samachara
www.samachara.com
ಶ್ರುತಿ ಹರಿಹರನ್, ಅರ್ಜುನ್ ಸರ್ಜಾ: ಯಾರು ಸರಿ?, ಯಾರದ್ದು ತಪ್ಪು? 
FEATURE STORY

ಶ್ರುತಿ ಹರಿಹರನ್, ಅರ್ಜುನ್ ಸರ್ಜಾ: ಯಾರು ಸರಿ?, ಯಾರದ್ದು ತಪ್ಪು? 

ಇಂತಹ ಪ್ರಶ್ನೆಗಳಿಗೆ ತಾರ್ಕಿಕ ಅಂತ್ಯ ಸಿಗುವುದು ನ್ಯಾಯಾಲಯದಲ್ಲಿ. ಯಾವುದೇ ಪ್ರಕರಣವಿರಲಿ, ತೀರ್ಪು ಹೊರಬೀಳುವ ಮುಂಚೆ ಒಂದಷ್ಟು ಸಾಕ್ಷಿ, ಹೇಳಿಕೆಗಳನ್ನು ನ್ಯಾಯಾಲಯ ದಾಖಲು ಮಾಡಿಕೊಳ್ಳುತ್ತದೆ.

ವೃತ್ತಿ ಸ್ಥಳದಲ್ಲಿ ಯುವತಿಯರು, ಮಹಿಳೆಯರ ಮೇಲೆ ನಡೆಯುವ ಹಿಂಸೆ, ಕಿರುಕುಳ, ದೌರ್ಜನ್ಯಗಳನ್ನು ಮುಕ್ತವಾಗಿ ಸಮಾಜದ ಮುಂದಿಡುವ ಆಶಯದೊಂದಿಗೆ ಆರಂಭಗೊಂಡ ಅಭಿಯಾನ #ಮೀಟೂ. ಕರ್ನಾಟಕದಲ್ಲಿ ಸಿನೆಮಾ ರಂಗದ ಹೂರಣ ಸೇರಿಕೊಂಡು ಅದೀಗ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯ ಜನ ಕೂಡ ಯುವ ನಟಿ ಶ್ರುತಿ ಹರಿಹರನ್ ಹಾಗೂ ಹಿರಿಯ ನಟ ಅರ್ಜುನಾ ಸರ್ಜಾ ಪ್ರಕರಣದಲ್ಲಿ ಯಾರು ಸರಿ? ಯಾರದ್ದು ತಪ್ಪು? ಎಂದು ಪ್ರಶ್ನೆ ಕೇಳಲು ಶುರುಮಾಡಿದ್ದಾರೆ.

ಇಂತಹ ಪ್ರಶ್ನೆಗಳಿಗೆ ತಾರ್ಕಿಕ ಅಂತ್ಯ ಸಿಗುವುದು ನ್ಯಾಯಾಲಯದಲ್ಲಿ. ಯಾವುದೇ ಪ್ರಕರಣವಿರಲಿ, ತೀರ್ಪು ಹೊರಬೀಳುವ ಮುಂಚೆ ಒಂದಷ್ಟು ಸಾಕ್ಷಿ, ಹೇಳಿಕೆಗಳನ್ನು ನ್ಯಾಯಾಲಯ ದಾಖಲು ಮಾಡಿಕೊಳ್ಳುತ್ತದೆ. ಅದರ ಆಧಾರದ ಮೇಲೆ ತೀರ್ಪು ನೀಡುತ್ತದೆ. ಆದರೆ ಅದು ನಿಧಾನ ಪ್ರಕ್ರಿಯೆ.

ಜನ ಈಗಾಗಲೇ #ಮೀಟೂ ಹಿನ್ನೆಲೆಯಲ್ಲಿ ಇಬ್ಬರು ಸಲಬ್ರಿಟಿಗಳ ನಡುವೆ ನಡೆಯುತ್ತಿರುವ ಪ್ರಕರಣವನ್ನು ಅಗತ್ಯಕ್ಕಿಂತ ಜಾಸ್ತಿಯೇ ತಲೆಗೆ ಹಚ್ಚಿಕೊಂಡಿದ್ದಾರೆ. ಯಾರು ಸರಿ? ಯಾರದ್ದು ತಪ್ಪು? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡಿದ್ದಾರೆ. ಈ ಸಮಯದಲ್ಲಿ ತೀರ್ಪು ನೀಡಲು ಯಾರಿಂದಲೂ ಸಾಧ್ಯವಿಲ್ಲವಾದರೂ, ಪ್ರಕರಣದ ವ್ಯಕ್ತಿಗಳನ್ನು ಹತ್ತಿರದಿಂದ ಕಂಡವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಗಮನ ಸೆಳೆಯುತ್ತಿರುವುದು ಸಿನೆಮಾ ಪತ್ರಕರ್ತೆ ಭಾರತಿ ಎಸ್‌. ಜಿ ಬರೆದ ಫೇಸ್‌ಬುಕ್ ಪೋಸ್ಟ್‌. ಸಿನೆಮಾ ರಂಗವನ್ನು ಕಳೆದ ಹಲವು ವರ್ಷಗಳಿಂದ ಹತ್ತಿರದಿಂದ ನೋಡಿಕೊಂಡು ಬರುತ್ತಿರುವ ಯುವ ಪತ್ರಕರ್ತೆ ಭಾರತಿ, ಈ ಸಮಯದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಮುಂದಿಟ್ಟಿದ್ದಾರೆ.

ಭಾರತಿ ಎಸ್‌. ಜಿ
ಭಾರತಿ ಎಸ್‌. ಜಿ
/ಫೇಸ್‌ಬುಕ್. 

ವರದಿಯ ಆಚೆಗೂ ನನ್ನನ್ನು ವೈಯಕ್ತಿಕವಾಗಿ ಕಾಡಿದ್ದು ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ನಡುವಿನ ಕಿರುಕುಳದ ಆರೋಪ ಪ್ರಕರಣ. ಶ್ರುತಿಯನ್ನ ಮೊದಲ ಚಿತ್ರದಿಂದಲೂ ನೋಡುತ್ತಾ ಬಂದಿದ್ದೇನೆ, ಸಂದರ್ಶಿಸಿದ್ದೇನೆ. ಅವರು ಒಬ್ಬ ಧೈರ್ಯಶಾಲಿ ಹೆಣ್ಣುಮಗಳು. ಅರ್ಜುನ್ ಸರ್ಜಾರವರನ್ನೂ ಹಲವಾರು ಬಾರಿ ಮಾತನಾಡಿಸಿದ್ದೇನೆ, ಆದ್ರೆ ಅವರಿಗೆ ನನ್ನ ಪರಿಚಯ ಇಲ್ಲದೆಯೂ ಇರಬಹುದು.

ನಾನಿಲ್ಲಿ ಹೇಳೋಕೆ ಹೊರಟಿರೋದು ಯಾರದ್ದು ತಪ್ಪು ಯಾರದ್ದು ಸರಿ ಅನ್ನೋದ್ರ ಬಗ್ಗೆ ಅಲ್ಲ; ರಿಪೋರ್ಟರ್ ಆಗಿಯೂ ಅಲ್ಲ. ಒಂದು ಹೆಣ್ಣಾಗಿ ಅನಿಸಿದ್ದನ್ನ ಹೇಳುತ್ತಿದ್ದೇನೆ.

ಒಂದು ಹೆಣ್ಣು ಚಿಕ್ಕವಳಿರುವಾಗ ತಂದೆ, ಸಹೋದರರ ರಕ್ಷಣೆ ಬಯಸ್ತಾಳೆ. ಜೊತೆಗೆ ಗೆಳೆಯನನ್ನು ಬಯಸೋದೂ ಇದೇ ಕಾರಣಕ್ಕೆ. ಆತ ತನಗೆ ರಕ್ಷಣೆಯಾಗಿ ನಿಲ್ತಾನೆ ಅನ್ನೋ ಕಾರಣಕ್ಕೆ. ಹಾಗಾದ್ರೆ ಒಂದು ಹೆಣ್ಣು ಇಂಡಿಪೆಂಡೆಂಟ್‌ ಆಗಿ ಬದುಕೋಕೆ ಸಾಧ್ಯವಿಲ್ಲ ಅಂತೀರಾ? ಹೆಣ್ಣಿಗೆ ಎಲ್ಲವೂ ಸಾಧ್ಯ. ಆದ್ರೆ ಹುಟ್ಟಿನಿಂದ ವ್ಯವಸ್ಥೆ ಆಕೆಯನ್ನು ನೀನು ಸಿಂಗಲ್ ಆಗಿ ಇದ್ರೆ ಸೇಫ್ ಅಲ್ಲ ಅನ್ನೋದನ್ನ ಹೇಳಿಕೊಂಡು ಬರುತ್ತೆ. ಶಾಲೆಗೆ ಹೋಗುವಾಗಿಂದ ಹಿಡಿದು ಹೆಣ್ಣು ಹಸೆಮಣೆಗೆ ಹೋಗುವಾಗಲೂ (ಸೋದರಮಾವ) ಗಂಡಿನ ರಕ್ಷಣೆಯಲ್ಲೇ ಹೋಗ್ಬೇಕು. ಮದುವೆಯ ಬಳಿಕ ಪತಿ ಆಕೆಯ ರಕ್ಷಣೆಗೆ ನಿಲ್ತಾನೆ. ಅಪ್ಪ ಅಮ್ಮ ಅಬ್ಬಾ ನನ್ನ ಮಗಳನ್ನ ನೋಡಿಕೊಳ್ಳೋಕೆ ಒಂದು ಜೀವ ಬಂತು ಅನ್ನುವ ಸಮಾಧಾನ. ಇದೇ ಹೆಣ್ಣಿನ ಜೀವನ ಆಗ್ಬಿಟ್ಟಿದೆ.

ಒಂದು ವೇಳೆ ಹೆಣ್ಣು ಇದನ್ನೆಲ್ಲಾ ಬಯಸದೆ ಸ್ವತಂತ್ರವಾಗಿ ಜೀವನ ಮಾಡೋಕೆ ಶುರುಮಾಡಿದ್ಲು ಅಂದುಕೊಳ್ಳಿ, ಆಕೆಯ ಸುತ್ತ ಹತ್ತಾರು ಕಥೆಗಳು ಹುಟ್ಟುತ್ತವೆ. ಎಲ್ಲರ ಜೊತೆ ಸ್ನೇಹದಿಂದ ಇದ್ರೂ ತಪ್ಪು , ಇರದಿದ್ರೂ ತಪ್ಪು. ಸಮಾಜದಲ್ಲಿ ಇರುವಾಗ ಕಟ್ಟುಪಾಡುಗಳನ್ನ ಅನುಸರಿಸ್ಬೇಕು ನಿಜ. ಅದೇ ಸಮಾಜ ನನಗೆ ಒಬ್ರಿಂದ ಅನ್ಯಾಯ ಆಗಿದೆ ಅಂದ್ರೆ ಎಷ್ಟು ಪ್ರಮಾಣದಲ್ಲಿ ಬರುತ್ತೆ?

ಕಣ್ಣಮುಂದೆಯೇ ಇದೆ ಉದಾಹರಣೆ....

ಹಿಂದೊಮ್ಮ ಸಂದರ್ಶನದಲ್ಲಿ ಶ್ರುತಿಯನ್ನ ಕೇಳಿದ್ದೆ. ಮಹಿಳೆಗೆ ಪುರುಷರ ರಕ್ಷಣೆ ಬೇಕಾ ಅಂತ?
ಅದಕ್ಕೆ ಅವರು ಹೇಳಿದ್ದು "ಹೌದು ಅಂತ". ಯಾಕಂದ್ರೆ, “ಸಮಾಜವೇ ನಮ್ಮನ್ನ ಹಾಗೆ ಬೆಳೆಸಿದೆ. ನಾನು ಏಕಾಂಗಿಯಾಗಿ ಎಲ್ಲಿಗಾದ್ರೂ ಹೋಗಬಲ್ಲೆ. ಆದರೂ ನನಗೆ ಡ್ರೈವರೋ , ಅಸಿಸ್ಟೆಂಟೋ , ಗೆಳೆಯನೋ ಜೊತೆಗಿದ್ದಾರೆ ಅಂದ್ರೆ ಹೆಚ್ಚಿನ ಧೈರ್ಯ,” ಎಂದಿದ್ದರು.

ಶ್ರುತಿ ಹರಿಹರನ್ ಸಾಕಷ್ಟು ಬಾರಿ ಅವರೊಬ್ಬರೇ ಡ್ರೈವ್ ಮಾಡಿಕೊಂಡು ಬಂದಿದ್ದೇ ಹೆಚ್ಚು. ಆದ್ರೆ ಅದೇ‌‌ ಶ್ರುತಿ ಈಗ ಫಿಲ್ಮ್ ಚೇಂಬರ್ ಗೆ ಬರುವಾಗ ಕವಿತಾ ಲಂಕೇಶ್ ಜೊತೆ ಬಂದ್ರು. ಅಲ್ಲಿ ಒಂದು ಹೆಣ್ಣು ಮಾತ್ರ ನನ್ನ ಕಷ್ಟ ಅರ್ಥ ಮಾಡಿಕೊಳ್ಳಬಹುದು ಅನ್ನುವ ಆಕೆಯ ಕೂಗು ಎದ್ದುಕಾಣ್ತಿತ್ತು.

ಇನ್ನು ಲೈಂಗಿಕ ಕಿರುಕುಳದ ವಿಚಾರಕ್ಕೆ ಬರೋದಾದ್ರೆ, ಎಲ್ಲದಕ್ಕೂ ಸಾಕ್ಷಿ ಇಟ್ಟುಕೋಬೇಕಾ? ವೃತ್ತಿಯಲ್ಲಿ ಪ್ರತಿಯೊಬ್ಬರನ್ನೂ ನಂಬಲೇಬೇಕು. ಆದ್ರೆ ತಮ್ಮೆದುರಿರುವ ವ್ಯಕ್ತಿಗೆ ನನ್ನ ಮೇಲೆ ಯಾವ ಥರದ ಭಾವನೆ ಇರುತ್ತೆ ಅನ್ನೋದನ್ನ ಅರಿಯೋದು ಹೇಗೆ? ನೆನಪಿರಲಿ, ಗೆಳೆತನದ ಹೆಸರಲ್ಲಿ ಹೆಣ್ಣಿನ ಚಾರಿತ್ರ್ಯವಧೆ ಮಾಡೋಕೆ ಕೆಲವು ಗಂಡುಜೀವಗಳು ಕಾಯುತ್ತಿರುತ್ತವೆ. ಅನೇಕ ಹೆಣ್ಣುಮಕ್ಕಳು ಸಪೋರ್ಟ್ ಮಾಡಿ ತಮಾಷೆ ನೋಡ್ತವೆ. ಇದೇ ಆಗಿರೋದು ಶ್ರುತಿ ಜೀವನದಲ್ಲಿ.

ಹೆಣ್ಣನ್ನು ಹಿಂಸಿಸೋಕೆ ಇರೋ ದೊಡ್ಡ ಅಸ್ತ್ರ ಆಕೆಯ ಮಾನಾಹರಣ ಮಾಡೋದು. ನಿಂದನೆಯ ಮಾತುಗಳೇ ಆಕೆಯ ಆತ್ಮಸ್ಥೈರ್ಯ ಕುಗ್ಗಿಸುತ್ತೆ. ಇದೇ ಕೆಲ ಗಂಡಸರಿಗೆ ಬಂಡವಾಳ. ಹೆಣ್ಣು ದನಿ ಎತ್ತಿದ್ರೆ ಆಕೆಯ ಸಂಸ್ಕಾರದ ಬಗ್ಗೆ ಮಾತನಾಡ್ತಾರೆ. ಗಂಡು ಮಾತನಾಡಿದ್ರೆ ಹೋರಾಟಗಾರ.

ನಾನು ಎರಡು ವರ್ಷಗಳ ಹಿಂದೆ ಹೆಣ್ಣಿನ ಶೋಷಣೆಯ ವಿರುದ್ಧ ಶ್ರುತಿಯನ್ನ ಸಂದರ್ಶನ ಮಾಡೋಕೆ ಕೇಳಿದಾಗ ಆಕೆ ಒಪ್ಪಿಕೊಂಡಿದ್ದು ಹೇಗೆ ಗೊತ್ತಾ? ಈ ಮಾತನ್ನ ನೀವು ಕೇಳಲೇಬೇಕು. "ಇದ್ರಿಂದ ಪಬ್ಲಿಸಿಟಿ ಸಿಗುತ್ತೆ ಅನ್ನೋ ಆಸೆಗೆ ಒಪ್ಪಿಕೊಳ್ಳುತ್ತಿಲ್ಲ. ಹೆಣ್ಣಿನ ಮೇಲೆ ಅತ್ಯಾಚಾರ, ಶೋಷಣೆ, ಕಿರುಕುಳ ಆಗುತ್ತಿರೋದ್ರ ಬಗ್ಗೆ ನಾನು ದನಿ ಎತ್ತೋಕೆ ಸಿದ್ಧ. ನನ್ನ ಮಾತಿನಿಂದ ಯಾವುದೂ ಬದಲಾಗಲ್ಲ. ಆದ್ರೆ ಒಬ್ಬ ಇಬ್ಬರು ಹೆಣ್ಣುಮಕ್ಕಳಿಗೆ ಧೈರ್ಯ ಬಂದ್ರೆ ಸಾಕು,” ಅಂತ.

ಅದೇ ಶ್ರುತಿ ಈಗ ಒಬ್ಬಂಟಿಯಾಗಿ ಹೋರಾಟ ಮಾಡುತ್ತಿದ್ದಾಳೆ. ಮುಖದಲ್ಲಿ ಮಂದಹಾಸ ಇದೆ. ಆದ್ರೆ ಮನದ ನೋವು ಕಣ್ಣಲ್ಲಿ ಕಾಣುತ್ತೆ. ಸಾಮಾನ್ಯವಾಗಿ ಪ್ರತಿಯೊಬ್ಬ ಹೆಣ್ಣೂ ಕಿರುಕುಳಕ್ಕೆ ಒಳಗಾಗಿರ್ತಾರೆ. ಹೇಳಿದ್ರೆ ನನ್ನ ಮಾನ ಹೋಗುತ್ತೆ. ಸಮಾಜ ಪಾಯಿಂಟ್ಔಟ್ ಮಾಡುತ್ತೆ. ಕುಟುಂಬಸ್ಥರು ಉತ್ತರ ಕೊಡಬೇಕಾಗುತ್ತೆ ಅನ್ನೋದಕ್ಕೆ ಸುಮ್ಮನಾಗ್ತಾಳೆ. ಶ್ರುತಿ ಉದಾಹರಣೆಯೇ ಸಾಕಲ್ಲ ಹೆಣ್ಣುಮಕ್ಕಳು ಇನ್ನೊಂದಿಷ್ಟು ಹೆದರಿಕೊಳ್ಳೋಕೆ.

ಶ್ರುತಿಗೆ ಅನ್ಯಾಯ ಆಗಿದೆಯೋ ಬಿಟ್ಟಿದೆಯೋ ಅದು ಬೇರೆ ವಿಚಾರ. ಅದಕ್ಕೆ ನಾನಂತೂ ಸಾಕ್ಷಿ ಅಲ್ಲ. ಆದ್ರೆ ಹೆಣ್ಣು ಅನ್ಯಾಯ ಆಗಿದೆ ಎಂದು ಸಮಾಜದಲ್ಲಿ ಹೇಳಿಕೊಂಡಾಗ ಚಾರಿತ್ರ್ಯ ವಧೆ ಮಾಡೋದನ್ನ ನಿಲ್ಲಿಸಿ. ಕಿರುಕುಳಕ್ಕೆ ಒಳಗಾದವರು ನೊಂದು-ನೊಂದು ಸಾಯೋದನ್ನ ತಪ್ಪಿಸಿ. ಹೇಳು ಅನ್ನುವ ಅದೇ ಸಮಾಜ ಬಾಯಿಮುಚ್ಚಿಸೋಕೆ ಪ್ರಯತ್ನ ಪಡುತ್ತೆ.

ನಾನು ಎಡಪಂಥೀಯಳೂ ಅಲ್ಲ.. ಬಲ ಪಂಥೀಯಳೂ ಅಲ್ಲ... ನಾನು ಧೈರ್ಯಶಾಲಿ ಹೆಣ್ಣುಮಕ್ಕಳ ಪಂಥಿ.