samachara
www.samachara.com
ಸೊಮಾಲಿಯಾದಿಂದ ಅಮೆರಿಕಾ ಸಂಸತ್‌ವರೆಗೆ: ಯಾರೀಕೆ ಮಧ್ಯಂತರ ಚುನಾವಣೆಯಲ್ಲಿ ಧೂಳೆಬ್ಬಿಸಿದ ಬುರ್ಖಾಧಾರಿ?
FEATURE STORY

ಸೊಮಾಲಿಯಾದಿಂದ ಅಮೆರಿಕಾ ಸಂಸತ್‌ವರೆಗೆ: ಯಾರೀಕೆ ಮಧ್ಯಂತರ ಚುನಾವಣೆಯಲ್ಲಿ ಧೂಳೆಬ್ಬಿಸಿದ ಬುರ್ಖಾಧಾರಿ?

ಹೇಳಿ ಕೇಳಿ ಮುಸ್ಲಿಂ. ಜತೆಗೆ ಶ್ವೇತ ವರ್ಣಿಯಳಲ್ಲ. ನಿರಾಶ್ರಿತೆ ಬೇರೆ. ಇನ್ನೊಂದೆಡೆ ಮಹಿಳೆ. ಚುನಾವಣೆಗೆ ಸ್ಪರ್ಧಿಸಿದ ಆಕೆಯ ಮುಂದೆ ಹಲವು ಸವಾಲುಗಳಿದ್ದವು...

ಆಕೆ ಹುಟ್ಟಿದ್ದು ಅಕ್ಟೋಬರ್‌ 4, 1981ರಲ್ಲಿ; ಸೊಮಾಲಿಯಾದಲ್ಲಿ. ಹುಟ್ಟಿ ಕೆಲವೇ ವರ್ಷಗಳಿಗೆ ತಾಯಿಯನ್ನು ಕಳೆದುಕೊಂಡ ಆಕೆ, ಮುಂದೆ 1991ರಲ್ಲಿ ಸೊಮಾಲಿಯಾದಲ್ಲಿ ನಾಗರೀಕ ಯುದ್ಧ ಆರಂಭವಾದಾಗ ಇದ್ದ ನೆಲವನ್ನೂ ಕಳೆದುಕೊಳ್ಳಬೇಕಾಯಿತು. 7 ಜನ ಮಕ್ಕಳ ತುಂಬು ಕುಟುಂಬವನ್ನು ಕಟ್ಟಿಕೊಂಡ ಆಕೆಯ ತಂದೆ ಅಮೆರಿಕಾಕ್ಕೆ ನಿರಾಶ್ರಿತರಾಗಿ ವಲಸೆ ಬಂದರು. ಆಗೆ ಆಕೆಗೆ 14 ವರ್ಷ ವಯಸ್ಸು; ಇಸವಿ 1995.

ಬಂದವರೇ ವರ್ಜೀನಿಯಾದ ಅರ್ಲಿಂಗ್ಟನ್‌ನಲ್ಲಿ ನೆಲೆ ನಿಂತರು. ಅಲ್ಲಿಯೇ ಆಕೆಗೆ ಇಂಗ್ಲೀಷ್‌ ಪಾಠ ಆರಂಭವಾಯಿತು. ಚುರುಕಾಗಿದ್ದ ಹುಡುಗಿ ಮೂರೇ ತಿಂಗಳಿಗೆ ಮಾತೃಭಾಷೆಯಲ್ಲದ ಇಂಗ್ಲೀಷ್‌ ಮೇಲೆ ಹಿಡಿತ ಸಾಧಿಸಿದಳು. ಮುಂದೆ ಈಕೆ ರಾಜಕೀಯ ಶಾಸ್ತ್ರ ಮತ್ತು ಅಂತರಾಷ್ಟ್ರೀಯ ಅಭಿವೃದ್ಧಿ ವಿಷಯದಲ್ಲಿ ಪದವಿ ಪಡೆದುಕೊಂಡಳು.

ಹೀಗಿದ್ದಾಕೆ ಅದೊಂದು ದಿನ ಸಕ್ರಿಯ ರಾಜಕಾರಣಕ್ಕೆ ಧುಮುಕುವ ನಿರ್ಧಾರಕ್ಕೆ ಬಂದಳು. ಟೆಮಾಕ್ರಾಟಿಕ್‌ ಪಾರ್ಟಿ ಆಕೆಯ ಆಯ್ಕೆಯಾಗಿತ್ತು. ರಾಜಕೀಯವನ್ನು ತನ್ನ ಕಾರ್ಯಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡ ಆಕೆಯ ಹೆಸರು ಇಲ್ಹಾನ್‌ ಓಮರ್‌.

ಹೇಳಿ ಕೇಳಿ ಮುಸ್ಲಿಂ. 9/11 ದಾಳಿಯ ನಂತರ ಮುಸ್ಲಿಂ ಧರ್ಮೀಯರ ಬಗ್ಗೆ ಅಮೆರಿಕನ್ನರಲ್ಲಿ ಬೇಡವೆಂದರೂ ಒಂದಷ್ಟು ಪೂರ್ವಾಗ್ರಹಗಳು ಅದಾಗಲೇ ಬೆಳೆದು ಬಿಟ್ಟಿತ್ತು. ಜತೆಗೆ ಶ್ವೇತ ವರ್ಣಿಯಳಲ್ಲ. ನಿರಾಶ್ರಿತೆ ಬೇರೆ. ಇನ್ನೊಂದೆಡೆ ಮಹಿಳೆಯೂ ಹೌದು. ಆಕೆಯ ಮುಂದೆ ಹಲವು ಸವಾಲುಗಳಿದ್ದವು.

ಸೊಮಾಲಿಯಾದಿಂದ ಅಮೆರಿಕಾ ಸಂಸತ್‌ವರೆಗೆ: ಯಾರೀಕೆ ಮಧ್ಯಂತರ ಚುನಾವಣೆಯಲ್ಲಿ ಧೂಳೆಬ್ಬಿಸಿದ ಬುರ್ಖಾಧಾರಿ?

2013ರ ‘ಮಿನಿಯಪೊಲೀಸ್‌ ಸಿಟಿ ಕೌನ್ಸಿಲ್‌’ ಚುನಾವಣೆಯಲ್ಲಿ ಆಂಡ್ರ್ಯೂ ಜಾನ್ಸನ್‌ ಪ್ರಚಾರದ ಉಸ್ತುವಾರಿ ಹೊತ್ತುಕೊಂಡರು ಓಮರ್‌. ಈ ಚುನಾವಣೆಯಲ್ಲಿ ಜಾನ್ಸನ್‌ ಗೆಲುವು ದಾಖಲಿಸುವಲ್ಲಿ ಆಕೆಯ ಪಾತ್ರ ಮಹತ್ವದ್ದಾಗಿತ್ತು. ಮುಂದೆ ಚುನಾವಣೆ ಗೆದ್ದ ಜಾನ್ಸನ್‌ ಜತೆಯೇ ಅಮೆರಿಕಾ ಸರಕಾರದ ಪ್ರತಿನಿಧಿಯಾಗಿ ಕೆಲಸ ಮಾಡಲು ಆಕೆ ನಿರ್ಧರಿಸಿದರು. ಈ ವೇಳೆ 2015ರಲ್ಲಿ ಐವರು ಓಮರ್‌ ಮೇಲೆ ಹಲ್ಲೆ ನಡೆಸಿದರು. ಈ ಆಘಾತ, ಗಾಯದಿಂದ ಚೇತರಿಸಿಕೊಂಳ್ಳಲು ಸ್ವಲ್ಪ ಸಮಯವೇ ಹಿಡಿಯಿತು. ನಂತರ ಕಹಿ ಘಟನೆಗಳಿಂದ ಹೊರ ಬಂದು 2018ರ ಮಧ್ಯಂತರ ಚುನಾವಣೆಯನ್ನು ತಮ್ಮ ಗುರಿಯಾಗಿ ಹಾಕಿಕೊಂಡರು ಓಮರ್‌. ಅವತ್ತಿಗೆ ಬುರ್ಖಾ ಹಾಕಿಕೊಂಡು ಮುಸ್ಲಿಂ ಮಹಿಳೆಯೊಬ್ಬರು ಅಮೆರಿಕಾದ ಸಂಸತ್‌ನೊಳಕ್ಕೆ ಪ್ರವೇಶಿಸಿದ ಇತಿಹಾಸವೇ ಇರಲಿಲ್ಲ. ಹೊಸ ಚರಿತ್ರೆಯನ್ನು ಸ್ವತಃ ಓಮರ್‌ ಬರೆಯಬೇಕಾಗಿತ್ತು.

2016ರಲ್ಲಿ ಡೆಮಾಕ್ರಾಟಿಕ್‌ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಗೆದ್ದ ಆಕೆ ಮಿನೊಸೊಟಾ ರಾಜ್ಯದ ಜನಪ್ರತಿನಿಧಿ ಸಭೆಗೆ ಆಯ್ಕೆಯಾದರು. ನಂತರ ಆಕೆ ಅಮೆರಿಕಾ ಸಂಸತ್‌ನ ಮಧ್ಯಂತರ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ತೆಗೆದುಕೊಂಡರು. ಮೊದಲೇ ಹೇಳಿದಂತೆ ಅಸಹಜ ಇತಿಹಾಸವನ್ನು ಬೆನ್ನಿಗಿಟ್ಟುಕೊಂಡು ಅಮೆರಿಕಾದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದೇ ದೊಡ್ಡ ವಿಷಯ. ಅಂಥಹದ್ದರಲ್ಲಿ ಇಲ್ಹಾನ್‌ ಓಮರ್‌ ಬುಧವರ ಹೊರಬಿದ್ದ ಫಲಿತಾಂಶದಲ್ಲಿ ಜಯಶಾಲಿಯಾಗಿದ್ದಾರೆ. ಈ ಮೂಲಕ ಅಮೆರಿಕಾ ಸಂಸತ್‌ನ ಕೆಳಮನೆ ‘ಹೌಸ್‌ ಆಫ್‌ ರೆಪ್ರೆಸೆಂಟೇಟಿವ್ಸ್‌’ ಪ್ರವೇಶಿಸಿದ್ದಾರೆ.

ಚುನಾವಣೆ ಗೆದ್ದ ತರುವಾಯ ಅವರು ಮಾಡಿದ ಭಾಷಣವೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. “ಹಲವು ಪ್ರಥಮಗಳನ್ನು ಬೆನ್ನಿಗಿಟ್ಟುಕೊಂಡು ನಾನಿವತ್ತು ಕಾಂಗ್ರೆಸ್‌ ಮಹಿಳೆಯಾಗಿ ನಿಮ್ಮ ಮುಂದೆ ನಿಂತಿದ್ದೇನೆ,” ಎಂದು ಬುಧವಾರ ಆಕೆ ಮಾತು ಆರಂಭಿಸುತ್ತಿದ್ದಂತೆ ಕರತಾಡನ ಮುಗಿಲು ಮುಟ್ಟಿತ್ತು. “ಕಾಂಗ್ರೆಸ್‌ನಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕಪ್ಪು ಬಣ್ಣದ ಮೊದಲ ಮಹಿಳೆ ನಾನು. ಹಿಜಾಬ್ ಧರಿಸಿದ ಮೊದಲ ಮಹಿಳೆಯೂ ಹೌದು. ಕಾಂಗ್ರೆಸಿಗೆ ಚುನಾಯಿತರಾದ ಮೊದಲ ನಿರಾಶ್ರಿತೆ ಎಂಬ ಹೆಗ್ಗಳಿಕೆ ನನ್ನದು. ಮತ್ತು ಕಾಂಗ್ರೆಸ್‌ಗೆ ಚುನಾಯಿತರಾದ ಮೊದಲ ಮುಸ್ಲಿಂ ಮಹಿಳೆಯರಲ್ಲಿ ನಾನೂ ಒಬ್ಬಳು,” ಎಂದಾಗ ಸಭೆ ಸ್ತಭ್ದವಾಗಿತ್ತು.

“ಜನರು ಭಯ, ವಿಭಜನೆಯ ಮತ್ತು ವಿನಾಶದ ರಾಜಕೀಯವನ್ನು ಮಾರುವ ಹೊತ್ತಲ್ಲಿ ನಾವು ಭರವಸೆಯ ಬಗ್ಗೆ ಮಾತನಾಡುತ್ತೇವೆ,” ಎಂದಾಗ ಮತ್ತೆ ಕಿವಿಗಡಚಿಕ್ಕುವ ಚಪ್ಪಾಳೆ ಕೇಳಿ ಬಂತು. ಮುಂದುವರಿದು ಮಾತನಾಡಿದ ಆಕೆ, “ನಾವು ಸಂತೋಷದ ರಾಜಕೀಯದ ಕುರಿತು ಮಾತನಾಡುತ್ತಿದ್ದೇವೆ,” ಎಂದು ಮಾತು ಮುಗಿಸಿದರು.

ಜನಪ್ರತಿನಿಧಿ ಸಭೆಗೆ ಆಯ್ಕೆಯಾದ ಪ್ಯಾಲೆಸ್ಟೀನ್‌ ಸಂಜಾತೆ ರಶೀದಾ ತ್ಲೈಬ್‌
ಜನಪ್ರತಿನಿಧಿ ಸಭೆಗೆ ಆಯ್ಕೆಯಾದ ಪ್ಯಾಲೆಸ್ಟೀನ್‌ ಸಂಜಾತೆ ರಶೀದಾ ತ್ಲೈಬ್‌
/ಸಿಎನ್‌ಬಿಸಿ

ಇವರ ಜತೆ ಜತೆಗೆ ಮತ್ತೋರ್ವ ಮುಸ್ಲಿಂ ಮಹಿಳೆಯೂ ಇದೇ ಚುನಾವಣೆಯಲ್ಲಿ ಅಮೆರಿಕಾ ಸಂಸತ್‌ ಪ್ರವೇಶಿಸಿದ್ದಾರೆ. ಆಕೆಯದ್ದೂ ಇಂಥಹದ್ದೇ ಹಿನ್ನೆಲೆ ಎನ್ನುವುದು ಇನ್ನೊಂದು ವಿಶೇಷ. ಪ್ಯಾಲೆಸ್ತೀನ್‌ ವಲಸಿಗ ದಂಪತಿಯ ಪುತ್ರಿಯಾಗಿರುವ ರಶೀದಾ ತ್ಲೈಬ್‌ ಮಿಚಿಗನ್‌ ರಾಜ್ಯದಿಂದ ಕೆಳಮನೆ ಪ್ರವೇಶಿಸಿದ್ದಾರೆ. ಈ ಮೂಲಕ ಮುಸ್ಲಿಂ ಮಹಿಳೆಯರಿಬ್ಬರು ಏಕಕಾಲಕ್ಕೆ ಅಮೆರಿಕಾ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

Join Samachara Official. CLICK HERE