಡಿಕೆಯ ಚೂರುಗಳು, ಕಲ್ಲಿನ ಆಭರಣಗಳು ಸಿಗುತ್ತವೆ. ಕಾರಣ ಹರಪ್ಪ ನಾಗರೀಕತೆಯ ಮನುಷ್ಯರು ಐಶಾರಾಮಿಗಳಲ್ಲ. ಹೀಗಾಗಿ ಪಶ್ಚಿಮ ಏಷ್ಯಾದ ರಾಜರ ರೀತಿ ಅವರಿಗೆ ಐಶಾರಾಮಿ ಅಂತ್ಯ ಸಂಸ್ಕಾರ ಸಿಗುತ್ತಿರಲಿಲ್ಲ ಎನ್ನುತ್ತಾರೆ ಭಾರತದ ಪೂರ್ವಜರ ಬಗ್ಗೆ ಪುಸ್ತಕವೊಂದನ್ನು ಬರೆದ ಟೋನಿ ಜೋಸೆಫ್‌.

ಮೆಸೆಪೊಟೇಮಿಯಾ ನಾಗರೀಕತೆಯನ್ನೇ ತೆಗೆದುಕೊಂಡರೆ ಇಲ್ಲಿನ ರಾಜರುಗಳನ್ನು ಬೆಲೆಬಾಳುವ ಆಭರಗಳೊಂದಿಗೆ ಹೂಳಲಾಗುತ್ತಿತ್ತು. ಇಲ್ಲಿ ಕೆಲವು ಸಮಾಧಿಗಳಲ್ಲಿ ಹರಪ್ಪ ನಾಗರೀಕತೆಯ ಆಭರಣಗಳೂ ಸಿಕ್ಕಿವೆ. ಇವೆಲ್ಲಾ ಇಲ್ಲಿಂದ ಅಲ್ಲಿಗೆ ಮಾರಾಟಗೊಂಡವು ಎಂದು ನಂಬಲಾಗಿದೆ. ಆದರೆ ಹರಪ್ಪ ನಾಗರೀಕತೆಯ ಸಮಾಧಿಗಳು ಹಾಗಲ್ಲ. ಇಲ್ಲಿ ಮಣ್ಣಿನ ಮಡಿಕೆಗಳಲ್ಲಿ ಆಹಾರ, ನೀರು, ಒಂದಷ್ಟು ಆಭರಣಗಳನ್ನಷ್ಟೇ ಇಟ್ಟು ಹೂಳುತ್ತಿದ್ದರು. ಈ ಮಡಿಕೆಗಳ ಮೇಲೆ ಭಕ್ಷ್ಯಗಳ ಚಿತ್ರಗಳನ್ನು ಬಿಡಿಸುವ ರೂಢಿಯೂ ಇತ್ತು. ವ್ಯಕ್ತಿಗಳ ಸಾವಿನ ನಂತರದ ಬದುಕಿದೆ ಎಂದು ನಂಬಿದ್ದವರು ಇವುಗಳನ್ನು ಜತೆಗೇ ಹೂಳುತ್ತಿದ್ದರು. ಆದರೆ ಪಶ್ಚಿಮ ಏಷ್ಯಾದಲ್ಲಿ ಸಾಮಾನ್ಯವಾಗಿದ್ದ ರಾಜವೈಭೋಗದ ಅಂತ್ಯ ಸಂಸ್ಕಾರ ಹರಪ್ಪ ನಾಗರೀಕತೆಯಲ್ಲಿ ಯಾವತ್ತೂ ಕಾಣ ಸಿಕ್ಕಿಲ್ಲ.

ರಖಿಗರಿ ಎಂಬ ಬೃಹತ್‌ ಜನವಸತಿ ಪ್ರದೇಶ:

ಇದೀಗ ಸಿಕ್ಕ ಜೋಡಿ ಹರಪ್ಪ ನಾಗರೀಕತೆಯ ಜನರು ನೆಲೆಸಿದ್ದ ರಖಿಗರಿ ಎಂಬ ಪ್ರದೇಶಕ್ಕೆ ಸೇರಿದವರು. ಇದೊಂದು ಸುಮಾರು ಹತ್ತಾರು ಸಾವಿರ ಜನರು ವಾಸಿಸುತ್ತಿದ್ದ 1,200 ಎಕರೆಗಳಷ್ಟು ದೊಡ್ಡ ಪ್ರದೇಶವಾಗಿತ್ತು. ಹರಪ್ಪ ನಾಗರೀಕತೆಯ ಕಾಲದ ಮನುಷ್ಯರು ನೆಲೆಸಿದ್ದ ಸುಮಾರು 2,000ಕ್ಕೂ ಹೆಚ್ಚು ಪ್ರದೇಶಗಳು ಭಾರತ ಮತ್ತು ಪಾಕಿಸ್ತಾನದಲ್ಲಿ ಸಿಕ್ಕಿದ್ದು, ಅವುಗಳಲ್ಲಿ ರಖಿಗರಿ ಅತ್ಯಂತ ದೊಡ್ಡದು. ರಖಿಗರಿಯ ವಿಸ್ತೀರ್ಣ ದೊಡ್ಡದಾಗುತ್ತಲೇ ಸಾಗಿದ್ದು ಅದೀಗ ಪಾಕಿಸ್ತಾನದ ಮೊಹೆಂಜೊದಾರೋವನ್ನೂ ಮೀರಿಸಿದೆ. (ಮೊದಲ ಬಾರಿಗೆ ನಾಗರೀಕತೆಯ ಕುರುಹುಗಳು ಈ ಪ್ರದೇಶದಲ್ಲಿ 1920ರಲ್ಲಿ ಸಿಕ್ಕಿತ್ತು.)

ರಖಿಗರಿಯಲ್ಲೇ ಸುಮಾರು 62 ಸಮಾಧಿಗಳನ್ನು ಪ್ರಾಚ್ಯಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಮನುಷ್ಯರು ಜೀವಿಸಿದ್ದ ಪ್ರದೇಶಕ್ಕಿಂತ ಒಂದು ಕಿಲೋಮೀಟರ್‌ ದೂರದಲ್ಲಿ ಇವೆಲ್ಲಾ ಸಿಕ್ಕಿವೆ. ಇದರಲ್ಲಿ 40 ಸಮಾಧಿಗಳಲ್ಲಿ ಉತ್ಖನನ ನಡೆಸಲಾಗಿದೆ. ಇಷ್ಟೂ ಉತ್ಖನನಗಳಲ್ಲಿ ಈ ‘ರಹಸ್ಯ ದಂಪತಿಗಳ’ ಕಥೆ ಹೆಚ್ಚು ಆಕರ್ಷಕವಾಗಿದೆ.

ಹಾಗಂಥ ಹರಪ್ಪ ನಾಗರೀಕತೆಯಲ್ಲಿ ಜೋಡಿಗಳ ಸಮಾಧಿ ಸಿಗುವುದು ಇದೇ ಮೊದಲೇನೂ ಅಲ್ಲ. 1950ರಲ್ಲಿ ಒಬ್ಬರ ಮೇಲೊಬ್ಬರು ಮಲಗಿದ್ದ ಮಹಿಳೆ ಮತ್ತು ಪುರುಷನ ಅಸ್ಥಿಪಂಜರಗಳು ಈಗಿನ ಗುಜರಾತ್‌ನ ಲೋಥಲ್‌ನಲ್ಲಿ ಸಿಕ್ಕಿತ್ತು. ಈ ಮಹಿಳೆಯ ಮೇಲೆ ಗಾಯದ ಗುರುತುಗಳಿದ್ದವು. ಹಾಗಾಗಿ ಒಂದಷ್ಟು ಜನರು ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ವಾದಿಸಿದರು. ಆದರೆ ಅದು ಯಾವತ್ತೂ ಸಾಬೀತಾಗಿಲ್ಲ. ಇದನ್ನು ವಿಧವೆ ಮಹಿಳೆಯ ಸ್ವಪ್ರಾಣ ತ್ಯಾಗ ಎಂದುಕೊಳ್ಳಲಾಗಿದೆ. ಆದರೆ ಈ ಹೊಸ ಜೋಡಿಯ ಕಥೆ ಏನಿರಬಹುದು ಎಂಬುದಕ್ಕೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ. ವ್ಯಕ್ತಿಗಳು ಸಮಾಧಿ ಮಾಡಲ್ಪಟ್ಟಿದ್ದ ರೀತಿ ನೋಡಿದರೆ, ಮರಣದ ನಂತರವೂ ಶಾಶ್ವತ ಪ್ರೀತಿಯ ಸ್ಮರಣೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಇವರ ಜತೆಗೆ ಇನ್ನೂ ಎರಡು ಅಸ್ಥಿಪಂಜರಗಳು 2015ರ ಉತ್ಖನನದ ವೇಳೆ ಸಿಕ್ಕಿದ್ದು ಇವುಗಳು ಹರಪ್ಪ ನಾಗರೀಕತೆಯ ಅವಧಿಯನ್ನು ಕ್ರಿಸ್ತಪೂರ್ವ 5,500 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿವೆ. ಇವುಗಳ ಮೇಲಿನ ಡಿಎನ್‌ಎ ಅಧ್ಯಯನ ಹರಪ್ಪ ನಾಗರೀಕತೆಯ ಜೀವನ ಶೈಲಿ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

ಕೃಪೆ: ಬಿಬಿಸಿ