samachara
www.samachara.com
ಶ್ರೀ ಶ್ರೀ ರಾಘವೇಶ್ವರ ಸ್ವಾಮಿ ಲೈಂಗಿಕವಾಗಿ ಸಕ್ರಿಯರಾಗಿದ್ದಾರಾ; ಇದ್ದರೆ ತಪ್ಪೇನಿದೆ?
FEATURE STORY

ಶ್ರೀ ಶ್ರೀ ರಾಘವೇಶ್ವರ ಸ್ವಾಮಿ ಲೈಂಗಿಕವಾಗಿ ಸಕ್ರಿಯರಾಗಿದ್ದಾರಾ; ಇದ್ದರೆ ತಪ್ಪೇನಿದೆ?

ಇನ್ನೂ ಒಂದು ಹೆಜ್ಜೆ ಮುಂದೆ ಬಂದ ಋಷಿ ಕುಮಾರ ಸ್ವಾಮಿ, “ನಾನು ಕೂಡ ವಯೋಮಿತಿಗೆ ತಕ್ಕಹಾಗೆ ಲೈಂಗಿಕವಾಗಿ ಸಕ್ರಿಯವಾಗಿದ್ದೇನೆ,’’ ಎಂದು ಒಪ್ಪಿಕೊಂಡರು.

ಧರ್ಮ ಗುರುಗಳು, ಪೀಠಾಧಿಪತಿಗಳು, ಸ್ವಾಮಿಗಳು ಲೈಂಗಿಕವಾಗಿ ಕ್ರಿಯಾಶೀಲರಾಗಿರುವುದು ತಪ್ಪಾ? ಧರ್ಮ ಬೋಧನೆಯ ಸ್ಥಾನದಲ್ಲಿ ಕುಳಿತ ವಯಸ್ಕರು ಯಾಕೆ ಲೈಂಗಿಕ ಸಂಬಂಧ ಹೊಂದಬಾರದು? ಈ ಆಧುನಿಕ ಕಾಲದಲ್ಲೂ ಯಾಕೆ ಸಂನ್ಯಾಸಿಗಳು ಲೈಂಗಿಕತೆ ವಿಚಾರದಲ್ಲಿ ಮುಗುಮ್ಮಾಗಿಯೇ ಇದ್ದಾರೆ? ಹೀಗೊಂದಿಷ್ಟು ಪ್ರಶ್ನೆಗಳನ್ನು ಇಟ್ಟುಕೊಂಡು ಧರ್ಮ ಪೀಠಗಳ ಸುತ್ತ ‘ವಯಸ್ಕರ ಚರ್ಚೆ’ಯೊಂದನ್ನು ಆರಂಭಿಸಲು ಇದು ಸಕಾಲ.

ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧ ದಾಖಲಾಗಿರುವ ಎರಡನೇ ಅತ್ಯಾಚಾರ ಆರೋಪ ಪ್ರಕರಣ ಮತ್ತೆ ಸುದ್ದಿಕೇಂದ್ರದಲ್ಲಿದೆ. ತನಿಖೆ ನಡೆಸಿರುವ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿ, ಹಾಗೂ ಸೆಕ್ಷನ್ 164 ಅಡಿಯಲ್ಲಿ ಸ್ವಾಮಿಯ ಮಾಜಿ ಆಪ್ತ ಕಾರ್ಯದರ್ಶಿ ನೀಡಿರುವ ಹೇಳಿಕೆಗಳು, ‘ರಾಘವೇಶ್ವರ ಸ್ವಾಮಿ ಲೈಂಗಿಕವಾಗಿ ಕ್ರೀಯಾಶೀಲರಾಗಿದ್ದರು’ ಎಂಬುದನ್ನು ಸಾರಿ ಹೇಳುತ್ತಿವೆ. ಇದನ್ನು ರಾಮಚಂದ್ರಾಪುರ ಮಠದ ವಕ್ತಾರರು ‘ಕಪೋಲಕಲ್ಪಿತ’ ಎಂದು ಅಲ್ಲಗೆಳೆಯುತ್ತಿದ್ದಾರಾದರೂ, ವಾಸ್ತವತೆಯಿಂದ ದೂರ ಉಳಿಯುವ ‘ಹಿಪಾಕ್ರಸಿ’ಯೊಂದು ಎದ್ದು ಕಾಣಿಸುತ್ತಿದೆ.

ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ, ಹೆಚ್ಚು ಕಡಿಮೆ ಎಲ್ಲಾ ಧಾರ್ಮಿಕ ಪರಂಪರೆಗಳು ಇಂತಹ ವಿಚಾರ ಬಂದಾಗ ಮುಗುಮ್ಮಾಗಿಯೇ ಕಾಲವನ್ನು ತಳ್ಳಿಕೊಂಡು ಬಂದಿವೆ. ಧರ್ಮ ಬೋಧನೆಯನ್ನು ಸ್ವಯಂ ಪ್ರೇರಣೆಯಿಂದ ಆರಂಭಿಸಿದವರು ವಯಸ್ಕರು ಮತ್ತು ಎಲ್ಲಾ ಮನುಷ್ಯರಂತೆ ಅವರಿಗೂ ಕಾಮನೆಗಳು ಇರುತ್ತವೆ ಎಂಬುದನ್ನು ಬಲವಂತವಾಗಿ ಮುಚ್ಚಿಡುತ್ತಲೇ ಬಂದಿವೆ. ಆದರೆ ಅಂತರಾಳದಲ್ಲಿ ಒಪ್ಪಿತವಲ್ಲದ ಕೆಲವು ಸಂಬಂಧಗಳು ಹೆಚ್ಚು ಕಡಿಮೆಯಾದಾಗ ಮಾತ್ರ, ಅತ್ಯಾಚಾರ ಪ್ರಕರಣಗಳ ರೂಪದಲ್ಲಿ ಅವು ಸ್ಫೋಟಗೊಳ್ಳುತ್ತ ಬಂದಿವೆ.

ಕರ್ನಾಟಕದಲ್ಲಿ ಇಂತಹದೊಂದು ಗಂಭೀರ ಆರೋಪದ ಕೇಂದ್ರದಲ್ಲಿ ಇರುವವರು ರಾಘವೇಶ್ವರ ಸ್ವಾಮಿ. ಇವರ ವಿರುದ್ಧ ದಾಖಲಾಗಿರುವ ಸ್ವ ಇಚ್ಛಾ ಹೇಳಿಕೆಯನ್ನು ಇಟ್ಟುಕೊಂಡು ನೋಡಿದರೆ, ಸ್ವಾಮಿ 2005ರಿಂದಲೂ ಲೈಂಗಿಕವಾಗಿ ಸಕ್ರಿಯವಾಗಿದ್ದಾರೆ ಎಂಬುದರ ಮಾಹಿತಿ ಸಿಗುತ್ತದೆ.

ಅಭಿರಾಮ್ ಹೆಗಡೆ ನೀಡುವ ಸ್ವ ಇಚ್ಛಾ ಹೇಳಿಕೆಯ ಆರಂಭದ ಭಾಗ. 
ಅಭಿರಾಮ್ ಹೆಗಡೆ ನೀಡುವ ಸ್ವ ಇಚ್ಛಾ ಹೇಳಿಕೆಯ ಆರಂಭದ ಭಾಗ. 

ಮೇಲಿನ ಹೇಳಿಕೆಯಲ್ಲಿ ಸ್ವಷ್ಟವಾಗಿ ಇರುವಂತೆ, ಮೈಸೂರಿನ ಮನೆಯಲ್ಲಿ ಸ್ವಾಮಿ ತಂಗಿದ್ದಾಗ ಸ್ವಾಮಿ ಲೈಂಗಿಕ ಕ್ರಿಯೆಯ ಭಂಗಿಯಲ್ಲಿದ್ದನ್ನು ನೋಡಿದ್ದಾಗಿ 5ನೇ ಎಸಿಎಂಎಂ ನ್ಯಾಯಾಧೀಶ ಎ. ಸೋಮಶೇಖರ್ ಮುಂದೆ ಅಭಿರಾಮ್‌ ಹೇಳಿದ್ದಾರೆ. ಹಾಗಂತ ಇದು ಒಂದು ಸಲದ ಕ್ರಿಯೆಯೂ ಅಗಿರಲಿಲ್ಲ ಎಂಬುದನ್ನು ಇದೇ ಹೇಳಿಕೆಯ ಮುಂದಿನ ಭಾಗ ಬಿಚ್ಚಿಡುತ್ತದೆ.

ಸ್ವಾಮಿಗಳು ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದನ್ನು ಆರೋಪಿಸುವ ಹೇಳಿಕೆ ಮುಂದುವರಿದ ಭಾಗ. 
ಸ್ವಾಮಿಗಳು ಲೈಂಗಿಕ ಸಂಬಂಧ ಹೊಂದಿದ್ದರು ಎಂಬುದನ್ನು ಆರೋಪಿಸುವ ಹೇಳಿಕೆ ಮುಂದುವರಿದ ಭಾಗ. 

ಮೇಲಿನ ಹೇಳಿಕೆಯನ್ನು ಗಮನ ಸೆಳೆಯುವ ಎರಡು ಪ್ರಮುಖ ಭಾಗಗಳಿವೆ. ಒಂದು, ಸ್ವಾಮಿಯ ಮೊಬೈಲ್‌ಗೆ ಅಶ್ಲೀಲ ಸಂದೇಶವನ್ನು ಅವರು ಸಂಬಂಧ ಹೊಂದಿದ್ದ ಯುವತಿಯರು ರವಾನಿಸುತ್ತಿದ್ದರು ಹಾಗೂ ಅದಕ್ಕೆ ಸ್ವಾಮಿ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಸ್ಪಷ್ಟವಾಗಿ ಹೇಳುತ್ತದೆ ಸ್ವ- ಇಚ್ಛಾ ಹೇಳಿಕೆ. ಸಾಮಾನ್ಯ ಭಾಷೆಯಲ್ಲಿ ‘ಸೆಕ್ಸ್ಟಿಂಗ್’ ಎಂದು ಕರೆಯುವ, ಕಾಮ ಭರಿತ ಸಂದೇಶಗಳನ್ನು ಪೀಠದಲ್ಲಿ ಕುಳಿತ ಸ್ವಾಮಿಯೂ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂಬುದು ಆರೋಪ. ಇದು ಆಧುನಿಕತೆಗೆ ತೆರೆದುಕೊಂಡಿರುವ ಮನುಷ್ಯ ಸಹಜ ಪ್ರಕ್ರಿಯೆ, ಆದರೆ ಕಾವಿ ತೊಟ್ಟ ಸ್ವಾಮಿಗೆ? ಇದು ಪ್ರಶ್ನೆ.

ಹೇಳಿಕೆಯಲ್ಲಿ ಉಲ್ಲೇಖಿಸಿದ ಯುವತಿಯೊಬ್ಬರ ಪ್ರತಿಕ್ರಿಯೆಗಾಗಿ ‘ಸಮಾಚಾರ’ ಇ-ಮೇಲ್ ಕಳಿಸಿತಾದರೂ, ಈವರೆಗೆ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಇದರ ಜತೆಗೆ, ಸ್ವಾಮಿಯ ಏಕಾಂತ ಸೇವೆಯ ಕೋಣೆಯಿಂದ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದ ಶಬ್ದ ಕೇಳಿಸುತ್ತಿತ್ತು ಎಂಬುದು ಮೇಲಿನ ಹೇಳಿಕೆಯಲ್ಲಿರುವ ಎರಡನೇ ಪ್ರಮುಖ ಭಾಗ.

ಈ ಮೇಲಿನ ಹೇಳಿಕೆಗಳು ರಾಘವೇಶ್ವರ ಸ್ವಾಮಿ 2005ರಿಂದಲೂ ನಿರಂತರವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸುತ್ತವೆ. ಈ ಮೂಲಕ ಸಂನ್ಯಾಸಿಯೊಬ್ಬರು ಸಾಮಾನ್ಯ ಜನ ಹೊಂದಿರುವ ರೀತಿಯಲ್ಲಿಯೇ ಲೈಂಗಿಕ ಸಂಬಂಧಗಳನ್ನು ಹೊಂದಿದ್ದರು ಎಂಬುದನ್ನು ಸಾರಿ ಹೇಳುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಸ್ವಾಮಿ ವಿರುದ್ಧ ದಾಖಲಾದ ಮೊದಲ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ‘ಸ್ವಾಮಿ ಲೈಂಗಿಕ ಸಂಬಂಧ ಹೊಂದಿದ್ದರು’ ಎಂದು ತೀರ್ಪಿನಲ್ಲಿ ಹೇಳಿತ್ತು. ಮೇಲಾಗಿ, ಸ್ವತಃ ರಾಘವೇಶ್ವರ ಸ್ವಾಮಿ, ತಾನು ಲೈಂಗಿಕ ಚಟುವಟಿಕೆಗಳನ್ನು ನಡೆಸಲು ಸಮರ್ಥನಿದ್ದೇನೆ ಎಂದು ‘ಪುರುಷತ್ವದ ಬಗ್ಗೆ ಪ್ರಮಾಣ ಪತ್ರ’ವನ್ನು ಮಠದ ಲೆಟರ್‌ಹೆಡ್‌ನಲ್ಲಿಯೇ ಸಿಐಡಿ ತನಿಖಾಧಿಕಾರಿಗಳಿಗೆ ನೀಡಿದ್ದಾರೆ.

ರಾಘವೇಶ್ವರ ಸ್ವಾಮಿ ನೀಡಿದ ಪುರುಷತ್ವದ ಪ್ರಮಾಣ ಪತ್ರದ ಪ್ರತಿ. 
ರಾಘವೇಶ್ವರ ಸ್ವಾಮಿ ನೀಡಿದ ಪುರುಷತ್ವದ ಪ್ರಮಾಣ ಪತ್ರದ ಪ್ರತಿ. 

ರಾಘವೇಶ್ವರ ಸ್ವಾಮಿ ಬಗೆಗಿನ ಆರೋಪಗಳು ಇರುವುದು ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು. ಈ ಕುರಿತು ನ್ಯಾಯಾಲಯ ತೀರ್ಪು ನೀಡಬೇಕಿದೆ. ಆದರೆ, ಈ ಹಂತದಲ್ಲಿ ರಾಮಚಂದ್ರಾಪುರ ಮಠದ ಪೀಠದಲ್ಲಿ ಕುಳಿತು, ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದೀನಿ ಎನ್ನುವ ಸ್ವಾಮಿ ಲೈಂಗಿಕ ಕ್ರಿಯೆಗಳನ್ನು ಹೊಂದಿರುವುದು ಸರಿನಾ? ಎಂಬ ಪ್ರಶ್ನೆ.

ಹೀಗೊಂದು ಪ್ರಶ್ನೆಯನ್ನು ಇತ್ತೀಚೆಗೆ ರಾಘವೇಶ್ವರ ಸ್ವಾಮಿ ಸಮರ್ಥನೆಗೆ ಇಳಿದ ಕಾಳಿ ಸ್ವಾಮಿ ಅಲಿಯಾಸ್ ಋಷಿ ಕುಮಾರ ಸ್ವಾಮಿ ಮುಂದಿಟ್ಟರೆ ಪ್ರಾಮಾಣಿಕ ಉತ್ತರವೊಂದು ಲಭ್ಯವಾಯಿತು.

‘ಸಮಾಚಾರ’ದ ಜತೆ ಮುಕ್ತವಾಗಿ ಮಾತನಾಡಿದ ಋಷಿ ಕುಮಾರ ಸ್ವಾಮಿ, “ನೀವು ತಿನ್ನುವಂತೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಸ್ವಾಮಿಗಳು ಗೋಡಂಬಿ, ದ್ರಾಕ್ಷಿ, ತುಪ್ಪ, ಮೊಸರು ತಿನ್ನುತ್ತಾರೆ. ಹೀಗಿರುವಾಗ ಅವರ ದೇಹ ಕೂಡ ನಿಸರ್ಗ ಸಹಜವಾಗಿ ಪ್ರತಿಕ್ರಿಯೆ ನೀಡುತ್ತದೆ. ರಾಘವೇಶ್ವರ ಸ್ವಾಮಿ ವಿರುದ್ಧ ನಡೆಯುತ್ತಿರುವುದು ಅಪಪ್ರಚಾರ. ಆದರೆ ಒಂದು ವೇಳೆ ಅವರು ಲೈಂಗಿಕ ಸಂಬಂಧ ಹೊಂದಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ,’’ ಎಂದರು. ಸಂಸಾರಿ ಪೀಠ ಮತ್ತು ಬ್ರಹ್ಮಚರ್ಯ ಪಾಲಿಸಬೇಕಾದ ಪೀಠಗಳ ನಡುವಿನ ಜಿಜ್ಞಾಸೆಯೂ ಅವರ ಮಾತುಗಳಲ್ಲಿತ್ತು.

ಇನ್ನೂ ಒಂದು ಹೆಜ್ಜೆ ಮುಂದೆ ಬಂದ ಋಷಿ ಕುಮಾರ ಸ್ವಾಮಿ, “ನಾನು ಕೂಡ ವಯೋಮಿತಿಗೆ ತಕ್ಕಹಾಗೆ ಲೈಂಗಿಕವಾಗಿ ಸಕ್ರಿಯವಾಗಿದ್ದೇನೆ,’’ ಎಂದು ಒಪ್ಪಿಕೊಂಡರು. “ನಮ್ಮದು ಸಂಸಾರಿ ಪೀಠ. ಅದರಿಂದ ನಮ್ಮಲ್ಲಿ ಅವಕಾಶ ಇದೆ. ವ್ರತಾಚರಣೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತೇನೆ,’’ ಎಂದರು.

ಬ್ರಹ್ಮಚರ್ಯೆ, ಸಂನ್ಯಾಸ ಎಂಬುದು ಕ್ಲೀಶೆಯಾಗಿದೆ ಎಂಬುದು ಹೂರಣ. “ಕನಿಷ್ಟ ಈ ಕಾಲಘಟ್ಟದಲ್ಲಿ ಸಂನ್ಯಾಸಿಗಳ ಲೈಂಗಿಕತೆಯ ಅಗತ್ಯತೆ ಕುರಿತು ಆಲೋಚನೆ ಮಾಡಬೇಕಿದೆ. ಭಾರತದ ಧಾರ್ಮಿಕ ಇತಿಹಾಸದಲ್ಲಿ ಇಂತಹದೊಂದು ಚರ್ಚೆ ನಡೆದೇ ಇಲ್ಲ. ಸಮಾಜ ಮುಕ್ತತೆಗೆ ತೆರೆದುಕೊಂಡ ಸಮಯದಲ್ಲಾದರೂ ಕಾವಿ ತೊಟ್ಟವರ ಸಹಜ ಬಯಕೆಗಳ ಕುರಿತು ಮುಕ್ತವಾಗಿ ಆಲೋಚನೆ ಮಾಡಬೇಕಿದೆ,’’ ಎಂದು ಪೀಠಾಧಿಪತಿಯೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದರು. ಆದರೆ ಅವರು ತಮ್ಮ ಹೆಸರನ್ನು ಉಲ್ಲೇಖಿಸಿದಂತೆ ವಿನಂತಿಸಿಕೊಂಡರು.

ಪರಿಸ್ಥಿತಿ ಹೀಗಿದೆ. ಬದಲಾದ ಕಾಲದಲ್ಲಿಯಾದರೂ ಕೆಲವು ವಿಚಾರಗಳಲ್ಲಿ ಕನಿಷ್ಟ ಚರ್ಚೆಗೆ ತೆರೆದುಕೊಳ್ಳುವ ಮನಸ್ಸನ್ನು ಯಾರಾದರೊಬ್ಬರು ಆರಂಭಿಸಬೇಕಿದೆ. ಅದು ನಡೆಯದೇ ಇದ್ದರೆ, ಅತ್ಯಾಚಾರ ಪ್ರಕರಣದಂತಹ ಗಂಭೀರ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಇದಕ್ಕೆ ಪರ- ವಿರೋಧದ ನೆಲೆಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಮತ್ತು ಇಂತಹದೊಂದು ‘ಹಿಪಾಕ್ರಿಸಿ’ಯನ್ನು ಇಟ್ಟುಕೊಂಡೇ ಧಾರ್ಮಿಕ ಸಮಾಜ ಕಾಲದ ಜತೆ ಸಾಗುತ್ತಿರುತ್ತದೆ. ಇಂತಹ ಅಪಸವ್ಯಗಳಿಗೆ ಪೂರ್ಣವಿರಾಮವೊಂದನ್ನು ಇಡಲು ಇದು ‘ಹೈ ಟೈಮ್’. ರಾಘವೇಶ್ವರ ಸ್ವಾಮಿ ಹಾಗೂ ಅವರ ಅನುಯಾಯಿಗಳು ಈ ಕುರಿತು ಆಲೋಚನೆ ಮಾಡಬೇಕಿದೆ.