samachara
www.samachara.com
ರೈತ ಸಂಘದ ನೆನಪುಗಳ ಸಮಾಧಿಯಲ್ಲಿ ಸಿಕ್ಕ ನಾಗರಾಜ ಭಟ್ಟರ ‘ಶನಿ ಬಿಟ್ಟ ಕತೆ’!
FEATURE STORY

ರೈತ ಸಂಘದ ನೆನಪುಗಳ ಸಮಾಧಿಯಲ್ಲಿ ಸಿಕ್ಕ ನಾಗರಾಜ ಭಟ್ಟರ ‘ಶನಿ ಬಿಟ್ಟ ಕತೆ’!

ಮಡಿ ಪಂಚೆಯಲ್ಲಿದ್ದ ಭಟ್ಟರನ್ನು ರೈತರ ಘೋಷಣೆ, ಗಡಿಬಿಡಿಗಳು ದನಗಾಹಿಗಳ ಕೊಳಲ ನಾದದಂತೆ ಬೇಡ ಬೇಡವೆಂದರೂ ಸೆಳೆಯತೊಡಗಿದವು. ಜೈಲಿಗೆ ಹೋಗಲು ಸಿದ್ದರಾಗಿ ನಾ ಮುಂದು ತಾ ಮುಂದೆಂದು ಬಸ್ಸು ಹತ್ತುತ್ತಿದ್ದವರ ಜೊತೆ ನಾಗರಾಜ ಭಟ್ಟರೂ ಹತ್ತಿ ಕೂತರು.

- ನೆಂಪೆ ದೇವರಾಜ್‌

1984, ಜನವರಿ 26ರ ಗಣರಾಜ್ಯೋತ್ಸದ ದಿನ. ರಾಜ್ಯ ರೈತ ಸಂಘ ‘ಜೈಲ್ ಭರೋ’ ಚಳವಳಿಗೆ ಕರೆ ಕೊಟ್ಟಿದ್ದೇ ತಡ; ಇಡೀ ರಾಜ್ಯದ ಹಲವು ಜೈಲುಗಳು ಭರ್ತಿಯಾದವು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಗಿಜಿಗುಡತೊಡಗಿದವು. ಎಲ್ಲೆಲ್ಲೂ ರೈತರನ್ನು ಹೊತ್ತ ಕೆಎಸ್‌ಆರ್‌ಟಿಸಿ ಬಸ್ಸುಗಳು. 'ನಮ್ಮನ್ನು ಜೈಲಿಗೆ ಕಳುಹಿಸಿ! ನಮ್ಮನ್ನು ಜೈಲಿಗೆ ಕಳುಹಿಸಿ!' ಎಂದು ಶಾಲು ಹೊತ್ತ ರೈತರು ಪೊಲೀಸರ ಎದುರಿಗೆ ದುಂಬಾಲು ಬೀಳುತ್ತಿದ್ದ ದೃಶ್ಯಗಳು ಸರ್ವೇ ಸಾಮಾನ್ಯವಾಗಿತ್ತು.

ಎಲ್ಲಾ ಊರುಗಳ ಕಪ್ಪು ಬಣ್ಣದ ಡಾಂಬರು ರಸ್ತೆಗಳು ರೈತರ ಹಸಿರು ಶಾಲುಗಳಿಂದಾಗಿ ಬಂಗಲೆಗಳ ಎದುರಿನಂಗಳದ ಲಾನುಗಳಾಗಿ ಕಂಗೊಳಿಸುತ್ತಿದ್ದವು. ಬೆಳಗಾವಿ, ಬಳ್ಳಾರಿ, ಶಿವಮೊಗ್ಗ, ಬೆಂಗಳೂರು, ಮೈಸೂರು ಜಿಲ್ಲೆಗಳಲ್ಲಿ ಎಲ್ಲ ಜೈಲುಗಳೂ ಭರ್ತಿಯಾಗಿ, ಕೊನೆಗೆ ಬಯಲು ಬಂಧೀಖಾನೆಗಳು ನಿರ್ಮಾಣಗೊಂಡವು. ಜೈಲಿನೊಳಗೆ ಹೋದವರಿಗಿಂತ, ಬಂಧಿತರಾಗಿದ್ದರೂ ಜೈಲುಗಳ ಕೊರತೆಯಿಂದ ಹೊರಗಿದ್ದವರ ಸಂಖ್ಯೆ ಲೆಕ್ಕಕ್ಕೆ ಸಿಗದೆ ಹೋಗಿತ್ತು. ಸ್ವಾತಂತ್ರ್ಯ ನಂತರ ಈ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಹೀಗೆ ಎಲ್ಲ ಜೈಲುಗಳು ಭರ್ತಿಯಾಗಿದ್ದು. ಈ ಕಾರಣಕ್ಕೆ ಬಯಲು ಬಂಧೀಖಾನೆಗಳೆಂಬ ಹೊಸ ಪರಿಕಲ್ಪನೆಯನ್ನು ರಾಜ್ಯ ಸರಕಾರ ಕಾರ್ಯರೂಪಕ್ಕೆ ತಂದಿದ್ದು.

ರಾಜ್ಯ ರೈತ ಸಂಘದ ಚಟುವಟಿಕೆ ತೀವ್ರವಾಗಿದ್ದ ಕಾಲಘಟ್ಟ ಅದು. ಅಂತಹ ಸಮಯದಲ್ಲಿ ಕೇಂದ್ರ ಸಂಘದ ಇಂತಹ ಕರೆಗಳಿಗೆ ತೀರ್ಥಹಳ್ಳಿ ತಾಲೂಕು ರೈತ ಸಂಘ ಸುಮ್ಮನಿರಲಾದೀತೆ? ಪ್ರೊಫೆಸರ್ ನಂಜುಂಡ ಸ್ವಾಮಿ ಮತ್ತು ಎನ್.ಡಿ ಸುಂದರೇಶ್‌ರವರ ಚಾಟಿಯೇಟಿನ ಮಾತುಗಳೂ, ಪತ್ರಿಕಾ ಪದಪುಂಜಗಳಿಂದ ಸಿಂಗಾರಗೊಂಡು ಆಡಳಿತ ನಡೆಸುತ್ತಿದ್ದ ರಾಮಕೃಷ್ಣ ಹೆಗಡೆಯವರ ಸರ್ಕಾರದ ಮೇಲಿನ ಕೆಂಡದುಂಡೆಯಂತಹ ಟೀಕೆಗಳು ನೀಡಿದ ಪ್ರೇರಣೆ ಇರುವಾಗ ಜೈಲಿಗೆ ಹೋಗುವುದು ಯಾವ ಲೆಕ್ಕ? ಹಾಗೆ ನಮ್ಮೊಂದು ತಂಡ ಜೈಲಿಗೆ ಹೋಗಲು ಸಿದ್ಧವಾಗಿತ್ತು. ಆದರೆ ಮುಹೂರ್ತ ಕೈಕೊಟ್ಟು ದೇವಸ್ಥಾನದ ಅರ್ಚಕರೊಬ್ಬರು ನಮ್ಮ ಜತೆ ಬಂದಿದ್ದು ಮಾತ್ರ ಕತೆಗೆ ಸಿಕ್ಕ ಅಸಾಧಾರಣ ತಿರುವು.

ಪ್ರೊಫೆಸರ್‌ ಎಂ.ಡಿ. ನಂಜುಂಡಸ್ವಾಮಿ ಮತ್ತು ಎನ್‌.ಡಿ. ಸುಂದರೇಶ್‌.
ಪ್ರೊಫೆಸರ್‌ ಎಂ.ಡಿ. ನಂಜುಂಡಸ್ವಾಮಿ ಮತ್ತು ಎನ್‌.ಡಿ. ಸುಂದರೇಶ್‌.

ನನ್ನೂರು ನೆಂಪೆ ಸಮೀಪದ ಬಳಗಟ್ಟೆ ಎಂಬ ಮತ್ತೊಂದು ಪುಟ್ಟ ಹಳ್ಳಿಯ ದೇವಸ್ಥಾನಕ್ಕೆ ಅರ್ಚಕರಾಗಿದ್ದವರು ನಾಗರಾಜ ಭಟ್ಟರು. ಅತ್ಯಂತ ಸರಳತೆ ಮತ್ತು ಮುಗ್ಧತೆಯ ಆಧಾರದ ಮೇಲೆ ಪೂಜಾ ಕೈಂಕರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾ, ಊರಿನವರ ಸಕಲ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದವರು. ಆ ಕಾಲದಲ್ಲಿ ದೇವಸ್ಥಾನಗಳ ಗರ್ಭಗುಡಿಗಳ ಕಾಣಿಕೆ ಹಂಡೆಗಳು ದೇವರೊಂದಿಗೆ ಮಾತಾಡುತ್ತಿದ್ದವು. ಅಡಿಕೆ, ಏಲಕ್ಕಿ, ಅಕ್ಕಿ, ಬತ್ತ, ಕಾಳು ಮೆಣಸು ಮುಂತಾದ ಪದಾರ್ಥಗಳ ಮೇಲೆ ದೇವಸ್ಥಾನದ ಅಭಿವೃದ್ಧಿ ಸಂಬಂಧವಿಟ್ಟುಕೊಂಡಿತ್ತು. ಬೆಂಗಳೂರಿನ ರಿಯಲ್ ಎಸ್ಟೇಟ್ ಅಥವಾ ರಾಜಕಾರಣಿಗಳ ಜೊತೆ ದೇವಸ್ಥಾನಗಳು ಸಮ್ಮಿಲನಗೊಂಡಿರಲಿಲ್ಲ. ಹಾಗಾಗಿ ದೇವಸ್ಥಾನದ ಒಡೆದ ಹೆಂಚುಗಳನ್ನು ಹಾಕಿಸಲೂ ಅಂದು ಪಡಬಾರದ ಕಷ್ಟಪಡಬೇಕಿತ್ತು. ಅಂತಹ ಸಮಯದಲ್ಲಿ ಇದ್ದ ನಾಗರಾಜ ಭಟ್ಟರ ಕಷ್ಟಗಳನ್ನು ನೀವು ಊಹಿಸಿಕೊಳ್ಳಿ.

ಹೀಗಿರುವಾಗಲೇ, ಎಂದಿನಂತೆ ನಾಗರಾಜ ಭಟ್ಟರು ಬಳಗಟ್ಟೆ ದೇವಸ್ಥಾನದ ಪೂಜೆಯನ್ನು ಮುಗಿಸಿ ಬಾಣಂಕಿ ಎಂಬ ಊರಿನಲ್ಲಿ ‘ಸತ್ಯನಾರಾಯಣ ವ್ರತ’ ಮಾಡುವ ಉದ್ದೇಶದಿಂದ ಮಡಿ ಪಂಚೆ, ತಾಮ್ರದ ಮಿರಳೆ ಮತ್ತು ಸೌಟಿನೊಂದಿಗೆ ಹೊರಟಿದ್ದು ಜನವರಿ 26ರಂದು. ದೇವಂಗಿ ಎಂಬ ಊರಿನ ಮುಖಾಂತರವೇ ಹೋಗಬೇಕಿತ್ತು. ಭಟ್ಟರು ನೋಡುತ್ತಾರೆ! ಇಡೀ ದೇವಂಗಿ ಸರ್ಕಲ್ ಹಸಿರು ಶಾಲುಗಳೊಂದಿಗೆ ತುಂಬಿ ತುಳುಕುತ್ತಿದೆ. “ಹೋರಾಟ ಜೈಲು, ಅನ್ಯಾಯ ಬೈಲು”, “ಯಾತಕ್ಕಾಗಿ ಹೋರಾಟ ನ್ಯಾಯಕ್ಕಾಗಿ ಹೋರಾಟ”, “ಜೈಲಂತೆ ಜೈಲು. ಇವರ ಅಪ್ಪನದಂತೆ ಜೈಲು” ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿವೆ. ಫೋಲೀಸರು ಸಂಧಾನ ಮಾಡುವ ನೆವದಲ್ಲಿ ಚಳುವಳಿಗಾರರನ್ನು ಬಂಧಿಸದೆ ಬಿಟ್ಟು ಹೋಗುವ ನಾಟಕದಲ್ಲಿ ನಿರತರಾಗಿದ್ದರೆ, ಕಾರು ಬಸ್ಸು ಸ್ಕೂಟರುಗಳಲ್ಲಿ ಬಂದ ಪ್ರಯಾಣಿಕರು ರೈತರೊಂದಿಗೆ ಚರ್ಚೆಗಿಳಿದು “ದಯಮಾಡಿ ತಮ್ಮ ವಾಹನವನ್ನು ಬಿಟ್ಟು ಬಿಡಿ” ಎನ್ನುತ್ತಿದ್ದಾರೆ. ಆದರೆ ರೈತರು ಜಪ್ಪಯ್ಯ ಎನ್ನುತ್ತಿಲ್ಲ. ಆ ಕಾಲದ ಅಪರೂಪದ ಬಸ್ಸಾಗಿದ್ದ ಕೆಎಸ್‌ಆರ್‌ಟಿಸಿ ಬಸ್ಸುಗಳು ಬಂದು ನಿಂತಿವೆ; ಆರೆಸ್ಟಾದವರನ್ನು ತುಂಬಿಕೊಂಡು ಹೋಗಲು.

ನಾಗರಾಜ ಭಟ್ಟರಿಗೆ ದೇವಂಗಿ ಸರ್ಕಲ್ಲಿನಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುವುದಕ್ಕೆ ಸಮಯವೇ ಹಿಡಿಯಿತು. ಹಸಿರು ಶಾಲು ಹೊದ್ದು ನವಿಲು ಕಲ್ಲು ಗುಡ್ಡ ಬೆಟ್ಟಗಳಿಗೆ ಕೇಳುವಂತೆ ಕೂಗು ಹಾಕುತ್ತಿರುವ ರೈತರಲ್ಲಿ ಬಹುತೇಕರು ನಾಗರಾಜ ಭಟ್ಟರ ಪರಿಚಿತರು. ಇವರೆಲ್ಲರ ಆವೇಶ, ಉತ್ಸಾಹ, ಕೂಗು, ಜಗಳ, ನಗು ಎಲ್ಲವೂ ನಾಗರಾಜ ಭಟ್ಟರ ಸತ್ಯನಾರಾಯಣ ವ್ರತವನ್ನು ಮರೆಸಿತು. ತಾಮ್ರದ ಮಿರಳೆ ಮತ್ತು ಮಡಿಯ ಬಟ್ಟೆಯುಟ್ಟಿದ್ದೇನೆ ಅಂಶಗಳು ಭಟ್ಟರಿಗೆ ಮರೆತು ಹೋಯಿತು. ತಮ್ಮ ಊರಿನವರಿಗೇನಾಗಿದೆ? ಎಂದು ಒಬ್ಬೊಬ್ಬರನ್ನೆ ಮುಟ್ಟಿ ಮುಟ್ಟಿ ಮಾತಾಡಿಸತೊಡಗಿದರು. ಹೀಗೆ ಮಾತಾಡಿಸುತ್ತಿದ್ದಾಗ ಗುಂಪಿನಲ್ಲಿ ಬಹಳಷ್ಟು ಗೊಂದಲ ಮೂಡತೊಡಗಿತು. ‘ನೀ ಬಾರೋ ನೀ ಬಾರೋ..’, ‘ನೀ ನೀಹತ್ತೋ ಹತ್ತೋ’, ‘ನಂಗೆ ಗದ್ದೆ ಕೊಯ್ಲದೆ ಬರಲ್ಲ’, ಎಂದೊಡನೆ ‘ನೀ ಒಬ್ನೇ ಗದ್ದೆ ಕಂಡವನಾ?’ ಎಂಬ ದ್ವನಿಗಳ ಜೊತೆಗೆ ಮತ್ತಷ್ಟು ಮೊಗೆದಷ್ಟು ಘೋಷಣೆಗಳು.

ಮಡಿ ಪಂಚೆಯಲ್ಲಿದ್ದ ನಾಗರಾಜ ಭಟ್ಟರನ್ನು ರೈತರ ಘೋಷಣೆ ಹಾಗೂ ಗಡಿಬಿಡಿಗಳು ದನಗಾಹಿಗಳ ಕೊಳಲ ನಾದದಂತೆ ಬೇಡ ಬೇಡವೆಂದರೂ ಸೆಳೆಯತೊಡಗಿದವು. ಜೈಲಿಗೆ ಹೋಗಲು ಸಿದ್ದರಾಗಿ ನಾ ಮುಂದು ತಾ ಮುಂದೆಂದು ಬಸ್ಸು ಹತ್ತುತ್ತಿದ್ದವರ ಜೊತೆ ನಾಗರಾಜ ಭಟ್ಟರೂ ಹತ್ತಿ ಕೂತರು. ಮೊದ ಮೊದಲು ಇವರನ್ನು ಯಾರೂ ಗಮನಿಸಲಿಲ್ಲ. ರೈತ ಚಳುವಳಿ ಮತ್ತು ಪುರೋಹಿತರಿಗೂ ಸಂಬಂಧ ಕಲ್ಪಿಸಿಕೊಳ್ಳುವುದೇ ಅಸಾಧ್ಯದ ಮಾತಾಗಿದ್ದ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಜೈಲಿಗೆ ಬರಲಿದ್ದಾರೆ ಎಂಬುದನ್ನು ಯಾರು ಊಹಿಸಿಯಾರು?

ಕೆಎಸ್‌ಆರ್‌ಟಿಸಿ ಬಸ್ಸು ರೈತರನ್ನು ಹೊತ್ತು ಹೊರಟೇ ಬಿಟ್ಟಿತು. ಹೆಚ್ಚೂ ಕಡಿಮೆ ತಾಲೂಕು ಕೇಂದ್ರ ತೀರ್ಥಹಳ್ಳಿಯಲ್ಲಿದ್ದ ಜಡ್ಜ್ ಸಾಹೇಬರ ಮನೆಗೆ ನಮ್ಮನ್ನೆಲ್ಲ ಕರೆ ತರುವವರೆಗೆ ನಾಗರಾಜ ಭಟ್ಟರನ್ನು ಗಮನಿಸಿದವರೇ ಇಲ್ಲ. ಗೆಳೆಯ ಸುಭಾಶ್ ದೇವಂಗಿ ಸಾಲಾಗಿ ನಿಂತಿದ್ದ ರೈತರ ನಡುವೆ ನಾಗರಾಜ ಭಟ್ಟರನ್ನು ಕಂಡು ಹೌ ಹಾರಿದಾಗಲೇ ಉಳಿದವರ ಗಮನ ಸೆಳೆದಿದ್ದು ಭಟ್ಟರು. ಅದೂ ಮಡಿ ಪಂಚೆ, ಹೆಗಲ ಮೇಲೊಂದು ಶಲ್ಯ. ಕೈಯಲ್ಲಿ ಮಿರಳೆ ಹಿಡಿದು ನಿಂತಿದ್ದಾರೆ! 'ಅಯ್ಯೋ ಭಟ್ರು ಬಂದಿದ್ದಾರೆ' ಎಂದಾಗ ಎಲ್ಲರ ದೃಷ್ಟಿ ಒಂದೇ ಏಟಿಗೆ ಭಟ್ಟರ ಮೇಲೆ ಬಿತ್ತು. ಭಟ್ಟರು ಇವರಾರ ನೋಟಕ್ಕೂ ಕವಡೆ ಕಾಸಿನ ಕಿಮ್ಮತ್ತನ್ನು ನೀಡದೆ ನಿರುಮ್ಮಳರಾಗಿ ನಿಂತಿದ್ದಾರೆ. ತೀರ್ಥಹಳ್ಳಿಯ ಜಡ್ಜ್ ಸಾಹೇಬರು ತಮ್ಮ ಮನೆಯಲ್ಲಿ ಕೂತು ‘ನೀವೆಲ್ಲ ಜಾಮೀನು ಪಡೆಯುತ್ತೀರ?’ ಎಂದಾಗ ‘ಇಲ್ಲ’ ಎಂಬುದು ಎಲ್ಲರ ಉತ್ತರವಾಯಿತು. ಹದಿನೈದು ದಿನಗಳ ಜೈಲು ಶಿಕ್ಷೆ ವಿಧಿಸಿ ಬೆಳಗಾವಿಯ ಹಿಂಡೆಲಗಾ ಜೈಲಿಗೆ ಕಳುಹಿಸುವ ಆಜ್ಞೆ ಮಾಡಿದರು. ಏಕೆಂದರೆ ಅದಾಗಲೆ ಶಿವಮೊಗ್ಗ ಜಿಲ್ಲೆಯ ಎಲ್ಲ ಜೈಲುಗಳೂ ರೈತರಿಂದ ತುಂಬಿ ಹೋಗಿದ್ದವು.

ನಮ್ಮ ಬಸ್ಸು ತೂದೂರು ದಾಟಿ ಶಿವಮೊಗ್ಗ ಹೋಗುತ್ತಿದ್ದಾಗ, ಬಸ್ಸಿನಲ್ಲಿದ್ದ ಭಟ್ಟರನ್ನು ನಿಧಾನವಾಗಿ ಮಾತಿಗೆಳೆದಾಗ ಅವರ ಉತ್ತರ ಸ್ಪಷ್ಟವಾಗಿತ್ತು. ‘ನೀವೆಲ್ಲ ಜೈಲಿಗೆ ಹೋದ್ರೆ ನಮ್ಮ ಪಾಡೇನು? ಅದಕ್ಕಾಗಿ ನಾನೂ ಬಸ್ಸು ಹತ್ತಿದೆ. ಪೂಜೆ ನಾಳೆ ಮಾಡಿದರಾಯಿತು. ಮೊದಲು ರೈತರು’ ಎಂದು ಹೇಳುತ್ತಾ ತಮ್ಮ ಹೆಗಲ ಮೇಲಿದ್ದ ಶಲ್ಯದಿಂದ ಮುಖ ಒರೆಸಿಕೊಳ್ಳತೊಡಗಿದರು.

ಅತ್ತ ಬಾಣಂಕಿಯಲ್ಲಿ ಸದರಿ ಭಟ್ಟರನ್ನು ಕಾದೂ ಕಾದು ಕಡೆಗೆ ನಿರ್ವಾಹವಿಲ್ಲದೆ ವ್ರತ ಪೂರೈಸಲು ಬೇರೊಬ್ಬ ಭಟ್ಟರನ್ನು ಗೊತ್ತು ಮಾಡಿದರಾದರೂ ಅವರೂ ಸಮಯಕ್ಕೆ ಸರಿಯಾಗಿ ಬರದೆ ದೊಡ್ಡ ಫಜೀತಿ ಉಂಟಾಯಿತಂತೆ. ಸತ್ಯನಾರಾಯಣ ವ್ರತ ಮುಗಿಸುವಾಗ ಸಂಜೆ ಐದೂ ಮುಕ್ಕಾಲಾಗಿತ್ತು ಎಂಬ ಸುದ್ದಿ ಜೈಲಿನಿಂದ ಬಿಡುಗಡೆಯಾದ ನಂತರ ತಿಳಿಯಿತು.

ನಮ್ಮಗಳ ಹದಿನೈದು ದಿನಗಳ ಜೈಲು ವಾಸದ ಕತೆ ಹೇಳಿದರೆ ಅದೊಂದು ದೊಡ್ಡ ಪುಸ್ತಕವಾದೀತು. ಅದೀಗ ಬೇಡ. ಜೈಲಿನಿಂದ ಬಿಡುಗಡೆಯಾಗಿ ಮೂರ್ನಾಲ್ಕು ತಿಂಗಳ ನಂತರ ಒಮ್ಮೆ ಭಟ್ಟರು ತೀರ್ಥಹಳ್ಳಿಯಲ್ಲಿ ಸಿಕ್ಕವರು “ಹೋಯ್ ದೇವರಾಜಣ್ಣ, ನನ್ನ ಶನಿ ಬಿಟ್ಟು ಹೋಯಿತಲ್ಲ. ನಾನೀಗ ಸರ್ಕಾರಿ ನೌಕರ. ಕೆಲಸ ಸಿಕ್ಕಿದೆ.” ಒಮ್ಮೆ ಸಕದಾಶ್ಚರ್ಯಚಕಿತನಾಗಿ ಅವರತ್ತ ದಿಟ್ಟಿಸತೊಡಗಿದೆ. ಯಾವತ್ತೋ ಎಂಪ್ಲಾಯ್‌ಮೆಂಟ್ ಕಛೇರಿಯಲ್ಲಿ ಭಟ್ಟರು ತಮ್ಮ ಹೆಸರನ್ನು ನೊಂದಾಯಿಸಿದ್ದರಂತೆ. ಇವರು ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬರುವುದಕ್ಕೂ, ಉದ್ಯೋಗ ವಿನಿಮಯ ಕಛೇರಿಯಿಂದ ಇವರ ಹೆಸರಿಗೆ ನೇಮಕಾತಿಯ ಪತ್ರ ಎದುರಾಗುವುದಕ್ಕೂ ಸರಿ ಹೊಂದಿತ್ತು. ಪಶು ವೈದ್ಯಕೀಯ ಇಲಾಖೆಯಲ್ಲಿ ಕೆಲಸ. ಇವರು ಜೈಲು ಪಾಲಾದ್ದರಿಂದಲೇ ಇವರ ‘ಶನಿ ಬಿಟ್ಟು ಹೋಗಿ’ ಸರ್ಕಾರಿ ನೌಕರಿ ದೊರೆಯಲು ಕಾರಣವಾಯಿತು ಎಂಬುದರಲ್ಲಿ ಇವರಿಗೆ ಇಂದಿಗೂ ಬಲವಾದ ನಂಬುಗೆ. ಅದೂ ಅಲ್ಲದೆ ಇವರ ಸಂಸಾರದಲ್ಲಿ ಸದಾ ಜಗಳವಂತೆ. ಜೈಲಿನಿಂದ ಬಂದ ಮೇಲೆ ಅದಕ್ಕೆ ಇತಿಶ್ರೀಯುಂಟಾಗಿರುವ ಬಗೆಗಿನ ಕತೆಯನ್ನು ನಾಗರಾಜ ಭಟ್ಟರಿಂದ ಕೇಳಿದರೇ ಚನ್ನ.

ಆದರೆ ಬಳಗಟ್ಟೆ ಸುತ್ತ ಮುತ್ತಲಿನ ಗ್ರಾಮಸ್ಥರುಗಳು “‘ನಿಮ್ಮ ಜೈಲು ಬರೋ’ ಕಾರ್ಯಕ್ರಮದಿಂದ ನಮ್ಮ ದೇವಸ್ಥಾನ ಪೂಜೆ ಮಾಡಲು ಭಟ್ಟರಿಲ್ಲದಂತೆ ಮಾಡಿದಿರಿ” ಎಂದು ಇಂದಿಗೂ ಎನ್ನುವವರಿದ್ದಾರೆ. ಆದರೆ ಭಟ್ಟರದು ಸುಖೀ ಸಂಸಾರ. ರೈತ ಚಳುವಳಿಯ ಬಗ್ಗೆ ಅದೇ ಗೌರವ...

(ಲೇಖಕರು ತೀರ್ಥಹಳ್ಳಿಯಲ್ಲಿ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರರು. )