samachara
www.samachara.com
ಸೋಲಿನ ಹತಾಷೆ, ನೀಚತನದ ಹೇಳಿಕೆ: ರಾಕೇಶ್ ಸಿದ್ದರಾಮಯ್ಯ ಸಾವಿಗೆ ಪ್ರತಿಕ್ರಿಯೆ ಅಂದು- ಇಂದು
FEATURE STORY

ಸೋಲಿನ ಹತಾಷೆ, ನೀಚತನದ ಹೇಳಿಕೆ: ರಾಕೇಶ್ ಸಿದ್ದರಾಮಯ್ಯ ಸಾವಿಗೆ ಪ್ರತಿಕ್ರಿಯೆ ಅಂದು- ಇಂದು

ಶವದ ಪಕ್ಕ ಅಳುತ್ತಾ ನಿಂತಿದ್ದ ಸಿದ್ದರಾಮಯ್ಯರಿಗೆ ತಮ್ಮೆಲ್ಲಾ ಭಿನ್ನಾಭಿಪ್ರಾಯ, ಪಕ್ಷ-ಸಿದ್ದಾಂತಗಳನ್ನು ಮರೆತು ಅವರ ದುಃಖಕ್ಕೆ ಜತೆಯಾದರು ಅಂದು. ಆದರೆ ಇಂದು? 

ಅದು 30 ಜುಲೈ 2016. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಪುತ್ರ ರಾಕೇಶ್‌ ಬೆಲ್ಜಿಯಂನಲ್ಲಿ ಸಾವನ್ನಪ್ಪಿದ್ದರು. ‘ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್’ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಲ್ಜಿಯಂ ಪ್ರವಾಸ ವೇಳೆ ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕ ಮರಣವನ್ನಪ್ಪಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು.

ಇದಕ್ಕೂ ಸ್ವಲ್ಪ ದಿನ ಮೊದಲೇ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಎರಡು ದಿನ ಮೊದಲು ಮಗನ ಪರಿಸ್ಥಿತಿ ಗಂಭೀರವಾಗಿದೆ ಎಂದು ಗೊತ್ತಾಗುತ್ತಿದ್ದಂತೆ ಜುಲೈ 27ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಲ್ಜಿಯಂಗೆ ತೆರಳಲು ನಿರ್ಧರಿಸಿದ್ದರು. ಆದರೆ ಅವರಿಗೆ ವೀಸಾ ಸಮಸ್ಯೆ ಎದುರಾಯಿತು. ಕೊನೆಗೆ ಏನೇನೋ ಸರ್ಕಸ್‌ಗಳನ್ನು ಮಾಡಿ ಸಿಎಂ ಸಿದ್ದರಾಮಯ್ಯ ಜುಲೈ 28ರ ಮುಂಜಾನೆ ಹೊರಟು ಫ್ರಾನ್ಸ್‌ ಮಾರ್ಗವಾಗಿ ಬೆಲ್ಜಿಯಂ ತಲುಪಿದರು. ತಲುಪಿದವರೇ ಆಸ್ಪತ್ರೆಯಲ್ಲಿ ಕೃತಕ ಉಸಿರಾಟದಲ್ಲಿದ್ದ ಮಗನನ್ನು ನೋಡಿದರು.

ಈ ಸಂದರ್ಭದಲ್ಲಿ ಅವರು ಪಕ್ಕದ ಕೋಣೆಗೆ ಬಂದು ಗಳಗಳನೆ ಅತ್ತು ಬಿಟ್ಟರು ಎಂದಿದ್ದವು ಸಿಎಂ ಕಚೇರಿಯ ಮೂಲಗಳು. ತಂದೆಯೊಬ್ಬರು ತಮ್ಮ ಪ್ರೀತಿಯ ಮಗನ ಅನಾರೋಗ್ಯ ವಿಚಾರಿಸಿಕೊಳ್ಳಲು ಸಾಕಷ್ಟು ಅಡೆತಡೆಗಳನ್ನು ದಾಟಿ ಕೊನೆಗೂ ಆಸ್ಪತ್ರೆಯ ಹಾಸಿಗೆ ಪಕ್ಕ ನಿಂತಿದ್ದರು. ಆದರೆ, ಮಗ ಬದುಕಿನ ಹೋರಾಟವನ್ನು ಕೈಚೆಲ್ಲಿಯಾಗಿತ್ತು. ಅದಾಗಿ 48 ಗಂಟೆ ಅಂತರದಲ್ಲಿ ರಾಕೇಶ್ ಸಿದ್ದರಾಮಯ್ಯ ಸಾವನ್ನು ವೈದ್ಯರು ಖಚಿತಪಡಿಸಿದರು.

ರಾಕೇಶ್‌ ಸಾವಿಗೆ ನಾಡಿನ ಜನರ ಹೃದಯ ಮಿಡಿಯಿತು. ಮೈಸೂರಿನಲ್ಲಿ ನಡೆದ ಅಂತಿಮ ದರ್ಶನಕ್ಕೆ ಸಾಗರೋಪಾದಿಯಾಗಿ ಜನರು ಹರಿದು ಬಂದರು. ವಿರೋಧ ಪಕ್ಷ, ಆಡಳಿತ ಪಕ್ಷ ಎಂಬ ಬೇಧವಿಲ್ಲದೆ ಎಲ್ಲರೂ ಸಿದ್ದರಾಮಯ್ಯ ನೋವಿನಲ್ಲಿ ಭಾಗಿಯಾದರು. ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಸದಾನಂದ ಗೌಡರಂತೂ ಜತೆಗೆ ಕಣ್ಣೀರು ಹಾಕುವ ಮೂಲಕ ನೋವನ್ನು ಹಂಚಿಕೊಳ್ಳುವ ಹೃದಯ ವಿಶಾಲತೆಯನ್ನು ಮೆರೆದರು. ಹೀಗೆ ಶವದ ಪಕ್ಕ ಅಳುತ್ತಾ ನಿಂತಿದ್ದ ಸಿದ್ದರಾಮಯ್ಯರಿಗೆ ತಮ್ಮೆಲ್ಲಾ ಭಿನ್ನಾಭಿಪ್ರಾಯ, ಪಕ್ಷ-ಸಿದ್ದಾಂತಗಳನ್ನು ಮರೆತು ಅವರ ದುಃಖಕ್ಕೆ ಜತೆಯಾದರು.

ಸಿದ್ದರಾಮಯ್ಯ ದುಃಖದಲ್ಲಿ ಭಾಗಿಯಾಗಿದ್ದ ವಿರೋಧಿ ಪಕ್ಷದ ನಾಯಕ ಹಾಗೂ ಅಂದು ಅಪ್ತರಾಗಿದ್ದ ಮಾಜಿ ಸಚಿವ ಮಹದೇವಪ್ಪ. 
ಸಿದ್ದರಾಮಯ್ಯ ದುಃಖದಲ್ಲಿ ಭಾಗಿಯಾಗಿದ್ದ ವಿರೋಧಿ ಪಕ್ಷದ ನಾಯಕ ಹಾಗೂ ಅಂದು ಅಪ್ತರಾಗಿದ್ದ ಮಾಜಿ ಸಚಿವ ಮಹದೇವಪ್ಪ. 
/ಡೆಕ್ಕನ್‌ ಕ್ರಾನಿಕಲ್‌

ಆದರೆ ಇನ್ನೊಂದು ಕಡೆ ರಾಕೇಶ್‌ ಸಿದ್ದರಾಮಯ್ಯ ಸಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸುವ ಪ್ರಕ್ರಿಯೆಗಳು ನಡೆದವು. ಇದಕ್ಕೆ ಸ್ವತಃ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದವರೂ ತೀಕ್ಷ್ಣ ಪ್ರತಿಕ್ರಿಯೆ ನೀಡಬೇಕಾಯಿತು. “ಯಾರಾದರೂ ರಾಕೇಶ್ ಸಿದ್ದರಾಮಯ್ಯನವರ ಬಗ್ಗೆ ಕೆಟ್ಟದ್ದಾಗಿ ಹಾಕಿರುವ ಫೇಸ್ಬುಕ್ ಸ್ಟೇಟಸ್ ಇದ್ದರೆ ಸ್ಕ್ರೀನ್ಶಾಟ್ ತೆಗೆದು ನನಗೆ ಕಳಿಸಿ,” ಎಂದರು ಅವರು. ಮುಂದಿನ ಒಂದಷ್ಟು ದಿನ ರಾಕೇಶ್‌ ಸಿದ್ದರಾಮಯ್ಯ ತೇಜೋವಧೆಗೆ ಬೇಕಾದ ಎಲ್ಲಾ ಯತ್ನಗಳು ನಡೆದಿತ್ತು.

ಇದೆಲ್ಲಾ ಕಳೆದು ಇವತ್ತಿಗೆ ಎರಡು ವರ್ಷಗಳೇ ಕಳೆದಿವೆ. ಆದರೆ ಅವತ್ತು ಒಂದು ವರ್ಗ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳನ್ನು ಇಂದು ಬಿಜೆಪಿ ನಾಯಕ ಜನಾರ್ಧನ ರೆಡ್ಡಿ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಲೋಕಸಭೆ ಉಪಚುನಾವಣೆ ಸಂದರ್ಭದಲ್ಲಿ ಮತ್ತೆ ಅಖಾಡಕ್ಕಿಳಿದಿರುವ ರೆಡ್ಡಿ, ನನ್ನ ವಿನಾ ಕಾರಣ ಸಿದ್ದರಾಮಯ್ಯ ಜೈಲಿಗೆ ತಳ್ಳಿದ್ದರು ಎಂದು ಮೊದಲಿಗೆ ವಾಗ್ದಾಳಿ ಆರಂಭಿಸಿದ್ದರು. ಅಲ್ಲಿಂದ ಸಿದ್ದರಾಮಯ್ಯ ಮತ್ತು ಜನಾರ್ದನ ರೆಡ್ಡಿ ನಡುವೆ ಮಾತಿನ ಚಕಮಕಿಗಳು ಆರಂಭವಾಗಿತ್ತು. ಇದೀಗ ಒಂದು ಹೆಜ್ಜೆ ಕೀಳು ಮಟ್ಟಕ್ಕೆ ಇಳಿದಿರುವ ಜನಾರ್ದನ ರೆಡ್ಡಿ, “ನನ್ನನ್ನು ಜೈಲಿಗೆ ಹಾಕುವ ಮೂಲಕ ಸಿದ್ದರಾಮಯ್ಯ ಮಕ್ಕಳಿಂದ ನನ್ನನ್ನು ದೂರ ಮಾಡಿದರು. ಈ ಕಾರಣಕ್ಕೆ ಹಿರಿಮಗ ರಾಕೇಶ್‌ ಸಾವು ಸಿದ್ದರಾಮಯ್ಯಗೆ ದೇವರ ಕೊಟ್ಟ ಶಿಕ್ಷೆ,” ಎಂದು ಹೇಳಿದ್ದಾರೆ. ಇನ್ನೂ ಪ್ರಸಾರವಾಗದ ಪಬ್ಲಿಕ್‌ ಟಿವಿಯ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, “ನನ್ನ ಮಗನ ಸಾವು ನನಗೆ ದೇವರು‌ಕೊಟ್ಟ ಶಿಕ್ಷೆ‌‌ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ. ನಿಮ್ಮ‌ ಪಾಪಗಳಿಗಾಗಿ‌ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ,” ಎಂದಿದ್ದಾರೆ.

ಗಮನಿಸಬೇಕಾದ ವಿಷಯವೆಂದರೆ ಅವತ್ತಿಗೂ ಇವತ್ತಿಗೂ ರಾಕೇಶ್‌ ಸಿದ್ದರಾಮಯ್ಯ ವಿಚಾರದಲ್ಲಿ ಒಂದಷ್ಟು ಜನ ಸಾವಿನ ಮನೆಯಲ್ಲೂ ಗಳ ಹಿರಿದಿದ್ದರು. ರಾಜಕಾರಣಿಗಳು ತೋರಿಸಿದ ಸಂಯಮವನ್ನು ಒಂದು ನಿರ್ಧಿಷ್ಟ ವರ್ಗ ಮರೆತಿತ್ತು. ಇವತ್ತು ರಾಜಕಾರಣಿಯೊಬ್ಬರು ಸಂಯಮ ಕಳೆದುಕೊಂಡು ಮಾತನಾಡಿದ್ದಾರೆ.

ಚುನಾವಣೆ ವೇಳೆಯಲ್ಲಿ ತಾವು ಅಧಿಕಾರದಲ್ಲಿದ್ದಾಗ ನಡೆಸಿದ ಅಭಿವೃದ್ಧಿಯಾಗಲಿ, ಈಗ ಸರಕಾರ ಮರೆತ ಅಭಿವೃದ್ಧಿ ಕಾರ್ಯಗಳು ನೆನಪಾಗದೆ, ಕೀಳು ಅಭಿರುಚಿಯ ಹೇಳಿಕೆಯ ಮೂಲಕ ರೆಡ್ಡಿ ಏನನ್ನು ಸಾಧಿಸಲು ಹೊರಟಿದ್ದಾರೆ?

“ಬಳ್ಳಾರಿ ಜನ ಹಣದ ಹಿಂದೆ ಹೋಗುತ್ತಾರೆ. ನಮ್ಮಲ್ಲಂತೂ ದುಡ್ಡಿಗೆ ಬೆಲೆ. ಈ ಬಾರಿ ಅವರದ್ದೇ ಸರಕಾರ ಇರುವುದರಿಂದ ಹಣ, ಅಧಿಕಾರ ಬಳಸಿ ಉಪಚುನಾವಣೆ ಕಣಕ್ಕೆ ಇಳಿದಿದ್ದಾರೆ. ಹಾಗಾಗಿ ನಮಗೆ ಕಷ್ಟ ಇದೆ,’’ ಎಂದು ಜನಾರ್ಧನ ರೆಡ್ಡಿ ಕುಟುಂಬದವರೇ ಹೇಳುತ್ತಿದ್ದಾರೆ. ಸೋಲಿನ ಹತಾಷೆ ಇಷ್ಟೊಂದು ನೀಚ ಮಟ್ಟದ ಹೇಳಿಕೆಗೆ ಕಾರಣವಾಯಿತಾ? ಉತ್ತರಕ್ಕಿಂತ ತಿದ್ದಿಕೊಳ್ಳುವುದು ಒಳ್ಳೆಯದು.