samachara
www.samachara.com
ಶ್ರುತಿ ಹರಿಹರನ್‌ #ಮೀಟೂ ಮತ್ತು ಪಕ್ಷಪಾತಿ ಸಾ.ರಾ. ಗೋವಿಂದು ನ್ಯಾಯದಾನ!
FEATURE STORY

ಶ್ರುತಿ ಹರಿಹರನ್‌ #ಮೀಟೂ ಮತ್ತು ಪಕ್ಷಪಾತಿ ಸಾ.ರಾ. ಗೋವಿಂದು ನ್ಯಾಯದಾನ!

ಫಿಲ್ಮ್‌ ಚೇಂಬರ್ ಅಧ್ಯಕ್ಷ ಸಾ. ರಾ. ಗೋವಿಂದ್ , “ಇಂತಹ ಎಲ್ಲಾ ಆರೋಪಗಳು ನೇರವಾಗಿ ಚೇಂಬರ್‌ ಗಮನಕ್ಕೆ ತರಬೇಕು,’’ ಎಂದು ಫರ್ಮಾನು ಹೊರಡಿಸುತ್ತಾರೆ. ಈ ಮೂಲಕ ತಾವೇ ಮುಂದೆ ನಿಂತು ನ್ಯಾಯದಾನ ಮಾಡುತ್ತೀವಿ ಎನ್ನುತ್ತಾರೆ.

ವರ್ಷದ ಹಿಂದೆ ಹಾಲಿವುಡ್‌ನಲ್ಲಿ ಹೊಸ ಆಯಾಮ ಪಡೆದುಕೊಂಡ #ಮೀಟೂ ಅಭಿಯಾನ ನಿರೀಕ್ಷೆಯಂತೆಯೇ ಕರ್ನಾಟಕದಲ್ಲಿ ಸಂಕೀರ್ಣ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸ್ಯಾಂಡಲ್‌ವುಡ್‌ನ ನಟಿಯರು (ಸಂಗೀತ ಭಟ್ ಹಾಗೂ ಶೃತಿ ಹರಿಹರನ್) ತಮ್ಮ ಸಹೋದ್ಯೋಗಿ ಪುರುಷರ ಕುರಿತು ‘ಲೈಂಗಿಕ ಕಿರುಕುಳ’ದ ಆರೋಪ ಮಾಡುವ ಮೂಲಕ ಭರಪೂರ ಸುದ್ದಿಗಳಿಗೆ ಆಹಾರವಾಗಿದ್ದಾರೆ. ವೃತ್ತಿ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಹಿಂಸೆಗಳನ್ನು ಬಿಚ್ಚಿಡುತ್ತ ಬಂದ ಅಭಿಯಾನ ಇವರುಗಳ ವಿಚಾರದಲ್ಲಿ ಪರ- ವಿರೋಧ, ಎಡ- ಬಲ ಹಾಗೂ ಪ್ರಶ್ನೆ- ಮತ್ತಷ್ಟು ಪ್ರಶ್ನೆಗಳ ನೆಲೆಯಲ್ಲಿ ತಾತ್ಕಾಲಿಕ ಕಂಪನಗಳನ್ನು ಹುಟ್ಟು ಹಾಕಿದೆ. ಅಷ್ಟೆ ಅಲ್ಲ, ಮನುಷ್ಯರೊಳಗಿನ ಸಂಕುಚಿತತೆ, ಈ ಕಾಲಘಟ್ಟ ಎದುರಿಸುತ್ತಿರುವ ಹಿಪಾಕ್ರಸಿಗಳು ಹಾಗೂ ಬೇಕಾಬಿಟ್ಟಿ ನ್ಯಾಯದಾನದ ಮನಸ್ಥಿತಿಗಳನ್ನು ಕಣ್ಣಿಗೆ ರಾಚುವಂತೆ ಮಾಡಿದೆ.

ಕಳೆದ ಒಂದು ವಾರದಲ್ಲಿ ಮೀಟೂ ಅಭಿಯಾನ ಹಾಗೂ ಕನ್ನಡ ಸಿನೆಮಾ ರಂಗವನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಬೆಳವಣಿಗೆಗಳು ಒಂದಷ್ಟು ಹೊಸ ಹೊಳವುಗಳನ್ನು ನೀಡುತ್ತಿರುವುದು ಗಮನಾರ್ಹ. ನಟಿಯೊಬ್ಬರು ಮಾಡಿರುವ ಆರೋಪ, ಅದಕ್ಕೆ ಅವರು ಆಯ್ಕೆ ಮಾಡಿಕೊಂಡ ಕಾಲಘಟ್ಟ, ಅದಕ್ಕೆ ಬರುತ್ತಿರುವ ಹೀನ ಪ್ರತಿಕ್ರಿಯೆಗಳು, ಬೆಂಬಲದ ನೆಪದಲ್ಲಿ ವಾದಗಳು ಹಾಗೂ ವಿವೇಚನೆಯೂ ಇಲ್ಲದೆ ನೀಡುತ್ತಿರುವ ನ್ಯಾಯದಾನಗಳು ಒಟ್ಟಾರೆ ಬೆಳವಣಿಗಳ ಆಳದಲ್ಲಿ ಗಮನಿಸಬೇಕಿರುವ ಪ್ರತ್ಯೇಕ ಅಂಶಗಳು.

ಇದು #ಮೀಟೂ ಸ್ವಾಮಿ:

ಮೊದಲಿಗೆ, #ಮೀಟೂ ಅಭಿಯಾನ. ಸಹ ನಟನಿಂದ ನನಗೆ ಸಮಸ್ಯೆಯಾಗಿತ್ತು ಎಂದು ನಟಿ ಶೃತಿ ಹರಿಹರನ್ 'ಸುಧಾ’ ವಾರ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೊದಲು ಹೇಳಿಕೊಂಡರು. ಅದು ಪ್ರಕಟವಾಗುತ್ತಿದ್ದಂತೆ ತಮ್ಮದೇ ಫೇಸ್‌ಬುಕ್ ಅಕೌಂಟ್‌ನಲ್ಲಿ ಶೃತಿ ತಮ್ಮ ಆರೋಪಕ್ಕೆ ಇನ್ನಷ್ಟು ವಿವರಣೆ ನೀಡಿದರು. ಬಹುಭಾಷಾ ನಟ, ಸುಮಾರು 150 ಸಿನೆಮಾಗಳಲ್ಲಿ ನಟಿಸಿದ ಅರ್ಜುನ್ ಸರ್ಜಾ ಆರೋಪದ ಕೇಂದ್ರ ಬಿಂದುವಾಗಿದ್ದರು. ಮಗಳ ವಯಸ್ಸಿನ ಸಹ ನಟಿಯೊಬ್ಬರು ಮಾಡಿದ ಆರೋಪವನ್ನು ಅವರು ಅಲ್ಲಗೆಳೆದರು. ‘ತಾವು ಹಾಗಲ್ಲ’ ಎಂದು ಸಮಜಾಯಿಷಿ ನೀಡಿದರು. ಇದು ಆರೋಪ- ಮತ್ತು ಅದನ್ನು ನಿರಾಕರಿಸುವ ಸಹಜ ಪ್ರಕ್ರಿಯೆಗಳು.

#ಮೀಟೂ ಆರೋಪದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡುತ್ತಿರುವ ಶ್ರುತಿ ಹರಿಹರನ್‌
#ಮೀಟೂ ಆರೋಪದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡುತ್ತಿರುವ ಶ್ರುತಿ ಹರಿಹರನ್‌
/ಡೆಕ್ಕನ್‌ ಹೆರಾಲ್ಡ್‌

ಆದರೆ ಈ ಪ್ರಕ್ರಿಯೆಗಳು ಅಷ್ಟಕ್ಕೆ ನಿಲ್ಲಲಿಲ್ಲ. “ಈ ಹೊತ್ತಿನಲ್ಲಿ ಯಾಕೆ ಆರೋಪ?”, “ಆರೋಪ ಮಾಡಿದ ನಟಿಯನ್ನು ಬೆಂಬಲಿಸಲು ಬಂದವರು ಯಾರು ನೋಡಿ,”, “ಆಂಜನೇಯನ ಭಕ್ತ ಅರ್ಜುನ್ ಸರ್ಜಾ ಹಾಗೆ ಇರಲು ಸಾಧ್ಯವಿಲ್ಲ,’’ ಎಂಬ ಸಮರ್ಥನೆಗಳು ಶುರುವಾದವು. ಸೂಕ್ಷ್ಮವಾಗಿ ಗಮನಿಸಿದರೆ, ಈ ಸಮರ್ಥನೆಯ ದಾಟಿ ಅಂತಿಮವಾಗಿ ಏನನ್ನು ಹೇಳಲು ಹೊರಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಏನಲ್ಲ. ನಟಿಯೊಬ್ಬಳು ಅವಳಿಗಾದ ಹಿಂಸೆಯನ್ನು ಹೇಳಿಕೊಳ್ಳುವುದು ಸರಿಯಲ್ಲ ಅಥವಾ ಆಕೆ ಹೀಗೆ ಆರೋಪ ಮಾಡುವಾಗ ಸಾಕ್ಷಿಯನ್ನೂ ಜತೆಗೆ ನೀಡಬೇಕು ಎಂಬುದು ಈ ವಾದದ ತಿರುಳು. ಒಂದು ವೇಳೆ ಇವರುಗಳಿಗೆ ಸಾಕ್ಷಿ ನೀಡಿದರೂ, ಸಮರ್ಥನೆಗೆ ಹೊಸ ದಾಳಗಳನ್ನು ಉರುಳಿಸಲು ತಯಾರಿರುತ್ತಾರೆ. ಅದರಲ್ಲಿ ಯಾವ ಅನುಮಾನಗಳೂ ಬೇಕಿಲ್ಲ.

ಅತ್ಯಾಚಾರಿ ಮನಸ್ಥಿತಿಯ ಗಂಡಸಿನ ನಡೆಗಳನ್ನು ಆ ಕ್ಷಣದಲ್ಲಿಯೇ ಧಿಕ್ಕರಿಸಬೇಕು ಮತ್ತು ಅದಕ್ಕೆ ಪೂರಕ ಸಾಕ್ಷಿಗಳನ್ನೂ ತಯಾರಿ ಇಟ್ಟುಕೊಳ್ಳಬೇಕು ಎಂದು ಬಯಸುವುದೇ ಬಾಲಿಷ ಆಲೋಚನೆ. ಸಾಮಾನ್ಯವಾಗಿ ಎಲ್ಲಾ ಅತ್ಯಾಚಾರ ಪ್ರಕರಣಗಳೂ ಸಾಕ್ಷಿ ಇದ್ದ ಮಾತ್ರಕ್ಕೆ ದಾಖಲಾಗುವುದಿಲ್ಲ. ಅದರಲ್ಲೂ ಅತ್ಯಾಚಾರದ ಆರೋಪ ಹೊತ್ತವನೊಬ್ಬ ಪ್ರಬಲನಾಗಿದ್ದರೆ, ಅಂತಹ ಪ್ರಕರಣ ಕನಿಷ್ಟ ಐದಾರು ವರ್ಷಗಳ ಕಾಲ ನಡೆಯುತ್ತದೆ. ಹೀಗಿರುವಾಗ, ಆರೋಪ ಕೇಳಿ ಬರುತ್ತಲೇ ನ್ಯಾಯದಾನ ನೀಡಲು ಮುಂದೆ ಬರುವವರಿಗೆ ನೈತಿಕವಾಗಿ ಹಕ್ಕಾದರೂ ಏನಿರುತ್ತೆ?

ಇಷ್ಟಕ್ಕೂ ಇದು #ಮೀಟೂ ಅಭಿಯಾನ. ಈಗಷ್ಟೆ ಮಹಿಳೆಯರು ತಮ್ಮ ವೃತ್ತಿ ಸ್ಥಳಗಳಲ್ಲಿ ನಡೆಯುವ ಲೈಂಗಿಕ ಹಿಂಸೆಗಳನ್ನು ಹೇಳಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಾಕ್ಷಿಗಳನ್ನು ಕಲೆ ಹಾಕಿಕೊಳ್ಳಬೇಕಿದೆ ಎಂಬ ಪಾಠವನ್ನು ಅವರಿಗೆ ಕಲಿಸುವ ಕಸರತ್ತು ಒಂದರ್ಥದಲ್ಲಿ ಒಳ್ಳೆಯದೇ.

ನ್ಯಾಯದಾನದ ವ್ಯವಸ್ಥೆ:

ಇನ್ನು ಈ ಪ್ರಕರಣದಲ್ಲಿ ಪಾತ್ರವಹಿಸುತ್ತಿರುವ ನ್ಯಾಯದಾನ ವ್ಯವಸ್ಥೆ. ಫಿಲ್ಮ್‌ ಚೇಂಬರ್ ಅಧ್ಯಕ್ಷ ಸಾ. ರಾ. ಗೋವಿಂದ್ ಪತ್ರಿಕಾಗೋಷ್ಠಿಯಲ್ಲಿ, “ಇಂತಹ ಎಲ್ಲಾ ಆರೋಪಗಳು ನೇರವಾಗಿ ಚೇಂಬರ್‌ ಗಮನಕ್ಕೆ ತರಬೇಕು,’’ ಎಂದು ಫರ್ಮಾನು ಹೊರಡಿಸುತ್ತಾರೆ. ಈ ಮೂಲಕ ತಾವೇ ಮುಂದೆ ನಿಂತು ನ್ಯಾಯದಾನ ಮಾಡುತ್ತೀವಿ ಎಂದು ಅವರು ಹೇಳುತ್ತಾರೆ.

‘ನ್ಯಾಯದಾನಿ’ ಫಿಲ್ಮ್ ಚೇಂಬರ್‌ ಅಧ್ಯಕ್ಷ ಸಾ.ರಾ. ಗೋವಿಂದು
‘ನ್ಯಾಯದಾನಿ’ ಫಿಲ್ಮ್ ಚೇಂಬರ್‌ ಅಧ್ಯಕ್ಷ ಸಾ.ರಾ. ಗೋವಿಂದು
/ಈಸಂಜೆ

ನಾಚಿಕೆಗೇಡಿನ ಸಂಗತಿ ಏನೆಂದರೆ, ಇದೇ ಗೋವಿಂದು, “ಆಕೆ 150 ಸಿನೆಮಾಗಳಲ್ಲಿ ನಟಿಸಿದ ಹಿರಿಯ ನಟನ ಮೇಲೆ ಈಗ ಆರೋಪ ಯಾಕೆ ಮಾಡುತ್ತಾರೆ, ಆ ನಟಿ ನೋಡಿ ಆ ಸಿನೆಮಾಗಲ್ಲಿ ನಿರ್ವಹಿಸಿದ ಪಾತ್ರ ಹೇಗಿತ್ತು ಯೋಚಿಸಿ,’’ ಎನ್ನುವ ಮೂಲಕ ತಾವೆಷ್ಟು ಪಕ್ಷಪಾತಿ ಎಂಬುದನ್ನೂ ಸಾರಿ ಹೇಳುತ್ತಾರೆ. ಪಕ್ಷಪಾತಿಯೊಬ್ಬ ನ್ಯಾಯದಾನ ಮಾಡುತ್ತೇನೆ ಎಂಬುದು ವ್ಯಂಗ್ಯ ಮತ್ತು ಈ ಕಾಲಘಟ್ಟದ ವಿಪರ್ಯಾಸ.

ಅರ್ಜುನ್ ಸರ್ಜಾ ಪರ ಮಾತನಾಡಿದ ದೃವ ಸರ್ಜಾ ಎಂಬ ನಟ, ‘’ನನ್ನ ಮಾವನ ವಿರುದ್ಧ ಯಾವ ಕ್ರಿಮಿ, ಕೀಟಗಳೂ ಮಾತನಾಡುವ ಹಾಗಿಲ್ಲ,’’ ಎನ್ನುತ್ತಾನೆ. ಕ್ರಿಮಿ, ಕೀಟಗಳು ಯಾಕೆ ಮಾತನಾಡುತ್ತವೆ? ಹೇಗೆ ಮಾತನಾಡುತ್ತವೆ? ಈ ಯುವ ನಟನಿಗೆ ಯಾರಾದರೂ ಕೂರಿಸಿಕೊಂಡು ಸಾಮಾನ್ಯ ಜ್ಞಾನದ ಪಾಠ ಮಾಡಬೇಕಿದೆ.

ಪ್ರಬಲವಾಗಿರುವ ಆರೋಪ ಹೊರಬೀಳುತ್ತಲೇ ಸಮರ್ಥನೆಗೆ ಇಳಿದವರ ದಾಟಿಗಳು, ನ್ಯಾಯದಾನಕ್ಕೆ ಇಳಿದವರ ಮನಸ್ಥಿತಿಗಳು ಆರೋಪಕ್ಕೆ ಕಾರಣವಾದ ನಡೆಗಿಂತಲೂ ಹೀನವಾಗಿ ಕಾಣಿಸುತ್ತಿರುವುದು ಈ ಕಾರಣಕ್ಕೆ. ಇಂತವನ್ನು ಪಕ್ಕಕ್ಕೆ ಸರಸಿ ಮುಂದೆ ಹೆಜ್ಜೆ ಇಡದೆ ಬೇರೆ ದಾರಿ ಇಲ್ಲ.

ಸಿನೆಮಾ ಕೇಂದ್ರಿತ:

ಕೊನೆಯದಾಗಿ, ಚಿತ್ರರಂಗವನ್ನು ಕೇಂದ್ರವಾಗಿಟ್ಟುಕೊಂಡು ನಡೆದು ಬರುತ್ತಿರುವ ಈ ವಿಚಾರದಲ್ಲಿ ಹೊರಬರುತ್ತಿರುವ ವರದಿಗಳ ಸ್ವರೂಪ. ಶೃತಿ ಹರಿಹರನ್ ಕಮ್ಯನಿಸ್ಟ್, ಕೇರಳ ಮೂಲ ಎಂಬ ಸುದ್ದಿ ಹರಡುತ್ತದೆ. ಆಕೆ ಎಫ್‌ಎಂ ಒಂದರಲ್ಲಿ ಸೆಕ್ಸ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಭಾರೀ ಚರ್ಚೆಯಾಗುತ್ತದೆ. ಆದರೆ ಯಾವೊಬ್ಬ ಸಿನೆಮಾ ಪತ್ರಕರ್ತನೂ ಶೃತಿ ಹರಿಹರನ್ ಹಿನ್ನೆಲೆ ಏನು ಎಂಬುದರ ಬಗ್ಗೆ ಒಂದು ವಸ್ತುನಿಷ್ಟ ವರದಿ ಬರೆಯುವುದಿಲ್ಲ. ಯಾಕೆ?

ಯಾಕೆ ಎಂಬುದಕ್ಕೆ ಹಿರಿಯ ಪತ್ರಕರ್ತರಾಗಿದ್ದ ದಿನೇಶ್ ಅಮೀನ್ ಮಟ್ಟು ಅವರದ್ದೇ ಅನುಭವದ ಮಾತುಗಳನ್ನು ದಾಖಲಿಸುತ್ತಾರೆ. “ಋಣ ಸಂದಾಯಕ್ಕಾಗಿ ಫಿಲ್ಮಿ ಪತ್ರಕರ್ತರು ಈ ನಟನಟಿಯರ larger than life ಚಿತ್ರಗಳನ್ನು ಮಾಧ್ಯಮಗಳಲ್ಲಿ ಕಡೆದು ನಿಲ್ಲಿಸುತ್ತಿರುತ್ತಾರೆ. ಅವರ ತ್ಯಾಗ, ದಾನ-ಧರ್ಮ, ಸಮಾಜಸೇವೆ, ಪರಿಸರಪ್ರೀತಿ, ಬಡವರ ಬಗೆಗಿನ ಕರುಣೆ, ಪ್ರಾಣಿ, ಪಕ್ಷಿ, ಕ್ರಿಮಿಕೀಟಗಳ ಬಗ್ಗೆ ಅವರಿಗಿರುವ ಕಾಳಜಿ ಎಲ್ಲವೂ ಅತಿರಂಜಿತವಾಗಿ ವರದಿಗಳಾಗುತ್ತವೆ. ಈ ನಟ ಶಿರೋಮಣಿಗಳೂ ತಮ್ಮ ಚಿತ್ರಗಳ ಪ್ರಮೋಷನ್‌ಗೆ ಬಳಸುವ ಒಂದು ಪಾಲನ್ನು ಇಂತಹ ಸಮಾಜಸೇವಾ ಕಾರ್ಯಗಳಿಗೆ ನೀಡಿ, ಅದು ಪ್ರಚಾರವಾಗುವಂತೆ ನೋಡಿಕೊಂಡು, ಜಾಹೀರಾತಿಗೆ ನೀಡಬೇಕಾದ ದುಡ್ಡಿಗಿಂತ ಕಡಿಮೆ ವೆಚ್ಚದಲ್ಲಿ ಪ್ರಚಾರ ಪಡೆಯುತ್ತಿರುತ್ತಾರೆ. ಉಪೇಂದ್ರ ಅವರ ಹೊಸ ರಾಜಕೀಯ ಪಕ್ಷಕ್ಕೆ ಫಿಲ್ಮಿ ಪತ್ರಕರ್ತರೇ ಚಾಲನೆ ನೀಡಿದ್ದರು. ಆ ಪಕ್ಷವೇನಾಯಿತು ಎಂದು ಅವರನ್ನೇ ಈಗ ಕೇಳಬೇಕಲ್ಲಾ?.”

ಕನ್ನಡದ ಸಿನೆಮಾ ಪತ್ರಕರ್ತರು ಈ ಕುರಿತು ಆಲೋಚನೆ ಮಾಡಬೇಕಿದೆ. ಸಾಮಾಜಿಕವಾಗಿ ಪ್ರಭಾವ ಬೀರುವ ಸಾಂಸ್ಕೃತಿಕ ಮಾಧ್ಯಮವಾಗಿರುವ ಸಿನೆಮಾ ಕುರಿತು ವಸ್ತುನಿಷ್ಟತೆ ಮರೆತು ಬರೆಯಲು ಶುರುಮಾಡಿದ ಪರಿಣಾಮಗಳನ್ನು ಇವತ್ತು ಅನುಭವಿಸುತ್ತಿದ್ದೇವೆ. ಕನಿಷ್ಟ ಈಗಲಾದರೂ, ನೈತಿಕ ಪ್ರಶ್ನೆಗಳನ್ನು ಹಾಕಿಕೊಂಡು, ತಿದ್ದಿಕೊಳ್ಳದೇ ಹೋದರೆ, ಮುಂದಿನ ದಿನಗಳಲ್ಲಿ ಈಗ ಸೃಷ್ಟಿಸಿರುವ ಹೀನ ಮನಸ್ಥಿತಿಯ ಸಮೂಹಕ್ಕಿಂತ ಕೆಟ್ಟನಾದ ಸಮೂಹವೊಂದು ಸೃಷ್ಟಿಯಾಗುತ್ತದೆ. ಅದರ ಹೊಣೆಯನ್ನು ಸಮಾಜ ನಿಮ್ಮ ಮೇಲೆಯೇ ಹೊರಿಸುತ್ತದೆ.