samachara
www.samachara.com
ವಿದ್ಯಾರ್ಥಿ ಸಂಘಗಳ ಚುನಾವಣೆ: ಕ್ಯಾಂಪಸ್‌ ರಾಜಕಾರಣವನ್ನು ಕೊಂದವರು ಯಾರು? 
FEATURE STORY

ವಿದ್ಯಾರ್ಥಿ ಸಂಘಗಳ ಚುನಾವಣೆ: ಕ್ಯಾಂಪಸ್‌ ರಾಜಕಾರಣವನ್ನು ಕೊಂದವರು ಯಾರು? 

ಸಮ್ಮಿಶ್ರ ಸರಕಾರ ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಕಳೆದು ಹೋಗಿದ್ದ ವಿದ್ಯಾರ್ಥಿ ಸಮುದಾಯದ ರಾಜಕೀಯ ಅಭಿವ್ಯಕ್ತಿಗೆ ಇದು ಅವಕಾಶ ಮಾಡಿಕೊಡಲಿದೆ.

Team Samachara

ಅದು ಕರ್ನಾಟಕದಲ್ಲಿ ರಾಜ್ಯಪಾಲರ ಆಳ್ವಿಕೆಯ ಕಾಲಘಟ್ಟ. ರಾಮೇಶ್ವರ ಠಾಕೂರ್ ಅರಮನೆ ರಸ್ತೆಯ ರಾಜಭವನದಿಂದಲೇ ಎಲ್ಲಾ ಆಡಳಿತಾತ್ಮಕ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ರಾಜಕಾರಣಿಗಳು ಚುನಾವಣೆಗೆ ಅಣಿಯಾಗುತ್ತಿದ್ದರು. ಇಂತಹ ಸಮಯದಲ್ಲಿ ಶಿವಮೊಗ್ಗ, ಮಂಡ್ಯ ಹಾಗೂ ರಾಯಚೂರು ಜಿಲ್ಲೆಗಳ ಹಿಂದುಳಿದ ವರ್ಗಗಳ ವಸತಿ ನಿಲಯ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಸತಿ ನಿಲಯದ ವಿದ್ಯಾರ್ಥಿಗಳು ಇಡೀ ರಾತ್ರಿ ರೈಲಿನಲ್ಲಿ ಪ್ರಯಾಣ ಮುಗಿಸಿ, ಅಲಸೂರು ಗೇಟ್‌ ಪೊಲೀಸ್‌ ಠಾಣೆಯ ಪಕ್ಕದ ಮೈದಾನದಲ್ಲಿ ಬಂದು ಸೇರಿದ್ದರು. ಅವರ ಬೇಡಿಕೆ ಇಷ್ಟೆ; ಸರಕಾರ ಸರಕಾರದ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ತಲಾವಾರು ನೀಡುತ್ತಿದ್ದ ನೆರವನ್ನು ಹೆಚ್ಚಿಸಿ, ಬೆಲೆ ದುಬಾರಿಯಾಗುತ್ತಿದ್ದ ಕಾಲದಲ್ಲಿ ದಶಕಗಳ ಹಿಂದಿನ ಲೆಕ್ಕಾಚಾರದಲ್ಲಿ ನೀಡುತ್ತಿದ್ದ ಹಣ ಸಾಲುತ್ತಿಲ್ಲ, ಊಟದ ಗುಣಮಟ್ಟ ಕಳೆದು ಹೋಗಿದೆ ಎಂಬುದಾಗಿತ್ತು.

ರಾಜಭವನಕ್ಕೆ ಪಾದಯಾತ್ರೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೋದರೂ, ರಾಜ್ಯಪಾಲರ ಭೇಟಿ ಆಗಲಿಲ್ಲ. ಪೊಲೀಸರು ಮನವೊಲಿಸಿ ಒಂದಷ್ಟು ವಿದ್ಯಾರ್ಥಿ ಮುಖಂಡರನ್ನು ಒಳಗೆ ಕರೆದೊಯ್ದು ಮನವಿ ತೆಗೆದುಕೊಂಡರು. ಕೊನೆಗೆ, ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ರೈಲಿನಲ್ಲಿ ವಾಪಾಸಾದರು. ನಂತರ ಚುನಾವಣೆ ನಡೆಯಿತು. ದಕ್ಷಿಣ ಭಾರತದಲ್ಲಿ ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು. ಶಿವಮೊಗ್ಗ ಮೂಲದ ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ತಮ್ಮ ಮೊದಲ ಆಯವ್ಯಯ ಪತ್ರದಲ್ಲಿಯೇ ವಸತಿ ನಿಲಯಗಳಿಗೆ ನೀಡುತ್ತಿದ್ದ ಅನುದಾನವನ್ನು ಹೆಚ್ಚಿಸಿದರು. ಅಂದು ವಿದ್ಯಾರ್ಥಿಗಳು ರಾಜಭವನದಲ್ಲಿ ನೀಡಿ ಹೋದ ಮನವಿ ಪತ್ರದ ಪರಿಣಾಮ ಅದು. ಆದರೆ, ಅವತ್ತು ಮನವಿ ನೀಡಿ ಹೋದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ವಸತಿ ನಿಲಯಗಳಿಂದ ಹೊರಬಿದ್ದಾಗಿತ್ತು. ಅದಕ್ಕಿಂತಲೂ ವಿಶೇಷ ಏನೆಂದರೆ, ಸಾವಿರಾರು ವಿದ್ಯಾರ್ಥಿಗಳನ್ನು ಒಂದು ವಿಚಾರಕ್ಕೆ ಸಂಘಟಿಸಿ ಬೆಂಗಳೂರಿಗೆ ಕರೆತಂದ ಶಿವಮೊಗ್ಗದ ಸಂಘಟನೆ, ‘ವಿದ್ಯಾರ್ಥಿ ಹಿತ ರಕ್ಷಣಾ ವೇದಿಕೆ’ (ವಿಎಚ್‌ಆರ್‌ವಿ) ಕೂಡ ತಮ್ಮ ಕಾರ್ಯಾಚರಣೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತ್ತು. ಪಕ್ಷಾತೀತವಾದ ಹೋರಾಟ ಫಲ ನೀಡಿತ್ತು.

ಒಂದು ಕಾಲದಲ್ಲಿ ವಿಶ್ವವಿದ್ಯಾನಿಲಯಗಳ ಸೆನೆಟ್‌ಗಳಿಗೆ ನಡೆಯುತ್ತಿದ್ದ ಚುನಾವಣೆ ಕೊನೆಗೆ ಕಾಲೇಜುಗಳಿಗೆ ಸೀಮಿತವಾದ ವಿದ್ಯಾರ್ಥಿ ಸಂಘಗಳಿಗೆ ಬಂದು ನಿಂತಿತ್ತು. ಉನ್ನತ ಶಿಕ್ಷಣ ಹೆಚ್ಚೆಚ್ಚು ಖಾಸಗೀಕರಣಗೊಂಡ ನಂತರ ವಿದ್ಯಾರ್ಥಿ ಜೀವನದಲ್ಲೇ ರಾಜಕಾರಣದ ಮೊದಲ ಅನುಭವ ನೀಡುವ ಸಂಘಟನೆಗಳು, ಚುನಾವಣೆಗಳಿಗೆ ಬ್ರೇಕ್ ಬಿದ್ದಿತ್ತು. ಆದರೆ, ಸಮ್ಮಿಶ್ರ ಸರಕಾರ ಕಾಲೇಜು ಹಾಗೂ ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸುವ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಕಳೆದು ಹೋಗಿದ್ದ ವಿದ್ಯಾರ್ಥಿ ಸಮುದಾಯದ ರಾಜಕೀಯ ಅಭಿವ್ಯಕ್ತಿಗೆ ಇದು ಅವಕಾಶ ಮಾಡಿಕೊಡಲಿದೆ.

ಕಾಲೇಜು, ವಿವಿಗಳ ವಿದ್ಯಾರ್ಥಿ ಸಂಘಗಳು ಅಸ್ಥಿತ್ವದಲ್ಲಿರುತ್ತವೋ ಬಿಡುತ್ತವೋ, ಈ ದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಆದ ವಿದ್ಯಾರ್ಥಿ ಮುಖವಾಣಿ ಸಂಘಟನೆಗಳನ್ನು ನಡೆಸಿಕೊಂಡು ಬಂದಿವೆ. ಕಾಂಗ್ರೆಸ್ ಪಕ್ಷದ ಎನ್‌ಎಸ್‌ಯುಐ, ಬಿಜೆಪಿಯ ಎಬಿವಿಪಿ, ಸಿಪಿಐಎಂನ ಎಸ್‌ಎಫ್‌ಐ, ಬಿಎಸ್‌ಪಿಯ ಬಿವಿಎಸ್‌ ಹೀಗೆ ಒಂದೊಂದು ಪಕ್ಷ, ಅವುಗಳದ್ದೊಂದು ವಿದ್ಯಾರ್ಥಿ ಸಂಘಟನೆಗಳು ನಮ್ಮಲ್ಲಿ ಸಕ್ರಿಯವಾಗಿವೆ. ಇವತ್ತು ಮತ್ತೆ ಕಾಲೇಜು ಮತ್ತು ವಿವಿಗಳ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಎಂದಾಗ ಹಿನ್ನೆಲೆಯಲ್ಲಿ ಕೆಲಸ ಮಾಡುವುದು ಇವೇ ಸಂಘಟನೆಗಳು ಎಂಬುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ. ಸಾಕ್ಷಿ ಬೇಕಿದ್ದರೆ ದಿಲ್ಲಿಯ ದಿಲ್ಲಿ ವಿಶ್ವವಿದ್ಯಾನಿಲಯ ಹಾಗೂ ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಒಮ್ಮೆ ಇಣುಕಿ ನೋಡಬಹುದು.

ಗತ ಕಾಲದ ನೆನಪುಗಳು:

ಅದು ಕೇಂದ್ರದ ರಾಜಕಾರಣ ಇರಲಿ, ರಾಜ್ಯದ ರಾಜಕಾರಣ ಇರಲಿ, ಒಂದು ಕಾಲದಲ್ಲಿ ಮುಖ್ಯವಾಹಿನಿ ರಾಜಕಾರಣದ ನಾಯಕರನ್ನು ಹುಟ್ಟಿ ಹಾಕುವ ಕೆಲಸವನ್ನು ಈ ವಿದ್ಯಾರ್ಥಿ ಸಂಘಗಳ ಚುನಾವಣಾ ಪ್ರಕ್ರಿಯೆ ಮಾಡುತ್ತಿದ್ದವು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್‌ರಿಂದ ಹಿಡಿದು ನಮ್ಮಲ್ಲೇ ಪಿಜಿಆರ್‌ ಸಿಂಧ್ಯಾವರೆಗೆ ವಿದ್ಯಾರ್ಥಿ ಹೋರಾಟಗಳಿಂದ ರಾಜಕಾರಣದ ಪಡಸಾಲೆಗೆ ನಡೆದು ಬಂದವರ ದೊಡ್ಡ ಪಟ್ಟಿಯೇ ಈ ದೇಶದಲ್ಲಿ ಸಿಗುತ್ತದೆ. ಪ್ರಫುಲ್ಲ ಕುಮಾರ್ ಮಹಾಂತನಂತಹ ವಿದ್ಯಾರ್ಥಿ ನಾಯಕ ಅಸ್ಸಾಂ ರಾಜ್ಯದ ಚುಕ್ಕಾಣಿ ಹಿಡಿದ ಇತಿಹಾಸ ಈ ದೇಶದಲ್ಲಿದೆ. ಆದರೆ, 90ರ ದಶಕದ ನಂತರ ವಿದ್ಯಾರ್ಥಿ ಹೋರಾಟ, ಚಳವಳಿಗಳು ದಿಕ್ಕನ್ನು ಬದಲಿಸಿದವು. ನಿಧಾನವಾಗಿ ಕ್ಯಾಂಪಸ್‌ಗಳು ಕಲರವಕ್ಕೆ ಸೀಮಿತವಾಗಿ ರಾಜಕೀಯ ಚಟುವಟಿಕೆ ಅಪರಾಧ ಎಂಬಂತೆ ಬಿಂಬಿಸುವ ಪ್ರಯತ್ನ ನಡೆಯಿತು.

ಯಾಕೆ ಎಂಬುದನ್ನು ಇವತ್ತು ಕೊಂಚ ಸಂಯಮದಿಂದ ನೋಡಿದರೆ 90ರ ದಶಕದಲ್ಲಿ ಕಾಂಗ್ರೆಸ್ ಈ ದೇಶದ ಜನರ ಮೇಲೆ ಹೇರಿದ ಉದಾರೀಕರಣ, ಖಾಸಗೀಕರಣ, ಜಾಗತೀಕರಣ (ಎಲ್‌ಪಿಜಿ) ಎಂಬ ‘ಹೊಸ’ ಆರ್ಥಿಕ ನೀತಿಗಳು ನಿಚ್ಚಳವಾಗಿ ಕಾಣಿಸುತ್ತವೆ. ಹೆಚ್ಚು ಕಡಿಮೆ ಎಲ್‌ಪಿಜಿ ಜಾರಿಯಾದ ಒಂದು ದಶಕದ ಅಂತರದಲ್ಲಿ ನವ ಶೈಕ್ಷಣಿಕ ನೀತಿಯೊಂದನ್ನು ಉನ್ನತ ಶಿಕ್ಷಣದಲ್ಲಿ ಈ ದೇಶದಲ್ಲಿ ಪರಿಚಯಿಸಿದ್ದು ಬಿರ್ಲಾ ಮತ್ತು ಅಂಬಾನಿ. ಎರಡು ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಮಂಡಿಸಿದ ನವ ಶಿಕ್ಷಣ ನೀತಿ ಉನ್ನತ ಶಿಕ್ಷಣದ ಚಹರೆಯನ್ನು ನಿಧಾನವಾಗಿ ಬದಲಿಸಲು ಆರಂಭಿಸಿತು. ಕಾಲೇಜುಗಳು ವಿದ್ಯಾರ್ಥಿಗಳನ್ನು ದೇಶದ ಆಸ್ತಿ ಮಾಡುವ ಬದಲು, ವಿದ್ಯಾರ್ಥಿಗಳನ್ನು ಹಾಗೂ ಅವರುಗಳ ಪೋಷಕರನ್ನು ಗ್ರಾಹಕರನ್ನಾಗಿ ಬದಲಿಸಿತು. ಸ್ವಾಯತ್ತತೆ ಅಥವಾ ಅಟನಾಮಸ್ ಹೆಸರಿನಲ್ಲಿ ಆರ್ಥಿಕ ಲಾಭಗಳನ್ನಷ್ಟೆ ಮುನ್ನೆಲೆ ತಂದು ಬಿಟ್ಟವು. ಕ್ಯಾಂಪಸ್‌ಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ಅಪರಾಧ ಎಂಬಂತೆ ಚಿತ್ರಿಸುವ ವಾತಾವರಣವನ್ನು ಬೆಳೆಸಿದವು. ಇಂತಹ ಪರಿಸ್ಥಿತಿಯಲ್ಲಿ ಪಕ್ಷಾತೀತ ವಿದ್ಯಾರ್ಥಿ ಸಂಘಟನೆಗಳು ವಿಚಾರಕ್ಕೆ, ಸಮಸ್ಯೆಗಷ್ಟೆ ಸೀಮಿತವಾದವು. ಉಳಿದ ರಾಜಕೀಯ ಪಕ್ಷಗಳ ಬೆಂಬಲಿತ ಸಂಘಟನೆಗಳು ಕ್ಯಾಂಪಸ್‌ಗಳಲ್ಲಿ ಇದ್ದೂ ವಿಚಾರ ಶೂನ್ಯವಾದವು. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರ ಮತ್ತೆ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಿದೆ. ಇದನ್ನು ರಾಜಕೀಯ ಪಕ್ಷಗಳ ವಿದ್ಯಾರ್ಥಿಗಳು ಸಹಜವಾಗಿಯೇ ಸ್ವಾಗತಿಸಿವೆ. ಆದರೆ ಇವತ್ತಿನ ವಿದ್ಯಾರ್ಥಿಗಳಿಗೆ ಇಂತಹದೊಂದು ತೀರ್ಮಾನ ತಮ್ಮ ಮೇಲೆ ಬೀರುವ ಪರಿಣಾಮಗಳ ಕುರಿತು ಆಲೋಚನೆ ಮಾಡುವ ಬೌದ್ಧಿಕತೆ ಇದ್ದಂತೆ ಕಾಣಿಸುತ್ತಿಲ್ಲ. ಇವತ್ತಿನ ‘ಪಬ್‌ಜಿ ಜನರೇಶನ್’ನಿಂದ ಅದನ್ನು ನಿರೀಕ್ಷಿಸುವುದು ಕಷ್ಟ ಇದೆ ಕೂಡ.

ಸಾಂದರ್ಭಿಕ ಚಿತ್ರ