samachara
www.samachara.com
ಹಠಕ್ಕೆ ಬಿದ್ದ ರೈತರು; ಚಾಣಾಕ್ಷ ಕಳ್ಳರು: ಇದು ಹಣ್ಣಿಗಾಗಿ ಸೃಷ್ಟಿಯಾದ ಅಪರಾಧ ಲೋಕ!
FEATURE STORY

ಹಠಕ್ಕೆ ಬಿದ್ದ ರೈತರು; ಚಾಣಾಕ್ಷ ಕಳ್ಳರು: ಇದು ಹಣ್ಣಿಗಾಗಿ ಸೃಷ್ಟಿಯಾದ ಅಪರಾಧ ಲೋಕ!

ಹೌದು, ಮೇಲಿನ ತಲೆಬರಹ ಸರಿಯಾಗಿಯೇ ಇದೆ. ಇದು ಹಣ್ಣಿಗಾಗಿ ದೂರದ ನ್ಯೂಝಿಲ್ಯಾಂಡ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆ. ಸರಕಾರ, ಪೊಲೀಸ್‌ ವ್ಯವಸ್ಥೆ, ತಂತ್ರಜ್ಞಾನ, ರೈತರು ಹಾಗೂ ಚಾಣಾಕ್ಷ ಕಳ್ಳರು ಇದರ ಪಾತ್ರದಾರಿಗಳು. 

ನಮ್ಮಲ್ಲಿ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಕೃಷಿಗೆ ಹಾಕಿದ ಬಂಡವಾಳ ವಾಪಾಸ್ ಬರುತ್ತಿಲ್ಲ ಎಂಬ ಅಳಲು ಕೇಳಿ ಬರುತ್ತಲೇ ಇದೆ. ಅದೇ ಯುರೋಪ್ ಖಂಡದ ನ್ಯೂಝಿಲ್ಯಾಂಡ್‌ನಲ್ಲಿ ಹಣ್ಣೊಂದು ದುಬಾರಿ ಬೆಲೆಯನ್ನು ರೈತರಿಗೆ ತಂದು ಕೊಡುತ್ತಿದೆ. ಮೇಲ್ನೋಟಕ್ಕೆ ಇದು ಶುಭ ಸುದ್ದಿ ಅನ್ನಿಸಿದರೂ, ವಾಸ್ತವದಲ್ಲಿ ಈ ದುಬಾರಿ ಬೆಲೆಯೇ ರೈತರಿಗೆ ಶಾಪವಾಗಿ, ಚಾಣಾಕ್ಷ ಕಳ್ಳರಿಗೆ ವರವಾಗಿ ಪರಿಣಮಿಸಿದೆ.

ಹಣ್ಣಿನ ಬೆಳೆಗಳಿಗೆ ಜನಪ್ರಿಯವಾಗಿರುವ ನ್ಯೂಝಿಲ್ಯಾಂಡ್‌ನ ಪ್ಲೆಂಟಿ ಕರಾವಳಿ ತೀರದಲ್ಲಿ ‘ಅವಕಾಡೋ’ ಎಂಬ ಹಣ್ಣನ್ನು ಬೆಳೆಯಲಾಗುತ್ತದೆ. ಇದಕ್ಕೆ ದುಬಾರಿ ದರವಿದೆ. ಒಂದು ಹಣ್ಣು ಭಾರತೀಯ ರೂಪಾಯಿಗಳಲ್ಲಿ ಸುಮಾರು 350 ರೂಪಾಯಿಗೆ ಮಾರಾಟಗೊಳ್ಳುತ್ತದೆ. ಭಾರಿ ಬೇಡಿಕೆಯೇ ಇದರ ಬೆಲೆ ಏರಿಕೆಗೆ ಕಾರಣ.

ಹಣ್ಣು ಸಣ್ಣದು, ಬೆಲೆ ದೊಡ್ಡದು. ಪರಿಣಾಮ ಏನಾಗಬೇಕೋ ಅದು ನ್ಯೂಝಿಲ್ಯಾಂಡ್‌ನಲ್ಲಿಯೂ ನಡೆಯುತ್ತಿದೆ. ಒಂದು ಹಣ್ಣು ಕದ್ದರೂ ಸಾಕು ಡಾಲರ್‌ಗಳ ಲೆಕ್ಕದಲ್ಲಿ ಹಣ ಕೈ ಸೇರುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆ ಮಕ್ಕಳು, ದೊಡ್ಡವರೆನ್ನದೆ ನ್ಯೂಝಿಲ್ಯಾಂಡ್‌ನ ಜನರು ಹಣ್ಣಿನ ಕಳ್ಳತನಕ್ಕೆ ಇಳಿದಿದ್ದಾರೆ. ಪರಿಣಾಮ ಸೀಸನ್‌ನಲ್ಲಿ ಬೆಳೆಯ ನಿರೀಕ್ಷೆಯಲ್ಲಿದ್ದ ರೈತರು ಕಂಗೆಟ್ಟಿದ್ದಾರೆ. ಬಳಿಕ ಸಾವರಿಸಿಕೊಂಡು ಇದನ್ನು ತಡೆಗಟ್ಟಲೆಂದೇ ಹಲವು ಸೃಜನಶೀಲ ಆವಿಷ್ಕಾರಗಳಿಗೂ ರೈತರು ಮುಂದಾಗಿದ್ದಾರೆ.

ತೋಟಗಳಲ್ಲಿ ಕದಿಯಲು ಬಂದ ಕಳ್ಳರನ್ನು ಪತ್ತೆ ಹಚ್ಚಲು ಇಲ್ಲಿನ ರೈತರು ಕಾರಿನ ಅಲರಾಂಗಳನ್ನು ವಿನ್ಯಾಸಗೊಳಿಸಿ, ತಮ್ಮ ತೋಟಗಳಿಗೆ ಅಳವಡಿಸಿದ್ದಾರೆ. “ಯಾರಾದರೂ ಬಂದರೆ ಅಲರಾಂ ಹೊಡೆದುಕೊಳ್ಳುತ್ತದೆ. ನಾನು ಬೆಡ್‌ನಿಂದ ಎದ್ದು ನೋಡಲು ಹೋಗುತ್ತೇನೆ,” ಎನ್ನುತ್ತಾರೆ ವೈಟ್‌ಹೆಡ್‌ ಎಂಬ ಬೆಳೆಗಾರರೊಬ್ಬರು. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಅವರ ತೋಟಗಳ ಮೇಲೆ ದಾಳಿ ನಡೆಯುತ್ತಲೇ ಬಂದಿದೆ. ಈಗ ಅಲರಾಂ ಅಳವಡಿಸಿದ್ದರಿಂದ ಕಳ್ಳರ ಕಾಟ ಸ್ವಲ್ಪ ತಣ್ಣಗಾಗಿದೆ ಎನ್ನುತ್ತಾರೆ ಅವರು. ಆದರೆ, “ಅಲರಾಂ ಶಬ್ದ ಕೇಳಿ ನಾನು ತೋಟ ತಲುಪುವಷ್ಟರಲ್ಲಿ ಕಳ್ಳರೂ ನಾಪತ್ತೆಯಾಗಿರುತ್ತಾರೆ,” ಎಂದವರು ಅಳಲು ತೋಡಿಕೊಳ್ಳುತ್ತಾರೆ.

ನ್ಯೂಝಿಲ್ಯಾಂಡ್‌ನ ಅವಕಾಡೋ ಹಣ್ಣಿನ ತೋಟದ ಒಂದು ನೋಟ.
ನ್ಯೂಝಿಲ್ಯಾಂಡ್‌ನ ಅವಕಾಡೋ ಹಣ್ಣಿನ ತೋಟದ ಒಂದು ನೋಟ.
/ಗಾರ್ಡಿಯನ್‌

ಇದು ಅವರೊಬ್ಬರ ಕಥೆಯಲ್ಲ. ಇಂತಹ ನಿದರ್ಶನಗಳು ಇಲ್ಲಿನ ಪ್ರತಿಯೊಬ್ಬರ ರೈತನ ಮನೆಗಳಲ್ಲೂ ಕಾಣಸಿಗುತ್ತವೆ. ಮುಖ್ಯವಾಗಿ ಇಲ್ಲಿ ಹವ್ಯಾಸಿ ಕಳ್ಳರಿಗಿಂತ ವೃತ್ತಿಪರ ಕಳ್ಳರನ್ನು ತಡೆಯುವುದು ರೈತರ ಪಾಲಿಗೆ ಪ್ರಯಾಸದಾಯಕವಾಗಿದೆ. ಕೆಲವು ಚತುರ ಹವ್ಯಾಸಿ ಕಳ್ಳರು ಅಪರಾಧ ಲೋಕದ ನಂಟು ಬೆಳೆಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಈ ಕದ್ದ ಹಣ್ಣುಗಳನ್ನು ಕಳ್ಳ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಒಂದು ಬುಟ್ಟಿ ಹಣ್ಣು ಕದ್ದರೂ ಸಾವಿರಾರು ಡಾಲರ್‌ ಸಂಪಾದನೆಯಾಗುತ್ತದೆ. ಹೀಗಾಗಿ ಹೊಸ ಅಪಾರಾಧ ಜಾಲವೇ ಪ್ಲೆಂಟಿ ಕರಾವಳಿಯಲ್ಲಿ ಹುಟ್ಟಿಕೊಂಡಿದೆ.

ಈ ಕಳ್ಳರರೆಷ್ಟು ವೃತ್ತಿಪರರಾಗಿದ್ದಾರೆ ಎಂದರೆ, ಯಾವ ತೋಟಗಳಿಗೆ ರಕ್ಷಣಾ ವ್ಯವಸ್ಥೆಗಳಿಲ್ಲ ಎಂಬುದನ್ನು ಅರಿತುಕೊಳ್ಳಲು ಗೂಗಲ್‌ ಅರ್ಥ್‌ ಚಿತ್ರಗಳ ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ನ್ಯೂಜಿಲ್ಯಾಂಡ್‌ ಪೊಲೀಸರ ಪ್ರಕಾರ, ಈ ರೀತಿ ಹಣ್ಣು ಕಳ್ಳತನ ಮಾಡುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಇವರನ್ನು ತಡೆಯಲು ಸಿಸಿಟಿವಿ ಕ್ಯಾಮೆರಾಗಳು, ರಾತ್ರಿ ಕಾವಲುಗಾರರು, ವಿದ್ಯುತ್‌ ತಂತಿಗಳು, ಸೆನ್ಸಾರ್‌ಗಳು ಸಾಮಾನ್ಯ ರೈತರ ತೋಟದಲ್ಲಿ ಇರಬೇಕಾದ ಅಗತ್ಯ ವಸ್ತುಗಳಂತಾಗಿ ಹೋಗಿವೆ. ಕೆಲವು ದೊಡ್ಡ ದೊಡ್ಡ ಹಿಡುವಳಿದಾರರು ಬಂದೂಕುಧಾರಿಗಳನ್ನೂ ಹಣ್ಣಿನ ರಕ್ಷಣೆಗೆ ನೇಮಿಸಿದ್ದಾರೆ.

ಹಲವು ಸಂದರ್ಭದಲ್ಲಿ ಇವರ ಮಧ್ಯೆ ಮತ್ತು ಕಳ್ಳರ ನಡುವೆ ಹೊಡೆದಾಟಗಳು ನಡೆದಿದ್ದೂ ವರದಿಯಾಗುತ್ತಿರುತ್ತವೆ. ಹಳ್ಳಿಗಳಲ್ಲಿ ಕಳ್ಳರನ್ನು ಪತ್ತೆ ಹಚ್ಚುವಷ್ಟು ಪೊಲೀಸರಿಗೆ ಪುರುಸೊತ್ತಾಗಲೀ, ಸಿಬ್ಬಂದಿಗಳಾಗಲೀ ಇಲ್ಲವಾದ್ದರಿಂದ ಜನರೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಅವು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದೂ ಇದೆ. ಕೋರ್ಟ್‌ಗಳಲ್ಲಿ ವಿಚಾರಣೆ ನಡೆಯುತ್ತಿರುವುದೂ ಇದೆ.

ಹೀಗೆ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡ ಹಣ್ಣೊಂದು ಅಪರಾಧ ಲೋಕವನ್ನು ಸೃಷ್ಟಿಸಿರುವುದು ಒಂದು ಕಡೆಯಾದರೆ ದುಬಾರಿ ಬೆಲೆಯೇ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿರುವ ಅಪರೂಪದ ಕಥೆ ಇದು.

ಒಂದು ಕಾಲದಲ್ಲಿ ಕರ್ನಾಟಕದಲ್ಲಿಯೂ ವೆನಿಲ್ಲಾ ಎಂಬ ಬೆಳೆ ಪರಿಚಯವಾದಾಗ, ಅದಕ್ಕಿದ್ದ ಬೇಡಿಕೆ ಹಾಗೂ ದುಬಾರಿ ಬೆಲೆ ಕಾರಣಕ್ಕೆ ಇಂತಹದ್ದೇ ಒಂದು ಅಪರಾಧ ಲೋಕ ಅದರ ಸುತ್ತಲೂ ಹುಟ್ಟಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ವೆನಿಲ್ಲಾ ಕಳ್ಳತನ ಆರೋಪ ಬಂದ ಕಾರಣಕ್ಕೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಇಡೀ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಎರಡು ವರ್ಷಗಳ ಹಿಂದೆ ಅಡಿಕೆ ಬೆಳೆ ಕ್ವಿಂಟಾಲ್‌ಗೆ ಲಕ್ಷ ರೂಪಾಯಿಗಳ ಸಮೀಪಕ್ಕೆ ಬಂದಾಗಲೂ ಅದರ ಸುತ್ತ ಅಪರಾಧ ಚಟುವಟಿಕೆಗಳು ಆರಂಭವಾಗುವ ಆತಂಕ ಎದುರಾಗಿತ್ತು. ಅದು ನ್ಯೂಝಿಲ್ಯಾಂಡ್ ಇರಲಿ, ಕರ್ನಾಟಕ ಇರಲಿ, ಯಾವುದೇ ಬೆಳೆಗೆ ದುಬಾರಿ ಬೆಲೆ ಬಂದರೆ, ಜತೆಗೆ ಇಂತಹ ಸಮಸ್ಯೆಗಳೂ ಎದುರಾಗುತ್ತವೆ.