samachara
www.samachara.com
ಪ್ರವಾಹ ಫಾಲೋಅಪ್‌: ಪ್ರಕೃತಿ ಹಾಳು ಮಾಡಿದ ಊರಿನಲ್ಲಿ ‘ಕಾಲೂರಿ’ ನಿಂತವರು!
FEATURE STORY

ಪ್ರವಾಹ ಫಾಲೋಅಪ್‌: ಪ್ರಕೃತಿ ಹಾಳು ಮಾಡಿದ ಊರಿನಲ್ಲಿ ‘ಕಾಲೂರಿ’ ನಿಂತವರು!

ಕಾಲೂರಿನ ಸಂತ್ರಸ್ಥರು ತಯಾರಿಸುವ ಆಹಾರ ಉತ್ಪನ್ನಗಳಿಗೆ ‘ಕಾಲೂರು ದಿ ವಿಲೇಜ್ ಸ್ಟೋರ್’ ಎಂಬ ಹೆಸರಿಟ್ಟು ‘ಕೂರ್ಗ್ ಫ್ಲೇವರ್ಸ್ ಬ್ರಾಂಡ್’ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. 

ವಸಂತ ಕೊಡಗು

ವಸಂತ ಕೊಡಗು

ಕೊಡಗಿನ ದುರಂತದಲ್ಲಿ ತೋಟ, ಗದ್ದೆಗಳನ್ನು, ಹುಟ್ಟಿ ಬೆಳೆದ ಮನೆಗಳನ್ನು ಕಳೆದುಕೊಂಡವರು ಸಾವಿರಾರು ಜನ. ಈ ಸಂದರ್ಭದಲ್ಲಿ ಇವರಿಗೆ ನಾಡಿನ ಜನರು ಆಸರೆಯಾಗಿ ನಿಂತಿದ್ದು ನಿಜಕ್ಕೂ ಮೆಚ್ಚುವಂತದ್ದು. ಇವರಲ್ಲೇ ಒಂದಷ್ಟು ಜನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಲೂರು ಭೂ ಕುಸಿತ ಸಂತ್ರಸ್ಥರಿಗೆ ಬದುಕಿನ ದಾರಿ ತೋರಿಸಿದ್ದಾರೆ.

ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ಮಡಿಕೇರಿಯ ಸಮೀಪದ ಕಾಲೂರಿನಲ್ಲಿ ಭೂ ಕುಸಿತ ಉಂಟಾಗಿ ನೂರಾರು ಎಕರೆ ಕಾಫಿ ತೋಟ ಸಮಾಧಿಯಾಗಿತ್ತು. ಹಲವು ಮನೆಗಳೂ ಕೊಚ್ಚಿ ಹೋಗಿತ್ತು. ಒಂದಷ್ಟು ಜನರು ಮನೆ, ತೋಟ ಕಳೆದುಕೊಂಡು ಸಂತ್ರಸ್ಥರಾದರೆ, ಇನ್ನೊಂದಷ್ಟು ಜನರು ಬದುಕಿನ ಆಧಾರವಾಗಿದ್ದ ತೋಟ, ಗದ್ದೆಗಳನ್ನು ಕಳೆದುಕೊಂಡರು. ಆ ಸಮಯದಲ್ಲಿ ಆ ಕ್ಷಣಕ್ಕೆ ಎಲ್ಲರೂ ನೆರವು ನೀಡಿದರು. ಆದರೆ ಭವಿಷ್ಯದ ಚಿಂತೆಗಳು ಮಾತ್ರ ಕರಗಿರಲಿಲ್ಲ.

ಇದೀಗ ಈ ಸಂತ್ರಸ್ಥರಿಗೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಯೋಜನೆಯೊಂದು ರೂಪುಗೊಂಡಿದೆ. ಸೊರಗಿದ ಕೈಗಳಿಗೆ ಕೌಶಲ್ಯತೆ ಕಲಿಸಿ, ಅವರಿಗೆ ಕೆಲಸಗಳನ್ನು ನೀಡಿ, ಆ ಮೂಲಕ ಆರ್ಥಿಕ ಬಲ ನೀಡುವ ಯೋಜನೆ ಆರಂಭಗೊಂಡಿದೆ. ಮತ್ತಿದು ಯಶಸ್ವಿಯಾಗಿಯೂ ಮುನ್ನಡೆಯುತ್ತಿದೆ ಎಂಬುದು ವಿಶೇಷ.

ಕಾಲೂರಿನ ಸಂತ್ರಸ್ಥರಿಗೆ ಇಲ್ಲಿನ ಭಾರತೀಯ ವಿದ್ಯಾಭವನ ಮತ್ತು ಪ್ರಾಜೆಕ್ಟ್ ಕೂರ್ಗ್ ಎಂಬ ಸಂಸ್ಥೆಗಳು ಜಂಟಿಯಾಗಿ ಕೌಶಲ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಪುರುಷರಿಗೆ ಆಹಾರ ಪದಾರ್ಥಗಳ ತಯಾರಿಕೆಯ ತರಬೇತಿ ನೀಡಲಾಗುತ್ತಿದೆ. ಸದ್ಯಕ್ಕೆ ಕಾಲೂರಿನ ಸರ್ಕಾರೀ ಶಾಲೆ ಮುಚ್ಚಿರುವುದರಿಂದ ಆ ಶಾಲೆಯನ್ನೇ ಈ ತರಬೇತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ನಾಲ್ಕು ತಿಂಗಳ ಟೈಲರಿಂಗ್ ಮತ್ತು ಮೂರು ತಿಂಗಳ ಆಹಾರ ತಯಾರಿಕಾ ತರಬೇತಿಯ ಅವಧಿಯಲ್ಲಿ ಪ್ರತಿ ಅಭ್ಯರ್ಥಿಗೂ ಸ್ಟೈಫಂಡ್ ನೀಡಲಾಗುತ್ತಿದೆ.

ಮಡಿಕೇರಿ ನೆರೆ ಸಂತ್ರಸ್ಥರ ಹೊಸ ಬದುಕಿನೆಡೆಗೆ ಹೆಜ್ಜೆ ಇಡುವ ತಯಾರಿಯಲ್ಲಿದ್ದಾರೆ. 
ಮಡಿಕೇರಿ ನೆರೆ ಸಂತ್ರಸ್ಥರ ಹೊಸ ಬದುಕಿನೆಡೆಗೆ ಹೆಜ್ಜೆ ಇಡುವ ತಯಾರಿಯಲ್ಲಿದ್ದಾರೆ. 

“ಪ್ರಸ್ತುತ 27 ಜನ ಮಹಿಳೆಯರು ಟೈಲರಿಂಗ್ ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ ಶೇಕಡಾ 90ರಷ್ಟು ಹಾಜರಾತಿ ಇರುವ ಅಭ್ಯರ್ಥಿಗಳಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡುವ ಯೋಜನೆಯನ್ನೂ ರೂಪಿಸಲಾಗಿದೆ,” ಎನ್ನುತ್ತಾರೆ ವಿದ್ಯಾ ಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್. ಇನ್ನು ಆಹಾರ ತಯಾರಿಕಾ ತರಬೇತಿಯಲ್ಲೂ ಸಂತ್ರಸ್ತರು ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಉತ್ಪಾದಿಸುವ ಆಹಾರ ಪಾದಾರ್ಥಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಈಗಾಗಲೇ ವೆಬ್‌ಸೈಟ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜತೆಗೆ ಮಾರುಕಟ್ಟೆ ವಿಸ್ತರಿಸಲು ವಿವಿಧ ಕೊಡವ ಸಮಾಜಗಳೂ ಸಹಕಾರ ನೀಡುವ ಭರವಸೆ ನೀಡಿವೆ.

ಇಲ್ಲಿ ತಯಾರಾಗುವ ಆಹಾರ ಉತ್ಪನ್ನಗಳಿಗೆ ‘ಕಾಲೂರು ದಿ ವಿಲೇಜ್ ಸ್ಟೋರ್’ ಎಂಬ ಹೆಸರಿಟ್ಟು ‘ಕೂರ್ಗ್ ಫ್ಲೇವರ್ಸ್ ಬ್ರಾಂಡ್’ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಪ್ಪಳ, ಉಪ್ಪಿನಕಾಯಿ ಮತ್ತು ಚಿಕನ್, ಪೋರ್ಕ್ ಹಾಗೂ ಬಿರಿಯಾನಿ ಮಸಾಲಾಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ಕೂರ್ಗ್‌ ಪ್ಲೇವರ್ ಹೆಸರಿನಲ್ಲಿ ಮಸಾಲೆ ಪದಾರ್ಥಗಳ ಮಾರಾಟಕ್ಕೆ ‘ಪ್ರಾಜೆಕ್ಟ್ ಕೂರ್ಗ್‌’ ಪ್ರಚಾರ ಪತ್ರ. 
ಕೂರ್ಗ್‌ ಪ್ಲೇವರ್ ಹೆಸರಿನಲ್ಲಿ ಮಸಾಲೆ ಪದಾರ್ಥಗಳ ಮಾರಾಟಕ್ಕೆ ‘ಪ್ರಾಜೆಕ್ಟ್ ಕೂರ್ಗ್‌’ ಪ್ರಚಾರ ಪತ್ರ. 

ನಾಡಿನ ಹೆಸರಾಂತ ಲೇಖಕಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತೆ ವೈದೇಹಿ ಅವರು ಸೋಮವಾರ ಈ ಸಂಸ್ಥೆಯ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಜತೆಗೆ ಎರಡನೇ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. “ಅನೇಕ ಹಳ್ಳಿಗಳಲ್ಲೂ ನೂರಾರು ಸಂತ್ರಸ್ಥರಿದ್ದು, ಅಲ್ಲಿಯೂ ಕೂಡ ಸ್ವಾವಲಂಬಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆ ಇದೆ. ಆದರೆ ಕಟ್ಟಡ ಕೊರತೆಯಿಂದ ಸಾಧ್ಯವಾಗುತ್ತಿಲ್ಲ,” ಎನ್ನುತ್ತಾರೆ ವಿದ್ಯಾ ಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್.

ಸದ್ಯ, ಇವರ ಉತ್ಪನ್ನಗಳಿಗೆ, ಪ್ರಯತ್ನಕ್ಕೆ ಸಮಾಜದಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈಗಾಗಲೇ ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ವಿವಿಧ ಶಾಲೆಗಳಿಗೆ ಬೇಕಾದ ಸಮವಸ್ತ್ರಗಳನ್ನು ಇದೇ ಸಂಸ್ಥೆಯಿಂದ ಖರೀದಿಸುವುದಾಗಿ ಭರವಸೆ ನೀಡಿದ್ದಾರೆ. ಇದು ಫಲಾನುಭವಿಗಳ ಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇಂಥಹ ಬೆಂಬಲ, ಪ್ರೋತ್ಸಾಹ ಇನ್ನೂ ಹೆಚ್ಚಾಗಲಿ, ನೊಂದ ಮನಸ್ಸುಗಳ ಈ ಪ್ರಯತ್ನ ಸಫಲವಾಗಲಿ ಎಂಬುದೇ ನಮ್ಮ ಹಾರೈಕೆ.