samachara
www.samachara.com
ಮಹಾರ್ ಶೌರ್ಯ ಸಂಕೇತದ ಸ್ಮಾರಕ; ಇದು ಭೀಮಾ ಕೋರೆಗಾಂವ್‌ ‘ಅಸ್ಪೃಶ್ಯ ಚರಿತ್ರೆ’!
FEATURE STORY

ಮಹಾರ್ ಶೌರ್ಯ ಸಂಕೇತದ ಸ್ಮಾರಕ; ಇದು ಭೀಮಾ ಕೋರೆಗಾಂವ್‌ ‘ಅಸ್ಪೃಶ್ಯ ಚರಿತ್ರೆ’!

ದಲಿತರು ಸ್ವಾಭಿಮಾನದಿಂದ ಬಾಳುವುದನ್ನು ಸವರ್ಣೀಯರು ಈ ಹೊತ್ತಿಗೂ ಸಹಿಸುತ್ತಿಲ್ಲ ಎಂಬುದನ್ನು ಕಳೆದ ವರ್ಷ ಭೀಮಾ ಕೋರೆಗಾಂವ್‌ನಲ್ಲಿ ನಡೆದಿದ್ದ ಘಟನೆಯೇ ಹೊರ ಹಾಕಿತ್ತು.

- ವಿಠ್ಠಲ ವಗ್ಗನ್

ಮಹಾರಾಷ್ಟ್ರದ ಪುಣೆ ಸಮೀಪದ ಭೀಮಾ ಕೋರೆಗಾಂವ್‌ ವರ್ಷದ ಹಿಂದೆ ನಡೆದಿದ್ದ ಗಲಭೆಯ ಕಾರಣಕ್ಕೆ ಸುದ್ದಿಯಾಗಿತ್ತು. ಅಸ್ಪೃಶ್ಯರ ಹೋರಾಟದ ಸಂಕೇತದಂತಿರುವ ಇಲ್ಲಿನ ವಿಜಯ ಸ್ತಂಭ ಹಾಗೂ ಮಹಾರ್‌ ಸಮುದಾಯದ ಹೋರಾಟ, ಮುಚ್ಚಿಹೋಗಿದ್ದ ಅಸ್ಪೃಶ್ಯ ಚರಿತ್ರೆಯನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಮರುಶೋಧಿಸಿದ ಹೆಜ್ಜೆ ಗುರುತುಗಳು ಇಲ್ಲಿವೆ.

ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್‌ ಅರ್ಧಕ್ಕೆ ನಿಂತಿದ್ದ ತಮ್ಮ ವ್ಯಾಸಂಗ ಪೂರ್ಣಗೊಳಿಸಲು 1920ರ ಜುಲೈನಲ್ಲಿ ಲಂಡನ್ನ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್‌ ಪೊಲಿಟಿಕಲ್ ಸೈನ್ಸ್‌ಗೆ ತೆರಳುತ್ತಾರೆ. ಲಂಡನ್‌ನಲ್ಲಿ ವ್ಯಾಸಂಗ ಮಾಡುವ ಸಮಯದಲ್ಲಿ ಅಂಬೇಡ್ಕರ್‌ ಅಲ್ಲಿನ ಗ್ರಂಥಾಲಯದಲ್ಲಿ ಕ್ಯಾಪ್ಟನ್ ಸ್ಟಂಟನ್ ಕುರಿತು ಮಾಹಿತಿಯ ಹುಡುಕಾಟದಲ್ಲಿದ್ದಾಗ ಪೇಶ್ವೆಗಳ ದೌರ್ಜನ್ಯಯುತ ಆಡಳಿತ ಮತ್ತು ಬ್ರಿಟಿರು ಮತ್ತು ಪೇಶ್ವೆಗಳ ನಡುವೆ ಜರುಗಿದ್ದ ಭೀಮಾ ಕೊರೆಗಾಂವ್‌ ಯುದ್ಧದ ಐತಿಹಾಸಿಕ ದಾಖಲೆಗಳು ಸಿಗುತ್ತವೆ.

ಇದೇ ಸಂದರ್ಭದಲ್ಲಿ ಮಹಾರ್‌ ಜನಾಂಗದ ಶೌರ್ಯ, ಯುದ್ಧದ ಯೋಶೋಗಾಥೆಗಳೂ ಅಂಬೇಡ್ಕರ್‌ ಅವರಿಗೆ ತಿಳಿಯುತ್ತವೆ. 1919ರಿಂದ ಭಾರತದ ಸಾಮಾಜಿಕ ಮತ್ತು ರಾಜಕೀಯ ಚಳವಳಿಯಲ್ಲಿ ಸಕ್ರಿಯವಾಗಿದ್ದ ಅಂಬೇಡ್ಕರ್‌ ಅಸ್ಪೃಶ್ಯರ ಹಕ್ಕೊತ್ತಾಯಕ್ಕಾಗಿ ಹಗಲಿರಳು ಶ್ರಮಿಸುತ್ತಿರುತ್ತಾರೆ. ಹೀಗಿರುವಾಗ 1926ರಲ್ಲಿ ಬ್ರಿಟಿಷ್ ಸರಕಾರ ಮಹಾರ್ ಸಮುದಾಯದವರನ್ನು ಸೈನ್ಯಕ್ಕೆ ಭರ್ತಿ ಮಾಡಿಕೊಳ್ಳುವುದನ್ನು ನಿಲ್ಲಿಸುತ್ತಾರೆ. ಇದರಿಂದ ಕುಪಿತರಾದ ಅಂಬೇಡ್ಕರ್‌ 1818ರ ಕಾಲಘಟ್ಟದಲ್ಲಿ ‘ಮಹಾರ್ ರೆಜಿಮೆಂಟ್’ ಬ್ರಿಟಿಷ್‌ ಸೈನ್ಯಕ್ಕೆ ಮಾಡಿರುವ ಸೇವೆಯನ್ನು ಮನವರಿಕೆ ಮಾಡಿಕೊಡಲು ಚಳವಳಿಯನ್ನು ಹಮ್ಮಿಕೊಳ್ಳಲು ನಿರ್ಧರಿಸುತ್ತಾರೆ.

1927ರ ಜನವರಿ 1ರಂದು ಪೂನಾದಿಂದ 20 ಕಿ.ಮೀ. ದೂರದಲ್ಲಿರುವ ಭೀಮಾ ಕೊರೆಗಾಂವ್‌ನಲ್ಲಿ ಅಂಬೇಡ್ಕರ್‌ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯುತ್ತದೆ. ಆ ಸಮಾವೇಶದಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ಮಹಾರ್ ಸಮುದಾಯದವರು ಭಾಗವಹಿಸುತ್ತಾರೆ. ಆ ಸಮಾವೇಶವನ್ನು ಉದ್ದೇಶಿಸಿ ಮಾತನಾಡುವ ಅಂಬೇಡ್ಕರ್ ಮಹಾರ್‌ ಯೋಧರ ಶೌರ್ಯ ಹಾಗೂ ಬ್ರಿಟಿಷರು ಮತ್ತು ಪೇಶ್ವೆಗಳು ಮಹಾರ್‌ ಸಮುದಾಯದೊಂದಿಗೆ ನಡೆದುಕೊಂಡ ಅಮಾನವೀಯ ನಡೆಗಳನ್ನು ಬಿಚ್ಚಿಡುತ್ತಾರೆ.

ಆ ಸಮಾವೇಶದಲ್ಲಿ ಅಂಬೇಡ್ಕರ್‌ ಹೇಳಿದ್ದ ಮಾತುಗಳಿವು:

“ಬಂಧುಗಳೇ ನಾವು ಈ ದೇಶದ ಮೂಲನಿವಾಸಿಗಳು. ವೀರರಾದ ನಮ್ಮ ಹಿರಿಯರ ಶೌರ್ಯ, ಸಾಮರ್ಥ್ಯವನ್ನು ಮನಗಂಡ ಬ್ರಿಟಿಷರು ‘ಮಹಾರ್ ರೆಜಿಮೆಂಟ್’ ಆರಂಭಿಸಿ ಅವರ ಯೋಗ್ಯತೆಗೆ ತಕ್ಕ ಸ್ಥಾನಮಾನಗಳನ್ನು ಕೊಟ್ಟಿದ್ದರು. 1886ರ ಕಾಲಘಟ್ಟದಲ್ಲಿ ಮತಾಧೀನ ಭಂಗಿ ಎನ್ನುವ ಅಸ್ಪೃಶ್ಯ ಯೋಧನನ್ನು ಸೈನಿಕ ಶಿಬಿರದಲ್ಲಿ ಬಂದೂಕುಗಳ ನಿರ್ಮಾಣಧಿಕಾರಿ ಎಂದು ನೇಮಕ ಮಾಡಿದ್ದರು. ಈತನು ಬ್ರಿಟಿಷರ ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದ ಕಾರಣ ಭಂಗಿ ಮತ್ತು ಆತನ ಹೇಂಡತಿಗೆ ಬ್ರಿಟಿಷರು 1856 ಡಿಸೆಂಬರ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಿದ್ದರು.”

“ಮಹಾರ್, ಚಮ್ಮಾರ್, ಭಂಗಿ ಎಂದು ಕರೆಯುವ ಅಸ್ಪೃಶ್ಯ ಸಮುದಾಯದ ವೀರ ಸೇನಾನಿಗಳ ಶೌರ್ಯವನ್ನು ಬ್ರಿಟಿಷರು ಸಹಿಸದಾದರು. ಬ್ರಿಟಿಷ್‌ ಗವರ್ನರ್ ಜನರಲ್ ಸರ್ ಫ್ರೆಡ್ ಎಸ್. ರಾಬರ್ಟ್‌ ಸೈನ್ಯದಲ್ಲಿ ಅಸ್ಪೃಶ್ಯರ ನೇಮಕಾತಿಯನ್ನು ರದ್ದುಪಡಿಸಿದನು. ಬ್ರಿಟನ್ ಸರಕಾರದ ನಿಯಮದಂತೆ ಈಗಾಗಲೆ ಸೈನ್ಯದಲ್ಲಿದ್ದ ಸೈನಿಕರನ್ನು ವಯೋನಿವೃತ್ತಿಗೊಳ್ಳುವವರೆಗೂ ಮುಂದುವರಿಸಿದ ಕಾರಣ ನಮ್ಮ ತಂದೆ ರಾಮ್‌ಜಿ ಸಕ್ಪಾಲರು 1891ರವರಗೂ ಸೈನ್ಯದಲ್ಲಿಯೇ ಸೇವೆ ಸಲ್ಲಿಸಿದರು. ಮುಂದೆ 1914ರಲ್ಲಿ ವಿಶ್ವ ಮಹಾಯುದ್ಧ ಆರಂಭವಾದಾಗ ಬ್ರಿಟಿಷರು ಮತ್ತೆ ಮಹಾರ್ ರೆಜಿಮೆಂಟ್ ಅನ್ನು ಆರಂಭಿಸಿದರು.”

“ಮಹಾಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಮಹಾರ್ ರೆಜಿಮೆಂಟ್‌ನಲ್ಲಿದ್ದ ಯೋಧರು ಬ್ರಿಟನ್ ಸರಕಾರದ ವಿವಿಧ ಸಮ್ಮಾನಗಳಿಗೆ ಪಾತ್ರರಾದರು. ಇದರಿಂದ ಬ್ರಾಹ್ಮಣರು ಕುಪಿತರಾದರು. ಅಸ್ಪೃಶ್ಯರು ಆರ್ಥಿಕವಾಗಿ ಸಬಲರಾದರೆ ಬ್ರಾಹ್ಮಣರಿಗೆ ಉಳಿಗಾಲವಿಲ್ಲವೆಂದು ಹಾಗೂ ಇದು ತಮ್ಮ ಧರ್ಮವಾದ ಮನುಧರ್ಮಕ್ಕೆ ವಿರುದ್ಧವಾದ ಕೃತ್ಯವೆಂದು ಭಾವಿಸಿದ ಬ್ರಾಹ್ಮಣರು ಭಾರತದ ಗವರ್ನರ್ ಜನರಲ್ ಲಾರ್ಡ್‌ ಇರ್ವಿನ್ ಮೇಲೆ ಒತ್ತಡ ತಂದು 1926ರಲ್ಲಿ ಮಹಾರ್ ರೆಜಿಮೆಂಟ್ ಮೇಲೆ ನಿಯಂತ್ರಣ ತಂದರು.”

“ಇಂದು ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಪೇಶ್ವೆಗಳು ನಮ್ಮ ಹಿರಿಯರೊಂದಿಗೆ ಅಮಾನುಷವಾಗಿ ನಡೆದುಕೊಳ್ಳದೆ, ಅಪಮಾನ ಮಾಡದೆ ಇದ್ದಿದ್ದರೆ ನಮ್ಮವರೆ ಬ್ರಿಟಿಷರನ್ನು ಧೂಳಿಪಟ ಮಾಡುತಿದ್ದರು. ಇಂದು ನಮ್ಮ ಮಹಾರ್ ಯೋಧರ ಇತಿಹಾಸ ಅರಿಯುವುದು ಅಗತ್ಯ.”

“ಶಿವಾಜಿ ಮಹಾರಾಜರ ಆಡಳಿತಾವಧಿಯಲ್ಲಿ ಮುಸ್ಲಿಮರ ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ದೊಡ್ಡ ಸೈನ್ಯ ಬಲದ ಅವಶ್ಯಕತೆಯಿತ್ತು. ಆಗ ಮರಾಠರು ಬ್ರಾಹ್ಮಣರನ್ನೂ ಕೂಡಾ ಸೈನ್ಯದಲ್ಲಿ ಭರ್ತಿ ಮಾಡಿಕೊಂಡರು. ಆಗ ಈ ಬ್ರಾಹ್ಮಣರು ಅಲ್ಪ ಸ್ವಲ್ಪ ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ಕಲಿತರು. ನಾವು ಚರಿತ್ರೆಯನ್ನು ನೋಡಿದಾಗ ತಿಳಿದು ಬರುವುದೇನೆಂದರೆ ಯಾರಲ್ಲಿ ಹಿರಿದಾದ ಸೈನ್ಯ ಬಲವಿರುತ್ತದೆಯೋ ಅವರೇ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಲು ಸಮರ್ಥರಾಗಿರುತ್ತಿದ್ದರು. ಆಗ ಮುಸ್ಲಿಂಮರು ಅಸ್ಪೃಶ್ಯರನ್ನು ತಮ್ಮ ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುತ್ತಿದ್ದರು. ಇದನ್ನರಿತ ಮರಾಠರು ಕೂಡಾ ವೀರರಾದ ಮಹಾರ್‌ ಸಮುದಾಯದವರನ್ನು ಸೈನ್ಯದಲ್ಲಿ ಭರ್ತಿ ಮಾಡಿಕೊಂಡರು.”

“ಮಹಾರರು ಸೇನೆಯಲ್ಲಿ ಬೆಳೆಯುವುದು ಬ್ರಾಹ್ಮಣರಿಗೆ ಇಷ್ಟವಿರಲಿಲ್ಲ. ಯಾವಾಗ ಮರಾಠರ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಾಹು ಮಹಾರಾಜರು ಬ್ರಾಹ್ಮಣ ಬಾಲಾಜಿ ವಿಶ್ವನಾಥನನ್ನು ತನ್ನ ಪೇಶ್ವೆಯನ್ನಾಗಿ ನೇಮಕ ಮಾಡಿಕೊಂಡಿ ತನ್ನೆಲ್ಲ ಅಧಿಕಾರವನ್ನು ಪೇಶ್ವೆ ಬಾಲಾಜಿಗೆ ಒಪ್ಪಿಸಿದನು. ಆಗ ಪೇಶ್ವೆಗಳು ಸಾಮ್ರಾಜ್ಯಶಾಹಿಗಳಾಗಿ ಪರಿವರ್ತನೆಗೊಂಡರು. ಈ ಪೇಶ್ವೆಗಳಲ್ಲಿ ಕೊನೆಯ ಪೇಶ್ವೆಯಾದವನು ಎರಡನೇ ಬಾಜಿರಾಯ. (1796-1818) ಈತನ ಆಡಳಿತದಲ್ಲಿ ಸಾಮಾಜಿಕ ಸ್ಥಿತಿಗತಿ ಹೀನಾಯವಾಗಿತ್ತು. ಅದರಲ್ಲೂ ಮಹಾರ್‌ ಸಮುದಾಯದ ಸ್ಥಿತಿಯಂತೂ ಹೀನಾಯವಾಗಿತ್ತು. ಬಾಜಿರಾಯನು ಮನುಸ್ಮೃತಿಯ ಪ್ರಕಾರವೇ ತನ್ನ ಆಡಳಿತವನ್ನು ನಡೆಸುತ್ತಿದ್ದ. ಅಸ್ಪೃಶ್ಯ ಸಮುದಾಯ ಮುಕ್ತವಾಗಿ ಸಮಾಜದಲ್ಲಿ ಬದುಕಲು ಅವಕಾಶವಿರಲಿಲ್ಲ.”

ವಿಜಯ ಸ್ತಂಭದ ಮುಂದೆ ಅಂಬೇಡ್ಕರ್‌ ಮತ್ತು ಇತರರು
ವಿಜಯ ಸ್ತಂಭದ ಮುಂದೆ ಅಂಬೇಡ್ಕರ್‌ ಮತ್ತು ಇತರರು

ಅಸ್ಪೃಶ್ಯರ ಹೀನಾಯ ಸ್ಥಿತಿ:

“ಅಸ್ಪೃಶ್ಯರು ಕೊರಳಲ್ಲಿ ಮಡಿಕೆ, ಬೆನ್ನಿಗೆ ಪೊರಕೆ ಕಟ್ಟಿಕೊಂಡು ಮಧ್ಯಾಹ್ನದ ಸಮಯದಲ್ಲಿ ಮಾತ್ರ ತಿರುಗಾಡಬೇಕಾಗಿತ್ತು. ಅಸ್ಪೃಶ್ಯರ ನೆರಳೂ ಸವರ್ಣೀಯರ ಮೇಲೆ ಬೀಳುವಂತಿರಲಿಲ್ಲ. ಬ್ರಾಹ್ಮಣರು ಕಂಡರೆ ಅಸ್ಪೃಶ್ಯರು ಅವರ ಮುಂದೆ ನೆಲಕ್ಕೆ ಬಾಗಿ, “ಜೋಹಾರ್ ಮಾಯಾ ಬಾಪ್. ಜೋಹಾರ್” (ದಯಮಾಡಿ ತಾಯಿ- ತಂದೆ. ದಯಮಾಡಿ) ಎಂದು ನಮಸ್ಕಾರ ಮಾಡಬೇಕಿತ್ತು.”

“ಪೇಶ್ವೆಗಳ ಕಾಲದಲ್ಲಿ ಅಸ್ಪೃಶ್ಯರನ್ನು ನಾಯಿ, ಬೆಕ್ಕುಗಳಿಗಿಂತ ಕೀಳಾಗಿ ಕಾಣಲಾಗುತ್ತಿತ್ತು. ಇರುವೆಗೆ ಸಕ್ಕರೆ ಹಾಕುತ್ತಿದ್ದರು. ಆದರೆ, ಅಸ್ಪೃಶ್ಯರಿಗೆ ಒಂದು ತೊಟ್ಟು ನೀರು ಕೊಡುತ್ತಿರಲಿಲ್ಲ. ಅಸ್ಪೃಶ್ಯರು ನೀರು ಬೇಡಿದರೆ ದೂರದಿಂದ ಕಲ್ಲಿನಿಂದ ಹೊಡೆಯುವ ಸಂಪ್ರದಾಯ ಇತ್ತು. ಅಸ್ಪೃಶ್ಯರು ಹೆಣದ ಮೇಲಿನ ಬಟ್ಟೆಗಳನ್ನೆ ಉಡುವಂತೆ, ಒಡೆದ ಮಡಿಕೆಯಲ್ಲಿಯೇ ಊಟ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು.”

“ಬ್ರಾಹ್ಮಣರು ಪಠಿಸುವ ಶ್ಲೋಕಗಳನ್ನು ಅಸ್ಪೃಶ್ಯರು ಕೇಳಿದರೆ ಕಿವಿಯಲ್ಲಿ ಕಾಸಿದ ರಾಡನ್ನು ತುರುಕುತಿದ್ದರು. ಸವರ್ಣೀಯರು ಕೂರುವ ಅಸ್ಪೃಶ್ಯರು ಸ್ಥಳದಲ್ಲಿ ಕುಳಿತುಕೊಂಡಿದ್ದರೆ ಅವರ ಕುಂಡಿಯ ಮೇಲೆ ಬರೆ ಹಾಕುತಿದ್ದರು.. ಈ ರೀತಿ ಅಸ್ಪೃಶ್ಯರೊಂದಿಗೆ ಅಮಾನುಷವಾಗಿ ವರ್ತಿಸುವ ಮನು ಸಂಪ್ರದಾಯವನ್ನು ಪೇಶ್ವೆಗಳು ಜಾರಿಗೆ ತಂದಿದ್ದರು. ಇದರಿಂದ ಅಸ್ಪೃಶ್ಯರಲ್ಲಿ ಕೋಪದ ಜ್ವಾಲೆ ಕುದಿಯುತ್ತಲಿತ್ತು.”

“ಇಂತಹ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಬ್ರಿಟಿಷರು ಅಸ್ಪೃಶ್ಯರನ್ನು ಸೈನ್ಯದಲ್ಲಿ ಭರ್ತಿ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಿಕೊಟ್ಟರು. ಆ ಮೂಲಕ ಭಾರತದಲ್ಲಿ ತಮ್ಮ ಅಧಿಪತ್ಯವನ್ನು ಶಾಶ್ವತವಾಗಿ ಸ್ಥಾಪಿಸಲೂ ಬ್ರಿಟಿಷರು ಯೋಜನೆ ಹಾಕಿಕೊಂಡಿದ್ದರು. ಈ ತಂತ್ರಗಾರಿಕೆಯು ಅಸ್ಪೃಶ್ಯ ನಾಯಕರ ಗಮನಕ್ಕೆ ಬಂತು. ಬ್ರಿಟಿಷರ ಜತೆ ನಿಂತು ಯುದ್ಧ ಮಾಡಿ ತಾವೇ ತಮ್ಮವರ ಪ್ರಾಣ ತೆಗೆಯಬೇಕಲ್ಲ ಎಂಬ ಕಳವಳ ಅಸ್ಪೃಶ್ಯರಲ್ಲಿ ಉಂಟಾಗುತ್ತಲಿತ್ತು.”

ಪೇಶ್ವೆಗಳಿಂದ ಅಪಮಾನ:

“ಆಗ ಮಹಾರ್ ಜನಾಂಗದ ಸೇನಾಪತಿಯಾದ ಸಿದ್ಧನಾಕನು ಕೆಲವು ಮಹಾರ್ ಸರದಾರನ್ನು ಕರೆದು ತಮ್ಮ ಮನೋಭಿಲಾಷೆಯನ್ನು ಪೇಶ್ವೆಯ ಮುಂದಿಡಲು ನಿಶ್ಚಯಿಸಿದರು. ಆದಕ್ಕೂ ಮೊದಲು ಈ ವಿಷಯವನ್ನು ಪೇಶ್ವೆಯ ಸೇನಾಪತಿಯ ಮೂಲಕ ತಿಳಿಸಿದರೆ ಉಚಿತವೆಂದು ತಿಳಿದು ಸೇನಾಪತಿಗೆ ವಿಷಯ ಮುಟ್ಟಿಸಿದರು. ಆದರೆ, ಸೇನಾಪತಿಯಿಂದ ಸರಿಯಾದ ಉತ್ತರ ಬರಲಿಲ್ಲ. ಆಗ ಸಿದ್ಧನಾಕ ಮತ್ತು ಇತರೆ ಸರದಾರರು ತಾವೇ ನೇರವಾಗಿ ಬಾಜಿರಾವ ಪೇಶ್ವೆಯನ್ನು ಕಾಣಲು ಹೋದರು.”

“ಬಾಜಿರಾವ ಕಂಡ ಕೂಡಲೇ ಮಹಾರ್‌ ಸರದಾರರು, “ಜೋಹಾರ್ ಮಾಯಾ ಬಾಪ್. ಜೋಹಾರ್” ಎಂದು ನೆಲಕ್ಕೆ ಬಾಗಿ ನಮಸ್ಕಾರ ಮಾಡಿದರು. ಮಹಾರ್‌ ಸರದಾರರನ್ನು ತಿರಸ್ಕಾರದಿಂದ ಕಂಡ ಬಾಜಿರಾವ ಇವರನ್ನು ಒಳಗೆ ಬಿಟ್ಟವರನ್ನು ಗಲ್ಲಿಗೇರಿಸಿ ಎಂದು ಆಜ್ಞೆ ಮಾಡಿದ. ಈ ಬೇಟಿಗೆ ಅವಕಾಶ ಕೊಡಿಸಿದ್ದ ಬಾಪೂ ಗೊಖಲೆಯನ್ನು ನಿಂದಿಸಿದ.”

“ಆಗ ಸಿದ್ಧನಾಕ, ‘ನಮಗೆ ಬ್ರಿಟಿಷರೊಂದಿಗೆ ಯುದ್ಧ ಮಾಡುವ ಇಚ್ಛೆ ಇಲ್ಲ. ನಾವು ಮಹಾರರು, ಈ ನೆಲದ ಮಣ್ಣಿನ ಮಕ್ಕಳು. ನಾವು ನಿಮ್ಮೊಂದಿಗಿದ್ದು ಹೋರಾಡುತ್ತೇವೆ. ಹೋರಾಡಿ ಬ್ರಿಟಿಷರನ್ನು ಸೋಲಿಸಿ ಅವರನ್ನು ಭಾರತದಿಂದ ಶಾಶ್ವತವಾಗಿ ಹೊರಗಟ್ಟುತ್ತೇವೆ’ ಎಂದು ಹೇಳಿದ. ಆಗ ಬಾಜಿರಾವ ತಿರಸ್ಕಾರದಿಂದ ಮಾತನ್ನಾಡುತ್ತ, ‘ನೀವು ಮಹಾರರು. ಸೈನಿಕ ಸೇವೇ ಮಾಡಿ ನಿಮಗೆ ಸೊಕ್ಕು ಬಂದಿದೆ. ಪೇಶ್ವೆಶಾಹಿ ನಿಮಗೆ ಯಾವುದೇ ಸ್ಥಾನ ಸಿಗಲಾರದು. ನಾವು ಈಗ ನಿಮ್ಮನ್ನು ಹೇಗೆ ಇಟ್ಟಿದ್ದೇವೋ ಹಾಗೆಯೇ ಇಡುತ್ತೇವೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗದು’ ಎಂದು ಹೇಳಿದ.”

“ಸಿದ್ಧನಾಕ ಎಷ್ಟೇ ವಿನಯದಿಂದ ಬೇಡಿಕೊಂಡರೂ ಬಾಲಾಜಿ ಕೇಳಲಿಲ್ಲ. ನಿಮ್ಮಂತಹ ಅಸ್ಪೃಶ್ಯರ ಬೆಂಬಲ ನಮಗೆ ಬೇಕಿಲ್ಲ ಎಂದು ಹೀನಾಯವಾಗಿ ನಿಂದಿಸಿ ಕಳುಹಿಸಿದ. ಸಿದ್ಧನಾಕ ಮತ್ತು ಇತರೆ ಸರದಾರರು ಬಂದ ನಂತರ ಅವರು ನಿಂತಿದ್ದ ಸ್ಥಳವನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದರು. ಈ ಘಟನೆಯಿಂದ ಸಿಟ್ಟಿಗೆದ್ದ ಸಿದ್ಧನಾಕ ಮತ್ತು ಇತರೆ ಮಹಾರ್‌ ಸರದಾರರು ಪೇಶ್ವೆಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಬ್ರಿಟಿಷ್ ಸೈನ್ಯ ಸೇರಿಕೊಂಡರು.”

“1817ರ ಡಿಸೆಂಬರ್ ತಿಂಗಳಲ್ಲಿ ಬಾಜಿರಾವ ಪೇಶ್ವೆಯು ಸುಮಾರು 30 ಸಾವಿರ ಸೈನಿಕರ ಸೈನ್ಯದೊಂದಿಗೆ ಪುಣೆಯ ಮೇಲೆ ದಾಳಿ ಮಾಡಬೇಕೆಂದು ಯೋಜನೆ ರೂಪಿಸಿರುವುದು ಬ್ರಿಟಿಷರಿಗೆ ಗೊತ್ತಾಯಿತು. ಬ್ರಿಟಿಷ್ ಕರ್ನಲ್ ರಾಬರ್ಟ್‌, ಮಹಾರ್‌ ರೆಜಿಮೆಂಟ್‌ನ ಬೆಟಾಲಿಯನ್‌ ಅನ್ನು ತಕ್ಷಣ ಪುಣೆಗೆ ಕಳಿಸಲು ಕ್ಯಾಪ್ಟನ್ ಸ್ಟಂಟನ್‌ಗೆ ನಿರ್ದೇಶನ ನೀಡಿದ. ಕ್ಯಾಪ್ಟನ್ ಸ್ಟಂಟನ್ 500 ಜನರ ಮಹಾರ್ ಸೈನ್ಯವನ್ನಿಟ್ಟುಕೊಂಡು ಪೇಶ್ವೆಗಳ ಸೈನ್ಯದೊಂದಿಗೆ ಹೋರಾಡಲು ಹೊರಟ.”

“ಯುದ್ಧಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಸ್ಟಂಟನ್‌ ಶಿರೂರಿನಿಂದ 31 ಡಿಸೆಂಬರ್ 1817ರ ರಾತ್ರಿ ಪುಣೆ ಕಡೆಗೆ ಹೊರಟನು. 25 ಮೈಲಿ ನಡೆದು ಕ್ಯಾಪ್ಟನ್‌ ಸ್ಟಂಟನ್‌ ನೇತೃತ್ವದ ಮಹಾರ್‌ ಸೈನ್ಯ 1818ರ ಜನವರಿ 1ರಂದು ಕೋರೆಗಾಂವ್‌ ತಲುಪಿತು. ಕ್ಯಾಪ್ಟನ್ ಸ್ಟಂಟನ್ ಕಡಿಮೆ ಸೈನ್ಯದೊಂದಿಗೆ ಬಂದಿದ್ದಾನೆಂದು ತಿಳಿದ ಪೇಶ್ವೆ ಸೇನೆ ನಾಲ್ಕೂ ದಿಕ್ಕಿನಿಂದ ಮುತ್ತಿಗೆ ಹಾಕಲು ನಿರ್ಧರಿಸಿತು. ಸುಮಾರು 30 ಸಾವಿರ ಜನರ ಪೇಶ್ವೆ ಸೈನ್ಯ ಮತ್ತು ಕೇವಲ 500 ಮಹಾರ್‌ ಯೋಧರ ಬ್ರಿಟಿಷ್‌ ಸೈನ್ಯದ ನಡುವೆ ಇಡೀ ದಿನ ಯುದ್ಧ ನಡೆಯಿತು. ಮಹಾರ್ ಸೈನಿಕರು ಸತತ 12 ಗಂಟೆಗಳ ಕಾಲ ಯುದ್ಧ ಮಾಡಿ ಪೇಶ್ವೆ ಸೈನ್ಯವನ್ನು ಧೂಳಿಪಟ ಮಾಡಿದರು. ಈ ಯುದ್ಧದಲ್ಲಿ ಮಹಾರ್ ರೆಜಿಮೆಂಟ್‌ನ 22 ಸೈನಿಕರು ಹುತಾತ್ಮರಾದರು.”

ಪ್ರತಿ ವರ್ಷ ಜನವರಿ 1ರಂದು ವಿಜಯ ಸ್ತಂಭದ ಸ್ಥಳದಲ್ಲೇ ಹೆಚ್ಚಿನ ದಲಿತರಿಗೆ ಹೊಸ ವರ್ಷ
ಪ್ರತಿ ವರ್ಷ ಜನವರಿ 1ರಂದು ವಿಜಯ ಸ್ತಂಭದ ಸ್ಥಳದಲ್ಲೇ ಹೆಚ್ಚಿನ ದಲಿತರಿಗೆ ಹೊಸ ವರ್ಷ

ಮಹಾರ್‌ ಶೌರ್ಯದ ನೆನಪಿಗಾಗಿ ಸ್ಮಾರಕ:

“ಈ ಕದನದಲ್ಲಿ ಹುತಾತ್ಮರಾದ ಮತ್ತು ಗಾಯಾಳುಗಳಾದ ಮಹಾರ್‌ ಯೋಧರ ನೆನಪು ಮತ್ತು ಕೀರ್ತಿಯು ಇತಿಹಾಸ ಪುಟದಲ್ಲಿ ಅಚ್ಚಳಿಯದೆ ಉಳಿಯಲು ಕೋರೆಗಾಂವದ ಭೀಮಾ ನದಿಯ ತೀರದಲ್ಲಿ ಯುದ್ಧ ನಡೆದ ಸ್ಥಳದಲ್ಲಿ ಬ್ರಿಟಿಷರು ಮಹಾರ್‌ ಯೋಧರ ಸ್ಮರಣಾರ್ಥ ವಿಜಯ ಸ್ತಂಭವನ್ನು ನಿರ್ಮಿಸಿದರು. 1821ರ ಮಾರ್ಚ್‌ 26ರಂದು ವಿಜಯ ಸ್ತಂಭಕ್ಕೆ ಅಡಿಗಲ್ಲು ಹಾಕಲಾಯಿತು. 1822ರಲ್ಲಿ ನಿರ್ಮಾಣ ಪೂರ್ಣಗೊಂಡಿತು. ಈವರೆಗೆ ಇದನ್ನು ಮಹಾರ್ ವಿಜಯ ಸ್ತಂಭ ಎಂದೇ ಕರೆಯಲಾಗುತ್ತಿತ್ತು. ನಾವು ಇಂದಿನಿಂದ ಭೀಮಾ ಕೋರೆಗಾಂವ್ ವಿಜಯ ಸ್ತಂಭ ಎಂದು ಕರೆಯೋಣ.”

ಹೀಗೆ ಬಾಬಾಸಾಹೇಬ್‌ ಅಂಬೇಡ್ಕರ್‌ ಮಹಾರ್ ಯೋಧರ ವೀರಗಾಥೆಯನ್ನು ಆ ಸಮಾವೇಶದಲ್ಲಿ ಹೇಳಿದಾಗ ನೆರೆದಿದ್ದ ಜನರ ಕಣ್ಣಲ್ಲಿ ನೀರು ತುಂಬಿತ್ತು. ಯಾವ ಮಹಾರ್ ಯೋಧರು ಪೇಶ್ವೆಗಳನ್ನು ದಮನ ಮಾಡಿ ಬ್ರಿಟಿಷರಿಗೆ ವಿಜಯವನ್ನು ತಂದು ಕೊಟ್ಟಿದ್ದರೋ ಅಂತಹ ವೀರ ಪರಂಪರೆ ಹೊಂದಿರುವ ಮಹಾರ್ ಯುವಕರನ್ನು ಸೇನೆಗೆ ಸೇರಿಸಿಕೊಳ್ಳಲು ಬ್ರಿಟಿಷ್ ಸರಕಾರ ನಿರ್ಬಂಧ ಹೇರಿರುವುದು ದ್ರೋಹ ಎಂದು ಅಂಬೇಡ್ಕರ್‌ ಹೇಳಿದ್ದರು.

ಅಂಬೇಡ್ಕರರ ಹಕ್ಕೊತ್ತಾಯಕ್ಕೆ ಬ್ರಿಟಿಷರು ಕಿವಿಗೊಡದ ಕಾರಣ ಹದಿನಾಲ್ಕು ವರ್ಷ ನಿರಂತರ ಹೋರಾಟ ಮಾಡಬೇಕಾಯಿತು. ಕೊನೆಗೆ ಬ್ರಿಟಿಷ್ ಸರಕಾರ 1914ರಲ್ಲಿ ಮತ್ತೆ ಮಹಾರ್ ರೆಜಿಮೆಂಟ್ ಆರಂಭಿಸಿ, ಮಹಾರ್ ಸಮುದಾಯದವರನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ಮುಂದಾಯಿತು. ಹೀಗೆ ಇನ್ನೂರು ವರ್ಷಗಳ ಹಿಂದೆ ಮಹಾರ ಸೈನ್ಯ ಪೇಶ್ವೆ ವಿರುದ್ಧ ಹೋರಾಡಿ ಗೆದ್ದಿದ್ದರೆ ಮುಂದೆ ಅಂಬೇಡ್ಕರ್‌ ರೂಪಿಸಿದ ಹೋರಾಟ ಮಹಾರ್‌ ರೆಜಿಮೆಂಟ್‌ನ ಪುನರಾರಂಭಕ್ಕೆ ಕಾರಣವಾಗಿತ್ತು.

ಇತಿಹಾಸದ ಧೂಳಿನಲ್ಲಿ ಮುಚ್ಚಿಹೋಗಿದ್ದ ಮಹಾರ್ ಸೈನ್ಯದ ಚರಿತ್ರ ಹಾಗೂ ವಿಜಯ ಸ್ತಂಭದ ಮಹತ್ವವನ್ನು ಎತ್ತಿತೋರಿದ ಅಂಬೇಡ್ಕರ್‌ ತಾವು ಬದುಕಿರುವವರೆಗೂ ಪ್ರತಿ ವರ್ಷ ಭೀಮಾ ಕೋರೆಗಾಂವ್‌ಗೆ ಬಂದು ಗೌರವ ಸಲ್ಲಿಸಿ ಹೋಗುತ್ತಿದ್ದರು. ಈಗ ಪ್ರತಿ ವರ್ಷ ಲಕ್ಷಾಂತರ ದಲಿತರು ಅಸ್ಪೃಶ್ಯತೆಯ ಹೋರಾಟದ ಸಂಕೇತವೆಂದು ಈ ವಿಜಯ ಸ್ತಂಬ ಇರುವ ಜಾಗಕ್ಕೆ ಭೇಟಿ ನೀಡುತ್ತಾರೆ. 2018ರ ಜನವರಿ 1ರಂದು ಇಲ್ಲಿ ನಡೆಯುತ್ತಿದ್ದ ದಲಿತರ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಗಲಭೆ ಸೃಷ್ಟಿಯಾಗುವಂತೆ ಮಾಡಿದ್ದರು. ದಲಿತರು ಸ್ವಾಭಿಮಾನದಿಂದ ಬಾಳುವುದನ್ನು ಸವರ್ಣೀಯರು ಈ ಹೊತ್ತಿಗೂ ಸಹಿಸುತ್ತಿಲ್ಲ ಎಂಬುದನ್ನು ಕಳೆದ ವರ್ಷ ಭೀಮಾ ಕೋರೆಗಾಂವ್‌ನಲ್ಲಿ ನಡೆದಿದ್ದ ಘಟನೆಯೇ ಹೊರ ಹಾಕಿತ್ತು.

(ಲೇಖಕರು ಕಲಬುರ್ಗಿಯಲ್ಲಿ ಶಿಕ್ಷಕರು. ಡಾ. ಅಂಬೇಡ್ಕರ್ ಕುರಿತು ಹಂಪಿ ಕನ್ನಡ ವಿ.ವಿ.ಯಲ್ಲಿ ಪಿಎಚ್‌.ಡಿ. ಸಂಶೋಧನೆ ನಡೆಸುತ್ತಿದ್ದಾರೆ)

Also read: ಕೊರೆಗಾಂವ್ ದಲಿತ ಯೋಧರ ಹೋರಾಟಕ್ಕೆ 2 ಶತಮಾನ