samachara
www.samachara.com
‘ದಿ ರಿಯಲ್ ರೆಬೆಲ್ ಸ್ಟಾರ್’: ಲಂಕೇಶ್‌ರಿಗೆ ಗುದ್ದಾಕ್ತೀನಿ ಅಂದಿದ್ದರು ಅಂಬಿ!
FEATURE STORY

‘ದಿ ರಿಯಲ್ ರೆಬೆಲ್ ಸ್ಟಾರ್’: ಲಂಕೇಶ್‌ರಿಗೆ ಗುದ್ದಾಕ್ತೀನಿ ಅಂದಿದ್ದರು ಅಂಬಿ!

ವರ್ಷದಲ್ಲಿ 12 ರಿಂದ 15 ಸಿನಿಮಾಗಳನ್ನು ಮಾಡುತ್ತಿದ್ದರು ಅಂಬರೀಶ್‌. ಹೀಗೊಂದು ಸರಣಿ ಸಿನಿಮಾ ಮಾಡಲು ಕಾರಣವೂ ಇತ್ತು. ಅವರು ದುಡ್ಡಿಗೆ ಹೆಚ್ಚಿಗೆ ಬೇಡಿಕೆ ಇಡುತ್ತಿರಲಿಲ್ಲ.

Team Samachara

-ಸತ್ಯಮೂರ್ತಿ ಆನಂದೂರು

ತಮ್ಮ ಇಮೇಜನ್ನು ತಾವೇ ಒಡೆದುಕೊಳ್ಳಲು ಪ್ರಯತ್ನಿಸುತ್ತಿದ್ದವರು ಮತ್ತು ಒಡೆದುಕೊಳ್ಳುತ್ತಿದ್ದವರು ಅಂಬರೀಶ್.

ಅವರು ಸೂಟೂ ಹಾಕ್ತಿದ್ರು, ಪಟ್ಟೆ ಪಟ್ಟೆ ಚಡ್ಡಿನೂ ಹಾಕುತ್ತಿದ್ದರು; ಜುಟ್ಟೂ ಬಿಟ್ಟುಕೊಂಡೂ ಪಾತ್ರ ಮಾಡುತ್ತಿದ್ದರು. ಒಂದು ರೀತಿಯಲ್ಲಿ ವಿಶೇಷ ಮನುಷ್ಯ. ಇಡೀ ಭಾರತದ ಸಿನಿಮಾ ರಂಗವನ್ನು ನೋಡಿದರೆ ಈ ತರಹದ ವಿಚಿತ್ರ ಕ್ಯಾರಕ್ಟರ್‌ ಸಿಗುವುದೇ ಇಲ್ಲ.

ಹೀಗೊಂದು ವಿಚಿತ್ರ ಕ್ಯಾರೆಕ್ಟರ್‌ ಮಳವಳ್ಳಿ ಹುಚ್ಚೇ ಗೌಡ ಅಮರನಾಥ್‌ ಸಿನಿಮಾಕ್ಕೆ ಬಂದಿದ್ದೇ ಒಂದು ಅಚ್ಚರಿಯ ಕತೆ. ಅದು 1970ರ ದಶಕದ ಆರಂಭದ ದಿನಗಳು. ಕನ್ನಡದ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ತಮ್ಮ ಸಿನಿಮಾಕ್ಕಾಗಿ ಹೊಸ ನಟನನ್ನು ಹುಡುಕುತ್ತಿದ್ದರು. ಆಗ ಹೀಗೆ ತರಲೇ ಮಾಡಿಕೊಂಡಿದ್ದ ಅಮರನಾಥ್‌ ಪುಟ್ಟಣ್ಣ ಅವರ ಕಣ್ಣಿಗೆ ಬಿದ್ದರು. ಪುಟ್ಟಣ್ಣನವರ ದೃಷ್ಟಿಗೆ ಅಮರನಾಥ್‌ ಅಂದಿನ ಬಾಲಿವುಡ್‌ನ ಸ್ಟೈಲಿಶ್‌ ವಿಲನ್‌ ಶತ್ರುಘ್ನಾ ಸಿನ್ಹಾ ತರಹ ಕಾಣಿಸಿದರು. ಕಣ್ಣುಗಳು, ಅವರ ನೋಟ ಎಲ್ಲವನ್ನೂ ನೋಡಿ ಸುಮ್ಮನೆ, “ಏಯ್‌ ಮಾಡ್ತಿಯೇನೋ?” ಎಂದು ಕೇಳಿದ್ದರು. ಅದಕ್ಕೆ ಅದಕ್ಕೆ ತಮ್ಮ ಎಂದಿನ ದಾಟಿಯಲ್ಲಿ “ಅದೇನ್ರಿ ದೊಡ್ಡ ವಿಷಯ” ಎನ್ನುವ ಉತ್ತರ ನೀಡಿದ್ದರು ಅಮರನಾಥ್‌. ಹೀಗೆ ‘ನಾಗರಹಾವು’ನ ಜಲೀಲನ ಪಾತ್ರಕ್ಕೆ ಬಂದರು ಅಮರನಾಥ್‌.

1972ರಲ್ಲಿ ಬಿಡುಗಡೆಯಾದ ಈ ಸಿನಿಮಾ ಮುಂದೆ ಮೈಲುಗಲ್ಲಾಯಿತು. ಸಿನಿಮಾದಲ್ಲಿ ನಟಿಸಿದವರೆಲ್ಲಾ ಸ್ಟಾರ್‌ಗಳಾದರು. ವಿಷ್ಣುವರ್ಧನ್ ದೊಡ್ಡ ಹೀರೋ ಆದರು. ಸಿನಿಮಾದಲ್ಲಿದ್ದ ಅಶ್ವಥ್ ಅವರಿಗೆ ಹೊಸ ಕಳೆ ಬಂತು. ಆರತಿ, ಶುಭಾ ಪ್ರಮುಖ ನಾಯಕ ನಟಿಯರಾದರು. ಶಿವರಾಮು ಇಮೇಜ್‌ ಬದಲಾಯಿತು. ವಿಜಯ್‌ ಭಾಸ್ಕರ್‌ ಸಂಗೀತ ಆಕಾಶದೆತ್ತರಕ್ಕೆ ಕೇಳಿಸಿತು. ಈ ಸಿನಿಮಾದ ಜಲೀಲನ ಪಾತ್ರ ಮತ್ತು ಆ ಮೂಲಕವೇ ಅಮರನಾಥ್‌ ಹೋಗಿ ಅಂಬರೀಶ್‌ ಎಂಬ ಹೆಸರು ಕನ್ನಡ ಚಿತ್ರ ರಸಿಕರ ಸ್ಮೃತಿಪಟಲದಲ್ಲಿಅಚ್ಚಳಿಯದೆ ಉಳಿಯಿತು.

ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಹಲವು ಸಿನಿಮಾಗಳಿಗೆ ಅಂಬರೀಶ್‌ ನಾಯಕ ನಟರಾದರು. ಆದರೆ ಅವರಿಗೊಂದು ದೊಡ್ಡ ಬ್ರೇಕ್‌ ಸಿಕ್ಕಿರಲಿಲ್ಲ. ಅದಕ್ಕಾಗಿ ಕಾಯುತ್ತಿದ್ದರು. ಆಗ ಬಂದಿದ್ದೇ ಎಚ್‌.ಕೆ. ಅನಂತರಾಮು ಅವರ ಕಾದಂಬರಿ ಆಧರಿತ ಸಿನಿಮಾ ‘ಅಂತ’. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಈ ಸಿನಿಮಾ 1981ರಲ್ಲಿ ಬಿಡುಗಡೆಯಾಗುತ್ತಿದ್ದಂತೆ ಬಲು ಜನಪ್ರಿಯತೆ ಪಡೆದುಕೊಂಡಿತು. ಅಂಬರೀಶ್‌ ಅವರಿಗಂತೂ ಇದು ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಅಲ್ಲಿಂದ ಅವರು ಪೂರ್ಣಕಾಲಿಕ ನಾಯಕ ನಟರಾದರು. ಮುಂದೆ ಬಂದ ‘ಚಕ್ರವ್ಯೂಹ’ ಅವರನ್ನು ಜನಪ್ರಿಯತೆಯ ತುತ್ತ ತುದಿಯಲ್ಲಿ ಕೂರಿಸಿತು. ಎಷ್ಟರ ಮಟ್ಟಿಗೆ ಎಂದರೆ ವರ್ಷದಲ್ಲಿ 12 ರಿಂದ 15 ಸಿನಿಮಾಗಳನ್ನು ಮಾಡುತ್ತಿದ್ದರು ಅಂಬರೀಶ್‌.

ಹೀಗೊಂದು ಸರಣಿ ಸಿನಿಮಾ ಮಾಡಲು ಕಾರಣವೂ ಇತ್ತು. ಅವರು ದುಡ್ಡಿಗೆ ಹೆಚ್ಚಿಗೆ ಬೇಡಿಕೆ ಇಡುತ್ತಿರಲಿಲ್ಲ. ಕೆಲವರು ಕೊಡುತ್ತಿರಲಿಲ್ಲ. ಇನ್ನು ಕೆಲವರು ಅರ್ಧಂಬರ್ಧ ಕೊಡುತ್ತಿದ್ದರು. ಅದರ ಬಗ್ಗೆ ಅವರು ಎಂದೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇವರು ಮಾತ್ರ ಯಾರೇ ಬಂದು ದುಡ್ಡು ಕೇಳಿದರೂ ಕೊಡುತ್ತಿದ್ದರು. ಹೀಗಾಗಿಯೇ ಅವರಿಗೆ ದಾನಶೂರ ಕರ್ಣ ಎಂಬ ಹೆಸರು ಬಂತು. ಅವರೊಬ್ಬ ನಿಜವಾದ ಧಾರಾಳಿ ಮನುಷ್ಯ. ಜತೆಗೆ ಅವರಿಗೆ ಯಾವತ್ತೂ ಜಾಲಿಯಾಗಿರಬೇಕು; ಅಷ್ಟೇ.

ಅಂಬರೀಶ್‌ ಇದ್ದಿದ್ದೇ ಹಾಗೆ; ಅವರು ಬೆಳೆಯುತ್ತಲೇ ನಾಲ್ಕು ಜನ ಗೆಳೆಯರನ್ನು ಜತೆಗಿಟ್ಟುಕೊಂಡೇ ಬೆಳೆದವರು. ಸಿನಿಮಾಕ್ಕೆ ಬಂದ ಮೇಲೆ ಗೆಳೆಯರ ಸಂಘ ದೊಡ್ಡದಾಯಿತು. ಈ ತಮ್ಮ ಗೆಳೆಯರಿಗಾಗಿ ಏನು ಬೇಕಾದರೂ ಮಾಡಲು ಅವರು ಸಿದ್ಧವಾಗಿರುತ್ತಿದ್ದರು. ಅದರಲ್ಲೂ ಸಿನಿಮಾಗಳ ಪಾತ್ರಗಳ ವಿಷಯಕ್ಕೆ ಬಂದಾಗ ತಮ್ಮ ಇಮೇಜ್‌ ನೋಡದೆ ಗೆಳೆಯರಿಗಾಗಿ ಬಣ್ಣ ಹಚ್ಚುತ್ತಿದ್ದರು. ರವಿಚಂದ್ರನ್‌ಗಾಗಿ ಪ್ರೇಮಲೋಕದಲ್ಲಿ ಹೋಟೆಲ್‌ ಸರ್ವರ್‌ ಆಗಿ ಕೆಲಸ ಮಾಡಿದ್ದರು. ಅದರಲ್ಲೂ ತಮ್ಮ ನಟನೆಯಿಂದ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದರೆ ತುಂಬಾ ಖುಷಿಯಿಂದ ಮಾಡುತ್ತಿದ್ದರು. ಹೀರೋ ಇಮೇಜ್‌ ಕಲ್ಪನೆಯೂ ಅವರಿಗೆ ಇರಲಿಲ್ಲ. ಸಿನಿಮಾದಿಂದ ದುಡ್ಡಿನ ಹರಿವು ಆರಂಭವಾಯಿತಾದೂ ಅದರ ಬಗ್ಗೆ ಅವರಿಗೆ ವಿಶೇಷ ಮೋಹವೇನೂ ಇರಲಿಲ್ಲ. ಜನರನ್ನು ಬೈಯುತ್ತಲೇ, ಧಾರಾಳವಾಗಿ ನೆರವನ್ನು ನೀಡುತ್ತಿದ್ದರು.

ಅದಕ್ಕೆ ಅವರ ಹಿನ್ನೆಲೆಯೂ ಕಾರಣಾಗಿತ್ತು. 29 ಮೇ 1952ರಲ್ಲಿ ಮಂಡ್ಯದ ದೊಡ್ಡರಸಿಕೆರೆ ಗ್ರಾಮದಲ್ಲಿ ಹುಚ್ಚೇಗೌಡ-ಪದ್ಮಮ್ಮ ದಂಪತಿ ಮಗನಾಗಿ ಹುಟ್ಟಿದ ಅಂಬರೀಶ್‌ ಅವರ ಕುಟುಂಬ ತೀರಾ ಶ್ರೀಮಂತವಲ್ಲದಿದ್ದರೂ ತಕ್ಕ ಮಟ್ಟಿಗೆ ಅನುಕೂಲವಾಗಿತ್ತು. ಸರಕಾರಿ ನೌಕರಿಯಲ್ಲಿದ್ದ ತಂದೆಗೆ ಮಗ ಶಿಸ್ತಿನಿಂದ ಇರಬೇಕು ಎಂಬ ಆಸೆಯಾದರೂ, ಅಂಬರೀಶ್ ಇದ್ದಿದ್ದು ಮಾತ್ರ ಅದಕ್ಕೆ ತದ್ವಿರುದ್ಧವಾಗಿಯೇ. ಆ ನಡತೆಯೇ ಅವರನ್ನು ಸಿನಿಮಾಕ್ಕೆ ಕರೆ ತಂದಿತು.

ಪುಟ್ಟಣ್ಣ ಒಡನಾಟ:

ಪುಟ್ಟಣ್ಣ ಕಣಗಾಲ್- ಅಂಬರೀಷ್. 
ಪುಟ್ಟಣ್ಣ ಕಣಗಾಲ್- ಅಂಬರೀಷ್. 

ಪುಟ್ಟಣ್ಣ ಅಂಬರೀಶ್‌ ರಗಡ್ ಲುಕ್‌ ನೋಡಿ ಸಿನಿಮಾಕ್ಕೆ ಕರೆ ತಂದರು. ಅಂಬರೀಶ್‌ ಹೀರೋ ಆದರು. ಮುಂದೆಯೂ ಅವರ ಬಾಂಧವ್ಯ ಅತ್ಯುತ್ತಮವಾಗಿತ್ತು. ಅಂಬರೀಶ್‌ ಅವರನ್ನು ಕಂಡರೆ ಪುಟ್ಟಣ್ಣ ಭಾರೀ ಪ್ರೀತಿ ಮಾಡುತ್ತಿದ್ದರು. ವಿಷ್ಣುವರ್ಧನ್‌ ಅವರಿಗಿಂತಲೂ ಒಂದು ತೂಕ ಹೆಚ್ಚೇ ಇಷ್ಟ ಪಡುತ್ತಿದ್ದರು. ‘ಮಸಣದ ಹೂವು’ನಲ್ಲಿ ನೀನೇ ಮಾಡಬೇಕು ಎಂದು ಅವರ ಬಳಿ ತಲೆ ಹಿಡುಕನ ಪಾತ್ರ ಮಾಡಿಸಿದರು. ಅಂಬರೀಶ್‌ ಅವರಿಗಾಗಿ ತಮ್ಮ ಸಿನಿಮಾದಲ್ಲಿ ಸಣ್ಣ ಪಾತ್ರವನ್ನಾದರೂ ಪುಟ್ಟಣ್ಣ ಮೀಸಲಿಡುತ್ತಿದ್ದರು. ‘ಪಡುವಾರಳ್ಳಿ ಪಾಂಡವರು’, ‘ಶುಭ ಮಂಗಳ’ ಈ ಸಾಲಿಗೆ ಸೇರುತ್ತವೆ. ‘ಶುಭ ಮಂಗಳ’ದಲ್ಲಿ ಸಣ್ಣ ಮೂಗನ ರೋಲ್‌ ಅವರದಾಗಿತ್ತು. ಇದನ್ನು ಅಂಬರೀಶ್‌ ಬಿಟ್ಟರೆ ಬೇರೆ ಯಾರೂ ಮಾಡಲು ಸಾಧ್ಯವೂ ಇರಲಿಲ್ಲ ಎಂದು ಪುಟ್ಟಣ್ಣ ಆಗಾಗ ಹೊಗಳುತ್ತಿದ್ದರು. ಹೀಗೆ ಅಂಬರೀಶ್‌ ಅವರನ್ನು ಪುಟ್ಟಣ್ಣ ಬಹಳ ಇಷ್ಟಪಡುತ್ತಿದ್ದರು. ಅದೇ ಪ್ರೀತಿ ಅಂಬರೀಶ್‌ ಅವರಿಗೂ ಇತ್ತು.

ವಿಚಿತ್ರವೆಂದರೆ ನಟನಾಗಬೇಕಿದ್ದರೆ ಶಿಸ್ತು, ಸಮಯಪಾಲನೆ, ಸಿಕ್ಕಾಪಟ್ಟೆ ಕೌಶಲ್ಯ ಇರಬೇಕು, ಆ ಪಾತ್ರದೊಳಗೆ ಇಳಿಯಬೇಕು ಎಂಬುದೆಲ್ಲಾ ಇದೆ. ಆ ತರಹದ ಯಾವುದೇ ಚೌಕಟ್ಟುಗಳು ಅಂಬರೀಶ್‌ ಅವರಿಗೆ ಇರಲಿಲ್ಲ. ಏನೇ ಪಾತ್ರಗಳನ್ನು ಮಾಡಿದರೂ ಅದಕ್ಕಿರುವ ಸಾಂಪ್ರದಾಯಿಕ ಹಿನ್ನೆಲೆಯನ್ನು ಅಂಬರೀಶ್‌ ಮುರಿಯುತ್ತಿದ್ದರು. ಪ್ರೀತಿ, ದುಃಖ ಯಾವುದೇ ಇರಲಿ ಎಲ್ಲದಕ್ಕೂ ಅವರದ್ದೇ ಸ್ಟೈಲ್‌. ನೈಜತೆಯೇ ನಟನೆ ಅನ್ನುವಂತಿದ್ದರು ಅಂಬರೀಶ್. ಪುಟ್ಟಣ್ಣ ಅವರಿಗೆ ಇದೆಲ್ಲಾ ತುಂಬಾ ಇಷ್ಟವಾಗಿತ್ತು. ಅದಕ್ಕಾಗಿ ‘ನ್ಯಾಚುರಲ್‌ ಆಕ್ಟರ್‌’ ಎಂದೇ ಅವರನ್ನು ಕರೆಯುತ್ತಿದ್ದರು.

ಸ್ವಭಾವತಃ ಅಂಬರೀಶ್‌ ಸಿಕ್ಕಾಪಟ್ಟೆ ಜೀವನ ಪ್ರೀತಿ ಇರುವ ಮನುಷ್ಯ. ಜೀವನದಲ್ಲಿ ಎಲ್ಲವೂ ಬೇಕು ಎಂದುಕೊಂಡವರು. ರೇಸ್‌ ಹುಚ್ಚು, ಹೋಗ್ಬೇಕು ಅಂದರೆ ಎಲ್ಲಿಗಾದರೂ ಹೋಗ್ಬೇಕು, ಎಣ್ಣೆ, ಸಿಗರೇಟ್‌, ಇಸ್ಪೀಟ್‌ ಮತ್ತೊಂದು ಮತ್ತೊಂದು… ಎಲ್ಲದರಲ್ಲೂ ಅವರು ಪಂಟ. ಅಡ್ವೆಂಚರಸ್‌ ಆಗಿರುವುದು ಅಂದರೆ ಅವರಿಗೆ ಇಷ್ಟ. ಹಲವು ಹುಡುಗಿಯರ ಗೆಳೆತನವೂ ಅವರಿಗಿತ್ತು. ಹೀಗಿರುವಾಗಲೇ ಅಂತ ಸಿನಿಮಾ ಮುಗಿಸಿದ ನಂತರ ಅದರಲ್ಲಿ ನಟಿಸಿದ್ದ ಜಯಮಾಲಾ ಅವರನ್ನು ಮದುವೆಯಾಗುತ್ತಾರೆ ಎಂಬುದು ಸುದ್ದಿಯಾಗಿತ್ತು. ಆದರೆ ಹುಡುಗಿಯರ ಜತೆ ಗೆಳತನವಿಟ್ಟುಕೊಂಡಿದ್ದರೇ ವಿನಃ ಅದನ್ನು ಮದುವೆಯಾಗುವ ಮಟ್ಟಕ್ಕೆ ಇವರು ಎಂದೂ ಕೊಂಡೊಯ್ದಿರಲಿಲ್ಲ. ಹೀಗಿರುವಾಗಲೇ ಸುಮಲತಾ ಪರಿಚಯವಾಯಿತು. ನಂತರ ಅದು ಮದುವೆವರೆಗೆ ಮುಂದುವರಿಯಿತು. 1991ರಲ್ಲಿ ಮದುವೆಯೂ ನಡೆಯಿತೂ. ಮುಂದೆ ಮಗನೂ ಹುಟ್ಟಿದ; ವಯಸ್ಸು ಮಾತ್ರ ದಾಟುತ್ತಿತ್ತು.

ಜನಪ್ರಿಯತೆ ಇದ್ದರೂ ವಯಸ್ಸು ಸಿನಿಮಾ ಅವಕಾಶಗಳನ್ನು ಕಡಿಮೆ ಮಾಡಿತು. ದೈಹಿಕವಾಗಿಯೂ ತೀರಾ ದಪ್ಪಗಾದರು ಅಂಬರೀಶ್‌. ಯಜಮಾನನ ರೀತಿಯ ಮಧ್ಯ ವಯಸ್ಸಿನ ಪಾತ್ರ ಮಾಡುವುದು ಅವರಿಗೆ ಇಷ್ಟವಿರಲಿಲ್ಲ. ಅಷ್ಟೊತ್ತಿಗೆ ಬಣ್ಣ ಹಚ್ಚುವುದು ಅವರಿಗೂ ವೈರಾಗ್ಯ ಮೂಡಿಸಿತ್ತು. ಜಮೀನು ಆಸ್ತಿಗಳನ್ನೆಲ್ಲಾ ತೆಗೆದುಕೊಂಡು ಭವಿಷ್ಯಕ್ಕೆ ಬೇಕಾದ ಭದ್ರ ಬುನಾದಿಗಳನ್ನು ಹಾಕಿದ್ದವರು ರಾಜಕೀಯದತ್ತ ಆಸಕ್ತಿ ತಾಳಿದರು.

ಅವರಿಗೆ ಹಾಲಿ ಮಂಡ್ಯ ಸಂಸದ ಎಲ್‌.ಆರ್‌. ಶಿವರಾಮೇಗೌಡರಿಂದ ಹಿಡಿದು ಅಧಿಕಾರ ಕೇಂದ್ರದ ಸುತ್ತಲಿದ್ದ ಪ್ರಮುಖ ಪ್ರಮುಖ ರಾಜಕಾರಣಿಗಳೆಲ್ಲರ ಪರಿಚಯವಿತ್ತು. ಕೆಲವು ಇಸ್ಪೀಟ್‌ ಎಲೆಗಳ ಮೇಲೆ ಹುಟ್ಟಿದ ಗೆಳೆತನಗಳಾಗಿದ್ದವು. ಅವರು ಇವರ ಜನಪ್ರಿಯತೆ ನೋಡಿ ರಾಜಕಾರಣಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದರು. ಇವರಿಗೆ ಹೋಗಬೇಕು ಎಂಬ ಮನಸ್ಸೂ ಇತ್ತು. ಆದರೆ ಸಿನಿಮಾ ಹೀರೋ ಇಮೇಜ್‌ ಸ್ಪಲ್ಪ ಅಡ್ಡಿಯಾಗುತ್ತಿತ್ತು. ಸೋತರೆ ಹೇಗೆ ಎಂಬ ಅಳುಕಿತ್ತು. ಸಾಮಾನ್ಯ ನಾಯಕ ನಟರಿಗಿರುವ ಭಯ ಅದು. ಹೀಗಿರುವಾಗಲೇ ಎಚ್‌.ಡಿ. ದೇವೇಗೌಡರು ಪ್ರಧಾನಿಯಾದಾಗ ಖಾಲಿಯಾದ ರಾಮನಗರ ಚುನಾವಣೆಗೆ ಅವರನ್ನು ಕಣಕ್ಕಿಳಿಸುವುದು ಎಂದು ತೀರ್ಮಾನವಾಯಿತು. ಆದರೆ ಅಷ್ಟೆಲ್ಲಾ ಜನಪ್ರಿಯತೆ ಇಟ್ಟುಕೊಂಡು, ಲೆಕ್ಕಾಚಾರ ಹಾಕಿ ಕಣಕ್ಕಿಳಿದಿದ್ದ ಅಂಬರೀಶ್‌ ಅವರನ್ನು 1997ರ ರಾಮನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ. ಎಂ. ಲಿಂಗಪ್ಪ ಸೋಲಿಸಿದರು. ವಿಚಿತ್ರವೆಂದರೆ ಸೋತ ನಂತರ ಅವರ ರಾಜಕೀಯ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಅಂಬರೀಷ್‌ ಅವರನ್ನು ಸೋಲಿಸಿದ ಬಗ್ಗೆ ಜನರೇ ಪಶ್ಚಾತ್ತಾಪ ಪಟ್ಟರು. 1998ರಲ್ಲಿ ‘ಮಂಡ್ಯದ ಗಂಡು’ ತಮ್ಮ ತವರು ಮಂಡ್ಯದಿಂದಲೇ ಲೋಕಸಭೆ ಪ್ರವೇಶಿಸಿದರು.

ಅಂಬರೀಶ್‌ ಮೊದಲೇ ರೆಬೆಲ್‌ ಸ್ಟಾರ್‌-ದೇವೇಗೌಡರು ಸರ್ವಾಧಿಕಾರಿಯಂತೆ ಆಡುತ್ತಾರೆ ಎಂಬುದು ಅವರ ಅವತ್ತಿನ ಆರೋಪವಾಗಿತ್ತು. ಹೀಗಿರುವಾಗಲೇ, ಅವಕಾಶ ಅರಸಿ ವಿಶಾಲ ಸಾಗರದಂತಿದ್ದ ಕಾಂಗ್ರೆಸ್‌ ಪಕ್ಷ ಸೇರಿಕೊಂಡರು ಅಂಬರೀಶ್‌. ಇಲ್ಲಿ ಬೇಕಾದಷ್ಟು ಅವಕಾಶಗಳು ಸಿಗುತ್ತವೆ ಎಂಬುದು ಅವರ ಆಲೋಚನೆಯಾಗಿರಬಹುದು. ಅವರಿಗೆ ಸಹಾಯ ಮಾಡಲು ಕಾಂಗ್ರೆಸ್‌ನಲ್ಲೂ ತುಂಬಾ ಜನ ಗೆಳೆಯರಿದ್ದರು. ಅವರೂ ನಾಯಕ ನಟನ ಆಗಮನದ ನಿರೀಕ್ಷೆಯಲ್ಲಿದ್ದರು. ಅಂಬರೀಶ್‌ ತರಹದ ಜನಪ್ರಿಯ ಇಮೇಜ್‌ ಇರುವ ರಾಜಕಾರಣಿ ಅವರಿಗೆ ಬೇಕಿತ್ತು. ಕಾಂಗ್ರೆಸ್‌ಗೆ ಬಂದವರೇ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದರು. ಆ ಗೆಲುವಿನೊಂದಿಗೆ ಅವರ ಜನಪ್ರಿಯತೆ ಯಾವ ಮಟ್ಟಕ್ಕೆ ಹೋಯಿತು ಎಂದರೆ ಅವರು ಮುಂದಿನ ಕರ್ನಾಟಕದ ಮುಖ್ಯಮಂತ್ರಿ ಎನ್ನುವ ಮಾತುಗಳು ಚಾಲ್ತಿಗೆ ಬಂದವು. ಆದರೆ, ‘ಜನಪ್ರಿಯತೆ ಇದ್ದರೂ ಅವರಿಗೆ ಆ ಸಾಮರ್ಥ್ಯ ಇರಲಿಲ್ಲ’.

ರಾಜಕಾರಣಿಯಾಗಿ ಜನರ ನಡುವೆ ಅಂಬಿ. 
ರಾಜಕಾರಣಿಯಾಗಿ ಜನರ ನಡುವೆ ಅಂಬಿ. 

ಮುಖ್ಯಮಂತ್ರಿ ಹುದ್ದೆಗೆ ಬೇಕಾದ ಜನಪ್ರಿಯತೆ ಅವರಿಗಿತ್ತು. ಮನಸ್ಸು ಮಾಡಿದ್ದರೆ ದಕ್ಕಿಸಿಕೊಳ್ಳಬಹುದಾಗಿತ್ತು. ಆದರೆ ಉಡಾಫೆಯನ್ನೇ ತಮ್ಮ ಹುಟ್ಟುಗುಣದಂತೆ ಹೊಂದಿದ್ದ ಅವರು ಅದರಿಂದ ಹೊರಬರುವುದು ಸಾಧ್ಯವಿರಲಿಲ್ಲ. ಹೀಗಾಗಿ ಇಲ್ಲೂ ಅದೇ ಮುಂದುವರಿಯಿತು. ಒಮ್ಮೆ ರಾಜ್ಯ ದರ್ಜೆ ಕೇಂದ್ರ ಸಚಿವರಾದರೂ ಕಾವೇರಿ ವಿಚಾರಕ್ಕೆ ಅವರೇ ರಾಜೀನಾಮೆ ನೀಡಿದರು. ಸಿದ್ದರಾಮಯ್ಯ ಸರಕಾರದಲ್ಲಿ ವಸತಿ ಸಚಿವರಾಗಿದ್ದು, ಅಲಕ್ಷ್ಯ ಮಾಡಿ ಜತೆಗೆ ಅನಾರೋಗ್ಯದ ಕಾರಣಗಳಿಂದ ಅವರನ್ನು ಕೈ ಬಿಡಲಾಯಿತು. ಮಹತ್ವಾಕಾಂಕ್ಷಿಯ ರಾಜಕೀಯ ಬದುಕು ಹೀಗೆ ಇಲ್ಲಿಗೇ ನಿಂತು ಬಿಟ್ಟಿತು.

ಬೆಳ್ಳಿ ತಟ್ಟೆಯ ಬದುಕು

ಇದಕ್ಕೆಲ್ಲಾ ಕಾರಣ ಅವರ ಬೆಳ್ಳಿ ತಟ್ಟೆಯ ಬದುಕು. ಅವರಿಗೆ ಬೇಕಾಗಿದ್ದೆಲ್ಲಾ ಬಯಸದೇ ಸಿಕ್ಕಿತ್ತು. ಅದಕ್ಕಾಗಿ ಅವರು ವಿಶೇಷ ಶ್ರಮವನ್ನೇನೂ ಹಾಕಲಿಲ್ಲ. ಅವರ ಸುತ್ತಲಿನ ವಲಯ ಅದಕ್ಕೆ ಸಹಾಯ ಮಾಡಿರಬಹುದು ಅಷ್ಟೇ.

ಹುಟ್ಟು ಉಡಾಫೆಯ ಮನುಷ್ಯ ಅವರಾಗಿದ್ದರು. ಜತೆಗೆ ಅದೃಷ್ಟ ಅವರ ಬೆನ್ನಿಗಿತ್ತು. ಯಾವುದೂ ಬೇಕೆಂದು ಆಸೆ ಪಟ್ಟವರಲ್ಲ. ಅದಾಗಿ ಬಂದಾಗ ಮಾತ್ರ ಯಾವುದನ್ನೂ ಬಿಟ್ಟಿರಲಿಲ್ಲ. ಜತೆಗೆ ಅಪರಿಮಿತ ಧೈರ್ಯ ಅವರಲ್ಲಿತ್ತು. ರೌಡಿಸಂ ಅಂದರೆ ರೌಡಿಸಂ ಮಾಡ್ತೀನಿ ಏನಾಗುತ್ತೋ ನೋಡ್ತೀನಿ ಅನ್ನುತ್ತಿದ್ದರು. ಜತೆಗೆ ಯಾರು ಏನೇ ಅನ್ನಲಿ ಡೋಂಟ್‌ ಕೇರ್‌ ಮನುಷ್ಯ. ಒಂದು ಸಲ ಪಿ. ಲಂಕೇಶ್‌, ‘ಆತನ ಮುಖ ನೋಡಿದರೆ ಒಳ್ಳೆ ಹೊಗೆ ಕೊಳವೆ ಹಂಗಿದೆ’ ಅಂದಿದ್ದರು. ‘ಅವನನ್ನು ಕತ್ತರಿಸಿ ಹಾಕ್ಬಿಡ್ತೀನಿ, ಗುದ್ದಾಕ್ತೀನಿ. ಅವ್ನಿಗೆ ಹೇಳು’ ಎಂದು ಅವಾಜ್‌ ಹಾಕಿದ್ದರು ಅಂಬರೀಶ್‌.

ಖ್ಯಾತ ಪಿಟೀಲು ವಾದಕ ಪೀಟೀಲು ಚೌಡಯ್ಯ ಇವರ ಅಜ್ಜರಾಗಿದ್ದರು. ಇವರಿಗೆ ವೈಯಕ್ತಿಕವಾಗಿ ಮೈಸೂರು ಮಹಾರಾಜರವರೆಗೂ ಸ್ನೇಹದ ವಲಯ ಇತ್ತು. ಆದರೆ ಅದನ್ನೆಲ್ಲಾ ತಮ್ಮ ಏಳಿಗೆಗೆ ಅವರೆಂದೂ ಬಳಸಿಕೊಳ್ಳಲಿಲ್ಲ. ಅವರಿಗೆ ಸ್ನೇಹ ಅಂದರೆ ಸ್ನೇಹ ಮುಗಿಯಿತು; ಅಷ್ಟೇ. ಯಾರ ಹಂಗೂ ಇಲ್ಲದೆ ಬೆಳೆದರು. ಸ್ವಂತವಾಗಿ ಬೆಳೆದರು. ಒಂದೇ ಹೇಳಬೇಕೆಂದರೆ ಅದೃಷ್ಟ ಅವರಿಗೆ ಜತೆಗಿತ್ತು. ಅವರು ಬಂದಾಗ ವಿಲನ್‌ ರೋಲ್‌ ಖಾಲಿ ಇತ್ತು; ಹೀರೋ ಅಂದಾಗ ಹೀರೋ, ರಾಣಕಾರಣಕ್ಕೆ ಬಂದಾಗ ಅಲ್ಲೂ ಅವಕಾಶ ಖಾಲಿ ಇತ್ತು. ಇದನ್ನೆಲ್ಲಾ ಬಳಸಿಕೊಂಡು ಅವರು ದೊಡ್ಡ ಜನರಾದರು. ಆದರೂ ಸಾಮಾನ್ಯರಾಗೇ ಉಳಿದುಕೊಂಡರು.

ಅವರಿಗೆ ಹೀರೋ, ರಾಜಕಾಣಿಗಳ ಕೋಟೆಗಳಿರಲಿಲ್ಲ. ಹತ್ತಾರು ಪ್ರಶಸ್ತಿಗಳು ಬಂದಾಗಲೂ ಬೀಗಲಿಲ್ಲ. ‘ಏನೋ ಅವಳಿಗೆ ಭಾರೀ ಗಾಂಚಲಿಯಾ?’ ಅಂತ ಸೆಟ್‌ನಲ್ಲೇ ಹೀರೋಯನ್‌ಗಳನ್ನು ಕೆಣಕುತ್ತಿದ್ದರು. ಯಾವ ರಾಜಕಾರಣಿಗಳ ಮಾತಿಗೂ ಬಾಗುತ್ತಿರಲಿಲ್ಲ. ‘ಅವ್ನೇನು ದೊಡ್ಡ ಜನಾನಾ?’ ಎಂದೇ ಪ್ರಶ್ನಸುತ್ತಿದ್ದರು. ಒರಟರಾದರೂ ಭ್ರಷ್ಟರಲ್ಲ ಎಂದೇ ಮಂಡ್ಯದ ಜನ ಆಶ್ವಾಸನೆಗಳನ್ನು ಮರೆತರೂ ಅವರಿಗೇ ಮತ ಹಾಕುತ್ತಿದ್ದರು. ಆ ಒರಟುತನ, ಉಡಾಫೆಯನ್ನು ಅವರು ಕೊನೆಯವರೆಗೂ ಉಳಿಸಿಕೊಂಡಿದ್ದರು. ಜೊತೆಗೆ ಜನರ ಪ್ರೀತಿಯನ್ನೂ. ಅದರಲ್ಲೇ, ಅದೇ ರಗಡ್‌ ಕ್ಯಾರೆಕ್ಟರ್‌ನಲ್ಲೇ ಕೊನೆಯುಸಿರೂ ಎಳೆದರು.

ನಿರೂಪಣೆ: ಸಚ್ಚಿದಾನಂದ ಎನ್.

Join Samachara Official. CLICK HERE