samachara
www.samachara.com
ಕ್ಯಾನ್ಸರ್‌ ಎಂಬ ಮಾಫಿಯಾ; ಸರ್ಜರಿ ಎಂಬ ಕೂಪ; ಚಿಕಿತ್ಸೆ ಎಂಬ ನರಕ!
FEATURE STORY

ಕ್ಯಾನ್ಸರ್‌ ಎಂಬ ಮಾಫಿಯಾ; ಸರ್ಜರಿ ಎಂಬ ಕೂಪ; ಚಿಕಿತ್ಸೆ ಎಂಬ ನರಕ!

ನಮ್ಮಲ್ಲಿ ಕ್ಯಾನ್ಸರ್ ರೋಗದಿಂದ ಸಾಯುವವರಿಗಿಂತ ಹೆಚ್ಚಾಗಿ; ಅದರ ಚಿಕಿತ್ಸಾ ವಿಧಾನದಿಂದಲೇ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ.

ಮಂಜುಳಾ ಮಾಸ್ತಿಕಟ್ಟೆ

ಮಂಜುಳಾ ಮಾಸ್ತಿಕಟ್ಟೆ

ಕೇಂದ್ರ ಸಚಿವ ಅನಂತ್ ಕುಮಾರ್ ವಿಧಿವಶರಾಗಿದ್ದಾರೆ. ದಶಕಗಳ ಕಾಲ ಬಿಜೆಪಿ ಪಕ್ಷಕ್ಕಾಗಿ ದುಡಿದ ಜೀವ ಇನ್ನಿಲ್ಲ. 59 ಸಾಯುವ ವಯಸ್ಸಲ್ಲವಾದರೂ, ಕ್ಯಾನ್ಸರ್ ಎಂಬ ಕಾಯಿಲೆ ಮುಂದೆ ಅನಂತ್ ಕುಮಾರ್ ಹೋರಾಟ ಸೋತಿದೆ, ಮದ್ದಿಲ್ಲದ ರೋಗ ಗೆದ್ದಿದೆ.

ಅನಂತ್ ಕುಮಾರ್ ಅವರ ಸಾವು ನನ್ನನ್ನು ಎರಡು ವರ್ಷಗಳ ಹಿಂದೆ ಕರೆದೊಯ್ದಿದೆ. ಯಾರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಅಂತ ಅಂದುಕೊಂಡಿದ್ದೆನೋ, ಅವರು ಇಲ್ಲವಾಗಿ ಎರಡು ವರ್ಷ ಕಳೆದಿದೆ. ಜೀವನ ಯಥಾ ಪ್ರಕಾರ ಸಾಗಿದೆ. ಕ್ಯಾನ್ಸರ್‌ ಮುಂದೆ ಏನೂ ಮಾಡಲಾಗದ ಅವತ್ತಿನ ಅಸಹಾಯಕತೆ ಇವತ್ತಿಗೂ ಕಾಡುತ್ತಿದೆ.

ಅದು 2016 ಫೆಬ್ರವರಿ. ನನ್ನ ಅಪ್ಪನಿಗೆ ಅನ್ನ ನುಂಗುವಾಗ ನೋವು ಕಾಣಲಾರಂಭಿಸಿದ ದಿನಗಳು. ಮೊದಲು ಗ್ಯಾಸ್ಟ್ರಿಕ್ ಇರಬಹುದು ಅಂತ ಅಂದುಕೊಂಡರೂ, ತಡ ಮಾಡದೇ ಶಿವಮೊಗ್ಗದ ವೈದ್ಯರಲ್ಲಿಗೆ ಹೋದೆವು. ಎಂಡೋಸ್ಕೋಪಿ ಮಾಡಿದರು. ವೈದ್ಯರ ಮುಖದಲ್ಲಿನ ಭಾವನೆಗಳನ್ನು ಅಳೆಯಲು ನನಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಖಚಿತವಾಗಿ ಇದೇ ಎಂದು ತಿಳಿಯದಿದ್ದರೂ, ದೊಡ್ಡದೇನೋ ಸಮಸ್ಯೆ ಎನ್ನುವುದು ಅರ್ಥವಾಗಿತ್ತು.

ವಾರದೊಳಗೆ ಸಿಕ್ಕ ರಿಪೋರ್ಟ್ ಅಪ್ಪನ ಅನ್ನನಾಳ ಕ್ಯಾನ್ಸರ್‌ಗೆ ತುತ್ತಾಗಿದ್ದನ್ನು ಖಚಿತಪಡಿಸಿತು. ಕಾಯಿಲೆಯ ವ್ಯಾಪ್ತಿ ಮೂರನೇ ಹಂತದಲ್ಲಿತ್ತು. ಇಲ್ಲಿಯವರೆಗೆ ಕ್ಯಾನ್ಸರ್ ಬಗ್ಗೆ ಚೂರು-ಪಾರು ಕೇಳಿದ್ದು ಬಿಟ್ಟರೆ, ಹೆಚ್ಚೇನು ಗೊತ್ತಿರಲಿಲ್ಲ. ವೈದ್ಯರು ಸಮಾಧಾನವಾಗಿ ಎಲ್ಲವನ್ನು ವಿವರಿಸಿದರು. “ಹೆಚ್ಚು ಸಮಯ ಬೇಕು, ಹಣವೂ ಖರ್ಚಾಗುತ್ತದೆ. ಅದೃಷ್ಟವಿದ್ದರೆ ಒಂದಷ್ಟು ವರ್ಷ ಬದುಕುತ್ತಾರೆ. ತಡ ಮಾಡಬೇಡಿ,” ಅಂದರು. ಆಕಾಶವೇ ತಲೆ ಮೇಲೆ ಬಿದ್ದ ಅನುಭವ ನನಗೆ.

ಊರಿನಲ್ಲಿದ್ದವರು ಅಪ್ಪ ಅಮ್ಮ ಮಾತ್ರ. ಅವರಿಬ್ಬರದೇ ಪ್ರಪಂಚ. ಅಮ್ಮನ ಕೋಪ, ಅಪ್ಪನ ನಗೆ ಚಟಾಕಿ ನೆನೆಪಿಸಿಕೊಂಡು ಕಣ್ಣೀರು ಹಾಕಲು ರೂಂ ಸೇರಬೇಕಾಯಿತು. ಅಪ್ಪನಿಗೆ ಅಥವಾ ಅಮ್ಮನಿಗೆ ತಕ್ಷಣಕ್ಕೆ ಕಾಯಿಲೆ ಬಗ್ಗೆ ಹೇಳುವ ಪರಿಸ್ಥಿತಿ ಇರಲಿಲ್ಲ. ಪರಿಚಯದ ಕ್ಯಾನ್ಸರ್ ವೈದ್ಯರು ರಿಪೋರ್ಟ್ ನೋಡಿ, “ಅನ್ನ ಹೋಗಲು ಒಂದು ವ್ಯವಸ್ಥೆ ಮಾಡಿ. ಎಷ್ಟು ದಿನ ಬದುಕುತ್ತಾರೋ ಅಷ್ಟು ದಿನ ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಿ,” ಎಂದು ಅನುಭವದ ಸಲಹೆ ಇತ್ತರು.

ಜಗತ್ತು ಇಷ್ಟು ಬೆಳೆದಿರುವಾಗ ಕ್ಯಾನ್ಸರ್ ಗೆ ಚಿಕಿತ್ಸೆ ಇಲ್ಲವಾ? ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಳ್ಳುವ ಜಾಯಮಾನ ನಮ್ಮದಲ್ಲ. ಏನಾದರಾಗಲಿ ಮುಂದಿನ ಚಿಕಿತ್ಸೆ ಪಡೆದೇ ಸಿದ್ದ ಅಂತ ನಾನು ಅಪ್ಪ ಬೆಂಗಳೂರು ಬಸ್ಸು ಹಿಡಿದೆವು.

ಅಪ್ಪನಿಗೆ ಸಮಸ್ಯೆ ಏನೋ ದೊಡ್ಡದಿದೆ ಅನ್ನುವುದು ಮಾತ್ರ ಅರ್ಥವಾಗಿತ್ತು. ತಮ್ಮ ಇಲ್ಲಿಯವರೆಗಿನ 65 ವರ್ಷಗಳ ಜೀವನದಲ್ಲಿ ಅವರು ಎಂದೂ ಆಸ್ಪತ್ರೆ ನೋಡಿದವರಲ್ಲ. ಮಾತ್ರೆ ತೆಗೆದುಕೊಂಡವರಲ್ಲ. ಗದ್ದೆ-ತೋಟ, 12 ದನ, 4 ನಾಯಿ, 3 ಬೆಕ್ಕು, ದಿನಕ್ಕೆ ಒಂದಿಪ್ಪತ್ತು ಟೀ ಇವು ಅವರ ಪ್ರಪಂಚವಾಗಿತ್ತು.

ಇವೆಲ್ಲವನ್ನು ಬಿಟ್ಟು ನನ್ನ ಜೊತೆ ಬಸ್ಸು ಹತ್ತಿದ್ದರು. ಬೆಂಗಳೂರು ಬಂದ ನಂತರ ಕಿದ್ವಾಯಿ ಸಂಪರ್ಕಿಸುವ ಪ್ರಯತ್ನ ಮಾಡಿದೆವಾದರೂ, ಸಮಯದ ಭಯ ಕಾಡಿತು. ಹಣ ಹೋದರೆ ಹೋಯಿತು, ಖಾಸಗಿ ಆಸ್ಪತ್ರೆಗೆ ತೋರಿಸೋಣ ಎನ್ನುವ ನಿರ್ಧಾರಕ್ಕೆ ಬಂದೆವು. ಪದ್ಮಶ್ರೀ ಪುರಸ್ಕೃತ ಕ್ಯಾನ್ಸರ್‌ ತಜ್ಞರೊಬ್ಬರ ಬಳಿ ಹೋದೆವು. ಆವರೆಗಿನ ರಿಪೋರ್ಟ್ ನೋಡಿದ ಅವರು, “ಮೊದಲು ಕೀಮೋ ಕೊಡೋಣ, ನಂತರ ಸರ್ಜರಿ ಬೇಕಾಗುತ್ತದೆ. 4.5 ಲಕ್ಷ ಹಣ ಖರ್ಚಾಗತ್ತೆ,” ಎಂದರು. ಸರಿ ಅಂದೆವು.

ಅವರ ಸಹಾಯಕ ವೈದ್ಯರಲ್ಲಿಗೆ ಕಳಿಸಿದರು. ನಮ್ಮನ್ನು ಕುಳಿತುಕೊಳ್ಳಲು ತಿಳಿಸಿದ ಅವರು ಡಯೋಗ್ನೋಸ್ಟಿಕ್ ಸೆಂಟರ್‌ಗೆ ಫೋನ್ ಮಾಡಿದರು. ನಮ್ಮೆದುರೇ, “ಒಂದು ನಾಲ್ಕು ಆ ಕೇಸ್, ಒಂದೆರಡು ಈ ಕೇಸ್ ಕಳಿಸ್ತಿದೀನಿ. ಮಿಕ್ಕಿದ್ದು ಆ ಮೇಲೆ ಮಾತಾಡುವ,” ಎಂದರು. ನಂತರ ನಮ್ಮತ್ತ ತಿರುಗಿ ಒಂದು ಡಯೋಗ್ನೋಸ್ಟಿಕ್ ಅಡ್ರೆಸ್ ನೀಡಿ, “ಎಂಡೋಸ್ಕೋಪಿ ಮಾಡಿಸಿ ಬನ್ನಿ,” ಎಂದರು.

ಆತ ಎತ್ತಿನ ವ್ಯಾಪಾರ ಮಾಡಿದ ರೀತಿ ಮಾತನಾಡಿದ್ದರು. ಎಂಡೋಸ್ಕೋಪಿ ಎಂದರೆ ಅಪ್ಪನಿಗೆ ಭಯ. ಬಾಯಿಯ ಒಳಗೆ ಹೊಟ್ಟೆಯ ತನಕ ಹೋಗುವ ಉಪಕರಣ ಜೀವ ಹಿಂಡುತ್ತದೆ. ಅಪ್ಪ ಮತ್ತೊಮ್ಮೆ ಎಂಡೋಸ್ಕೋಪಿ ಮಾಡಿಸಿಕೊಳ್ಳಲು ಸುತಾರಾಂ ಒಪ್ಪಲಿಲ್ಲ. ಹಣದ ವಾಸನೆ ಹೆಚ್ಚು ಬಡಿದ ಹಿನ್ನೆಲೆಯಲ್ಲಿ ಮತ್ತೆ ಆ ಕಡೆ ತಿರುಗಿಯೂ ನೋಡಲಿಲ್ಲ.

ಪಿಎಂಎಸ್‌ಎಸ್‌ವೈ ಆಸ್ಪತ್ರೆ. 
ಪಿಎಂಎಸ್‌ಎಸ್‌ವೈ ಆಸ್ಪತ್ರೆ. 

ನಂತರ, ಪರಿಚಯದ ವೈದ್ಯರೊಬ್ಬರು ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾ ಆವರಣದಲ್ಲಿರುವ PMSSYಗೆ ಹೋಗಲು ತಿಳಿಸಿದರು. ದಿನವಿಡೀ ಕಾದ ನಂತರ ಅಂತೂ ತಜ್ಞ, ಖ್ಯಾತ ವೈದ್ಯ ಒಳಗೆ ಕರೆದ. ಅಪ್ಪನನ್ನು ಹೊರಗೆ ಕೂರಿಸಿ ನಾವು ಒಳಗೆ ಹೋದೆವು. ನೆಪ ಮಾತ್ರಕ್ಕೆ ರಿಪೋರ್ಟ್ ನೋಡಿದ ಆತ, ತನ್ನ ಅಸಿಸ್ಟೆಂಟ್ ಡಾಕ್ಟರ್ ಕರೆದು ಮುಂದಿನದನ್ನು ನೋಡಲು ತಿಳಿಸಿದ. ದೊಡ್ಡ ಆಸ್ಪತ್ರೆಯ ವಿಭಾಗವೊಂದರ ಹೆಚ್ಒಡಿ ಆತ. ನಮಗೆ ಆತನ ಅಭಿಪ್ರಾಯ ಬೇಕಿತ್ತು. ದುಃಖ, ಭಯದ ನಡುವೆಯೇ, “ಸರ್, ಪರಿಸ್ಥಿತಿ ಏನು?” ಅಂದೆ ನಿಧಾನಕ್ಕೆ. ಹೊರಗೆ ಅಪ್ಪ ಕೂತಿದ್ದಾರೆ ಅವರಿಗೆ ಕೇಳಬಾರದು ಎನ್ನುವ ಕಾಳಜಿ ನನ್ನದು. “ಏನಾಗಿದೆ ಅಂದರೆ ಕ್ಯಾನ್ಸರ್ ಬಂದಿದೆ. ಕೊನೆ ಸ್ಟೇಜ್,” ಅಂದ ಜೋರಾಗಿ. ಅವನ ಮಾತಿನಲ್ಲಿ ಯಾವ ಕರುಣೆಯೂ ಇರಲಿಲ್ಲ. ಆತ ವೈದ್ಯನಾಗೋಕೆ ನಾಲಾಯಕ್ ಅನ್ನಿಸಿತು.

ದಿನಕ್ಕೆ ನಾಲ್ಕು ಕಡೆ ಕನ್ಸಲ್ಟೆಂಟ್ ವೈದ್ಯನಾಗಿರುವ ಈತ, ಇಲ್ಲಿ ಹೆಚ್ಒಡಿ. ಕಣ್ಣೀರು ಹಾಕುತ್ತಲೇ ಹೊರಗೆ ಬಂದ ನನಗೆ ಅಪ್ಪನ ದೃಷ್ಟಿಯನ್ನು ಎದುರಿಸಲಾಗಲಿಲ್ಲ. ಆತನ ಸಹಾಯಕ ವೈದ್ಯರು ಎಲ್ಲವನ್ನು ನೋಡಿ, ಅಪ್ಪನನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದರು. ಬೇರೆ-ಬೇರೆ ರೀತಿಯ ಹಲವು ಪರೀಕ್ಷೆ ಮಾಡಿಸಬೇಕಿತ್ತು. ವಾರಗಟ್ಟಲೇ ವಿಕ್ಟೋರಿಯಾ ಸುತ್ತಿ, ಎಲ್ಲ ರಿಪೋರ್ಟ್ ಹಿಡಿದು ವೈದ್ಯರಲ್ಲಿಗೆ ಹೋದಾಗ, ‘ಮೊದಲು ಕೀಮೋ ಮಾಡೋಣ ನಂತರ ಸರ್ಜರಿ’ ಅಂದರು. ಅಪ್ಪನನ್ನು ಅಡ್ಮಿಟ್ ಮಾಡಿದೆವು.

ಅದೊಂತರ ಜೈಲು. ರೋಗಿಗಳು ಸಾಯುವ ಪರಿಸ್ಥಿತಿಯಲ್ಲಿದ್ದರೂ ಅಲ್ಲಿನ ಸೆಕ್ಯುರಿಟಿಗಳು ಒಳಗೆ ಬಿಡುವುದಿಲ್ಲ; ಲಂಚ ನೀಡದ ಹೊರತು.

ಅಪ್ಪ ಅಡ್ಮಿಟ್ ಆದ ದಿನವೇ, ಅದೇ ವಾರ್ಡ್ನಲ್ಲಿ ಒಂದು ಸಾವಾಯಿತು. ಡ್ಯೂಟಿಯಲ್ಲಿರೋ ನರ್ಸ್‌ಗಳದ್ದು ಬೇಜವಾಬ್ದಾರಿ ವರ್ತನೆ. ಗುರುವಾರ ಅಪ್ಪನಿಗೆ ಮತ್ತೊಮ್ಮೆ ಎಂಡೋಸ್ಕೋಪಿ ಮಾಡಿದರು. ನಂತರ ಮೂಗಿನ ಮೂಲಕ ಪೈಪೊಂದು ಜೋಡನೆಯಾಯಿತು. ಇನ್ನೂ ಚಿಕಿತ್ಸೆ ಆರಂಭವಾಗಿರಲಿಲ್ಲ. ಬಾಯಿಯ ಮೂಲಕ ಆಹಾರ ಹೋಗದೇ ಇದ್ದಾಗ ಅದನ್ನು ಹಾಕಬೇಕಿತ್ತು. ಇವರ್ಯಾಕೋ ಮೊದಲೇ ಹಾಕಿದ್ದರು. ಒಂದೇ ದಿನಕ್ಕೆ ಅಪ್ಪನಿಗೆ ಅದು ಕಿರಿ ಕಿರಿ ಎನಿಸಿತ್ತು. ನರ್ಸ್ ಗಳ ಬಳಿ ಕೇಳಿದರೆ ನಮಗೆ ಗೊತ್ತಿಲ್ಲ ವೈದ್ಯರಲ್ಲಿ ಕೇಳಿ ಅಂದರು.

ರೌಂಡ್ಸ್‌ಗೆ ಬಂದ ವೈದ್ಯರನ್ನು ಕೇಳಿದರೆ, “ಹೌದು ಅದರ ಅಗತ್ಯ ಈಗಿಲ್ಲ. ನಂತರ ಬೇಕಾಗುತ್ತದೆ. ಆದರೆ ನಾವು ತೆಗೆಯಲು ಬರುವುದಿಲ್ಲ. ನಮ್ಮ ಮೇಲಿನ ವೈದ್ಯರು ತಿಳಿಸಿದರೆ ಮಾತ್ರ ತೆಗೆಯುತ್ತೇವೆ. ನೀವು ಅವರ ಜೊತೆ ಮಾತಾಡಿ,” ಎಂದರು. ಆತ ನಮ್ಮ ಕೈಗೆ ಸಿಗಲಿಲ್ಲ. ಅಲ್ಲಿಗೆ ಶುಕ್ರವಾರ ಸಂಜೆಯಾಗಿತ್ತು. ಅಪ್ಪನ ನೋವು ಹೆಚ್ಚಾಗಿತ್ತು. ಮಾರನೇ ದಿನ ಶನಿವಾರ ಮತ್ತು ಭಾನುವಾರ. ಯಾರು ಸತ್ತರೂ ಈ ವೈದ್ಯ ರಜಾ ದಿನ ಆಸ್ಪತ್ರೆಗೆ ಕಾಲಿಡುವುದಿಲ್ಲ ಅಂತ ಗೊತ್ತಾಯಿತು. ಇಂತ ಪರಿಸ್ಥಿತಿಯಲ್ಲಿ ಅಪ್ಪನನ್ನು ಹಾಗೆಯೇ ಬಿಟ್ಟರೆ ಟ್ರೀಟ್ಮೆಂಟ್‌ಗೆ ಮೊದಲೇ ಸಾಯುವ ಪರಿಸ್ಥಿತಿ.

ಕೊನೆಗೂ ಆ ವೈದ್ಯ ಸಿಗಲಿಲ್ಲ. ಉಳಿದವರ್ಯಾರು ಪ್ರತಿಕ್ರಿಯಿಸಲಿಲ್ಲ. ಡಿಸ್ಚಾರ್ಜ್ ಮಾಡಲೂ ತಯಾರಿಲ್ಲ. ಕೊನೆಗೆ ಜಗಳವಾಡಿದ ನಂತರ, ಕರೆದುಕೊಂಡು ಹೋಗಲು ತಿಳಿಸಿದರು. ಅಪ್ಪನ ಮೂಗಿಗೆ ಹಾಕಿದ ಪೈಪ್ ನೀವೇ ತೆಗೆಯಿರಿ ಅಂದರು. ವೈದ್ಯರು ಯಾರು ಎಂದು ಕೇಳಿದ ನಂತರ ತೆಗೆಯಲು ಮುಂದಾದ ಯುವ ವೈದ್ಯೆಯೊಬ್ಬಳು ನನ್ನಪ್ಪನಿಗೆ, “ನಿನ್ನ ಕತೆ ಮುಗಿಯಿತು. ನಿನಗೆ ಕ್ಯಾನ್ಸರ್. ಒಂದೇ ತಿಂಗಳಷ್ಟೇ ನೀನು ಬದುಕುವುದು,” ಎಂದುಬಿಟ್ಟಳು. ಅಷ್ಟನ್ನು ಕೇಳಿಸಿಕೊಂಡ ಅಪ್ಪ, “ಸತ್ತರೆ ಸಾಯುತ್ತೀನಿ. ಇಲ್ಲಂತೂ ಸಾಯುವುದಿಲ್ಲ,” ಎಂದರು.

ಅಂತೂ ಮನೆಗೆ ಬಂದೆವು. ನಮ್ಮ ಬಳಿ ಹೆಚ್ಚು ಸಮಯವಿರಲಿಲ್ಲ. ಇಷ್ಟೆಲ್ಲ ಆದ ಮೇಲೆ ಅಪ್ಪ ಯಾವ ಟ್ರೀಟ್ಮೆಂಟೂ ನನಗೆ ಬೇಡ ಎಂದರು. ಒಳ್ಳೆ ವೈದ್ಯರಲ್ಲಿ ತೋರಿಸೋಣ ಎಂದಾಗ ನಮಗೆ ಸಿಕ್ಕ ಸಲಹೆ, ಬೆಂಗಳೂರಿನಲ್ಲಿ ಹೆಚ್ಚು ಹೆಸರು ಮಾಡಿರುವ ಮೆಡಿಕಲ್ ಆಂಕೋಲಜಿಸ್ಟ್ ಮತ್ತು ಸರ್ಜಿಕಲ್ ಆಂಕೋಲಜಿಸ್ಟ್ ಮತ್ತು ಅವರ ನೇತೃತ್ವದ ಆಸ್ಪತ್ರೆಗೆ ತೆರಳಲು ಸಲಹೆ ಬಂದಿತು. ಅದರ ಹೆಸರು ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ.

ನಮ್ಮ ಮನೆಯ ಹತ್ತಿರವೇ ಇದ್ದ ಆಸ್ಪತ್ರೆಯೊಂದಕ್ಕೆ ಈ ಮೆಡಿಕಲ್ ಆಂಕೋಲಜಿಸ್ಟ್ ಭೇಟಿ ನೀಡುತ್ತಿದ್ದರು. ಅವರಲ್ಲಿಗೆ ಹೋದಾಗ ಎಲ್ಲ ರಿಪೋರ್ಟ್ ನೋಡಿ, ಕೀಮೋ ಮಾಡೋಣ ಎಂದರು. “ಪರಿಸ್ಥಿತಿ ಏನು ಸರ್?” ಅಂದರೆ “ನೋಡೋಣ” ಎಂದರು. ಇಲ್ಲಿ ಹೇಳುವುದಕ್ಕೆ ಮಾತ್ರ ಅವಕಾಶ; ಕೇಳುವುದಕ್ಕಲ್ಲ. ಅವರು ಹೇಳಿದಂತೆ ನಾವು ಕೇಳಬೇಕಷ್ಟೆ. ಅಪ್ಪನಿಗೆ ಕೀಮೋ ಶುರುವಾಯಿತು. ಮೂರು ಸೈಕಲ್ ಕೀಮೋಥೆರಪಿ. ಅಪ್ಪ ಬಹಳ ಗಟ್ಟಿ ಮನುಷ್ಯ. ಊರಲ್ಲಿ ಕಾಡಿಗೆ ಹೋಗಿ ಮುಳ್ಳು ತಾಗಿದರೆ, ರಕ್ತ ಸೋರುತ್ತಿದ್ದರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಮೊದಲ ಕಿಮೋ ಮುಗಿಯಿತು. ಅಪ್ಪ ಹೆದರಲಿಲ್ಲ. ಬದುಕಬೇಕೆನ್ನುವ ಛಲ ಅವರಲ್ಲಿತ್ತು. ಎರಡನೇ ಕಿಮೋ ಮುಗಿಯಿತು. ಅಪ್ಪ ಕೊಂಚ ಬಳಲಿದ್ದರು. ಆದರೂ ಬದುಕುವ ಆಸೆ ಹೆಚ್ಚಿತ್ತು. ಇದರಲ್ಲೇ ಕಡಿಮೆ ಆದರೆ ಸಾಕು ಆಪರೇಷನ್ ಬೇಡ ಎನ್ನುತ್ತಿದ್ದರು. ಮೂರನೇ ಕೀಮೋ ಮುಗಿಸಿ ಸ್ಕ್ಯಾನ್ ಮಾಡಿದರೆ, ಅನ್ನನಾಳದ ಗಡ್ಡೆಯ ಗಾತ್ರ ಕೊಂಚ ತಗ್ಗಿತ್ತು. ಕ್ಯಾನ್ಸರ್ ಸೆಲ್‌ಗಳು ದೇಹದ ಬೇರೆ ಯಾವುದೇ ಭಾಗಕ್ಕೂ ವ್ಯಾಪಿಸಿರಲಿಲ್ಲ. ಅಪ್ಪನ ತಲೆಕೂದಲು ಹಾಗೇ ಇತ್ತು.

ರಿಪೋರ್ಟ್ ನೋಡಿದ ಮೆಡಿಕಲ್ ಆಂಕೋಲಜಿಸ್ಟ್ ನನ್ನ ಕೆಲಸ ಮುಗಿಯಿತು. ಇನ್ನು ಸರ್ಜರಿಯ ಅವಶ್ಯಕತೆ ಇದೆ ಎಂದರು. ನಾವು ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಹೋದೆವು. ಬೆಳಗ್ಗೆಯಿಂದ ಸಂಜೆಯವರೆಗೆ ಕಾದ ನಂತರ ಸರ್ಜಿಕಲ್ ಆಂಕೋಲಜಿಸ್ಟ್ ಸಿಕ್ಕರು. “ಸರ್ಜರಿ ಮಾಡಬೇಕು ಸ್ವಲ್ಪ ಹಣ ಖರ್ಚಾಗುತ್ತದೆ ಯಾವಾಗ ಹೇಳುತ್ತಿರೋ ಆಗ ಅಡ್ಮಿಟ್ ಆಗಿ,” ಅಂದರು. ನಾವು ಸರಿ ಎಂದೆವು. ನಂತರದ ಎರಡು ದಿನದಲ್ಲಿ ಅಪ್ಪ ಒಳರೋಗಿಯಾದರು.

ಆಸ್ಪತ್ರೆ ಬೆಡ್ ಮೇಲೆ ಕುಳಿತ ಅಪ್ಪ ಹೇಳಿದ್ದು; “ಮಗಳೇ ಆ ಗೌರ್ನಮೆಂಟ್ ಆಸ್ಪತ್ರೆಯಲ್ಲೇ ಇದ್ದಿದ್ದರೆ ಇಷ್ಟೊತ್ತಿಗೆ ನನ್ನ ಸಾಯಿಸಿರುತ್ತಿದ್ದರು. ಈ ಆಸ್ಪತ್ರೆ ಒಳ್ಳೆ ಲಾಡ್ಜ್ ಇದ್ದ ಹಾಗಿದೆ. ಎಷ್ಟು ದಿನ ಬೇಕಾದರೂ ಇಲ್ಲಿರುತ್ತೀನಿ,” ಅಂತಾ. ದಿನಕ್ಕೆ ನಾಲ್ಕು ಬಾರಿ ಕರೆ ಮಾಡುತ್ತಿದ್ದ ಅಮ್ಮನ ಬಳಿಯೂ ಅಪ್ಪನದು ಇದೇ ವಿಷಯ. ಎಲ್ಲವೂ ಸರಿ ಹೋಗುತ್ತದೆ ಎನ್ನುವ ಆಶಾಭಾವನೆ ನಮ್ಮದು. ಅಂತೂ ಸರ್ಜರಿಯ ದಿನ ಬಂತು. ಎಲ್ಲರ ಮುಖದಲ್ಲೂ ಭಯ, ಅಪ್ಪನೂ ಒಲ್ಲದ ಮನಸ್ಸಿನಿಂದ, ಬದುಕಲೇಬೇಕೆಂಬ ಛಲದಿಂದ ಆಪರೇಷನ್‌ಗೆ ಒಪ್ಪಿದ್ದರು.

ಸತತ ಏಳು ಗಂಟೆ ಆಪರೇಷನ್ ನಂತರ ನಮ್ಮನ್ನು ಕರೆದ ವೈದ್ಯರು, “ಆಪರೇಷನ್ ಯಶಸ್ವಿಯಾಗಿದೆ. ಐಸಿಯುಗೆ ಶಿಫ್ಟ್ ಮಾಡುತ್ತೇವೆ,” ಅಂದರು. ಅಂತೂ ಸಮಾಧಾನವಾಯಿತು. ಅಪ್ಪನಿಗೆ ಪ್ರಜ್ಞೆ ಬರಲು 24 ಗಂಟೆ ಹಿಡಿಯಿತು. ಎಲ್ಲಿ ನೋಡಿದರೂ ಪೈಪ್ ಅಳವಡಿಸಿದ್ದರು. ವಾರ್ಡ್‌ಗೆ ಶಿಫ್ಟ್ ಆದ ಮೇಲೆ ಅಪ್ಪನೇ ನಮಗೆ ಧೈರ್ಯ ತುಂಬಿದ್ದರು. “ಆಪರೇಷನ್ ಮುಗಿಯಿತು ಇನ್ನು ನನಗೇನೂ ಆಗೋಲ್ಲ. ನನ್ನ ಮೈ ಮೇಲೆ ವೈರಿಂಗ್ ಮಾಡಿದ್ದಾರೆ ನೋಡು,” ಅಂತಾ ತಮಾಷೆ ಮಾಡುತ್ತಿದ್ದರು.

ಡಿಸ್ಚಾರ್ಜ್ ಮಾಡುವಾಗ, “ಮತ್ತೆ ಕೀಮೋ ಮಾಡಬೇಕು. 21 ದಿನ ಬಿಟ್ಟು ಬನ್ನಿ,” ಅಂತ ತಿಳಿಸಿದರು. ಹೊಟ್ಟೆಗೆ ಪೈಪ್ ಅಳವಡಿಸಿದ್ದರು. ಮನೆಗೆ ಬಂದ 2-3 ದಿನಗಳಲ್ಲಿ ಅಪ್ಪ ಸುಧಾರಿಸಿದ್ದರು. ವಾರ ಕಳೆಯೋ ಹೊತ್ತಿಗೆ ಏನು ತಿಂದರೂ ವಾಂತಿಯಾಗಲು ಶುರುವಾಯಿತು. ಬಾಯಿಂದ ಆಹಾರ ಕೊಡುವುದನ್ನು ನಿಲ್ಲಿಸಿ ಪೈಪ್ ಮೂಲಕ ಲಿಕ್ವಿಡ್ ನೀಡಲು ಆರಂಭಿಸಿದೆವು. ವಾಂತಿ ಕಡಿಮೆ ಆಗಲಿಲ್ಲ. ಮತ್ತೆ ಆಸ್ಪತ್ರೆಗೆ ಬಂದೆವು. ಮತ್ತೆ ವೈದ್ಯರು 3-4 ದಿನ ಚಿಕಿತ್ಸೆ ನೀಡಿ ಕಳಿಸಿದರು. ಮತ್ತೆ ವಾಂತಿ ಶುರುವಾಯಿತು, ಮತ್ತೆ ಹೋದೆವು. ಅಪ್ಪ ಕೃಶವಾಗುತ್ತಾ ಹೋದರು.

ಮತ್ತೆ ಆಸ್ಪತ್ರೆಗೆ ತೆರಳಿದೆವು. ಅಪ್ಪನಿಗೆ ಸಾಕು ಸಾಕಾಗಿತ್ತು. “ನನ್ನ ಕೈಲಿ ಆಗೋಲ್ಲ. ಯಾವತ್ತಿದ್ದರೂ ಸಾಯಲೇಬೇಕು. ನಾನು ಉಳಿಯೋಲ್ಲ,” ಎನ್ನಲು ಶುರು ಮಾಡಿದರು. ಮೂರನೇ ಬಾರಿ ಅಡ್ಮಿಟ್ ಮಾಡಿದಾಗ ವೈದ್ಯರು ಸಿಟಿ ಮಾಡಿದರು. ಅಪ್ಪನಿಗೆ ನೋವು ಶುರುವಾಗಿತ್ತು. ಕೊನೆಗೆ ನಮ್ಮನ್ನು ಕರೆದ ವೈದ್ಯರು, “ಕ್ಯಾನ್ಸರ್ ಬೆನ್ನು ಮೂಳೆ, ಲಿವರ್‌ಗೆ ವ್ಯಾಪಿಸಿದೆ. ಹೆಚ್ಚೆಂದರೆ ಆರು ತಿಂಗಳು ಬದುಕಬಹುದು,” ಎಂದರು. ಅಷ್ಟೊತ್ತಿಗಾಗಲೇ ಮಾರ್ಫಿನ್ ನೀಡಲು ಆರಂಭಿಸಿದ್ದರು.

ಅಪ್ಪನಲ್ಲಿ ಚೇತರಿಕೆ ಕಾಣಲಿಲ್ಲ. ವೈದ್ಯರು ಕೈ ಚೆಲ್ಲಿದ ನಂತರ, ಸಾಗರದ ನಾಟಿ ವೈದ್ಯರ ಔಷಧಿ ನೀಡಲು ಆರಂಭಿಸಿದೆವು. ಈ ಮಧ್ಯೆ ಅಪ್ಪನಿಗೆ ಮೋಷನ್ ಆಗುವುದು ನಿಂತಿತು. ನೀರು ಕುಡಿಸಿದರೂ ವಾಂತಿ. ಏನೂ ತಿನ್ನದೇ ಇದ್ದರೂ ವಾಂತಿ.

ಒಂದಿನ ವಾಂತಿ, ನೋವು ತಾಳಲಾಗದೇ ಮೊದಲು ಅಪ್ಪನಿಗೆ ಕಿಮೋ ಕೊಡಿಸಿದ್ದ ಮನೆ ಹತ್ತಿರದ ವೈದ್ಯರಲ್ಲಿಗೆ ಹೋದೆವು. ಅಡ್ಮಿಟ್ ಮಾಡಿಕೊಂಡ ವೈದ್ಯರಿಗೆ ಡ್ರಿಪ್ ಹಾಕಲು ನರ ಹುಡುಕೋದೇ ಕಷ್ಟವಾಗಿತ್ತು. ಒಂದಿಡೀ ದಿನ ಕಳೆದ ನಂತರವೂ ಕೊಂಚವೂ ಚೇತರಿಕೆ ಆಗಲಿಲ್ಲ. ಸಾವು ಗೌರವಯುತವಾಗಿರಬೇಕು, ಸಾವಿನಲ್ಲಿ ನೆಮ್ಮದಿ ಇರಬೇಕು ಎಂದು ಕೊನೆಗಾಲದ ಕ್ಯಾನ್ಸರ್ ಪೇಶೆಂಟ್‌ಗಳನ್ನು ನೋಡಿಕೊಳ್ಳುತ್ತಿದ್ದ ಕರುಣಾಶ್ರಯಕ್ಕೆ ಅಪ್ಪನನ್ನು ಕರೆದುಕೊಂಡು ಹೋಗಲು ತಿಳಿಸಿದರು. ಬೇರೆ ಯಾವ ದಾರಿಯೂ ನಮ್ಮ ಮುಂದೆ ಇರಲಿಲ್ಲ. ಇಷ್ಟು ದಿನ ಚಿಕಿತ್ಸೆ ನೀಡಿದ್ದ ವೈದ್ಯರು ಕೊನೆಗೆ ಏನೂ ಹೇಳಲಿಲ್ಲ.

ಕರುಣಾಶ್ರಯಕ್ಕೆ ಕರೆದುಕೊಂಡ ಹೋದ ರಾತ್ರಿಯೇ ಅಪ್ಪ ನಮ್ಮನ್ನು ಬಿಟ್ಟು ಹೋದರು. ನಿನ್ನ ಗಂಡನನ್ನು ಹುಷಾರು ಮಾಡಿ ಕರೆದುಕೊಂಡು ಬರುತ್ತೀನಿ ಎಂದು ಅಮ್ಮನಿಗೆ ನೀಡಿದ್ದ ಮಾತು ತಪ್ಪಿದ್ದೆ. ಅಪ್ಪನ ಕಳೇಬರಹ ಹೊತ್ತು ಊರಿಗೆ ಹೋಗಿದ್ದೆವು. ಇವೆಲ್ಲವೂ ಕಳೆದು 2 ವರ್ಷಗಳಾಗಿದೆ. ಇದಾದ ನಂತರ ನನ್ನ ಸುತ್ತ-ಮುತ್ತ ನೂರಾರು ಕ್ಯಾನ್ಸರ್ ಸಾವುಗಳನ್ನು ನೋಡಿದೆ.

ಕ್ಯಾನ್ಸರ್‌ ಕುರಿತು ಬಂದಿರುವ ಪುಸ್ತಕಗಳು- ಆಸಕ್ತರ ಗಮನಕ್ಕೆ...
ಕ್ಯಾನ್ಸರ್‌ ಕುರಿತು ಬಂದಿರುವ ಪುಸ್ತಕಗಳು- ಆಸಕ್ತರ ಗಮನಕ್ಕೆ...

ಪ್ರತಿ ವರ್ಷ ಕ್ಯಾನ್ಸರ್ ಸಾವುಗಳು ಹೆಚ್ಚಾಗುತ್ತಲೇ ಇದೆ. ಅಂಕಿ-ಅಂಶಗಳಿಗೆ ನಾನು ಹೋಗುವುದಿಲ್ಲ. ಅಪ್ಪನಿಗೆ ಕ್ಯಾನ್ಸರ್ ಬಂದಾಗಿನಿಂದ ಕ್ಯಾನ್ಸರ್ ಬಗೆಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಕೆಲವು ವೈದ್ಯರು ಕ್ಯಾನ್ಸರ್ ಎಂಬುದೇ ದೊಡ್ಡ ಮಾಫಿಯಾ ಎನ್ನುತ್ತಾರೆ. ಕ್ಯಾನ್ಸರ್‌ ಎಂಬುದು ಹೇಗೆ ಇಂಡಸ್ಟ್ರಿಯಾಗಿದೆ ಎಂಬ ಕುರಿತು ಕೆಲವು ಪುಸ್ತಕಗಳು ಬಂದಿವೆ. ನಾಟಿ ವೈದ್ಯ ಪದ್ಧತಿಯಿಂದ ಗುಣಪಡಿಸಬಹುದು ಎಂತಲೂ ಕೆಲವರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

ನಾನು ವೈದ್ಯೆಯಲ್ಲ. ಆದರೂ ನನ್ನ 2 ವರ್ಷಗಳ ಸೀಮಿತ ಅನುಭವದ ಮೂಲಕ ಹೇಳುವುದಾದರೆ, ನಮ್ಮಲ್ಲಿ ಕ್ಯಾನ್ಸರ್ ರೋಗದಿಂದ ಸಾಯುವವರಿಗಿಂತ ಹೆಚ್ಚಾಗಿ; ಅದರ ಚಿಕಿತ್ಸಾ ವಿಧಾನದಿಂದಲೇ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಕೀಮೋಥೆರಪಿ ಮನುಷ್ಯನನ್ನು ನಿಧಾನಕ್ಕೆ ಕೊಲ್ಲುತ್ತಾ ಹೋಗುತ್ತದೆ. ಸರ್ಜರಿಗಳು ಸಕ್ಸಸ್‌ ಆಗುವುದು ಎಲ್ಲೋ ಸಾವಿರಕ್ಕೆ ಒಂದು ಇರಬಹುದು. ಒಬ್ಬರು ಬದುಕಿದ್ದನ್ನು ತೋರಿಸಿ ಉಳಿದ 999 ಸರ್ಜರಿಗಳು ನಡೆಯುತ್ತಿವೆ ಅಷ್ಟೆ.

ಅಪ್ಪನಿಗೆ ಯಾವ ಕಾರಣಕ್ಕೆ ಆಪರೇಷನ್ ಮಾಡಿದರು ಎನ್ನುವುದು ಇವತ್ತಿಗೂ ಅರ್ಥವಾಗಲಿಲ್ಲ. ಸರ್ಜರಿ ಆದ ನಂತರವೇ ಅವರ ಆರೋಗ್ಯ ಬಿಗಾಡಾಯಿಸಿದ್ದು. ಅವರನ್ನು ಅವರ ಪಾಡಿಗೆ ಬಿಟ್ಟಿದ್ದರೆ ಕೊಂಚ ಸಮಯವಾದರೂ ನಮ್ಮೊಂದಿಗೆ ಇರುತ್ತಿದ್ದರೇನೋ? ಎಲ್ಲ ಕ್ಯಾನ್ಸರ್ ಪೇಶೆಂಟ್‌ಗಳ ಮೇಲೆ ನಡೆಯುತ್ತಿರುವುದು ಪ್ರಯೋಗ ಅಷ್ಟೆ. ಅದು ಸಕ್ಸಸ್ ಆದರೂ ಆಗಬಹುದು, ಫೆಲ್ಯೂರ್ ಆದರೂ ಆಗಬಹುದು. ಈ ಟ್ರೈಯಲ್ ಎಂಡ್ ಎರರ್‌ಗೆ ಬಲಿಗಳು ಆಗುತ್ತಿವೆ.

ಅನಂತ್ ಕುಮಾರ್ ಇಲ್ಲದ ಈ ಹೊತ್ತಿನಲ್ಲಿ ಕ್ಯಾನ್ಸರ್ ಕುರಿತು ಅಭಿಪ್ರಾಯಗಳು ಹೆಚ್ಚು ಚರ್ಚೆಯಾಗಬೇಕಿದೆ. ನಿನ್ನೆ ರಾತ್ರಿ ಎನ್‌ಡಿಟಿವಿ ಇಂಡಿಯಾದ ಪ್ರೈಂ ಟೈಮ್‌ನಲ್ಲಿ ರವೀಶ್ ಕುಮಾರ್ ಅನಂತ್ ಕುಮಾರ್ ಸಾವಿನ ಹಿನ್ನೆಲೆಯಲ್ಲಿ ಕ್ಯಾನ್ಸರ್‌ ಬಗೆಗೆ ತಮ್ಮ ಸಮಯ ಮೀಸಲಿಟ್ಟರು. ನಮ್ಮ ಸುದ್ದಿ ವಾಹಿನಿಗಳು ಕಳೆದ 24 ಗಂಟೆಗೂ ಹೆಚ್ಚು ಸಮಯ ಸಾವಿಗೆ ಮೀಸಲಿಟ್ಟಿವೆಯಾದರೂ, ಅದರಲ್ಲಿ ಕಣ್ಣೀರು ಜಾಸ್ತಿ, ಕಳಕಳಿ ನಾಸ್ತಿ ಅನ್ನಿಸುತ್ತಿದೆ. ಕೇಂದ್ರ ಸಚಿವರ ಸಾವಿನ ಹಿನ್ನೆಲೆಯಲ್ಲಾದರೂ ಕ್ಯಾನ್ಸರ್‌ ಬಗೆಗೆ ಜಾಗೃತಿ ಮೂಡಿಸುವ, ಈ ಕುರಿತು ಸಾಮಾಜಿಕ ಅರಿವು ಮೂಡಿಸುವ ಅವಕಾಶವನ್ನು ಇವು ಕೈಚೆಲ್ಲಿದವು.

Join Samachara Official. CLICK HERE