samachara
www.samachara.com
ಕೆಜಿಎಫ್‌ ಅಥವಾ ಯಶ್‌: ಸ್ಯಾಂಡಲ್‌ವುಡ್‌ಗೆ ತುರ್ತಾಗಿ ಬೇಕಿರುವುದು ‘ಗಡಿ ದಾಟಿಸುವ ಅಂಬಿಗ’!
FEATURE STORY

ಕೆಜಿಎಫ್‌ ಅಥವಾ ಯಶ್‌: ಸ್ಯಾಂಡಲ್‌ವುಡ್‌ಗೆ ತುರ್ತಾಗಿ ಬೇಕಿರುವುದು ‘ಗಡಿ ದಾಟಿಸುವ ಅಂಬಿಗ’!

ಭಾಷೆ ಮತ್ತು ರಾಜ್ಯದ ಗಡಿಗಳನ್ನು ಮೀರಲು ಕನ್ನಡ ಚಿತ್ರರಂಗಕ್ಕೊಬ್ಬ ಸ್ಟಾರ್ ಬೇಕಾಗಿದ್ದಾನೆ. ಆತ ವ್ಯಕ್ತಿಯೂ ಆಗಿರಬಹುದು, ಸಿನಿಮಾವೂ ಆಗಿರಬಹುದು. 

‘ಮೆಸ್ಸಿ ಬಾಯ್‌’ ಎಂದೇ ಜನಪ್ರಿಯನಾದ ಅಫ್ಘಾನಿಸ್ತಾನದ ಪುಟ್ಟ ಬಾಲಕ ಮುರ್ತಾಜಾ ಅಹ್ಮದಿ ಮತ್ತೆ ಸುದ್ದಿಯಲ್ಲಿದ್ದಾನೆ. ತಾಲಿಬಾನ್‌ ಕಾಟಕ್ಕೆ ಆತನ ಕುಟುಂಬ ಮನೆ ಬಿಟ್ಟು ಬೇರೆಡೆ ವಲಸೆ ಹೋಗಿದ್ದು ಈಗ ಅಂತಾರಾಷ್ಟ್ರೀಯ ಸುದ್ದಿ. ಅಂದ ಹಾಗೆ ಈತನ ಕಥೆ ನಿಮಗೆ ನನೆಪಿರಬಹುದು. ಪ್ಲಾಸ್ಟಿಕ್‌ ಕವರ್‌ನ ಮೇಲೆ ಮೆಸ್ಸಿ ಮತ್ತು ಆತನ ಜರ್ಸಿ ಸಂಖ್ಯೆ 10 ಎಂದು ಬರೆದುಕೊಂಡು ಈತ ಯುದ್ಧ ಪೀಡಿತ ದೇಶದಲ್ಲಿ ಫೂಟ್‌ಬಾಲ್‌ ಒದೆಯುತ್ತಿದ್ದ. ಈ ಮೂಲಕ ಜಗತ್ತಿನ ಗಮನ ಸೆಳೆದಿದ್ದ. ಮುಂದೆ ಈತನನ್ನು ಸ್ವತಃ ಮೆಸ್ಸಿ ಭೇಟಿಯಾಗಿ ತನ್ನದೇ ಜರ್ಸಿಯನ್ನು ನೀಡಿದ್ದರು. ಗಮನಿಸಬೇಕಿರುವುದು ಏನೆಂದರೆ, ಅಫ್ಘಾನಿಸ್ತಾನದವರೆಗೆ, ಈ ಪುಟ್ಟ ಪೋರನವರೆಗೆ ಫೂಟ್‌ಬಾಲ್‌ ಕ್ರೀಡೆಯನ್ನು ಕೊಂಡೊಯ್ದ ಮಾಂತ್ರಿಕ ಮೆಸ್ಸಿ ಎಂಬುದು.

ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ. ಆ ಕ್ಷೇತ್ರ ಒಂದಷ್ಟು ಜನರಿಗೆ ಬದುಕುವ ದಾರಿ ತೋರುತ್ತದೆ. ಇನ್ನೊಂದಷ್ಟು ಜನರು ಆ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಪಡೆದು ಆ ಕ್ಷೇತ್ರವನ್ನೇ ಹೊಸ ಎತ್ತರಕ್ಕೆ, ವಿಸ್ತಾರದ ಬಯಲಿಗೆ ಕೊಂಡೊಯ್ಯುತ್ತಾರೆ. ಮೆಸ್ಸಿ ಅದೇ ಸಾಲಿಗೆ ಸೇರಿದವರು. ತಾವು ಬೆಳೆಯುತ್ತಾ ಜಗತ್ತಿನ ಮೂಲೆ ಮೂಲೆಯಲ್ಲಿ ಫೂಟ್‌ಬಾಲ್‌ ಒದೆಯುವವರಿಗೆ ಪ್ರೇರಣೆಯಾಗಿ ನಿಂತಿದ್ದಾರೆ.

‘ಮೆಸ್ಸಿ ಬಾಯ್‌’ ಎಂದೇ ಖ್ಯಾತನಾದ ಅಫ್ಘಾನಿಸ್ತಾನದ ಪುಟ್ಟ ಬಾಲಕ ಮುರ್ತಾಜಾ ಅಹ್ಮದಿ.
‘ಮೆಸ್ಸಿ ಬಾಯ್‌’ ಎಂದೇ ಖ್ಯಾತನಾದ ಅಫ್ಘಾನಿಸ್ತಾನದ ಪುಟ್ಟ ಬಾಲಕ ಮುರ್ತಾಜಾ ಅಹ್ಮದಿ.

ಕನ್ನಡ ಚಿತ್ರರಂಗವೂ ಹಾಗೆಯೇ. ಇದು ಹಲವರಿಗೆ ಬದುಕು ಕಟ್ಟಿಕೊಟ್ಟಿದೆ. ಇದರಲ್ಲಿ ಬದುಕು ಕಟ್ಟಿಕೊಂಡೇ ರಾಜ್‌ಕುಮಾರ್, ಪುಟ್ಟಣ್ಣ ಕಣಗಾಲ್‌ ತರಹದವರು ಚಿತ್ರರಂಗವನ್ನು ತಮ್ಮ ಪ್ರತಿಭೆಯಿಂದ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಆದರೆ ಅದು ಆಗಿನ ಕಾಲಘಟ್ಟ. ವಿಶ್ವಕ್ಕೊಂದು ವಿಶೇಷ ಬೆಸುಗೆ ರೂಪಿಸಿರುವ ಅಂತರ್ಜಾಲವನ್ನು ಬಳಸುತ್ತಿರುವ ತಲೆಮಾರು ಇರುವ ಇವತ್ತಿನ ಕಾಲಘಟ್ಟದಲ್ಲಿ ಕನ್ನಡ ಸಿನೆಮಾ ಕ್ಷೇತ್ರ ಹೊಸ ವಿಸ್ತಾರವನ್ನು ಕಂಡುಕೊಳ್ಳಬೇಕಿದೆ. ಅದಕ್ಕೆ ಕನ್ನಡ ಚಿತ್ರರಂಗಕ್ಕೊಬ್ಬ ಮೆಸ್ಸಿ ಬೇಕಾಗಿದ್ದಾನೆ. ಆತ ವ್ಯಕ್ತಿಯೂ ಆಗಿರಬಹುದು, ಅಥವಾ ಒಂದು ಹೊಸ ಸಿನಿಮಾವೂ ಆಗಿರಬಹುದು!

ಯಾಕೆ ಹೊಸ ವಾಹಕ ಬೇಕಾಗಿದೆ?

ಭಾರತೀಯ ಚಿತ್ರರಂಗದ ಇತಿಹಾಸದ ಮೇಲೆ ಕಣ್ಣು ಹಾಯಿಸಿದರೆ ಈ ಮೆಸ್ಸಿಯ ಅಗತ್ಯತೆ, ಅನಿವಾರ್ಯತೆಗಳು ತಣ್ಣಗೆ ಅರ್ಥವಾಗುತ್ತವೆ. ಅದು 1990ರ ಕಾಲಘಟ್ಟ. ಕಮರ್ಷಿಯಲ್‌ ಹಿಂದಿ ಸಿನಿಮಾಗಳಿಗೆ ಸಡ್ಡು ಹೊಡೆದು ಕಲಾತ್ಮಕ ಸಿನಿಮಾಗಳು ಸೋಲಲು ಆರಂಭಗೊಂಡ ಕಾಲ. 1950ರ ದಶಕದಲ್ಲಿ ಬೆಂಗಾಲಿ ಭಾಷೆಯಲ್ಲಿ ಹುಟ್ಟಿಕೊಂಡ ಕಲಾತ್ಮಕ ಚಿತ್ರಗಳು 90ರ ದಶಕದವರೆಗೂ ಮಾರುಕಟ್ಟೆಯನ್ನು ಆಳುತ್ತಿದ್ದವು. ಆದರೆ, ಜಾಗತೀಕರಣಕ್ಕೆ ಮುಹೂರ್ತ ರೆಡಿಯಾದ ಕಾಲದಲ್ಲಿ ಅಂಡರ್‌ವರ್ಲ್ಡ್‌, ರಿಯಲ್‌ಎಸ್ಟೇಟ್‌ನ ಹಣ ಹೂಡಿಕೆಯೊಂದಿಗೆ ಮೈನವಿರೇಳಿಸುವ ತಂತ್ರಜ್ಞಾನಗಳ ಬಳಕೆಯೊಂದಿಗೆ ಕಮರ್ಷಿಯಲ್‌ ಸಿನಿಮಾಗಳು ಮೂಡಿಬಂದವು. ಅವುಗಳಿಗೆ ಕಲಾತ್ಮಕ (ಇದನ್ನು ಸೃಜನಾತ್ಮಕ ಅಂತಲೂ ಅಂದುಕೊಳ್ಳಬಹುದು) ಪೈಪೋಟಿ ನೀಡುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು.

ಆಗ ಮಣಿರತ್ನಂ, ರಾಮ್‌ಗೋಪಾಲ್‌ ವರ್ಮಾ ತರಹದ ನಿರ್ದೇಶಕರು 1990ರ ಅಂತ್ಯದ ಹೊತ್ತಿಗೆ ವಾಸ್ತವಕ್ಕೆ ಹತ್ತಿರವಾದ ಸಿನಿಮಾಗಳನ್ನು ಕಮರ್ಷಿಯಲ್‌ ನೆಲೆಯಲ್ಲಿ ತೆಗೆಯುವ ಸಾಹಸಕ್ಕೆ ಕೈಹಾಕಿದರು. ಇದಕ್ಕೆ ದೇಶದ ಹಲವು ಭಾಷಿಕರು ಧ್ವನಿಗೂಡಿಸಿದರು.

ಈ ‘ಹೊಸ ಅಲೆ’ ಅಪ್ಪಳಿಸುವಿಕೆಗೆ ಹಲವು ಭಾಷೆಗಳು ಜತೆಯಾದವು. ಆದರೆ ತೆಲುಗು,  ಕನ್ನಡ ಮತ್ತು ಮಲಯಾಳಂ ಸಿನಿಮಾ ಉದ್ಯಮಗಳು ಹಿಂದೆ ಉಳಿದು ಬಿಟ್ಟವು. ತೆಲುಗು ಮುಂದಿನ ದಿನಗಳಲ್ಲಿ ಕಮರ್ಷಿಯಲ್‌ ಸಿನಿಮಾಗಳಿಗೆ ಹೊಸ ಪರಿಭಾಷೆಯನ್ನು ನೀಡಿ ತನ್ನ ಭಾಷೆ, ರಾಜ್ಯದ ಗಡಿಗಳನ್ನು ಮೀರಿ ಬೆಳೆಯುವಲ್ಲಿ ಸಫಲವಾಯಿತು.

ಮಲಯಾಳಂನಲ್ಲಿ ಅಡೂರ್‌ ಗೋಪಾಲಕೃಷ್ಣನ್‌ರಿಂದ ಆರಂಭಿಸಿ ಇತ್ತೀಚಿನ ಡಾ. ಬಿಜುವರೆಗೆ ಹಲವು ನಿರ್ದೇಶಕರು ಹೊಸ ಅಲೆಯ ಸಿನಿಮಾಗಳನ್ನು ತಯಾರಿಸಿದರಾದರೂ, ಅದಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ ಗೆಲುವು ತಂದುಕೊಡಲು ಅವರಿಂದಾಗಲಿಲ್ಲ. ಎಲ್ಲರಿಂದ ಹಿಂದೆ ಉಳಿದ ಮಲಯಾಳಿಗಳು 2010ರ ಹೊತ್ತಿಗೆ ತೀರಾ ಗಂಭೀರವಾಗಿ ತಮ್ಮ ಸಿನಿಮಾ ಉದ್ಯಮವನ್ನು ಮುಂಚೂಣಿಗೆ ತರುವುದು ಹೇಗೆ ಎಂದು ಚಿಂತಿಸತೊಡಗಿದರು.

ಆಗ ಹುಟ್ಟಿಕೊಂಡಿದ್ದೇ ಎರಡನೇ ಸುತ್ತಿನ ನ್ಯೂ ವೇವ್‌ ಸಿನಿಮಾಗಳ ಯುಗ. ಸಾಮಾನ್ಯಕ್ಕಿಂತ ಭಿನ್ನವಾದ ತಾಜಾ ಕತೆಗಳು, ಹೊಸ ತೆರನಾದ ನಿರೂಪಣಾ ಶೈಲಿಯ ಮೂಲಕ ಸಿನಿಮಾಗಳನ್ನು ಜನರ ಮುಂದಿಡುವುದು ಎಂದು ನಿರ್ಧರಿಸಿ ಸಂಘಟಿತ ಹೋರಾಟಕ್ಕೆ ಇಳಿದರು. ಅವತ್ತಿಗೆ ಸಾಲು ಸಾಲು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡ ಮೋಹನ್‌ಲಾಲ್‌, ಮಮ್ಮೂಟಿಯಂಥ ಹಿರಿಯ ನಟರು, ಆಸ್ಕರ್‌ ಪ್ರಶಸ್ತಿ ವಿಜೇತ ರಸೂಲ್‌ ಪೂಕುಟ್ಟಿಯಂಥ ಪ್ರತಿಭಾವಂತ ತಂತ್ರಜ್ಞರು, ಪ್ರಸಿದ್ಧ ನಿರ್ದೇಶಕರು, ಸಂಗೀತ ನಿರ್ದೇಶಕರು ಹಾಗೂ ನಟಿಯರ ದಂಡೇ ಇತ್ತು. ಆದರೂ ಅಂದುಕೊಂಡ ಯಶಸ್ಸು ಸಿಕ್ಕಿರಲಿಲ್ಲ. 2011ರಲ್ಲಿ ಮಲಯಾಳಂನ ‘ಆದಮಿಂಟೆ ಮಗನ್‌ ಅಬು’ ಆಸ್ಕರ್‌ಗೆ ಭಾರತದ ಅಧಿಕೃತ ಎಂಟ್ರಿಯಾಯಿತು. ಅದೇ ವರ್ಷ ‘ಕ್ರಿಶ್ಚಿಯನ್‌ ಬ್ರದರ್ಸ್‌’ ಎಂಬ ಬಹುತಾರಾಗಣದ ಚಿತ್ರ ಅಂತಾರಾಷ್ಟ್ರೀಯ ಮಟ್ಟದ ಬಿಡುಗಡೆ ಪಡೆಯಿತು. ಆದರೂ ತನ್ನ ಭಾಷೆಗಳನ್ನು ಮೀರಿ, ಕೇರಳದ ಅಂಚುಗಳನ್ನು ದಾಟಿ ಸಿನಿಮಾಗಳು ಸಕ್ಸಸ್‌ ಆಗಲಿಲ್ಲ. ಮತ್ತದೇ ಮಲಯಾಳಿ ಪ್ರೇಕ್ಷಕರ ಸುತ್ತಲೇ ಸಿನಿಮಾ ರಂಗ ಗಿರಗಿಟ್ಲೆ ಸುತ್ತುತ್ತಿದ್ದಾಗ ಹುಟ್ಟಿದ ಯುವ ನಾಯಕನ ಹೆಸರು ದುಲ್ಕರ್‌ ಸಲ್ಮಾನ್‌.

2012ರ ‘ಉಸ್ತಾದ್‌ ಹೋಟೆಲ್‌’ನಿಂದ ದುಲ್ಕರ್‌ ನಟನೆಯ ಕಲಾತ್ಮಕತೆಯ ಬೆಸುಗೆಯುಳ್ಳ ಕಮರ್ಷಿಯಲ್‌ ಸಿನಿಮಾಗಳ ಸರಣಿ ಆರಂಭವಾಯಿತು. ಬ್ಯಾಂಗಲೋರ್‌ ಡೇಸ್‌, ಚಾರ್ಲಿ ಹೆಸರಿನಲ್ಲಿ ದುಲ್ಕರ್ ಸಲ್ಮಾನ್‌ ಎಂಬ ನಟನ ಜನಪ್ರಿಯತೆ ಕೇರಳ ದಾಟಿ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುನ್ನುಗ್ಗಿ ಬಂತು. ಸಹಜವಾಗಿಯೇ ಮಲಯಾಳಂ ಸಿನಿಮಾ ರಂಗವನ್ನೂ ದುಲ್ಕರ್ ಸಲ್ಮಾನ್ ಹೊಸ ಎತ್ತರಕ್ಕೆ ಕೊಂಡೊಯ್ದರು. ಇದನ್ನು ಸಿನೆಮಾ ವಿಕಾಸವಾದದ ಭಾಗ ಅಂತಲೂ ನೋಡಬಹುದು.

ಬಹುತಾರಾಗಣದ ಚಿತ್ರ ‘ಬ್ಯಾಂಗಲೋರ್‌ ಡೇಸ್’ ಚಿತ್ರದ ಸ್ಟಿಲ್‌ನಲ್ಲಿ ಫಹಾದ್‌ ಫಾಸಿಲ್‌, ನಜ್ರಿಯಾ ನಜೀಂ, ನಿವೀನ್‌ ಪೌಲಿ, ಪ್ಯಾರಿಸ್‌ ಲಕ್ಷ್ಮೀ, ದುಲ್ಕರ್‌ ಸಲ್ಮಾನ್‌, ಪಾರ್ವತಿ ಮೆನನ್‌. ಇಶಾ ತಲ್ವಾರ್‌, ನಿತ್ಯಾ ಮೆನನ್‌ ಕೂಡ ಚಿತ್ರದಲ್ಲಿದ್ದಾರೆ.
ಬಹುತಾರಾಗಣದ ಚಿತ್ರ ‘ಬ್ಯಾಂಗಲೋರ್‌ ಡೇಸ್’ ಚಿತ್ರದ ಸ್ಟಿಲ್‌ನಲ್ಲಿ ಫಹಾದ್‌ ಫಾಸಿಲ್‌, ನಜ್ರಿಯಾ ನಜೀಂ, ನಿವೀನ್‌ ಪೌಲಿ, ಪ್ಯಾರಿಸ್‌ ಲಕ್ಷ್ಮೀ, ದುಲ್ಕರ್‌ ಸಲ್ಮಾನ್‌, ಪಾರ್ವತಿ ಮೆನನ್‌. ಇಶಾ ತಲ್ವಾರ್‌, ನಿತ್ಯಾ ಮೆನನ್‌ ಕೂಡ ಚಿತ್ರದಲ್ಲಿದ್ದಾರೆ.

ಈ ಯಶಸ್ಸಿನ ನೆರಳಿನಲ್ಲೇ ನಿವೀನ್‌ ಪೌಲಿ, ನಜ್ರಿಯಾ ನಜೀಮ್‌, ಪಾರ್ವತಿ ಮೆನನ್‌, ಕುಂಚಾಕೋ ಬೋಬನ್‌, ಜಯಸೂರ್ಯ ತರಹದ ಯುವ ನಟರು ಹೊಸ ರೂಪದಲ್ಲಿ ಅವತರಿಸಿದರು. ದೃಷ್ಯಂನಂತ ಅತ್ಯಧ್ಭುತ ಸಿನಿಮಾಗಳು ಮಲಯಾಳಂ ಸಿನಿಮಾ ರಂಗಕ್ಕೆ ಹೊಸ ಹೊಳಹು ನೀಡಿತು. ವಿಸ್ತರಿತ ಮಾರುಕಟ್ಟೆಗೆ ಮೋಹನ್‌ಲಾಲ್‌ರಂಥ ಹಳೆಹುಲಿಗಳು ದಾಗುಂಡಿ ಇಟ್ಟರು. ತೆಲುಗು ಮತ್ತು ತಮಿಳಿನ ಸಿನಿಮಾಗಳು ಸರಣಿಯಾಗಿ 100 ಕೋಟಿಯ ಕ್ಲಬ್‌ ಸೇರುವಾಗ ‘ಪುಲಿಮುರಗನ್‌’ ಹೆಸರಿನಲ್ಲಿ ತನ್ನ ಭಾಷೆಗೂ ಆ ಸಾಲಿನಲ್ಲಿ ಸ್ಥಾನ ಕೊಡಿಸಿದರು ಮೋಹನ್‌ಲಾಲ್‌.

ಇವತ್ತಿಗೆ ದುಲ್ಕರ್‌ ಸಿನಿಮಾಗಳು ಭಾರತದ ಮೂಲೆ ಮೂಲೆಗಳಲ್ಲಿ ಬಿಡುಗಡೆಯಾಗುತ್ತವೆ. ಬೇರೆ ಭಾಷೆಗಳಲ್ಲಿ ನಿರ್ಮಾಣವಾಗುವ ‘ಒಕೆ ಕಣ್ಮಣಿ’, ‘ಮಹಾನಟಿ’ಯಂಥ ಬಿಗ್‌ ಬಜೆಟ್‌ ಸಿನಿಮಾಗಳಲ್ಲಿ ಹೀರೋ ಪಟ್ಟ ದುಲ್ಕರ್‌ಗೆ ನೀಡುವಷ್ಟು ಅವರು ತಮ್ಮ ಅಭಿಮಾನಿ ಮಾರುಕಟ್ಟೆಯನ್ನು ಸಂಪಾದಿಸಿಕೊಂಡಿದ್ದಾರೆ. ಒಬ್ಬ ನಾಯಕ ನಟನ ಬೆಳೆವಣಿಗೆ ಮಲಯಾಳಂ ಸಿನೆಮಾ ಇಂಡಸ್ಟ್ರಿಯ ಬೆಳವಣಿಗೆಯ ಕತೆಯೂ ಆಯಿತು.

ಅತ್ತ ಸೈರಾಟ್‌ ಮೂಲಕ ಮರಾಠಿ ಸಿನಿಮಾವೂ ತನ್ನ ಗಡಿಯನ್ನು ಮೀರಿ ಬೇರೆ ಭಾಷೆಗಳ ದೊಡ್ಡ ಸಮೂಹದ ಜನರನ್ನು ತಲುಪಿತು; 100 ಕೋಟಿಯ ಕ್ಲಬ್‌ ಸೇರಿತು. ಅದರ ಬೆನ್ನಲ್ಲೇ ಸೂಕ್ಷ್ಮ ಕತೆಗಳನ್ನು ಇಟ್ಟುಕೊಂಡು ಕಮರ್ಶಿಯಲ್ ಸಿನೆಮಾಗಳು ಮರಾಠಿಯಲ್ಲಿ ಮೂಡಿ ಬಂದವು. ಪಕ್ಕದ ಬಾಲಿವುಡ್‌ ಕೂಡ ತನ್ನ ಕಮರ್ಷಿಯಲ್ ಕತೆಯಲ್ಲಿ ಮರಾಠಿಯನ್ನು ಒಳಗೊಳ್ಳಬೇಕಾದ ಅನಿವಾರ್ಯತೆಯನ್ನು ಇವು ಸೃಷ್ಟಿದವು. ಇಲ್ಲಿ ವ್ಯಕ್ತಿಗಿಂತ, ಒಂದು ಸಿನೆಮಾ ಈ ಕಾಲಘಟ್ಟದ ಮಾರುಕಟ್ಟೆಯ ವಿಸ್ತರಣೆಗೆ ಕಾರಣವಾಯಿತು.

ಇಷ್ಟೆಲ್ಲದರ ನಡುವೆ ಪ್ರಮುಖ ಭಾರತೀಯ ಭಾಷೆಗಳ ಸಿನೆಮಾ ಕ್ಷೇತ್ರದ ಪೈಕಿ ಬಾಕಿ ಉಳಿದಿದ್ದು ಕನ್ನಡ ಸಿನಿಮಾ ರಂಗ ಮಾತ್ರ. ಕಾರಣ ಇಷ್ಟೇ; ಕನ್ನಡಕ್ಕೊಬ್ಬ ತೆಲುಗಿನ ಚಿರಂಜೀವಿ, ಪವನ್‌ ಕಲ್ಯಾಣ್‌, ರಾಜಮೌಳಿ, ತಮಿಳಿನ ಕಮಲ ಹಾಸನ್‌, ರಜನಿಕಾಂತ್‌, ಮಲಯಾಳಂನ ನಿವೀನ್‌ ಪೌಲಿ, ದುಲ್ಕರ್‌ ಸಲ್ಮಾನ್‌, ಮೋಹನ್‌ಲಾಲ್‌ ತರಹದ ಹೊಸ ಇಮೇಜ್‌ನ ನಟರು ಬೇಕಾಗಿತ್ತು; ಕನಿಷ್ಟ ವಿಸ್ತೃತ ಸಮೂಹದ ಗಮನ ಸೆಳೆಯುವಂತಹ ಸಿನಿಮಾಗಳಾದರೂ ಬೇಕಿತ್ತು. ಕನ್ನಡದಲ್ಲಿ ನಟರಿಗೇನು ಕೊರತೆ ಇಲ್ಲವಾದರೂ ಕರ್ನಾಟಕದಾಚೆಗೆ ಅವರ ಜನಪ್ರಿಯತೆ ತೀರಾ ವ್ಯಕ್ತಿಗೆ ಸೀಮಿತ. ಸುದೀಪ್‌ ತರಹದ ಹಿರಿಯ ನಟ ಭಾಷಾ ಗಡಿ ಮೀರಿದರಾದರೂ ಅದಕ್ಕೊಂದು ನಿರಂತರತೆ, ವಿಸ್ತಾರತೆ ಸಿಗಲಿಲ್ಲ. ಅದಕ್ಕೆ ಅವರ ಈವರೆಗಿನ ಕನ್ನಡ ಸಿನಿಮಾಗಳ ಗುಣಮಟ್ಟವೂ ಕಾರಣ. ಇವರನ್ನು ಹೊರತುಪಡಿಸಿ ಉಳಿದ ಜನಪ್ರಿಯ ನಟರ ವ್ಯಾಪ್ತಿಯ ಬಗ್ಗೆ ವಿಶೇಷವಾಗಿ ಹೇಳುವುದಕ್ಕೆ ಏನೂ ಇಲ್ಲ.

2005ರಲ್ಲಿ ಬಂದ ಮುಂಗಾರು ಮಳೆಯೇ ಮೊನ್ನೆ ಮೊನ್ನೆವರೆಗೂ ಕನ್ನಡದ ಅತಿ ಹೆಚ್ಚು ಸಂಪಾದನೆಯ ಸಿನಿಮಾವಾಗಿತ್ತು ಎಂದರೆ ಸಿನಿಮಾಗಳ ಗುಣಮಟ್ಟ, ಮಾರುಕಟ್ಟೆಯ ವಿಸ್ತೀರ್ಣ ಯಾವ ಹಂತಕ್ಕೆ ಕುಸಿದಿತ್ತು ಎಂಬುದನ್ನು ಅಂದಾಜು ಮಾಡಬಹುದು. ಇದರ ನಡುವೆ ಯುವ ಜನಾಂಗವನ್ನು ಕಿರಿಕ್‌ ಪಾರ್ಟಿ, ತಿಥಿ, ರಾಮ ರಾಮ ರೇಯಂಥ ಸಿನಿಮಾಗಳು ಸೆಳೆದವಾದರೂ ಇವುಗಳು ಗಡಿ ಮೀರಿ ಸದ್ದು ಮಾಡುವಲ್ಲಿ ವಿಶೇಷ ಮೈಲುಗಲ್ಲುಗಳಾಗಿ ಕಾಣಲಿಲ್ಲ. ಮೊದಲನೆಯದ್ದು ಮನರಂಜನೆಯ ಕಳಪೆ ಸರಕಾಗಿತ್ತು. ಉಳಿದೆರಡು ಗಟ್ಟಿ ಸಿನಿಮಾಗಳಾದರೂ ನಂಬಿಕೆ ಕಳೆದುಕೊಂಡಿದ್ದ ಮಾರುಕಟ್ಟೆಯಲ್ಲಿ ದುಡ್ಡು ಬಾಚಲಿಲ್ಲ. ಇತ್ತೀಚೆಗೆ ಬಂದ ವಿಲನ್‌ನಂಥ ಸಿನಿಮಾಗಳ ಹೆಸರು ಉಲ್ಲೇಖಿಸದಿರುವುದೇ ಸೂಕ್ತ. ಕನ್ನಡ ಸಿನಿಮಾಗಳ ಮೇಲಿನ ಅರ್ಧ ನಂಬಿಕೆಯನ್ನು ಇಂಥ ಸಿನಿಮಾಗಳೇ ಒಡೆದು ಚೂರಾಗಿಸಿದವು.

ಇವೆಲ್ಲದರ ನಡುವೆ ಈಗ ಮೊದಲ ಬಾರಿಗೆ ಬಹುಭಾಷೆಗಳನ್ನು ಗುರಿಯಾಗಿರಿಸಿಕೊಂಡು ಸಿನಿಮಾವೊಂದು ಹೊರ ಬರುತ್ತಿದೆ. ಅದರ ಹೆಸರು ಕೆಜಿಎಫ್‌. ಮತ್ತದರ ನಾಯಕ ಬಲು ಮಹತ್ವಾಕಾಂಕ್ಷಿ ಯಶ್‌.

‘ಕೆಜಿಎಫ್‌’:

ಇಂದು ಯಾವುದೇ ಭಾಷೆಯ ಸಿನಿಮಾ ನೋಡಲು ಯಾರೂ ಗಡಿ ದಾಟಿ ಬರಬೇಕಾಗಿಲ್ಲ. ತಂತ್ರಜ್ಞಾನ ಸಿನಿಮಾವನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸುವಷ್ಟು ಬೆಳೆದಿದೆ. ಆದರೆ ಮೂಲೆ ಮೂಲೆಯಲ್ಲಿ ಈ ಸಿನೆಮಾವನ್ನು ನೋಡಲೇಬೇಕು ಎಂಬ ಮನಸ್ಥಿತಿ ಹುಟ್ಟುಹಾಕುವ ಕಥಾ ಹಂದರವುಳ್ಳ ಕಲಾಕೃತಿ ಬೇಕಷ್ಟೆ. ಕನ್ನಡದ ಪಾಲಿಗೆ ‘ಆ ಸಿನಿಮಾ ನಾನಾಗುತ್ತೇನೆ’ ಎಂಬ ಭರವಸೆಯನ್ನು ಕೆಜಿಎಫ್‌ ಬಿತ್ತಿದೆ. ಮತ್ತದರ ನಾಯಕ ಯಶ್‌ ತಾನಿದರ ಸಾರಥಿ ಎಂಬುದನ್ನು ಬಿಂಬಿಸಿಕೊಂಡಿದ್ದಾರೆ.

ಅಂದ ಹಾಗೆ ‘ಕೆಜಿಎಫ್‌’ ಎನ್ನುವುದು ಕರ್ನಾಟಕದ ಪಾಲಿಗೆ ಚಿನ್ನ ಬೆಳಯುವ ಭೂಮಿ. ಅದೇ ಹೆಸರಿನಲ್ಲಿ ತಯಾರಾಗಿರುವ ಸಿನಿಮಾ ಕನ್ನಡದ ಸಿನಿಮಾ ರಂಗಕ್ಕೆ ಚಿನ್ನದ ದಿನಗಳನ್ನು ತರಲಿವೆ ಎಂಬ ನಿರೀಕ್ಷೆಗಳು ಚಿತ್ರರಂಗದ ವೃತ್ತಿಪರರ ವಲಯದಲ್ಲಿದೆ. ಅದು ನಿಜವಾಗಬೇಕಿದ್ದರೆ ಕೆಜಿಎಫ್‌ ಗೆಲ್ಲಬೇಕು; ಜತೆಗೆ ಯಶ್‌ ಕೂಡ.

ತುರ್ತಾಗಿ ಕನ್ನಡ ಸಿನಿಮಾ ರಂಗಕೊಬ್ಬ ನಾಯಕ ಬೇಕು. ಆತ ಭಾಷೆ, ರಾಜ್ಯದ ಗಡಿಗಳನ್ನು ಮೀರಿ ಇಲ್ಲಿನ ಇಂಡಸ್ಟ್ರಿಗೆ ಮಾರುಕಟ್ಟೆ ಸೃಷ್ಟಿಸಬೇಕು. ಹಾಗಾಗಿ ಕೆಜಿಎಫ್‌ ಮತ್ತು ಯಶ್‌ ಗೆಲ್ಲಲೇಬೇಕು. ಕನಿಷ್ಠ ಇಬ್ಬರಲ್ಲಿ ಒಬ್ಬರಾದರೂ ಗೆಲ್ಲಬೇಕಿದೆ. ಆಗ ಮಾತ್ರ ಇದು ಸಾಧ್ಯವಾಗುತ್ತದೆ. ಕೆಜಿಎಫ್‌ ಸೈರಾಟ್‌ ಆಗುತ್ತಾ? ಯಶ್‌ ಮೆಸ್ಸಿ ಅಥವಾ ದುಲ್ಕರ್‌ ಆಗ್ತಾರಾ? ಡಿಸೆಂಬರ್‌ 21 ಅಂದರೆ ನಾಳೆ ಕೆಜಿಎಫ್‌ ಬಿಡುಗಡೆಯಾಗುತ್ತಿದೆ. ಈ ವರ್ಷಾಂತ್ಯಕ್ಕೆ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.