samachara
www.samachara.com
ಕೆನಡಾದ ಗಾಂಜಾ ಸಕ್ರಮ: 15 ದಿನಗಳಿಗೇ ಬೇಡಿಕೆ ಪೂರೈಸಲಾಗದೆ ಬಾಗಿಲು ಮುಚ್ಚಿದ ಅಂಗಡಿಗಳು!
FEATURE STORY

ಕೆನಡಾದ ಗಾಂಜಾ ಸಕ್ರಮ: 15 ದಿನಗಳಿಗೇ ಬೇಡಿಕೆ ಪೂರೈಸಲಾಗದೆ ಬಾಗಿಲು ಮುಚ್ಚಿದ ಅಂಗಡಿಗಳು!

ಅಕ್ಟೋಬರ್‌ 17ರಂದು ಕೆನಡಾ ಗಾಂಜಾವನ್ನು ಕಾನೂನಾತ್ಮಕಗೊಳಿಸಿತ್ತು. ಆದರೆ ಇನ್ನೂ ಸಕ್ರಮಗೊಳಿಸಿ ಎರಡು ವಾರ ಕಳೆದಿದೆ ಅಷ್ಟೇ. ಅಷ್ಟರಲ್ಲಾಗಲೇ ಎಲ್ಲಾ ಅಂಗಡಿಗಳು ಮತ್ತು ಡಿಜಿಟಲ್‌ ಮಾರುಕಟ್ಟೆಗಳು ಗ್ರಾಹಕರ ಬೇಡಿಕೆ ಪೂರೈಸುವಲ್ಲಿ ಸೋತಿವೆ.

ಕಳೆದ ತಿಂಗಳು ಟ್ರೆವೊರ್‌ ಟೊಬಿನ್‌ ಕೆನಡಾದಲ್ಲಿ ಮೊದಲ ಸಕ್ರಮ ಗಾಂಜಾ ಮಳಿಗೆಯನ್ನು ಆರಂಭಿಸಿದರು. ಹೀಗೊಂದು ಅಂಗಡಿ ಆರಂಭಿಸುವಾಗ ದೇಶದಲ್ಲಿ ನಡೆಯುತ್ತಿರುವ ಪ್ರಯೋಗವೊಂದರ ಸಣ್ಣ ಭಾಗ ನಾನು ಎಂದು ಅವರು ಅಂದುಕೊಂಡಿದ್ದರು. ಜತೆಗೆ ಸ್ವಲ್ಪ ಲಾಭವನ್ನೂ ಜೇಬಿಗಿಳಿಸಿಕೊಳ್ಳಬಹುದು ಎಂಬ ಆಲೋಚನೆಯೂ ಅವರಲ್ಲಿತ್ತು.

ಇದಾಗಿ ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಟೊಬಿನ್‌ ಅಂಗಡಿಗೆ ಭರಪೂರ ಜನ ಹರಿದು ಬಂದಿದ್ದಾರೆ. ಪರಿಣಾಮ ತಿಂಗಳಾಂತ್ಯಕ್ಕೆ ತನ್ನ ತಾಯಿ ಜತೆ ಸೇರಿ ಟಾಬಿನ್‌ ಉಳಿಸಿದ ಹಣವೇ ಬರೋಬ್ಬರಿ 1 ಲಕ್ಷ ಅಮೆರಿಕನ್‌ ಡಾಲರ್‌. ಆದರೆ ದಿನ ಕಳೆಯುತ್ತಿದ್ದಂತೆ ಇವರಿಗೆ ತಮ್ಮ ಅಂಗಡಿಯ ಕಪಾಟುಗಳು ಖಾಲಿಯಾಗುತ್ತಾ ಬಂದಿದ್ದು ಗಮನಕ್ಕೆ ಬಂದಿದೆ. ನೋಡ ನೋಡುತ್ತಿದ್ದಂತೆ ಜನರ ಬೇಡಿಕೆ ಪೂರೈಸಲಾಗದೆ ತಾತ್ಕಾಲಿಕವಾಗಿ ಅಂಗಡಿಯನ್ನೇ ಅವರು ಬಂದ್‌ ಮಾಡಬೇಕಾಗಿ ಬಂದಿದೆ. ಇದು ಕೆನಡಾದಲ್ಲಿ ಹುಟ್ಟಿಕೊಂಡ ಹೊಸ ಗಾಂಜಾ ಅಲೆಯ ಮೊದಲ ಬಹಿರಂಗ ಪರಿಣಾಮ.

“ಪ್ರತಿದಿನ 100 ಗ್ರಾಹಕರಿಗೆ ಕ್ಷಮೆ ಕೇಳಿದ ನಂತರ ನಮಗೆ ಕ್ಷಮೆ ಕೇಳುವುದೇ ಪ್ರಯಾಸವಾಗಿ ಹೋಯಿತು,” ಎನ್ನುತ್ತಾರೆ ಟಾಬಿನ್. ‘ನಮಗೆ ಪೂರೈಕೆಯ ರಸ್ತೆಯಲ್ಲಿ ವೇಗ ನಿಯಂತ್ರಕಗಳಿವೆ ಎನ್ನಲಾಗಿತ್ತು. ಆದರೆ ಇದು ನಿಯಂತ್ರಕಗಳಲ್ಲ ಬದಲಿಗೆ ರಸ್ತೆ ಗುಂಡಿಗಳು,” ಎನ್ನುತ್ತಾರೆ ಅವರು.

ಅಕ್ಟೋಬರ್‌ 17ರಂದು ಕೆನಡಾದಲ್ಲಿ ಗಾಂಜಾವನ್ನು ಕಾನೂನಾತ್ಮಕಗೊಳಿಸಲಾಗಿತ್ತು. ಈ ಮೂಲಕ ಜಿ 20 ದೇಶಗಳಲ್ಲೇ ಗಾಂಜಾವನ್ನು ಸಕ್ರಮಗೊಳಿಸದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಕೆನಡಾ ಪಾತ್ರವಾಗಿತ್ತು. ಆದರೆ ಇನ್ನೂ ಸಕ್ರಮಗೊಳಿಸಿ ಎರಡು ವಾರ ಕಳೆದಿದೆ ಅಷ್ಟೇ. ಅಷ್ಟರಲ್ಲಾಗಲೇ ಎಲ್ಲಾ ಅಂಗಡಿಗಳು ಮತ್ತು ಡಿಜಿಟಲ್‌ ಮಾರುಕಟ್ಟೆಗಳು ಗ್ರಾಹಕರ ಬೇಡಿಕೆ ಪೂರೈಸುವಲ್ಲಿ ಸೋತಿವೆ. ಗ್ರಾಹಕರಿಂದ ಏಕಾಏಕಿ ಬೇಡಿಕೆಯ ಸುರಿಮಳೆಯೇ ಬಂದ ಹಿನ್ನೆಲೆಯಲ್ಲಿ ಮರಿಜುವಾನದ ಸಕ್ರಮ ಮಾರಾಟವೇ ಇಡೀ ದೇಶದಲ್ಲಿ ನಿಂತು ಹೋಗಿದೆ.

“ದೇಶದಲ್ಲಿ ಹೀಗೊಂದು ಸಕ್ರಮ ಗಾಂಜಾ ಕಾನೂನು ಜಾರಿಗೆ ತಂದ ಬಳಿಕ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂದು ನಾನು ಅಂದಾಜಿಸಿದ್ದೆ. ಒಂದು ವರ್ಷದಲ್ಲಿ ಈ ಸಮಸ್ಯೆ ಬರಬಹುದು ಎಂದುಕೊಂಡಿದ್ದೆ. ಆದರೆ ಇಷ್ಟು ಬೇಗ ಬರುತ್ತದೆ ಎಂದುಕೊಂಡಿರಲಿಲ್ಲ,” ಎನ್ನುತ್ತಾರೆ ಯೋಜನೆಯ ವಿಶ್ಲೇಷಕ ರೊಸಲೀ ವ್ಯೋಂಚ್‌.

ಕೆನಡಾದಲ್ಲಿ ಸರಕಾರವೇ ತನ್ನ ಅಂಗಡಿಗಳ ಮೂಲಕ, ವೆಬ್‌ಸೈಟ್‌ಗಳ ಮೂಲಕ ಗಾಂಜಾವನ್ನು ಜನರಿಗೆ ಪೂರೈಕೆ ಮಾಡುವ ಕೆಲಸ ಮಾಡುತ್ತಿದೆ. ಇದೀಗ ಕೊರತೆ ಸೃಷ್ಟಿಯಾಗಿರುವುದರಿಂದ ವಾರದಲ್ಲಿ ತನ್ನ ಅಂಗಡಿಗಳನ್ನು ಮೂರು ದಿನ ಬಂದ್‌ ಮಾಡಲು ಸರಕಾರ ನಿರ್ಧರಿಸಿದೆ. ಇನ್ನು ಆನ್‌ಲೈನ್‌ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಸರಕಾರಿ ವೆಬ್ಸೈಟ್‌ ಮೂಲಕ ಒಂಟಾರಿಯೋದಲ್ಲಿ ಮೊದಲು ದಿನವೇ 1 ಲಕ್ಷ ಜನರು ಗಾಂಜಾಕ್ಕಾಗಿ ಆರ್ಡರ್‌ ನೀಡಿದ್ದರು. ಆದರೆ ಪೂರೈಕೆ ಮಾಡಲು ಗಾಂಜಾ ಇಲ್ಲದೆ ಎರಡು ವಾರ ಕಳೆದರು ಆರ್ಡರ್‌ ಮನೆ ತಲುಪಿಲ್ಲ. ಕೆಲವರಂತೂ ಚಾತಕ ಪಕ್ಷಿಗಳಾಗಿದ್ದಾರೆ.

ಸದ್ಯದ ಸರಕಾರಿ ಅಂದಾಜುಗಳ ಪ್ರಕಾರ, ದೇಶದ ಗಾಂಜಾ ಬೇಡಿಕೆಯನ್ನು ಪೂರೈಸಲು ಮೂರು ವರ್ಷಗಳೇ ಬೇಕಾಗಬಹುದು ಎನ್ನಲಾಗಿದೆ. ಅದಕ್ಕೆ ಕಾರಣ ಸರಕಾರದ ಪಾಲಿಸಿಗಳು. ಸದ್ಯಕ್ಕೆ ಖಾಸಗಿಯವರಿರಲಿ, ಸರ್ಕಾರಿಯವರಿರಲಿ ಮಾರಾಟಕ್ಕೆ ಬೇಕಾದ ಗಾಂಜಾವನ್ನು ಪರವಾನಿಗೆ ಪಡೆದವರೇ ಪೂರೈಕೆ ಮಾಡಬೇಕು. ಇರುವ ಪೂರೈಕೆದಾರರಲ್ಲಿ ಕೊರತೆ ಕಂಡು ಬಂದಿದ್ದರಿಂದ ಹೊಸ ಪೂರೈಕೆದಾರರನ್ನು ಹುಡುಕಬೇಕಾಗಿದೆ. ಆದರೆ ಅದಕ್ಕಿರುವ ನಿಯಮಗಳು ದೀರ್ಘ ಸಮಯವನ್ನು ಬೇಡುತ್ತಿವೆ.

ಇದರ ಜತೆಗೆ ಹೊಸ ಹೊಸ ಉತ್ಪಾದಕರಿಗೆ ಲೈಸನ್ಸ್‌ಗಳನ್ನು ಕೆನಡಾದ ಆರೋಗ್ಯ ಇಲಾಖೆ ನೀಡುತ್ತಿದೆ. ಹೀಗಿದ್ದೂ ಇದರ ಗಿಡಗಳನ್ನು ಬೆಳೆದು ಅದನ್ನು ಸಂಸ್ಕರಣೆ ಮಾಡಿ, ಪ್ಯಾಕ್‌ ಮಾಡಿ, ಅದನ್ನು ಪರೀಕ್ಷೆಗೆ ಒಳಪಡಿಸಿ, ಮಾರಾಟ ಮಾಡಲು ಇನ್ನೂ ಸಾಕಷ್ಟು ಸಮಯ ಬೇಕು ಎನ್ನುತ್ತಾರೆ ಅಲ್ಲಿನ ಅಧಿಕಾರಿಗಳು.

ಈ ಪೂರೈಕೆ ವ್ಯತ್ಯಯವನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡಿರುವ ಕಳ್ಳ ಸಾಗಣೆದಾರರು ಹಿಂದಿನಂತೆಯೇ ತಮಗೆ ಇಚ್ಛೆ ಬಂದ ಬೆಲೆಗೆ ದೇಶದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದಾರೆ. ಈ ಹಂತದಲ್ಲಿ ಸರಕಾರ ಪರಿಸ್ಥಿತಿ ಸುಧಾರಣೆಗೆ ಮುಂದಾಗದಿದ್ದಲ್ಲಿ ಹಳೆ ಮಾಫಿಯಾಗಳ ಕೈ ಮತ್ತೆ ಮೇಲಾಗುವ ಅಪಾಯವೂ ಇದೆ.

ಮೂಲ: ಗಾರ್ಡಿಯನ್