samachara
www.samachara.com
ಸಾಂಸ್ಕೃತಿಕ ರಾಜಕೀಯ: ಯಾವೂದೂ ಶಾಶ್ವತವಲ್ಲ; ಸೂಕಿಗೆ ಕೊಟ್ಟ ಪ್ರಶಸ್ತಿ ಕೂಡ
FEATURE STORY

ಸಾಂಸ್ಕೃತಿಕ ರಾಜಕೀಯ: ಯಾವೂದೂ ಶಾಶ್ವತವಲ್ಲ; ಸೂಕಿಗೆ ಕೊಟ್ಟ ಪ್ರಶಸ್ತಿ ಕೂಡ

ತನ್ನ ಪಕ್ಷದ ಅಧಿಕಾರವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾದಾಗ ಆಕೆ ಕಣ್ಣಿದ್ದೂ ಕುರುಡಾದರು. ಇದನ್ನೆಲ್ಲಾ ನೋಡಿ ಪ್ರತಿಷ್ಠಿತ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಆಕೆಗೆ ನೀಡಿದ್ದ ಪ್ರಶಸ್ತಿಯನ್ನೀಗ ಹಿಂಪಡೆದಿದೆ.

Team Samachara

ಆಕೆ ಪ್ರಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ. ಆಕೆಯ ಹೋರಾಟಗಳಿಗೆ ನೋಬೆಲ್‌ನಂಥ ಪ್ರತಿಷ್ಠಿತ ಪ್ರಶಸ್ತಿಗಳೂ ಒಲಿದು ಬಂದಿದ್ದವು. ಅಧಿಕಾರಯುತ ಕುಟುಂಬದಿಂದ ಬಂದರೂ ಹೋರಾಟ, ಜೈಲೂಟಗಳನ್ನು ಕಂಡ ಆಕೆ ಗೃಹ ಬಂಧನದಲ್ಲಿಯೇ ದಶಕಗಳನ್ನು ಕಳೆದರು. ಕೊನೆಗೆ ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಿದರು. ಪರಿಣಾಮ ಮುಂದೊಂದು ದಿನ ಅಧಿಕಾರಕ್ಕೆ ಏರಿದರು. ಅಧಿಕಾರಕ್ಕೇರುತ್ತಿದ್ದಂತೆ ಯಾವ ಜನರ ಕಣ್ಣೀರಿಗೆ ಮರುಗುತ್ತೇನೆ ಎಂದು ಬೆಂಗಳೂರಿನ ಐಐಎಸ್‌ಸಿ ಆವರಣದಲ್ಲೂ ಹೇಳಿದ್ದರೋ, ಅವರನ್ನೇ ಮರೆತು ಬಿಟ್ಟರು. ತನ್ನ ಅಧಿಕಾರವಧಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ವರದಿಯಾದಾಗ ಆಕೆ ಕಣ್ಣಿದ್ದೂ ಕುರುಡಾದರು. ಕಣ್ಣೆದುರೇ ಹೆಂಗಸರು, ಮಕ್ಕಳು ಅತ್ಯಾಚಾರಕ್ಕೆ ಈಡಾಗಿ, ಮೈಗೆ ಅಕ್ಷರಶಃ ಬೆಂಕಿ ಹಾಕಿಸಿಕೊಂಡು ಕೊಲೆಯಾದರೂ ತುಟಿ ಬಿಚ್ಚಲಿಲ್ಲ.

ಇದನ್ನೆಲ್ಲಾ ನೋಡಿ ಪ್ರತಿಷ್ಠಿತ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಆಕೆಗೆ ನೀಡಿದ್ದ ಪ್ರಶಸ್ತಿಯನ್ನೀಗ ಹಿಂಪಡೆದಿದೆ. ಮಾನವತೆಯ ಹಾದಿಯಲ್ಲಿ ನಡೆದ ಹಾದಿಯನ್ನು ಮರೆತಾಕೆಯ ಹೆಸರು ಆಂಗ್‌ ಸಾನ್‌ ಸೂಕಿ ಹಾಗೂ ಪ್ರಶಸ್ತಿ ಮರಳಿ ಪಡೆಯುವ ಮೂಲಕ ಸಾಂಸ್ಕೃತಿಕ ರಾಜಕಾಣವನ್ನು ಮುಂದಿಟ್ಟ ಸಂಸ್ಥೆಯ ಹೆಸರು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌.

ಆಂಗ್‌ ಸಾನ್‌ ಸೂಕಿ ಅಂಹಿಸಾತ್ಮಕ ನೆಲೆಯ ಹೋರಾಟ, ಮಯನ್ಮಾರ್‌ನಲ್ಲಿ ಶಾಂತಿ ಸ್ಥಾಪನೆಗೆ ಕೈಗೊಂಡ ಪ್ರಯತ್ನಗಳನ್ನು ಕಂಡ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್‌’ ಸಂಸ್ಥೆ ‘ಅಂಬಾಸಿಡರ್‌ ಆಫ್‌ ಕನ್ಸೈನ್ಸ್‌ ಅವಾರ್ಡ್‌’ನ್ನು ನೀಡಿತ್ತು. ಅದೂ ಆಕೆ 15 ವರ್ಷಗಳ ಗೃಹ ಬಂಧನದಲ್ಲಿ ಇದ್ದಾಗ, 2009ರಲ್ಲಿ. ಈಗದನ್ನು ವಾಪಾಸ್ ಪಡೆಯುವ ಮೂಲಕ ಸೂಕಿಗೆ ಮರೆತ ಹಾದಿಯನ್ನು ನೆನಪಿಸುವ ಕೆಲಸ ಮಾಡಿದೆ. ಅಷ್ಟೆ ಅಲ್ಲ, ಕಟು ಶಬ್ಧಗಳಲ್ಲಿ ಸೂಕಿಯ ಇಂದಿನ ರಾಜಕೀಯ ನಿಲುವನ್ನು ಟೀಕಿಸಿದೆ.

“ನೀವು ಇನ್ನು ಮುಂದೆ ಭರವಸೆಯ, ಧೈರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಸಂಕೇತವಲ್ಲ ಎಂಬುದರ ಬಗ್ಗೆ ನಾವು ಇಂದು ತೀವ್ರ ನಿರಾಶೆಗೊಂಡಿದ್ದೇವೆ,” ಎಂದು ಬ್ರಿಟನ್‌ ಮೂಲದ ಅಮ್ನೆಸ್ಟಿ ಮುಖ್ಯಸ್ಥ ಕುಮಿ ನೈಡೂ ಅಂಗ್‌ ಸಾನ್‌ ಸೂಕಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

“ನೀವು ಅಂಬಾಸಿಡರ್ ಆಫ್ ಕನ್ಸೈನ್ಸ್ ಪ್ರಶಸ್ತಿ ಸ್ವೀಕೃತೆ ಎಂದು ಸಮರ್ಥಿಸಿಕೊಳ್ಳಲು ಅಮ್ನೆಸ್ಟಿ ಇಂಟರ್ನ್ಯಾಷನಲ್‌ಗೆ ಸಾಧ್ಯವಿಲ್ಲ. ಬಹಳ ನೋವಿನಿಂದ ಈ ಮೂಲಕ ನಾವು ನಿಮ್ಮಿಂದ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳುತ್ತೇವೆ,” ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಭಾನುವಾರವೇ ಇಂಥಹದ್ದೊಂದು ಪ್ರತಿಕ್ರಿಯೆಯನ್ನು ಮಯನ್ಮಾರ್‌ ನಾಯಕಿಗೆ ತಲುಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಆದರೆ ಆಂಗ್‌ ಸಾನ್‌ ಸೂಕಿ ಇಲ್ಲಿಯವರೆಗೆ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರೋಹಿಂಗ್ಯಾ ಮುಸ್ಲಿಮರು ಮತ್ತು ಆಂಗ್‌ ಸಾನ್‌ ಸೂಕಿ

ಸೂಕಿ ಮರೆತ ರೊಹಿಂಗ್ಯಾ ನಿರಾಶ್ರಿತರ ಕಾಲುಗಳು. 
ಸೂಕಿ ಮರೆತ ರೊಹಿಂಗ್ಯಾ ನಿರಾಶ್ರಿತರ ಕಾಲುಗಳು. 

ಒಂದು ಕಾಲದಲ್ಲಿ ಮಯನ್ಮಾರ್‌ನ ಪ್ರಜಾಪ್ರಭುತ್ವ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು ಆಂಗ್‌ ಸಾನ್‌ ಸೂಕಿ. ಈ ಸಂದರ್ಭದಲ್ಲಿ ಅವರಿಗೆ ನೂರಾರು ಪ್ರಶಸ್ತಿಗಳ ಸುರಿಮಳೆಯಾಗಿತ್ತು. ಮುಂದೆ 2015ರಲ್ಲಿ ಮಯನ್ಮಾರ್‌ನಲ್ಲಿ ಸೂಕಿ ಪಕ್ಷ ‘ಎನ್‌ಎಲ್‌ಡಿ’ ಅಧಿಕಾರಕ್ಕೆ ಬಂದು ಅವರ ಆಪ್ತರೇ ಅಧ್ಯಕ್ಷ ಹುದ್ದೆಗೇರಿದರು.

ಬೆನ್ನಿಗೇ ಆರಂಭವಾಗಿದ್ದು ರಖಿನೆ ರಾಜ್ಯದ ಮಿಲಿಟರಿ ಕಾರ್ಯಾಚರಣೆ. 2017ರ ಆಗಸ್ಟ್‌ನಿಂದ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಇಂದಿನವರೆಗೆ ಸುಮಾರು 7.2 ಲಕ್ಷ ಜನರು ದೇಶ ಬಿಟ್ಟು ಪಕ್ಕದ ಬಾಂಗ್ಲಾದೇಶದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆದುಕೊಂಡಿದ್ದಾರೆ. ರೋಹಿಂಗ್ಯಾ ಸಮುದಾಯದ ಹಲವರ ಮೇಲೆ ಅತ್ಯಾಚಾರ, ದೌರ್ಜನ್ಯಗಳನ್ನು ನಡೆಸಲಾಗಿದ್ದು ಸರಣಿ ಕೊಲೆಗಳೂ ನಡೆದು ಹೋಗಿವೆ.

ಮಯನ್ಮಾರ್‌ ಸರಕಾರದ ಈ ಕ್ರಮ ‘ಜನಾಂಗೀಯ ಶುದ್ಧೀಕರಣದ ಆಂದೋಲನ’ ಎಂದು ವಿಶ್ವ ಸಂಸ್ಥೆ ಕಿಡಿಕಾರಿತ್ತು. ಹೀಗಿದ್ದೂ ಶಾಂತಿ ದೂತೆ ಸೂಕಿಯ ಸರಕಾರ ವಿಶ್ವ ಸಂಸ್ಥೆಯ ಅಭಿಪ್ರಾಯ ಏಕಮುಖವಾಗಿದೆ ಎಂದಿತ್ತು. ಸೇನೆ ಶಸಸ್ತ್ರ ಬಂಡುಕೋರರ ಜತೆ ಮಾತ್ರ ಕಾದಾಟ ನಡೆಸುತ್ತಿದೆ ಎಂದು ಸಾಗ ಹಾಕಿತ್ತು.

ಈ ಹೇಳಿಕೆ ಹೊರ ಬಿದ್ದ ಬೆನ್ನಲ್ಲೇ 73 ವರ್ಷ ವಯಸ್ಸಿನ ಸೂಕಿಗೆ ನೀಡಿದ್ದ ಗೌರವಾರ್ಥ ಪೌರತ್ವವನ್ನು ಕೆನಡಾ ಹಿಂಪಡೆದಿತ್ತು. ಅಮೆರಿಕಾದ ಹೋಲೋಕಾಸ್ಟ್‌ ಮೆಮೋರಿಯಲ್‌ ಮ್ಯೂಸಿಯಂ ನೀಡಿದ್ದ ಅತ್ಯುನ್ನತ ಪ್ರಶಸ್ತಿಯನ್ನು ವಾಪಸ್‌ ಪಡೆದುಕೊಂಡಿತ್ತು. ಇದರ ಜತೆ ನೂರಾರು ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಥಳೀಯ ಮತ್ತು ಪ್ರಾದೇಶಿಕ ಸರಕಾರಗಳು ಆಕೆಗೆ ನೀಡಿದ್ದ ಪ್ರಶಸ್ತಿ, ಗೌರವಗಳನ್ನು ಹಿಂತೆಗೆದುಕೊಂಡಿದ್ದವು.

ಅಂದ ಹಾಗೆ ಆಂಗ್‌ ಸಾನ್‌ ಸೂಕಿಗೆ 1991ರಲ್ಲೇ ನೋಬೆಲ್‌ ಪ್ರಶಸ್ತಿ ನೀಡಲಾಗಿದ್ದು, ಈಗ ಇದನ್ನೂ ಹಿಂಪಡೆಯಬೇಕು ಎಂಬ ಕೂಗು ಕೇಳಿ ಬರುತ್ತಿದೆ. ನಮ್ಮಲ್ಲಿ ಪ್ರಶಸ್ತಿ ಮರಳಿಸುವ ರಾಜಕೀಯ 2014ರಲ್ಲಿ ಆರಂಭವಾಗಿತ್ತು. 2018ರಲ್ಲೀಗ ಪ್ರಶಸ್ತಿಯನ್ನು ಮರಳಿ ಪಡೆಯುವ ಸಾಂಸ್ಕೃತಿಕ ರಾಜಕೀಯ ಆರಂಭವಾಗಿದೆ. ಹೀಗಾಗಿ ರೊಹಿಂಗ್ಯಾ ನಿರಾಶ್ರಿತರು ಹಾಗೂ ಸೂಕಿ ಎಂಬ ‘ಶಾಂತಿ ದೂತೆ’ ಸುದ್ದಿಕೇಂದ್ರಕ್ಕೆ ಬಂದಿದ್ದಾರೆ.