samachara
www.samachara.com
ನಮ್ಮ ‘ಅಂಚೆ ಇಲಾಖೆ’ಯನ್ನು ಮಂಡಿಯೂರಲು ಬಿಡಬೇಡಿ; 18 ರೂಪಾಯಿಗೆ ಸಿಕ್ಕ ಸೇವೆಯ ನೆನಪಿನಲ್ಲಿ...
FEATURE STORY

ನಮ್ಮ ‘ಅಂಚೆ ಇಲಾಖೆ’ಯನ್ನು ಮಂಡಿಯೂರಲು ಬಿಡಬೇಡಿ; 18 ರೂಪಾಯಿಗೆ ಸಿಕ್ಕ ಸೇವೆಯ ನೆನಪಿನಲ್ಲಿ...

ವಾಟ್ಸಾಪ್‌, ಫೇಸ್‌ಬುಕ್‌ ಯುಗದಲ್ಲಿ ಆಧುನಿಕತೆಗೆ ತೆರೆದುಕೊಂಡು ಹೊಸ ಹೊಸ ಸೇವೆಗಳನ್ನು ನೀಡುತ್ತಾ ಅಂಚೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಲೇ ಇದೆ. ಅದಕ್ಕೆ ಸದ್ಯ ಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಬೆಂಬಲ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಬೆಂಗಳೂರಿನ ಮಾಧವನ್‌ ಪಾರ್ಕ್‌ನಿಂದ ಕೇವಲ 18 ರೂಪಾಯಿ ನೀಡಿ ಡಿಸೆಂಬರ್‌ 5ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಸ್ಪೀಡ್‌ ಪೋಸ್ಟ್‌ ಒಂದನ್ನು ಮಾಡಲಾಗುತ್ತದೆ. ಅದನ್ನು ಗ್ರಾಹಕರ ಕೈಯಿಂದ ಸ್ವೀಕರಿಸಿದ ಸಮಯವನ್ನು ಕಂಪ್ಯೂಟರ್‌ಗಳು ದಾಖಲು ಮಾಡಿಕೊಳ್ಳುತ್ತವೆ. ಸ್ವಲ್ಪ ಹೊತ್ತಿನಲ್ಲಿ ಅದನ್ನು ಬ್ಯಾಗ್‌ ಮಾಡಲಾಗುತ್ತದೆ. ಅಲ್ಲಿಂದ ಅದು ಡಿಸ್ಪ್ಯಾಚ್ ಆಗುತ್ತದೆ. ಮರುದಿನ ಬೆಳಿಗ್ಗೆ ಅದು ಬೆಂಗಳೂರಿನ ‘ನ್ಯಾಷನಲ್‌ ಸಾರ್ಟಿಂಗ್‌ ಹಬ್‌’ ತಲುಪುತ್ತದೆ. ಅಲ್ಲಿಂದ ಮತ್ತೊಮ್ಮೆ ಬ್ಯಾಗಿಂಗ್ ಕೆಲಸ ನಡೆಯುತ್ತದೆ. ಅಲ್ಲಿಂದ ಅದು ಜಿಪಿಓ ತಲುಪುತ್ತದೆ. ಅಲ್ಲಿ ಅದನ್ನು ಬಟವಾಡೆಗೆ ಸಿದ್ಧಗೊಳಿಸಲಾಗುತ್ತದೆ. ಸಂಜೆ ಹೊತ್ತಿಗೆ ಪೋಸ್ಟ್‌ ಸೂಕ್ತ ವಿಳಾಸಕ್ಕೆ ತಲುಪಿದ ಖಾತರಿಯ ಮೆಸೇಜ್‌ ನಿಮ್ಮ ಮೊಬೈಲ್‌ ಪೋನ್‌ಗೆ ಬಂದು ತಲುಪುತ್ತದೆ.

ಸ್ಪೀಡ್‌ ಪೋಸ್ಟ್‌ ತಲುಪಿದ ಬಗ್ಗೆ ಅಂಚೆ ಕಡೆಯಿಂದ ತಲುಪಿದ ಸಂದೇಶ.
ಸ್ಪೀಡ್‌ ಪೋಸ್ಟ್‌ ತಲುಪಿದ ಬಗ್ಗೆ ಅಂಚೆ ಕಡೆಯಿಂದ ತಲುಪಿದ ಸಂದೇಶ.
/ಸಮಾಚಾರ.

ಹೀಗೆ ಒಂದು ಪೋಸ್ಟ್‌ ಕಾಗದವನ್ನು ಪ್ರತಿ ಹಂತದಲ್ಲೂ ಟ್ರಾಕ್‌ ಮಾಡುತ್ತಾ ಅದನ್ನು ಗ್ರಾಹಕರಿಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡು ಸರಕಾರದ ಸಂಸ್ಥೆಯ ಹೆಸರು ‘ಭಾರತೀಯ ಅಂಚೆ’. ಅದಕ್ಕೆ ಅದು ತೆಗೆದುಕೊಂಡ ಹಣ ಕೇವಲ 18 ರೂಪಾಯಿ; ಅವಧಿ ಕೇವಲ 56 ಗಂಟೆಗಳು. ಪೋಸ್ಟ್‌ ಪ್ರತಿ ಹಂತವನ್ನು ದಾಟಿ ಹೋದಾಗಲೂ ಅದರ ಸಮಯ ಮತ್ತು ಸ್ಥಳ ನಮೂದಾಗುತ್ತದೆ. ಇದನ್ನು ನೀವು ಕುಳಿತಲ್ಲಿಯೇ ಕಂಪ್ಯೂಟರ್‌ ಮೂಲಕ ಟ್ರಾಕ್‌ ಮಾಡಬಹುದು. ಅದಕ್ಕಾಗಿ ನಿಮಗೆ ಕೋಡ್ ಒಂದನ್ನು ನೀಡಿರುತ್ತಾರೆ. ಹೀಗೊಂದು ಸುಧಾರಿತ ವ್ಯವಸ್ಥೆಯನ್ನು ನಮ್ಮದೇ ಸರಕಾರಿ ಸ್ವಾಮ್ಯದ ಇಂಡಿಯಾ ಪೋಸ್ಟ್‌ ಹೊಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಗಳಿಲ್ಲ.

ಸ್ಪೀಡ್‌ ಪೋಸ್ಟ್‌ ಒಂದರ ಟ್ರಾಕಿಂಗ್‌ ವಿವರ.
ಸ್ಪೀಡ್‌ ಪೋಸ್ಟ್‌ ಒಂದರ ಟ್ರಾಕಿಂಗ್‌ ವಿವರ.
/ಸಮಾಚಾರ.

ಇವತ್ತಿಗೆ ಕಾಗದ, ವಸ್ತುಗಳನ್ನು ಸೀಮಿತ ವ್ಯಾಪ್ತಿಯಲ್ಲಿ ತಲುಪಿಸುವ ಡಿಟಿಡಿಸಿ, ಫ್ರೊಫೆಷನಲ್‌ ಕೊರಿಯರ್‌, ಬ್ಲೂಡಾರ್ಟ್‌ನಂತ ಯಾವ ಕಾರ್ಪೊರೇಟ್‌ ಸಂಸ್ಥೆಗಳು ಇಷ್ಟರ ಮಟ್ಟಿಗಿನ ಪಾರದರ್ಶಕತೆಯನ್ನು ಹೊಂದಿಲ್ಲ. ಮತ್ತು ದರವೂ ಜಾಸ್ತಿ. ಬ್ಲೂಡಾರ್ಟ್‌ನಂಥ ಸಂಸ್ಥೆ ಒಂದು ಸಣ್ಣ ಕವರನ್ನು ವಿಳಾಸವೊಂದಕ್ಕೆ ತಲುಪಿಸಲು 300 ರೂಪಾಯಿಗಳನ್ನು ಕೇಳುತ್ತದೆ. ಆದರೆ ಇದಕ್ಕಾಗಿ ಅಂಚೆ ಇಲಾಖೆ ತೆಗೆದುಕೊಳ್ಳುವುದು 18 ರೂಪಾಯಿ ಮಾತ್ರ.

ಸರಕಾರಿ ಸಂಸ್ಥೆಗಳೆಂದರೆ ಮೂಗು ಮುರಿಯುವ ಕಾಲದಲ್ಲಿ ಅಂಚೆ ಇಲಾಖೆ ಇಂತಹದ್ದೊಂದು ಅತ್ಯಾಧುನಿಕತೆಯನ್ನು ಅಳವಡಿಸಿಕೊಂಡಿದೆ ಮತ್ತು ತನ್ನ ಲೆಗೆಸಿ ಸೇವೆಯನ್ನು ಜನರಿಗೆ ಹತ್ತಿರವಾಗಿ ಇಟ್ಟುಕೊಳ್ಳಲು ಪ್ರಯತ್ನ ಮುಂದುವರಿಸಿದೆ.

ಅಂಚೆ ಇಲಾಖೆಯಲ್ಲಿ ಕಾಗದವೊಂದು ಒಂದೊಂದು ಹಂತವನ್ನು ದಾಟಿದಾಗಲೂ ಅದಕ್ಕೆ ಮೊಹರುಗಳು ಬೀಳುತ್ತಾ ಹೋಗುತ್ತವೆ. ಒಂದೊಮ್ಮೆ ಯಾವುದೇ ಹಂತದಲ್ಲಿ ಕಾಗದ ಸಿಬ್ಬಂದಿಗಳ ಅಚಾತುರ್ಯದಿಂದ ಕಾಣೆಯಾದರೂ ಅದನ್ನು ಪತ್ತೆ ಹಚ್ಚುತ್ತಾರೆ. ಪೋಸ್ಟ್‌ ಮ್ಯಾನ್‌ಗಳು ತಡವಾಗಿ ಪತ್ರ ನೀಡಿದರೂ ಅದು ತಿಳಿಯುತ್ತದೆ. ವಿರಳಾತಿವಿರಳ ಪ್ರಕರಣಗಳಲ್ಲಿ ಮಾತ್ರ ಕಾಗದ ನಾಪತ್ತೆಯಾದ ಉದಾಹರಣೆಗಳಿವೆಯೇ ಹೊರತು (ಸಾಮಾನ್ಯ ಕಾಗದಗಳು ಮಾತ್ರ) ಇಲ್ಲದಿದ್ದಲ್ಲಿ ಸೂಕ್ತ ವಿಳಾಸವನ್ನು ತಲುಪಿಯೇ ತಲುಪುತ್ತದೆ. ಸ್ವಲ್ಪ ಹೆಚ್ಚಿಗೆ ಹಣ ನೀಡಿ ರಿಜಿಸ್ಟರ್‌ ಪೋಸ್ಟ್‌ಗಳನ್ನು ಮಾಡಿದರಂತೂ ನಿಮಗೆ ಕಾಗದ ತಲುಪಿದ ಖಾತರಿಯನ್ನೂ ಇಲಾಖೆ ನೀಡುತ್ತದೆ.

ಇವತ್ತಿಗೆ ಅಂಚೆ ಸೇವೆ ಎಷ್ಟು ಮುಂದುವರಿದಿದೆ ಎಂದರೆ ಪಾರ್ಸೆಲ್‌ಗಳನ್ನು ಮಾಡುವಾಗ ಅದಕ್ಕೆ ಇನ್ಶೂರೆನ್ಸ್‌ ಮಾಡಿಸುವ ವ್ಯವಸ್ಥೆಯೂ ಇದೆ. ಕನಿಷ್ಠ ಹಣ ನೀಡಿ ನಿಮ್ಮ ಪಾರ್ಸೆಲ್‌ಗಳಿಗೆ ವಿಮೆ ಮಾಡಿಸಬಹುದು. ಒಂದೊಮ್ಮೆ ವಸ್ತು ತಲುಪದಿದ್ದರೆ, ಏನಾದರೂ ಹೆಚ್ಚು ಕಡಿಮೆಯಾದರೆ ಸಂಸ್ಥೆ ನಿಮಗೆ ವಿಮೆಯ ಹಣ ನೀಡುತ್ತದೆ.

1858 ರಿಂದ 2018ರವರೆಗೆ:

ಇಂತಹ ಅಂಚೆ ಇಲಾಖೆಗೆ ಬುನಾದಿ ಹಾಕಿದವರು ಬ್ರಿಟಿಷರು; 1858ರಲ್ಲಿ. ಅಂದು ಸಣ್ಣ ಮಟ್ಟದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಅಂಚೆ ಸೇವೆಗೆ ಬುನಾದಿ ಹಾಕಲಾಯಿತು. ನಿಧಾನಗತಿಯಲ್ಲಿ ಆರಂಭ ಪಡೆದ ಸೇವೆ, ಭಾರತಕ್ಕೆ ಸ್ವಾತಂತ್ರ್ಯ ಬರುವ ಹೊತ್ತಿಗೆ 23,344 ಕಚೇರಿಗಳನ್ನು ಹೊಂದಿತ್ತು. ಇವತ್ತಿಗೆ ದೇಶದಲ್ಲಿರುವ ಅಂಚೆ ಕಚೇರಿಗಳ ಸಂಖ್ಯೆ ಬರೋಬ್ಬರಿ 1,55,015. ವಿಶ್ವದಲ್ಲೇ ಅತೀ ದೊಡ್ಡ ಸಂಪರ್ಕ ಅಂಚೆ ಸಂಪರ್ಕ ಜಾಲ ಎಂಬ ಹೆಗ್ಗಳಿಕೆ ಇದಕ್ಕಿದೆ. ಸಮುದ್ರ ಮಟ್ಟದಿಂದ 4,700 ಮೀಟರ್‌ ಎತ್ತರದಲ್ಲೂ ಸಂಸ್ಥೆಯ ಅಂಚೆ ಕಚೇರಿಯೊಂದು ಕಾರ್ಯ ನಿರ್ವಹಿಸುತ್ತದೆ. ದೇಶದ ಮೂಲೆ ಮೂಲೆಗಳನ್ನು ತಲುಪುವ ಸಾಮರ್ಥ್ಯ ಇರುವ ದೇಶದ ಏಕೈಕ ಸಂಸ್ಥೆ ಇದು. ಹೀಗೆ ಹೇಳುತ್ತಾ ಹೋದರೆ ಮುಗಿಯದಷ್ಟು ಹಿರಿಮೆಗಳು ಅಂಚೆಗೆ ಇವೆ.

ಹೀಗಿದ್ದ ಅಂಚೆಯ ಅಸ್ತಿತ್ವವೇ ಯಾಕೆ ಅಲುಗಾಡುವ ಹಂತ ತಲುಪಿದೆ ಎಂದು ಹುಡುಕುತ್ತಾ ಹೊರಟರೆ ಹಲವು ನಿದರ್ಶನಗಳು ಎದುರಾಗುತ್ತದೆ.

ಕಳೆದು ಹೋದ ಭಾವನಾತ್ಮಕತೆ ಮತ್ತು ಅನಿವಾರ್ಯತೆ:

ಒಂದು ಕಾಲದಲ್ಲಿ ಅಂಚೆ ಎಂಬುದು ಜನರ ನಡುವಿನ ಏಕೈಕ ಸೇತುವೆಯಾಗಿತ್ತು. ಅದರಲ್ಲೂ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದ ದಿನಗಳಲ್ಲಿ ಇಡೀ ದೇಶದ ಜನರನ್ನು ಅಂಚೆ ಬೆಸೆದಿತ್ತು. ಒಬ್ಬರಿಗೊಬ್ಬರು ಸಂದೇಶಗಳನ್ನು ರವಾನಿಸಲು ಅಂಚೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯೂ ಅವತ್ತಿಗಿತ್ತು. ಪ್ರೇಮಿಗಳ ಪಿಸು ಮಾತಿಗೆ, ಸಂಬಂಧಿಕರ ನಡುವಿನ ಸಂಭಾಷಣೆಗೆ, ಕೊನೆಗೆ ಗೂಢಚರರ ಸಂದೇಶ ರವಾನೆಗೂ ವೇದಿಕೆಯಾಗಿತ್ತು ಅಂಚೆ. ಮುಂದೆ ಬಂದ ಟೆಲಿಗ್ರಾಂ ಎಂಬ ತುರ್ತು ಸಂದೇಶವನ್ನು ರವಾನಿಸುವ ವ್ಯವಸ್ಥೆಯಲ್ಲಿ ಹಲವರು ಶುಭ ಸುದ್ದಿಗೆ, ಇನ್ನು ಕೆಲವರು ನಿಧನದ ವಾರ್ತೆಗಳಿಗೆ ಕಿವಿಯಾಗಿದ್ದರು. ಆ ದಿನಗಳನ್ನು ಮೆಲುಕು ಹಾಕುವ ಹಿರಿಯರು ಇಂದೂ ನಮ್ಮ ನಡುವೆ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಇದರ ಬಳಕೆಯೇ ನಿಂತು ಹೋಗಿ ಆ ಸೇವೆಯನ್ನೇ ಅಂಚೆ ಸ್ಥಗಿತಗೊಳಿಸಿತು.

163 ವರ್ಷಗಳ ಸುದೀರ್ಘ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಟೆಲಿಗ್ರಾಂ ಸಂದೇಶವೊಂದರ ಸ್ಯಾಂಪಲ್
163 ವರ್ಷಗಳ ಸುದೀರ್ಘ ಸೇವೆಯ ನಂತರ ಇತಿಹಾಸದ ಪುಟ ಸೇರಿದ ಟೆಲಿಗ್ರಾಂ ಸಂದೇಶವೊಂದರ ಸ್ಯಾಂಪಲ್
/ಇಂಡಿಯನ್ ಎಕ್ಸ್‌ಪ್ರೆಸ್‌

ಅಂಚೆ ಎಂದರೇನೆ ಹಾಗೆ. ಅದು ಈ ಹಿಂದಿನ ತಲೆಮಾರಿಗೆ ಭಾವನಾತ್ಮಕ ಪ್ರಪಂಚ. ಇಂಥ ಭಾವನಾತ್ಮಕತೆಯ ಅಂಚೆಯನ್ನು ಇಟ್ಟುಕೊಂಡು ‘ಅಬಚೂರಿನ ಪೋಸ್ಟ್‌ ಆಫೀಸ್‌’ನಂತಹ ಹತ್ತು ಹಲವು ಕಾದಂಬರಿಗಳು, ಸಿನಿಮಾಗಳು ಬಂದಿವೆ. ಅಷ್ಟರ ಮಟ್ಟಿಗೆ ಅಂಚೆ ಸಾಮಾಜಿಕ ವ್ಯವಸ್ಥೆಯಲ್ಲಿ ಜಾಗ ಪಡೆದುಕೊಂಡಿತ್ತು.

ಸರಕಾರವೊಂದು ವ್ಯಕ್ತಿ, ಸ್ಮಾರಕಗಳಿಗೆ ಗೌರವ ಸಲ್ಲಿಸಲು ಇವತ್ತಿಗೂ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಸಂಪ್ರದಾಯವಿದೆ. ಅದನ್ನು ಸಂಗ್ರಹಿಸುವ ಹವ್ಯಾಸಿಗಳ ಒಂದು ದೊಡ್ಡ ಸಮೂಹವೂ ಈ ದೇಶದಲ್ಲಿದೆ. 50 ಪೈಸೆಗೆ ದೇಶದ ಯಾವ ಮೂಲೆಯನ್ನಾದರೂ ತಲುಪುವ ಸಾಮರ್ಥ್ಯ ಇವತ್ತಿಗೂ ಇರುವ ಪೋಸ್ಟ್‌ ಕಾರ್ಡ್‌ಗಳು ಅದೆಷ್ಟೋ ಚಳವಳಿಗೆ, ಪ್ರತಿಭಟನೆಗಳಿಗೆ ಸರಕಾಗಿವೆ. ದೇಶದ ಸಾವಿರಾರು ಪತ್ರಿಕೆಗಳು, ನಿಯತಕಾಲಿಕಗಳು ಇವತ್ತಿಗೂ ಕನಿಷ್ಠ ಬೆಲೆಯ ಸ್ಟ್ಯಾಂಪ್‌ ಅಂಟಿಸಿಕೊಂಡು ಮನೆ ಮನೆಯನ್ನು ತಲುಪುತ್ತಿವೆ.

ಆದರೆ ಇವೆಲ್ಲಾ ಅದಾಗಲೇ ನಿಧಾನಕ್ಕೆ ನೆನಪಿನ ಬುತ್ತಿಯೊಳಗೆ ಸೇರಿಕೊಳ್ಳುತ್ತಿವೆ. ಇಂದು ಕ್ಷಣ ಮಾತ್ರದಲ್ಲಿ ಟ್ಟಿಟ್ಟರ್‌, ಫೇಸ್‌ಬುಕ್‌ನಲ್ಲಿ ಪ್ರತಿಭಟನೆ, ಆಕ್ರೋಶಗಳು ಹುಟ್ಟಿ ಸಾಯುತ್ತವೆ. ಮಿಲಿ ಸೆಕೆಂಡ್‌ಗಳಲ್ಲಿ ಮಾತ್ರದಲ್ಲಿ ಸಂದೇಶಗಳನ್ನು ತಲುಪಿಸುವ ವ್ಯವಸ್ಥೆಗಳು ಬಂದಿದೆ. ಇ-ಪೇಪರ್‌ ಯುಗದಲ್ಲಿ ಪತ್ರಿಕೆಗಳಿಗೆ ಅಂಚೆಯ ಹಂಗಿಲ್ಲ. ವಾಟ್ಸಾಪ್‌ ಯುಗದಲ್ಲಿ ಅಂಚೆಯನ್ನು ಕಲ್ಪನೆ ಮಾಡುವುದೂ ಅಸಾಧ್ಯ ಎಂಬ ಪರಿಸ್ಥಿತಿ ಇದೆ. ಇದರ ನಡುವೆಯೂ ಆಧುನಿಕತೆಗೆ ತೆರೆದುಕೊಂಡು ಹೊಸ ಹೊಸ ಸೇವೆಯನ್ನು ನೀಡುತ್ತಾ ಅಂಚೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಲೇ ಇದೆ.

ಮನಿಯಾರ್ಡರ್‌ ಟು ಗಂಗಾಜಲ:

ಇವತ್ತಿಗೂ ಅಂಚೆ ತನ್ನ ಅಸ್ತಿತ್ವ ಉಳಿಸಿಕೊಂಡಿರುವುದಕ್ಕೆ ಸಾಕ್ಷಿ ಅದರ ಭಿನ್ನ ವಿಭಿನ್ನ ಸೇವೆಗಳು. ವಿಮೆ ಎಂಬ ಕಲ್ಪನೆಯೂ ಇಲ್ಲದ ಕಾಲದಲ್ಲಿ 1881ರಲ್ಲೇ ಪೋಸ್ಟಲ್‌ ಲೈಫ್‌ ಇನ್ಶೂರೆನ್ಸ್‌ ಸ್ಕೀಂಗಳನ್ನೂ ಇಲಾಖೆ ಆರಂಭಿಸಿತ್ತು. ಇವತ್ತಿಗೂ ಈ ಸೇವೆಗಳು ನಡೆಯುತ್ತಿವೆ. ಹಲವು ಕಾರ್ಪೊರೇಟ್‌ ವಿಮೆಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಇವು ನೀಡುತ್ತಿವೆ.

ಇದರ ಜತೆಗೆ ಸಾಂಪ್ರದಾಯಿಕ ಮನಿಯಾರ್ಡರ್‌ ಮೂಲಕ ಹಣ ರವಾನಿಸುವ ಸೌಲಭ್ಯ ಇಂದಿಗೂ ಬಳಕೆಯಲ್ಲಿದೆ. ಇದರಲ್ಲೇ ಪಿಂಚಣಿ ಹಣ ಪಡೆದವರು ಅದೆಷ್ಟೋ ಜನ. ಇದಾದ ಬಳಿಕ ಇಂದಿಗೆ ನರೇಗಾ ಯೋಜನೆಯ ಹಣವನ್ನು ಜನರಿಗೆ ಇದೇ ಅಂಚೆ ಕಚೇರಿ ತಲುಪಿಸುತ್ತಿದೆ. ಅಂಚೆ ಉಳಿತಾಯ ಖಾತೆಗಳು, ಮ್ಯೂಚುವಲ್‌ ಫಂಡ್‌ಗಳು ಜನರಿಗೆ ಸೇವೆ ನೀಡುತ್ತಿವೆ. ಧಾರ್ಮಿಕ ಭಾವನೆಗಳಿಗೂ ಬೆಲೆ ಕೊಟ್ಟು ತಿರುಪತಿಯಂಥ ದೇವಸ್ಥಾನದ ಹುಂಡಿಗೆ ಅಂಚೆ ಕಚೇರಿಯಿಂದಲೇ ಹಣ ರವಾನಿಸುವ ವ್ಯವಸ್ಥೆ ಇದೆ. ಪ್ರಸಾದವೂ ಅಂಚೆ ಮೂಲಕವೇ ಮನೆ ಬಾಗಿಲಿಗೆ ಬರುತ್ತದೆ. ಈಗ ಗಂಗಾಜಲವನ್ನೂ ಅಂಚೆ ಮೂಲಕ ತರಿಸಿಕೊಳ್ಳಬಹುದು.

ಇಂಡಿಯಾ ಪೋಸ್ಟ್‌ನ ಪೇಮೆಂಟ್‌ ಬ್ಯಾಂಕ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಟೆಲಿಪ್ರಾಮ್ಟರ್‌ ಭಾಷಣ. ಅಂಚೆ ಇಲಾಖೆಯಲ್ಲಿ ಭಾಷಣದಾಚೆಗಿನ ಕೆಲಸ ತುರ್ತಾಗಿ ಆಗಬೇಕಾಗಿದೆ.
ಇಂಡಿಯಾ ಪೋಸ್ಟ್‌ನ ಪೇಮೆಂಟ್‌ ಬ್ಯಾಂಕ್‌ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಟೆಲಿಪ್ರಾಮ್ಟರ್‌ ಭಾಷಣ. ಅಂಚೆ ಇಲಾಖೆಯಲ್ಲಿ ಭಾಷಣದಾಚೆಗಿನ ಕೆಲಸ ತುರ್ತಾಗಿ ಆಗಬೇಕಾಗಿದೆ.
/ಡಿಎನ್‌ಎ

ಇತ್ತೀಚೆಗಿನ ಪ್ರಮುಖ ಪರಿವರ್ತನೆ ಎಂದರೆ ಅಂಚೆ ಕಚೇರಿ ಎಟಿಎಂಗಳನ್ನು ಹೊಂದಲು ಆರಂಭಿಸಿದ್ದು, ‘ಪೇಮೆಂಟ್‌ ಬ್ಯಾಂಕ್‌’ ಸೇವೆಗೂ ಇಲಾಖೆ ಇಳಿದಿದೆ. ನಿಧಾನಗತಿಯಲ್ಲಿ ಬ್ಯಾಂಕ್‌ ಸೇವೆಗಳ ವಿಸ್ತರಣೆಗೆ ಅಂಚೆ ಮನಸ್ಸು ಮಾಡಿದೆ. ಆದರೆ ಒಂದೊಮ್ಮೆ ಅಂಚೆ ಇಲಾಖೆ ಇತರ ಬ್ಯಾಂಕ್‌ಗಳಿಗೆ ಸಡ್ಡು ಹೊಡೆಯಬೇಕು ಎಂದು ನಿರ್ಧರಿಸಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಕಾರಣ ಅಂಚೆಗಿರುವಷ್ಟು ವಿಸ್ತರಿತ ಜಾಲ ದೇಶದಲ್ಲಿ ಬೇರಾವ ಬ್ಯಾಂಕ್‌ಗಳಿಗೂ ಇಲ್ಲ. ಹಾಗೆಯೇ ಜನರ ನಂಬಿಕೆಗೂ ಕೊರತೆ ಇಲ್ಲ.

ಆಸಕ್ತಿ ಕೊರತೆ:

ಆದರೆ ಇದಕ್ಕೆಲ್ಲಾ ಅಡ್ಡಿಯಾಗಿ ನಿಂತಿರುವುದು ಆಸಕ್ತಿಯ ಕೊರತೆ. ಮೇಲಿನ ಹುದ್ದೆಗಳಲ್ಲಿ ಕುಳಿತ ಅಧಿಕಾರಿಗಳು ಕೆಲವೊಂದಷ್ಟು ಕ್ರಾಂತಿಕಾರಿ ತೀರ್ಮಾನಗಳನ್ನು ತೆಗೆದುಕೊಂಡಿದ್ದರೂ, ಪರಿಣಾಮ ಬೀರಿದ್ದು ಕಡಿಮೆ. ಅಂಚೆಯಲ್ಲಿ ಹಲವು ಸೇವೆಗಳು ಲಭ್ಯವಿದ್ದರೂ ಅದರ ಬಗ್ಗೆ ಜನರಿಗೆ ತಿಳಿದಿಲ್ಲ. ಹೀಗಾಗಿಯೇ 18 ರೂಪಾಯಿಯ ಜಾಗದಲ್ಲಿ 300 ರೂಪಾಯಿ ತೆತ್ತು ಜನರು ತಮ್ಮ ಖಾಗದ ಪತ್ರಗಳನ್ನು ಕಳುಹಿಸುವುದು ಆಸಕ್ತಿದಾಯಕವಾಗಿ ಕಾಣಿಸುತ್ತದೆ.

ಒಂದೊಮ್ಮೆ ಈ ವಾತಾವರಣ ಇಲ್ಲದಿದ್ದಲ್ಲಿ ಇವತ್ತು ಅಂಚೆ ನಷ್ಟಕ್ಕೆ ಗುರಿಯಾಗಬೇಕಿರಲಿಲ್ಲ. 2015-16ರಲ್ಲಿ ಸಂಸ್ಥೆ 18,946 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಕೇವಲ 12,939 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ 6,007 ಕೋಟಿ ರೂಪಾಯಿಗಳ ನಷ್ಟ ತೋರಿಸಿದೆ. ವರ್ಷದಿಂದ ವರ್ಷಕ್ಕೆ ಈ ನಷ್ಟದ ಪ್ರಮಾಣ ಏರಿಕೆಯಾಗುತ್ತಿರುವುದು ಸಂಸ್ಥೆಯ ತಳವನ್ನೇ ಕುಸಿಯುವಂತೆ ಮಾಡಿದೆ.

ಜತೆಗೆ ತಳ ಮಟ್ಟದ ಸಿಬ್ಬಂದಿಗಳನ್ನು ನಡೆಸಿಕೊಳ್ಳುವ ಬಗ್ಗೆಯೂ ಇಲಾಖೆ ಮೇಲೆ ಸಾಕಷ್ಟು ದೂರುಗಳಿವೆ. ಒಂದು ಹಂತದವರೆಗೆ ಇಲಾಖೆಯ ಸಿಬ್ಬಂದಿಗಳು ಉತ್ತಮ ವೇತನವನ್ನು ಪಡೆಯುತ್ತಿದ್ದಾರೆ. ಆದರೆ ಮೈದಾನದಲ್ಲಿ ಪತ್ರ ಹಂಚುವ ಕೆಲಸ ಮಾಡುವವರು ಗ್ರಾಮೀಣ ಭಾಗದಲ್ಲಿ ಕನಿಷ್ಠ ಸಂಬಳವನ್ನು ಪಡೆಯುತ್ತಿದ್ದಾರೆ. ಇದು ಅವರ ಉತ್ಸಾಹದ ಮೇಲೆಯೇ ತಣ್ಣೀರೆರಚುತ್ತದೆ. ಸಂಬಳ ಹೆಚ್ಚಳಕ್ಕಾಗಿ, ಖಾಯಂ ಸೇವೆಗಾಗಿ ಇವರುಗಳು ಹಲವು ಬಾರಿ ಮುಷ್ಕರ ನಡೆಸಿದ್ದರೂ ಯೂನಿಯನ್‌ಗಳ ಸಮಸ್ಯೆಯಿಂದಾಗಿ ಬೇಡಿಕೆ ಇಡೇರಿದ ನಿದರ್ಶನಗಳು ತೀರಾ ವಿರಳ. ಜತೆಗೆ ಒಂದೇ ಕಡೆ ಸಿಬ್ಬಂದಿಗಳು ಇರದೇ ಇರುವುದರಿಂದ ಯೂನಿಯನ್‌ಗಳೂ ಒಡೆದ ಮನೆಗಳಾಗಿವೆ. ಹೀಗೆ ಈ ಸಿಬ್ಬಂದಿಗಳ ಸಮಸ್ಯೆ ಮುಗಿಯುವಂಥದ್ದಲ್ಲ.

ಒಂದೊಮ್ಮೆ ಈ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇವತ್ತಿನ ಆನ್‌ಲೈನ್‌ ಯುಗದ ಕಂಪನಿಗಳಿಗೆ ಪರ್ಯಾಯವಾಗಿ ಮನೆ ಮನೆಗೆ ಡೆಲಿವರಿ ನೀಡುತ್ತೇವೆ ಎಂದು ಅಂಚೆ ಹೊರಟಿದ್ದೇ ಆದಲ್ಲಿ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅಮೆಜಾನ್‌, ಫ್ಲಿಪ್‌ಕಾರ್ಟ್‌ಗಳಿಗಿಲ್ಲದ ವಿಶಾಲ ಸಂಪರ್ಕ ಜಾಲ, ತನ್ನ ಸೇವೆ ಬಗ್ಗೆ ಜನರಿಗಿರುವ ಅಪರಿಮಿತ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡಲ್ಲಿ ಬೆಳೆಯುವ ಅಪರಿಮಿತ ಅವಕಾಶಗಳು ಅಂಚೆಯ ಮುಂದಿವೆ. ಜತೆಗೆ ಜನರಲ್ಲಿ ಅಂಚೆ ಸೇವೆಗಳ ಬಗ್ಗೆ ಬೆಳೆದಿರುವ ಅಸಡ್ಡೆಯನ್ನೂ ತೊಡೆದು ಹಾಕುವ ನಿಟ್ಟಿನಲ್ಲಿ ಇಲಾಖೆ ಒಂದಷ್ಟು ಕೆಲಸ ಮಾಡಬೇಕಾಗಿದೆ. ಜತೆಗೆ ಸರಕಾರ ಖಾಸಗಿಕರಣವನ್ನು ಪಕ್ಕಕ್ಕಿಟ್ಟು ಸರಕಾರಿ ಸಂಸ್ಥೆಯನ್ನು ಬೆಳೆಸುವ ಬಗ್ಗೆ ಆಲೋಚನೆ ಮಾಡಬೇಕಿದೆ. ಆಗ ಮಾತ್ರ ಸರಕಾರಿ ಸ್ವಾಮ್ಯದ ಸಂಸ್ಥೆ ಸವಾಲಿನ ದಿನಗಳಲ್ಲೂ ಎದ್ದು ನಿಲ್ಲಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಸರಣಿ ನಷ್ಟಗಳಿಗೆ ಗುರಿಯಾಗಿ ಜಿಯೋ ಮುಂದೆ ಮಂಡಿಯೂರಿದ ಬಿಎಸ್‌ಎನ್‌ಎಲ್‌ ಕತೆಯಂತಾಗುತ್ತದೆ, 150ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಅಂಚೆಯ ಪರಿಸ್ಥಿತಿ.